ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಪ್ಯಾನಿಷ್ ಸಾಹಿತ್ಯ
ಸ್ಪ್ಯಾನಿಷ್ ಸಾಹಿತ್ಯ
ಯುರೋಪಿನ ಸಂಪದ್ಭರಿತ ಹಾಗೂ ವೈವಿಧ್ಯಮಯ ಸಾಹಿತ್ಯಗಳಲ್ಲೊಂದು. ಸ್ಪ್ಯಾನಿಷ್ ಸಾಹಿತ್ಯ ವೈಶಿಷ್ಟ್ಯ ಪೂರ್ಣವಾಗಿ ಬೆಳೆಯಲು ಸ್ಪೇನಿನ ಭೌಗೋಳಿಕ ಪರಿಸರ ಕೂಡ ಸಹಾಯ ಮಾಡಿದೆ. ಪಿರೇನೀಸ್ ಪರ್ವತಗಳು ಮತ್ತು ಮೆಡಿಟರೇನಿಯನ್ ಸಮುದ್ರ - ಇವು ಸ್ಪೇನನ್ನು ಇತರ ಯುರೋಪಿಯನ್ ದೇಶಗಳಿಂದ ಪ್ರತ್ಯೇಕಿಸಿವೆ. ಹಾಗಾಗಿ ಸ್ಪೇನಿನ ಲೇಖಕರು ಯುರೋಪಿನ ಪ್ರಮುಖ ಸಾಹಿತ್ಯಕ ಪ್ರಭಾವಕ್ಕೆ ಗುರಿಯಾಗದೆ ಸ್ವತಂತ್ರ ಪ್ರವೃತ್ತಿಯನ್ನು ಬೆಳೆಸಿಕೊಂಡು ಬರುವುದು ಸಾಧ್ಯವಾಗಿದೆ. ಅಲ್ಲದೆ, ಸ್ಪೇನಿನಲ್ಲಿರುವ ದೊಡ್ಡ ನದಿಗಳು, ಪರ್ವತಶ್ರೇಣಿಗಳು ಇಡೀ ದೇಶವನ್ನು ಅನೇಕ ಪ್ರದೇಶಗಳಾಗಿ ವಿಭಾಗಿಸಿವೆ. ಇದರಿಂದಾಗಿ ಸ್ಪ್ಯಾನಿಷ್ ಸಾಹಿತ್ಯದಲ್ಲಿ ಪ್ರಾದೇಶಿಕತೆ ಅನ್ನುವಂಥದು ಪ್ರಮುಖ ಲಕ್ಷಣವಾಗಿದೆ. ಸ್ಪ್ಯಾನಿಷ್ ಭಾಷೆ ಸ್ಪೇನ್, ದಕ್ಷಿಣ ಅಮೆರಿಕ ಮತ್ತು ಮಧ್ಯ ಅಮೆರಿಕ ದೇಶಗಳಲ್ಲಿ ಬಳಕೆಯಲ್ಲಿದೆ. ಸ್ಪೇನ್ ಸು. 600ವರ್ಷಗಳ ಕಾಲ ರೋಮನರ ಆಳ್ವಿಕೆಗೆ ಒಳಗಾಗಿತ್ತು. ಸ್ಪೇನಿಗೆ ಆ ಕಾಲದ ಮಹತ್ತ್ವದ ಕೊಡುಗೆ ಎಂದರೆ ಲ್ಯಾಟಿನ್ ಭಾಷೆ, ಅದರಲ್ಲಿಯೂ ಆಡುನುಡಿಯ ಲ್ಯಾಟಿನ್. ಈ ಲ್ಯಾಟಿನ್ ಭಾಷೆ ಕ್ಯಾಸ್ಟೀಲಿಯನ್, ಗ್ಯಾಲೀಷಿಯನ್ ಪೋರ್ಚುಗೀಸ್, ಕ್ಯಾಟಲನ್ ಮೂರು ರೊಮಾನ್ಸ್ ಭಾಷೆಗಳ ಹುಟ್ಟಿಗೆ ಕಾರಣವಾಯಿತು. ಇವು ಸ್ಪ್ಯಾನಿಷ್‍ನ ಉಪಭಾಷೆಗಳಾಗಿವೆ.
ರೋಮನ್ ಕಾಲ : ಸ್ಪೇನ್ ದೇಶದ ಅತಿ ಪೂರ್ವದ ಲೇಖಕರಾದ ಮಾರ್ಷಲ್, ಕ್ವಿಂಟಿಲ್ಯನ್, ಇಬ್ಬರು ಸೆನೆಕರು, ಲ್ಯೂಕನ್, ಕಾಲಮೆಲ, ಪ್ರೂಡೆನ್ಷಸ್ ಮೊದಲಾದವರು ಲ್ಯಾಟಿನ್ ಭಾಷೆಯಲ್ಲಿ ಬರೆದರು. ಅವರ ಕೃತಿಗಳು ಲ್ಯಾಟಿನ್ ಸಾಹಿತ್ಯಕ್ಕೆ ಸೇರಿದವು. ಸು.430ರ ವೇಳೆಯಲ್ಲಿ ಉತ್ತರದಿಂದ ಬಂದ ವ್ಯಾಂಡಲರ್ ಎಂಬ ವಿಧ್ವಂಸಕರೂ ಅನಂತರ ಬಂದ ವಿಸಿಗಾತ್ ಎಂಬ ವಿಧ್ವಂಸಕರೂ ಪಟ್ಟಣಗಳನ್ನು ಸುಟ್ಟು ರೋಮನ್ ವಿದ್ಯಾಶಾಲೆಗಳನ್ನು ನಾಶಪಡಿಸಿದರು. ಅಲ್ಲಿಂದ ಸು. 200 ವರ್ಷಗಳ ಕಾಲ ಸಾಹಿತ್ಯ ರಚನೆಯೇ ಆಗಲಿಲ್ಲ. 7ನೆಯ ಶತಮಾನದಲ್ಲಿ ಟೊಲೇಡೊವಿನ ಆರ್ಚ್ ಬಿಷಪ್, ಎರಡನೆಯ ಯುಜೀನಿಯಸ್ ಮತ್ತು ಸಿಸೆಬೂಟ್ ದೊರೆ ಮುಂತಾದವರು ಲ್ಯಾಟಿನ್‍ನಲ್ಲಿ ಕಾವ್ಯರಚನೆ ಮಾಡಿದುದೇ ಕೊನೆಯದು.
ಅರಬ್ ಕಾಲ ಮತ್ತು ಪ್ರಭಾವ ಸ್ಪೇನಿನ ಮೇಲೆ ಮುಸ್ಲಿಮ್ ದಂಡೆಯಾತ್ರೆ ನಡೆದುದು ಪ್ರಥಮವಾಗಿ 711ರಲ್ಲಿ. ಮುಸ್ಲಿಮ್ ದೊರೆಗಳ ಆಸ್ಥಾನಗಳು ವೈಭವಯುಕ್ತವಾಗಿದ್ದು ಕವಿಗಳಿಗೂ ವಿದ್ವಾಂಸರಿಗೂ ಆಶ್ರಯ ತಾಣಗಳಾಗಿದ್ದವು. 10ನೆಯ ಶತಮಾನದ ಅನಂತರ ಸ್ಪೇನಿನಲ್ಲಿ ಹೆಚ್ಚಾಗಿ ಅರಬೀ ಸಾಹಿತ್ಯ ರಚಿತವಾಯಿತು. ಇಬನ್ ಜೇಯಿದುನ್ (1003-70), ಇಬನ್ ಹಜಮ್ (994-1063), ಮುತ್ತಮಿದ್, ಇಬನ್ ಗುಜ್ಮಾನ್ (1078-1160) ಮೊದಲಾದ ಹೆಸರಾಂತ ಕವಿಗಳು ಅರಬ್ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. 7ನೆಯ ಶತಮಾನದಿಂದ 14ನೆಯ ಶತಮಾನದ ತನಕ ಸ್ಪೇನಿನ ಜನ ತಮ್ಮ ಸಾಂಸ್ಕøತಿಕ ಪರಿಸರ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾಯಿತು. ಯುರೋಪಿಯನ್ ಸಾಹಿತ್ಯ ಹಾಗೂ ಸ್ಪ್ಯಾನಿಷ್ ಸಾಹಿತ್ಯಗಳ ಮೇಲೆ ಅರಬ್ಬೀ ಸಾಹಿತ್ಯದ ಗಾಢ ಪ್ರಭಾವವಾಗಿರುವುದನ್ನು ಗುರುತಿಸಬಹುದಾಗಿದೆ.
ಮಧ್ಯಯುಗದ ಪೂರ್ವಾರ್ಧ (1050-1350). ಪದ್ಯಸಾಹಿತ್ಯ : ಮಧ್ಯಯುಗದ ಸ್ಪ್ಯಾನಿಷ್ ನುಡಿಗಳಲ್ಲಿ ಉಪಲಬ್ಧವಾಗಿರುವ ಕಾವ್ಯಗಳಲ್ಲಿ ಅತಿ ಪ್ರಾಚೀನವಾದುದು ಪೋಯೆಮ ದೆ ಮಿಯೋ ಸೀದ್ ಅಥವಾ ಸೀದ್ ಕಾವ್ಯ (1140). ಶೈಲಿಯಲ್ಲಿ ಈ ಕೃತಿ ಫ್ರೆಂಚ್ ಭಾಷೆಯ ಸಾಂಗ್ಸ್ ಆಫ್ ರೊಲಾಂಡ್ (1100) ಎಂಬ ಕೃತಿಯನ್ನು ಹೋಲುತ್ತದೆ. ಈ ಕಾಲದ ಇತರ ಎರಡು ವೀರ ಕಾವ್ಯಗಳೆಂದರೆ ಅಲೆಗ್ಸಾಂಡರ್ ಮತ್ತು ಟೈರ್‍ನ ಅಪೊಲೋನಿಯಸ್. ಕ್ಯಾಸ್ಟೀಲಿಯನ್ ಭಾಷೆಯಲ್ಲಿ ಗಾನ್ಸಾಲೊದೆ ಬೆರ್ಸೇಯೊ ಎಂಬ ಬೆನಿಡಿಕ್ಟೀನ್ ಪಾದ್ರಿ ಸ್ಪ್ಯಾನಿಷ್ ಸಾಧು-ಸಂತರ ಜೀವಿತಗಳು, ಮೇರಿಮಾತೆಯ ಪವಾಡಗಳು ಇತ್ಯಾದಿ ಭಕ್ತಿ ಮತ್ತು ನೀತಿ ಸಾಹಿತ್ಯದ ಪದ್ಯಗಳನ್ನು ರಚಿಸಿದ. ದೇಹ ಮತ್ತು ಆತ್ಮನ ಸಂವಾದ; ಮರೀಯ ಈಜಿಪ್ಸಿಯಾಕ - ಇವು ಭಕ್ತಿ ಸಾಹಿತ್ಯದ ಇತರ ಗ್ರಂಥಗಳು. ಭಕ್ತಿ ಸಾಹಿತ್ಯ ಕ್ರೈಸ್ತಮಠಗಳಲ್ಲಿ ರಚಿತವಾದುದರಿಂದ ಅದರಲ್ಲಿ ಲ್ಯಾಟಿನ್ ಪ್ರಭಾವವಿರುವುದನ್ನು ಗುರುತಿಸಬಹುದಾಗಿದೆ. ಬೆರ್ಸೇಯೊನ್ ಪದ್ಯಗಳಲ್ಲಿ ಆ ಕಾಲದ ಜನಜೀವನದ ವಾಸ್ತವಿಕ ಚಿತ್ರಣ ಸ್ವಾರಸ್ಯಕರವಾಗಿ ಬರುವುದು ಸ್ಪ್ಯಾನಿಷ್ ಮನೋಗತಿಯ ವೈಶಿಷ್ಟ್ಯ. ಆಲ್‍ಫೊನ್ಸೊ ಎಲ್ ಸಾವೀಯೊ ಅಥವಾ ಪ್ರಾಜ್ಞ ದೊರೆ (1221-84) ಎಂಬಾತ ಕ್ಯಾಸ್ಟೀಲಿಯನ್ ಗದ್ಯದ ಸೃಷ್ಟಿಕರ್ತನೆಂದು ಖ್ಯಾತನಾದ. ಈತ ಮೇರಿ ಮಾತೆಯ ಪವಾಡಗಳನ್ನು ಕುರಿತ 400 ಭಾವಗೀತೆಗಳನ್ನು ಗ್ಯಾಲೀಷಿಯನ್ ಭಾಷೆಯಲ್ಲಿ ಬರೆದಿದ್ದಾನೆ. ಗ್ಯಾಲೀಷಿಯನ್-ಪೋರ್ಚುಗೀಸ್ ನುಡಿಯೇ ಭಾವಗೀತೆಗೆ ತಕ್ಕ ಭಾಷೆಯೆಂದು ಆ ಕಾಲದಲ್ಲಿ ಸ್ಪೇನಿನ ಕವಿಗಳ ಭಾವನೆಯಾಗಿತ್ತು.
