ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹುಲಿ
ಹುಲಿ “ಪ್ಯಾಂತೆರಾ ಟೈಗ್ರಿಸ್” ಪ್ರಭೇದದ, ಸ್ತನಿ ಗುಂಪಿನ, ಫೈಲಿಡೆ ಕುಟುಂಬದ ಸದಸ್ಯ (ಟೈಗರ್). ಕಾರ್ನಿವೊರಾ ಗಣಕ್ಕೆ ಸೇರಿದ ಮಾಂಸಾಹಾರಿ ಪ್ರಾಣಿ; ಉಷ್ಣವಲಯ ವಾಸಿ. ಪ್ಯಾಂತೆರಾ ಎಂದರೆ ಘರ್ಜಿಸುವ ಮಾರ್ಜಾಲ ಎಂದರ್ಥ. ಈ ಪ್ಯಾಂತೆರಾ ಪ್ರಭೇದದಲ್ಲಿ ಪ್ರಾಣಿಗಳ ಗಂಟಲಿನ ಹೈಬೋಡ್ ಎಲುಬು ಘರ್ಜಿಸಲು ಸಹಕಾರಿಯಾಗಿದೆ. ಇದೇ ಪ್ಯಾಂತೆರಾ ಪ್ರಭೇದವನ್ನು ಇತರ ಬೇರೆ ಪ್ರಭೇದಗಳಿಂದ ಪ್ರತ್ಯೇಕಿಸುವುದು. ಹಿಂದೆ ಹುಲಿ ಪ್ರಭೇದಗಳನ್ನು ಎಂಟು ಉಪ ಪ್ರಭೇದಗಳಾಗಿ ವಿಂಗಡಿಸಲಾಗಿತ್ತು. ಟೈಗ್ರಿಸ್ ದಕ್ಷಿಣ ಏಷ್ಯಾದಲ್ಲಿ, ಅಲ್ಟೈಕಾ ನೈರುತ್ಯ ಏಷ್ಯಾದಲ್ಲಿ, ಅಮೈಯೆನ್ಸಿಸ್ ದಕ್ಷಿಣ ಮಧ್ಯ ಚೈನಾದಲ್ಲಿ, ವಿರ್ಗಾಟ ಪಶ್ಚಿಮ ಏಷ್ಯಾದಲ್ಲಿ, ಕಾರ್ಬೆಟಿ ಇಂಡೋಚೀನಾದಲ್ಲಿ ಸಾಡೈಕಾ ಮತ್ತು ಸುಮಾತ್ರೆ ಕ್ರಮವಾಗಿ ಇಂಡೊನೇಷಿಯಾದ ಬಾಲಿ ದ್ವೀಪಗಳು ಹಾಗೂ ಜಾವಾ ಮತ್ತು ಸುಮಾತ್ರಗಳಲ್ಲಿ. ಆದರೆ, ಇವುಗಳಲ್ಲಿ ಮೂರು ಮಾತ್ರ ನೈಜ ಪ್ರಭೇದಗಳೆಂದೂ ಉಳಿದವು ತಪ್ಪು ತೀರ್ಮಾನಗಳಿಂದಾದದ್ದು ಎಂದೂ ತಿಳಿದು ಬಂದಿದೆ. ಇಂದು ಹುಲಿಗಳ ವಿಕಾಸ, ಪ್ರಸರಣೆ ಮತ್ತು ವ್ಯಾಪಕತೆಯನ್ನು ಅಥೈಸಲು ವಿಜ್ಞಾನಿಗಳು ಆಧುನಿಕ ಆಂಗಿಕರಚನೆ, ತಳಿವಿಜ್ಞಾನ ಹಾಗೂ ಪರಿಸರ ವಿಜ್ಞಾನವನ್ನು ಅವಲಂಬಿಸಿದ್ದಾರೆ.
ಕಾಡಿನ ಸಾಮ್ರಾಜ್ಯದಲ್ಲಿ ಹುಲಿಯೆಂದರೆ ಬಲುಭೀತಿಹುಟ್ಟಿಸುವ ಬೇಟೆಗಾರ ಪ್ರಾಣಿ. ಮಾನವರು ಏಪ್ಯಖಂಡದಲ್ಲಿ ವಸತಿಹೂಡುವ ಹೊತ್ತಿಗಾಗಲೇ ಹುಲಿಗಳು ಇಲ್ಲಿನ ಅರಣ್ಯಗಳಲ್ಲಿ ಮೆರೆದಾಡುತ್ತಿದ್ದವು. ಜಿಂಕೆ, ಹಂದಿ, ಕಾಟಿ, ಅಷ್ಟೇ ಏಕೆ, ನಮ್ಮಷ್ಟೇ ದೊಡ್ಡದಾದ ಒರಾಂಗ್ ಉಟಾನ್ ವಾನರನನ್ನೂ ಬೇಡೆಯಾಡಬಲ್ಲ ಹುಲಿಯೆಂದರೆ ಇತರ ಪ್ರಾಣಿಗಳ ಹಾಗೆಯೇ ಪ್ರಾಚೀನ ಮಾನವನಿಗೂ ಬಲುಭಯವಿತ್ತು. ಮುಂದಿನ ಕೆಲವು ಸಾವಿರ ವರ್ಷಗಳ ಅವಧಿಯಲ್ಲಿ, ಮಾನವಜನಾಂಗ ಬೇಟೆ, ಆಹಾರ ಸಂಗ್ರಹಣೆಗಳ ಪ್ರಾಚೀನತಂತ್ರಗಳಿಗೆ ಬದಲಾಗಿ ಕೃಷಿ, ಪಶುಸಂಗೋಪನೆಗಳನ್ನು ರೂಢಿಸಿಕೊಂಡಿತು. ಹುಲಿಗಳ ನೆಲೆಯಾಗಿದ್ದ ಕಾಡುಗಳನ್ನು ಕತ್ತರಿಸಿಯೋ, ಸುಟ್ಟುಹಾಕಿಯೋ ಜನರು ಬಹುತೇಕ ಭೂಪ್ರದೇಶವನ್ನು ಹುಲಿಗಳ ನಿವಾಸಕ್ಕೆ ಒಗ್ಗದ ಹಾಗೆ ರೂಪಾಂತರ ಮಾಡಿಬಿಟ್ಟರು. ಪುರಾತನ ಬೇಟೆಗಾರರು ಹುಲಿಗಳನ್ನು ಕೊಲ್ಲುವುದಕ್ಕಾಗಿ ಕುಣಿಕೆ, ಕಂದಕ, ಬಲೆ, ಈಟಿ, ಮಾರಕ ಬಂಧಗಳಂಥ ವಿವಿಧ ತಂತ್ರಗಳನ್ನು ಕಲ್ಪಿಸಿಕೊಂಡರು. ಕೈಗಾರಿಕಾ ಕ್ರಾಂತಿಯಾದ ಮೇಲೆ, ಹುಲಿಹತ್ಯೆಗಳ ಆಯುಧಗಳ ಪಟ್ಟಿಗೆ ಸಿಡಿಮದ್ದು. ಬಂದೂಕು, ರಾಸಾಯನಿಕ ವಿಷಗಳೂ ಸೇರ್ಪಡೆಯಾದವು. ಹುಲಿಯ ನಿವಾಸವನ್ನು ಆಕ್ರಮಿಸಿಕೊಂಡ ವಾನರಕುಲದ ಚತುರ ಮನವ ಕಂಡು ಹಿಡಿದ ಮಾರಕಾಸ್ತ್ರಗಳೆದುರಿಗೆ ಹುಲಿಯ ಪ್ರಕೃತಿದತ್ತವಾದ ಆಯುಧಗಳು ಎಂದರೆ, ಶಕ್ತಿ, ವೇಗ, ರಹಸ್ಯಚಲನೆ, ಇರುಳು ದೃಷ್ವಿ, ಮೊನಚಾದ ಹಲ್ಲು ಪಂಜಗಳು-ಪರಿಣಾಮ ಬೀರಲು ಸಾಧ್ಯವೇ? ಇಂದು ಹುಲಿಯ ಉಳಿವು ಮಾನವನ ತಾಂತ್ರಿಕ ನ್ಯೆಪುಣ್ಯದೆದುರು ತತ್ತರಿಸುತ್ತಿದೆ; ಇಷ್ಟಾದರೂ ಅರಣ್ಯಗಳನ್ನು ಅತಿಕ್ರಮಿಸುವ ಮಾನವನ ಲಾಲಸೆ ಅದೆಷ್ಟು ಪ್ರಬಲವಾಗಿದೆಯೆಂದರೆ ಏಷ್ಯಾದ ಕಾಡುಗಳಲ್ಲಿ ಹುಲಿಯ ಗರ್ಜನೆ ಎಂದಿಗೂ ಕೇಳಿಸದಂತೆ ಶಾಶ್ವತವಾಗಿ ಅಡಗಿಹೋಗಲಿದೆಯೆಂಬ ವಿಷಾದದ ನುಡಿಗೆ ಎಡೆಗೊಟ್ಟಿದೆ. ಏಕೆಂದರೆ, ಹುಲಿ ಎಷ್ಟು ಪ್ರಬಲವೆನಿಸಿಕೊಂಡಿದೆಯೋ ಅಷ್ವೇ ನಾಜೂಕಾದ ಜೀವಿ. ವಿರೋಧಭಾಸವೆಂದರೆ ಎಲ್ಲರೂ ಭಯಪಡುವ ಹುಲಿಯ ದೇಹದ ಗಾತ್ರ ಮತ್ತು ಮಾಂಸಾಹಾರದ ಪ್ರವೃತ್ತಿಯಂತಹ ವೈಶಿಷ್ಟ್ಯಗಳೇ ಅದರ ಜೀವಿ ಪರಿಸ್ಥಿತಿಯ ಸೂಕ್ಷ್ಮತೆಗೂ ಕಾರಣವಾಗಿರುವುದು.
ಜೀವಿವಿಕಾಸ ಹಾಗೂ ಪ್ರಸರಣ : ಹುಲಿಯಂಥ ದೊಡ್ಡ ಮಾರ್ಜಾಲಗಳು ರಾತ್ರೋರಾತ್ರಿ ಶೂನ್ಯದಿಂದ ಅವತರಿಸಿ ಬಂದವಲ್ಲ. 4.5 ಶತಕೋಟಿ ವರ್ಷಗಳ ಭೂಮಿಯ ಇತಿಹಾಸದುದ್ದಕ್ಕೂ ಭೌಗೋಳಿಕ ಹವಾಮಾನ ಪರಿವರ್ತನೆ, ಭೂಖಂಡಗಳ ಚಲನೆ, ಬಿಸಿಲು, ಮಳೆ, ಗಾಳಿಗಳಿಂದಾದ ಭೌಗೋಳಿಕ ವ್ಯತ್ಯಯಗಳು ವೈವಿಧ್ಯಮಯ ಜೈವಿಕರೂಪಗಳ, ಸಸ್ಯವರ್ಗಗಳ ಹುಟ್ಟಿಗೆ ಕಾರಣವಾದವು. ಅನಂತರ, ಈ ಸಸ್ಯಗಳನ್ನು ಅವಲಂಬಿಸಿ ಬದುಕುವ ಚಿಕ್ಕ ಮಿಡತೆಯಿಂದ ದೊಡ್ಡ ಆನೆಗಳವರೆಗಿನ ಸಸ್ಯಾಹಾರಿ ಪ್ರಾಣಿ ಸಮುದಾಯಗಳು ಜನಿಸಿ ಬಂದವು. ಈ ಸಸ್ಯಾಹಾರಿ ಪ್ರಾಣಿಗಳಲ್ಲಿ ಈಗಿನ ಜಿಂಕೆ, ಹಂದಿ, ಕಾಟಿ, ಟೆಪಿರ್, ಖಡ್ಗಮೃಗ, ಆನೆಗಳ ಪೂರ್ವಿಕರಾದ ದೊಡ್ಡ ಸ್ತನಿಪ್ರಾಣಿಗಳೂ ಸೇರಿದ್ದವು. ಇಂಥ ಸಸ್ಯಾಹಾರಿ ಪ್ರಾಣಿ ಸಮುದಾಯವೆಂದರೆ ಕೇವಲ ಪ್ರತ್ಯೇಕಜೀವಿಗಳ ಗುಂಪುಗಳು ಮಾತ್ರವಲ್ಲ; ಇವು ಬಲು ಸಂಕೀರ್ಣವಾದ ಜೀವಿಪರಿಸ್ಥತಿ ಜಾಲದ ಅಂಶಗಳು. ದೊಡ್ಡಪ್ರಾಣಿಗಳು ನಾರುತೊಗಟೆಗಳ ಗಿಡಮರಗಳನ್ನು ಆಹಾರಕ್ಕಾಗಿ ಅವಲಂಬಿಸುವುದರಿಂದ ಚಿಕ್ಕಪ್ರಾಣಿಗಳ ಚಲನವಲನಕ್ಕೂ ಮೇವಿಗೂ ಅವಕಾಶವೊದಗುತ್ತದೆ. ಪ್ರತಿಯೊಂದು ಪ್ರಾಣಿಯೂ ವಿಭಿನ್ನ ಸಸ್ಯಜಾತಿಯನ್ನು, ಸಸ್ಯಭಾಗವನ್ನು, ಇಲ್ಲವೇ ಸಸ್ಯದ ಬೆಳವಣಿಗೆಯ ಬೇರೆಬೇರೆ ಸ್ತರವನ್ನು ಆಹಾರಕ್ಕಾಗಿ ಆಯ್ದುಕೊಳ್ಳುತ್ತದೆ. ಈ ಸಸ್ಯಾಹಾರಿ ಪ್ರಾಣಿವರ್ಗಕ್ಕೆ ಸಮಾಂತರವಾಗಿ, ಇವನ್ನು ಆಹಾರಕ್ಕಾಗಿ ಬೇಟೆಯಾಡುವ ಮಾಂಸಾಹಾರಿ ಸ್ತನಿಗಳು ಕಬ್ಬೆಕ್ಕಿನ ಗಾತ್ರದ ಮಾರ್ಜಾಲದ ಪೂರ್ವಜನಿಂದ 40 ಮಿಲಿಯ ವರ್ಷಗಳ ಹಿಂದೆ ವಿಕಾಸಗೊಂಡವು.
ತಮಗಿಂತ ಸಾಕಷ್ಟು ದೊಡ್ಡ ಪ್ರಾಣಿಗಳನ್ನೂ ಆಹಾರಕ್ಕಾಗಿ ಕೊಲ್ಲಬಲ್ಲ ದೊಡ್ಡ ಬೇಟೆಗಾರ ಪ್ರಾಣಿಗಳೆಲ್ಲ ಮೂಲತಃ ಎರಡು ತಂತ್ರಗಳನ್ನು ಅನುಸರಿಸಿಕೊಂಡು ಬಂದಿವೆ. ಅವೆಂದರೆ, ವೇಗವಾಗಿ ಪ್ರಾಣಿಗಳನ್ನು ಬೆನ್ನಟ್ಟಿ ಬೇಟೆಯಾಡುವುದು ಇಲ್ಲವೇ ಅವಿತೇ ಪ್ರಾಣಿಗಳನ್ನು ಅನುಸರಿಸಿ ಹೋಗಿ ಆಶ್ಚರ್ಯವಾಗುವಷ್ಟು ಕ್ಷಿಪ್ರಗತಿಯಲ್ಲಿ ಆಕ್ರಮಣನಡೆಸುವುದು. ವೇಗಗತಿಯ ಬೇಟೆಗಾರ ಪ್ರಾಣಿಗಳು ಬಲು ದೂರದವರೆಗೆ ಪ್ರಾಣಿಗಳನ್ನು ಬೆನ್ನಟ್ಟಿಹೋಗಿ ಆಯಾಸಗೊಂಡ ಬೇಟೆಯನ್ನು ನೆಲಕ್ಕೆ ಉರುಳಿಸುವುವು. ಆವಿತು ಬೇಟೆಯಾಡುವ ಆಕ್ರಮಣಕಾರಿಗಳ ದೇಹವಿನ್ಯಾಸವಾದರೂ ಬೇಟೆಯ ಸಮೀಪದವರೆಗೆ ಕದ್ದುಮುಚ್ಚಿ ಸಾಗುವುದಕ್ಕೂ ದಿಢೀರನೆ ಆಕ್ರಮಣನಡೆಸುವುದಕ್ಕೂ ತಕ್ಕಂತೆ ರೂಪುಗೊಂಡಿದೆ. ಸಿವಂಗಿ(ಚೀತಾ) ಒಂದನ್ನು ಹೊರತುಪಡಿಸಿ ಉಳಿದೆಲ್ಲ ದೊಡ್ಡ ಮಾರ್ಜಾಲಗಳು _ ಹುಲಿ, ಜಾಗ್ವಾರ್, ಚಿರತೆ, ಹಿಮಚಿರತೆ, ಹುಲ್ಲುಗಾವಲಿನಲ್ಲಿ ವಾಸಿಸುವ ಸಿಂಹವೂ ಸೇರಿ - ಮಂದಗತಿಯ ಅನುಸರಣೆಯ ಆಕ್ರಮಣಕಾರಿಗಳೇ.
ವರ್ತಮಾನಯುಗದ ಹುಲಿಗಳ ವಿಕಾಸಸ್ಥಿತಿಯನ್ನು ಪಾರಂಪರಿಕವಾಗಿ ಅವುಗಳ ಆಂಗಿಕರಚನೆ ಮತ್ತು ಅಸ್ಥಿಪಂಜರದ ಸ್ವರೂಪಗಳನ್ನು ಹೋಲಿಸಿ ನೋಡುವ ಮೂಲಕ ಮತ್ತು ಇತ್ತೀಚೆಗೆ ಆಣವಿಕ ತಳಿವಿಜ್ಞಾನ (ಮಾಲಿಕ್ಯುಲರ್ ಜಿನೆಟಿಕ್ಸ್)ವನ್ನು ಆಧರಿಸಿದ ಆಧುನಿಕ ವಿಧಾನಗಳ ಮೂಲಕವೂ ಪುನನಿರ್ಧರಿಸಲಾಗಿದೆ. ತಳಿವಿಜ್ಞಾನಿ ಸ್ಟೀಫನ್ ಓ ಬ್ರಿಯನ್ ಮತ್ತವರ ಸಹೋದ್ಯೋಗಿಗಳು "ಆಣವಿಕ ಗಡಿಯಾರ" (ಮಾಲಿಕ್ಯುಲರ್ ಕ್ಲಾಕ್) ಗಳನ್ನು ಬಳಸಿ ಪ್ಯಾಂತೆರಾ ವರ್ಗದ ಮಾರ್ಜಾಲಗಳು 4ರಿಂದ 6ಮಿಲಿಯ ವರ್ಷಗಳ ಹಿಂದೆಯೇ ತಮ್ಮ ಪೂರ್ವಿಕರಿಂದ ಬೇರ್ಪಟ್ಟುವೆಂದೂ ಈ ವಂಶವಾಹಿನಿಯಿಂದ ಹುಲಿ(ಪ್ಯಾಂತೆರಾ ಟೈಗ್ರಿಸ್) ಒಂದು ಮಿಲಿಯ ವರ್ಷಗಳಿಂದ ಈಚೆಗಷ್ಟೇ ಪ್ರತ್ಯೇಕಗೊಂಡಿತೆಂದೂ ಅಂದಾಜು ಮಾಡಿದ್ದಾರೆ. ಈಗ ದಕ್ಷಿಣ ಚೀನಾದಲ್ಲಿ ಕಂಡುಬರುವ ಪ್ಯಾಂತೆರಾ ಟೈಗ್ರೀಸ್ ಅಮೊಯೆನ್ಸಿಸ್ ಉಪಜಾತಿಯ ಹುಲಿಯ ಎಲುಬಿನ ರಚನೆಯು ತಕ್ಕಮಟ್ಟಿಗೆ ಪುರಾತನ ವಿನ್ಯಾಸವನ್ನು ಹೋಲುವುದನ್ನು ಗಮನಿಸಿ, ವರ್ಗೀಕರಣಕಾರರು ಹುಲಿಯ ವಿಕಾಸ ಈ ಪ್ರದೇಶದಲ್ಲೇ ಆಗಿರಬೇಕೆಂದು ಅಭಿಪ್ರಾಯಪಡುತ್ತಾರೆ. ಇಲ್ಲಿನ ಅರಣ್ಯಪ್ರದೇಶದಲ್ಲಿ (ಹುಲಿಯ ಬೇಟೆಯ ಆಯ್ಕೆಗಳಾದ) ದನಗಳ ಜಾತಿಯ ಕಾಡುಪ್ರಾಣಿಗಳು ಹಾಗೂ ಸರ್ವಸ್ ವರ್ಗದ ಜಿಂಕೆಗಳು ಯಥೇಚ್ಛವಾಗಿರುವುದೂ ಮೇಲಿನ ಅಭಿಪ್ರಾಯವನ್ನು ಬೆಂಬಲಿಸುತ್ತದೆ.
ಹುಟ್ಟು ಬೇಟೆಗಾರನ ದೈಹಿಕ ಹೊಂದಾಣಿಕೆಗಳು: ತನಗಿಂತ ಎಷ್ಟೋ ದೊಡ್ಡದಾದ ಬೇಟೆಯ ಪ್ರಾಣಿಯೊಂದನ್ನು ನೆಲಕ್ಕುರುಳಿಸಿ ನಿಷ್ಕ್ರಿಯಗೊಳಿಸಿ ಕ್ಷಿಪ್ರವಾಗಿ ಕೊಲ್ಲಬೇಕೆಂದರೆ ಹುಲಿ ಸಾಕಷ್ಟು ದೊಡ್ಡ ಪ್ರಾಣಿಯೇ ಆಗಿರಬೇಕು. ದೊಡ್ಡ ದೇಹದ ಗಾತ್ರದ ಇನ್ನೊಂದು ಅನುಕೂಲವೆಂದರೆ ತನ್ನ ಬೇಟೆಯನ್ನು ಎಳೆದೊಯ್ಯುವ, ಅಡಗಿಸುವ ಮತ್ತು ಇತರ ಬೇಟೆಗಾರ ಪ್ರಾಣಿಗಳಿಂದ ರಕ್ಷಿಸಿಕೊಳ್ಳುವ ಸಾಮಥ್ರ್ಯವಿರುವುದು. ಭಾರತದ ಗಂಡುಹುಲಿಗಳು 200 ರಿಂದ 250 ಕೆ.ಜಿ.ತೂಕವಿದ್ದರೆ ಹೆಣ್ಣುಹುಲಿಗಳ ತೂಕ ಅವಕ್ಕಿಂತ 100 ಕಿಲೊ ಕಡಿಮೆ. ಭಾರತದ ಹುಲಿಗಳು 155 ರಿಂದ 225 ಸೆಂಟಿಮೀಟರುಗಳಷ್ಟು ಉದ್ದವಾಗಿರುವುದಲ್ಲದೆ, ಬಾಲದ ಅಳತೆ ಬೇರೆ 75 ರಿಂದ 100 ಸೆಂ.ಮೀ.ಗಳಷ್ಟಿರುತ್ತದೆ. ಆದರೆ ಹಳೆಯ ಶಿಕಾರಿ ದಾಖಲೆಗಳು ಹುಲಿಯ ಉದ್ದವನ್ನು ಮೂಗಿನ ತುದಿಯಿಂದ ಬಾಲದ ತುದಿವರೆಗೆ ಎರಡೂ ಬದಿಗೆ ನೆಟ್ಟ ಮರದ ಗೂಟಗಳ ನಡುವಿನ ನೇರ ಆಳತೆಗಳಾಗಿದ್ದು ಅವುಗಳಿಂದ ಹುಲಿಯ ಉದ್ದದ ಖಚಿತ ಮಾಹಿತಿ ಪಡೆಯುವುದು ಕಷ್ಟಸಾಧ್ಯ.
ಹುಲಿಯ ದೇಹದ ಸ್ವರೂಪ ಮತ್ತು ಆಂಗಿಕ ರಚನೆಗಳು, ಎಲ್ಲಕ್ಕಿಂತ ಮುಖ್ಯವಾಗಿ ವಿಕಾಸದ ವಿವಿಧ ಘಟ್ಟಗಳಲ್ಲಿ ಬೇಟೆಗಾಗಿಯೇ ರೂಪುಗೊಂಡ ಹೊಂದಾಣಿಕೆಗಳು. ಹುಲಿ ತನ್ನ ಸ್ಥಿತಿಗತಿ, ಬೆಳವಣಿಗೆ, ಹಾಗೂ ಸಂತಾನೋತ್ಪತ್ತಿಗಾಗಿ ಬೇಕಾದ ಶಕ್ತಿಸಂಚಯನಕ್ಕೆ ತನ್ನ ಬೇಟೆಯ ದೇಹದ ಅಂಗಾಂಶಗಳಲ್ಲೂ ರಕ್ತದಲ್ಲೂ ಸಂಚಿತವಾಗಿರುವ ರಾಸಾಯನಿಕ ಶಕ್ತಿಯನ್ನೇ ಅವಲಂಬಿಸಿರಬೇಕು. ಬೇಟೆಯನ್ನು ಹಿಡಿಯುವುದಕ್ಕೆ ವೆಚ್ಚವಾಗುವ ಶಕ್ತಿಗಿಂತ ಆಹಾರದಿಂದ ದೊರಕುವ ಶಕ್ತಿ ಮಿಗಿಲಾಗಿರಲೇ ಬೇಕಷ್ಟೇ. ಇಲಿ, ಕಪ್ಪೆ, ಮೀನುಗಳಂಥ ಸಣ್ಣಪುಟ್ಟ ಪ್ರಾಣಿಗಳನ್ನು ಹಿಡಿಯುವುದಕ್ಕಿಂತ ಹುಲಿಗೆ ತನ್ನ ಪೌಷ್ಟಿಕ ಅವಶ್ಯಕತೆಗಳಿಗೆ ಶಕ್ತಿಯ ಭಂಡಾರಗಳಾದ ದೊಡ್ಡ ಗೊರಸಿನ ಪ್ರಾಣಿಗಳನ್ನೇ ಕೊಲ್ಲಬೇಕು. ಆದರೆ ಇಂಥ ದೊಡ್ಡ ಪ್ರಾಣಿಗಳ ಲಭ್ಯತೆ ಇಲಿ ಕಪ್ಪೆಗಳಿಗಿಂತ ವಿರಳ; ಎಲ್ಲೋ ಅಪರೂಪಕ್ಕೊಮ್ಮೆ ಕೊಲ್ಲುವುದು ಸಾಧ್ಯ. ಆದ್ದರಿಂದ, ಹುಲಿಯ ಆಂಗಿಕರಚನೆಯಲ್ಲಿ ಆಹಾರಪಥ್ಯಕ್ರಮ ಹೇಗೆ ರೂಪುಗೊಂಡಿದೆಯೆಂದರೆ ಅದಕ್ಕೆ 6-8 ದಿನಗಳಿಗೊಮ್ಮೆ ಪುಷ್ಕಳವಾಗಿ ಊಟ ಸಿಕ್ಕಿದರಾಯಿತು. ಹುಲಿಯೊಂದು ಎರಡು ವಾರಗಳವರೆಗೆ ಯಾವುದೇ ಬೇಟೆಯಾಡದೇ ಇದ್ದುದು ರೇಡಿಯೋ ಕಾಲರ್ ತೊಡಿಸಿ ನಡೆಸುತಿದ್ದ ಸಂಶೋಧನೆಯ ಸಂದರ್ಭದಲ್ಲಿ ತಿಳಿದುಬಂದಿದೆ. ಹಸಿದಿರಲಿ, ಬಿಡಲಿ, ಹುಲಿಗಳು ದಿನಂಪ್ರತಿ 15 ರಿಂದ 16 ಗಂಟೆಗಳ ಕಾಲ ವಿಶ್ರಾಂತಿಯಲ್ಲಿರುವುದರಿಂದಲೂ ತಮ್ಮ ಶಕ್ತಿಯನ್ನು ಉಳಿಸಿಕೊಳ್ಳುತ್ತವೆ. ಇನ್ನು ಬೇಟೆಯಾಡಿದಮೇಲೆ ಹೇಳುವುದೇ ಬೇಡ. ಮುಂದಿನ ಎರಡುಮೂರು ದಿನ ಹುಲಿ ಸಂಪೂರ್ಣ ನಿಷ್ಕ್ರಿಯವೇ!
ಮೊದಲಿಗೆ ಹುಲಿ ತನ್ನ ಬೇಟೆಯನ್ನು ಪತ್ತೆಹಚ್ಚಿ ಕೊಲ್ಲಬೇಕಷ್ಟೆ. ಇದೇನೂ ಸುಲಭದ ಕೆಲಸವಲ್ಲ. ಬಹುತೇಕ ಗೊರಸಿನ ಪ್ರಾಣಿಗಳು ಸದಾ ಎಚ್ಚರದಿಂದಿರುತ್ತವೆ. ಅವುಗಳ ಶ್ರವಣ ಶಕ್ತಿ ಬಲು ತೀಕ್ಪ್ಣ. ವಾಸನೆ ಹಿಡಿಯುವುದರಲ್ಲೂ ಅವು ಬಲು ಚುರುಕು. ಅವಕ್ಕೆ ಪತ್ತೆಯೇ ಹತ್ತದಂತೆ 10 ರಿಂದ 30 ಮೀಟರುಗಳಷ್ಟು ಸಮೀಪಕ್ಕೆ ತಲಪಿ ಮೇಲೆರಗುವುದೆಂದರೆ ಹುಲಿ ತನ್ನೆಲ್ಲ ಕೌಶಲವನ್ನೂ ಬಳಸಲೇಬೇಕು. ಮೃಗಾಲಯದಲ್ಲಿ ಹುಲಿಯನ್ನು ಕಾಣುವಾಗ ಅದರ ಅರಶಿನ ಮತ್ತು ಬಿಳಿಬಣ್ಣಗಳ ವರ್ಣರಂಜಿತ ವೈದೃಶ್ಯವು ಕಪ್ಪುಪಟ್ಟೆಗಳೊಡನೆ ಬೆರೆತು ಆಕರ್ಷಕವಾಗಿ ಕಾಣಬಹುದು. ಆದರೆ ಬಗೆಬಗೆಯಾಗಿ ಹರಡಿಕೊಂಡ ನೆರಳುಗಳ ಚಿತ್ತಾರವಿರುವ ಕಾಡಿನ ಕಡುಗಂದು ಆವರಣದಲ್ಲಿ ಹುಲಿ ನಡೆದುಬರುವಾಗ, ಹುಲಿಯ ಈ ಬಣ್ಣದ ವಿನ್ಯಾಸ ಸುತ್ತಲಿನ ಪೊದರುಗಳೊಡನೆ ಮಿಳಿತಗೊಂಡುಬಿಡುತ್ತದೆ. ಹುಲಿಯ ಆಹಾರವಾದ ಗೊರಸಿನ ಪ್ರಾಣಿಗಳು ಬಣ್ಣಗಳ ಅಂತರವನ್ನು ಅಷ್ಟಾಗಿ ಗುರುತಿಸಲಾರವು. ಹೀಗಾಗಿ, ನಿಶ್ಚಲವಾಗಿ ಕುಳಿತ ಹುಲಿ ಅವಕ್ಕೆ ಕಾಣಿಸುವುದೇ ಇಲ್ಲ.
ಇನ್ನಿತರ ಬೇಟೆಯ ಹೊಂದಾಣಿಕೆಗಳೆಂದರೆ ಅಡಿಮೆತ್ತೆ ಇರುವ ಪಾದಗಳು, ತುದಿಬೆರಳಲ್ಲಿ ನಿಲ್ಲುವ ಸಾಮಥ್ರ್ಯ, ಮತ್ತು ಬಳುಕುವ ಶರೀರ. ಹುಲಿಗಳು ತಾವು ಮರಗಳ ಕಾಂಡಗಳ ಮೇಲೆ ಸಿಂಪಡಿಸಿದ ವಾಸನೆಯ ಗುರುತುಗಳಿಂದಲೇ ಪರಸ್ಪರ ಸಂಪರ್ಕಸಾಧಿಸುವುದನ್ನು ಗಮನಿಸಿದರೆ ಹುಲಿಗಳಿಗೆ ಒಳ್ಳೆಯ ವಾಸನಾ ಶಕ್ತಿ ಇರುವುದೆಂದು ಹೇಳಬಹುದು. ಆದರೆ, ಬೇಟೆಗೆ ಸಂಬಂಧಿಸಿದಂತೆ ಅವು ನೋಟ ಮತ್ತು ಶ್ರವಣ ಶಕ್ತಿಯನ್ನೇ ಬಳಸಿಕೊಳ್ಳುವಂತೆ ತೋರುತ್ತದೆ. ಹುಲಿಯ ಕಣ್ಣುಗಳ ರಚನೆ ಮತ್ತು ಅವಕ್ಕೆ ಸಂಪರ್ಕಿಸುವ ನರಗಳಿಂದ ಸೂಚಿತವಾಗುವಂತೆ ಬಹುಶಃ ಹುಲಿಗಳಿಗೆ ಜಗತ್ತು ಕಪ್ಪು ಬಿಳುಪಾಗಿ ಮಾತ್ರವೇ ಕಾಣುವುದಾದರೂ ಅವುಗಳ ಇರುಳುನೋಟದ ಶಕ್ತಿ ಮಾತ್ರ ಅದ್ಭುತವಾದುದು. ದಟ್ಟವಾದ ಕಾಡಿನೊಳಗೆ ನೆಟ್ಟಿರುಳಿನಲ್ಲಿ ಜಾಡಿನ ಪತ್ತೆಗೆ ಅವುಗಳ ಉದ್ದಮೀಸೆಗಳ ಸ್ಪರ್ಶಜ್ಞಾನದಿಂದಲೂ ನೆರವು ದೊರಕೀತು. ಹುಲಿಗಳು ಗಾಢಾಂಧಕಾರದಲ್ಲೂ ನಿಶ್ಶಬ್ದವಾಗಿ ಬೇಟೆಗಾಗಿ ಹುಡುಕಾಟ ನಡೆಸಬಲ್ಲವು. ವಿಶೇಷವಾಗಿ ರೂಪುಗೊಂಡ ಕಿವಿಯ ಒಳಕೋಣೆಗಳು ಹಾಗೂ ಚಲಿಸಬಲ್ಲ ಹೊರಗಿವಿಗಳ ನೆರವಿನಿಂದ ಹುಲಿ ಕಣ್ಣಿಗೆ ಕಾಣದ ಪ್ರಾಣಿಯ ಅತಿಸೂಕ್ಷ್ಮ ಸದ್ದನ್ನೂ ಗ್ರಹಿಸಿ ಅದರ ನೆಲೆಯನ್ನು ಪತ್ತೆಹಚ್ಚಬಲ್ಲುದು.
ಬೇಟೆಯ ಪ್ರಾಣಿಯನ್ನು ಹಿಡಿಯಲು ಬೇಕಾದ ಶಕ್ತಿಯಷ್ಟನ್ನೂ ಹುಲಿಯ ಮಾಂಸಖಂಡಗಳು ಒಗ್ಗೂಡಿಸಬಲ್ಲವು. ಆದರೆ, ಗೊರಸಿನ ಪ್ರಾಣಿಯ ಮಾಂಸಖಂಡಗಳಿಗೆ ಹೋಲಿಸಿದರೆ, ಹುಲಿಯ ಮಾಂಸಖಂಡಗಳು ಬಲುಬೇಗನೆ ದಣಿಯುತ್ತವೆ. ಗಟ್ಟಿಮುಟ್ಟಾದ ಮೂಳೆಗಳು ಹಾಗೂ ಬೇಕಾದಂತೆ ಮಣಿಯುವ ಕೀಲುಗಳನ್ನು ಸುತ್ತುವರಿದಿರುವ ಈ ಮಾಂಸಖಂಡಗಳು ವಿಪರೀತ ಹೊರಳು, ತಿರುಗು, ತಿರುಚು, ಬಳುಕಾಟಗಳಿಂದ ತುಂಬಿದ ಕ್ಷಣಿಕ ಆಕ್ರಮಣಕ್ಕೆ ಮಾತ್ರವೇ ಸಮರ್ಥವಾಗಿವೆ. ಹುಲಿಯೊಂದು ಕಡವೆಯನ್ನು ನೆಲಕ್ಕುರುಳಿಸುವ ದೃಶ್ಯಗಳನ್ನು ಸೆರೆಹಿಡಿದು ವಾಲ್ಮಿಕ್ ಥಾಪರ್ರವರು ತೆಗೆದಿರುವ ಗಮನಾರ್ಹ ಚಿತ್ರಸರಣಿ, ಹುಲಿಯ ದೇಹದ ಬೆರಗುಹುಟ್ಟಿಸುವ ತಿರುಚುವಿಕೆಗಳನ್ನು ಯಥಾವತ್ತಾಗಿ ಪ್ರದರ್ಶಿಸುವಲ್ಲಿ ಸಮರ್ಥವಾಗಿದೆ. ಅತ್ಯಾಧುನಿಕ ರೋಬಟ್ ಯುಗದಲ್ಲೂ ಇಂಥ ಅಸಾಧಾರಣ ಸಾಮಥ್ರ್ಯವನ್ನು ಮೆರೆಯಬಲ್ಲ ಯಾವುದೇ ಯಂತ್ರವನ್ನು ಊಹಿಸಿಕೊಳ್ಳುವುದೂ ಕಷ್ಟವೇ. ತನ್ನ ದೇಹದ ತೂಕಕ್ಕಿಂತ 3ರಿಂದ 5 ಪಟ್ಟು ದೊಡ್ಡದಾದ ಕಾಟಿ ಇಲ್ಲವೇ ಕಡವೆಯಂತಹ ಪ್ರಾಣಿಯನ್ನು ನೆಲಕ್ಕೆ ಉರುಳಿಸುವ ಪ್ರಯತ್ನದಲ್ಲಿರುವಾಗ ಹುಲಿ ಅವುಗಳ ಗೊರಸು ಇಲ್ಲವೇ ಕೋಡುಗಳ ತಿವಿತೊದೆತಗಳಿಂದ ಗಾಯಗೊಳ್ಳದಂತೆ ಎಚ್ಚರವಹಿಸಬೇಕಾಗುತ್ತದೆ. ಇದನ್ನು ತಪ್ಪಿಸುವುದಕ್ಕಾಗಿ ಹುಲಿ ತನ್ನ ಮುಂಗಾಲುಗಳನ್ನೂ, ಪಂಜದ ಅಲಗಿನೊಳಗೆ ಹುದುಗಿಕೊಂಡಂತಿರುವ ಹರಿತವಾದ ಉಗುರುಗಳನ್ನೂ ಬಳಸುತ್ತದೆ. ತೀವ್ರ ಘರ್ಷಣೆಯ ಸಂದರ್ಭಗಳಲ್ಲಿ ಹುಲಿಯ ಹಿಂಗಾಲುಗಳೂ ಪ್ರಾಣಿಯನ್ನು ಗಂಭೀರವಾಗಿ ಗಾಯಗೊಳಿಸಬಲ್ಲವು. ಇವೆಲ್ಲಕ್ಕಿಂತ ಅತಿಮುಖ್ಯವಾದ ಆಯುಧಗಳೆಂದರೆ ಚೂರಿಯಂತಹ ನಾಲ್ಕು ಕೋರೆಹಲ್ಲುಗಳು. ದವಡೆಯ ಬಲಿಷ್ಠ ಮಾಂಸಖಂಡಗಳು ಬೇಟೆಯ ಪ್ರಾಣಿಯ ಕುತ್ತಿಗೆ, ಗಂಟಲು ಇಲ್ಲವೇ ಮಿದುಳಕವಚದೊಳಕ್ಕೆ ಈ ಕೋರೆ ಹಲ್ಲುಗಳನ್ನು ಆಳವಾಗಿ ಊರಿ, ಇರಿದು ಪ್ರಾಣಿಯನ್ನು ನಿಷ್ಕ್ರಿಯಗೊಳಿಸಿ ಕ್ಷಿಪ್ರವಾಗಿ ಕೊಲ್ಲುತ್ತವೆ. ವಿಸ್ತರಣೆ ಹಾಗೂ ಜೈವಿಕನೆಲೆ : ಏಷ್ಯಾ ಖಂಡ ಮತ್ತು ಅದಕ್ಕೆ ಹೊಂದಿಕೊಂಡ (ಜಾವಾ, ಬಾಲಿ, ಸುಮಾತ್ರ, ಮತ್ತಿತರ ದ್ವೀಪಗಳನ್ನು ಒಳಗೊಂಡ) ಸುಂದಾ ದ್ವೀಪಗಳು ಹುಲಿಯ ನಿವಾಸ ಪ್ರದೇಶಗಳು. ಹಿಂದೆ, ಹುಲಿಗಳು ವಿರಳವಾಗಿಯಾದರೂ ಬಹುತೇಕ ಭೂಪ್ರದೇಶಗಳಲ್ಲಿ ಹಂಚಿಕೆಯಾಗಿದ್ದುವು. ಒಂದೆಡೆ, ಹಿಮಾಲಯದಿಂದ ಉತ್ತರಕ್ಕೆ ಚೈನಾದಿಂದ ರಷ್ಯಾದವರೆಗೂ, ಮಧ್ಯ ಏಷ್ಯಾದ ದೇಶಗಳನ್ನು ಹಾಯ್ದು ಇರಾನ್ನವರೆಗೂ ಹರಡಿಕೊಂಡರೆ, ಮತ್ತೊಂದೆಡೆ ದಕ್ಷಿಣಪೂರ್ವದ ಇಂಡೋಚೈನಾದಿಂದ ಬರ್ಮಾ (ಇಂದಿನ ಮ್ಯಾನ್ಮಾರ್), ಅಲ್ಲಿಂದ ಭಾರತದ ಎಲ್ಲೆಡೆ ವಿಸ್ತರಿಸಿದ ಹುಲಿಗಳ ವಿಸ್ತರಣೆಗೆ ರಾಜ್ಯಸ್ಥಾನದ ಮರುಭೂಮಿ, ಹಿಮಾಲಯ, ಹಿಂದೂಮಹಾಸಾಗರಗಳೇ ಅಡ್ಡಿಯಾದವು. ಹುಲಿಗಳ ಹಂಚಿಕೆಯ ಇನ್ನೊಂದು ಕವಲು ಮಲಯಾ ಮತ್ತು ಜಾವಾ, ಬಾಲಿ, ಸುಮಾತ್ರ ಮತ್ತಿತರ ಇಂಡೋನೇಷ್ಯನ್ ದ್ವೀಪಗಳಿಗೆ ವಿಸ್ತರಿಸಿತು. ಪ್ಲೀಸ್ಟೊಸಿನ್ ಯುಗದಲ್ಲಿನ ಸಮುದ್ರದ ಮಟ್ಟಗಳು ಮತ್ತು ಬದಲಾವಣೆಗಳೇ ಈ ರೀತಿಯ ವಿಸ್ತರಣೆಯ ವೈವಿಧ್ಯಕ್ಕೆ ಕಾರಣವೆಂದು ವಿಜ್ಞಾನಿ ಜಾನ್ ಸೈಡೆನ್ಸ್ಟಿಕೆರ್ರವರ ಅಭಿಪ್ರಾಯ.
ವ್ಯಾಪಕವಾದ ಭೂಪ್ರದೇಶಗಳಲ್ಲಿ ಹರಡಿದ ಹುಲಿಗಳು ನಿಜಕ್ಕೂ ವೈವಿಧ್ಯಮಯವಾದ ನಿವಾಸನೆಲೆಗಳಲ್ಲಿ ಜೀವಿಸುತ್ತಿದ್ದವು. ರಷ್ಯಾದ ನಿತ್ಯಹಸುರಿನ ಅಗಲದೆಲೆಯ ಸಮಶೀತೋಷ್ಣಕಾಡುಗಳಿಂದ ಚೈನಾದ ಉಷ್ಣವಲಯದಂಚಿನ ಅರಣ್ಯಗಳವರೆಗೆ ಕ್ಯಾಸ್ಪಿಯನ್ ಪ್ರದೇಶದ ಹುಲ್ಲುಗಾವಲುಗಳಿಂದ ಥೈಲ್ಯಾಂಡ್, ಇಂಡೋಚೈನಾ, ಮಲೇಷಿಯಾ, ಭಾರತ ಹಾಗೂ ಇಂಡೋನೇಷ್ಯಾ ದೇಶಗಳ ಉಷ್ಣವಲಯದ ದಟ್ಟ ಹಸಿರುಕಾಡುಗಳವರೆಗೆ ಹುಲಿಯ ನೆಲೆ ಹಂಚಿಕೆಯಾಗಿದೆ. ಭಾರತ ಉಪಖಂಡ ಮತ್ತು ದಕ್ಷಿಣಪೂರ್ವ ಏಷ್ಯಾದ ಉಷ್ಣವಲಯದ ಎಲೆಯುದುರುವ ಕಾಡುಗಳು ಹುಲಿಯ ಆದರ್ಶ ನೆಲೆಗಳೆನಿಸಿದವು. ಅಲ್ಲದೆ, ಭಾರತ, ಬಾಂಗ್ಲಾದೇಶ, ಜಾವಾಗಳ ಕಾಂಡ್ಲಾ (ಮ್ಯಾಂಗ್ರೋವ್) ಕಾಡುಗಳಲ್ಲೂ ಸುಮಾತ್ರದ ಜೌಗುಪ್ರದೇಶಗಳಲ್ಲೂ ಹುಲಿಗಳು ನೆಲೆಸಿದ್ದವು. ಸಿಂಹ ಚಿರತೆಗಳಂತೆ ಒಣಭೂಮಿಯ ತೆರವುಗಳಲ್ಲಿ ಹುಲಿ ವಾಸಿಸಲಾರದಿದ್ದರೂ ಒಂದಿಷ್ಟು ಕಾಡಿನ ಆವರಣ ನೀರಿನ ಸೌಲಭ್ಯಗಳಿದ್ದಲ್ಲಿ ಹುಲಿ ಎಂಥ ನೆಲೆಯನ್ನೇ ಆದರೂ ಆಯ್ಕೆಮಾಡಿಕೊಂಡುಬಿಡುವುದು.
ಹೇಗೇ ಇದ್ದರೂ, ಒಂದು ನಿರ್ದಿಷ್ಟ ಪ್ರದೇಶ ಹುಲಿಗಳ ನಿವಾಸಯೋಗ್ಯವೆನಿಸಬೇಕಾದರೆ ಅಲ್ಲಿ ಸಾಕಷ್ಟು ಬೇಟೆಯ ಪ್ರಾಣಿಗಳ ಲಭ್ಯತೆಯಿರುವುದು ಅವಶ್ಯ. ಹುಲಿಯ ಆಹಾರದ ಆಯ್ಕೆಯ ಅಪೂರ್ಣಪಟ್ಟಿಯಲ್ಲಿ ದೊಡ್ಡಗೊರಸಿನ ಪ್ರಾಣಿಗಳಾದ ಕಾಡುದನಗಳು (ಕಾಟಿ, ಬಾನ್ಟೆಂಗ್, ಗೌಪ್ರೇ ಮತ್ತು ಕಾಡೆಮ್ಮೆ), ಬೋವಿಡ್ ವರ್ಗದ ಇತರ ಪ್ರಾಣಿಗಳು (ನೀಲ್ಗಾಯ್, ಚೌಸಿಂಘ, ಚಿಂಕಾರ, ತಾಕಿನ್, ವುಕ್ವಾಂಗ್ ಆಕ್ಸ್) ಕಾಡುಮೇಕೆಗಳು ಮತ್ತು ಆಂಟಿಲೋಪ್ಗಳು (ಥಾರ್, ಗೊರಲ್, ಸೆರೋ) ಹಲವು ಜಾತಿಯ ಜಿಂಕೆಗಳು (ಮೂಸ್, ಎಲ್ಕ್, ಸಿಕಾ, ಸಾಂಬಾರ್, ಬಾರಸಿಂಘ, ತಮಿನ್, ಸಾರಗ, ಹಾಗ್ ಡಿಯರ್, ತಿಯೋಮೊರಸ್ ಡಿಯರ್, ಕಾಡುಕುರಿ) ಟೆಪಿರ್ಗಳು, ಕಾಡುಹಂದಿ ಹಾಗೂ ಅಪರೂಪವಾಗಿ ಖಡ್ಗಮೃಗ ಮತ್ತು ಆನೆಯ ಮರಿಗಳು. ಹುಲಿಗಳು ಚಿಕ್ಕಪುಟ್ಟ ಜೀವಿಗಳನ್ನೂ ಕೊಲ್ಲುತ್ತವೆಯಾದರೂ ಅವುಗಳ ಆವಾಸದಲ್ಲಿ ಸಾಕಷ್ಟು ದಟ್ಟಣೆಯಲ್ಲಿ ಗೊರಸಿನ ಪ್ರಾಣಿಗಳು ಇಲ್ಲದಿದ್ದಲ್ಲಿ ಹುಲಿಗಳು ಬದುಕಿ ತಮ್ಮ ಸಂತಾನವನ್ನು ಬೆಳೆಸಲಾರವು.
ಬೇಟೆಗಾರಿಕೆಯ ಜೀವಿಪರಿಸ್ಥಿತಿ: ಹುಲಿ ಹಾಗೂ ಬೇಟೆಯ ಪ್ರಾಣಿಗಳ ಸಂಖ್ಯೆ : ಕಾನ್ಹದಲ್ಲಿ (1947-65) ಜಾರ್ಜ್ ಷಾಲರ್ರವರೂ, ಚಿತ್ವಾನ್ನಲ್ಲಿ (1975-76) ಮೆಲ್ವಿನ್ ಸನ್ಕ್ವಿಸ್ಟ್ರವರೂ ಕೈಗೊಂಡ ವೈಜ್ಞಾನಿಕ ಅಧ್ಯಯನಗಳಿಂದಲೂ ನಾಗರಹೊಳೆಯಲ್ಲಿ (1985-95) ಉಲ್ಲಾಸ ಕಾರಂತ ನಡೆಸಿದ ಅಧ್ಯಯನಗಳಿಂದಲೂ ಹುಲಿಯ ಬೇಟೆಗಾರಿಕೆಯನ್ನು ಕುರಿತು ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಈ ಮಾಹಿತಿಗಳ ಆಧಾರದ ಮೇಲೆ ಹೇಳುವುದಾದರೆ, ಒಂದು ಗಂಡು ಹುಲಿಗೆ ವರ್ಷವೊಂದಕ್ಕೆ 2200 ರಿಂದ 2500ಕೆ. ಜಿ. ಗಳಷ್ಟು ಮಾಂಸದ ಅವಶ್ಯಕತೆಯಿದ್ದು ಹೆಣ್ಣು ಹುಲಿಗಾಗಲೀ ಚಿಕ್ಕಪ್ರಾಯದ ಹುಲಿಗಾಗಲೀ 1850ರಿಂದ 2300 ಕೆ.ಜಿ. ಗಳಷ್ಟು ಮಾಂಸ ಬೇಕಾಗುತ್ತದೆ. ವ್ಯರ್ಥವಾಗುವ ಆಹಾರ ಮತ್ತು ತಿನ್ನಲಾಗದ ಅಂಗಗಳ ಲೆಕ್ಕಾಚಾರವನ್ನು ಸೇರಿಸಿದರೆ, ಸರಾಸರಿ ಪ್ರಾಯದ ಹುಲಿಯೊಂದಕ್ಕೆ ವಾರ್ಷಿಕವಾಗಿ 3000 ದಿಂದ 3200 ಕಿಲೋಗ್ರಾಮುಗಳಷ್ಟು ತೂಕದ ಜೀವಂತ ಬೇಟೆಯಪ್ರಾಣಿಗಳ ಅವಶ್ಯಕತೆಯಿರುವುದೆಂದಾಯಿತು. ಇಷ್ಟು ಪೌಷ್ಟಿಕ ಅವಶ್ಯಕತೆಯನ್ನು ಪಡೆದುಕೊಳ್ಳಲು ಹುಲಿಯೊಂದು ಪ್ರತಿವರ್ಷದಲ್ಲಿ 40ರಿಂದ 50 ಬೇಟೆಯ ಪ್ರಾಣಿಗಳನ್ನು ಕೊಲ್ಲಬೇಕಾಗುತ್ತದೆ. ಅಂತೆಯೇ ಮೂರುಮರಿಗಳನ್ನು ಪೋಷಿಸುವ ಹೊಣೆಹೊತ್ತ ತಾಯಿಹುಲಿ 60 ರಿಂದ 70 ಪ್ರಾಣಿಗಳನ್ನು ಬೇಟೆಯಾಡಬೇಕಾಗುತ್ತದೆ. ಹುಲಿಗಳನ್ನು (ಮತ್ತು ಇತರ ಮಾರ್ಜಾಲಗಳನ್ನು) ಕುರಿತ ಸಂಶೋಧನೆಗಳಿಂದ ತಿಳಿದುಬರುವಂತೆ, ಅವು ತಮ್ಮ ನೆಲೆಯಲ್ಲಿರುವ ಒಟ್ಟು ಬೇಟೆಯ ಪ್ರಾಣಿಗಳ ಶೇ.8ರಿಂದ 10ರಷ್ಟನ್ನು ಮಾತ್ರ ಆಹಾರವಾಗಿ ಬಳಸಿಕೊಳ್ಳುವುದು ಸಾಧ್ಯ. ಈ ಬಗೆಯ ಬೇಟೆಗಾರ - ಬೇಟೆಯ ಆಹಾರ ಪ್ರಾಣಿಗಳ ಅನುಪಾತಕ್ಕೆ ಸಂಬಂಧಿಸಿದ ಇನ್ನಿತರ ಅಂಶಗಳೆಂದರೆ, ಗೊರಸಿನ ಪ್ರಾಣಿಗಳ ಸಂತತಿಯ ಬೆಳವಣಿಗೆ, ಇತರೆ ಕಾರಣಗಳಿಂದಾದ ಮರಣ ಪ್ರಮಾಣ ದರಗಳು, ಮತ್ತು ಹುಲಿಗಳೇ ತಮ್ಮ ಸಂಖ್ಯಾವೃದ್ಧಿಯ ನಡುವೆ ಬದುಕಲು ನಡೆಸಬೇಕಾದ ಹೋರಾಟ. ಜೀವವಿಜ್ಞಾನಿ ಲೂಯಿಸ್ ಎಮನ್ಸ್ರವರು ದಕ್ಷಿಣ ಅಮೆರಿಕಾದಲ್ಲಿನ ದೊಡ್ಡ ಮತ್ತು ಚಿಕ್ಕ ಮಾರ್ಜಾಲಗಳ ಬೇಟೆಗಾರಿಕೆಯನ್ನು ಹೋಲಿಸುತ್ತ, ಚಿಕ್ಕ ಮಾರ್ಜಾಲಗಳು ವಾರ್ಷಿಕವಾಗಿ ತಮ್ಮ ಬೇಟೆಯ (ಉದಾಹರಣೆ ಇಲಿ) ಶೇ. 40ರಷ್ಟನ್ನು (ಇಲಿಗಳ ಸಂತತಿ ಹುಲಿಗಳ ಬೇಟೆಯಾದ ಗೊರಸಿನ ಪ್ರಾಣಿಗಳಿಗಿಂತ ಬಲುಬೇಗ ವರ್ಧಿಸುವಂಥದು) ನಿಯಂತ್ರಣದಲ್ಲಿ ಇಡುತ್ತವೆಯೆಂದು ವಿವರಿಸಿದ್ದಾರೆ. ದೊಡ್ಡ ಮಾರ್ಜಾಲಗಳ ಬೇಟೆಗಾರಿಕೆ ಆಹಾರಪ್ರಾಣಿಗಳ ಶೇ. 10ರ ಲಕ್ಷ್ಮಣ ರೇಖೆಯನ್ನು ದಾಟಲಾರದು ಎನ್ನುವುದಾದರೆ, ಪ್ರತಿ ಒಂದು ಹುಲಿಗೆ ಸುಮಾರು 500 ಗೊರಸಿನ ಪ್ರಾಣಿಗಳು ವಾಸವಾಗಿರುವ ನೆಲೆಯ ಅಗತ್ಯವಿದೆಯೆಂದಾಯಿತು.
ಬೇಟೆಯ ಪ್ರವರ್ತನೆ ಮತ್ತು ಪೋಷಣೆಯ ಜೀವಿಪರಿಸ್ಥಿತಿ : ಒಂದು ಹುಲಿ ಸರಾಸರಿ 7-8 ದಿನಗಳಿಗೊಮ್ಮೆ ಬೇಟೆಯಾಡುತ್ತದೆ. ಆದರೆ, ಮರಿಗಳಿರುವ ಹುಲಿ ತನ್ನ ಕುಟುಂಬವನ್ನು ಪೋಷಿಸಲು ಇನ್ನೂ ಹೆಚ್ಚು ಬಾರಿ ಬೇಟೆಯಾಡುವುದು ಅನಿವಾರ್ಯ. ಬೇಟೆಯನ್ನು ಬಲಿತೆಗೆದುಕೊಂಡ ಕೂಡಲೇ ಹುಲಿ ಆ ಪ್ರಾಣಿಯನ್ನು ಸಮೀಪದ ಆವರಣದೊಳಕ್ಕೆ ಎಳೆದೊಯ್ದು ಹದ್ದುಗಳಿಂದಲೂ ಇತರ ಹೊಂಚುಗಾರರಿಂದಲೂ ಅಡಗಿಸಿಡುತ್ತದೆ. ಸಾಮಾನ್ಯವಾಗಿ ಹುಲಿ ಪ್ರಾಣಿಯ ಹಿಂಭಾಗದಿಂದ ತಿನ್ನಲು ಪ್ರಾರಂಭಿಸುತ್ತದೆ. ತಾನು ತಿನ್ನುವ ಮಾಂಸದ ಭಾಗಗಳೊಡನೆ ಜಠರ ಮತ್ತು ಕರುಳಿನ ಭಾಗಗಳು ಬೆರೆಯದಂತೆ ಎಚ್ಚರವಹಿಸುತ್ತದೆ. ತನ್ನ ನೆಮ್ಮದಿಗೆ ಭಂಗಬಾರದಿದ್ದರೆ ಹುಲಿ ತನ್ನ ಬೇಟೆಯೊಡನೆ 3-4 ದಿನಗಳವರೆಗೆ ಉಳಿದು 50 ರಿಂದ 80 ಕಿಲೋಗ್ರಾಮುಗಳಷ್ಟು ಮಾಂಸವನ್ನು ಸೇವಿಸುತ್ತದೆ. ನಾಗರಹೊಳೆಯ ಹುಲಿಗಳು ತಮ್ಮ ಬೇಟೆಯ ಶೇ. 65ರಷ್ಟು ಭಾಗವನ್ನು ಸೇವಿಸುತ್ತವೆಯಾದರೂ ದೊಡ್ಡ ಕಾಟಿಗಳನ್ನು ಕೊಂದ ಸಂದರ್ಭಗಳಲ್ಲಿ ಆಹಾರ ಸೇವನೆಯ ಪ್ರಮಾಣ ತುಲನಾತ್ಮಕವಾಗಿ ಕಡಿಮೆಯಾಗಿ ಇರುತ್ತದೆ.
ಚಿತ್ವಾನ್ ಮತ್ತು ನಾಗರಹೊಳೆಗಳಲ್ಲಿ ನಡೆಸಲಾದ ರೇಡಿಯೋ ಟ್ರಾಕಿಂಗ್ ಅಧ್ಯಯನಗಳ ಮೂಲಕ ತಿಳಿದುಬಂದುದೇನೆಂದರೆ, ಹುಲಿಗಳು ಹಗಲು ವೇಳೆಯಲ್ಲಿ ಬೇಟೆಯಾಡಬಲ್ಲವಾದರೂ ಅವು ನಡುಹಗಲಿನಲ್ಲಿ ತೀರ ನಿಷ್ಕ್ರಿಯವಾಗಿದ್ದು ಇಳಿಸಂಜೆಯಿಂದ ಬೆಳಗಿನಜಾವದವರೆಗೆ ಬಹು ಚಟುವಟಿಕೆಯಿಂದಿರುತ್ತವೆ. ಹುಲಿಗಳು ಪ್ರಾಣಿಗಳ ನಡಿಗೆಯ ಜಾಡುಗಳಲ್ಲೂ ದಾರಿಗಳಲ್ಲೂ ನಿಶ್ಶಬ್ದವಾಗಿ ಸಂಚರಿಸುತ್ತ ಬೇಟೆಯನ್ನು ಪತ್ತೆಹಚ್ಚಲು ತೊಡಗುತ್ತವೆ. ನಾಗರಹೊಳೆಯಲ್ಲಿ ಹುಲಿಗಳು ದಟ್ಟ ಅರಣ್ಯದೊಳಗೆಲ್ಲ ಅಲೆದಾಡಿ ತೆರವಿನ ಅಂಚುಗಳಲ್ಲಿ ಹುಡುಕಾಟ ನಡೆಸುತ್ತ ವಿಶ್ರಾಂತಿಯಲ್ಲೋ ಮೇಯುವುದರಲ್ಲೋ ತೊಡಗಿರುವ ಬೇಟೆಯ ಪ್ರಾಣಿಗಳನ್ನು ಚೆದುರಿಸಿ ಹಿಡಿಯಲೆತ್ನಿಸುತ್ತವೆ. ಆದರೆ, ರಣಥಂಭೋರ್ನ ಸರೋವರಗಳ ಸುತ್ತಲಿನ ನೆಲೆಯ ತೆರವುಗಳಲ್ಲಿ ಹುಲಿ ಕಡವೆಗಳನ್ನು ಬೆನ್ನಟ್ಟಿ ಇನ್ನೂ ದೂರದವರೆಗೆ (ಆಫ್ರಿಕಾದ ಸವನ್ನಾದಲ್ಲಿ ಸಿಂಹಗಳು ಬೇಟೆಯಾಡುವಂತೆ) ಧಾವಿಸುವ ದೃಶ್ಯಗಳನ್ನು ಫತೇಸಿಂಗ್ ರಾಥೋರ್ ಮತ್ತು ವಾಲ್ಮಿಕ್ ಥಾಪರ್ರವರು ದಾಖಲಿಸಿದ್ದಾರೆ. ಹುಲಿಗಳು ಬೇಟೆಯಾಡುವುದನ್ನು ಉಳಿದೆಲ್ಲರಿಗಿಂತ ಹೆಚ್ಚಾಗಿ ಗಮನಿಸಿರುವ ಅವರು, ಎಂಥ ಪ್ರಶಸ್ತವಾದ ಸನ್ನಿವೇಶದಲ್ಲೂ ಹುಲಿ ಬೇಟೆಗೆಂದು 10ಸಲ ಪ್ರಯತ್ನಪಟ್ಟರೆ ಒಮ್ಮೆ ಮಾತ್ರ ಯಶಸ್ವಿಯಾಗಬಹುದೆಂದು ಅಂದಾಜು ಮಾಡಿದ್ದಾರೆ.
ಬಹುತೇಕ ಸಂದರ್ಭಗಳಲ್ಲಿ ಹುಲಿಯ ಆಕ್ರಮಣದ ಮೊದಲ ಪರಿಣಾಮವೆಂದರೆ ಬೇಟೆಯ ಪ್ರಾಣಿಯನ್ನು ನೆಲಕ್ಕೆ ಬೀಳಿಸುವುದು. ಮರುಕ್ಷಣದಲ್ಲಿ ಅದರ ಕುತ್ತಿಗೆಯನ್ನೋ, ಹೆಗ್ಗತ್ತನ್ನೊ, ಮಿದುಳಕವಚವನ್ನೊ ಕಚ್ಚಿಹಿಡಿಯುವುದು. ಕಾಟಿ ಇಲ್ಲವೇ ಕಡವೆಯಂಥ ದೊಡ್ಡ ಪ್ರಾಣಿಯನ್ನು ಹಿಡಿದಾಗ ಹುಲಿ ಅದರ ಕುತ್ತಿಗೆಯನ್ನು ಕಚ್ಚಿ ಹಿಡಿದರೆ ಹಂದಿಯಂಥ ಚಿಕ್ಕ ಪ್ರಾಣಿಯನ್ನು ಹಿಡಿದಾಗ ಅದರ ಹೆಗ್ಗತ್ತನ್ನು ಹಿಡಿಯುವುದು. ಉಸಿರುಕಟ್ಟಿ, ರಕ್ತನಾಳಗಳು ತುಂಡರಿಸಿ, ಬೆನ್ನುಹುರಿಯ ಮುರಿತದಿಂದ, ಇಲ್ಲವೇ ಆಘಾತದಿಂದಲೇ ಪ್ರಾಣಿ ಸಾವನ್ನಪ್ಪುವುದು. ನಾಗರಹೊಳೆಯಲ್ಲಿನ ಉಲ್ಲಾಸ ಕಾರಂತರ ಅಧ್ಯಯನಗಳಿಂದ ವೃಕ್ತಪಡುವಂತೆ ಹುಲಿಗಳು ತಮಗೆ ಎದುರಾಗುವ ಯಾವುದೇ ಪ್ರಾಣಿಯನ್ನು "ಸಿಕ್ಕಿದ್ದು ದಕ್ಕಿಬಿಡಲಿ" ಎಂಬಂತೆ ಕೊಲ್ಲುವುದಿಲ್ಲ. ಇಲ್ಲಿನ ಕಾಡುಗಳಲ್ಲಿ ಚೀತಲ್ ಜಿಂಕೆಗಳು ಯಥೇಚ್ಛವಾಗಿದ್ದರೂ ಹುಲಿಗಳೂ ಕಾಟಿ ಇಲ್ಲವೇ ಕಡವೆಗಳನ್ನೇ ಬೇಟೆಗೆ ಆಯ್ಕೆ ಮಾಡಿಕೊಳ್ಳುವಂತೆ ಕಂಡುಬರುತ್ತದೆ. ಅದೇ ಚಿತ್ವಾನ್ ಮತ್ತು ಕಾನ್ಹ ಅರಣ್ಯಗಳಲ್ಲಿ ದೊಡ್ಡಬೇಟೆಯ ಪ್ರಾಣಿಗಳ ಲಭ್ಯತೆ ಕಡಿಮೆಯಿರುವುದರಿಂದ ಅಲ್ಲಿನ ಹುಲಿಗಳ ಆಹಾರದ ಮುಖ್ಯಭಾಗ ಜಿಂಕೆಗಳೇ ಆಗಿವೆ. ಥೈಲ್ಯಾಂಡಿನ ಹ್ವಾಯ್ ಖಾ ಖಾಯೆಂಗ್ನಲ್ಲಿ ಜೀವಿಪರಿಸ್ಥಿತಿ ಶಾಸ್ತ್ರಜ್ಞ ಅಲೆನ್ ರಬಿನೋವಿಟ್ಜ್ ಗಮನಿಸಿರುವಂತೆ, ಸ್ಥಳೀಯ ಬೇಟೆಗಾರರು ದೊಡ್ಡಪ್ರಾಣಿಗಳಾದ ಬಾನ್ಟೆಂಗ್, ಕಡವೆ ಮತ್ತು ಹಾಗ್ ಡಿಯರ್ಗಳನ್ನು ಬೇಟೆಯಾಡಿರುವುದರ ಪರಿಣಾಮವಾಗಿ ಅವುಗಳ ಸಂಖ್ಯೆಯೇ ಕುಗ್ಗಿಬಿಟ್ಟಿರುವುದರಿಂದ ಅಲ್ಲಿನ ಹುಲಿಗಳು ಕಾಡುಕುರಿ ಮತ್ತಿತ್ತರ ಚಿಕ್ಕಪುಟ್ಟ ಪ್ರಾಣಿಗಳನ್ನೇ ತಿಂದು ಹೊಟ್ಟೆಹೊರೆಯಬೇಕಾಗಿದೆ.
ಹುಲಿಯ ನೆಲೆಯಲ್ಲಿ ಜಾನುವಾರುಗಳು ಕಂಡುಬಂದರೆ ಹುಲಿ ಅವನ್ನು ಕೊಲ್ಲುವುದು ಖಂಡಿತ. ಅಪರೂಪಕ್ಕೊಮ್ಮೆ ಒಂದೊಂದು ಹುಲಿ ನರಭಕ್ಷಕವಾಗಿರುವ ಪ್ರವರ್ತನೆಯನ್ನು ಚಾಲ್ರ್ಸ್ಮೆಕ್ಡುಗಲ್ರವರು ದಾಖಲಿಸಿದ್ದರೂ ಈ ವಿಷಯದಲ್ಲಿ ಇನ್ನೂ ಸಮಗ್ರ ವಿಶ್ಲೇಷಣೆ ಆಗಬೇಕಾಗಿದೆ. ಎತ್ತರವಾಗಿ ನೆಟ್ಟಗೆ ನಿಲ್ಲುವ ಮನುಷ್ಯಪ್ರಾಣಿ ತನ್ನ ಭೋಜನದ ಒಂದು ಭಾಗವೆಂದು ಹುಲಿಯ ಮಿದುಳಿನಲ್ಲಿ ಸಾಮಾನ್ಯವಾಗಿ ದಾಖಲಾಗಿರುವುದಿಲ್ಲ. ಹೀಗಾಗಿ ಅದಕ್ಕೆ ಮನುಷ್ಯನ ಮೇಲೆ ಆಕ್ರಮಣ ಮಾಡಬೇಕೆನಿಸುವುದಿಲ್ಲ. ಹೇಗೂ ಇರಲಿ, ಆಕಸ್ಮಿಕವಾಗಿ ನಿರ್ದಿಷ್ಟ ಹುಲಿಯೊಂದಕ್ಕೆ ಮಾನವಪ್ರಾಣಿಯ ಔತಣ ಸುಲಭಸಾಧ್ಯವೆಂದು ಮನವರಿಕೆಯಾಗಿಬಿಟ್ಟರೆ, ಹುಲಿ ವಿಷಯಗಳ ಗ್ರಹಿಕೆಯಲ್ಲಿ ಬಹಳ ಚುರುಕಾಗಿರುವುದರಿಂದ, ಮತ್ತೆ ಮತ್ತೆ ಮನುಷ್ಯರನ್ನು ಕೊಲ್ಲಲೆಳಸಬಹುದು. ಹುಲಿಗಳಲ್ಲಿನ ನರಭಕ್ಷಕ ಪ್ರವೃತ್ತಿ ಸಾರ್ವತ್ರಿಕವಾಗಿರದೆ ಕೆಲವು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುವ ಸ್ಥಳೀಯ ಪ್ರವರ್ತನೆಯಾಗಿರುವುದನ್ನು ಗಮನಿಸಿದರೆ ತಾಯಿಹುಲಿಯಿಂದ ಮರಿಗಳೂ ಈ ಹವ್ಯಾಸವನ್ನು ಕಲಿತಿರುವ ಸಾಧ್ಯತೆಯಿದೆಯೆಂದು ತಿಳಿಯುತ್ತದೆ. ಆದರೆ, ದಕ್ಷಿಣ ಭಾರತದಂತಹ ವಿಶಾಲ ಭೂಪ್ರದೇಶಗಳಲ್ಲಿ ನರಭಕ್ಷಕ ಹುಲಿಗಳ ದಾಖಲೆ ತೀರ ಅಪರೂಪವಾಗಿರುವುದೇಕೆಂದು ಇನ್ನೂ ತಿಳಿಯಬೇಕಾಗಿದೆ.
ಪ್ರವರ್ತನೆ : ಪ್ರಾದೇಶಿಕ ಮತ್ತು ಸಾಮಾಜಿಕ ಅಗತ್ಯಗಳು : ಇತರ ಎಲ್ಲ ಪ್ರಾಣಿಗಳಂತೆ ಹುಲಿಗಳೂ ಪರಸ್ಪರ ಸಂಪರ್ಕಿಸುತ್ತವೆ-ಕೂಡುವುದಕ್ಕೆ, ಆಹಾರವನ್ನು ಹಂಚಿಕೊಳ್ಳುವುದಕ್ಕೆ ಅಥವಾ ಇರುವ ಸಂಪನ್ಮೂಲದ ಮೇಲೆ ಪ್ರಭುತ್ವ ಸ್ಥಾಪಿಸುವುದಕ್ಕೆ. ಕೆಲವೊಮ್ಮೆ ಅವು ಪರಸ್ಪರ ಘರ್ಷಣೆಯನ್ನು ನಿವಾರಿಸಲು ತಪ್ಪಿಸಿಕೊಂಡು ಹೋಗಬೇಕಾಗುತ್ತದೆ. ಅವು ಏಕಾಂಗಿಗಳಾಗಿದ್ದರೂ ತಮ್ಮದೇ ಆದ ಸಮಾಜದ ಭಾಗವೂ ಆಗಿರುತ್ತವೆ. ತಮ್ಮ ಹಾದಿಯನ್ನು ಗುರುತಿಸುವ ಸಲುವಾಗಿ ವಾಸನೆ ಮತ್ತು ಮೂತ್ರವನ್ನು ಸಿಂಪಡಿಸುವ ಮೂಲಕ ಪರಸ್ಪರ ಸಂಪರ್ಕ ಸಾಧಿಸುವ ವಿಶಿಷ್ಟ ರಾಸಾಯನಿಕ ಸಂಪರ್ಕವ್ಯವಸ್ಥೆಯನ್ನು ಪಡೆದಿವೆ. ಇದಕ್ಕೆ ಪೂರಕವಾಗಿ ಹುಲಿಗಳು ಪರಸ್ಪರ ಆಕರ್ಷಿಸುವುದಕ್ಕೂ ಘರ್ಷಣೆಯನ್ನು ತಪ್ಪಿಸುವುದಕ್ಕೂ ಗರ್ಜನೆ ಮತ್ತಿತ್ತರ ಧ್ವನಿಸಂಕೇತಗಳನ್ನು ಬಳಸುತ್ತವೆ. ನೆಲವನ್ನು ಕೆರೆಯುವುದೂ ಕಾಣುವಂಥ ಜಾಗದಲ್ಲಿ ಮಲವಿಸರ್ಜನೆ ಮಾಡುವುದೂ ಪರಸ್ಪರ ಸಂಪರ್ಕಕ್ಕೆ ಸಹಕಾರಿ.
ಒಂದು ಕಾಡಿನಲ್ಲಿರುವ ಹುಲಿಗಳಲ್ಲಿ ಗಂಡು, ಹೆಣ್ಣುಗಳೂ ವಿಭಿನ್ನ ವಯೋಮಾನದವುಗಳೂ ಕಂಡು ಬರುತ್ತವೆ. ನಿವಾಸಿ ಅಥವಾ ವಾಸಕ್ಷೇತ್ರ (ಹೋಮ್ರೇಂಜ್) ಹೊಂದಿರುವ ಮತ್ತು ಸಂತಾನ ಷೋಷಣೆಗೆ ಶಕ್ತವಾದ ಹೆಣ್ಣುಹುಲಿಗಳು ಈ ಸಾಮಾಜಿಕ ವ್ಯವಸ್ಥೆಯ ಮುಖ್ಯಭಾಗವಾಗಿವೆ. ಹೆಚ್ಚು ಆಹಾರ ಪ್ರಾಣಿಗಳ ಸಾಂದ್ರತೆಯಿರುವಂಥ ನಿರ್ದಿಷ್ಟ ನಿವಾಸನೆಲೆಯ ಮೇಲೆ ಒಡೆತನ ಸಾಧಿಸಿರುವ ಹೆಣ್ಣುಹುಲಿ ಆ ಪ್ರದೇಶದಲ್ಲಿ ಸಂತಾನವನ್ನು ಬೆಳೆಸುವ ಏಕಮೇವ ಹಕ್ಕುದಾರತಿಯೂ ಆಗಿರುತ್ತಾಳೆ. ಈ ಹೆಣ್ಣನ್ನು ಕೂಡುವ ದೊಡ್ಡ ಗಂಡುಹುಲಿ ಇಂಥ ಎರಡು ಮೂರು ಹೆಣ್ಣುಗಳ ನಿವಾಸವಲಯಗಳನ್ನೊಳಗೊಂಡ ವಿಶಾಲ ನೆಲೆಯ ಯಜಮಾನಿಕೆಯನ್ನು ವಹಿಸಿಕೊಂಡಿರುತ್ತದೆ. ಇನ್ನು ನಿವಾಸನೆಲೆಯೇನೂ ಇಲ್ಲದ ಅಲೆಮಾರಿ ಹುಲಿಗಳು. ಈ ದೇಶಾಂತರಿಗಳು ಗಂಡಾಗಿರಲಿ, ಹೆಣ್ಣಾಗಿರಲಿ ಸಂತಾನವನ್ನು ಬೆಳೆಸಲಾರವು. ಒಂದೂವರೆ ಎರಡು ವರ್ಷ ವಯಸ್ಸಾಗುತ್ತಿದ್ದಂತೆ ತನ್ನ ತಾಯಿಯಿಂದ ಬೇರ್ಪಡುವ ಹುಲಿ ತಾನು ಹುಟ್ಟಿ ಬೆಳೆದ ನೆಲೆಯೊಳಗೂ ಸುತ್ತಮುತ್ತಲ ಪ್ರದೇಶಗಳಲ್ಲೂ ಆಚೆ ಈಚೆ ತಿರುಗಾಡುತ್ತಿರುತ್ತದೆ. ತನ್ನದೇ ಆದ ನಿವಾಸವಲಯವನ್ನು ಸ್ಥಾಪಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿರುತ್ತದೆ. ಇಂಥ ಅಲೆಮಾರಿಗಳು ವಯಸ್ಸಿಗೆ ಬಂದು ಸಶಕ್ತವಾಗಿ ಬೆಳೆಯುತ್ತಿದ್ದ ಹಾಗೆ, ನಿವಾಸವಲಯಗಳಲ್ಲಿ ತಳವೂರಿರುವ ಹಳೇಹುಲಿಗಳೊಡನೆ ಸ್ಪರ್ಧೆಗೆ ಇಳಿಯುತ್ತವೆ. ಕೆಲವೂಮ್ಮೆ ಅವನ್ನು ಕೊಂದು ಅವುಗಳ ನಿವಾಸದ ಅಧಿಪತ್ಯವನ್ನು ತಾವೇ ವಹಿಸಿಕೊಳ್ಳುತ್ತವೆ. ಆದರೆ, ಈ ಸ್ಥಿತ್ಯಂತರದಲ್ಲಿ ಅನೇಕ ಅಲೆಮಾರಿ ಹುಲಿಗಳು ಸಾವನ್ನಪ್ಪುತ್ತವೆ.
105 ದಿನಗಳ ಗರ್ಭಾವಸ್ಥೆಯ ನಂತರ ಎರಡರಿಂದ ನಾಲ್ಕು ಮರಿಗಳು ಜನಿಸುತ್ತವೆ. ತೀರ ನಿಸ್ಸಹಾಯಕ ಸ್ಥಿತಿಯಲ್ಲಿರುವ ಈ ಶಿಶುಗಳಿಗೆ ಏಳೆಂಟು ವಾರಗಳ ಕಾಲ ತಾಯಿಯ ಹಾಲೇ ಆಹಾರ. ಅನಂತರ ತಾಯಿ ಅವನ್ನು ತಾನು ಕೊಂದ ಪ್ರಾಣಿಗಳೆಡೆಗೆ ಕರೆದೊಯ್ಯತೊಡಗುತ್ತದೆ. ಮುಂದಿನ ಒಂದೂವರೆವರ್ಷಗಳಲ್ಲಿ ಮರಿಗಳು ಬೇಟೆಯ ಕೌಶಲಗಳನ್ನು ಕ್ರಮಬದ್ಧವಾಗಿ ಬೆಳೆಸಿಕೊಳ್ಳತೊಡಗುತ್ತವೆ. ಬೇಟೆಗೆ ತಾಯಿ ಅನುಸರಿಸುವ ಮಾರ್ಗವನ್ನೆ ಇವು ಅನುಕರಿಸಬಹುದು. ಹೇಗೂ, ತಾಯಿಯಿಂದ ಬೇರ್ಪಟ್ಟ ಮೇಲೆ ಅವುಗಳ ಹೊಟ್ಟೆಪಾಡು ಅವುಗಳಿಗೇ ಬಿಟ್ಟದ್ದು ತಾನೇ! ಹುಲಿಯ ಸಾಮಾಜಿಕ ಸಂಬಂಧಗಳ ಬಗೆಗಿನ ನಮ್ಮ ಈಗಿನ ತಿಳಿವಳಿಕೆಯು, ಜೀವಶಾಸ್ತ್ರóಜ್ಞರಾದ ಮೆಲ್ವಿನ್ ಸನ್ಕ್ವಿಸ್ವ್ ಹಾಗೂ ಡೇವಿಡ್ ಸ್ಮಿತ್ರವರು ನೇಪಾಳದ ಚಿತ್ವಾನ್ ಅರಣ್ಯಗಳಲ್ಲಿ ರೇಡಿಯೋ ಟೆಲೆಮೆಟ್ರಿ ಉಪಯೋಗಿಸಿ ನಡೆಸಿದ ದೀರ್ಘಕಾಲದ ವೈಜ್ಞಾನಿಕ ಸಂಶೋಧನೆಗಳಿಂದ ಲಭಿಸಿದೆ. ಅವರು ಒದಗಿಸಿದ ಮಾಹಿತಿಗಳಿಗೆ ಪೂರಕವಾಗಿ ಮುಂದೆ, ನಾಗರಹೊಳೆ ಹಾಗೂ ರಷ್ಯಾಗಳಲ್ಲಿ ಟೆಲೆಮೆಟ್ರಿ ಅಧ್ಯಯನಗಳು ನಡೆದಿವೆ. ಈ ಅಧ್ಯಯನಗಳಿಂದ ದೊರೆತ ಹೊಸ ಮಾಹಿತಿಗಳಿಂದ ತಿಳಿದುಬರುವುದೆಂದರೆ, ಚಿತ್ವಾನ್ನಲ್ಲಿ ಗಮನಿಸಲಾಗಿರುವಂತಹ ಹುಲಿಗಳ ಪ್ರಾಥಮಿಕ ರೂಪರೇಖೆಗಳು ಇತರೆಡೆಗಳಲ್ಲಿ ಅಲ್ಲಿನ ಬೇಟೆಯ ಪ್ರಾಣಿಗಳ ಸಾಂದ್ರತೆ ಹಾಗೂ ಅರಣ್ಯದ ಸಸ್ಯವರ್ಗಸ್ವರೂಪವನ್ನು ಆಧರಿಸಿ ವಿಭಿನ್ನವಾಗಿರುವ ಸಾಧ್ಯತೆಗಳಿವೆ.
ಬೇಟೆಯ ಪ್ರಾಣಿಗಳ ಹೆಚ್ಚಿನ ಸಾಂದ್ರತೆ ಇರುವೆಡೆಗಳಲ್ಲಿ ಒಂದೇ ನಿರ್ದಿಷ್ಟವಾದ ಪ್ರದೇಶದೊಳಗೆ ಅನೇಕ ನಿವಾಸಿ ಹುಲಿಗಳೂ ಅಲೆಮಾರಿ ಹುಲಿಗಳೂ ಸೇರಿಕೊಂಡಿರುವ ಉದಾಹರಣೆಗಳಿವೆ. ನಾಗರಹೊಳೆಯ ಪ್ರತಿ ಚ.ಕಿ.ಮೀ. ಗೆ 50ರಿಂದ 75 ರಷ್ಟು ಗೊರಸಿನ ಪ್ರಾಣಿಗಳೂ ಕಂಡುಬರುವಂಥ ಪ್ರದೇಶಗಳು, ಹುಲಿಗಳ ಪ್ರಮುಖ ನೆಲೆಗಳಾಗಿದ್ದು ಅಲ್ಲಿ ಉಲ್ಲಾಸ ಕಾರಂತರು ಕಂಡುಕೊಂಡಂತೆ ವಂಶವನ್ನು ಬೆಳೆಸಬಲ್ಲ ಹೆಣ್ಣುಹುಲಿಗಳ ದಟ್ಟಣೆ ಪ್ರತಿ 100 ಕಿ.ಮೀ. ಗಳಿಗೆ 15 ಹುಲಿಗಳಷ್ವಿತ್ತು. ಇನ್ನೊಂದೆಡೆ ಬೇಟೆಯೇ ಸಿಗುವುದು ಕಷ್ಟವೆನಿಸುವಂಥ ರಷ್ಯಾದ ಕಾಡುಗಳಲ್ಲಿ ಪ್ರತಿ ಹೆಣ್ಣು ಹುಲಿಯ ವಾಸಕ್ಷೇತ್ರ 300 ಚ.ಕಿ.ಮೀ. ಗಳಿಗಿಂತ ಹೆಚ್ಚಾಗಿದ್ದು ರಷ್ಯಾಹುಲಿಗಳ ದಟ್ಟಣೆ ಇನ್ನಷ್ಟು ಕಡಿಮೆಯಾಗಿರುತ್ತದೆ.
ಹುಲಿಗಳ ಆಯುಷ್ಯ, ಉಳಿವು ಹಾಗೂ ಸಂಖ್ಯಾವಿಚಾರ : ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಯೆಂದರೆ, ಕಾಡಿನಲ್ಲಿ ಹುಲಿ ಎಷ್ಟು ವರ್ಷಬದುಕುತ್ತದೆ ? ಇದಕ್ಕೆ ಉತ್ತರವೇನೆಂದರೆ, ಬಹುತೇಕ ಹುಲಿಗಳು ದೀರ್ಘಕಾಲ ಬದುಕುವುದಿಲ್ಲ. ಚಿತ್ವಾನ್ ಮತ್ತು ನಾಗರಹೊಳೆಗಳಲ್ಲಿ ನಡೆಸಿದ ಸೀಮಿತ ಅಧ್ಯಯನ ಮತ್ತು ಇದಕ್ಕೆ ಪೂರಕವಾಗಿ ಕಾನ್ಹದಲ್ಲಿ ಹೆಚ್.ಎಸ್.ಪನ್ವರ್ರವರ ಸಮೀಕ್ಷೆಗನುಗುಣವಾಗಿ ಕೆಲವು ಅಂಶಗಳನ್ನು ಹೀಗೆ ಸರಳೀಕರಿಸಿ ಹೇಳಬಹುದು. ಒಂದು ಹೆಣ್ಣುಹುಲಿ ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ಸರಾಸರಿ ಮೂರು ಮರಿಗಳನ್ನು ಈಯುತ್ತದೆ. ಕಾಯಿಲೆ, ಬೆಂಕಿ, ಪ್ರವಾಹ, (ಮನುಷ್ಯನೂ ಸೇರಿದಂತೆ) ಇತರ ಬೇಟೆಗಾರ ಪ್ರಾಣಿಗಳೂ, ಮತ್ತು ಮರಿಹತ್ಯೆ (ಎಂದರೆ, ಒಂದು ನಿವಾಸನೆಲೆಯನ್ನು ಹೊಸದಾಗಿ ವಶಪಡಿಸಿಕೊಂಡ ಗಂಡುಹುಲಿ ಹಿಂದಿನ ಗಂಡುಹುಲಿಯ ಸಂತಾನವನ್ನು ಕೊಂದುಹಾಕುವುದು) - ಇವೆಲ್ಲ ಮರಿಗಳು ಹೆಚ್ಚಾಗಿ ಸಾಯಲು ಕಾರಣಗಳಾಗಿವೆ. ಹೀಗಾಗಿ ಹುಟ್ಟಿದ ಮರಿಗಳಲ್ಲಿ ಕೇವಲ ಶೇ. 50ರಷ್ಟು ಮಾತ್ರ ಒಂದುವರ್ಷದ ಆಯುಷ್ಯವನ್ನು ದಾಟಿ ಬದುಕುತ್ತವೆ. ಹೀಗೆ ಬದುಕುಳಿದ ಮರಿಹುಲಿಗಳು ಬಹುತೇಕ ತಾಯಿಯಿಂದ ಬೇರ್ಪಟ್ಟು ದೇಶಾಂತರಿಗಳಾಗುವವರೆಗೂ ಜೀವಿಸಿರಲು ಹೆಚ್ಚು ತೊಂದರೆಯಾಗದು. ಆದರೆ, ತಾಯಿಯಿಂದ ