ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾಂದ್ರತೆ
ಸಾಂದ್ರತೆ ಏಕಮಾನ ಗಾತ್ರದ ವಸ್ತುವಿನ ರಾಶಿ (ಡೆನ್ಸಿಟಿ). ಅಂತಾರಾಷ್ಟ್ರೀಯ ಪದ್ಧತಿಯಲ್ಲಿ ಕಿಲೊಗ್ರಾಮ್/ಘನಮೀಟರ್ ಎಂಬುದು ಸಾಂದ್ರತೆಯ ಏಕಮಾನ. ನೀರಿನ ಸಾಂದ್ರತೆ 1000 ಕೆಜಿ/ಘಮೀ, ಕಬ್ಬಿಣದ್ದು 7800 ಕೆಜಿ/ಘಮೀ, ಇತ್ಯಾದಿ.
(ವಸ್ತುವಿನ ಸಾಂದ್ರತೆ) = (ಅದರ ರಾಶಿ) (ಗಾತ್ರ). ಯಾವುವೇ ಎರಡು ತಿಳಿದಿರುವಾಗ ಮೂರನೆಯದನ್ನು ಗಣಿಸಬಹುದು. ವಸ್ತುವಿನ ಸಾಂದ್ರತೆಗೂ ನೀರಿನಂಥ ಇನ್ನೊಂದು ಆಧಾರ ವಸ್ತುವಿನ ಸಾಂದ್ರತೆಗೂ ಇರುವ ನಿಷ್ಪತ್ತಿ ಆ ವಸ್ತುವಿನ ಸಾಪೇಕ್ಷ ಸಾಂದ್ರತೆ. ಇದು ಕೇವಲ ಒಂದು ಸಂಖ್ಯೆ. ಉದಾಹರಣೆಗೆ, ಕಬ್ಬಿಣದ ಸಾಪೇಕ್ಷ ಸಾಂದ್ರತೆ 7.8.
ವಸ್ತುವಿನಿಂದ ವಸ್ತುವಿಗೆ ಅಣುಗಳೊಳಗಿನ ಆಕರ್ಷಣ ಬಲ ವ್ಯತ್ಯಯವಾಗುತ್ತದೆ. ಒಂದೇ ವಸ್ತುವಿನ ಸ್ಥಿತಿ ಬದಲಾವಣೆಯಾಗುವಾಗಲೂ ಹೀಗಾಗುತ್ತದೆ. ಇದರಿಂದ ನಿರ್ದಿಷ್ಟ ಗಾತ್ರದಲ್ಲಿರುವ ಅಣುಗಳ ಸಂಖ್ಯೆ ವಸ್ತುವಿನೊಂದಿಗೆ ಬದಲಾಗುತ್ತದೆ, ಸಾಂದ್ರತೆಯೂ ಬದಲಾಗುತ್ತದೆ. ಸಾಮಾನ್ಯವಾಗಿ ಒತ್ತಡ ಮತ್ತು ತಾಪ ಹೆಚ್ಚಿದಾಗ ಸಾಂದ್ರತೆ ಕಡಿಮೆ ಆಗುತ್ತದೆ. ಇಂಥ ಬದಲಾವಣೆ ಅನಿಲಗಳಲ್ಲಿ ಹೆಚ್ಚು. ಆದ್ದರಿಂದ ಅನಿಲದ ಸಾಂದ್ರತೆಯನ್ನು ಪ್ರಸಾಮಾನ್ಯ ತಾಪ ಮತ್ತು ಒತ್ತಡಗಳಲ್ಲಿ (0º ಸೆ. ಮತ್ತು 760 ಮಿಲಿಮೀಟರ್ ಪಾದರಸದ ಒತ್ತಡ) ಸೂಚಿಸುವುದು ವಾಡಿಕೆ. ತಾಪವೃದ್ಧಿಯೊಂದಿಗೆ ಸಾಂದ್ರತೆ ಕಡಿಮೆಯಾಗುವುದಕ್ಕೆ ನೀರು ಒಂದು ಅಪವಾದ. ತಾಪ 0ºಅ ಯಿಂದ ಏರಿದಂತೆ ನೀರಿನ ಸಾಂದ್ರತೆ ಹೆಚ್ಚುತ್ತದೆ 4ºಅಯಲ್ಲಿ ಗರಿಷ್ಠವಾಗುತ್ತದೆ.
ದ್ರವಗಳ ಸಾಂದ್ರತೆಗಳನ್ನು ನಿರ್ಧರಿಸಲು ಸಾಂದ್ರತಾಕುಪ್ಪಿ, ಪೈಕ್ನೊಮೀಟರ್ ಇತ್ಯಾದಿ ಸಾಧನಗಳನ್ನು ಬಳಸುತ್ತಾರೆ. ನಿಶ್ಚಿತ ಗಾತ್ರದ ವಸ್ತುವಿನ ರಾಶಿಯನ್ನು ಸೂಕ್ಷ್ಮ ತಕ್ಕಡಿಯಿಂದ ಅಳೆದು ಸಾಂದ್ರತೆಯನ್ನು ನಿರ್ಧರಿಸಬಹುದು. ವಾಯುವಿನ ಮತ್ತು ನೆಟ್ರೊಜನ್ನಿನ ಸಾಂದ್ರತೆಗಳನ್ನು ಹೆಚ್ಚು ನಿಖರವಾಗಿ ನಿರ್ಧರಿಸಿದುದರಿಂದಲೇ ಲಾರ್ಡ್ ರ್ಯಾಲೇಯಿಂದ (1842-1981,) ಆರ್ಗಾನ್ ಅನಿಲದ ಆವಿಷ್ಕಾರ ಸಾಧ್ಯವಾಯಿತು. (ಎ.ಕೆ.ಬಿ.)