ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಿಖ್‍ಧರ್ಮ

ವಿಕಿಸೋರ್ಸ್ದಿಂದ

ಸಿಖ್‍ಧರ್ಮ ಭಾರತದ ಒಂದು ಪ್ರಮುಖ ಧರ್ಮ. ಗುರುನಾನಕ್ (1469-1538). ತನ್ನ ಉಪದೇಶವನ್ನು ಪಾಲಿಸುವ ಅನುಯಾಯಿಗಳನ್ನು ಸಿಖ್ ಎಂದು ಕರೆದ. ಸಿಖ್ ಎಂದರೆ ಶಿಷ್ಯ, ಅನುಯಾಯಿ ಎಂದರ್ಥ. ಗುರುನಾನಕನ ಮನೋಧರ್ಮ ಭಕ್ತನ ಮನೋಧರ್ಮವಾಗಿದ್ದು ಇತರ ಧರ್ಮವನ್ನು ಕೀಳೆಂದು ಕಾಣದಿದ್ದರೂ ತನ್ನ ಧರ್ಮ ಉತ್ತಮವಾದದ್ದು, ಉದಾತ್ತವಾದುದೆಂಬ ಭಾವನೆಯಿತ್ತು. ನಾನಕನ ಕಾಲದಲ್ಲಿ ಆಚಾರವಂತ ಹಿಂದುಗಳ ಜೀವನ ಸ್ವಾರ್ಥದಿಂದಲೂ ಹೆಚ್ಚು ಡಂಭಾಚಾರಗಳಿಂದಲೂ ಕೂಡಿತ್ತು. ಹಿಂದು ಸಮಾಜದ ವಿಗ್ರಹಪೂಜೆ, ಜಾತಿವ್ಯವಸ್ಥೆ, ಸಹಗಮನಪದ್ಧತಿ ಮುಂತಾದವನ್ನು ಮುಸ್ಲಿಮರೂ ಹೀಯಾಳಿಸಿಸುತ್ತಿದ್ದರು. ಮೂಲ ಹಿಂದು ಧರ್ಮದವನೇ ಆಗಿದ್ದ ನಾನಕ್ ಹಿಂದು ಧರ್ಮದಲ್ಲಿನ ಲೋಪದೋಷಗಳನ್ನು ತಿದ್ದಲು ಪ್ರಯತ್ನಿಸಿದ. ನಾನಕ್ ತನ್ನ ಉಪದೇಶವನ್ನು ಮುಂದುವರಿಸಿ ತನ್ನ ಅನಂತರ ಶಿಷ್ಯ ಸಮುದಾಯವನ್ನು ಬೆಳೆಸಲು ತನ್ನ ಪ್ರಿಯಶಿಷ್ಯ ಅಂಗದನನ್ನು ನೇಮಿಸಿದ. ಅಂಗದದೇವ (1504-52) 13 ವರ್ಷ ಗುರುವಾಗಿದ್ದು ಅಮರದಾಸ್ ಎಂಬಾತನನ್ನು ತನ್ನ ಉತ್ತರಾಧಿಕಾರಿಯಾಗಿ ನೇಮಿಸಿದ. ಗುರು ಅಮರದಾಸ್ (1479-1534) ತಮ್ಮ ಅನುಯಾಯಿಗಳಲ್ಲಿ ಜಾತಿಭೇದ ಅಳಿಸುವ ಉದ್ದೇಶದಿಂದ ತಮ್ಮ ಶಿಷ್ಯರು ಯಾವ ಜಾತಿಯಿಂದಲೇ ಬಂದಿದ್ದರೂ ಸಿಖ್ ಆದಮೇಲೆ ತಮ್ಮ ಬಿಡದಿಯಲ್ಲಿ ತಯಾರಿಸಿದ ಆಹಾರವನ್ನು ಸ್ವೀಕರಿಸಬೇಕೆಂಬ ನಿಯಮ ಮಾಡಿದ. ಹಾಗೆಯೇ ಸಿಖ್ ಆದವರಲ್ಲಿ ಸಹಗಮನ ಕೂಡದು ಎಂದು ವಿಧಿಸಿದ. ಅಮರದಾಸನ ಅನಂತರ ಬಂದವನು ಗುರು ರಾಮದಾಸ್ (1534-81). ಈತ ಗುರು ಅಮರದಾಸನ ಅಳಿಯ. ಈತ ಈಗ ಅಮೃತಸರ ಎಂದು ಪ್ರಖ್ಯಾತವಾಗಿರುವ ಸ್ಥಳದಲ್ಲಿ ಸಿಖ್ ಜನರ ಒಂದು ವಸತಿಯನ್ನೂ ಒಂದು ತಟಾಕವನ್ನೂ ನಿರ್ಮಿಸಿದ. ಗುರುರಾಮದಾಸನ ಅನಂತರ ಅವನ ಕೊನೆಯ ಮಗ ಅರ್ಜುನದೇವ (1553-1606) ಗುರು ಆದ. ಈತ ಅಮೃತಸರದಲ್ಲಿ ತನ್ನ ತಂದೆ ನಿರ್ಮಿಸಿದ್ದ ಸರೋವರದ ಬಳಿ ಪ್ರಸಿದ್ಧ ಸ್ವರ್ಣಮಂದಿರವನ್ನು ಕಟ್ಟಿಸಿದ.

