ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸತ್ಯಜಿತ್, ರೇ

ವಿಕಿಸೋರ್ಸ್ದಿಂದ

ಸತ್ಯಜಿತ್, ರೇ 1921-92. ಅಂತಾರಾಷ್ಟ್ರೀಯ ಖ್ಯಾತಿಗಳಿಸಿದ ಭಾರತದ ಚಲನಚಿತ್ರ ನಿರ್ದೇಶಕರು. ಕೊಲ್ಕತದಲ್ಲಿ 1921ರಲ್ಲಿ ಜನಿಸಿದರು. ವಿಡಂಬನೆಗಳನ್ನೂ ವಿನೋದ ಪದ್ಯಗಳನ್ನೂ ಬರೆಯುತ್ತಿದ್ದ ಪ್ರಸಿದ್ಧ ಕವಿಗಳಾಗಿದ್ದ ಸುಕುಮಾರ್ ರೇ ಇವರ ತಂದೆ. ಇವರ ತಾತ ಉಪೇಂದ್ರ ಕಿಶೋರ್ ರೇ ಚೌದರಿ. ಉತ್ತಮ ಕೌಟಂಬಿಕ ಪರಿಸರದಲ್ಲಿ ಬೆಳೆದ ರೇ ಅವರಿಗೆ ಚಿಕ್ಕಂದಿನಿಂದಲೂ ಸಿನಿಮಾ ಆಸಕ್ತಿಯ ಕ್ಷೇತ್ರವಾಗಿತ್ತು. ಇವರು 1940-42ರ ಅವಧಿಯಲ್ಲಿ ಕಲಾಭವನ ಮತ್ತು ಶಾಂತಿನಿಕೇತನಗಳಲ್ಲಿ ನಂದಲಾಲ್‍ಬೋಸ್ ಅವರಿಂದ ವರ್ಣಚಿತ್ರಕಲೆಯ ಅಭ್ಯಾಸ ಮಾಡಿದರು. ಜಪಾನಿನ ಪ್ರಸಿದ್ಧ ಚಿತ್ರನಿರ್ದೇಶಕ ಕುರೊಸವನ ರಶೋಮನ್ ಚಿತ್ರ ಇವರ ಮೇಲೆ ಗಾಢ ಪ್ರಭಾವ ಬೀರಿತು. 1947ರಲ್ಲಿ ಚಿದಾನಂದ್ ದಾಸ್‍ಗುಪ್ತಾ ಅವರೊಂದಿಗೆ ಕೊಲ್ಕತದಲ್ಲಿ ಚಿತ್ರಸಂಘ (ಫಿಲಂ ಸೊಸೈಟಿ) ವೊಂದನ್ನು ಸ್ಥಾಪಿಸಿ ಆ ಮೂಲಕ ಯುರೋಪಿಯನ್ ಮತ್ತು ಸೋವಿಯತ್ ಚಲನ ಚಿತ್ರಗಳ ಪರಿಚಯ ಮಾಡಿ ಕೊಂಡರು. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಯಶಸ್ವಿಯಾಗಿ ಪ್ರದರ್ಶಿತ ವಾದ ಇವರ ಪಥೇರ್ ಪಾಂಚಾಲಿ (1955) ಇವರಿಗೆ ಭಾರತದ ಮೊಟ್ಟಮೊದಲ ಅಂತಾರಾಷ್ಟ್ರೀಯ ಚಲನಚಿತ್ರ ನಿರ್ಮಾಪಕನೆಂಬ ಖ್ಯಾತಿಯನ್ನು ತಂದುಕೊಟ್ಟಿತು.

ಇವರ ಆರಂಭದ ಚಲನಚಿತ್ರಗಳು ಊಳಿಗಮಾನ್ಯದ ಅವನತಿ ಮತ್ತು ಕೃಷಿಕ ಆರ್ಥಿಕ ವ್ಯವಸ್ಥೆಯಿಂದ ಬಂಡವಾಳಶಾಹಿ ಆಧುನಿಕತೆಗೆ ಸ್ಥಿತ್ಯಂತರಗೊಳ್ಳುತ್ತಿದ್ದ ಕಾಲದ ಕಥಾನಕಗಳನ್ನು ಒಳಗೊಂಡಿವೆ. ಇವರ ಬಹುತೇಕ ಚಿತ್ರಗಳು ನೆಹರೂ ಅವರ ಸೈದ್ಧಾಂತಿಕ ಉದಾರವಾದವನ್ನು ಪ್ರತಿಬಿಂಬಿಸುತ್ತವೆ. ಇವರ ಕಲಾತ್ಮಕ ಹಾಗೂ ಬೌದ್ಧಿಕತೆಯ ದರ್ಶನಗಳ ಮೇಲೆ ಅತ್ಯಂತ ಗಾಢ ಪ್ರಭಾವಬೀರಿದ್ದು ರವೀಂದ್ರನಾಥ ಠಾಕೂರರ ಕಥೆಗಳು (ತೀನ್‍ಕನ್ಯಾ, ಚಾರುಲತಾ, ಫೂರೇಖೈರೆ). ಠಾಕೂರರನ್ನು ಕುರಿತಂತೆ ಇವರು ಸಾಕ್ಷ್ಯಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. 1960ರ ದಶಕದ ಅನಂತರದಲ್ಲಿ ನಿರ್ಮಿತವಾದ ನಾಯಕ್(1967) ಮೊದಲಾದ ಚಿತ್ರಗಳಲ್ಲಿ ನಾಗರಿಕ ಸಾಂಸ್ಕøತಿಕ ಸಮಾಜದ ವಿಮರ್ಶೆ ಹಾಗೂ ಅಡಿಪಾಯವಿಲ್ಲದ ನಾಗರಿಕತೆ ಹಾಗೂ ಆರ್ಥಿಕವಾಗಿ ಶೋಷಿತವಾಗುತ್ತಿ ರುವ ಹಳ್ಳಿಗಳ ಸ್ಥಿತಿಗಳ ಮಾರ್ಮಿಕ ವಿಮರ್ಶೆ ಕಂಡುಬರುತ್ತದೆ.

ಇವರು ಪಥೇರ್ ಪಾಂಚಾಲಿ(1955), ಅಪರಾಜಿತೊ(1956), ಪಾರೇಷ್ ಪಥೇರ್(1958), ಜಲಸಾಗರ್(1959), ಅಪೂರ್ ಸನ್ಸಾರ್(1960), ದೇವಿ (1961), ತೀನ್‍ಕನ್ಯಾ (ರವೀಂದ್ರರ ಸಾಕ್ಷ್ಯಚಿತ್ರ, 1961) ಅಭಿಜಾನ್(1962), ಚಾರುಲತಾ(1964), ನಾಯಕ್(1967), ಗಣಶತ್ರು(1990), ಆಗಂತುಕ್ (1991) ಮೊದಲಾದ ಅನೇಕ ಪ್ರಸಿದ್ಧ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಶತರಂಜ್ ಕೇ ಕಿಲಾಡಿ ಇವರು ನಿರ್ದೇಶಿಸಿದ ಹಿಂದಿ ಚಿತ್ರ.

ಇವರು ಅನೇಕ ಸಣ್ಣ ಕಥೆಗಳನ್ನೂ ಬರೆದಿದ್ದಾರೆ. ಇವರ ಮಗ ಸಂದೀಪ್ ರೇ ಇವರ ಕೆಲವು ಕಥೆಗಳನ್ನು ದೂರದರ್ಶನಕ್ಕಾಗಿ ಸತ್ಯಜಿತ್ ರೇ ಪ್ರೆಸೆಂಟ್ಸ್ ಎಂಬ ಶೀರ್ಷಿಕೆಯಲ್ಲಿ ಚಿತ್ರೀಕರಿಸಿದ್ದಾರೆ. ಭಾರತೀಯವೂ ಪರಿಪೂರ್ಣವೂ ಆದ ತಮ್ಮ ಚಿತ್ರಗಳ ಮೂಲಕ ಅಂತಾರಾಷ್ಟ್ರೀಯ ಮಾನ್ಯತೆಗಳಿಸಿರುವ ಇವರು ಪ್ರಪಂಚದ ಬೆರಳೆಣಿಕೆಯ ಅಗ್ರಗಣ್ಯ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಇವರ ಚಿತ್ರಗಳು ದಿನನಿತ್ಯದ ಬದುಕಿನ ವಾಸ್ತವವನ್ನು ಕಲಾತ್ಮಕವಾಗಿ ಅಭಿವ್ಯಕ್ತಿಸುವ ಚಿತ್ರಗಳಾಗಿ ಮನ್ನಣೆಗಳಿಸಿವೆ. ಇವರಿಗೆ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಗೌರವ, ಪ್ರಶಸ್ತಿ ದೊರೆಕಿವೆ. ಜೀವಮಾನದ ಸಾಧನೆಗಾಗಿ ಇವರಿಗೆ ಪ್ರಪಂಚ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ದೊರೆತಿದೆ(1992), ಇವರು ಈ ಗೌರವಕ್ಕೆ ಪಾತ್ರರಾದ ಭಾರತದ ಏಕೈಕವ್ಯಕ್ತಿ.ಇದೇ ವರ್ಷ ಇವರಿಗೆ ಭಾರತ ಸರ್ಕಾರ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು 1992ರಲ್ಲಿ ನಿಧನರಾದರು.

*