ಈ ಯುಗದ ಸ್ಪ್ಯಾನಿಷ್ ಭಾವಗೀತೆಗಳು ಜನಪದ ಗೀತೆಗಳ ಪ್ರಭಾವದಲ್ಲಿ ಬೆಳೆದುವು. ಜನಪದ ಗೀತೆಗಳನ್ನು ಮುಖ್ಯವಾಗಿ ಎರಡು ಗುಂಪಾಗಿ ವಿಂಗಡಿಸಬಹುದು. ಎಸ್ಟ್ರಿಬೋಟೆ ಮತ್ತು ವೀಲ್ಯಾಂತೀಕೊ ಎಂಬ ರೂಪದಲ್ಲಿ ಬೆಳೆದ ಕ್ಯಾಸ್ಟೀಲಿಯನ್ ಆಂಡಲೂಷಿಯನ್ ಕವನ; ಮತ್ತು ಕಾಂಟೀಗ ದೆ ಏಮೀಗೊ ಎಂಬ ಪ್ರಭೇದವಾಗಿ ಬೆಳೆದ ಪೋರ್ಚುಗೀಸ್ ಗ್ಯಾಲೀಷಿಯನ್ ಕವನ. ಈ ಎರಡನೆಯ ಬಗೆಯಲ್ಲಿ ಪ್ರೊವಾನ್ಸ್ ಕಾವ್ಯಪ್ರವಾಹದ ಪ್ರಭಾವವಿದ್ದರೂ ಇದು ಕೇವಲ ಅನುಕರಣವಲ್ಲ.
1085ರ ಅನಂತರ ಟೊಲೇಡೊ ನಗರ ಅರಬ್ಬೀ ಭಾಷೆಯಿಂದ ತರ್ಜುಮೆ ಮಾಡುವ ಕಾರ್ಯಕ್ಕೆ ಕೇಂದ್ರವಾಯಿತು. ಪೌರಸ್ತ್ಯ ಕಥೆಗಳೂ ಹಿಂದೂದೇಶದ ಪಂಚತಂತ್ರದಂಥ ಪ್ರಾಣಿ ಪಾತ್ರವುಳ್ಳ ನೀತಿ ಕಥೆಗಳೂ ನೇರವಾಗಿ ಅರಬ್ಬಿಯಿಂದಲೂ ಲ್ಯಾಟಿನ್ ಮುಖಾಂತರವೂ ಭಾಷಾಂತರ ವಾದುವು. ಇವುಗಳ ಬೆನ್ನಹಿಂದೆಯೇ ಉಜ್ಜ್ವಲ ಸ್ವತಂತ್ರ ಕೃತಿಗಳೂ ರಚನೆಗೊಂಡವು. ಗದ್ಯದಲ್ಲಿ ಇನ್‍ಫ್ಯಾಂಟೆ ಡಾನ್ ಜುಆನ್ ಮಾನ್ವೆಲ್ (1282-1349) ಬರೆದ ಎಲ್ ಕೋಂಡೆ ಲೂಕನೋರ್ ಮತ್ತು ಕಾವ್ಯದಲ್ಲಿ ಈಟ್‍ನ ಆರ್ಚ್ ಬಿಷಪ್ ಜುಆನ್ ರೂಯಿತ್ (1280-1351) ಬರೆದ ಲೀಬ್ರೋ ದೆ ಬ್ವೇನ್ ಆಮೋರ್ ಅಥವಾ ನೈಜ ಪ್ರೇಮದ ಪುಸ್ತಕ ಮುಖ್ಯವಾದವು. ಇವರಿಬ್ಬರೂ ನೀತಿಬೋಧೆಗೆ ಕಥೆಗಳನ್ನು ನಿದರ್ಶಿಸುವ ಮತ್ತು ಅನೇಕ ಕಥೆಗಳನ್ನು ಒಂದು ಬಂಧದಲ್ಲಿ ಪೋಣಿಸುವ ಕೌಶಲವನ್ನು ಪೌರಸ್ತ್ಯ ಕಥಾ ಸಾಹಿತ್ಯದಿಂದ ಪಡೆದುಕೊಂಡರು. ಡಾನ್ ಜುಆನ್ ಮಾನ್ವೆಲ್‍ನ ಪುಸ್ತಕದಲ್ಲಿ ಜೀವನ ಮತ್ತು ರಾಜ್ಯಾಡಳಿತ ವಿಷಯದಲ್ಲಿ ದೊರೆ ಕೇಳುವ ಪ್ರಶ್ನೆಗಳಿಗೆ ಸಲಹೆಗಾರ ಕಥಾ ರೂಪದಲ್ಲಿ ಉತ್ತರ ಕೊಡುವ ವ್ಯವಸ್ಥೆಯಿದೆ. ಈ ಚೌಕಟ್ಟು ಮಿಲಿಂದ ಪ್ರಶ್ನೆ ಮತ್ತು ಪಂಚತಂತ್ರ ಮುಂತಾದ ಗ್ರಂಥಗಳ ಅನುಕರಣವೆಂಬುದು ಸುಸ್ಪಷ್ಟ. ಜುಆನ್ ರೂಯಿತ್‍ನ ಕಾವ್ಯ ಆತ್ಮಕಥೆಯ ರೂಪದಲ್ಲಿರುವ ಅನೇಕ ಕಥೆಗಳ ಸಂಕಲನ. ಮುಂದೆ ಲಾ ಸೆಲೆಸ್ಟೀನಾನ ಕಾದಂಬರಿ ಮತ್ತು ಮೋಲೀನಾನ ನಾಟಕದ ಪಾತ್ರಗಳಿಗೂ ಸರ್‍ವಾಂಟೀಸ್‍ನಲ್ಲಿ ವೀರ ಸಂಪ್ರದಾಯದ ಬಗ್ಗೆ ಬರುವ ವಿಡಂಬನಕ್ಕೂ ಇದರಲ್ಲಿ ಮೇಲ್ಪಂಕ್ತಿ ದೊರಕಿತು. ಇದೇ ಕಾಲದಲ್ಲಿ ರಚಿತವಾದ ಪೋಯೆಮ ದೆ ಯೂಕೂಫ್ ಅಥವಾ ಯೂಸಫ್ ಕಾವ್ಯ ಸ್ಪ್ಯಾನಿಷ್ ಭಾಷೆಯಲ್ಲಿದ್ದರೂ ಅರಬ್ಬೀ ಲಿಪಿಯಲ್ಲಿದ್ದು ಕಥಾವಸ್ತು ಕುರಾನಿನಿಂದ ಎತ್ತಿಕೊಂಡದ್ದಾಗಿದೆ.
ಮಧ್ಯಯುಗದ ಉತ್ತರಾರ್ಧ (1350-1479). ಪದ್ಯ ಸಾಹಿತ್ಯ : 14-16ನೆಯ ಶತಮಾನಗಳಲ್ಲಿ ಬ್ರಿಟನ್ನಿನ ಆರ್ಥರ್ ದೊರೆಯ ಜೀವಿತದ ರೊಮಾನ್ಸ್ ಕಥೆಗಳೂ ಇತರ ರೊಮಾನ್ಸ್ ಕಥೆಗಳೂ ಸ್ಪೇನಿನಲ್ಲಿ ಕಾಣಿಸಿಕೊಂಡವು. ಇವುಗಳಲ್ಲಿ ಬರುವ ಆದರ್ಶಪ್ರೇಮ, ನಿಷ್ಕಾಮಪ್ರೇಮ ಮತ್ತು ಅದ್ಭುತವಸ್ತು ಅನೇಕ ವಿಡಂಬನಗಳಿಗೆ ಅವಕಾಶವಿತ್ತವು. ಮಧ್ಯಯುಗದ ಉತ್ತರಾರ್ಧ ಸ್ಪೇನಿನಲ್ಲಿ ಅಂತರ್ಯುದ್ಧ ಮತ್ತು ಅರಾಜಕತೆಯ ಕಾಲ. 1445ರಲ್ಲಿ ಜುಆನ್ ಆಲ್‍ಫೋನ್ಸೊ ದೆ ವಾಯೇನಾ ಎಂಬಾತ ಸಿದ್ಧಪಡಿಸಿದ ಕೋತಿಯನೇರೊ ದೆ ವಾಯೇನಾ ಎಂಬ ಕವನ ಸಂಗ್ರಹದಲ್ಲಿ ಅನೇಕ ಆಸ್ಥಾನ ಕವಿಗಳು ಪ್ರೊವಾನ್ಸಲ್ - ಗ್ಯಾಲೀಷಿಯನ್ ಪ್ರಭಾವದಲ್ಲಿ ಬರೆದ ಕವನಗಳು ದೊರಕುವುವು. 15ನೆಯ ಶತಮಾನದ ಆದಿಯಲ್ಲಿ ಡಾಂಟೆ, ಪೆಟ್ರಾರ್ಕ್, ಬೋಕಾಚೀಯೋ ಮುಂತಾದವರ ಇಟಾಲಿಯನ್ ಕೃತಿಗಳೂ ಗ್ರೀಕ್, ಲ್ಯಾಟಿನ್ ಕೃತಿಗಳೂ ಭಾಷಾಂತರವಾದವು. ಜುಆನ್ ದೆ ಮೇನ (1411-56) ಕವಿ ಡಾಂಟೆ ಮೊದಲಾದ ಇಟಾಲಿಯನ್ ಕವಿಗಳನ್ನೂ ಲೂಕಸ್ ಮೊದಲಾದ ಲ್ಯಾಟಿನ್ ಕವಿಗಳನ್ನೂ ಅನುಸರಿಸಿ, ಸ್ಪ್ಯಾನಿಷ್ ಶೈಲಿಯನ್ನೂ ವಾಕ್ಯ ವಿನ್ಯಾಸವನ್ನೂ ವಿಸ್ತರಿಸಿ, ಭವ್ಯಕಾವ್ಯಕ್ಕೆ ಸರಿಹೋಗುವ ಛಂದೋ ರೂಪ ಸೃಷ್ಟಿಸಲು ಯತ್ನಿಸಿದ. ಈ ಶತಮಾನದ ಅತಿ ಪ್ರಮುಖ ಲೇಖಕ ಡಾನ್ ಇನ್ಯೀಗೊ ಲೋಪೆ ದೆ ಮೆಂಡೋದ ಅಥವಾ ಮಾರ್ಕಿಸ್ ದೆ ಸಾಂಟಿಲ್ಯಾನ (1398-1458). ಈತ ಒಳ್ಳೆಯ ಯೋಧ, ರಾಜಕಾರಣಿ, ವಿದ್ವಾಂಸ, ಕವಿ, ಇಟಾಲಿಯನ್ ಚತುರ್ದಶಪದಿಯನ್ನು ಸ್ಪ್ಯಾನಿಷ್‍ಗೆ ಪ್ರಥಮವಾಗಿ ತಂದವನು. ಹೊರೇಸ್‍ನ ಕಾವ್ಯವನ್ನು ಸ್ಪ್ಯಾನಿಷ್‍ಗೆ ಭಾಷಾಂತರಿಸಿದ. ಸ್ಪ್ಯಾನಿಷ್ ಗಾದೆಗಳ ಸಂಕಲನವೊಂದನ್ನು ರಚಿಸಿದ; ಕೈಬರೆಹದಲ್ಲಿ ಉಪಲಬ್ಧವಾದ ಗ್ರಂಥಗಳನ್ನು ಸಂಗ್ರಹಿಸಿದ. ಮುಖ್ಯವಾಗಿ ಸ್ಪ್ಯಾನಿಷ್ ಪ್ರಪ್ರಥಮ ಕಾವ್ಯ ವಿಮರ್ಶೆಯ ಪುಸ್ತಕವನ್ನು ಬರೆದ. ಜೊರ್ಗೆ ಮನ್ರೀಕೆ (1410-79) ತನ್ನ ತಂದೆಯ ಮೇಲೆ ಬರೆದ ಚರಮಗೀತೆ ಇಂದಿಗೂ ಜನಪ್ರಿಯವಾದ ಪದ್ಯವಾಗಿದ್ದು ಇಂಗ್ಲಿಷ್‍ನಲ್ಲಿ ಗ್ರೇ ಬರೆದಿರುವ ಎಲಜಿ ಪದ್ಯವನ್ನು ಹೋಲುವುದು.
ಗದ್ಯ ಸಾಹಿತ್ಯ : ಆಲ್‍ಫೋನ್ಸೊ ದೊರೆ ಪ್ರಾರಂಭಿಸಿದ ಚಾರಿತ್ರಿಕ ಅನುಕ್ರಮಣೆ (ಕ್ರೊಸೀಕ ಗೆನರಾಲ್) ಮುಂದುವರಿಯಿತು. 14ನೆಯ ಶತಮಾನದ ಕೊನೆಯಲ್ಲಿ ಪೇಡ್ರೊ ಲೋಪೆ ದೆ ಆಯಾಲಾ (1332-1407) ಸಮಕಾಲೀನ ಚರಿತ್ರೆಯೊಂದನ್ನೂ 15ನೆಯ ಶತಮಾನದಲ್ಲಿ ಫರ್ನಾನ್ ಪೇರೆ ದೆ ಗೂಸ್ಮಾನ್ ಎಂಬವನು ಸಮಕಾಲೀನ ವ್ಯಕ್ತಿಗಳ ಜೀವನ ಚರಿತ್ರೆಗಳನ್ನೂ ಬರೆದರು. ಯುರೋಪ್-ಮಧ್ಯ ಏಷ್ಯಗಳ ಪ್ರಯಾಣಗಳನ್ನು ಕುರಿತ ಪುಸ್ತಕಗಳೂ ಬಂದುವು.
