ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹರಿಹರ 2

ವಿಕಿಸೋರ್ಸ್ದಿಂದ

ಹರಿಹರ ಕವಿ : -

ಸು. 1260.ಕನ್ನಡದಲ್ಲಿ ರಗಳೆ ಕಾವ್ಯಪ್ರಕಾರವನ್ನು ಜೀವಂತಗೊಳಿಸಿದ ಸುಪ್ರಸಿದ್ಧ ಕವಿ. ಗಿರಿಜಾಕಲ್ಯಾಣ ಎಂಬ ಗ್ರಂಥದ ಕರ್ತೃ. ಹಂಪೆಯವನಾದ ಈತ ಪಂಪಾಕ್ಷೇತ್ರದ ವಿರೂಪಾಕ್ಷನ ಪರಮಭಕ್ತ. ವೇದವೇದಾಂಗ ಪುರಾಣಾದಿ ವಿದ್ಯೆಗಳಲ್ಲಿ ಪಾರಂಗತನಾಗಿದ್ದ. ಮಹಾದೇವ ಈತನ ತಂದೆ, ಮಾದರಸ ಈತನ ಗುರು. ಕನ್ನಡದ ಇನ್ನೊಬ್ಬ ಪ್ರಸಿದ್ಧ ಕವಿ ರಾಘವಾಂಕ (ನೋಡಿ) ಈತನ ಶಿಷ್ಯ.

ಹರಿಹರನ ಕಾಲದ ಬಗೆಗೆ ಭಿನ್ನಾಭಿಪ್ರಾಯಗಳಿವೆ. ಈತ ಹೊಯ್ಸಳ ಎರಡನೆಯ ವೀರಬಲ್ಲಾಳನ (1173-1220) ಆಳಿಕೆಯಲ್ಲಿದ್ದ ಬಗೆಗಿನ ಒಂದು ಆಧಾರದಿಂದ ಈತನ ಕಾಲವನ್ನು ಸು. 1216 ಎಂದಿಟ್ಟುಕೊಳ್ಳ ಲಾಗಿದೆ. ದ್ವಾರಸಮುದ್ರದ ಬಲ್ಲಾಳರಾಜನ ಆಸ್ಥಾನದಲ್ಲಿ ಈತ ಕೆಲಕಾಲ ಸೇವೆ ಕೈಕೊಂಡಿದ್ದ. ಬಲ್ಲಾಳನ ಮಂತ್ರಿ ಕೆರೆಯ ಪದ್ಮರಸನ ಸಂಪರ್ಕ ಈತನಿಗಿತ್ತು.

ಹರಿಹರ ಆತ್ಮಾಭಿಮಾನಿಯೂ ನಿಸ್ಪøಹಿಯೂ ಆದ ಕವಿ. ಪೋಗೆನೆ ಪೋಪ ಬಾರೆಲವೊ ಬಾರೆನೆ ಜೀಯ ಹಸಾದವೆಂದು ಬೆಳ್ಳಾಗುತೆ ಬರ್ಪ ಮಾಣೆಲವೊ ಸುಮ್ಮನಿರೆಂದೊಡೆ ಸುಮ್ಮನಿರ್ಪ ಮತ್ತಾಗಳೆ ಝಂಕಿಸಲ್ ನಡುಗಿ ಬೀಳುವ ಸೇವೆಯ ಕಷ್ಟವೃತ್ತಿಯಂ ನೀಗಿದೆನೆಂದು ನಿಮ್ಮ ದೆಸೆಯಿಂ ಕರುಣಾಕರ ಹಂಪೆಯಾಳ್ದನೆ ಎಂಬ ಮಾತುಗಳಿಂದ ಈತ ರಾಜಸೇವೆಯನ್ನು ಧಿಕ್ಕರಿಸಿದನೆಂದು ತಿಳಿದುಬರುತ್ತದೆ. ಹೀಗೆ ರಾಜಾಶ್ರಯ ವನ್ನು ತ್ಯಜಿಸಿದ ಅನಂತರ ಈತ ಹಂಪೆಗೆ ಮರಳಿ ಅಲ್ಲಿಯೇ ನೆಲಸಿದ.

