ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶ್ರೀಕಂಠನ್, ರುದ್ರಪಟ್ಣಮ್ ಕೃಷ್ಣಶಾಸ್ತ್ರೀ

ವಿಕಿಸೋರ್ಸ್ದಿಂದ

ಶ್ರೀಕಂಠನ್, ರುದ್ರಪಟ್ಣಮ್ ಕೃಷ್ಣಶಾಸ್ತ್ರೀ 1920-. ಕರ್ಣಾಟಕ ಸಂಗೀತ ಪ್ರಪಂಚದ ಮೇರುಕಲಾವಿದ, ಅಂತಾರಾಷ್ಟ್ರೀಯ ಖ್ಯಾತಿವೆತ್ತ ಗಾಯಕ ಹಾಗೂ ಗುರು. ಶ್ರುತಿಶುದ್ಧ, ಲಯಶುದ್ಧ, ರಾಗಶುದ್ಧ, ಸಾಹಿತ್ಯಶುದ್ಧ, ಭಾವಶುದ್ಧ ಎಂಬ ಪಂಚಶುದ್ಧಿ-ಪ್ರಸಿದ್ಧ ಆರ್.ಕೆ. ಶ್ರೀಕಂಠನ್ ಎಂದೇ ಪರಿಚಿತರು.

ಇವರ ಮಾತಾಮಹ ಬೆಟ್ಟದಪುರ ನಾರಾಯಣ ಸ್ವಾಮಿ ವೈಣಿಕ ಹಾಗೂ ಗಾಯಕ, ತಾಯಿ ಸಣ್ಣಕ್ಕ ಸೊಗಸಾಗಿ ಹಾಡುತ್ತಿದ್ದರು. ತಂದೆ ರುದ್ರಪಟ್ಣಮ್ ಕೃಷ್ಣ ಶಾಸ್ತ್ರೀಯವರು ಪ್ರಬುದ್ಧ ಕಲಾವಿದರು, ಹರಿಕಥಾ ಪ್ರವೀಣರು ಮತ್ತು ಸಂಸ್ಕøತ ಹಾಗೂ ಕನ್ನಡ ಭಾಷೆಗಳಲ್ಲಿ ಅಪಾರ ಪಾಂಡಿತ್ಯವಿದ್ದವರು, ಸಮರ್ಥ ಪ್ರವಚನಕಾರರು ಕೂಡ.

ಸಂಗೀತ-ಸಾಹಿತ್ಯ-ಭಕ್ತಿ ಪರಿಸರದ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರುದ್ರಪಟ್ಣದಲ್ಲಿ 1920 ಜನವರಿ 14ರಂದು ಜನಿಸಿದರು. ಇವರ ಅಗ್ರಜರಾದ ವೆಂಕಟರಾಮಾಶಾಸ್ತ್ರೀ, ನಾರಾಯಣಸ್ವಾಮಿ ಮತ್ತು ರಾಮನಾಥನ್ ಎಲ್ಲರೂ ಸಂಗೀತಸಾಧಕರೇ. ಇವರಿಗೆ ಆರು ವರ್ಷ ತುಂಬುವ ಮೊದಲೇ ಕುಟುಂಬ ಮೈಸೂರಿಗೆ ಸ್ಥಳಾಂತರಗೊಂಡಿತು. ಮನೆಯಲ್ಲಿ ಪ್ರತಿ ಶುಕ್ರವಾರ, ಶನಿವಾರಗಳಲ್ಲಿ ಭಜನೆ ಮತ್ತು ಸೋದರ ರಿಂದ ಸಂಗೀತಸೇವೆ. ಈ ಸಂಗೀತ ಪರಿಸರದಲ್ಲಿ ಟಿಸಿಲೊಡೆದ ಯುವ ಪ್ರತಿಭೆಗೆ ತಂದೆಯೇ ಮೊದಲ ಗುರು. ಬಳಿಕ ಅಣ್ಣ ಆರ್.ಕೆ. ವೆಂಕಟರಾಮಾಶಾಸ್ತ್ರೀಯವರಿಂದ ಮಾರ್ಗದರ್ಶನ. ಹೀಗೆ ಮನೆಯಲ್ಲಿಯೇ ಸಂಗೀತಸಾಧನೆ ಜೊತೆಗೆ ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನೂ ಗಳಿಸಿದರು. ತಮ್ಮ 13-14ನೆಯ ಪ್ರಾಯದಲ್ಲಿ ಕಚೇರಿ ನೀಡಲು ಆರಂಭಿಸಿದರು. ಉಪಾಕರ್ಮದ ಸಮಾರಂಭವೊಂದರಲ್ಲಿ ಹಾಡಿದಾಗ ಮದರಾಸು ಕಡೆಯಿಂದ ಬಂದ ಕಲಾರಸಿಕರಿಂದ “ಮಧುರೈ ಪುಷ್ಪವನಂ ಸಂಗೀತ ಕೇಳಿದ ಅನುಭವವಾಯಿತು” ಎಂಬ ಉದ್ಗಾರ ಬಂತು.

