ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಂಕೇತಿ ಭಾಷೆ ಮತ್ತು ಸಾಹಿತ್ಯ

ವಿಕಿಸೋರ್ಸ್ದಿಂದ

ಸಂಕೇತಿ ಭಾಷೆ ಮತ್ತು ಸಾಹಿತ್ಯ

ಸು. 1200 ವರ್ಷಗಳಿಗೂ ಹಿಂದೆ ನರ್ಮದಾ ತೀರದಿಂದ ವೈದಿಕ ಪಂಡಿತರ ಒಂದು ಗುಂಪು ದಕ್ಷಿಣಕ್ಕೆ ವಲಸೆ ಹೋಗಿ ಈಗಿನ ತಿರುನಲ್ವೇಲಿ ಜಿಲ್ಲೆಯ ಶೆಂಕೋಟ್ಟೈ ಪ್ರಾಂತದಲ್ಲಿ ನೆಲಸಿತು. ತಿರುನಲ್ವೇಲಿ, ಕನ್ಯಾಕುಮಾರಿ, ತಿರುವನಂತಪುರಂ ಮತ್ತು ಕೊಲ್ಲಂ ಜಿಲ್ಲೆಗಳಿಗೆ ಹೊಂದುವ ನಾಲ್ಕು ಸಂಕೇತಮ್‍ಗಳಲ್ಲಿ ನೆಲಸಿದ ಸಮುದಾಯವನ್ನು ಸಂಕೇತಿ ಎಂದು ಕರೆಯಲಾಗುತ್ತದೆ. ಸಂಕೇತಮ್ ಎಂದರೆ ಸಂಕೇತಿಗಳು ಆಳಿದ ಕಿರುರಾಜ್ಯ. ಕಾಲಕ್ರಮದಲ್ಲಿ ಈ ಸಮುದಾಯದಿಂದಲೇ ಒಂದು ಗುಂಪು ಪಾಲ್ಘಾಟ್‍ಗೆ ಹೋಗಿ ನೆಲಸಿ ಪಾಲ್ಘಾಟ್ ಅಯ್ಯರ್ ಹೆಸರು ಹೊಂದಿತು; ಇನ್ನೊಂದು ಗುಂಪು ಕೇರಳದಲ್ಲಿ ನೆಲಸಿ ನಂಬೂದಿರಿ ಎನಿಸಿತು. ಸಂಕೇತಿಗಳ ಇನ್ನೊಂದು ದೊಡ್ಡಗುಂಪು ಸಾಮುದಾಯಿಕ ಅಶಾಂತಿಯ ಕಾರಣದಿಂದಾಗಿ ಕರ್ನಾಟಕಕ್ಕೆ ವಲಸೆ ಬಂದಿತು. ಹಾಗೆ ಬಂದವರಲ್ಲಿ ಹಲವರು ಶ್ರೀವೈಷ್ಣವ ಮತವನ್ನು ಅವಲಂಬಿಸಿದರು. ತಮಿಳುನಾಡಿನಲ್ಲಿಯೇ ಉಳಿದ ಸಂಕೇತಿಗಳ ಗುಂಪು ವಡಮ ಎಂಬ ತಮಿಳು ಸ್ಮಾರ್ತ ಬ್ರಾಹ್ಮಣ ಉಪಸಮುದಾಯದಲ್ಲಿ ಲೀನವಾಗುವ ಕ್ಷಿಪ್ರ ಪ್ರಕ್ರಿಯೆಯಲ್ಲಿದೆ. ಈಗಲೂ ಸಂಕೇತಿ ಎಂದೇ ಗುರುತಿಸಲಾಗುವವರ ಸಂಖ್ಯೆ ಸು. 25,000. ಸಂಕೇತಿಗಳು ಈಗ ಪ್ರಪಂಚಾದ್ಯಂತ ಹರಡಿದ್ದರೂ ಸೇ. 60ಕ್ಕಿಂತ ಹೆಚ್ಚು ಜನ ನೆಲಸಿರುವುದು ಕರ್ನಾಟಕದಲ್ಲಿ (ಬೆಂಗಳೂರು).