ಕ್ಯಾತೊಲಿಕ್ ದೊರೆಗಳ ಕಾಲ (ಸ್ಪ್ಯಾನಿಷ್ ಸಾಹಿತ್ಯದ ಪರಿವರ್ತನೆಯ ಕಾಲ 1479-1519): ಫರ್ಡಿನಾಂಡ್ ದೊರೆ ಮತ್ತು ಈಸಾವೆಲ್ ರಾಣಿ ಪಟ್ಟಕ್ಕೆ ಬಂದ (1479) ಕಾಲದಿಂದ ಅವರ ಮೊಮ್ಮಗ ಚಾಲ್ರ್ಸ್ ದೊರೆ ಸಿಂಹಾಸನವನ್ನು ಏರಿದ (1519) ತನಕದ ಕಾಲವನ್ನು ಮಧ್ಯ ಯುಗದಿಂದ ಪುನರುಜ್ಜೀವನ ಕಾಲಕ್ಕೆ ಪರಿವರ್ತನೆಯನ್ನು ತಂದ ಕಾಲವೆನ್ನ ಬಹುದು. ಈ ಅಲ್ಪಕಾಲದಲ್ಲಿ ಅನೇಕ ಮುಖ್ಯ ಘಟನೆಗಳು ನಡೆದುವು: 1473ರಲ್ಲಿ ಮುದ್ರಣ ಪ್ರಾರಂಭವಾಯಿತು. 1478ರಲ್ಲಿ ಸ್ಪೇನಿನ ಇನ್‍ಕ್ವಿಸಿಷನ್ ಸ್ಥಾಪನೆಯಾಯಿತು. 1492ರಲ್ಲಿ ನೆಬ್ರೀಹನ ಸ್ಪ್ಯಾನಿಷ್ ವ್ಯಾಕರಣ ಪ್ರಕಟವಾಯಿತು. 1496ರಲ್ಲಿ ಕೊಲಂಬಸ್ ಅಮೆರಿಕವನ್ನು ಶೋಧಿಸಿದ. ಸ್ಪೇನ್ ದೊರೆ ಗ್ರಾನಡಾದಿಂದ ಮೂರ್(ಅರಬ್ಬ)ರನ್ನು ಬಡಿದೋಡಿಸಿದ; ಸ್ಪೇನಿನಿಂದ ಯಹೂದ್ಯರನ್ನು ಹೊರಗಟ್ಟಲಾಯಿತು; 1508ರಲ್ಲಿ ಆಲ್‍ಕಾಲಾ ವಿಶ್ವವಿದ್ಯಾಲಯದ ಸ್ಥಾಪನೆಯಾಯಿತು ಇತ್ಯಾದಿ.
ಜನಪದ ಸಾಹಿತ್ಯ : ಈ ಕಾಲದಲ್ಲಿ ಸ್ಪ್ಯಾನಿಷ್ ಜನತೆಯಲ್ಲಿ ಪ್ರಚಲಿತವಾಗಿದ್ದು ರೂಪ ಪಡೆದ ಎರಡು ಕವನಗಳೆಂದರೆ ವೀಲ್ಯಾಂತೀಕೊ ಎಂಬ ಚಿಕ್ಕ ಹಾಡು ಹಾಗೂ ರೊಮಾನ್ ಎಂಬ ಲಾವಣಿ. ಮೊದಲನೆಯದು, ಇದಕ್ಕೂ ಪೂರ್ವದಲ್ಲಿದ್ದ ಎಸ್ಟ್ರಿಬೋಟೆ ಎಂಬ ಮಾದರಿ ಕವನಗಳು, ಕಾಂಟೀಗ ದ ಏಮೀಗೊ ಹಾಡುಗಳ ಪ್ರಭಾವದಲ್ಲಿ ಹೊಂದಿದ ರೂಪಾಂತರ; ಎರಡನೆಯದು, ಇದಕ್ಕೆ ಮೊದಲಿನ ಸೆಂಟಾರೇಸ್ ಡೆ ಗೆಸ್ಟ ಎಂಬ ವೀರ ಕಾವ್ಯಗಳ ರೂಪಾಂತರ.
ಗದ್ಯ ಸಾಹಿತ್ಯ : ಪರಿವರ್ತನ ಕಾಲದ ಅತ್ಯುತ್ತಮ ಕೃತಿ ಎಂದರೆ ಫರ್ನಾಂಡೊ ದೆ ರೋಹಾಸ್ (1499-1502) ಬರೆದ ಸಂಭಾಷಣಾ ರೂಪದ ಕಾದಂಬರಿ ಲಾ ಸೆಲೆಸ್ಟೀನಾ. ಇದು ಇಡೀ ಯುರೋಪಿನ ಮೊತ್ತಮೊದಲ ಕಾದಂಬರಿ ಎನ್ನಬಹುದು. ಈಟ್‍ನ ಆರ್ಚ್ ಬಿಷಪ್‍ನ ಡೋನ್ಯ ಎಂಡ್ರೀನಾ ಪ್ರಕರಣವೂ 1438ರಲ್ಲಿ ಆಲ್‍ಫೋನ್ಸೊ ಮಾರ್ಟೀನೆತ್ ದ ಟೊಲೇಡೊ ಎಂಬ ಟಾಲವೇರದ ಆರ್ಚ್ ಬಿಷಪ್‍ನು ಬೋಕಾಚೀಯೋವಿನ ಕೊರ್ಬಾಚ್ಚೊ ಪುಸ್ತಕದ ಮಾದರಿಯಲ್ಲಿ ಬರೆದ ಒಂದು ಸ್ತ್ರೀ ವಿಡಂಬನವೂ ಈ ಕೃತಿ ರಚನೆಗೆ ಮಾದರಿಯಾದುವು. ಇಲ್ಲಿಂದ ಮುಂದೆ ಟೀರ್ಸೊ ದೆ ಮೋಲೀನಾ ಕೃತಿಗಳಿಗೆ ಈ ಕಾದಂಬರಿಯೇ ಮಾದರಿಯಾಯಿತು.
ನಾಟಕ ಸಾಹಿತ್ಯ : ಮಧ್ಯಯುಗದ ಸ್ಪೇನಿನಲ್ಲಿ ಬ್ರಿಟನ್-ಫ್ರಾನ್ಸ್‍ಗಳಂತೆಯೇ ಜನರಾಡುವ ನುಡಿಗಳಲ್ಲಿ ಕ್ರೈಸ್ತ ಪುರಾಣ ವಸ್ತುವಿನ ನಾಟಕ ರೂಪಗಳಿರುತ್ತಿದ್ದವು. 13ನೆಯ ಶತಮಾನದ ಸ್ಪೇನಿನಲ್ಲಿ ಲೌಕಿಕ ಕಥಾ ವಸ್ತುವಿನ ಅಭಿನಯವೂ ಇರುತ್ತಿತ್ತು. 15ನೆಯ ಶತಮಾನದ ಕೊನೆಯಲ್ಲಿ ಪೌರಾಣಿಕ-ಲೌಕಿಕವೆಂಬ ಭೇದ ಅಳಿಸಿ ಹೋಗಿ ಪದ್ಯ ನಾಟಕಗಳು-ಗದ್ಯ ನಾಟಕಗಳು ಎಂಬ ಎರಡು ಪ್ರಭೇದಗಳು ಕಾಣಿಸಿ ಕೊಂಡವು. ವರ್ಜಿಲ್ ಕವಿಯ ಎಕ್ಲಾಗ್ ಕಾವ್ಯವನ್ನು ಸ್ಪ್ಯಾನಿಷ್‍ಗೆ ಭಾಷಾಂತರಿಸಿದ ಜುಆನ್ ಡೆಲ್ ಏಂತೀನಾ ಎಂಬಾತ ಗ್ರಾಮೀಣ ಕಥಾವಸ್ತುವಿನ ಹಾಸ್ಯಾತ್ಮಕ ಸಂಭಾಷಣೆಗಳನ್ನು ರಚಿಸಿದ. ಇವುಗಳಲ್ಲಿ ಗೊಲ್ಲಕುರುಬರು ಮತ್ತು ರೈತರು ಗ್ರಾಮ್ಯದಲ್ಲಿ ಮಾತಾಡುವರು. ಮುಂದಿನ ನಾಟಕ ಸಾಹಿತ್ಯದಲ್ಲಿ ಕೆಳವರ್ಗದ ಜನರ ಸಂಭಾಷಣೆಗೆ ಗ್ರಾಮ್ಯವೇ ರೂಢಿಯಾಯಿತು. ಬಾರ್ತೊಲೋಮೆ ಡೆ ಟೊರ್ರೇಸ್ ನಯಾರ್ರೊ ಎಂಬಾತ ಲ್ಯಾಟಿನ್ ಮತ್ತು ಇಟಾಲಿಯನ್ ಪ್ರಭಾವದಲ್ಲಿ ಬರೆದ ಹರ್ಷ ನಾಟಕಗಳಲ್ಲಿ ಸಂಭಾಷಣೆ ಇನ್ನೂ ಸ್ವಾರಸ್ಯವಾಗಿರುವುದು; ನಾಟಕ ರಂಗದ ಪರಿe್ಞÁನವೂ ಪಕ್ವವಾಗಿರುವುದು. ಸ್ಪೇನಿನಲ್ಲಿ ಪ್ರಪ್ರಥಮ ಸಾರ್ವಜನಿಕ ನಾಟಕ ಶಾಲೆಯನ್ನು ತೆರೆದ ಲೋಪೆ ದೆ ವೇಗ ಎಂಬಾತ ಸ್ಪೇನಿನಲ್ಲಿ ಪ್ರವಾಸ ಮಾಡುತ್ತಿದ್ದ ಇಟಾಲಿಯನ್ ನಾಟಕ ಕಂಪನಿಯೊಂದರಿಂದ ಸ್ಫೂರ್ತಿ ಪಡೆದು ಅದರ ಅನುಕರಣಗಳನ್ನು ಪ್ರದರ್ಶಿಸಿದ. ಜುಆನ್ ದೆ ಸ್ವೇವ ಎಂಬಾತ ರೊಮಾನ್ ಸಾಹಿತ್ಯವನ್ನು ನಾಟಕ ರಂಗಕ್ಕೆ ತಂದ. ಮುಂದೆ ಲೋಪೆ ದೆ ವೇಗ ಮತ್ತು ಅವನ ಅನುಯಾಯಿಗಳು ರೊಮಾನ್‍ಗಳನ್ನು ತದ್ವತ್ತಾಗಿ ರಂಗದ ಮೇಲೆ ಪ್ರಚಲಿತಗೊಳಿಸಿದರು. ಪರಿವರ್ತನ ಕಾಲದ ಅತಿ ಮುಖ್ಯ ನಾಟಕಕಾರ ಷಿಲ್ ವಿಸಾಂಟೆ. ಈ ಪೋರ್ಚುಗೀಸ್ ಲೇಖಕ ರೂಪಕ ಕಥೆಗಳನ್ನು ನಾಟಕ ರಂಗದಲ್ಲಿ ಪ್ರಯೋಗಿಸುವುದರಲ್ಲಿ ಕಾಲ್ಡೆರಾನನಿಗಿಂತ ಆದ್ಯನಾಗಿದ್ದಾನೆ.
ಸ್ಪ್ಯಾನಿಷ್ ಸಾಹಿತ್ಯದ ಸುವರ್ಣಯುಗ : ಐದನೆಯ ಚಾಲ್ರ್ಸ್ ದೊರೆಯಾಗಿ ಬಂದ 1519 ರಿಂದ ಸು. 1650ರ ತನಕದ ಕಾಲವನ್ನು ಸ್ಪ್ಯಾನಿಷ್ ಸಾಹಿತ್ಯದ ಸುವರ್ಣಯುಗ ಎನ್ನಬಹುದು. ಈ ಕಾಲದ ಪೂರ್ವಾರ್ಧದಲ್ಲಿ ಸ್ಪೇನ್ ಮತ್ತು ಪೋರ್ಚುಗೀಸ್ ರಾಜ್ಯಗಳು ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಉನ್ನತ ಸ್ಥಿತಿಯಲ್ಲಿದ್ದುವು. ದೇಶದ ರಾಜಕೀಯ-ಆರ್ಥಿಕ ದೆಸೆ ಇಳಿಮುಖವಾದ ಮೇಲೆಯೂ ಸ್ವಲ್ಪಕಾಲ ಸಾಹಿತ್ಯದ ಸುವರ್ಣಯುಗ ಮುಂದುವರಿಯಿತು. ಪೂರ್ವಾರ್ಧ ದಲ್ಲಿ ಅತ್ತ ಉತ್ತರದಿಂದ ರೀ¥sóÁರ್ಮೇಶನ್ (ಚರ್ಚಿನ ಸುಧಾರಣೆ) ಹುರುಪೂ ಇತ್ತ ಇಟಲಿಯಿಂದ ನವೋದಯ ಪ್ರಭಾವವೂ ಸ್ಪೇನಿನಲ್ಲಿ ಸಂಗಮವಾದುವು. ಉತ್ತರಾರ್ಧದಲ್ಲಿ (1600-50) ಬರೋಕ್ ಎಂಬ ಒಂದು ವಿಶಿಷ್ಟ ಶೈಲಿ ಬೆಳೆಯಿತು.
