ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸತ್ಯಾಗ್ರಹ

ವಿಕಿಸೋರ್ಸ್ದಿಂದ

ಸತ್ಯಾಗ್ರಹ ಮಹಾತ್ಮಗಾಂಧಿಯವರು ತಮ್ಮ ಜೀವನದಲ್ಲಿ ಕಂಡುಕೊಂಡ ಸಿದ್ಧಾಂತ ಹಾಗೂ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ನಡೆಸಿದ ಚಳವಳಿ (1906). ಬದುಕಿನ ಸಮಸ್ಯೆಗಳನ್ನು ಸಮಗ್ರವಾಗಿ ಕಂಡು ಅವುಗಳನ್ನೆದುರಿಸಿ ಪರಿಹಾರ ಪಡೆದುಕೊಳ್ಳಲು ಅಹಿಂಸಾತ್ಮಕ ಹೋರಾಟವನ್ನು ಆತ್ಮಶಕ್ತಿಯ ಬಲದಿಂದ ನಡೆಸುವುದು ಸತ್ಯಾಗ್ರಹ. ಮಹಾತ್ಮಗಾಂಧಿಯವರು ಭಾರತವನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ ವಿಮೋಚನೆಗೊಳಿಸಲು ಸತ್ಯಾಗ್ರಹ ಮಾರ್ಗವನ್ನು ರೂಪಿಸಿದರು. ಮೊದಲು ಸದಾಗ್ರಹ ಎಂದೂ ಅನಂತರ ಸತ್ಯಾಗ್ರಹ ಎಂದೂ ಅದಕ್ಕೆ ಹೆಸರಿಟ್ಟರು. ರಸ್ಕಿನ್, ಟಾಲ್‍ಸ್ಟಾಯ್, ಥಾರೋ ಮತ್ತು ರಾಯಿಚಂದಬಾಯಿ ಮೊದಲಾದವರ ಬರೆಹಗಳಿಂದಲೂ ಗೀತಾ, ಉಪನಿಷತ್, ಕುರಾನ್, ಬೈಬಲ್‍ಗಳ ಮೂಲಕ ತತ್ತ್ವಗಳ ಅಧ್ಯಯನ ಅನುಷ್ಠಾನಗಳಿಂದಲೂ ಪ್ರೇರಣೆ ಪಡೆದು ಸತ್ಯಾಗ್ರಹ ಚಳವಳಿಯನ್ನು ಆರಂಭಿಸಿದರು. ಜೀವನದ ಯಾವ ಕ್ಷೇತ್ರದಿಂದಲೂ ವಿಮುಖವಾಗದೆ, ಆದರ್ಶದ ಒರೆಗಲ್ಲಿಗೆ ಸಕಲಕ್ರಮಗಳನ್ನೂ ನಿಷ್ಠುರವಾಗಿ ಉಜ್ಜಿನೋಡಿ, ಸತ್ಯದ ಅರಿವಾದೊಡನೆ ನಿರ್ಭಯವಾಗಿ ಅದನ್ನನುಸರಿಸಿ ಮುನ್ನಡೆಯಲು ವ್ಯಕ್ತಿಗಳಲ್ಲಿ, ಸಮಾಜಕ್ಕಾಗಲಿ, ರಾಷ್ಟ್ರಕ್ಕಾಗಲಿ ಅಹಿಂಸಾಮಾರ್ಗವೊಂದೇ ಸಾಧನ; ಅದೇ ಸತ್ಯಾಗ್ರಹ, ಇದು ಗಾಂಧಿಯವರು ಕಂಡುಕೊಂಡ ಸಿದ್ಧಾಂತ. ಸತ್ಯಾಗ್ರಹವನ್ನು ಹೀಗೂ ಅರ್ಥೈಸಬಹುದು. ಸತ್ಯಕ್ಕಾಗಿ ಆಗ್ರಹ ಎಂಬುದೊಂದು ಅರ್ಥವಾದರೆ ಸತ್ಯದಿಂದ ಆಗ್ರಹ ಎಂಬುದು ಮತ್ತೊಂದು ಅರ್ಥವಾಗುತ್ತದೆ. ಸತ್ಯಾಗ್ರಹ ಎಂಬುದು ಪ್ರೇಮದಿಂದ ಸೃಜಿಸುತ್ತದೆ. ಸತ್ಯಾಗ್ರಹವನ್ನು ಮಾಡಬೇಕಾಗಿರುವ ಎದುರಾಳಿಯ ಮಾತು ಅಥವಾ ಕೃತಿ ಅಸತ್ಯವಾಗಿರಬಹುದು ಅಥವಾ ಅನ್ಯಾಯವೇ ಆಗಿರಬಹುದು ಆದರೆ ಖಂಡಿಸಬೇಕಾದುದು ವಿಚಾರವೆ ಹೊರತು ವ್ಯಕ್ತಿಯನ್ನಲ್ಲ. ಆದರೆ ಅನ್ಯಾಯಕ್ಕೆ ತಲೆಬಾಗುವ ಆವಶ್ಯಕತೆ ಇಲ್ಲ. ಇಂತಹ ಸಂದರ್ಭದಲ್ಲಿ ಅನೇಕ ಕಷ್ಟನಷ್ಟಗಳಿಗೆ ಗುರಿಯಾಗಬಹುದು. ಸತ್ಯಾಗ್ರಹಿಯ ಆತ್ಮಾರ್ಪಣೆ ಎಂತಹ ತ್ಯಾಗಕ್ಕೂ ಹಿಂತೆಗೆಯಬಾರದು. ಸತ್ಯಾಗ್ರಹ ಎಂಬುದು ಆತ್ಮಶಕ್ತಿಯನ್ನು ಹೆಚ್ಚಿಸುವುದರಿಂದ ಇದು ದುರ್ಬಲರ ಅಸ್ತ್ರವಲ್ಲ. ಅಸಹಕಾರ, ಸವಿನಯ ಕಾನೂನು ಭಂಗ, ಕರ ನಿರಾಕರಣೆ ಇವೆಲ್ಲವೂ ಸತ್ಯಾಗ್ರಹ ವೃಕ್ಷದ ರೆಂಬೆಗಳು. ಸತ್ಯಾಗ್ರಹ ಎಂದರೆ ಸತ್ಯಶೋಧನೆ, ದೇವರು ನಿತ್ಯ ಆ ಸತ್ಯವನ್ನು ನನಗೆ ಸಾಕ್ಷಾತ್ಕಾರ ಮಾಡಿಸುವ ಬೆಳಕು ಅಪಾರ. ಸತ್ಯಾಗ್ರಹಿಯ ಜೀವನವೆಂದರೆ ಆತ್ಮಶುದ್ಧಿ; ಆತ್ಮಸಂಯಮ; ನೀತಿ, ತ್ಯಾಗ, ಆತ್ಮಸಮರ್ಪಣಗಳ ಒಂದು ಆನಂದದಾಯಕ ಪ್ರಗತಿಪರ ಪ್ರವಾಹ ಎಂಬುವುದು ಗಾಂಧೀಜಿಯವರ ಅಭಿಪ್ರಾಯ. ಸತ್ಯಾಗ್ರಹ ಹೋರಾಟ ಪ್ರಕ್ರಿಯೆಯಲ್ಲಿ ಯಾವುದೇ ಬಗೆಯ ರಹಸ್ಯ ಕಾರ್ಯಾಚರಣೆಗೆ ಅವಕಾಶವಿಲ್ಲ. ಆದ್ದರಿಂದ ನೇರವಾಗಿ ಅನ್ಯಾಯದ ಅಂಶವನ್ನು ಎದುರಾಳಿಗೆ ಮನವರಿಕೆ ಮಾಡಿಕೊಡುವುದು. ಸಾಧ್ಯವಾದರೆ ಮನಃ ಪರಿವರ್ತನೆಗೆ ಅವಕಾಶ ನೀಡಿ ಅನಂತರ ಹೋರಾಟದ ಪ್ರಕ್ರಿಯೆಗೆ ಇಳಿಯಬೇಕೆಂಬುದು ಇದರ ತತ್ತ್ವವಾಗಿದೆ.