ಪಾರಂಪರಿಕ ನೆಲೆಗಳು ಮತ್ತು ಭಾಷಾಭೇದದ ದೃಷ್ಟಿಯಿಂದ ಸಂಕೇತಿಗಳ ವಿವಿಧ ಉಪಗುಂಪುಗಳ ವಿವರ ಹೀಗಿದೆ : 1) ತಮಿಳು ನಾಡು : ತಿರುನಲ್ವೇಲಿ, ಕನ್ಯಾಕುಮಾರಿ ಜಿಲ್ಲೆಗಳು : ಇತರ ತಮಿಳು ಬ್ರಾಹ್ಮಣರ ಭಾಷೆಗಿಂತ ಸ್ಥೂಲವಾಗಿ ಭಿನ್ನತೆಯ ಎಳೆ ಇದೆ. ಜನಸಂಖ್ಯೆ ಸು. 1500. 2)ಕೇರಳ : ತಿರುವನಂತಪುರಂ : ಮಲಯಾಳ ಪ್ರಭಾವಿತ ತಮಿಳು : ಜನಸಂಖ್ಯೆ ಸು. 500. 3) ಕರ್ನಾಟಕ: ಅ) ಲಿಂಗದಹಳ್ಳಿ (ಚಿಕ್ಕಮಗಳೂರು ಜಿಲ್ಲೆ) : ಪುರುಷರು ತಮ್ಮ ತಮ್ಮಲ್ಲಿ ವ್ಯವಹರಿಸುವಾಗ ನೂರಕ್ಕೆ ನೂರು ಕನ್ನಡವನ್ನೂ ತಮ್ಮ ಸ್ತ್ರೀಯರೊಂದಿಗೆ ಸೇ. 60 ಕನ್ನಡ ಹಾಗೂ ಸೇ. 40 ತಮಿಳು ಬೆರೆತ ಭಾಷೆಯನ್ನೂ ಸ್ತ್ರೀಯರು ತಮ್ಮ ತಮ್ಮಲ್ಲಿ ಸೇ. 80 ತಮಿಳು ಹಾಗೂ ಸೇ. 20 ಕನ್ನಡ ಬೆರೆತ ಭಾಷೆಯನ್ನೂ ಬಳಸುತ್ತಾರೆ. ಬೆಟ್ಟದಪುರ ಸಂಕೇತಿಗಳ ಭಾಷೆಯೊಂದಿಗೆ ಹೋಲಿಕೆ ಇದೆ : ಜನಸಂಖ್ಯೆ ಸು. 700. ಆ)ಬೆಟ್ಟದಪುರ (ಮೈಸೂರು ಜಿಲ್ಲೆ) : ಬೆಟ್ಟದಪುರದ ಸನಿಹದ ಅಷ್ಟಗ್ರಾಮಗಳು : ಕೌಶಿಕ ಸಂಕೇತಿಗಳ ಭಾಷೆಗಿಂತ ಹೆಚ್ಚು ಭಿನ್ನ. ದೀರ್ಘಸ್ವರಗಳ ಪಾತ್ರವಿದೆ : ಜನಸಂಖ್ಯೆ ಸು.6,000. ಇ) ಮತ್ತೂರು (ಶಿವಮೊಗ್ಗ ಜಿಲ್ಲೆ): ಬೆಟ್ಟದಪುರ ಮತ್ತು ಲಿಂಗದಹಳ್ಳಿಯ ಭಾಷೆಯೊಂದಿಗೆ ಕೆಲ ಅಂಶಗಳಲ್ಲಿ ಸಂವಾದಿ. ಕೆಲವು ನಿರ್ದಿಷ್ಟ ವಂಶಗಳಲ್ಲಿ ದೀರ್ಘಸ್ವರ, ಪ್ಲುತ ವಿಜೃಂಭಿತ ವಿಶಿಷ್ಟ ಪಲುಕು ಇದೆ. ಜನಸಂಖ್ಯೆ ಸು. 1,300. ಈ) ಹಾಸನ, ಮೈಸೂರು, ಮಂಡ್ಯ, ಚಿಕ್ಕಮಗಳೂರು ಜಿಲ್ಲೆಯ ಕೌಶಿಕ ಸಂಕೇತಿಗಳು: ಹೇಮಾವತಿ ನದಿಯ ಉತ್ತರದ ಹಳ್ಳಿಗಳಲ್ಲಿ ಸ್ವರಾಂತ ವಾಕ್ಯಗಳೂ ದಕ್ಷಿಣದ ಹಳ್ಳಿಗಳಲ್ಲಿ ವ್ಯಂಜನಾಂತ ವಾಕ್ಯಗಳೂ ಬಳಕೆಗೊಳ್ಳುವುದುಂಟು; ಉಳಿದ ಅಂಶಗಳಲ್ಲಿ ಇವೆರಡೂ ಹೆಚ್ಚು ನಿಕಟ. ಜನಸಂಖ್ಯೆ ಸು. 15,000.

ಇವರಲ್ಲಿ ಹಿಂದಿನ ಶತಮಾನಗಳ ಕ್ಷೀಣ ಸಂಪರ್ಕ ಸಾಧ್ಯತೆಗಳು ಮತ್ತು ಪ್ರಾದೇಶಿಕ ಪ್ರಭಾವಗಳ ಕಾರಣದಿಂದಾಗಿ ಈ ಭಾಷಾಭೇದಗಳು ಕಾಣಿಸಿಕೊಂಡಿವೆ. ಪದಗಳು, ಅವುಗಳ ರಚನೆ, ಉಚ್ಚಾರಣೆ, ಅನ್ಯಭಾಷಾ ಪದಸ್ವೀಕಾರ ಮತ್ತು ಪ್ರಭಾವದ ಪ್ರಮಾಣವೈವಿಧ್ಯದಲ್ಲಿ ಇದು ಕಾಣುತ್ತದೆ. ಕರ್ನಾಟಕದ ಉಪಭಾಷೆಗಳ ನಡುವೆ ಸಂವಾದ ಸಾಧ್ಯತೆ ಹೆಚ್ಚು. ತಮಿಳುನಾಡು ಮತ್ತು ಕೇರಳದ ತಮಿಳು ಭಾಷಾಭೇದ ಬಹು ಗೌಣವಾ ದುದು. ಕರ್ನಾಟಕ ಮತ್ತು ತಮಿಳುನಾಡಿನ ಭಾಷಾಭೇದ ಗಣನೀಯವಾಗಿ ಹೆಚ್ಚು.