ಪದ್ಯ ಸಾಹಿತ್ಯ : ಕೆಲವರು ಕವಿಗಳು ಹಿಂದಿನ ಕ್ಯಾಸ್ಟೀಲಿಯನ್ ರೂಪಗಳಲ್ಲಿ ಬರೆಯುತ್ತಿದ್ದು ಹೊರದೇಶಗಳ ಪ್ರಭಾವವನ್ನು ವಿರೋಧಿ ಸಿದರೂ ಇಟಲಿಯ ಪ್ರಭಾವದಲ್ಲಿ ರಚಿತವಾದ ಜುಆನ್ ಬೊಸ್ಕಾನ್ ಮತ್ತು ಗಾರ್ಸಿಲಾಸೊ ದ ಲಾ ವೇಗ ಕವಿಗಳ ಪದ್ಯ ಸಂಕಲನಗಳು(1543) ಕಿರಿಯ ಕವಿಗಳಿಗೆ ಮಾರ್ಗದರ್ಶಿಯಾದುವು. ಮಾರ್ಕಿಸ್ ದೆ ಸಾಂಟಿಲ್ಯಾನನ ಚತುರ್ದಶ ಪದಿಗಳು ಇನ್ನೂ ಮುದ್ರಣಗೊಂಡಿರಲಿಲ್ಲವಾಗಿ ಬೊಸ್ಕಾನ್‍ನ ಚತುರ್ದಶಪದಿಗಳೇ ಸ್ಪೇನಿಗೆ ಮೊತ್ತ ಮೊದಲಿನವೆನ್ನಬಹುದು. ಗಾರ್ಸಿಲಾಸೊ ದೆ ಲಾ ವೇಗನು ಇಟಲಿಯ ವಿವಿಧ ಛಂದೋ ರೂಪಗಳನ್ನು ಬಳಸಿ ಅದಕ್ಕೆ ಸುಸಂಸ್ಕøತರ ಸಂಭಾಷಣೆಯ ಸ್ಪ್ಯಾನಿಷ್ ಭಾಷೆಯನ್ನು ಹೊಂದಿಸಿ ಕಿವಿಗೆ ಇಂಪಾದ ಪದ್ಯಗಳನ್ನು ರಚಿಸಿದ. ಸಾಲಾಮಂಕ ವಿಶ್ವವಿದ್ಯಾಲಯದ ಅಧ್ಯಾಪಕ ಫ್ರಾಯ್ ಲೂಯಿಸ್ ದೆ ಲೇಯೋನ್ (1527-91) ಎಂಬ ಮಾನವತಾವಾದಿ ವಿದ್ವಾಂಸ ಬರೆದ ಪದ್ಯಗಳಲ್ಲಿ ಗ್ರಾಮಜೀವನ ಮತ್ತು ಏಕಾಂತ ವಾಸದ ಶಾಂತಿಯ ಹಂಬಲಿಕೆ ಇದೆ. ಸಾಲಾಮಂಕದಲ್ಲಿ ಅಧ್ಯಯನ ಮಾಡಿದ ಕಾರ್ಮಲೈಟ್ ಸುಧಾರಣಾ ಚಳವಳಿಯ ಪಾದ್ರಿ ಸಾನ್ ಜುಆನ್ ದೆ ಲಾ ಕ್ರೂತ್ (1542-91) ಎಂಬಾತ ಆತ್ಮನ ಮೋಕ್ಷಮಾರ್ಗವನ್ನು ಕುರಿತ ಅನುಭಾವ ಕಾವ್ಯಗಳನ್ನು ಬರೆದ. ಫರ್ನಾಂಡೊ ದೆ ಎರೆರ್ರನ (1534-97) ಆಡಂಬರದ ಶಬ್ದಗತಿ ಮತ್ತು ಕೇವಲ ಆಲಂಕಾರಿಕ ಶೈಲಿ ಮುಂದೆ ಗಾಂಗೋರಾ ಕಾಲ್ಡೇರಾನ್ ಮುಂತಾದ ಹಿರಿಯ ಲೇಖಕರ ಮೇಲೆ ಪ್ರಭಾವ ಬೀರಿತು.
ಗದ್ಯ ಸಾಹಿತ್ಯ : 16ನೆಯ ಶತಮಾನದ ಗದ್ಯ ಸಾಹಿತ್ಯ ಪದ್ಯ ಸಾಹಿತ್ಯಕ್ಕಿಂತ ವೈವಿಧ್ಯಮಯವಾದುದು. ಬೊಸ್ಕಾನ್‍ನ ಇಲ್ ಕಾರ್ತಿಗಿಯಾನೊ ಭಾಷಾಂತರದಲ್ಲಿಯೇ ಗದ್ಯ ಶೈಲಿಯ ಪರಿಪಕ್ವತೆ ಎದ್ದು ಕಾಣುವುದು. ಹಾಲೆಂಡಿನ ವಿದ್ವಾಂಸ ಇರಾಸ್ಮಸ್‍ನ ಪ್ರಭಾವ ಸ್ಪೇನಿನಲ್ಲಿ ಪ್ರಬಲವಾದುದರಿಂದ ಆತನ ಸರಳ ಶೈಲಿ ಇಲ್ಲಿ ವರ್ಧಿಸಿ ಇಟಲಿಯಲ್ಲಿ ಸಿಸಿರೊ ಹಾದಿಯಲ್ಲಿ ಬೆಳೆದ ಆಡಂಬರ ಶೈಲಿಯನ್ನು ವಿರೋಧಿಸಿತು. ಫ್ರಾಯ್ ಆಂಟೋಸ್ಯೋ ದೆ ಗೆವಾರ (1490-1545) ಎಂಬಾತ ರಿಲಾಕ್ಸ್ ದೆ ಪ್ರಿನ್ಸೆಪಸ್ ಮುಂತಾದ ಕೃತಿಗಳಲ್ಲಿ ಬೆಳೆಸಿದ ವಿಲಕ್ಷಣ ಶೈಲಿ ಮುಂದಿನ ಶತಮಾನದ ಬರೋಕ್ ಶೈಲಿಗೆ ಪೂರ್ವ ನಿದರ್ಶನವಾಯಿತಲ್ಲದೆ ಇಂಗ್ಲಿಷ್‍ನಲ್ಲಿ ತಾಮಸ್ ನಾರ್ತ್, ಜಾನ್ ಲಿಲಿ ಮುಂತಾದವರ ಯೂಫೂಯಿಸಮ್ ಎಂಬ ಶೈಲಿಗೆ ಪ್ರೇರಕವಾಯಿತು. ಈ ಕಾಲದ ಗದ್ಯ ಲೇಖಕರಲ್ಲಿ ಚರಿತ್ರಕಾರರೇ ಪ್ರಮುಖರು. ನೀತಿ ಸಾಹಿತ್ಯದಲ್ಲಿ ಭಾಷೆಯ ವಿವಿಧ ಚೈತನ್ಯಗಳನ್ನು ಬಳಸಿಕೊಂಡು ಚಾತುರ್ಯದಿಂದ ಗದ್ಯರಚನೆ ಮಾಡಿದವನು ಫ್ರಾಯ್ ಲೂಯಿಸ್ ದೆ ಗ್ರಾನಡಾ (1504-88). ಕೂಲಂಕಷ ವರ್ಣನೆಯ ಪ್ರವೃತ್ತಿ ಮಲೋನ್ ಚಾಯ್ಡೆಯಲ್ಲಿ ಕಂಡುಬರುವುದು. ತನ್ನ ಅನುಭಾವಗೀತೆಗಳ ಮೇಲೆ ಟೀಕಾ ರೂಪವಾಗಿ ಗದ್ಯವನ್ನು ಬರೆದ ಲೂಯಿಸ್ ಲೇಯೋನ್ ಈ ಕಾಲದ ಅತ್ಯುತ್ತಮ ಗದ್ಯ ಲೇಖಕನೆನ್ನಬಹುದು. ಪದ್ಯದಲ್ಲಿ ಗಾರ್ಸಿಲಾಸೊ ಮಾಡಿದಂತೆ, ಗದ್ಯದಲ್ಲಿ ಈ ಲೇಖಕರು ಸ್ಪ್ಯಾನಿಷ್ ಭಾಷೆಯ ಸುಪ್ತಚೇತನಗಳನ್ನು ತೋರಿಸಿಕೊಟ್ಟರು. ಕಾರ್ಮಲೈಟ್ ಸುಧಾರಣಾ ಚಳವಳಿಯ ನೇತಾರಳಾದ ಸಾಂಟಾ ಟೆರೇಸಾ (1515-82) ತನ್ನ ಆಧ್ಯಾತ್ಮಿಕ ಅನುಭವಗಳನ್ನು ನಿರೂಪಿಸುವ ಆತ್ಮಕಥೆಯ ಲೇಖನಗಳನ್ನು ಬರೆದಿದ್ದಾಳೆ. ಇವು ಮನೋವೈe್ಞÁನಿಕ ದೃಷ್ಟಿಯಿಂದ ಬಹಳ ಸ್ವಾರಸ್ಯವಾಗಿವೆ.
ಕಥಾ ಸಾಹಿತ್ಯ (ಕಾದಂಬರಿ) : ಹೊಸದಾಗಿ ಉದಯವಾದ ಸ್ಪ್ಯಾನಿಷ್ ರಾಷ್ಟ್ರದಲ್ಲಿ ಸ್ವತಂತ್ರ ಮಾರ್ಗದ ಕೃತಿಗಳು ಬಿರುಸಿನಿಂದ ಸೃಷ್ಟಿಯಾದುದು ಕಾದಂಬರಿ ಮತ್ತು ನಾಟಕ ಕ್ಷೇತ್ರದಲ್ಲಿ. ಕಾದಂಬರಿ ಎಂದರೆ ಮುಖ್ಯವಾಗಿ ಪಿಕಾರೆಸ್ಕ್ ಅಥವಾ ಖಳ ಕಾದಂಬರಿ ಎಂಬ ಸಾಮಾಜಿಕ ಕಾದಂಬರಿ. ಈ ವಿಶಿಷ್ಟ ಬಗೆಯ ಕಾದಂಬರಿ ಸ್ಪೇನಿನ ಸ್ವತಂತ್ರ ನಿರ್ಮಾಣ. 1554ರಲ್ಲಿ ಪ್ರಕಟವಾದ ಅe್ಞÁತ ಲೇಖಕನೊಬ್ಬನ ಲಾತರೀಲ್ಯೊ ಟೋರ್ಮೇಸ್ ಎಂಬ ಪುಸ್ತಕವೇ ಮೊತ್ತಮೊದಲ ಖಳ ಕಾದಂಬರಿ. ಇದರ ತರುವಾಯ ಇನ್ನೂ ವಿಸ್ತಾರವಾದ ಗೂಸ್ಮಾನ್ ಆಲ್‍ಫರಾಚೆ ಎಂಬ ಕೃತಿ ಮಾಟೇಯೋ ಆಲೇಮಾನನಿಂದ ರಚಿತವಾಯಿತು (1599).
ಲೋಪೆ ದ ವೇಗನ ಆರ್ಕೇಡಿಯ ಮತ್ತು ಸರ್ವಾಂಟೀಸ್‍ನ ಗಾಲಟೇಯ ಎಂಬ ಗ್ರಾಮೀಣ ಜೀವನದ ಕಾದಂಬರಿಗಳೂ ಸರ್ವಾಂಟೀಸ್‍ನ ನೋವೆಲಾಸ್ ಎಸೆಂಪ್ಲೋರೇಸ್‍ನಲ್ಲಿರುವ ಕೆಲವು ಕಥೆಗಳೂ ಇಟಲಿಯಿಂದ ಬಂದ ಕಾದಂಬರಿ ಪ್ರಕಾರಗಳು. ಕ್ರಮೇಣ ಖಳ ಕಾದಂಬರಿಯೂ ಇಟಲಿಯ ಆದರ್ಶ ಚಿತ್ರಣದ ಕಾದಂಬರಿಯೂ ಬೆರೆತು ಹೊಸ ರೂಪಗಳು ಹುಟ್ಟಿದುವು. ಉದಾಹರಣೆಗೆ ವೀಸಾಂಟೆ ಮಾರ್ಟೀನೆತ್ ಏಸ್ಪೀನೆಲ್‍ನ ಮಾರ್ಕೊಸ್ ದೆ ಒಬ್ರೆಗನ್ (1618) ಈ ವರ್ಗಕ್ಕೆ ಸೇರಿದುದು. ಚಾರಿತ್ರಿಕ ಕಾದಂಬರಿಗಳ ಪೈಕಿ ಗಿನೇತ್ ಪೆರೇತ್ ಎಂಬ ಲೇಖಕನ ಗ್ರಾನಡಾ ರಾಜ್ಯದ ಕೊನೆಗಾಲವನ್ನು ಚಿತ್ರಿಸುವ ಗೆರ್ರೋಸ್ ಸಿವಿಲೇಸ್ ದೆ ಗ್ರಾನಡಾವನ್ನು ಇಲ್ಲಿ ಉಲ್ಲೇಖಿಸಬಹುದು. ಹಾಗೆಯೇ ಸರ್ವಾಂಟೀಸ್‍ನ (1547-1616) ಡಾನ್ ಕ್ವಿಕ್ಸೋಟ್ ಕಾದಂಬರಿ ಸ್ಪ್ಯಾನಿಷ್ ಸಾಹಿತ್ಯದ ಲೋಕಪ್ರಸಿದ್ಧ ಗ್ರಂಥವಾಗಿದೆ.
