ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಷಟ್ಪದಿ

ವಿಕಿಸೋರ್ಸ್ದಿಂದ
Jump to navigation Jump to search

ಷಟ್ಪದಿ
ಷಟ್ಪದಿ ಛಂದಸ್ಸಿನ ಪ್ರಮುಖ ಮಟ್ಟುಗಳಲ್ಲೊಂದು. ದೇಶ್ಯಕಾವ್ಯ ಪ್ರಕಾರಗಳಲ್ಲಿ ಹೆಚ್ಚು ಪ್ರಸಿದ್ಧವಾದದ್ದು. ಷಟ್ಪದ, ಷಟ್ಪದಿ, ಷಟ್ಪದಿಕಾ ಎಂಬ ಹೆಸರುಗಳಿಂದ ಉಲ್ಲೇಖಗೊಂಡಿದೆ. ಅಮ್ಮಿನಬಾವಿ ಶಾಸನ, ಸುಕುಮಾರ ಚರಿತ ಹಾಗೂ ತೆಲುಗಿನ ಛಂದೋಗ್ರಂಥಗಳಲ್ಲಿ ಷಟ್ಪದ ಎಂದು ಬಳಕೆಗೊಂಡಿದ್ದರೆ ಛಂದೋಂಬುಧಿಯ ಪ್ರಚಲಿತ ಪಾಠದಲ್ಲಿ, ಸಂಗೀತರತ್ನಾಕರ, ಮಾನಸೋಲ್ಲಾಸ, ಬೃಹದ್ದೇಶೀಗಳಲ್ಲಿ ಷಟ್ಪದಿ ಎಂದು ಬಳಕೆಗೊಂಡಿದೆ. ಜಯಕೀರ್ತಿ ಇದನ್ನೇ ಷಟ್ಪದಿಕಾ ಎಂದು ಕರೆದಿದ್ದಾನೆ. ವಿದ್ವಾಂಸರ ಅಭಿಪ್ರಾಯದಂತೆ ಷಟ್ಪದ, ಷಟ್ಪದಿಗಳು ಜತೆಜತೆಯ ಪ್ರಯೋಗಗಳಾಗಿ ಸಾಹಿತ್ಯ ಕೃತಿಗಳಲ್ಲಿಯೂ ಲಕ್ಷಣಾದಿ ಗ್ರಂಥಗಳಲ್ಲಿಯೂ ಬಳಕೆಗೊಂಡಿವೆ. ಈ ಎರಡು ರೂಪಗಳೂ ಅಂಶಗಣಾತ್ಮಕವಾಗಿದ್ದ ಕಾಲದಲ್ಲಿ ಪದ್ಯಜಾತಿಗೆ ಬಳಕೆಯಾಗುತ್ತಿದ್ದುವು. ಮಾತ್ರಾಗಣಾತ್ಮಕವಾಗಿ ಪರಿವರ್ತಿತವಾದ ಮೇಲೆ ಷಟ್ಪದಿ ಎಂಬುದು ಬಳಕೆಯಲ್ಲಿ ಸ್ಥಿರವಾಗಿ ಉಳಿಯಿತು.

ಪ್ರಾಚೀನ ಕಾಲದಲ್ಲಿ ಅಂಶಗಣಘಟಿತವಾದ ಒಂದೇ ಒಂದು ಷಟ್ಪದಿ ಇತ್ತೆನ್ನಲಾಗಿದೆ. ಅಂಶ ಷಟ್ಪದಿಯ ಲಕ್ಷಣ: 6 ಪಾದಗಳು; 1-2ನೆಯ ಮತ್ತು 4-5ನೆಯ ಪಾದಗಳಲ್ಲಿ 2-2 ವಿಷ್ಣುಗಣಗಳು, 3-6ನೆಯ ಪಾದಗಳಲ್ಲಿ 2-2 ವಿಷ್ಣುಗಣಗಳೊಂದಿಗೆ 1-1 ರುದ್ರಗಣ ಇರುತ್ತದೆ. ಪದ್ಯಾರ್ಥದ ಕೊನೆಗೆ ಯತಿ. 12ನೆಯ ಶತಮಾನದ ಮಧ್ಯಭಾಗದಲ್ಲಿ ಕಾಣಿಸಿಕೊಳ್ಳುವ ವೀರಶೈವ ವಚನಕಾರರು ಹಾಗೂ ಅನಂತರದ ಭಕ್ತಿ ಪಂಥದವರು ಮಾಡಿದ ಸಾಹಿತ್ಯ ಕ್ರಾಂತಿಗಳಲ್ಲಿ ದೇಶ್ಯಛಂದಸ್ಸಿನ ಪುನರುಜ್ಜೀವನ ಮತ್ತು ನವೀಕರಣವೂ ಪ್ರಮುಖ ವಿಚಾರಗಳಾಗಿವೆ.