ಬಿಡಾರಮ್ ಕೃಷ್ಣಪ್ಪ ರಾಮಮಂದಿರದ ರಾಮೋತ್ಸವ ಕಚೇರಿಗಳ ರಸದೌತಣ, ಆದರೆ ಎಲ್ಲಕ್ಕೂ ಟಿಕೆಟ್. ಹಣವಿಲ್ಲದ ಇವರು ಕೇಳಲೇ ಬೇಕೆಂಬ ಅದಮ್ಯ ಆಕಾಂಕ್ಷೆಯಿಂದ ದೇವಸ್ಥಾನದ ಅರ್ಚಕರ ಕೃಪೆ ಸಂಪಾದಿಸಿ ಸಂಜೆ 6 ಗಂಟೆಗೆ ಆರಂಭವಾಗುವ ಕಚೇರಿಗೆ 3 ಗಂಟೆ ಮೊದಲೇ ಗರ್ಭಗುಡಿಯಲ್ಲಿ ಅಜ್ಞಾತವಾಸ, ಅನಂತರ ಮೆಲ್ಲನೆ ಮುಂದಿನ ಸಾಲಿನ ಶ್ರೋತೃಗಳೊಡನೆ ನುಸುಳಿ ಸೇರಿಕೊಳ್ಳುತ್ತಿದ್ದರು. ಅಲ್ಲಿ ಕೇಳಿದ ಪಲ್ಲಡಮ್ ಸಂಜೀವರಾವ್, ಪಾಲ್ಘಾಟ್ ರಾಮ ಭಾಗವತರ್, ಚಂಬೈ, ಅರಿಯಾಕುಡಿ, ವಿಶ್ವನಾಥಯ್ಯರ್, ಮುಸಿರಿ, ಚಿಕ್ಕರಾಮರಾಯರು, ಬಿಡಾರಮ್ (ಗಾಯನ), ಕಾರೈಕುಡಿ ಸಹೋದರರು (ವೀಣೆ), ಪರೂರು ಸುಂದರಮ್ ಅಯ್ಯರ್ (ಪಿಟೀಲು) ಮೊದಲಾದ ಕಲಾವಂತಿಕೆಯ ಗಾಢ ಪರಿಣಾಮ ಇವರ ಮೇಲಾಯಿತು. ಇದರ ಜೊತೆಯಲ್ಲಿ ಮನೆಗೆ ಬರುತ್ತಿದ್ದ ವಾಸುದೇವಾಚಾರ್ಯ, ಗಮಕಿ ರಾಮಕೃಷ್ಣಶಾಸ್ತ್ರೀಗಳಂಥ ವಿದ್ವಾಂಸರ ಸಂಪರ್ಕದಿಂದ ಕುದುರಿದ ಶಾಸ್ತ್ರ ಜಿಜ್ಞಾಸೆ, ಅಣ್ಣ ವೆಂಕಟರಮಾಶಾಸ್ತ್ರೀ ತಮ್ಮ ಗುರು ಚೌಡಯ್ಯನವರ ಶಿಫಾರಸಿನಿಂದ ಮದರಾಸಿನ ಬಾನುಲಿ ಕೇಂದ್ರದಲ್ಲಿ ನಿಲಯಕಲಾವಿದರಾಗಿ ಸೇರಿಕೊಂಡರು. ಆಗ ಇವರಿಗೆ ಅಲ್ಲಿ ಹಾಡಲು ಮೊದಲ ಅವಕಾಶ ಲಭಿಸಿತು. ಅಂದಿನ ಮೈಸೂರು ಸಂಸ್ಥಾನ ಪ್ರಾರಂಭಿಸಿದ ಆಕಾಶವಾಣಿ ಕೇಂದ್ರದಲ್ಲಿ ಸಂಗೀತಗುರುವಾಗಿ ನೇಮಕಗೊಂಡರು. ಮುಂದೆ 1954ರಲ್ಲಿ ಮೈಸೂರು ಕೇಂದ್ರ ಆಲ್ ಇಂಡಿಯ ರೇಡಿಯೊದ ಜೊತೆ ವಿಲೀನವಾಗಿ ಬೆಂಗಳೂರಿಗೆ ಸ್ಥಳಾಂತರಣಗೊಂಡಾಗ ಇವರು ಕೂಡ ಅಲ್ಲಿಗೆ ತೆರಳಿ ಹೊಸತಾಗಿ ಬಿಡಾರ ಹೂಡಬೇಕಾಯಿತು.

