ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸದಾಶಿವರಾವ್, ಪೇಜಾವರ
ಸದಾಶಿವರಾವ್, ಪೇಜಾವರ 1913-39. ಪ್ರತಿಭಾವಂತ ಕವಿ. ದಕ್ಷಿಣ ಕನ್ನಡ ಜಿಲ್ಲೆಯ ಪೇಜಾವರದಲ್ಲಿ ಶಾಮರಾವ್-ಸೀತಮ್ಮ ದಂಪತಿಗಳ ಹಿರಿಯ ಮಗನಾಗಿ 1913 ಮಾರ್ಚ್ 8ರಂದು ಜನಿಸಿದರು. ಮಂಗಳೂರಿನಲ್ಲಿ ವಿದ್ಯಾರ್ಥಿ ಯಾಗಿದ್ದಾಗ ಅಲ್ಲಿನ ಸಾಹಿತ್ಯ ಚಟುವಟಿಕೆಗಳ ಕೇಂದ್ರ ವಾಗಿದ್ದ ಮಿತ್ರಮಂಡಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಾಶಿಯ ಹಿಂದು ವಿಶ್ವವಿದ್ಯಾ ನಿಲಯದಲ್ಲಿ ಎಂಜಿನಿಯ ರಿಂಗ್ ಪದವಿ ಪಡೆದು ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು (ಡಾಕ್ಟರ್ ಆಫ್ ಆಟೊಮೊ ಬೈಲ್ ಎಂಜಿನಿಯರಿಂಗ್) 1936ರಲ್ಲಿ ಇಟಲಿಯ ಮಿಲಾನ್‍ಗೆ ಹೋದ ಇವರು 1939 ಅಕ್ಟೋಬರ್ 18ರಂದು ಅಲ್ಲಿಯೇ ನಿಧನರಾದರು.
ಇವರು ಕಥೆ, ನಾಟಕ ಮತ್ತು ಕವನಗಳನ್ನು ಬರೆದಿದ್ದಾರೆ. ಸರಪಣಿ, ಬೀದಿಗಿಳಿದ ನಾರಿ, ಜೀವನ ಸಂಗೀತ ಎಂಬ ಇವರ ಮೂರು ನಾಟಕಗಳು ತ್ರಿವೇಣಿ ಮಾಸಪತ್ರಿಕೆಯಲ್ಲಿ ಪ್ರಕಟವಾಗಿವೆ. ಅಂಥಶಿಲ್ಪ, ಶ್ರೀಗಂಧ-ಇವು ಇವರ ಎರಡು ಸಣ್ಣಕಥೆಗಳು. ವರುಣ (1952) ಎಂಬುದು ಇವರ ಕವನಸಂಕಲನ. ಇದರಲ್ಲಿ 48 ಕವನಗಳಿವೆ. ಪ್ರಕೃತಿ, ರಾಷ್ಟ್ರಭಕ್ತಿ, ಬದುಕು, ಸಾವು-ಇವು ಇವರ ಕವನಗಳ ವಸ್ತುಗಳು. ಇಟಲಿಯ ಕವಿ ಲೊರೊನ್ಜೊವಿನ ತತ್ತ್ವಗಳ ಒಳತೋಟಿಯನ್ನು ಇವರ ಅನೇಕ ಕವನಗಳಲ್ಲಿ ಗುರುತಿಸಬಹುದು. ನವ್ಯ ದೃಷ್ಟಿಯುಳ್ಳ ವರುಣ, ನಾಟ್ಯೋತ್ಸವ ಮೊದಲಾದ ಕವನಗಳನ್ನು ಇವರು ಈ ಶತಮಾನದ ಮೂರನೆಯ ದಶಕದಲ್ಲೇ ಬರೆದಿದ್ದರೆಂಬುದು ಕುತೂಹಲದ ವಿಷಯ. (ಎಮ್.ಪಿ.ಯು.)