ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಿಪೋಕ್ರೆಟೀಸ್

ವಿಕಿಸೋರ್ಸ್ದಿಂದ

ಹಿಪೋಕ್ರೆಟೀಸ್ -ಕ್ರಿ.ಪೂ. 460-ಸು. 370. ಗ್ರೀಕ್ ವೈದ್ಯವಿಜ್ಞಾನಿ. ಆಧುನಿಕ ಪಾಶ್ಚಾತ್ಯ ವೈದ್ಯಕೀಯದ ಪಿತಾಮಹ ಎಂದು ಪರಿಗಣಿಸಲ್ಪಟ್ಟಿ ದ್ದಾನೆ. ಗ್ರೀಸ್ ದೇಶದ ರಾಸ್ ಎಂಬಲ್ಲಿ ಜನಿಸಿದ. ತಂದೆ ವೈದ್ಯ, ತಾಯಿ ದಾದಿ. ಹೀಗೆ ಈತನಿಗೆ ಮನೆಯೇ ಪಾಠಶಾಲೆ, ತಂದೆ ತಾಯಿಯರೇ ಮೊದಲ ಗುರುಗಳು. ಅಥೆನ್ಸ್‍ನ ವೈದ್ಯಶಾಲೆಯಲ್ಲಿ ಕೆಲಕಾಲ ಶಿಕ್ಷಣ ಪಡೆದ. ಮುಂದೆ ವೃತ್ತಿ ಹಿಡಿದಾಗ ಅನುಭವದಿಂದ ಒಂದು ತತ್ತ್ವ ಕಂಡುಕೊಂಡ: ನಿಸರ್ಗದ ಶಿಶುವಾದ ಮಾನವನಿಗೆ ನಿಸರ್ಗವೇ ಋಜು ವೈದ್ಯ. ಆದ್ದರಿಂದ ವೈದ್ಯನ ಪಾತ್ರ ನಿಸರ್ಗಕ್ಕೆ ಅನುವರ್ತಿಯಾಗಿರುವಂತೆ ಚಿಕಿತ್ಸಾಕ್ರಮವನ್ನು ಅಳವಡಿಸುವುದು ಯುಕ್ತ. ಅಲ್ಲಿಯ ತನಕ ಅಸಂಖ್ಯ ಅಂಧಶ್ರದ್ಧೆ ಮತ್ತು ಅವೈe್ಞÁನಿಕ ಚಿಕಿತ್ಸಾವಿಧಾನಗಳಿಂದ ಕಿಲುಬುಗಟ್ಟಿದ್ದ ವೈದ್ಯಕೀಯವನ್ನು ಈತ ವಿಜ್ಞಾನದ ತಾರ್ಕಿಕ ಬುನಾದಿ ಮೇಲೆ ನೆಲೆಗೊಳಿಸಿದ.

ಈತನ ಪ್ರಕಾರ ದೇಹದಲ್ಲಿಯ ನಾಲ್ಕು ದೋಷಗಳ (ಹ್ಯೂಮರ್ಸ್) ಏರುಪೇರಿನಿಂದ ವ್ಯಾಧಿ ತಲೆದೋರುತ್ತದೆ. ಅವು ರಕ್ತ, ವಾತ, ಪಿತ್ತ ಮತ್ತು ಕಫ. ಅಂದ ಮೇಲೆ ರೋಗಚಿಕಿತ್ಸೆ ಎಂದರೆ ಇವುಗಳಲ್ಲಿ ಪರಸ್ಪರ ಸಮತೋಲ ಸ್ಥಾಪನೆ ಎಂದು ಈತ ತರ್ಕಿಸಿ ತನ್ನ ಚಿಕಿತ್ಸಾವಿಧಾನ ವನ್ನು ನೇರ್ಪುಗೊಳಿಸಿದ. ಪ್ರಾಚೀನರಿಂದ ಬಂದ ಅನುಭವಸಾರವನ್ನೂ ತನ್ನ ಚಿಂತನಸಾರವನ್ನೂ ಸೇರಿಸಿ ಸು. 50 ಗ್ರಂಥಗಳನ್ನು ರಚಿಸಿದ. ಇದು ಹೇಗೂ ಇರಲಿ ಈತನ ತರುವಾಯದ ದಿನಗಳಲ್ಲಿ ಇವೆಲ್ಲವೂ ಆತನ ಹೆಸರಿನಿಂದಲೇ ಉಲ್ಲೇಖಿಸಲ್ಪಡುತ್ತಿವೆ. ಈತ ಹೇಳಿದ ಎರಡು ಸೂತ್ರವಾಕ್ಯಗಳಿವು: “ಉಗ್ರವ್ಯಾಧಿಗೆ ಉಗ್ರಚಿಕಿತ್ಸೆ ಅಗತ್ಯ” ಮತ್ತು “ಒಬ್ಬನ ಉಣಿಸು ಇನ್ನೊಬ್ಬನ ಗರಳ.”

ಈತನ ಗ್ರಂಥ ರೋಗಶುಶ್ರೂಷೆಯಲ್ಲಿ ನಿಸರ್ಗದ ಮಹತ್ತ್ವವನ್ನು ಎತ್ತಿ ಹಿಡಿಯುವುದರ ಜೊತೆಗೆ ರೋಗಿಗೂ ವೈದ್ಯನಿಗೂ ಕೆಲವು ನಿಯಮಗಳನ್ನು ವಿಧಿಸಿದೆ. ಮಿತಾಹಾರ, ಶುಚಿತ್ವ ಮತ್ತು ವಿಶ್ರಾಂತಿ ರೋಗಿ ಅನುಸರಿಸಬೇಕಾದಂಥವು. ವೈದ್ಯನಾದರೂ ಶುಚಿತ್ವ ಮತ್ತು ಸೇವಾಧರ್ಮಗಳನ್ನು ಅನುಷ್ಠಾನಿಸತಕ್ಕದ್ದು.

ರೋಗಿ ಕುರಿತಂತೆ ವೈದ್ಯ ಅತ್ಯಂತ ಸಹನೆ ಮತ್ತು ಸಹಾನುಭೂತಿ ಹೊಂದಿರಬೇಕು. ಈ ದಿಶೆಯಲ್ಲಿ ವೈದ್ಯ ತನ್ನ ಚಿಕಿತ್ಸೆಗೆ ತೊಡಗುವಾಗ ಏನೇನು ಮಾಡಬೇಕು, ಏನೇನು ಮಾಡಬಾರದು ಎಂಬ ಶಿಸ್ತುಸಂಹಿತೆ ಯನ್ನು ಈತ ವಿಧಿಸಿದ್ದಾನೆ. ಪ್ರತಿಯೊಬ್ಬ ವೈದ್ಯನೂ ಅನುಷ್ಠಾನಿಸಬೇಕಾದ ಇದಕ್ಕೆ ಹಿಪೊಕ್ರೆಟೀಸ್ ಪ್ರತಿಜ್ಞೆ ಎಂದು ಹೆಸರು. ಇಂದಿಗೂ (2004) ಈ ಪ್ರತಿಜ್ಞೆ ಪ್ರಸ್ತುತವಾಗಿದೆ.

(ಎಸ್.ಕೆ.ಎಚ್.)