ಪದ್ಮಣಾಂಕ, ವಿರೂಪಾಕ್ಷ ಪಂಡಿತ, ಶಾಂತಲಿಂಗದೇಶಿಕ, ಸಿದ್ಧನಂಜೇಶ ಮೊದಲಾದವರು ತಮ್ಮ ಕಾವ್ಯಗಳಲ್ಲಿ ಹರಿಹರನಿಗೆ ಸಂಬಂಧಿಸಿದ ಕೆಲವು ಸಂಗತಿಗಳನ್ನು ನಿರೂಪಿಸಿದ್ದಾರೆ. ರಾಘವಾಂಕನು ಹರಿಹರಮಹತ್ತ್ವ ಎಂಬ ಕೃತಿಯನ್ನು ಬರೆದಿದ್ದು, ಇದು ಹರಿಹರನ ಜೀವನ ಸಾಧನೆಗಳಿಗೆ ಸಂಬಂಧಿಸಿದ ಮಹತ್ತ್ವದ ಕೃತಿಯಾಗಿದ್ದಿರಬೇಕು. ಆದರೆ ದುರದೃಷ್ಟ ವಶಾತ್ ಈ ಗ್ರಂಥ ಉಪಲಬ್ಧವಿಲ್ಲ. ಆದರೆ ಆ ಗ್ರಂಥದ ಕೆಲವಂಶಗಳನ್ನು ಸಿದ್ಧನಂಜೇಶ ತನ್ನ ರಾಘವಾಂಕಚಾರಿತ್ರದಲ್ಲಿ ಕೆಲಮಟ್ಟಿಗೆ ನಿರೂಪಿಸಿದ್ದಾನೆ. ಈ ಎಲ್ಲ ಕೃತಿಗಳಿಂದ ಹರಿಹರನ ಜೀವನದ ಪೂರ್ವಾರ್ಧದ ಕೆಲವು ಘಟನೆಗಳು ತಿಳಿಯುತ್ತವೆಯಾದರೂ ಆತನ ಜೀವನದ ಉತ್ತರಾರ್ಧ ಹಾಗೂ ಅವನು ತನ್ನ ಕೊನೆಯ ದಿನಗಳನ್ನು ಹೇಗೆ ಕಳೆದ ಈ ಮೊದಲಾದ ಸಂಗತಿಗಳು ಸ್ಪಷ್ಟವಿಲ್ಲ.

ಗಿರಿಜಾಕಲ್ಯಾಣ ಪ್ರೌಢಚಂಪೂ ಪರಂಪರೆಯಲ್ಲಿ ರಚಿತವಾದ ಕಾವ್ಯ. ಇದರಲ್ಲಿ ಹತ್ತು ಆಶ್ವಾಸಗಳಿವೆ. ಕಾಳಿದಾಸ ಕವಿಯ ಕುಮಾರಸಂಭವ ಈ ಕಾವ್ಯಕ್ಕೆ ಮೂಲ ಸಾಮಗ್ರಿ. ಆ ಕಥಾವಸ್ತುವಿನಲ್ಲಿ ಹರಿಹರ ಹೊಸ ಅರ್ಥ ಹೊರ ಹೊಮ್ಮುವಂತೆ ನವೀನ ದೃಷ್ಟಿಯ ಕಾವ್ಯವನ್ನು ರಚಿಸಿದ್ದಾನೆ. ಕಾವ್ಯದ ಹೆಸರೇ ಸೂಚಿಸುವಂತೆ, ಇದರಲ್ಲಿ ಗಿರಿಜೆಯ ವಿವಾಹ ಪ್ರಧಾನ ಅಂಶವಾಗಿದೆ. ಹರನು ಪುರುಷ; ಗಿರಿಜೆ ಪ್ರಕೃತಿ. ಪ್ರಕೃತಿ-ಪುರುಷರ ಮಿಲನದಿಂದ ಲೋಕಕಲ್ಯಾಣ ಎಂಬ ಉದಾತ್ತದೃಷ್ಟಿ ಈ ಕಾವ್ಯದಲ್ಲಿ ಮೂಡಿಬಂದಿದೆ.