ಅಲ್ಲಿ ಇವರು ಹಾಡಿದ, ನಿರ್ದೇಶಿಸಿದ, ರೂಪಿಸಿದ ಮತ್ತು ನಿರ್ಮಿಸಿದ ಸಂಗೀತ ವೈವಿಧ್ಯಗಳು ಅಪಾರ. ಅನೇಕ ಪರಿಚಿತ, ಅಪರಿಚಿತ ಕೃತಿ, ರಾಗ, ತಾಳಗಳನ್ನು ಕುರಿತು ರೂಪಕಗಳಷ್ಟೇ ಅಲ್ಲದೆ ಸ್ವತಃ ರಾಗ ಸಂಯೋಜನೆ ಮಾಡಿ ಹಾಡಿದರು. ಶಿವಶರಣರ ವಚನಗಳಿಗೂ ಹರಿದಾಸರ ಪದಗಳಿಗೂ ನಾರಾಯಣತೀರ್ಥರ ಕೃಷ್ಣಲೀಲಾತರಂಗಣಿಯ ರುಕ್ಮಿಣೀ ಕಲ್ಯಾಣಕ್ಕೆ ಸಂಬಂಧಿಸಿದ ತರಂಗಗಳಿಗೂ ಮಾತ್ರವಲ್ಲದೆ ಕುವೆಂಪು, ಬೇಂದ್ರೆ, ಡಿವಿಜಿ, ಮಾಸ್ತಿ, ಪುತಿನ, ಎಸ್.ವಿ.ಪರಮೇಶ್ವರಭಟ್ಟರಂಥ ಸಮಕಾಲೀನ ಕವಿಗಳ ಕವಿತೆಗಳಿಗೂ ಇವರು ರಾಗ ಸಂಯೋಜನೆ ಮಾಡಿದ್ದಾರೆ. ಇವರ ಜ್ಞಾನದಾಹವನ್ನು ತಣಿಸುವ, ಸಾಮಥ್ರ್ಯಕ್ಕೆ ಸವಾಲೆನಿಸುವ ಇಂಥ ಸಂದರ್ಭಗಳಿಂದ ವಿಸ್ತøತಗೊಂಡ ಅಧ್ಯಯನಶೀಲತೆ ಹಾಗೂ ಅನುಭವದ ಫಲವೆಂಬಂತೆ ಇವರ ಉಪನ್ಯಾಸಗಳೂ ಪ್ರಾತ್ಯಕ್ಷಿಕೆಗಳೂ ಶಿಕ್ಷಣಶಿಬಿರಗಳೂ ಉದ್ಬೋಧಕಗಳಾಗಿರುತ್ತವೆ. ಜೊತೆಗೆ, ಆ ಕಾಲದ ಪದವೀಧರರಾದ್ದರಿಂದ ಇವರದು ನಿರ್ದುಷ್ಟ ಕನ್ನಡ ಹಾಗೂ ಇಂಗ್ಲಿಷ್. ಭಾರತೀಯ ಸಂಗೀತ, ಕಲೆ ಮತ್ತು ಸಂಸ್ಕøತಿಗಳ ಎಲ್ಲ ಆಯಾಮಗಳೂ ಇವರಿಗೆ ಕರಗತವಾಗಿವೆ. ಅಸ್ಖಲಿತವಾಗಿ, ಅಧಿಕಾರಯುತವಾಗಿ ನುಡಿಯಬಲ್ಲ ವಾಗ್ಮಿತೆ ಒಂದು ವಿಶೇಷ ಶಕ್ತಿ.

ಪ್ರಪಂಚಾದ್ಯಂತ ಇರುವ ಕರ್ಣಾಟಕಸಂಗೀತಾಸಕ್ತರಿಗೆಲ್ಲ ಇವರು ಪರಿಚಿತ. ಇವರ ಕಲಾಸಮಾರಾಧನೆ ಆರು ದಶಕಗಳನ್ನೂ ಮೀರಿ ಇಂದಿಗೂ (2005) ಅದೇ ಹುಮ್ಮಸ್ಸು, ದೃಢತೆ, ಮಾಧುರ್ಯ, ಮನೋಧರ್ಮಗಳ ರಸಪಾಕವಾಗಿ ಪಂಡಿತಪಾಮರರಂಜಕವಾಗಿದೆ. ರಾಜ್ಯ, ಹೊರರಾಜ್ಯಗಳ ಎಲ್ಲ ಎಲ್ಲೆಗಳನ್ನೂ ದಾಟಿ ಕಡಲಾಚೆಯ ಕಲಾರಸಿಕರನ್ನೂ ತಮ್ಮ ಸದೃಢ, ಸುಮಧುರ ಸಂಮೋಹಕ ಕಂಠದಿಂದ ಸೆಳೆದು ಕೊಂಡಿದ್ದಾರೆ. ಅಮೆರಿಕ ಪಿಟ್ಸ್‍ಬರ್ಗ್ ವೆಂಕಟೇಶ್ವರ ದೇವಸ್ಥಾನದ ಆಹ್ವಾನ ಮನ್ನಿಸಿ 1945 ಮತ್ತು 86ರಲ್ಲಿ ವಿದೇಶ ಪ್ರವಾಸ ಮಾಡಿದ ಈ ಗಾಯಕ-ಬೋಧಕ ಶಿಖಾಮಣಿ ಆ ನಾಡಿನ ಉದ್ದಗಲಕ್ಕೂ ಕಚೇರಿಗಳನ್ನು ನೀಡಿದುದೇ ಅಲ್ಲದೆ ಕೆನಡದ ಟೊರೆಂಟೊದಲ್ಲಿಯ ಯಾರ್ಕ್ ವಿಶ್ವವಿದ್ಯಾಲಯದಲ್ಲಿ ಆರು ತಿಂಗಳು ಸಂದರ್ಶಕ ಶಿಕ್ಷಕರಾಗಿದ್ದು ಸಂಗೀತದ ಹಿರಿಮೆಯನ್ನು ಸ್ಥಾಪಿಸಿದ್ದಾರೆ. ಅಲ್ಲಿಂದೀಚೆಗೆ ಇವರು ಹಲವಾರು ಸಲ ವಿದೇಶಗಳಲ್ಲಿ ಸಂಗೀತ ಪ್ರವಾಸ ಕೈಗೊಂಡಿದ್ದು ಕಳೆದ 2004ರ ಜೂನ್‍ನಲ್ಲಿ 17 ಕಚೇರಿಗಳ ಮಹಾಸರಣಿಯಿಂದ ಅಮೆರಿಕದ ಸಂಗೀತ ಸಹೃದಯಿಗಳ ಮನಸೂರೆಗೊಂಡಿದ್ದಾರೆ.