ಅರ್ಜುನದೇವನು ಸಿಖ್ ಜನರ ಆದಿಗುರು ರಚಿಸಿದ್ದ ಗೀತೆ, ಶ್ಲೋಕಗಳನ್ನೂ ಅವನ ಅನಂತರದ ಗುರುಗಳು ರಚಿಸಿದ್ದ ಗೀತೆ, ಶ್ಲೋಕಗಳನ್ನೂ ಕೂಡಿಸಿ ಸಿಖ್ ಧರ್ಮದ ಆದಿಗ್ರಂಥವನ್ನು ರೂಪುಗೊಳಿಸಿದ. ಈತನ ಕಾಲದಲ್ಲಿ ಜಹಾಂಗೀರ್ ಚಕ್ರವರ್ತಿಯ ಮಗ ಖುಸ್ರು ತಂದೆಗೆ ಎದುರಾಗಿ ದಂಗೆಯೆದ್ದ. ಆ ಸಂದರ್ಭದಲ್ಲಿ ದ್ರೋಹಿಯಾದ ತನ್ನ ಮಗನಿಗೆ ಅರ್ಜುನದೇವ ನೆರವಾದನೆಂದು ಮೊಗಲ್ ಚಕ್ರವರ್ತಿ ಭಾವಿಸಿ ಅರ್ಜುನದೇವನಿಗೆ ಮರಣದಂಡನೆ ವಿಧಿಸಿದ. ಈ ಕಾರಣದಿಂದ ಸಿಖ್ ಸಮುದಾಯದಲ್ಲಿ ದೆಹಲಿಯ ಚಕ್ರವರ್ತಿ ವಿರುದ್ಧ ಅಸಮಾಧಾನ ಹೆಚ್ಚಾಯಿತು. ಸಿಖ್ ಪಂಥಕ್ಕಾಗಿ ಬಲಿಯಾದ ಮುಮ್ಮೊದಲ ಹುತಾತ್ಮನಾಗಿ ಗುರು ಅರ್ಜುನದೇವ ಪ್ರಸಿದ್ಧನಾಗಿದ್ದಾನೆ.

ಇವನ ಅನಂತರ ಗುರು ಹರಗೋವಿಂದ್ (1595-1644), ಗುರು ಹರರಾಯ್ (1630-61), ಗುರು ಹರಕಿಷನ್ (1656-64) ಸಿಖ್ ಸಮುದಾಯದ ಹಿರಿಯರಾಗಿ ಅದನ್ನು ಮುನ್ನೆಡೆಸಿದರು. ಹರಗೋವಿಂದ್ ಗುರುವಿನ ಕಿರಿಯಮಗ ತೇಗ್ ಬಹದ್ದೂರ್‍ನನ್ನು (1621-75) ಗುರುವಾಗಿ ಸಿಖ್ ಸಮುದಾಯ ಸ್ವೀಕರಿಸಿತು. ಈತ ಭಾರತದ ಪೂರ್ವಭಾಗ ಕಾಮರೂಪದವರೆಗೂ ದೇಶಪರ್ಯಟನೆಮಾಡಿದ. ಔರಂಗಜೇಬ್ ಎಲ್ಲ ಧರ್ಮಗಳ ಜನರನ್ನೂ ಬಲಾತ್ಕಾರದಿಂದ ಮುಸ್ಲಿಮ್ ಧರ್ಮಕ್ಕೆ ಸೇರಿಸಲು ಯತ್ನಿಸಿದಾಗ ಅದನ್ನು ವಿರೋಧಿಸಿದ. ಧೈರ್ಯವಾಗಿ ದೆಹಲಿಗೆ ಹೋಗಿ ನೀನು ನಡೆಯುತ್ತಿರುವ ರೀತಿ ತಪ್ಪು ಎಂದು ಚಕ್ರವರ್ತಿಗೆ ತಿಳಿಸಿದ. ಆಗ ಔರಂಗಜೇಬ್ ನನಗೆ ದೇವರು ಹೀಗೆ ಮಾಡೆಂದು ಅಪ್ಪಣೆ ಕೊಟ್ಟಿದ್ದಾನೆ ಎಂದನಂತೆ. ಗುರು ತೇಗ್ ಬಹದ್ದೂರ್ ಇಲ್ಲ ನೀನು ಸುಳ್ಳು ನುಡಿಯುತ್ತಿದ್ದೀಯೆ ಅಥವಾ ನಿನ್ನ ದೇವರು ತಪ್ಪು ನುಡಿಯುತ್ತಿದ್ದಾನೆ ಎಂದನಂತೆ. ಚಕ್ರವರ್ತಿ ಆಯಿತು, ಈಗ ನೀನು ಮುಸ್ಲಿಮ್ ಆದರೆ ಸರಿ, ಇಲ್ಲವಾದರೆ ನಿನ್ನ ತಲೆ ತೆಗೆಸುತ್ತೇನೆ ಎಂದು ಹೇಳಿದ. ತೇಗ್‍ಬಹದ್ದೂರ್ ಗುರು, ಆಗಲಿ, ನಾನು ನಿನಗೆ ತಲೆಯನ್ನು ಬೇಕಾದರೆ ಒಪ್ಪಿಸಿಯೇನು, ಆದರೆ ನನ್ನ ನಂಬಿಕೆಯನ್ನು ಒಪ್ಪಿಸಲಾರೆ ಎಂದ. ಔರಂಗಜೇಬನು ನಗರದ ಸಾರ್ವಜನಿಕ ಸ್ಥಳದಲ್ಲಿ ಇವನ ತಲೆಯನ್ನು ಕಡಿಸಿದ. ಸಾಯುವ ಮುನ್ನ ಗುರು ತೇಗ್‍ಬಹದ್ದೂರ್ ತನ್ನ ಮಗ ಗೋವಿಂದನನ್ನು ಬಳಿಗೆ ಕರೆದು ಅವನನ್ನು ಸಿಖ್ ಸಮುದಾಯದ ಗುರುಪದದಲ್ಲಿ ಪ್ರತಿಷ್ಠೆಮಾಡಿ ಹೊಸಗುರುವಿಗೆ ಶಿಷ್ಯನೆಂದು ಸಂಪ್ರದಾಯಪೂರ್ಣ ತಾನೂ ನಮಸ್ಕಾರ ಮಾಡಿದ. ತೇಗ್‍ಬಹದ್ದೂರ್ ಅನಂತರದಲ್ಲಿ ಇವನ ನಾಲ್ವರು ಮಕ್ಕಳೂ ಧರ್ಮ ರಕ್ಷಣೆಗಾಗಿ ಬಲಿಯಾದರು. ಗುರುಗೋವಿಂದ (1660-1708) ಸಿಖ್ ಧರ್ಮದ ಹತ್ತನೆಯ ಮತ್ತು ಕೊನೆಯ ಗುರು.