ಈ ಕಾವ್ಯ ಪಾಂಡಿತ್ಯಪೂರ್ಣವಾಗಿದೆ; ರಸವತ್ತಾಗಿದೆ. ಸಂಭಾಷಣೆಯ ಶೈಲಿ ಕಾವ್ಯಕ್ಕೆ ನಾಟಕೀಯ ಕಳೆ ತಂದಿದೆ. ಗದ್ಯವನ್ನು ಹೊಸ ಧಾಟಿಯಲ್ಲಿ ಬಳಸಲಾಗಿದೆ. ಕಂದಗಳು ಅರ್ಥವತ್ತಾಗಿ ಸ್ವಚ್ಛಂದವಾಗಿ ಹರಿದು ಬಂದಿವೆ. ಪಾರ್ವತಿಯ ಬಾಲ್ಯ, ಶಿವಭಕ್ತಿ, ಸೌಂದರ್ಯಗಳು, ಕಾಮದಹನ, ರತಿವಿಲಾಪ, ಋತುಗಳು, ಉಗ್ರತಪಸ್ಸು, ವಟುವೇಷದ ಶಿವ, ಹರಗಿರಿಜೆ ಯರ ವಿವಾಹ-ಈ ವರ್ಣನೆಗಳು ಸುಂದರವೂ ಪರಿಣಾಮಕಾರಿಯೂ ಆಗಿವೆ. ಶೃಂಗಾರ, ಕರುಣ, ಭಕ್ತಿಭಾವಗಳು ಮನೋಹರವಾಗಿ ಚಿತ್ರಿತ ವಾಗಿವೆ.

ಹರಿಹರನ ಹೆಸರು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹತ್ತ್ವದ ಸ್ಥಾನಗಳಿಸಿರುವುದು ಈತ ರಚಿಸಿರುವ ರಗಳೆ ಕಾವ್ಯಗಳ ಮೂಲಕ. ಶಿವನನ್ನು, ಶಿವಶರಣರನ್ನು ಸ್ತುತಿಸಲು ಮಾತ್ರ ಕಾವ್ಯಶಕ್ತಿಯನ್ನು ಬಳಸಬೇಕಲ್ಲದೆ ಮಾನವರನ್ನು ಹೊಗಳಲು ಅಲ್ಲವೆಂಬ ಸಂಪ್ರದಾಯ ವನ್ನು ಕನ್ನಡ ಸಾಹಿತ್ಯದಲ್ಲಿ ರೂಢಿಗೆ ತಂದ. ಹಳಗನ್ನಡ ಭಾಷೆಯಲ್ಲಿ ಪ್ರಾಸದ ಬಗೆಗಿದ್ದ ಮೂರು ಬಗೆಯ ಳಕಾರಗಳಿಗೆ ಪ್ರತಿಯಾಗಿ ಒಂದನ್ನೇ ರೂಢಿಸುವ ದಿಟ್ಟತನವನ್ನೂ ಈತ ತೋರಿದ. ಅದುವರೆಗೆ ಕನ್ನಡ ಸಾಹಿತ್ಯದಲ್ಲಿ ಪ್ರಧಾನವಾಗಿದ್ದ ಚಂಪೂ ಕಾವ್ಯಪರಂಪರೆಯನ್ನು ಹಿಂದೆ ಸರಿಸಿ ರಗಳೆಗಳಲ್ಲಿ ಕಾವ್ಯ ರಚಿಸುವ ಹೊಸ ಸಂಪ್ರದಾಯಕ್ಕೆ ಅಸ್ತಿಬಾರ ಹಾಕಿದ. ತಮಿಳು ದೇಶದ ಅರವತ್ತು ಮೂವರು ಪುರಾತನರ, ಬಸವಣ್ಣ, ದೇವರದಾಸಿಮಯ್ಯ, ಪ್ರಭುದೇವ ಮುಂತಾದ ಶಿವಶರಣರ, ಅಲ್ಲದೆ ಸ್ತೋತ್ರ, ಆತ್ಮನಿವೇದನ ರೂಪವಾದ ನೂರಾರು ರಗಳೆಗಳನ್ನು ಈತ ರಚಿಸಿದ್ದಾನೆ. ಈ ರಗಳೆಗಳ ಸಂಖ್ಯೆಯ ಬಗೆಗೆ ಭಿನ್ನಾಭಿಪ್ರಾಯ ಗಳಿವೆ. ಸದ್ಯಕ್ಕೆ 106 ರಗಳೆಗಳನ್ನು ರಚಿಸಿದ್ದಾನೆ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಹರಿಹರನ ರಗಳೆಗಳಲ್ಲೆಲ್ಲ ಬಸವರಾಜದೇವರ ರಗಳೆ ಮತ್ತು ನಂಬಿಯಣ್ಣ ರಗಳೆ ಮಹತ್ವದ ಕೃತಿಗಳೆಂಬ ಮನ್ನಣೆಗೆ ಪಾತ್ರವಾಗಿವೆ.