ಈ ಕಾಲದಲ್ಲಿ ಪರಂಪರಾಗತವಾಗಿದ್ದ ಅಂಶಷಟ್ಪದಿ ಮಾತ್ರಾಗಣಾತ್ಮಕ ವಾಗಿ ಮಾತ್ರಾಷಟ್ಪದಿಯಾಯಿತು. ಪೋಲಾಳ್ವ ದಂಡನಾಥ (1224), ರಾಘವಾಂಕ (ಸು.1230), ಕುಮುದೇಂದು (1275)-ಈ ಕೆಲವರು ಮಾತ್ರಾಷಟ್ಪದಿಯ ಆದ್ಯ ಕೃಷಿಕರು.

ನಡುಗನ್ನಡ ಕಾಲದಲ್ಲಿ ಮಾತ್ರಾಷಟ್ಪದಿ ಶರ, ಕುಸುಮ, ಭೋಗ, ಭಾಮಿನೀ, ಪರಿವರ್ಧಿನೀ ಹಾಗೂ ವಾರ್ಧಕ ಷಟ್ಪದಿಗಳೆಂಬ ಆರು ಬಗೆಯಲ್ಲಿ ಕಾಣಿಸಿಕೊಂಡು ಜನಪ್ರಿಯವಾಗಿದೆ. ಇವುಗಳ ಲಕ್ಷಣಗಳನ್ನು ಹೀಗೆ ಗುರುತಿಸಲಾಗಿದೆ:

೧. ಶರಷಟ್ಪದಿ : ನಾಲ್ಕು ಮಾತ್ರೆಯ ಗಣ. ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಎರಡೆರಡೂ ಮೂರು, ಆರನೆಯ ಪಾದಗಳಲ್ಲಿ ಮೂರು ಮೂರೂ ಒಂದು ಗುರುವೂ ಬರಬೇಕು. U-U ಈ ಗಣ ನಿಷಿದ್ಧ.

೨. ಕುಸುಮಷಟ್ಪದಿ : ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಐದು ಮಾತ್ರೆಯ ಗಣಗಳು ಎರಡೆರಡೂ ಮೂರು, ಆರನೆಯ ಪಾದಗಳಲ್ಲಿ ಮೂರು ಮೂರೂ ಒಂದು ಗುರುವೂ ಬರಬೇಕು. U - UU, U - - ಈ ಗಣಗಳು ನಿಷಿದ್ಧ.


೩. ಭೋಗಷಟ್ಪದಿ : ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಮೂರು ಮಾತ್ರೆಯ ಗಣ ನಾಲ್ಕು ನಾಲ್ಕೂ ಮೂರು, ಆರನೆಯ ಪಾದಗಳಲ್ಲಿ ಆರಾರೂ ಒಂದು ಗುರುವೂ ಬರಬೇಕು.

೪. ಭಾಮಿನೀಷಟ್ಪದಿ : ಮೂರು ಮಾತ್ರೆಯ ಗಣದ ಮುಂದೆ ನಾಲ್ಕು ಮಾತ್ರೆಯ ಗಣ ಬರುವ ಹಾಗೆ ಈ ಗಣಗಳು ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಎರಡೆರಡೂ ಮೂರು, ಆರನೆಯ ಪಾದಗಳಲ್ಲಿ ಮೂರು ಮೂರೂ ಒಂದು ಗುರುವೂ ಬರಬೇಕು. ಇದರಲ್ಲಿ U -, U-U ಈ ಗಣಗಳು ನಿಷಿದ್ಧ.

೫. ಪರಿವರ್ಧಿನೀ ಷಟ್ಪದಿ : ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಚತುರ್ಮಾತ್ರಾಗಣ ನಾಲ್ಕು, ನಾಲ್ಕೂ ಮೂರು, ಆರನೆಯ ಪಾದಗಳಲ್ಲಿ ಆರಾರೂ ಒಂದು ಗುರುವೂ ಬರಬೇಕು. U-U ಗಣ ನಿಷಿದ್ಧ.

೬. ವಾರ್ಧಕ ಷಟ್ಪದಿ : ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಪಂಚಮಾತ್ರಾಗಣ ನಾಲ್ಕು ನಾಲ್ಕೂ ಮೂರು, ಆರನೆಯ ಪಾದಗಳಲ್ಲಿ ಆರಾರೂ ಒಂದು ಗುರುವೂ ಬರಬೇಕು. U-UU, U - - ಈ ಗಣಗಳು ನಿಷಿದ್ಧ. *

  • (ವಿಕಿಪೀಡಿಯಾಕ್ಕೆ ಹಾಕಿದೆ ೧೦-೧-೨೧)