ಐತಿಹಾಸಿಕ ಕಾರಣದಿಂದಾಗಿ ಕರ್ನಾಟಕದ ಸಂಕೇತಿಗಳು ಮೊದಲಿ ನಿಂದಲೂ ತಮಿಳುನಾಡಿನ ಸಂಪರ್ಕವನ್ನು ಪೂರ್ಣವಾಗಿ ತೊರೆದವರು; ಬರೆವಣಿಗೆಯ ಅಗತ್ಯವಿದ್ದಾಗ ಸಂಸ್ಕøತ ಲಿಪಿ ಮತ್ತು ಭಾಷೆಯನ್ನು ಬಳಸಿದರು. ಕೇವಲ ಆಡುಭಾಷೆಯಾಗಿದ್ದ ಸಂಕೇತಿ ಮುಕ್ತವಾಗಿ ಪರಿವರ್ತನೆ ಹೊಂದ ತೊಡಗಿತು. ತಮಿಳು ರಚನೆಯ ಪದಕ್ಕೆ ಕನ್ನಡದ ಪ್ರತ್ಯಯ ಮತ್ತು ಉಚ್ಚಾರಣೆ ಸೇರಿತು. ನಗರೀಕರಣ, ಆಧುನಿಕ ಶಿಕ್ಷಣ ಮತ್ತು ಸಾಂಸ್ಕøತಿಕ ಪ್ರಭಾವದಿಂದಾಗಿ ಮನೆಮಾತು, ಲೇಖನಕಾರ್ಯ, ಜನಪದ ಸಂವಾದ ಈಗ ಬಹುಪಾಲು ಕನ್ನಡದಲ್ಲೇ ನಡೆಯತೊಡಗಿವೆ; ಇದರೊಂದಿಗೆ ಸಮುದಾಯದ ಭಾವನಾತ್ಮಕ ಸಂಘಟನೆಯೂ ಶಿಥಿಲ ಗೊಂಡಿದೆ. ಇದನ್ನು ಸಂಸ್ಕøತ ಹೆಚ್ಚು ಪ್ರಭಾವಿಸಿದೆ; ಹಳೆಯ ತಮಿಳಿನ ಪದಗಳೂ ಮಲಯಾಳ ಮೂಡಿಕೊಳ್ಳುತ್ತಿದ್ದ ಹೊತ್ತಿನ ಪ್ರಯೋಗಗಳೂ ಪೂರ್ವದ ಹಳಗನ್ನಡ ಪ್ರಯೋಗಗಳೂ ಇದರಲ್ಲಿವೆ; ಕನ್ನಡ ಮತ್ತು ಸಂಸ್ಕøತ ಲಿಪಿಗಳೂ ಧ್ವನಿಮಾಗಳೂ ಇವೆ. ತಮಿಳಿನ ವಿಶಿಷ್ಟ ಧ್ವನಿಮಾ ಗಳು ಬಿಟ್ಟುಹೋಗುತ್ತಿವೆ; ವ್ಯಾಕರಣ ಲಕ್ಷಣ ತಮಿಳಿನಂತೆಯೇ ಇದೆ. ಸಂಕೇತಿ ಉಪಭಾಷೆಗಳ ತೌಲನಿಕ ಅಧ್ಯಯನಕ್ಕೆ ವಿಪುಲ ಅವಕಾಶವಿದ್ದು, ಅಧ್ಯಯನ ನಡೆಯುತ್ತಿದೆ. ಸಂಕೇತಿಗಳ ಮೂಲ ಮತ್ತು ವಲಸೆಗೆ ಸಂಬಂಧಿಸಿದಂತೆ, ತಮಿಳು ಉಪಭಾಷೆಗಳ ತೌಲನಿಕ ಅಧ್ಯಯನ ಹೆಚ್ಚು ಬೆಳಕು ಚೆಲ್ಲಬಹುದಾಗಿದೆ.

ಸಂಕೇತಿಗಳ ಜನಪದ ಸಾಹಿತ್ಯ ವಿಪುಲವಾದುದು. ಜನಪದಗೀತೆಗಳು ಇಲ್ಲಿ ಮೊದಲಸ್ಥಾನ ಪಡೆಯುತ್ತವೆ. ಪ್ರಮಾಣ ಮತ್ತು ಬಳಕೆಯ ದೃಷ್ಟಿಯಿಂದ ಎರಡನೆಯ ಸ್ಥಾನದಲ್ಲಿ ನಿಲ್ಲುವುದು ಗಾದೆ. ಇಪ್ಪತ್ತನೆಯ ಶತಮಾನದ ಮಧ್ಯಭಾಗದವರೆಗೆ ಒಗಟುಗಳು ಬೌದ್ಧಿಕ ಮನರಂಜನೆಯ ಭಾಗವಾಗಿದ್ದುವು. ಇತಿಹಾಸವನ್ನು ಬಹುವಾಗಿ ಉಳಿಸಿಕೊಂಡ ಐತಿಹ್ಯಗಳು ಬಳಕೆಯ ದೃಷ್ಟಿಯಿಂದ ಇಲ್ಲಿ ಗಂಭೀರ ಪರಿಗಣನೆಗೆ ಅರ್ಹವಾಗಿವೆ. ವೈದ್ಯ, ಕ್ರೀಡೆ ಇತ್ಯಾದಿಗಳೂ ಸೇರಿದಂತೆ ಅವೆಲ್ಲವೂ ಅಲ್ಪ ಪ್ರಮಾಣದಲ್ಲಾ ದರೂ ದಾಖಲೆಗೊಂಡಿವೆ. ಪತ್ರಸಾಹಿತ್ಯದ ಗಣನೀಯ ಸಂಗ್ರಹವೂ ಪ್ರಕಟವಾಗಿದೆ. ಪಾರಂಪರಿಕ ಜನಪದ ಸಾಹಿತ್ಯ ನಗರೀಕರಣದ ಒತ್ತಡ ದಲ್ಲಿ ವಿನಾಶದ ಅಂಚನ್ನು ಮುಟ್ಟಿದೆ.

ಧರ್ಮ, ಬುದ್ಧಿವಂತಿಕೆ ಮತ್ತು ವಿನೋದಕ್ಕೆ ಸಂಬಂಧಿಸಿದ ಕಥೆಗಳು ಗಮನ ಸೆಳೆಯುತ್ತವೆ. ಇವುಗಳಲ್ಲಿ ವಿಶ್ವಕಥಾ ಮಾದರಿಗಳಿವೆ, ಬ್ರಾಹ್ಮಣ ವಲಯದ ವಿಶಿಷ್ಟ ಕಥೆಗಳೂ ಇವೆ. ಇವರ ಐತಿಹ್ಯಗಳು ಇವರ ವಂಶ ಚರಿತ್ರೆಗಳ ಭಾಗಗಳು; ಇವರ ಗಾಢ ಪ್ರವೃತ್ತಿಗಳನ್ನು ಇವು ದಾಖಲಿಸಿವೆ. ಗಾದೆಗಳಲ್ಲಿ ಸಾಹಿತ್ಯಕ ಮತ್ತು ಸಾಂಸ್ಕøತಿಕ ಮುಖದ ವಿಸ್ತಾರವಾದ ಅಧ್ಯಯನಕ್ಕೆ ಆಕರವಾಗಬಹುದಾದ ವಿಪುಲತೆ ಮತ್ತು ವೈಶಿಷ್ಟ್ಯವಿದೆ. ಒಗಟುಗಳು ವೈವಿಧ್ಯಪೂರ್ಣ ಕ್ರಿಯಾಶರೀರ, ಭಾಷೆ, ಲಯ, ವಸ್ತುವೈವಿಧ್ಯ ಮತ್ತು ನಾವೀನ್ಯ, ಸಾಂಸ್ಕøತಿಕ ಅಭಿವ್ಯಕ್ತಿ - ಇವುಗಳಲ್ಲಿ ಈ ಸಮುದಾಯದ ಛಾಪು ಎದ್ದು ಕಾಣುತ್ತದೆ. ಸರ್ವದೈವ ಸಮಭಾವ, ಆತ್ಮವಿಮರ್ಶೆ, ಪೂರ್ಣ ಕನ್ನಡೀಕರಣ, ಮತಾತೀತ ಲಕ್ಷಣ, ಭಾಷಾವೈವಿಧ್ಯ, ವ್ಯಾಪಕ ಧಾರ್ಮಿಕತೆ - ಇವರ ಸಂಪ್ರದಾಯ ಗೀತೆಗಳ ಮುಖ್ಯ ಲಕ್ಷಣ.