ಅರ್ಜುನದೇವ ಹಾಗೂ ತೇಗ್‍ಬಹದ್ದೂರರು ಮೊಗಲ್ ಚಕ್ರವರ್ತಿಗಳ ಮತಾಂಧತೆಗೆ ಬಲಿಯಾದದ್ದರಿಂದ ಸಿಖ್ ಸಮುದಾಯ ತಮ್ಮ ರಕ್ಷಣೆಯ ಕಡೆ ಗಮನಕೊಡಬೇಕಾದ ಅನಿವಾರ್ಯತೆಯುಂಟಾಯಿತು. ಗುರುಹರಗೋವಿಂದ್ ಈ ಯೋಜನೆಗೆ ರೂಪುಕೊಟ್ಟ ಮೊದಲನೆಯ ಗುರು. ಆತ ಸಿಖ್ಖರು ಧರ್ಮ ರಕ್ಷಣೆಯ ವೀರಭಟರಾಗಬೇಕೆಂದು ಕರೆಕೊಟ್ಟ. ಅಂದಿನಿಂದ ಸಿಖ್ ಸಮುದಾಯ ಇಸ್ಲಾಮ್ ದೌರ್ಜನ್ಯದ ವಿರುದ್ಧ ಧರ್ಮರಕ್ಷಣೆಗಾಗಿ ಸಮರ ಸಾರಿತು.