ನಾಟಕ ಸಾಹಿತ್ಯ : 17ನೆಯ ಶತಮಾನದ ಸ್ಪ್ಯಾನಿಷ್ ನಾಟಕಗಳು ಸುಲಭ ಭಾಷೆಯಲ್ಲಿ ರಚಿಸಲ್ಪಟ್ಟಿದ್ದುದರಿಂದ ವಿಶೇಷ ಜನಪ್ರಿಯತೆ ಗಳಿಸಿದುವು. ಬೈಬಲ್, ಸಂತ-ಶರಣರ ಜೀವಿತ, ದೇಶೀಯ ಆಚಾರ, ಚರಿತ್ರೆ, ಕಾದಂಬರಿ, ಸಮಕಾಲೀನ ಸ್ಪ್ಯಾನಿಷ್ ಜೀವನದ ದಿನಚರಿ, ನಿಜವಾದ ಘಟನೆಗಳು - ಹೀಗೆ ವೈವಿಧ್ಯಮಯ ವಸ್ತು ನಾಟಕದಲ್ಲಿ ಚಿತ್ರಿತವಾಯಿತು. ನಾಟಕಗಳನ್ನು ಸ್ಥೂಲವಾಗಿ ಮತೀಯ ಮತ್ತು ಲೌಕಿಕವೆಂದು ವಿಂಗಡಿಸಬಹುದು. ಲೌಕಿಕ ನಾಟಕಗಳನ್ನು ಸೂಕ್ಷ್ಮವಾಗಿ ವಿಂಗಡಿಸುವುದು ಅಸಾಧ್ಯ. ಆದರೆ ಪಾತ್ರಗಳ ಸಾಮಾಜಿಕ ಸ್ಥಾನಮಾನ, ಪಾತ್ರಧಾರಿಗಳ ಪೋಷಾಕು, ರಂಗಮಂಚದ ಸಾಧನೋಪಾಯಗಳು - ಈ ದೃಷ್ಟಿಯಿಂದ ಈ ನಾಟಕಗಳನ್ನು ಮುಖ್ಯವಾಗಿ ಮೂರು ವಿಧವಾಗಿ ವಿಂಗಡಿಸಬಹುದು.
1. ಮಧ್ಯಮ ವರ್ಗದ ಸಮಾಜದ ನಟನಟಿಯರು ಸುಲಭವಾದ ಪೋಷಾಕನ್ನು ಧರಿಸಿ ನಿತ್ಯ ಜೀವನವನ್ನು ಪ್ರತಿಬಿಂಬಿಸುವ ಪಾತ್ರಗಳನ್ನು ವಹಿಸಿ ಆಡುತ್ತಿದ್ದ ನಾಟಕ. ಇವುಗಳ ವಸ್ತು ಪ್ರೇಮ, ಪಿತೂರಿ, ದ್ವಂದ್ವಯುದ್ಧ ಇತ್ಯಾದಿಗಳಿಂದ ಕೂಡಿರುತ್ತಿತ್ತು. ಈ ನಾಟಕ ಪ್ರಕಾರ ನಿಲುವಂಗಿ ಮತ್ತು ಕತ್ತಿವರಸೆ ಕಥೆಗಳು (ಕೊಮೇದ್ಯ ದ ಕಾಪಾ ಈ ಎಸ್ಪಾಡಾ) ಎಂದು ಹೆಸರು ಗಳಿಸಿತ್ತು. ಈ ಪ್ರಕಾರ ಲೋಪೆ ದೆ ವೇಗನದೇ ಸೃಷ್ಟಿ ಎಂದು ಹೇಳಬಹುದು.
2. ರಾಜ-ರಾಜಕುಮಾರರ ಪಾತ್ರಗಳನ್ನು ವಹಿಸಿ, ನಟನಟಿಯರು ಆಡಂಬರದ ಪೋಷಾಕನ್ನು ಧರಿಸಿ ಭವ್ಯ ಸುಸಜ್ಜಿತ ರಂಗಮಂಟಪದಲ್ಲಿ ವಿಶೇಷ ಸಾಧನೋಪಾಯಗಳನ್ನೂ ವಾದ್ಯ ಸಂಗೀತವನ್ನೂ ಬಳಸಿಕೊಂಡು ಆಡುತ್ತಿದ್ದ ನಾಟಕ. ಇದನ್ನು ದೃಶ್ಯಾಡಂಬರ (ಸ್ಪೆಕ್ಟ್ಯಾಕ್ಯುಲರ್) ನಾಟಕವೆನ್ನುತ್ತಿದ್ದರು.
3. ಒಂದು ನಾಟಕಕ್ಕೆ ವ್ಯಂಜನವೆಂಬಂತೆ ಮುನ್ನುಡಿ, ಹಿನ್ನುಡಿ, ಅಂಕವಿರಾಮ, ವಿನೋದಗಳು, ಬ್ಯಾಲೆ, ಗೀತ-ನೃತ್ಯ ಮತ್ತು ಸ್ಪ್ಯಾನಿಷ್ ದೊರೆಗಳ ತಾರ್‍ತ್ವೇಲಾ ಅರಮನೆಯಲ್ಲಿ ಭವ್ಯವಾಗಿ ಅಭಿನಯಿಸುತ್ತಿದ್ದ ಏಕಾಂತ ಸಂಗೀತ ನಾಟಕಗಳು. ಈ ಕೊನೆಯ ಬಗೆಯವನ್ನು ತಾರ್‍ತ್ವೇಲಾ ಎಂದೇ ಕರೆಯುತ್ತಿದ್ದರು.
ಸುವರ್ಣಯುಗದ ನಾಟಕ ಕರ್ತೃಗಳಲ್ಲಿ ಲೋಪೆ ದ ವೇಗ(1562-1635) ಅಗ್ರಗಣ್ಯ. ಕಥೆ ಹೆಣೆದು ನಾಟಕೀಯ ಸನ್ನಿವೇಶಗಳನ್ನು ಸೃಷ್ಟಿಸಿ ಕಳೆ ಕಟ್ಟಿಸುವ ಕಲೆಯನ್ನು ಸ್ಪ್ಯಾನಿಷ್ ಲೇಖಕರಿಗೆ ಈತ ತೋರಿಸಿಕೊಟ್ಟ. ಇವನನ್ನು ಸ್ಪ್ಯಾನಿಷ್ ನಾಟಕದ ಮೂಲಪುರುಷನೆನ್ನಬಹುದು. ಟೀರ್ಸೋ ದೆ ಮೋಲೀನಾ ಅಥವಾ ಗಾಬ್ರಿಯೇಲ್ ಟೇಲ್ಯೇತ್ (1584-1648) ಎಂಬಾತ ವೈಪರೀತ್ಯದ ಸ್ತ್ರೀ-ಪುರುಷರನ್ನು ಚಿತ್ರಿಸುವುದರಲ್ಲಿ ಆಸಕ್ತಿ ತೋರಿಸಿದ. ಈತ 300ಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾನೆ. ಈತನ ಸೇವಿಲ್ ನಗರದ ಕುಚೇಷ್ಟೆಗಾರ (ದಿ ಪ್ರಾಕ್ಟಿಕಲ್ ಜೋಕರ್ ಆಫ್ ಸೆವಿಲ್) ನಾಟಕದಲ್ಲಿ ಬರುವ ಡಾನ್ ಜುಆನ್ ಪಾತ್ರ ಯುರೋಪಿನಾದ್ಯಂತ ಪ್ರಭಾವ ಬೀರಿತು. ಜುವಾನ್ ರೂಇತ್ ದ ಅಲಾರ್ಕಾನ್ (1581-1639) ಎಂಬಾತ ಬರೆದ ಪಾತ್ರಪ್ರಧಾನ ಹರ್ಷ ನಾಟಕಗಳಲ್ಲಿ ಹಾಸ್ಯವು ಸನ್ನಿವೇಶ ಮಾತ್ರದಿಂದಲ್ಲದೆ ಮುಖ್ಯವಾಗಿ ಪಾತ್ರ ರಚನೆಯಲ್ಲಿಯೇ ಉದ್ಭವಿಸುವುದು.
ಸುವರ್ಣಯುಗದ ಉತ್ತರಾರ್ಧ (1600-50) : ಪದ್ಯ ಸಾಹಿತ್ಯ : ಈ ಕಾಲದಲ್ಲಿ ದೇಶೀಯ ಕಾವ್ಯ ರೂಪ (ರೋಮನ್ ಇತ್ಯಾದಿ) ಮತ್ತು ಇಟಲಿಯ ಅನುಕರಣದ ಹೊಸ ಕಾವ್ಯರೂಪ (ಚತುರ್ದಶಪದಿ ಇತ್ಯಾದಿ) ಇವೆರಡರಲ್ಲಿಯೂ ಕಾವ್ಯ ರಚನೆ ಮುಂದುವರಿಯಿತು. ಅಂತೆಯೇ ಶುದ್ಧ ಕ್ಯಾಸ್ಟೀಲಿಯನ್ ನುಡಿಕಟ್ಟಿನ ಶೈಲಿ ಮತ್ತು ಲ್ಯಾಟಿನ್ ಪ್ರಭಾವಿತ ಶೈಲಿ ಎರಡೂ ಉಪಯೋಗಿಸಲ್ಪಟ್ಟವು. ಲೂಯಿಸ್ ದ ಗಾಂಗೋರಾ ಇ ಆರ್ಗೋಟೆ (1561-1627) ಮೊದಲು ರೋಮನ್ ಮತ್ತು ವೀಲ್ಯಾಂತಿಕೋಗಳನ್ನು ಬರೆದ. ಅನಂತರ ಲ್ಯಾಟಿನ್ ಪ್ರಭಾವಿತ ಕೃತಕ ಶೈಲಿಯೊಂದನ್ನು ಬೆಳೆಸಿ ಕೃತಿಗಳನ್ನು ರಚಿಸಿದ. ಈ ಶೈಲಿಗೆ ಕುಲ್ವೆರಾನಿಸ್ಮೊ ಶೈಲಿಯೆಂದು ಹೆಸರಾಯಿತು. ಇದು ಈ ಯುಗದಲ್ಲಿ ಬೆಳೆದ ಬರೋಕ್ ಕಲ್ಪನೆಯ ಒಂದು ಶಾಖೆ ಎನ್ನಬಹುದು. ಫ್ರಾನ್ಸಿಸ್ಕೊ ದ ಕೆವೇದೋ ಇ ವಿಯೇಗಾಸ್ (1580-1645) ಎಂಬ ಕವಿ ಕುಲ್ವೆರಾನಿಸ್ಮೊ ಶೈಲಿಯನ್ನು ವಿರೋಧಿಸಿದರೂ ಕಲ್ಪನೆಗಳ ವೈಚಿತ್ರ್ಯವನ್ನೂ ಚಮತ್ಕಾರೋಕ್ತಿಯನ್ನೂ ದ್ವಂದ್ವಾರ್ಥವನ್ನೂ ವಿಶೇಷವಾಗಿ ಬಳಸಿದ. ಈ ಶೈಲಿಗೆ ಕೋನ್‍ಸೆಪ್ಟೀಸ್ಮೊ ಎಂಬ ಹೆಸರು ಬಂತು. ಇದು ಇಂಗ್ಲಿಷ್‍ನ ಮೆಟಫಿಸಿಕಲ್ ಶೈಲಿಯನ್ನು ಹೋಲುತ್ತದೆ.
ಗದ್ಯ ಸಾಹಿತ್ಯ : ಕೆವೇದೋ ಗಣ್ಯ ಕವಿಯಾದರೂ ಈತನ ವಿಶೇಷತೆ ಪ್ರಕಟಗೊಂಡಿರುವುದು ಗದ್ಯದಲ್ಲಿ. ಇವನ ಗದ್ಯಶೈಲಿ ಆಲಂಕಾರಿಕ ವಾದುದು. ಇಂಗ್ಲಿಷಿನ ಯೂಫ್ಯೂಸ್ ಕೃತಿಯ ಶೈಲಿಯನ್ನು ಹೋಲುವುದು. ಇದೇ ಕೋನ್‍ಸೆಪ್ಟೀಸ್ಮೊ ಶೈಲಿಯಲ್ಲಿ ವಿವಿಧ ರೀತಿಯ ಗದ್ಯಗ್ರಂಥಗಳನ್ನು ಬರೆದವನು ಬಾಲ್ಟತಾರ್ ಗ್ರಾಶಿಯಾನ್ (1601-58). ಈತನ ಕಾವ್ಯ ವಿಮರ್ಶೆ ಎಂಬ ಗ್ರಂಥದಲ್ಲಿ ಕೋನ್‍ಸೆಪ್ಟೀಸ್ಮೋ ಶೈಲಿ ಸೂತ್ರ ರೂಪದಲ್ಲಿ ಕ್ರೋಡೀಕೃತವಾಗಿದೆ.
