ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಂಕ್ರಾಂತಿ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಸಂಕ್ರಾಂತಿ

ಮಕರ ರಾಶಿಗೆ ಸೂರ್ಯ ಪ್ರವೇಶಿಸುವ ದಿನ. ಉತ್ತರಾಯಣ ಪುಣ್ಯಕಾಲವೆಂದು ಆಚರಣೆಯಲ್ಲಿದೆ. ದ್ರಾವಿಡ ಸಂಪ್ರದಾ ಯಸ್ಥರಿಗೆ ಇದೊಂದು ಸಂಭ್ರಮದ ದಿನ. ಪೊಂಗಲ್ ಎಂದೂ ಪ್ರಸಿದ್ಧ. ಪ್ರತಿ ವರ್ಷ ಮಾರ್ಗಶಿರ-ಪುಷ್ಯ ಮಾಸದ ಚತುರ್ಥಿಯಂದು ಇದನ್ನು ಆಚರಿಸುವರು. ಬ್ರಹ್ಮಗುಪ್ತ (6ನೆಯ ಶತಮಾನ) ಇದರ ಬಗ್ಗೆ ಉಲ್ಲೇಖಿಸಿದ್ದಾನೆ. ಇದೊಂದು ಋತು ಪರಿವರ್ತನ ಕಾಲ. ಇದನ್ನು ಸ್ತ್ರೀ ಸಂಕೇತದಿಂದ ಗುರುತಿಸಲಾಗುತ್ತದೆ. ಎಳ್ಳು-ಬೆಲ್ಲ ಹಂಚುವುದು ಅಂದಿನ ಹಬ್ಬದ ವೈಶಿಷ್ಟ್ಯ. ದಕ್ಷಿಣಾಯನ ಅವಧಿಯಲ್ಲಿ ಮುಚ್ಚಿದ ಸ್ವರ್ಗದ ಕದ ಮಕರಸಂಕ್ರಾಂತಿಯಂದು ತೆರೆದುಕೊಳ್ಳುವುದೆಂಬುದು ಜನಪದ ನಂಬಿಕೆ. ರೈತರು ಈ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಾರೆ. ದನಕರುಗಳ ಮೈತೊಳೆದು, ಸಿಂಗರಿಸಿ, ಪೂಜಿಸಿ ಸಂಜೆ ವೇಳೆ ಕಿಚ್ಚುಹಾಯಿಸುವರು. ಇದರಿಂದ ದನಗಳಿಗೆ ಬರುವ ಜ್ವರ (ಕಾಲು-ಬಾಯಿ ಒಡೆ ರೋಗ) ಪೀಡಿಸುವುದಿಲ್ಲವೆಂಬ ನಂಬಿಕೆ ಇದೆ. ಭಾರತಾದ್ಯಂತ ಈ ಹಬ್ಬ ಪ್ರಾದೇಶಿಕ ಭಿನ್ನತೆಯೊಡನೆ ಆಚರಣೆಯಲ್ಲಿದೆ. ಹಬ್ಬದ ತರುವಾಯ ರೈತರು ಒಕ್ಕಣೆ ಕಾರ್ಯದಲ್ಲಿ ತೊಡಗುತ್ತಾರೆ. ಜನಪದರಲ್ಲಿ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡು ಎಂಬ ಗಾದೆ ಮಾತಿದೆ. ಅಂದು ಅವಾಚ್ಯ ಮಾತಾಡುವುದು, ಎಲೆ ಕೀಳುವುದು, ಹುಲ್ಲು ಕತ್ತರಿಸುವುದು, ಯಾವುದೇ ಪ್ರಾಣಿಯ ಹಾಲು ಹಿಂಡುವುದು ಮೊದಲಾದವು ನಿಷಿದ್ಧ ಕಾರ್ಯಗಳಾಗಿವೆ.

ಸಂಕ್ರಾಂತಿ ಹಬ್ಬವನ್ನು ಒಂದು ದೃಷ್ಟಿಯಲ್ಲಿ ಸುಗ್ಗಿಯೆಂದೇ ಕರೆಯಬಹುದು. ಚಿಲುಕು ಅವರೇಕಾಳಿನ ಸಾರು, ಕಡುಬು, ಪೊಂಗಲ್ ಅಂದಿನ ವಿಶೇಷ ಅಡುಗೆಗಳು. ಕೆಲವಡೆ ಪೊಂಗಲನ್ನು ಹುಗ್ಗಿ ಎಂದೂ ಕರೆಯುವರು.

ವಾಸ್ತವವಾಗಿ ಡಿಸೆಂಬರ್ 21ರಂದೇ ಸೂರ್ಯ ಮಕರರಾಶಿಗೆ ಪ್ರವೇಶಿಸುತ್ತಾನಾದರೂ ಸಂಪ್ರದಾಯ ಈ ದಿನವನ್ನು ಸಂಕ್ರಾಂತಿ ಎಂದು ಪರಿಗಣಿಸದಿರುವುದು ಆಶ್ಚರ್ಯಕರವಾಗಿದೆ. *