ಈ ಕಾರ್ಯಕ್ಕಾಗಿ ತನ್ನ ಶಿಷ್ಯರಲ್ಲಿ ಪ್ರಮುಖರಾದ ಐವರನ್ನು ನೇಮಿಸಿದ. ಹೀಗೆ ದುಡಿಯುವ ವೀರ ಸಿಖ್ಖರನ್ನು ಖಾಲ್ಸಾ ಎಂದು ಕರೆದ. ಖಾಲ್ಸಾ ಎಂದರೆ ಶುದ್ಧ, ಪಾವನ, ಪವಿತ್ರ ಎಂದರ್ಥ. ಈ ಐವರು ಪಂಚ್‍ಸ್ಸಾರಾ ಪಂಚಪ್ರಿಯರು ಎಂದು ಹೆಸರಾದರು. ಜನ್ಮತಃ ಈ ಐವರಲ್ಲಿ ಒಬ್ಬಾತ ಬ್ರಾಹ್ಮಣ, ಒಬ್ಬಾತ ಕ್ಷತ್ರಿಯ, ಉಳಿದವರು ಇತರ ಜಾತಿಯವರು. ದೀಕ್ಷೆ ವಹಿಸಿದ ವೇಳೆ ಈ ಐವರೂ ಒಂದೇ ಪಾತ್ರೆಯಿಂದ ಪಾನೀಯವನ್ನು ತೆಗೆದುಕೊಂಡರು. ಅಂದಿನಿಂದ ಅವರ ಹೆಸರಿಗೆ ಸಿಂಗ್ ಎಂಬ ಪದ ಸೇರತಕ್ಕದ್ದು ಎಂದು ನಿರ್ಣಯವಾಯಿತು. ಐವರೂ ವಾಹ್ ಗುರು (ಎಂಥ ಗುರು) ಎಂಬ ಗುರುಪ್ರಶಂಸೆಯನ್ನು ಜಪಿಸಿ ಗುರುನಾನಕ್‍ನ ಜಪಜೀಯ ಪ್ರಾರಂಭವಾಕ್ಯಗಳನ್ನು ನುಡಿದರು. ಆಗ ಗುರು ಅವರಿಗೆ ಐದು ಬೊಗಸೆ ಅಮೃತವನ್ನು ಕುಡಿಯಲು ಕೊಟ್ಟ. ಅವರ ತಲೆಯ ಮೇಲೆ, ಕಣ್ಣಮೇಲೆ ಅದನ್ನು ಐದು ಸಲ ಚಿಮುಕಿಸಿದ; ಅವರು ವಾಹ್ ಗುರೂಜೀಕಾ ಖಾಲ್ಸಾ, ವಾಹ್ ಗುರೂಜೀಕಾ ಪಂಥಾ ಎಂದು ಪುನರುಚ್ಚರಣ ಮಾಡಿದರು. ಅಂದಿನಿಂದ ಈ ಬಗೆಯ ಸಂಪ್ರದಾಯ ಆರಂಭವಾಯಿತು. ಹೀಗೆ ದೀಕ್ಷೆ ಪಡೆದ ಈ ಐವರು ಐದು ಲಕ್ಷಣಗಳನ್ನು ಬಿಡದೆ ಕಾಪಾಡಿಕೊಳ್ಳಬೇಕು ಎಂದು ಆಜ್ಞಪ್ತರಾದರು. ಈ ಐದು ಲಕ್ಷಣಗಳನ್ನು ಸಿಖ್ ಧರ್ಮದಲ್ಲಿ ಪಂಚ ಕ ಕಾರ ಎಂದು ಹೇಳುತ್ತಾರೆ (ಕೇಶ, ಕಂಘ್, ಕರ, ಕಾಚ, ಕೃಪಾಣು). ಕೇಶ ಎಂದರೆ ಕ್ಷೌರಮಾಡಿಕೊಳ್ಳದೆ ಹುಟ್ಟಕೂದಲನ್ನು ಹಾಗೆಯೇ ಉಳಿಸಿಕೊಳ್ಳುವುದು. ಕಂಘ್ ಕೇಶಸಂಸ್ಕಾರಕ್ಕಾಗಿ ಹಣೆಗೆ ಧರಿಸಿರುವುದು, ಕರ ಬಲಕೈಯಲ್ಲಿ ಉಕ್ಕಿನ ಕಂಕಣ ಧರಿಸುವುದು, ಕಾಚ ವೀರ ಕಾಸೆಯನ್ನು ಧರಿಸುವುದು, ಕೃಪಾಣು ಕಿರುಕತ್ತಿ ಇಟ್ಟುಕೊಳ್ಳುವುದು. ಈ ದೀಕ್ಷೆ ತಳೆದವರು ಹೊಗೆಸೊಪ್ಪು ಮುಂತಾದ ಮಾದಕ ದ್ರವ್ಯಗಳನ್ನು ಸೇವಿಸಕೂಡದು, ದೈವಕ್ಕೆ ಸಮರ್ಪಿಸಿದ ಮಾಂಸಾಹಾರ ತಿನ್ನಕೂಡದು, ಪರಸ್ತ್ರೀಗಮನ ಮಾಡಕೂಡದು. ದೀಕ್ಷೆ ಕೊಟ್ಟ ಅನಂತರ ಗುರುವಾದವನು ಆ ಐವರಿಂದ ಇದೇ ರೀತಿಯ ದೀಕ್ಷೆಯನ್ನು ಸ್ವೀಕರಿಸಿದ. ತನ್ನ ಅನಂತರ ಇನ್ನು ಗುರು ಇಲ್ಲ, ಆದಿಗುರುವಾದ ಭಗವಂತನಿಂದ ಗುರುಪದವನ್ನು ಪಡೆದ ನಾನಕ್ ಗುರುವಿನ ಗುರುತ್ವ ಕ್ರಮವಾಗಿ ಅವನ ಉತ್ತರಾಧಿಕಾರಿಗಳಲ್ಲಿ ಪ್ರಸ್ಥಾನಮಾಡಿ ತನ್ನಲ್ಲಿಗೆ ಬಂದಿದ್ದುದು ಮುಂದೆ ಖಾಲ್ಸಾದಲ್ಲಿ ಸೇರಿರುತ್ತದೆ ಎಂದು ಸಿಖ್ ಸಮುದಾಯಕ್ಕೆ ಬೋಧಿಸಿದ. ಇನ್ನು ಮುಂದೆ ಸಿಖ್ ಸಮುದಾಯಕ್ಕೆ ಗ್ರಂಥ ಸಾಹಿಬ್ ಗುರು ಆಗಿರುತ್ತದೆ ಎಂದು ತಿಳಿಸಿದ.

ಧರ್ಮರಕ್ಷಕದಳವಾಗಿ ಮಾರ್ಪಟ್ಟ ಸಿಖ್ಖರು ಆಮೇಲಿನ ತಲೆಮಾರುಗಳಲ್ಲಿ ವೀರಭಟರಾಗಿ ಬೆಳೆದರು. ಪಂಜಾಬ್ ಪ್ರಾಂತದಲ್ಲಿ ಅನೇಕ ಸಣ್ಣ ಸಣ್ಣ ರಾಜ್ಯಗಳನ್ನು ಕಟ್ಟಿದರು. ಆಂಗ್ಲರು ಭಾರತವನ್ನೆಲ್ಲ ಅಧೀನಕ್ಕೆ ತೆಗೆದುಕೊಳ್ಳಲು ಯತ್ನಮಾಡಿದ ದಿನಗಳಲ್ಲಿ ಸಿಖ್ಖರು ಅದಕ್ಕೆ ಪ್ರತಿರೋಧ ನೀಡಿ ಬ್ರಿಟಿಷರನ್ನು ಹಿಮ್ಮೆಟ್ಟಿಸಿದ್ದರು. ಹೀಗೆ ಮಾಡಿದ ಪ್ರಮುಖ ಸಿಖ್ ದೊರೆ ರಣಜಿತ್‍ಸಿಂಗ್. ಮುಂದೆ ಅಂತರ್ಗತ ಪಿತೂರಿ ಹಾಗೂ ದೇಶದ್ರೋಹಿಗಳಿಂದಾಗಿ ಭಾರತದ ಇತರೆ ರಾಜರಂತೆ ಇವರೂ ಕೊನೆಗೆ ಆಂಗ್ಲರ ಅಧಿಕಾರವನ್ನು ಒಪ್ಪಿಕೊಳ್ಳಬೇಕಾಯಿತು. ಜಿಂಧ್, ನಾಭಾ, ಕಪೂರ್ಥಲಾ ರಾಜ್ಯಗಳ ರಾಜರು ಬ್ರಿಟಿಷರಿಗೆ ಅಧೀನರಾಗಿ ಇರಬೇಕಾಯಿತು.