ನಾಟಕ : ಸುವರ್ಣಯುಗದ ಎರಡನೆಯ ಹಂತದ ಪ್ರಮುಖ ನಾಟಕಕರ್ತೃವೆಂದರೆ ಪೇಡ್ರೊಕಾಲ್ಡೆರಾನ್ ದ ಲಾ ಬಾರ್ಕಾ (1600-81). ಈತ ಪಾತ್ರ ಸೃಷ್ಟಿಯಲ್ಲಿ, ಮಾನವ ಜೀವನದ ಸಮಸ್ಯೆಗಳನ್ನು ವಿಶ್ಲೇಷಿಸುವಲ್ಲಿ ಲೋಪೆ ದ ವೇಗನಿಗಿಂತ ಹೆಚ್ಚು ಸಮರ್ಥನೆನ್ನಬಹುದು. ಈತ ಸ್ಪೇನಿನ ಹೊರಗೂ ಕೀರ್ತಿ ಗಳಿಸಿದ.
18ನೆಯ ಶತಮಾನ : 17ನೆಯ ಶತಮಾನದ ಕೊನೆಕೊನೆಗೆ ಸ್ಪೇನಿನ ಸಾಹಿತ್ಯದಲ್ಲೂ ಇತರ ಎಲ್ಲ ಕ್ಷೇತ್ರಗಳಲ್ಲೂ ಅವನತಿ ಪ್ರಾರಂಭವಾಯಿತು. ಇದಕ್ಕೆ ಕಾರಣಗಳು ಹಲವು : ಸ್ಪ್ಯಾನಿಷ್ ಇನ್ಕ್ವಿಸಿಶನ್ನಿನ ವಿಪರೀತ ವರ್ತನೆಗೆ ಮತ್ತು ದುರಾಗ್ರಹಕ್ಕೆ ಹಲವು ಲೇಖಕರು ತುತ್ತಾದರು; ಸ್ಪೇನ್ ಯುರೋಪಿನ ಪ್ರಾಟೆಸ್ಟಂಟ್ ರಾಜ್ಯಗಳೊಡನೆ ಸಂಬಂಧ ತ್ಯಜಿಸಿತು; ನೆಪೋಲಿಯನ್ ಯುದ್ಧಗಳು ಇತ್ಯಾದಿ.
ಗದ್ಯ ಸಾಹಿತ್ಯ : ಸಾಹಿತ್ಯ ಮತ್ತು ಬೌದ್ಧಿಕ ಕ್ಷೇತ್ರದಲ್ಲಿ ದೇಶೀಯ ಸಂಪ್ರದಾಯ ದುರ್ಬಲವಾಗಿ ಫ್ರೆಂಚ್ ಪ್ರಭಾವ ಬೆಳೆಯಿತು. ಫ್ರೆಂಚ್ ಸಾಹಿತ್ಯದ ಮಾದರಿಗಳನ್ನೂ ತತ್ತ್ವಗಳನ್ನೂ ಪರಿಚಯ ಮಾಡಿಕೊಡುವ, ಸಮಾಜ ಮತ್ತು ಸಾಹಿತ್ಯ ಸುಧಾರಣೆಯ ಪ್ರಯತ್ನ ನಡೆಯಿತು. ಈಗ್ನಾಸಿಯೊ ದೆ ಲೂದಾನ್‍ನ (1702-54) ಲ ಪೊಯೇಟೀಕ ಎಂಬ ಸಾಹಿತ್ಯ ವಿಮರ್ಶೆಯ ಗ್ರಂಥ, ಪಾದ್ರೆ ಬೆನಿಟೊ ಗೆರೋನೀಮೊ ಫೇಯಿಗೂನ (1676-1764) ಟೇಯಾಟ್ರೊ ಕ್ರಿಟೀಕೊ ಎಂಬ ನಾಟಕ ವಿಮರ್ಶೆಯ ಗ್ರಂಥ, ಗ್ರೆಗಾರಿಯೊ ಮಾಯಾನ್ಸ್ ಇ ಸೀರ್‍ಕಾರ್‍ನ (1699-1781) ಸ್ಪ್ಯಾನಿಷ್ ಉದ್ಗ್ರಂಥಗಳ ಪರಿಷ್ಕøತ ಮುದ್ರಣ, ಲಾ ರೇಯಾಲ್ ಅಕಡೆಮೀಯ ಎಂಬ ಸ್ಪ್ಯಾನಿಷ್ ವಿದ್ವನ್ಮಂಡಲಿ 1726ರಲ್ಲಿ ಪ್ರಕಟಿಸಿದ ಗ್ರಮಾಟೀಕಾ ದೆ ಲಾ ಲೆಂಗ್ವ ಕಾಸ್ಟೀಲ್ಯಾನಾ ಎಂಬ ಆರು ಸಂಪುಟಗಳ ನಿಘಂಟು-ಇವು ಮುಖ್ಯ ಕೃತಿಗಳು. ಪಾದ್ರೆ ಜೊಸೆ ಫ್ರಾನ್‍ಸಿಸ್ಕೊ ದೆ ಈಸ್ಲ ಎಂಬ ಜೆಸೂಯಿಟ್ ಪಾದ್ರಿ ಫ್ರಾಯ್ ಗೆರೂಂಡೀಯೋ (1758) ಎಂಬ ಕಾದಂಬರಿಯಲ್ಲಿ ಸ್ಪ್ಯಾನಿಷ್ ಪಾದ್ರಿಗಳನ್ನು ಪರಿಹಾಸ ಮಾಡಿದುದಲ್ಲದೆ ಗಾಂಗೋರನ ಅನುಕರಣದ ಕ್ಲಿಷ್ಟ ಬರೋಕ್ ಶೈಲಿಯನ್ನು ಅಣಕಿಸಿ ಅದನ್ನು ನಿರ್ನಾಮ ಮಾಡಿದನೆನ್ನಬಹುದು.
ಪದ್ಯ ಮತ್ತು ನಾಟಕ : ಪದ್ಯ ಲೇಖಕರಲ್ಲಿ ಮೋರಾಟೀನ್ ಮಾನ್ವೆಲ್ ಜೊಸೆ ಕೆಂಟಾನಾ (1772-1857) ಇವರನ್ನು ಉಲ್ಲೇಖಿಸಬಹುದು. ಕಾಲ್ಡೆರಾನನ ಕಾಲಾನಂತರ ಸ್ಪ್ಯಾನಿಷ್ ನಾಟಕ ಜೀವಂತವಾಗಿದ್ದರೂ ಅದರಲ್ಲಿ ಪ್ರತಿಭೆಯಾಗಲಿ ನವೀನತೆಯಾಗಲಿ ಇರಲಿಲ್ಲ. 18ನೆಯ ಶತಮಾನದ ಕೊನೆಯಲ್ಲಿ ಫ್ರೆಂಚ್ ಮಾದರಿಯಲ್ಲಿ ಲೇಯಾಂಡ್ರೊ ಫರ್ನಾಂಡೆ ದೆ ಮೋರಾಟೀನ್ (1760-1828) ಕೆಲವು ಸೊಗಸಾದ ನಾಟಕಗಳನ್ನು ಬರೆದ. ರಮೋನ್ ದೆ ಲಾ ಕ್ರೊತ್ (1731-94) ಎಂಬಾತ ಸಾಯಿನೇಟೆ ಎಂಬ ಚಿಕ್ಕ ಅಂಕವಿರಾಮ ದೃಶ್ಯಗಳಲ್ಲಿ ಮ್ಯಾಡ್ರಿಡ್ ಜನಜೀವನವನ್ನು ಚಿತ್ರಿಸಿದ.
19ನೆಯ ಶತಮಾನ : 1833ರಲ್ಲಿ 7ನೆಯ ಫರ್ಡಿನಾಂಡ್ ದೊರೆಯ ಕಾಲಾನಂತರ ದೇಶದಿಂದ ಓಡಿಹೋಗಿದ್ದ ಪ್ರಗತಿಪರ ಲೇಖಕರು ಹಿಂತಿರುಗಿ ಬಂದು ಗ್ರಂಥ ರಚನೆ ಪ್ರಾರಂಭಿಸಿದರು. ಯುರೋಪಿನಾದ್ಯಂತ ಉಕ್ಕಿಹರಿದ ರೊಮ್ಯಾಂಟಿಕ್ ಸಾಹಿತ್ಯ ಪ್ರವಾಹ ಸ್ಪೇನಿನಲ್ಲಿ ಅಷ್ಟು ಪ್ರಬಲವಾಗಲಿಲ್ಲ; ಮತ್ತು ಹೆಚ್ಚು ಕಾಲ ಉಳಿಯಲಿಲ್ಲ.
ಕಾವ್ಯ ಮತ್ತು ಪದ್ಯ ನಾಟಕ : ಡೂಕೆದೆ ರೀವಾಸ್‍ನ (1791-1865) ಪದ್ಯಗಳಲ್ಲಿ ಸ್ಪೇನಿನ ಗತವೈಭವದ ಸ್ಮರಣೆಯೂ ಶ್ಲಾಘನೆಯೂ ಕಂಡುಬರುತ್ತವೆ. ಜೊಸೆ ದೆ ಎಸ್ಟ್ರೋನ್‍ಸೇದನ (1808-42) ಪದ್ಯಗಳು ಅಂತರಂಗದ ಭಾವನೆಗಳನ್ನು ವಾಕ್‍ಪ್ರವಾಹದಲ್ಲಿ ತೋಡಿಕೊಳ್ಳುತ್ತವೆ. ಇವು ಬೈರನ್ನನ ಪದ್ಯಗಳಿಗೆ ಹೋಲಿಸಲ್ಪಟ್ಟಿವೆ. ಜೊಸೆ ತೊರ್ರೀಲ್ಯನ (1817-93) ಪದ್ಯಗಳಲ್ಲಿ ವಸ್ತು ಕಡಿಮೆಯಾದರೂ ಲಾಲಿತ್ಯ ಗುಣ, ಗೇಯತೆ ಎದ್ದು ಕಾಣುವ ಅಂಶವಾಗಿದೆ. ಈ ಮೂವರು ಲೇಖಕರು ಫ್ರೆಂಚ್ ಪ್ರಭಾವದಲ್ಲಿ ಬೆಳೆದವರು. ರಮೋನ್ ದೆ ಕಾಂಪೊಆಮೋರ್ (1817-1901) ಎಂಬ ಲೇಖಕನಲ್ಲಿ ಹೊರಗಿನ ಪ್ರಭಾವ ಕಡಿಮೆ. ಈತ ಸ್ಪೇನಿನ ಪ್ರಾಚೀನ ದೇಶೀಯ ಪ್ರಕಾರದ 4-8 ಸಾಲಿನ ಪುಟ್ಟ ಭಾವಗೀತೆಗಳನ್ನು ಬರೆದ. ಇವು ಮಾರ್ಷಲ್‍ನ ನಾಟುನುಡಿಗಳನ್ನೂ ಕೋಪ್ಲಸ್ ಡೆ ಪಾಪುಲೇರ್ಸ್ ಕವಿತೆಗಳನ್ನೂ ಹೋಲುತ್ತವೆ; ಧ್ವನಿಯಲ್ಲಿ ವ್ಯಂಗ್ಯವೂ ಭ್ರಾಂತಿ ವಿಮುಕ್ತಿ ಭಾವವೂ ಕಂಡುಬರುತ್ತವೆ. ಗುಸ್ಟಾವೊ ಅಡಾಲ್ಫೋ ಬೆಕರ್ (1836-70) ಬರೆದ ಅನಲಂಕೃತ ಶೈಲಿಯ ಪದ್ಯಗಳು ನಿರಂತರ ಮನೋವೇದನೆಯಿಂದ ತುಂಬಿವೆ. ಇವು ಸಹ ಸ್ವರೂಪದಲ್ಲಿ ಕೋಪ್ಲಸ್ ಡೆ ಪಾಪುಲೇರ್ಸ್‍ಗಳನ್ನು ಹೋಲುವುವು. ಕಾಂಟೀಗ ದೆ ಏಮೀಗೊ, ವೀಲ್ಯಾಂತೀಕೊ ಇತ್ಯಾದಿ ಜನಪದೀಯ ಹಾಡುಗಳ ಹೊಸ ರೂಪಾಂತರವಾದ ಕೋಪ್ಲಸ್ ದೆ ಪಾಪುಲೇರ್ಸ್ ಈ ಶತಮಾನದ ಒಂದು ಮುಖ್ಯ ಬೆಳೆವಣಿಗೆಯೆನ್ನಬಹುದು. 1839ರ ಮೊದಲುಗೊಂಡು ಕೋಪ್ಲಗಳ ಅನೇಕ ಬೃಹತ್ ಸಂಕಲನಗಳು ಪ್ರಕಟವಾಗಿವೆ.