ಸತ್ಯಾಗ್ರಹ ಎಂಬುದು ಒಂದು ಜನತಾ ಚಳವಳಿಯಾಗಿದ್ದು ಅದು ವಿಮೋಚನೆಯ ಒಂದು ಅಸ್ತ್ರವಾಗಿ ದಕ್ಷಿಣ ಆಫ್ರಿಕದಲ್ಲಿ ಭಾರತೀಯರ ಮೇಲೆ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ. ಸಾತ್ವಿಕ ಪ್ರತಿರೋಧ ಹೋರಾಟಕ್ಕೆ ಸೂಕ್ತ ಹೆಸರು ಸೂಚಿಸಲು ಇಂಡಿಯನ್ ಒಪೀನಿಯನ್ ಪತ್ರಿಕೆಯಲ್ಲಿ ಪ್ರಕಟಿಸಿದಾಗ ಮಗನ್ ಲಾಲ್ ಗಾಂಧಿ ಸದಾಗ್ರಹ ಎಂದು ಸೂಚಿಸಿದರು. ಗಾಂಧೀಜಿ ಅದನ್ನು ಸ್ವಲ್ಪ ಮಾರ್ಪಾಟು ಮಾಡಿ ಸತ್ಯಾಗ್ರಹ ಎಂದು ಕರೆದರು. ದಕ್ಷಿಣ ಆಫ್ರಿಕದಲ್ಲಿ ಗಾಂಧೀಜಿ ಟ್ರಾನ್ಸ್‍ವಾಲಿನಲ್ಲಿ 1906ರ ಸೆಪ್ಟೆಂಬರ್‍ನಲ್ಲಿ ಭಾರತೀಯರ ಮೇಲೆ ಅಮಾನವೀಯವಾಗಿ ಹೇರಿದ ಅನೇಕ ನಿರ್ಬಂಧಗಳನ್ನು ಸತ್ಯಾಗ್ರಹ ಚಳಿವಳಿಯ ಮೂಲಕ ಹೋರಾಡಿ ಜಯ ಪಡೆದರು. 1915ರಲ್ಲಿ ಗಾಂಧೀಜಿಯವರು ಭಾರತಕ್ಕೆ ಹಿಂತಿರುಗಿದ ಮೇಲೆ ರೈತ, ಕಾರ್ಮಿಕರ ಪರವಾಗಿ ಚಂಪಾರಣ್ಯ, ಖೇಡ ಹಾಗೂ ಅಹಮದಾಬಾದ್ ಗಿರಣಿ ಕಾರ್ಮಿಕರ ಮುಷ್ಕರ ಇವುಗಳಲ್ಲಿ ಸತ್ಯಾಗ್ರಹ ಹೋರಾಟವನ್ನು ನಡೆಸಿದರು. ಅನಂತರ ರಾಷ್ಟ್ರೀಯ ಕಾಂಗ್ರೆಸ್ಸಿನ ನಾಯಕತ್ವ ವಹಿಸಿಕೊಂಡ ಮೇಲೆ ಗಾಂಧೀಜಿ ವಸಾಹತು ಷಾಹಿ ಬ್ರಿಟಿಷ್ ಸರ್ಕಾರದ ವಿರುದ್ಧ 1920-47ರವರೆಗೆ ಸತ್ಯಾಗ್ರಹ ಹೋರಾಟದ ಮೂಲಕ ಸ್ವಾತಂತ್ರ್ಯ ಸಾಧನೆಗೆ ಜನಾಂದೋಲನ ಹಮ್ಮಿಕೊಂಡರು. 1920ರ ಅಸಹಕಾರ ಚಳವಳಿ, 1930ರ ಉಪ್ಪಿನ ಸತ್ಯಾಗ್ರಹ, 1940ರ ವೈಯುಕ್ತಿಕ ಸತ್ಯಾಗ್ರಹ ಹಾಗೂ 1942ರ ಚಲೇ ಜಾವ್ ಚಳವಳಿಗಳು ಪ್ರಮುಖ ಘಟ್ಟಗಳಾಗಿವೆ.