ಸಿಖ್ಖರ ಪ್ರಾರ್ಥನಾ ಮಂದಿರಗಳಿಗೆ ಗುರುದ್ವಾರ ಎಂದು ಹೆಸರು. ಪರಂಪರೆಯಿಂದ ಗುರುದ್ವಾರಗಳ ಆಡಳಿತವನ್ನು ನೋಡಿಕೊಳ್ಳುವ ದೀಕ್ಷೆತೊಟ್ಟ ನಿಷ್ಠಾವಂತ ಸಿಖ್ಖರನ್ನು ಅಕಾಲಿಗಳೆಂದು ಕರೆದರು. ಅವರೇ ಮುಂದೆ ಅಕಾಲಿ ಎಂಬ ಹೆಸರಿನ ಸಂಪ್ರದಾಯದ ಒಂದು ಗುಂಪಿನವರಾದರು. ಗುರುದ್ವಾರಗಳನ್ನು ನೋಡಿಕೊಳ್ಳಲು ಈಗ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ಎಂಬ ಪ್ರಮುಖ ಸಮಿತಿಯೊಂದಿದೆ.

ಗ್ರಂಥಸಾಹಿಬ್ ಸಿಖ್ಖರ ಧರ್ಮಗ್ರಂಥ. ಸಿಖ್‍ಧರ್ಮದ ಉಪದೇಶಗಳು ಈ ಗ್ರಂಥದಲ್ಲಿ ಹಾಗೂ ಈ ಉಪದೇಶಗಳನ್ನು ಒಂದು ರೂಪಕ್ಕೆ ತಂದ ಗುರು ಅರ್ಜುನದೇವ ರಚಿಸಿದ ಕೃತಿಗಳಲ್ಲಿ ದೊರೆಯುತ್ತವೆ. `ಗ್ರಂಥಸಾಹಿಬ್‍ನಲ್ಲಿ ಸಿಖ್‍ಧರ್ಮದ ಉಪದೇಶವನ್ನು ಸ್ವರೂಪವನ್ನು ಹೀಗೆ ಸಂಗ್ರಹಿಸಿ ಹೇಳಿದೆ:

ಲೋಕವನ್ನು ಸೃಷ್ಟಿಸಿ, ಬಾಳಿಸಿ, ತನ್ನಲ್ಲಿ ಅಡಗಿಸಿಕೊಳ್ಳುವ ಪರತತ್ತ್ವ ಒಂದಿದೆ. ಅದಕ್ಕೆ ಕಾಲ, ದೇಶ, ಅವಸ್ಥೆಗಳ ತೊಡಕಿಲ್ಲ. ಮೊದಲು ಅದು ಒಂದೇ ಇದ್ದಿತು. ನಾವು ಲೋಕವೆನ್ನುವ ಇದು ಯಾವುದೂ ಇರಲಿಲ್ಲ. ಹರಿ ಹರ ಬ್ರಹ್ಮ ಮುಂತಾದ ದೇವತೆಗಳು, ಜೀವರಾಶಿ, ಮಾನವಕುಲ, ಇದೆಲ್ಲ ಪರತತ್ತ್ವದಿಂದ ಸೃಷ್ಟಿಯಾಯಿತು. ಈ ಪರತತ್ತ್ವಕ್ಕೆ ಯಾವುದೇ ಆಕಾರ, ನಾಮ, ರೂಪ ಇಲ್ಲ, ಆದರೂ ಮನುಷ್ಯರಿಗೆ ಕರುಣೆತೋರಿ ಕಷ್ಟದಲ್ಲಿ ನೆರವಾಗಿ ಅವನನ್ನು ಮಗುವಾಗಿ ಕಂಡು ಸ್ನೇಹದಿಂದ ನಡೆಸಿಕೊಳ್ಳುವುದು ಈ ಪರತತ್ತ್ವದ ಔದಾರ್ಯ. ಜೀವಾತ್ಮ ಪರಮಾತ್ಮಗಳು ಪ್ರಣಯಿಗಳಾದ ಪತಿಪತ್ನಿಯರಂತೆ. ಪರಮಾತ್ಮನನ್ನು ಮನುಷ್ಯಾಕಾರದಲ್ಲಿ ಧ್ಯಾನಿಸಬಾರದು. ಅಚಿಂತ್ಯ, ಅಗ್ರಾಹ್ಯ, ಸರ್ವವ್ಯಾಪಿ, ನಿರಾಕಾರವಸ್ತುವಾಗಿ ನೆನೆಯಬೇಕು. ಪರತತ್ತ್ವ ಸಾಗರದಂತೆ, ಜೀವಾತ್ಮ ಅದರಲ್ಲಿ ಏಳುವ ಒಂದು ನೀರಗುಳ್ಳೆಯಂತೆ, ಇರುವಷ್ಟು ಕಾಲ ಇದ್ದು ಕೊನೆಯಲ್ಲಿ ಅದು ಪರತತ್ತ್ವದಲ್ಲಿ ಲೀನವಾಗಿ ಹೋಗುತ್ತದೆ. ಗುಳ್ಳೆಯಾಗಿರುವ ಕಾಲದಲ್ಲಿ ಜೀವಾತ್ಮ ತಾನು ಬೇರೆ ಎಂದು ಭ್ರಮಿಸುತ್ತದೆ. ಈ ಭ್ರಾಂತಿಯೇ ಬಾಳನ್ನು ಕೆಡಿಸುವುದು, ಪಾಪಕ್ಕೆ ಕಾರಣವಾಗುವುದು. ಇದರಿಂದ ಬಿಡಿಸಿಕೊಂಡು ತನ್ನ ದೈವದೊಂದಿಗೆ ಬೆರೆಯುವುದೇ ಜೀವನದ ಗುರಿ. ಈ ಅಂತಿಮ ಸ್ಥಿತಿಗೆ ನಿರ್ವಾಣ ಎಂದು ಹೆಸರು. ಈ ಸ್ಥಿತಿಯಲ್ಲಿ ಆತ್ಮದ ಬೆಳಕು ಪರಮಾತ್ಮನ ಬೆಳಕಿನಲ್ಲಿ ಬೆರೆಯುತ್ತದೆಯೇ ಹೊರತು ನಾಶವಾಗುವುದಿಲ್ಲ. ಬೆರೆತ ಆತ್ಮ ಆನಂದದಲ್ಲಿರುತ್ತದೆ. ಈ ಆನಂದದ ಲೋಕ ಮುಕ್ತಜೀವಿಗಳ ಆವಾಸ, ಅದರ ಹೆಸರು ಸಚ್ ಖಂಡ್. ಮುಕ್ತಿಯನ್ನು ಪಡೆಯಲು ಲೋಕ ಜೀವನವನ್ನು ತೊರೆಯಬೇಕಾದ್ದಿಲ್ಲ. ಇಹ ಜೀವನವನ್ನು ನಡೆಸುತ್ತ ಮನುಷ್ಯ ದೇವರ ಧ್ಯಾನ ಮಾಡುತ್ತಿರಬೇಕು, ಅವನ ಹೆಸರನ್ನು ಜಪಿಸುತ್ತಿರಬೇಕು. ಭಗವಂತನ ಧ್ಯಾನ ಇಲ್ಲದ ಜೀವನದಿಂದ ನಿರ್ವಾಣ ಸಿದ್ಧಿಸುವುದಿಲ್ಲ. ಇಂಥ ಜೀವಾತ್ಮ ಪರದಲ್ಲಿ ಶುದ್ಧಿ ಪಡೆದು ಮರಳಿ ಭೂಲೋಕಕ್ಕೆ ಬರುತ್ತದೆ; ಮತ್ತೆ ಬಾಳುತ್ತದೆ ಸಿದ್ಧಿಗೆ ಯೋಗ್ಯವಾಗುವವರೆಗೆ ಪುನರ್ಜನ್ಮ ಪಡೆಯುತ್ತದೆ. ದುಷ್ಕರ್ಮದಿಂದ ಜೀವಾತ್ಮ ಮೃಗವಾಗಿ ಜನ್ಮತಳೆಯುತ್ತದೆ. ಅಂಥ ಜನ್ಮ ಸಾವಿರಾರು ಕಳೆದ ಮೇಲೆ ಮತ್ತೆ ಮನುಷ್ಯ ಜನ್ಮಕ್ಕೆ ಬರುತ್ತದೆ. ಎಲ್ಲ ಜಂತುವಿಗೂ ಎರಡು ದೇಹವುಂಟು,- ಸ್ಥೂಲ ಮತ್ತು ಸೂಕ್ಷ್ಮ. ಜೀವಾತ್ಮ ಸ್ಥೂಲದೇಹವನ್ನು ಬಿಡುವ ವೇಳೆ ಸೂಕ್ಷ್ಮ ದೇಹವನ್ನು ಉಳಿಸಿಕೊಳ್ಳುತ್ತದೆ. ಈ ಸೂಕ್ಷ್ಮದೇಹ ಅದು ಕಳೆಯುವ ಎಲ್ಲ ಜನ್ಮದಲ್ಲೂ ಅದಕ್ಕೆ ಅಂಟಿಯೇ ಇರುತ್ತದೆ. ಜೀವಾತ್ಮ ನಿರ್ವಾಣ ಪಡೆದಾಗಲೇ ಅದು ಸೂಕ್ಷ್ಮ ದೇಹದಿಂದ ಬಿಡುಗಡೆ ಹೊಂದುವುದು. ಜೀವಾತ್ಮ ಸೂಕ್ಷ್ಮ ದೇಹದಲ್ಲಿರುವಾಗ ಅದರ ಮೂಲಕ ನೋವನ್ನನುಭವಿಸಬಲ್ಲುದು. ಇಂಥ ನೋವಿಂದ ಅದು ತನ್ನ ಸ್ಥೂಲ ದೇಹ ಮಾಡಿದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುತ್ತದೆ.

