ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾರುವ ತಟ್ಟೆಗಳು

ವಿಕಿಸೋರ್ಸ್ದಿಂದ

ಹಾರುವ ತಟ್ಟೆಗಳು ವೀಕ್ಷಕನಿಂದ ಅಥವಾ ವೀಕ್ಷಕನಿಗೆ ಸುಲಭವಾಗಿ ವಿವರಿಸಲಾಗದ ವಾಯವಿಕ ವಸ್ತು ಅಥವಾ ದ್ಯುತಿ ವಿದ್ಯಮಾನದ ಜನಪ್ರಿಯ ನಾಮ (ಫ್ಲೈಯಿಂಗ್ ಸಾಸರ್ಸ್). ವರದಿಯಾದವುಗಳ ಪೈಕಿ ಹೆಚ್ಚಿನವು ಸಾಸರು ಅಥವಾ ಬಿಲ್ಲೆಯ ಆಕಾರದವಾಗಿದ್ದರಿಂದ ಈ ಹೆಸರು. ವೈಜ್ಞಾನಿಕ ನಾಮ: ಗುರುತಿಸದ ಹಾರುವ ವಸ್ತು (ಅನ್‍ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್, ಯುಎಫ್‍ಒ).

ಪ್ರಾಚೀನ ಕಾಲದಿಂದಲೂ ಇಂಥ ಅಸಾಧಾರಣ ವಾಯವಿಕ ವಿದ್ಯಮಾನಗಳು ಗೋಚರಿಸಿದ ವರದಿಗಳಿದ್ದರೂ ಎರಡನೆಯ ಜಾಗತಿಕ ಯುದ್ಧಾನಂತರ ವಾಯುಯಾನ ಹಾಗೂ ಆಕಾಶಯಾನ ವಿಜ್ಞಾನಗಳಲ್ಲಿ ಆದ ಬೆಳೆವಣಿಗೆಗಳು ಮತ್ತು ಅಮೆರಿಕದಲ್ಲಿ ಗೋಚರಿಸಿತೆಂದು (1947) ಹೇಳಲಾದ ವರದಿಯೊಂದಕ್ಕೆ ದೊರೆತ ಪ್ರಚಾರದಿಂದಾಗಿ ಈ ವಿದ್ಯಮಾನ ವಿಜ್ಞಾನಿಗಳ ಆಸಕ್ತಿ ಕೆರಳಿಸಿತು. ತದನಂತರ ಇವು ಗೋಚರಿಸಿದ ಸಹಸ್ರಗಟ್ಟಳೆ ವರದಿಗಳು ಜಗತ್ತಿನಾದ್ಯಂತ ದಾಖಲಾಗಿವೆ.

ಹಾರುವ ತಟ್ಟೆಗಳ ವೀಕ್ಷಣಾ ವರದಿಗಳನ್ನು ರಾತ್ರಿಯಲ್ಲಿಯ ದೃಗ್ಗೋಚರ ಬೆಳಕುಗಳು, ಹಗಲಿನಲ್ಲಿಯ ದೃಗ್ಗೋಚರ ತಟ್ಟೆಗಳು, ರೇಡಾರ್ ಮುಖೇನ (ಕೆಲವೊಮ್ಮೆ ದೃಗ್ಗೋಚರಸಹಿತ) ಗೋಚರಿಸಿದವು, 1, 2 ಅಥವಾ 3ನೆಯ ಬಗೆಯ ನಿಕಟ ಮುಖಾಮುಖಿಗಳು ಎಂದು ವರ್ಗೀಕರಿಸುವ ಪ್ರಯತ್ನಗಳೂ ಆಗಿವೆ. ಸಮೀಪದಲ್ಲಿ ಗೋಚರಿಸಿಯೂ ವೀಕ್ಷಕನ ಮೇಲಾಗಲೀ ಪರಿಸರದ ಮೇಲಾಗಲೀ ಯಾವುದೇ ಪರಿಣಾಮ ಉಂಟುಮಾಡದವು 1ನೆಯ, ಏನಾದರೂ ಪರಿಣಾಮ ಉಂಟುಮಾಡಿದವು 2ನೆಯ ಬಗೆಯ ನಿಕಟ ಮುಖಾಮುಖಿಗಳು. ಹಾರುವ ತಟ್ಟೆಗಳಲ್ಲಿ ಪಯಣಿಸುತ್ತಿದ್ದವರೊಂದಿಗೆ ವೈಯಕ್ತಿಕ ಸಂಪರ್ಕ ಉಂಟಾದವು 3ನೆಯ ಬಗೆಯ ನಿಕಟ ಮುಖಾಮುಖಿ.

ಎಲ್ಲ ವರದಿಗಳ ಸತ್ಯಾಸತ್ಯತೆಯ ಪರೀಕ್ಷಣೆ ಸಾಧ್ಯವಾಗಿಲ್ಲವಾದರೂ ಪರೀಕ್ಷಿಸಿದವುಗಳ ಪೈಕಿ ಶೇಕಡಾ 90ರಷ್ಟು ಉಜ್ಜ್ವಲ ಗ್ರಹ ಅಥವಾ ನಕ್ಷತ್ರ, ವಿಮಾನ, ಪಕ್ಷಿ, ಬಲೂನ್, ಗಾಳಿಪಟ, ವಾಯವಿಕ ಫ್ಲೇರ್, ಉಲ್ಕೆ, ಉಪಗ್ರಹ, ವಿಶಿಷ್ಟ ಮೋಡ ಅಥವಾ ವೈದ್ಯುತ ವಿದ್ಯಮಾನಗಳಾಗಿದ್ದುವು. ಉಳಿದವುಗಳ ಪೈಕಿ ಕೆಲವು ಅಸಮರ್ಪಕ ವೀಕ್ಷಣೆ, ತಮಾಷೆಗಾಗಿ ಮಾಡಿದ ವಂಚನೆ ಅಥವಾ ಭ್ರಮೆ ಪ್ರಕರಣಗಳಾಗಿದ್ದವು. ಕೆಲವೇ ಕೆಲವು ಪ್ರಕರಣಗಳನ್ನು ವಿವರಿಸಲು ಸಾಧ್ಯವಾಗಿಲ್ಲ.

ಹಾರುವ ತಟ್ಟೆಗಳಿಂದ ರಾಷ್ಟ್ರೀಯ ಭದ್ರತೆಗೆ ಏನಾದರೂ ಧಕ್ಕೆ ಉಂಟಾದೀತೇ ಎಂಬುದನ್ನು ನಿರ್ಧರಿಸಲೋಸುಗ ಅಮೆರಿಕದ ವಾಯುಪಡೆ 12,618 ಗೋಚರ ಪ್ರಕರಣ ವರದಿಗಳನ್ನು ಪರಿಶೀಲಿಸಿತು (1947-69). ಇವುಗಳ ಪೈಕಿ 701 ಪ್ರಕರಣಗಳನ್ನು (5.6%) ತೃಪ್ತಿಕರವಾಗಿ ವಿವರಿಸಲು ಸಾಧ್ಯವಾಗಲಿಲ್ಲ.

ಅನ್ಯಗ್ರಹ ವಾಸಿಗಳ ಅಂತರಿಕ್ಷಯಾನ ನೌಕೆಗಳಿವು ಎಂದು ವಾದಿಸುವವರ ದೊಡ್ಡ ಗುಂಪೂ ಇದೆ. ಇವರ ವಾದ ನಿಜವೆಂದು ಸಾಧಿಸಬಲ್ಲ ಸಂಶಯಾತೀತವಾದ ಅಥವಾ ವಿಜ್ಞಾನ ಸ್ವೀಕಾರಾರ್ಹವಾದ ಸಾಕ್ಯಾಧಾರ ಇನೂ ದೊರೆತಿಲ್ಲ. *