(ಎಸ್.ಎಸ್.ಎಮ್‍ಎ.)

ಈತ ಪಂಪಾಶತಕ, ರಕ್ಷಾಶತಕ, ಮುಡಿಗೆಯ ಅಷ್ಟಕ ಎಂಬ ಕೃತಿಗಳನ್ನೂ ರಚಿಸಿದ್ದಾನೆ. ಪಂಪಾಶತಕ 103 ವೃತ್ತಗಳನ್ನುಳ್ಳ ಭಕ್ತಿವೈರಾಗ್ಯನೀತಿಗಳನ್ನು ಬೋಧಿಸುವ ಗ್ರಂಥ. ಬೇಲೂರಿನಿಂದ ಹಂಪೆಗೆ ಹೋಗುವಾಗ ಹರಿಹರ ಈ ಶತಕವನ್ನು ಹಾಡುತ್ತ ಹೋದನೆಂದು ಪ್ರತೀತಿ. ಭಕ್ತಿಯ ಸ್ತೋತ್ರ ಈ ಕಾವ್ಯದಲ್ಲಿ ಧಾರೆಯಾಗಿ ಹರಿದಿದೆ. ರಕ್ಷಾಶತಕ 101 ವೃತ್ತಗಳನ್ನುಳ್ಳ ಗ್ರಂಥ. ಇದರಲ್ಲಿಯೂ ತಾತ್ತ್ವಿಕ ವಿಷಯಗಳನ್ನು ನಿರೂಪಿಸಲಾಗಿದೆ. ಈ ಎರಡೂ ಕೃತಿಗಳಲ್ಲಿ ಭಕ್ತಿಭಾವದ ಗತಿಶೀಲತೆಯನ್ನು ಸುಂದರವಾಗಿ ನಿರೂಪಿಸಲಾಗಿದೆ. ಮುಡಿಗೆಯ ಅಷ್ಟಕ 8 ವೃತ್ತಿಗಳಿಂದ ಕೂಡಿದ ಚಿಕ್ಕ ಕೃತಿ. ಶಿವಪಾರಮ್ಯವನ್ನು ಸಾರುವುದೇ ಈ ಗ್ರಂಥದ ಉದ್ದೇಶ.

ಹೊಸ ಕಾವ್ಯಸಂಪ್ರದಾಯವನ್ನು ನಿರ್ಮಿಸಿ, ಅನೇಕ ಕೃತಿಗಳನ್ನು ರಚಿಸಿ, ಭಕ್ತಿಕವಿ ಎಂಬ ಖ್ಯಾತಿಗೆ ಪಾತ್ರನಾದ ಹರಿಹರ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾನೆ. ಆದರೆ ಈತ ನಿರ್ಮಿಸಿದ ರಗಳೆ ಕಾವ್ಯಸಂಪ್ರದಾಯ, ಈತನ ಅನಂತರ ಚಾಲನೆಗೊಳ್ಳದೆ ಕನ್ನಡ ಸಾಹಿತ್ಯದಲ್ಲಿ ಒಂದು ದ್ವೀಪವಾಗಿ ಉಳಿದದ್ದು ಮಾತ್ರ ಆಶ್ಚರ್ಯಕರ ಸಂಗತಿಯಾಗಿದೆ.