ಗುರುನಾನಕ್ ಹಿಂದುಧರ್ಮದ ಕರ್ಮಕಾಂಡ ನಿರುಪಯೋಗಿ ಎಂದು ಅದನ್ನು ತೊರೆದ. ತೀರಿಕೊಂಡ ಪೂರ್ವಜರಿಗೆ ಬೊಗಸೆ ನೀರೆರೆದು ತೃಪ್ತಿ ಕೊಡುತ್ತೇವೆನ್ನುವುದೂ ವಾರಾಣಸಿಯ ಗಂಗೆಯಲ್ಲಿ ನಿಂತು ಬೊಗಸೆ ನೀರು ಚೆಲ್ಲಿ ಪಂಜಾಬಿನ ನನ್ನ ನೆಲವನ್ನು ಬೇಸಾಯ ಮಾಡುತ್ತೇನೆ ಎನ್ನುವಷ್ಟೇ ವಿವೇಕ ಎಂದ. ಸರ್ವವ್ಯಾಪಿ ಶುದ್ಧಚೇತನವಾದ ದೈವವನ್ನು ಎಲ್ಲೋ ಒಂದೆಡೆಯಲ್ಲಿದೆ ಎನ್ನುವುದು, ಒಂದು ಕಲ್ಲಿನಲ್ಲಿ ಕಾಣಲು ಪ್ರಯತ್ನಿಸುವುದು ತಪ್ಪು ಎಂದ, ಪೂಜೆ, ಯಾತ್ರೆ, ಅರಣ್ಯವಾಸ ಯಾವ ಕೆಲಸಕ್ಕೂ ಬರುವುದಿಲ್ಲ. ಶುದ್ಧ ಮನಸ್ಸು ಏಕೈಕ ಸೌಭಾಗ್ಯ. ಎಲ್ಲರನ್ನೂ ಪ್ರೀತಿಸು, ಎಲ್ಲರ ತಪ್ಪನ್ನೂ ಮನ್ನಿಸು, ಎಲ್ಲಿ ಕ್ಷಮೆಯಿರುತ್ತದೋ ಅಲ್ಲಿ ದೇವ ತಾನೆ ಪ್ರತ್ಯಕ್ಷನಾಗಿ ಇದ್ದಾನೆ. ಯಾರಿಗೂ ಕೇಡನ್ನು ಬಯಸಬೇಡ, ಕಠಿಣ ನುಡಿಯಬೇಡ, ನಿನ್ನ ಜೀವವನ್ನಾದರೂ ಕೊಟ್ಟು ಪರರ ಕಷ್ಟವನ್ನು ಹರಿಸು.

ಗುರುನಾನಕ್‍ನ ಜಪಜೀ ಗ್ರಂಥಸಾಹಿಬ್ ಕೃತಿಯ ಸಾರ ಎಂದು ಪರಿಗಣಿತವಾಗಿದೆ. ಸಿಖ್ ಧರ್ಮದ ಎಲ್ಲ ಉಪದೇಶದ ಸಂಗ್ರಹ ಎಂಬ ಕಾರಣದಿಂದ ಅದನ್ನು ಬೆಳಗಿನಲ್ಲಿ ಮನಸ್ಸಿನಲ್ಲೇ ಹೇಳಿಕೊಳ್ಳುವುದು ಸಿಖ್ ಆದವನ ಕರ್ತವ್ಯ. ಇದು ಧರ್ಮದ ನಿಯಮ ಎಂದ ಮೇಲೆ ಪ್ರತಿಯೊಬ್ಬ ಸಿಖ್ಖನೂ ಅದನ್ನು ಬಾಯಿಪಾಠ ಮಾಡಿರಬೇಕು. ಅಕ್ಷರ ಕಲಿತಿಲ್ಲವೆಂಬ ಕಾರಣದಿಂದ ಜಪಜೀಯನ್ನು ಕಲಿಯದೆ ಬಿಡುವಂತಿಲ್ಲ. ಗುರುನಾನಕ್, ಗುರು ಅಮರದಾಸ್, ಗುರುರಾಮದಾಸ್, ಗುರುಅರ್ಜುನದೇವರ ಗೀತಗಳ ಒಂದು ಸಂಗ್ರಹ ರಹೀರಾಸ್ ಎಂಬ ಹೆಸರು ಪಡೆದಿದೆ. ಸಂಜೆ ಪೂಜೆಯಲ್ಲಿ ಈ ಗೀತೆಗಳನ್ನು ಹಾಡುತ್ತಾರೆ. ಗುರುನಾನಕನ ಮೂರುಗೀತ, ರಾಮದಾಸ್ ಗುರುವಿನ ಒಂದು ಗೀತ, ಗುರು ಅರ್ಜುನದೇವನ ಒಂದು ಗೀತ ಮಲಗುವ ವೇಳೆ ಹಾಡಬೇಕಾದ ಸೋಹಿಲಾ ಎಂಬ ಗೀತ ಸಂಗ್ರಹ ಸೋಹಿಲಾ ಎಂದರೆ ಸೋಹನ್ ವೇಳಾ ಸ್ವಪ್ನದ ವೇಳೆ ಎಂದರ್ಥ.