ಗಾಂಧೀಜಿಯವರು ಸತ್ಯಾಗ್ರಹ ಹೋರಾಟದೊಂದಿಗೆ ಸಾಮಾಜಿಕ ಪುನರುದ್ಧಾರಕ್ಕಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದು ಮತ್ತೊಂದು ವೈಶಿಷ್ಟ್ಯವಾಗಿದೆ.

1947 ಆಗಸ್ಟ್ 15ರಂದು ಭಾರತಕ್ಕೆ ಸತ್ಯಾಗ್ರಹ ಹೋರಾಟದ ಮೂಲಕ ಸ್ವಾತಂತ್ರ್ಯ ಲಭಿಸಿದಾಗ ಸತ್ಯಾಗ್ರಹದ ಶ್ರೇಷ್ಠತೆ ಇಡೀ ಪ್ರಪಂಚಕ್ಕೆ ಮನವರಿಕೆಯಾಯಿತು. ಸತ್ಯಾಗ್ರಹದ ಪ್ರಕ್ರಿಯೆ ಪ್ರಪಂಚದ ಅನೇಕ ಪ್ರಮುಖ ನಾಯಕರನ್ನೂ ಆಕರ್ಷಿಸಿತು. ಮಾರ್ಟಿನ್ ಲೂಥರ್ ಕಿಂಗ್ ಅಮೆರಿಕದ ನೀಗ್ರೋ ಚಳವಳಿಯಲ್ಲಿ ದಕ್ಷಿಣ ಆಫ್ರಿಕದ ನೆಲ್ಸನ್ ಮಂಡೇಲ. ಇಂದಿನ ಬರ್ಮಾದ ಅಂಗಸಾನ್ ಸೂಕಿ ಮೊದಲಾದವರು ಗಾಂಧೀ ಮಾರ್ಗದಲ್ಲೇ ಹೋರಾಟ ಮುಂದುವರಿಸುತ್ತಿದ್ದಾರೆ.

(ನೋಡಿ- ಗಾಂಧೀ,-ಮೋಹನ್‍ದಾಸ್-ಕರಮ್‍ಚಂದ್)		

(ಐ.ಬಿ.ಪಿ.)