ಇವರ ಜೀವನಶ್ರದ್ಧೆ, ನಂಬಿಕೆ ಮತ್ತು ಸಮಸ್ತ ಜೀವನವಿಧಾನದ ಪರಿಚಯ ಇವರ ಭಾಷೆ ಮತ್ತು ಜನಪದ ಸಾಹಿತ್ಯದಲ್ಲಿ ದೊರೆಯುತ್ತದೆ. ಈ ಸಮುದಾಯದ ಅನನ್ಯತೆ ಇವುಗಳಲ್ಲಿ ನಿಚ್ಚಳವಾಗಿ ಪ್ರತಿಬಿಂಬಿತವಾಗಿದೆ.

ಈ ಸಮುದಾಯದ ಶಿಷ್ಟಸಾಹಿತ್ಯ ಇತ್ತೀಚಿನ ದಿನಗಳಲ್ಲಿ ವೇಗ ಪಡೆದುಕೊಳ್ಳುತ್ತಿದೆ. ಸಂಸ್ಕøತದಲ್ಲಿ ಸಾಹಿತ್ಯಕೃಷಿಯ ಮೊದಲ ನಿದರ್ಶನ ವಿದ್ಯಾರಣ್ಯರದು. 19-20ನೆಯ ಶತಮಾನದಲ್ಲಿದ್ದ ತಿರುವಾಂಕೂರು ಆಸ್ಥಾನ ವಿದ್ವಾಂಸ ಅಭಿನವ ಕಾಳಿದಾಸ ಎಲತ್ತೂರು ರಾಮಸ್ವಾಮಿ ಶಾಸ್ತ್ರಿಗಳೂ ಕರ್ನಾಟಕದ ಚಿಲ್ಕುಂದ ನಾಗಪ್ಪಶಾಸ್ತ್ರಿಗಳೂ ಸಂಸ್ಕøತದಲ್ಲಿ ಸೃಜನಶೀಲ ಕೃತಿಗಳನ್ನು ರಚಿಸಿದ್ದಾರೆ. ಸಂಸ್ಕøತದಲ್ಲಿ ಕೃಷಿ ವ್ಯಾಪಕ ವಾಗಿಲ್ಲ. ಕಾವ್ಯ, ಶಾಸ್ತ್ರಗಳನ್ನು ಓಲೆಗರಿಗಳಲ್ಲಿ ಪ್ರತಿಮಾಡಿಸಿ ವಿತರಿಸುವ, ಕೂಲಿಮಠ ನಡೆಸುವ ಹಾಗೂ ಗಮಕವಾಚನದ ಪರಂಪರೆ ಇವರ ಸಾಹಿತ್ಯ ಪರಿಚಾರಿಕೆಯ ಭಾಗ. ರುದ್ರಭಟ್ಟ ಮತ್ತು ಲಕ್ಷ್ಮೀಶ ಈ ಸಮುದಾಯದವರೆಂಬ ವಾದವನ್ನು ಬಿಟ್ಟರೆ ಕನ್ನಡ ಲೇಖಕರು ಕಾಣುವುದು 19-20ನೆಯ ಶತಮಾನಗಳಲ್ಲಿ. ಆರ್.ಶಾಮಶಾಸ್ತ್ರಿ, ಕೆ.ಕೃಷ್ಣಮೂರ್ತಿ, ಕೆ.ಅನಂತರಾಮು, ಮತ್ತೂರು ಕೃಷ್ಣಮೂರ್ತಿ, ಸಿ.ಎನ್.ರಾಮಚಂದ್ರನ್ ಮೊದಲಾದವರು ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ ಕೃಷಿ ಮಾಡಿರುವ ಗಣ್ಯರು. ಗ್ರಂಥಸಂಪಾದನೆ, ಸಂಶೋಧನೆ, ಅನುವಾದ ಅಲ್ಲದೆ ಪ್ರವಾಸ ಸಾಹಿತ್ಯ, ವಿಮರ್ಶೆ, ನಾಟಕ, ಕವನ, ಕಥೆ, ಕಾದಂಬರಿ ಇತ್ಯಾದಿ ಪ್ರಕಾರಗಳಲ್ಲಿ ನೂರಾರು ಲೇಖಕರು ವ್ಯವಸಾಯ ಮಾಡಿದ್ದಾರೆ. ಸಿ.