ಸಿಖ್ ಸಮುದಾಯವನ್ನು ಧರ್ಮರಕ್ಷಕ ಸೇವೆಯಾಗಿ ರೂಪಿಸಿದ ಗುರು ಗೋವಿಂದಸಿಂಗ್ ಮುಕ್ತ ನಾಮಾ (ಮುಕ್ತಿಗೆ ದಾರಿ) ಎಂಬ ತನ್ನ ಕೃತಿಯಲ್ಲಿ ಸಿಖ್ ಆದ ಮನುಷ್ಯರಿಗೆ ಈ ನೇಮಗಳನ್ನು ನಿರೂಪಿಸಿದ್ದಾನೆ: ಸಾಲ ಕೇಳಬೇಡ; ಸಾಲ ಪಡೆದರೆ ತಪ್ಪದೆ ಹಿಂದಿರುಗಿಸು, ಸುಳ್ಳಾಡಬೇಡ, ದುಷ್ಟರನ್ನು ಸೇರಬೇಡ, ಸತ್ಸಂಗಮಾಡು; ದುಡಿದು ಅನ್ನಗಳಿಸು; ಮೋಸಮಾಡಬೇಡ; ಲೋಭಿಯಾಗಬೇಡ, ಊಟಕ್ಕೆ ಮೊದಲು ಜಪಜೀಗಳನ್ನು ನುಡಿ, ನಗ್ನ ಸ್ತ್ರೀಯರನ್ನು ನೋಡಬೇಡ; ಸ್ತ್ರೀಧ್ಯಾನ ಮಾಡಬೇಡ; ಪರಸ್ತ್ರೀಗಮನ ಬೇಡ; ಮೈಶುದ್ಧವಾಗಿರಲಿ, ಎಲ್ಲರೊಡನೆ ವ್ಯವಹಾರ ಇರಿಸಿಕೊ, ಆದರೆ ನೀನು ಪ್ರತ್ಯೇಕ ಎನ್ನುವುದು ಸ್ಮøತಿಯಲ್ಲಿ ಇರಲಿ; ಪ್ರತಿ ಉದಯ ಕಾಲದಲ್ಲಿ ಆಹಾರ ತಿನ್ನುವ ಮುನ್ನ ಸ್ನಾನಮಾಡು, ಹೊಗೆಸೊಪ್ಪನ್ನು ಉಪಯೋಗಿಸಬೇಡ, ದೇವರನ್ನು ನೆನೆ, ರಹೀರಾ ಸೋಹಿಲಾ ಗುರುಗಳ ಗೀತಗಳನ್ನು ಬಾಯಲ್ಲಿ ಹೇಳು; ಧರ್ಮಕ್ಕೆ ಕೊಟ್ಟಕಾಸನ್ನು ಸ್ವಂತಕ್ಕೆ ಬಳಸದಿರು; ಸಿಖ್ಖರಲ್ಲೇ ಮದುವೆಯಾಗು; ಉಣಬಡಿಸುವಲ್ಲಿ ಮೇಲುಕೀಳೆಂಬ ಭೇದಮಾಡಬೇಡ; ಹಿಂದು ದೈವಗಳಿಗೆ ನೈವೇದ್ಯವಾದ ಆಹಾರವನ್ನು ತಿನ್ನಬೇಡ; ಜಾತಿಭೇದವನ್ನು ತೊರೆ; ಬ್ರಾಹ್ಮಣನ ಹತ್ತಿರ, ಮುಲ್ಲಾ ಹತ್ತಿರ ಹೋಗದಿರು; ನಿನ್ನ ವರಮಾನದ ಹತ್ತರ ಒಂದು ಪಾಲನ್ನು ಧರ್ಮದ ಸೇವೆಗೆ ಒಪ್ಪಿಸು; ಪ್ರಾರ್ಥನೆ ಮುಗಿದ ವೇಳೆ ನಮಿಸು; ಸತ್ತವರಿಗಾಗಿ ಅತಿಯಾಗಿ ದುಃಖಿಸಬೇಡ; ವಿಗ್ರಹವನ್ನು ಪೂಜಿಸಬೇಡ; ಆಶ್ರಮಗಳ ಗೊಂದಲಬೇಡ; ಸತ್ತವರಿಗೆ ಶ್ರಾದ್ಧಕರ್ಮ ಮಾಡಬೇಡ; ಇಷ್ಟನ್ನು ನಡೆಸಿದರೆ ಶಂಕರ, ರಾಮಾನುಜ, ಮುಹಮ್ಮದ್ ಮೊದಲಾದ ಗುರುಗಳ ಭಾವನೆಗೆ ಎಟುಕದಿರುವ ಒಂದು ಉನ್ನತ ಸ್ಥಾನವನ್ನು ನಾನು ನಿನಗೆ ನೀಡುತ್ತೇನೆ.

ನಿಷ್ಠರಾದ ಸಿಖ್ ಜನರು ಈಗ ತಾವೇ ಬೇರೊಂದು ಧರ್ಮದ ಜನ ಎಂದು ಭಾವಿಸುತ್ತಾರೆ. ಇಂಥವರು ತಮ್ಮನ್ನು ಅಕಾಲಿಗಳೆಂದು ಕರೆದುಕೊಳ್ಳುತ್ತಾರೆ. ಆದರೆ ಹೇಳಿರುವ ಸಿಖ್ ಧರ್ಮ ಹಿಂದು ಧರ್ಮದ ಭಕ್ತಿ ಮಾರ್ಗವೆನ್ನಲಾಗುವುದು. ಆದರೂ ವಿಗ್ರಹಪೂಜೆ, ಶ್ರಾದ್ಧಕರ್ಮ, ಜಾತಿಭೇದ, ಉಪನಯನ ಇವನ್ನು ನಿರಾಕರಿಸಿ, ಸ್ತ್ರೀಯರಿಗೆ ಸಹಗಮನ ಕೂಡದು ಎಂದು ನಿಯಮ ಮಾಡಿ, ಈ ಧರ್ಮ ತನ್ನ ಅನುಯಾಯಿಗಳನ್ನು ಆಚಾರವಂತ ಹಿಂದು ಸಮಾಜದಿಂದ ಬೇರೆ ಒಂದು ಸಮುದಾಯವಾಗಿ ರೂಪಿಸಿತು. ಒಂದು ವಿಶಿಷ್ಟ ರೀತಿಯ ಜೀವನವನ್ನು ನೇಮಿಸಿ ತನ್ನ ಅನುಯಾಯಿಗಳನ್ನು ಒಂದು ವಿಶಿಷ್ಟ ರೀತಿಯ ಧೀರಸಮುದಾಯವಾಗಿ ರೂಪಿಸಿದ ಉನ್ನತಪಂಥ ಸಿಖ್‍ಧರ್ಮ ಎನ್ನುವುದು ಸುಸ್ಪಷ್ಟ ಸತ್ಯ.

      (ಎಮ್.ವಿ.ಐ.)