ಆಚಾರ್ಯರಾಗಿ ಇವರ ಸ್ಥಾನ ಅತ್ಯುನ್ನತವಾದುದು. ರಾಗ-ಕೃತಿಗಳ ಪಾಠಾಂತರ ಶುದ್ಧವಾಗಿರಬೇಕು; ಅದನ್ನು ಕಾಯ್ದುಕೊಳ್ಳಬೇಕು; ನಿರೂಪಣೆಯಲ್ಲಿ ಎಲ್ಲೂ ದುರ್ಬಲತೆ ಇಣುಕಬಾರದು; ಆತ್ಮವಿಶ್ವಾಸ ತುಂಬಿರಬೇಕು; ಉಚ್ಚಾರಣೆ ಸ್ಪಷ್ಟಾತಿಸ್ಪಷ್ಟವಾಗಿರಬೇಕು; ಅಕ್ಷರಗಳನ್ನು ಅಗಿಯಬಾರದು; ಕಾಲಪ್ರಮಾಣದಲ್ಲಿ ಏರುಪೇರಾಗುವಂತಿಲ್ಲ, ಸಮತೆ ಸಾಧಿಸಬೇಕು; ಭಾವಶೈಥಿಲ್ಯ ಎಲ್ಲೂ ನುಸುಳಕೂಡದು, ತನ್ನನ್ನೇ ಸಂಗೀತಕ್ಕೆ ಸಮರ್ಪಿಸಿಕೊಂಡಿರಬೇಕು ಇದು ಇವರ ಪಾಠದಲ್ಲಿಯ ಪಂಚಾಕ್ಷರಿ ಮಂತ್ರ. ಇವರನ್ನು ಅರಸಿ 1947ರಿಂದಲೇ ಬಂದಿರುವ ಪ್ರಶಸ್ತಿ ಪುರಸ್ಕಾರಗಳು ಅಸಂಖ್ಯ. ಆ ಪೈಕಿ ಮುಖ್ಯವಾದ ಕೆಲವು: ಬೆಂಗಳೂರು ಗಾಯನ ಸಮಾಜದ ವಾರ್ಷಿಕ ಸಂಗೀತ ಸಮ್ಮೇಳನಾಧ್ಯಕ್ಷತೆ (1981), ಶ್ರೀ ಜಯಚಾಮರಾಜ ಒಡೆಯರ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ (1985), ಕರ್ನಾಟಕ ರಾಜ್ಯದ ಕನಕ-ಪುರಂದರ ಪ್ರಶಸ್ತಿ (1992), ಅಕಾಡೆಮಿ ಆಫ್ ಮ್ಯೂಸಿಕ್, ಬೆಂಗಳೂರಿನ ಚೌಡಯ್ಯ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ (1994), ಮದರಾಸು ಮ್ಯೂಸಿಕ್ ಅಕಾಡೆಮಿಯ ಸಂಗೀತ ಕಲಾನಿಧಿ ಪ್ರಶಸ್ತಿ (1996), ಬೆಂಗಳೂರು ವಿಶ್ವವಿದ್ಯಾಲಯ ಪ್ರದಾನಿಸಿದ ಗೌರವ ಡಾಕ್ಟೊರೇಟ್ ಪದವಿ (2004).

ಇವರ ಎಪ್ಪತ್ತೈದನೆಯ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನ ಕಲಾರಸಿಕರು, ಶಿಷ್ಯವೃಂದ ಹಾಗೂ ಅಭಿಮಾನಿಗಳಿಂದ ಅದ್ದೂರಿ ಸನ್ಮಾನ (1995) ಹಾಗೂ ಒಂದು ಲಕ್ಷ ರೂಗಳ ಹಮ್ಮಿಣಿ ಸಮರ್ಪಣೆ. ಈ ಕೃತಜ್ಞತಾ ಸಮರ್ಪಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದವರು ಕರ್ಣಾಟಕ ಸಂಗೀತ ಪ್ರಪಂಚದ ಭೀಷ್ಮರೆಂದೇ ಪ್ರಸಿದ್ಧರಾದ ಸೆಮ್ಮಂಗುಡಿ ಶ್ರೀನಿವಾಸ್‍ಅಯ್ಯರ್ (1908-2003). ಆಗ ಇವರಿಗೆ ಸಿರಿಕಂಠ ಹೆಸರಿನ ಅಭಿನಂದನ ಗ್ರಂಥವನ್ನು ಅರ್ಪಿಸಲಾಯಿತು.

  (ಟಿ.ಎಸ್.ಎಸ್.ವಿ.)