ಈ ಶತಮಾನದಲ್ಲಿ ಯುರೋಪಿನ ಎಲ್ಲ ದೇಶಗಳಲ್ಲೂ ಪ್ರತಿ ಪ್ರಾಂತದ ಪ್ರಕೃತಿ ಮತ್ತು ಜನಜೀವನವನ್ನು ವರ್ಣಿಸುವ ಪ್ರಾದೇಶಿಕ ಸಾಹಿತ್ಯದ ರಚನೆಯಾಯಿತು. ಈ ಮನೋಧರ್ಮ 20ನೆಯ ಶತಮಾನವನ್ನು ಪ್ರವೇಶಿಸಿತು. ಸಾಲ್ವಡೋರ್ ರುವೇದ ಇ ಸಾಂಟೋಸ್ (1857-1933) ಆಂಡಲೂಷಿಯವನ್ನೂ ವಿಸಾಂಟೆ ಮೇಡೀನಾ (1866-1936) ಮೂರ್ಷಿಯ ಪ್ರಾಂತವನ್ನೂ ಜೊಸೆ ಮರೀಯ ಗಾಬ್ರಿಯೇಲ್ ಇ ಗಾಲಾನ್ (1870-1905) ಸ್ಯೇರ್ರಾ ದೆ ಗ್ರೇಡೋಸ್ ಎಂಬ ಬೆಟ್ಟ ಸೀಮೆಯನ್ನೂ ರೋಸಾಲ್ಯಾ ಕಾಸ್ಟ್ರೊ (1837-85), ಎಡ್ವರ್ಡೊ ಪೋಂಡೋಲ್ (1835-1917) ಮತ್ತು ಕುರ್ರೋಸ್ ಎನ್ರಿಕೇಸ್ (1851-1908) - ಇವರು ಗಾಲೀಷಿಯವನ್ನೂ ಕುರಿತು ಬರೆದರು. ಕ್ಯಾಟಲೋನಿಯ ಪ್ರಾಂತದಲ್ಲಂತೂ ಒಂದು ವಿಶಿಷ್ಟ ಸಾಹಿತ್ಯವೇ ಸೃಷ್ಟಿಯಾಯಿತು.
ಗದ್ಯ ಸಾಹಿತ್ಯ : ಸ್ಪ್ಯಾನಿಷ್ ಕಾದಂಬರಿ ಸಾಹಿತ್ಯದಲ್ಲಿ ಪೂರ್ವ ದಿಂದಲೂ ಬಂದಿದ್ದ ವಾಸ್ತವಿಕ ಚಿತ್ರಣದ ಮನೋಧರ್ಮ ರೊಮ್ಯಾಂಟಿಕ್ ಯುಗದಲ್ಲಿ ಕುಂಠಿತವಾಗಿ, ಮತ್ತೆ 1850ರ ವೇಳೆಗೆ ಫರ್ನಾನ್ ಕಾಬಲ್ಯೇರೊ (1796-1877) ಎಂಬಾಕೆಯ ಲಾ ಗಾವಿಯೋಟ ಎಂಬ ಗ್ರಂಥದಲ್ಲಿ ಪುನರಾರಂಭವಾಯಿತು. ಈ ಬಗೆಯ ಬರೆವಣಿಗೆಯಲ್ಲಿ ಎರಡು ರೀತಿಯನ್ನು ಗುರುತಿಸಬಹುದು: ಯಾವುದೇ ಒಂದು ಪ್ರಾಂತದ ಅಥವಾ ಸಮಾಜವರ್ಗದ ಜನಜೀವನದ ನೈಜ ಚಿತ್ರಣ ಕೊಡುವುದು; ವ್ಯಕ್ತಿ ಮತ್ತು ಅವನ ಸಮಸ್ಯೆಗಳನ್ನು ಮನೋವೈe್ಞÁನಿಕ ರೀತಿಯಲ್ಲಿ ಚಿತ್ರಿಸುವುದು. ಮೊದಲನೆಯ ಪ್ರಕಾರದಲ್ಲಿ ಜೊಸೆ ಮರೀಯ ದೆ ಪೆರೇದ (1833-1906) ತನ್ನ ಲಾ ಮಾಂಟಾನ ಪ್ರಾಂತದ ಜನಜೀವನವನ್ನೂ ಏಮೀಲ್ಯ ಪಾರ್ಡೊ ಬತಾನ್ ಎಂಬಾಕೆ ಗಾಲೀಷಿಯದ ಜನಜೀವನವನ್ನೂ ಆರ್ಮಾಂಡೋ ಪೇಲೇತ್ಯೊ ವಾಲ್ಡೇಸ್ (1853-1938) ಎಂಬಾತ ಆಸ್ಟೊರಿಯ ಪ್ರಾಂತದ ಹಳ್ಳಿಯೊಂದರ ಜೀವನ ಮತ್ತು ಸೇವಿಲ್ ನಗರದ ಜೀವನವನ್ನೂ ವಿಸಾಂಟೆ ಬ್ಲಾಸ್ಕೋ ಇ ಬಾನ್ಯೆತ್ ಎಂಬಾತ (1867-1928) ವಾಲೇಷಿಯ ಮತ್ತು ಇತರ ಪ್ರಾಂತಗಳ ವಿವಿಧ ವರ್ಗಗಳ ಜನಜೀವನವನ್ನೂ ಚಿತ್ರಿಸಿರುವರು. ಎರಡನೆಯ ಪ್ರಕಾರದಲ್ಲಿ ಪೇಡ್ರೊ ಆಂಟೋನ್ಯೊ ದೆ ಆ ಲಾರ್ಕಾನ್ (1833-91) ಮುಖ್ಯವಾಗಿ ಎಲ್ ಸೊಂಬೆರೊ ದೆ ಟ್ರೆ ಪಿಕೊ ಎಂಬ ಖಳ ಕಾದಂಬರಿ- ಯಿಂದಲೂ ಕ್ಲಾರೀನ್ ಎಂಬ ಅಂಕಿತದಲ್ಲಿ ಬರೆದ ಲೇಯೊಪಾಲ್ಡೊ ಆಲಾಸ್ (1851-1901) ಎಂಬ ವಿಮರ್ಶಕ ಅನುಭಾವ ಜೀವನಕ್ಕೂ ಅನುರಾಗಕ್ಕೂ ಇರಬಹುದಾದ ಸಂಬಂಧವನ್ನು ಚಿಂತಿಸುವ ಲಾ ರೇಗೆಂಟಾ ಎಂಬ ಕೃತಿಯಿಂದಲೂ ಗಾಸಿಂಟೋ ಓಕ್ವಾವಿಯೊ ಪಿಕೋನ್ ಎಂಬಾತ ಲಾಗಾರೊ ಎಂಬ ಕೃತಿಯಿಂದಲೂ ಕಾದಂಬರಿ ಕ್ಷೇತ್ರದಲ್ಲಿ ಹೆಸರಾಗಿರುವನು.
ಕಾದಂಬರಿ ಕ್ಷೇತ್ರದ ಪ್ರಮುಖ ಲೇಖಕರು ಜುಆನ್ ವಾಲೇರಾ (1824-1905) ಮತ್ತು ಬೆನೀಟೋ ಪೇರೆತ್ ಗಾಲ್ಡೋಸ್ (1843-1912) ಮಾರ್ಸೆಲೀನೊ ಮೇನೆಂಡೆತ್ ಇ ಪೇಲಾಯೊ (1856-1912) ಇವರನ್ನು ಬಿಟ್ಟರೆ ವಾಲೇರಾ ಈ ಕಾಲದ ಅತ್ಯುತ್ತಮ ಸ್ಪ್ಯಾನಿಷ್ ವಿಮರ್ಶಕನೂ ಹೌದು. ಗಾಲ್ಡೋಸ್‍ನ ಕೃತಿಗಳು ಯುರೋಪಿನ ಸಾಹಿತ್ಯದಲ್ಲಿ ಡಿಕನ್ಸ್, ಬಾಲ್ಜಾಕ್, ಟಾಲ್ಸ್‍ಟಾಯ್ ಮುಂತಾದವರ ಉಚ್ಚ ವರ್ಗದ ಕೃತಿಗಳಿಗೆ ಸಮಾನವಾಗಿವೆ.
20ನೆಯ ಶತಮಾನ : 20ನೆಯ ಶತಮಾನದ ಆರಂಭದ ವೇಳೆಗೆ ಸ್ಪ್ಯಾನಿಷ್ ಸಾಹಿತ್ಯ ಒಂದು ನಿರ್ದಿಷ್ಟ ಗುರಿಯೆಡೆಗೆ ಮುನ್ನಡೆಯಲು ಉಪಕ್ರಮಿಸಿತ್ತು. ರಾಷ್ಟ್ರದ ಸುಪ್ತಚೇತನ ಯಾವುದು, ರಾಷ್ಟ್ರದ ಅಧೋಗತಿಗೆ ಕಾರಣಗಳೇನು ಎಂಬ ವಿಚಾರಪರತೆ ಅಲ್ಲಿ ಮೂಡುತ್ತಿತ್ತು. ಇದು ಲಾರ್ರಾ, ಗಾಲ್ಡೋಸ್, ಆಲಾಸ್ ಮುಂತಾದವರಲ್ಲಿ ಆಗಲೇ ಕಾಣಿಸಿಕೊಂಡಿತ್ತು. ಜೊಸೆ ಒರ್ಟೀಗ ಇ ಗಾಸೆಟ್‍ನ (1883) ಆರಂಭದ ಕೃತಿಗಳು ವಿಮರ್ಶೆ ಮತ್ತು ಮನೋವಿe್ಞÁನ ಕುರಿತವು. ಈತನ ಪ್ರಸಿದ್ಧ ಕೃತಿ ಬೆನ್ನೆಲುಬಿಲ್ಲದ ಸ್ಪೇನ್ ರಾಜಕೀಯ ಸಿದ್ಧಾಂತವನ್ನು ಚರ್ಚಿಸುವ ಕೃತಿ. ತತ್ತ್ವಶಾಸ್ತ್ರ, ವಿe್ಞÁನ ವಿಷಯಗಳನ್ನು ಕುರಿತು ಈತ ಉಜ್ವಲ ವಿಚಾರಪರ ಲೇಖನಗಳನ್ನು ಬರೆದಿದ್ದಾನೆ. ಈತನ ಮನೋಧರ್ಮ ಜರ್ಮನಿಯ ಕಾಂಟ್ ತತ್ತ್ವಗಳ (ಪಾಶ್ಚಾತ್ಯ) ಪ್ರಭಾವ ತೋರಿದರೆ, ಮಿಗೆಲ್ ದೆ ಊನ ಮೂನೊ (1864-1936) ಎಂಬ ಲೇಖನದಲ್ಲಿ ಪೌರಸ್ತ್ಯ ಆಧ್ಯಾತ್ಮಿಕ ಪ್ರವೃತ್ತಿ ಎದ್ದು ಕಾಣುತ್ತದೆ. ಸ್ಪೇನಿನ ಅನುಭಾವ ಸಾಹಿತ್ಯವನ್ನು ಈತ ಮುಂದುವರಿಸಿದ. ಈತನ ಗಮನವಿರುವುದು ಮಾನವನಿಗೂ ಸೃಷ್ಟಿಗೂ ಇರುವ ಪರಸ್ಪರ ಸಂಬಂಧವೇನು ಎಂಬ ಪ್ರಶ್ನೆಯಲ್ಲಿ. ಜೀವನದ ಬಗ್ಗೆ ಪರಿತಾಪ ದೃಷ್ಟಿ ಎಂಬ ತಾತ್ವಿಕ ಗ್ರಂಥದಲ್ಲಿ ಇದೇ ಪ್ರಶ್ನೆಯ ವಿಮರ್ಶೆಯಿದೆ. ವಿದ್ವತ್ತಿನ ಕ್ಷೇತ್ರದಲ್ಲಿ ರಮೋನ್ ಮೆನೇಂಡೆತ್ ಪೀಡಾಲ್‍ಗಾರ್ತಿಯ ಗೋಮೆತ್ ಎಂಬವನ ಹೆಸರನ್ನು ಇಲ್ಲಿ ಉಲ್ಲೇಖಿಸಬಹುದು. ಆದೋರೀನ್ ಎಂಬ ಕಾವ್ಯನಾಮದಲ್ಲಿ ಬರೆದ ಜೊಸೆ ಮಾರ್ಟೀನೆತ್ ರೂಈತ್ ತನ್ನ ಕವನ ಮತ್ತು ಪ್ರಬಂಧಗಳಲ್ಲಿ ಸ್ಪ್ಯಾನಿಷ್ ಗ್ರಾಮ ಜೀವನದ ದೃಶ್ಯಗಳನ್ನು ಸುಂದರವಾಗಿ ಚಿತ್ರಿಸಿದುದೇ ಅಲ್ಲದೆ ರಾಷ್ಟ್ರೀಯ ಆಂತರ್ಯವನ್ನು ವಿಶ್ಲೇಷಿಸಲು ಯತ್ನಿಸಿದ್ದಾನೆ ಕೂಡ.
ಕಾದಂಬರಿ ಸಾಹಿತ್ಯ : ಈ ಶತಮಾನದ ಅತ್ಯಂತ ಜನಪ್ರಿಯ ಕಾದಂಬರಿಕಾರ ಪೀಯೋ ಬರೋಹ. ಈತನಿಗೆ ಕ್ರೈಸ್ತಮತದಲ್ಲಿ ಜುಗುಪ್ಸೆಯೂ ವೈe್ಞÁನಿಕ ಸತ್ಯಾನ್ವೇಷಣೆಯಲ್ಲಿ ಆದರವೂ ಇದ್ದುವು. ಇವನ ಬಹುಪಾಲು ಕಥೆಗಳು ಸೋಲು, ಆಶಾಭಂಗ ಅಥವಾ ಭ್ರಾಂತಿಯಲ್ಲಿ ಮುಕ್ತಾಯವಾಗುತ್ತವೆ. ಕೋಂಚಾ ಎಸ್ಪೀನ್ಯಳ ಕಾದಂಬರಿ ಗಳಲ್ಲಿ ಮನೋವೈe್ಞÁನಿಕ ಪರಿe್ಞÁನವಿದೆ. ಕವಿ ಮತ್ತು ವಿಮರ್ಶಕ ರಮೋನ್ ಪೇರೆತ್ ದೆ ಆಯಾಲಾ ಬರೆದ ಅನೇಕ ಕಾದಂಬರಿಗಳಲ್ಲಿ ಅತ್ಯುತ್ತಮವಾದವೆಂದರೆ ನೊವಾಲಾಸ್ ಪೊಯೆಮ ಟಿಕಾಸ್ ದೆ ಲಾ ವಿದಾ ಎಸ್ಪಾನೊಲಾ (1916) ಬಾಲಾರೀಮೊ ಮತ್ತು ಅಪೊಲೋನಿಯೊ (1921). ಲೂಯಿಸ್ ಆರಾಕಿಸ್ಟಾಯಿನ್ ಬರೆದ ಮಾರವಿಲ್ಯೋಸೊ ದ್ವೀಪಗಳು (1923), ಮಾಡರ್ಯಾಗೊ ಬರೆದ ಲಾ ಗಿರಾಫ ಸಗ್ರಾದಾ - ಈ ಕೃತಿಗಳು ಯುಪಿಯ ಮಾದರಿಯ ಕಾದಂಬರಿಗಳಾಗಿವೆ.
ನಾಟಕ ಸಾಹಿತ್ಯ : ಈ ಶತಮಾನದಲ್ಲಿ ಸ್ಪ್ಯಾನಿಷ್ ನಾಟಕ ಚೇತನ ಗೊಂಡಿತು. ಗಾತಿಂಟೊ ಬೇನವೇಂಟೆ ಮತ್ತು ಇಬ್ಬರು ಆಲವಾರೆತ್ ಕಿಂಟೇರೊ ಸಹೋದರರು ಈ ಕಾಲದ ಪ್ರಮುಖ ನಾಟಕಕಾರರು. ಬೇನವೇಂಟೆಯ ಕೃತಿಗಳು ವ್ಯಂಗ್ಯ-ವಿಡಂಬನಾತ್ಮಕ ಹರ್ಷ ನಾಟಕಗಳು. ಕಲಾ ದೃಷ್ಟಿಯಿಂದ ಒಂದೇ ಮಟ್ಟದ ಔನ್ನತ್ಯ ಮುಟ್ಟದಿದ್ದರೂ ಸಂಭಾಷಣೆ ಮತ್ತು ಬೌದ್ಧಿಕ ವಿಶ್ಲೇಷಣೆಯಲ್ಲಿ ಉಜ್ವಲವಾಗಿವೆ. ಕಿಂಟೇರೊ ಸಹೋದರರು ಆಂಡಲೂಷಿಯದ ಸ್ಥಳೀಯ ಜನಜೀವನವನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಮಾರ್ಟೇನೆತ್ ಸ್ಯೇರ್ರಾ ಎಂಬ ಕಾವ್ಯನಾಮದಲ್ಲಿ ಬರೆದ ದಂಪತಿಗಳ ಕೃತಿಗಳಲ್ಲಿ ಕೌಶಲವೂ ಸೂಕ್ಷ್ಮ ಮನೋ ವೈe್ಞÁನಿಕ ಪರಿe್ಞÁನವೂ ಕಂಡುಬರುತ್ತವೆ. ಪೀನಿಲ್ಯೋಸ್ ತನ್ನ ಕೃತಿಗಳಲ್ಲಿ ಸಾಮಾಜಿಕ ಘರ್ಷಣೆಗಳನ್ನು ಚಿತ್ರಿಸಿದ್ದಾನೆ. ರಮೋನ್ ಡೆಲ್ ವಾಲ್ಯೆ ಇನ್ ಕ್ಲಾನ್ ಮುಂತಾದವರು ಪದ್ಯ ನಾಟಕಗಳನ್ನು ಮುಂದುವರಿಸಿದರು. ಸ್ಪೇನಿನಲ್ಲಿ ಕಿರುನಾಟಕ (ಗೇನೆರೊ ಚೀಕೊ) ವಿಶಿಷ್ಟವಾದುದು. ಈ ಪ್ರಕಾರ ಕೇವಲ ವಿನೋದ ದೃಶ್ಯಗಳಿಂದ ಹಿಡಿದು ಘನತರ ಸಂಗೀತ ನಾಟಕಗಳವರೆಗೆ ವೈವಿಧ್ಯಮಯವಾಗಿದೆ. 1922ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದ ಜಾಕಿಂಟೊ ಬೇನವೇಂಟೆಯ ಬಾಂಡ್ಸ್ ಆಫ್ ಇಂಟ್ರೆಸ್ಟ್ (1907), ದಿ ಪ್ಯಾಶನ್ ಪ್ಲವರ್(1913) - ಈ ನಾಟಕಗಳು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ ಗಮನಾರ್ಹ ಕೃತಿಗಳು.
ಪದ್ಯ ಸಾಹಿತ್ಯ : ಈ ಶತಮಾನದ ಸ್ಥಿತ್ಯಂತರದ ವೇಳೆ ಪದ್ಯದಲ್ಲಿ ದೇಶೀಯ ಸಂಪ್ರದಾಯ ಮತ್ತು ಪರದೇಶಗಳ ಮಾದರಿಗಳು ಎದ್ದು ಕಾಣುತ್ತಿದ್ದವು. ಮೊದಲನೆಯದೇ ಪ್ರಬಲವಾದುದಾದರೂ ಎರಡನೆ ಯದೂ ವಿಸ್ತರಿಸುತ್ತ ಬಂತು. ಮೊದಲ ಬಗೆಯಲ್ಲಿ ಊನಮೂನೊ, ಆಂಟೋನ್ಯೊ ಮೆಜಾಡೊ, ಸಾಲ್ವಡೋರ್ ದೆ ಮಾಡರ್ಯಾಗೊ ಮತ್ತು ಆದೋರಿನ್ _ ಇವರ ಹೆಸರನ್ನೂ ಎರಡನೆಯ ಬಗೆಯಲ್ಲಿ ರೂಬೇನ್ ಡಾರೀಯೊ, ಮಾನ್ವೆಲ್ ಮೆಚಾಡೊ, ಜುಆನ್ ರಮೋನ್ ಹಿಮೇನೆಡ್, ರಮೋನ್ ಪೇರೆತ್ ದೆ ಆಯಾಲಾ, ರಮೋನ್ ಡೆಲ್‍ವಾಲೆ-ಇನ್‍ಕ್ಲಾನ್- ಇವರ ಹೆಸರನ್ನೂ ಉಲ್ಲೇಖಿಸಬಹುದು. ಆಂಟೋ ನ್ಯೊ ಮೆಚಾಡೊ ಬರೆದ ಸೋಲಿ ಡಾ ಡೇಸ್ (ಏಕಾಂತ ಪ್ರದೇಶಗಳು) ಮತ್ತು ಕಾಂಪೋಸ್ ಡೆ ಕಾಸ್ಟೀಲ್ಯೊ (ಕಾಸ್ಟೀಲಿನ ಹುಲ್ಲುಗಾವಲುಗಳು) ಎಂಬ ಉತ್ತಮ ಕಾವ್ಯಗಳಲ್ಲಿಯೂ ಕೆಲವು ಸುಂದರ ಶೋಕಗೀತೆಗಳಲ್ಲಿಯೂ ಮಧ್ಯ ಸ್ಪೇನಿನ ಪ್ರಕೃತಿ ಚಿತ್ರಣ ಕವಿಹೃದಯದ ಪ್ರಶಾಂತ ನಿರಾಶಾವಾದದಲ್ಲಿ ಸಮ್ಮಿಳಿತವಾಗಿದೆ. ಗಾರ್ಸಿಯ ಲೋರ್ಕ (1899-1936) ಮತ್ತು ಎರ್ನಾಂಡೆತ್ (1910-42) - ಇವರ ಪದ್ಯಗಳು ಸ್ಪ್ಯಾನಿಷ್ ಸಾಹಿತ್ಯದ ಪರಂಪರೆಯನ್ನೇ ಅವಲಂಬಿಸಿವೆ. ರುಬೇನ್ ಡಾರೀಯೊ ಎಂಬಾತ ನಿಕರಾಗುವ ದೇಶದವನು. ಸ್ಪೇನಿಗೆ ಫ್ರೆಂಚ್ ಸಾಂಕೇತಿಕ (ಸಿಂಬಲಿಸ್ಟ್) ಕಾವ್ಯದ ಪ್ರಭಾವ ತಂದು ಲೌಕಿಕ ಪದ್ಯಗಳು (1896) ಎಂಬ ಗ್ರಂಥದಿಂದ ನವ್ಯಕಾವ್ಯದ ಸ್ಥಾಪಕನೆಸಿಕೊಂಡ. ಈತನ ಭೋಗವಾದ ಮತ್ತು ಆಜ್ಞೇಯ ವಾದಗಳು ಸ್ಪ್ಯಾನಿಷ್ ಸಾಹಿತ್ಯಕ್ಕೆ ಒಂದು ಹೊಸ ವ್ಯಕ್ತಿತ್ವದ ಪರಿಚಯ ಮಾಡಿಕೊಟ್ಟವು. ಹಿಮೇನೆದ್ ನ ಮೊದಲ ಕವನಗಳಲ್ಲಿ (1903-08) ಮ್ಯಾಟರ್‍ಲಿಂಕ್, ರಾಸೆಟಿ ಮತ್ತು ಬೆಕರ್ ಕವಿಗಳ ಪ್ರಭಾವವೂ ಅನಂತರದ ಕೃತಿಗಳಲ್ಲಿ ವಾಲ್ಟ್‍ವಿಟ್‍ಮನ್‍ನ ಸ್ವಚ್ಛಂದ ಕಾವ್ಯದ ಪ್ರಭಾವವೂ ಕವಿಯ ಸ್ವತಂತ್ರ ವ್ಯಕ್ತಿತ್ವದೊಡನೆ ಸಮ್ಮಿಳಿತವಾಗಿರುವುವು. ಲೋರ್ಕನಂಥ ಸ್ವತಂತ್ರ ಕವಿಯ ಶೈಲಿಯಲ್ಲಿಯೂ ಕೆಲವು ಕಡೆ ಹಿಮೇನೆದ್‍ನ ಪ್ರಭಾವವಿರುವುದನ್ನು ಗುರುತಿಸಬಹುದಾಗಿದೆ.
ಇಂದಿನ ಸಾಹಿತ್ಯ : ಸ್ಪ್ಯಾನಿಷ್ ಅಂತರ್ ಯುದ್ಧಾನಂತರ (1936-39) ಸ್ಪ್ಯಾನಿಷ್ ಸಾಹಿತ್ಯಕ್ಕೆ ಹೊಸ ಚಾಲನೆಯೊಂದು ದೊರಕಿತು. ಈ ಕಾಲದಲ್ಲಿ ಅನೇಕ ಲೇಖಕರು ಹುತಾತ್ಮರಾದರೆ, ಇನ್ನು ಕೆಲವರು ಗಡಿಪಾರಾದರು. ಹಾಗಾಗಿ ಸಾಹಿತ್ಯಕ ಚಟುವಟಿಕೆಗೆ ಹೊಸ ಆಯಾಮ ದೊರಕಿತಾದರೂ ಅದು ಬೇರೂರಲು ಕಾಲಾವಕಾಶ ಬೇಕಾಯಿತು. ಕ್ಯಾಮಿಲೊ ಜೋಸ್ ಸೆಲಾನ ದಿ ಪ್ಯಾಮಿಲಿ ಆಫ್ ಪಾಸ್ಕಲ್ ಡ್ಯೂಯರ್ಟ್ (1942) ಮತ್ತು ದಿ ಹೈವ್(1951), ಕಾರ್‍ಮನ್ ಲಾಫರೆಟ್‍ನ ನದಾ(1944)-ಇವು ಈ ಅವಧಿಯ ಬಹುಮುಖ್ಯ ಕಾದಂಬರಿಗಳೆನ್ನಬಹುದು. ಮಿಗೆಲ್ ಡೆಲಿಬೆಸ್, ರಾಫೆಲ್ ಫೆರ್‍ಲೋಸಿಯೊ, ಜೋಸ್ ಮರಿಯ ಗ್ರೊನೆಲ್ಲ, ಜೂನ್ ಗೈಟಿಸೊಲೊ-ಇವರ ಕಾದಂಬರಿಗಳು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದುವು. ನಾಟಕ ರಂಗದಲ್ಲಿ ಆಂಟೋನಿಯೊ ಬೂರೊ ವೆಲ್ಲೆಜೊ ಮತ್ತು ಆಲ್ಪೊನ್ಸೊ ಸಾತ್ರ್ರೆಯ ತಾತ್ವಿಕ ನಾಟಕಗಳು, ಆಲ್ಪೊನ್ಸೊ ಪಾಸೋನ ಸಾಮಾಜಿಕ ನಗೆನಾಟಕಗಳು ಗಮನಾರ್ಹ ಕೃತಿಗಳಾಗಿವೆ. (ಎಂ.ಕೆ.ಕೆ.)