ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಲಾವಿಕ್ ಭಾಷಾವರ್ಗ

ವಿಕಿಸೋರ್ಸ್ದಿಂದ

ಸ್ಲಾವಿಕ್ ಭಾಷಾವರ್ಗ

ಇಂಡೊಯುರೊಪಿಯನ್ ಭಾಷಾಪರಿ ವಾರದ ಸೆತುಮ್ ಗುಂಪಿಗೆ ಸೇರಿದ ಭಾಷಾವರ್ಗ. ಸ್ಲಾವೋನಿಕ್ ಭಾಷಾವರ್ಗವೆಂತಲೂ ಕರೆಯುವರು. ಇದರಲ್ಲಿ ಮೂರು ವಿಭಾಗಗಳಿವೆ: 1 ಪೂರ್ವ ಸ್ಲಾವಿಕ್: ರಷ್ಯನ್, ಬೈಲೊರಷ್ಯನ್ ಮತ್ತು ಉಕ್ರೇನಿಯನ್ 2 ಪಶ್ಚಿಮ ಸ್ಲಾವಿಕ್: ಚೆಕ್, ಸ್ಲೊವಾಕ್, ಸೊರ್ಬಿಯನ್ ಮತ್ತು ಪೋಲಿಷ್. 3 ದಕ್ಷಿಣ ಸ್ಲಾವಿಕ್: ಬಲ್ಗೇರಿಯನ್, ಮೆಸಿಡೋನಿಯನ್, ಸರ್ಬೋಕ್ರೋಟ್ ಮತ್ತು ಸ್ಲೋತಿನ್. ಈ ವರ್ಗಕ್ಕೆ ಸೇರಿದ ಭಾಷೆಗಳು ರಷ್ಯ, ಪೋಲೆಂಡ್, ಗಾಲೀಷಿಯ, ಆಸ್ಟ್ರಿಯ, ಬೊಹೆಮಿಯ, ಮೊರಾವಿಯ, ಬಲ್ಗೇರಿಯ, ಸ್ಲಾವೋನಿಯ ಮುಂತಾದ ಕಡೆ ಹರಡಿಕೊಂಡಿವೆ.

ಪೂರ್ವ ಸ್ಲಾವಿಕ್ ಭಾಷೆಗಳಲ್ಲಿ ರಷ್ಯನ್ ಭಾಷೆ ಪ್ರಮುಖವಾದದ್ದು. ಇದರಿಂದಲೇ ವಿಕಾಸಗೊಂಡ ಮಹಾರಷ್ಯನ್, ಶ್ವೇತರಷ್ಯನ್, ಕಿರಿಯ ರಷ್ಯನ್ ಅಥವಾ ಬೈಲೊರಷ್ಯನ್, ಆಧುನಿಕ ರಷ್ಯನ್ ಎಂಬ ರೂಪಗಳೂ ಮುಖ್ಯವಾಗಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಲ್ಲಿ ಚೆಕ್ ಮತ್ತು ಪೋಲಿಷ್ ಭಾಷೆಗಳು ಹೆಸರಾಂತ ಭಾಷೆಗಳು. ಚೆಕ್ ಭಾಷೆಯಿಂದ ಕುಷ್‍ಬಿಯನ್, ಉಸ್ತಿಯನ್, ಸೊರ್ಬಿಯನ್, ಸ್ಲೊಬೇಕಿಯನ್‍ಗಳು ವಿಕಾಸಗೊಂಡಿವೆ. ಪೋಲಿಷ್ ಭಾಷೆಯನ್ನು ಪೊಲಾಬಿಸ್ ಎಂತಲೂ ಕರೆಯುವರು. ಪೋಲೆಂಡ್, ಜರ್ಮನಿ ಮೊದಲಾದ ರಾಷ್ಟ್ರಗಳಲ್ಲಿ ಈ ಭಾಷೆಯನ್ನು ಮಾತಾಡುವವರಿದ್ದಾರೆ. ಸ್ಲೊವಾಕ್ ಭಾಷಾರೂಪ ಹಂಗರಿ, ಸ್ಲಾವಿಯ, ಚೆಕೊಸ್ಲೊವಾಕಿಯ ದೇಶಗಳಲ್ಲಿ ಬಳಕೆಯಲ್ಲಿದೆ. ದಕ್ಷಿಣ ಸ್ಲಾವಿಕ್ ಭಾಷೆಗಳ ಪೈಕಿ ಬಲ್ಗೇರಿಯನ್ ಭಾಷೆ ಪ್ರಮುಖವಾದುದು. ಪ್ರಾಚೀನ ಬಲ್ಗೇರಿಯನ್ ಭಾಷೆಯನ್ನು ಚರ್ಚ್‍ಸ್ಲಾವಿಕ್ ಎಂಬ ಹೆಸರಿನಿಂದ ವ್ಯವಹರಿಸುತ್ತಾರೆ. ಇದರಲ್ಲಿ ಬೇರೆ ಬೇರೆ ರೂಪಗಳುಂಟು. ಬಲ್ಗೇರಿಯ, ತುರ್ಕಿ, ರೊಮೇನಿಯ, ಹಂಗರಿ, ಗ್ರೀಸ್ ದೇಶದ ಅನೇಕ ಪ್ರಾಂತಗಳಲ್ಲಿ ಬಲ್ಗೇರಿಯನ್ ಬಳಕೆಯಲ್ಲಿದೆ.