ರಂಗಯ್ಯ, ಎನ್.ಚನ್ನಕೇಶವಯ್ಯ ಮೊದಲಾದ ವಾಗ್ಗೇಯಕಾರರೂ ಆರ್.ಆರ್.ಕೇಶವಮೂರ್ತಿ, ಮತ್ತೂರು ಶಂಕರಮೂರ್ತಿ ಮೊದಲಾದ ಸಂಗೀತಗ್ರಂಥ ಕರ್ತೃಗಳನ್ನೂ ಇಲ್ಲಿ ಗಮನಿಸಬಹುದು. ಸಂಕೇತಿ ಭಾಷೆಯಲ್ಲಿಯೇ ಕೀರ್ತನೆಗಳನ್ನು ರಚಿಸಿ ಸ್ವರ ಸಂಯೋಜನೆ ಮಾಡಿರುವ ಶ್ರೀಕಾಂತ್ ಅವರದು ಈ ಮಾದರಿಯ ಅನನ್ಯ ನಿದರ್ಶನ. ಸಂಕೇತಿ ವಾರ್ತಾ, ಸಂಕೇತಿ ಸಂಗಮ ಇವು ಸಂಕೇತಿ ಸಮುದಾಯದ ಎರಡು ಮಾಸಪತ್ರಿಕೆಗಳು. ಬೆಂಗಳೂರಿನ ಪ್ರಚಾರ ಗ್ರಂಥಮಾಲೆ, ಅನಂತಪ್ರಕಾಶನ, ಜ್ಯೋತಿ ಸಾಂಸ್ಕøತಿಕ ಪ್ರತಿಷ್ಠಾನ, ಮತ್ತೂರಿನ ವೇದ ಸಂಸ್ಕøತ ಸಂಶೋಧನ ಕೇಂದ್ರ ಪುಸ್ತಕ ಪ್ರಕಾಶನವನ್ನು ಮಾಡುತ್ತಿವೆ. ಸಂಕೇತಿ ಸಮುದಾಯವನ್ನು ಕುರಿತ ಅಧ್ಯಯನವು 1936ರಲ್ಲಿ ಎಂ.ಕೇಶವಯ್ಯ ಅವರಿಂದ ಪ್ರಾರಂಭವಾಗಿ, 1995ರಲ್ಲಿ ಮೈಸೂರಿನಲ್ಲಿ ಸ್ಥಾಪನೆಗೊಂಡ ಸಮುದಾಯ ಅಧ್ಯಯನ ಕೇಂದ್ರದ ಮೂಲಕ ದೊಡ್ಡ ಪ್ರಮಾಣದಲ್ಲಿ ಮುಂದುವರಿದಿದೆ. ಸಿ.ಎಸ್.ರಾಮಚಂದ್ರ ಅವರು ಸಂಕೇತಿ: ಜನಾಂಗ ಮತ್ತು ಭಾಷೆ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ಸಂಶೋಧಕ ಬಿ.ಎಸ್.ಪ್ರಣತಾರ್ತಿ ಹರನ್ ಅವರ ಪ್ರಧಾನ ಸಂಪಾದಕತ್ವದಲ್ಲಿ 10 ಬೃಹತ್ ಸಂಪುಟಗಳನ್ನು ಗಣ್ಯ ವಿದ್ವಾಂಸರು ಸಿದ್ಧಪಡಿಸುತ್ತಿದ್ದಾರೆ. ಇವುಗಳಲ್ಲಿ ಸಂಕೇತಿ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಸಂಪುಟಗಳೂ ಸೇರಿವೆ.

(ಬಿ.ಎಸ್.ಪಿ.ಎಚ್.)