ಇವು ಇಂಡೊಯುರೊಪಿಯನ್ ಪರಿವಾರಕ್ಕೆ ಸೇರಿದ ಭಾಷೆಗಳು. ಇವು ಬಾಲ್ಟಿಕ್ ಭಾಷೆಗಳನ್ನು ಹೆಚ್ಚು ಹೋಲುತ್ತವೆ. ಈ ಕಾರಣದಿಂದ ಎರಡುವರ್ಗದ ಭಾಷೆಗಳನ್ನು ಕೆಲವು ವಿದ್ವಾಂಸರು ಬಾಲ್ಟೋಸ್ಲಾವಿಕ್ ಭಾಷೆಗಳು ಎಂದು ಹೆಸರಿಸಿಕೊಂಡಿದ್ದಾರೆ. ಬಾಲ್ಟಿಕ್ ಭಾಷೆಗಳು ಬಾಲ್ಟಿಕ್ ಸಮುದ್ರದ ತೀರಪ್ರದೇಶದಲ್ಲಿ ಬಳಕೆಯಲ್ಲಿದ್ದರೆ ಸಲಾವೋನಿಕ್ ಭಾಷೆಗಳು ಪೂರ್ವಯುರೋಪಿನ ಬೇರೆಬೇರೆ ಭಾಗಗಳಲ್ಲಿಯು ಬಳಕೆಯಲ್ಲಿವೆ. ರಷ್ಯ, ಪೋಲೆಂಡ್, ಗಾಲೀಷಿಯ, ಆಸ್ಟ್ರಿಯ, ಬೊಹೆಮಿಯ, ಮೊರಾವಿಯ, ಸರ್ಬಿಯ, ಸ್ಲಾವೋನಿಯ, ಬಲ್ಗೇರಿಯ, ಯೂಗೋಸ್ಲಾವಿಯ ಮುಂತಾದ ಕಡೆಗಳಲ್ಲಿ ಸ್ಲಾವೋನಿಕ್ ಭಾಷೆಗಳು ಹೆಚ್ಚು ಬಳಕೆಯಲ್ಲಿವೆ. ಸ್ಲಾವೋನಿಕ್ ಭಾಷೆಗಳಲ್ಲಿ ಬಹು ಪ್ರಾಚೀನ ಸಾಹಿತ್ಯ ದೊರೆಯುವುದು. ಮಹಾರಷ್ಯನ್ ರಷ್ಯದ ಬಹುಮುಖ್ಯ ಭಾಷೆ. ಈ ಭಾಷೆಯ ಪ್ರಭಾವ ಸ್ಲಾವೋನಿಕ್ ಭಾಷೆಗಳಲ್ಲಿ ಕಂಡುಬರುವುದು. ಮಹಾರಷ್ಯನ್ ಅಥವಾ ಹಿರಿಯರಷ್ಯನ್ ಭಾಷೆಯು ಮಾಸ್ಕೋ ಸುತ್ತಮುತ್ತಲ ಪ್ರದೇಶದಲ್ಲಿ ಕಂಡುಬರುವುದು. ಇದನ್ನೇ ಶ್ವೇತ ರಷ್ಯನ್ ಎಂತಲೂ ಕರೆಯುವರು. ರಷ್ಯದ ದಕ್ಷಿಣ ಭಾಗದಲ್ಲಿ ಇದರ ಬಳಕೆ ಹೆಚ್ಚು. ಕಿರಿಯ ರಷ್ಯನ್ ಭಾಷೆಯನ್ನು ಕೆಲವರು ಉಕ್ರೇನಿಯನ್ ಎಂತಲೂ ಕರೆಯುವರು. ಆದರೆ ಉಕ್ರೇನಿಯನ್ ಭಾಷೆ ಇದರಿಂದ ತುಂಬ ಪ್ರಭಾವಿತಗೊಂಡಿದೆ. ಉಕ್ರೇನಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಕಿರಿಯ ರಷ್ಯನ್ ಬಳಕೆಯಲ್ಲಿದೆ. ಉಕ್ರೇನಿಯನ್ ಭಾಷೆಯಲ್ಲಿ ಕೆಲವು ಉಪಭಾಷೆಗಳಿವೆ. ಇವುಗಳಲ್ಲಿ ರುಥೇನಿಯನ್ ಬಹುಮುಖ್ಯವಾದುದು. ಇದು ಆಸ್ಟ್ರಿಯ, ಗಾಲೀಷಿಯ ಮುಂತಾದ ಕಡೆಗಳಲ್ಲಿ ಕಂಡುಬರುವುದು. ಬೈಲೊರಷ್ಯನ್ ಭಾಷೆಗೆ ಇದು ತುಂಬ ಹತ್ತಿರವಾದುದು. ರಷ್ಯದ ಮಹಾಕ್ರಾಂತಿಯ ಅನಂತರ ಮಹಾರಷ್ಯನ್ ಭಾಷೆಯಲ್ಲಿ ವಿಶಿಷ್ಟವಾದ ಸಾಹಿತ್ಯ ಆರಂಭಗೊಂಡಿತು. ಚೆಕೊಸ್ಲೊವಾಕಿಯದ ಚೆಕ್‍ಭಾಷೆ, ಬೊಹೆಮಿಯದ ಬೊಹೆಮಿಯನ್ ಭಾಷೆ ಮುಂತಾದ ಭಾಷೆಗಳಲ್ಲಿ ಇದರ ಪ್ರಭಾವ ಕಂಡುಬರುವುದು. ಪ್ರಾಚೀನ ಬೊಹೆಮಿಯನ್ ಭಾಷೆಯನ್ನೇ ಕೆಲವರು ಜೆಕ್ ಭಾಷೆ ಎಂತಲೂ ಕರೆಯುತ್ತಿದ್ದಾರೆ. ಬೊಹೆಮಿಯನ್ ಭಾಷೆ ಸ್ಲೊಬೆಕಿಯನ್ ಎಂಬ ಉಪಭಾಷೆಯನ್ನೂ ಹೊಂದಿದೆ. ಇದನ್ನು ಉತ್ತರ ಹಂಗೇರಿ ಮತ್ತು ಪ್ರಸ್‍ಬರ್ಗ್, ಕಾರ್ಪೇಥಿಯನ್ ಮುಂತಾದವುಗಳ ಮಧ್ಯಭಾಗದಲ್ಲಿ ಬಳಸುವರು. ಜೆಕ್ ಭಾಷೆಯು ಸೊರ್ಬಿಯನ್ ಎಂಬ ಉಪಭಾಷೆಯನ್ನು ಹೊಂದಿದೆ. ಇದನ್ನು ಕೆಲವರು ಸಾರೋಬಿಯನ್ ಎಂತಲೂ ಕರೆಯುವರು. ಇದರ ದಕ್ಷಿಣ ಭಾಗದಲ್ಲಿ ಬಲ್ಗೇರಿಯನ್ ಭಾಷೆ ಬಳಕೆಯಲ್ಲಿದೆ. ಇದರಲ್ಲಿ ಪ್ರಾಚೀನ ಬಲ್ಗೇರಿಯನ್ ಮತ್ತು ಆಧುನಿಕ ಬಲ್ಗೇರಿಯನ್ ಎಂಬ ಎರಡು ರೂಪಗಳಿವೆ. ಇವುಗಳಲ್ಲಿ ಪ್ರಾಚೀನ ಬಲ್ಗೇರಿಯನ್ ಭಾಷೆಯನ್ನು ಕೆಲವರು ಚರ್ಚ್‍ಸ್ಲಾವಿಕ್ ಅಥವಾ ಚರ್ಚ್‍ಸ್ಲಾವೋನಿಕ್ ಭಾಷೆ ಎಂತಲೂ ಕರೆಯುವರು. ಇದರಲ್ಲಿ ಜಗತ್‍ಪ್ರಸಿದ್ಧವಾದ ಬೈಬಲ್‍ನ್ನು ಅನುವಾದಿಸಿ ಕೊಳ್ಳಲಾಗಿದೆ. ಇದರಲ್ಲಿಯೂ ಲಿಥುವೇನಿಯನ್ ಭಾಷೆಯಂತೆ ದ್ವಿವಚನ ಪ್ರಯೋಗವಿದೆ. ಇದು ಪೂರ್ಣವಾಗಿ ವಿಯೋಗಾತ್ಮಕ ಭಾಷೆಯಲ್ಲ. ಆಧುನಿಕ ಬಲ್ಗೇರಿಯನ್ ಭಾಷೆ ಮಾತ್ರ ಪೂರ್ಣ ವಿಯೋಗಾತ್ಮಕ ಭಾಷೆಯಾಗಿ ಕಂಡುಬರುವುದು. ಸ್ಲಾವೋನಿಕ್ ಭಾಷೆಗಳಲ್ಲಿ ಗ್ರೀಕ್, ತುರ್ಕಿ, ಆಲ್ಬೇನಿಯನ್, ರೊಮೇನಿಯನ್, ಆರ್ಮೇನಿಯನ್ ಮುಂತಾದ ಭಾಷೆಗಳ ಶಬ್ದಗಳು ಹೇರಳವಾಗಿ ದೊರೆಯುತ್ತವೆ. ಬಲ್ಗೇರಿಯ, ಟರ್ಕಿ, ಗ್ರೀಸ್ ಮುಂತಾದ ಕಡೆಗಳಲ್ಲಿ ಕಂಡುಬರುವ ಆಧುನಿಕ ಬಲ್ಗೇರಿಯನ್ ಭಾಷೆಯಲ್ಲಿ ಈ ಭಾಷೆಗಳ ಪ್ರಭಾವ ಹೆಚ್ಚು.

ಸರ್ಬಿಯ, ಯೂಗೋಸ್ಲಾವಿಯ, ದಕ್ಷಿಣ ಹಂಗರಿ ಮತ್ತು ಸ್ಲಾವೋನಿಯ ಮುಂತಾದ ಕಡೆಗಳಲ್ಲಿ ಸರ್ಬೋ ಕ್ರೋಷಿಯನ್ ಭಾಷೆ ಬಳಕೆಯಲ್ಲಿದೆ. ಇದರಲ್ಲಿ ಕೆಲವು ಉಪಭಾಷೆಗಳವೆ. ಇವುಗಳಲ್ಲಿ ಸರ್ಬಿಯನ್ ಮತ್ತು ಕ್ರೋಷಿಯನ್ ಬಹು ಮುಖ್ಯವಾದವು. ಸ್ಲೋವಿಯನ್ ಭಾಷೆಯನ್ನು ಯೂಗೋಸ್ಲಾವಿಯದಲ್ಲಿ ವಿಶೇಷವಾಗಿ ಕಾಣಬಹುದು. ಚೆಕ್‍ಭಾಷೆಯೂ ಇದನ್ನೆ ಹೆಚ್ಚು ಹೋಲುವುದು. ಭಾಷಾವಿಜ್ಞಾನದ ದೃಷ್ಟಿಯಿಂದ ಸ್ಲಾವೋನಿಕ್ ಭಾಷೆಗಳು ಬಹಳ ಮುಖ್ಯವಾಗಿವೆ. ಇವುಗಳಲ್ಲಿ ಸಂಸ್ಕøತದಂತೆ ಮೂಲ ಇಂಡೊಯುರೋಪಿಯನ್ ಭಾಷೆಯ ಎಷ್ಟೋ ಅಂಶಗಳ ವಾಕ್ಯ, ಧ್ವನಿ, ಶಬ್ದ ಮುಂತಾದವು ಬಾಲ್ಟಿಕ್ ಭಾಷೆಗಳನ್ನು ಹೆಚ್ಚು ಹೋಲುವುವು. (ಕೆ.ಕೆ.ಜಿ.)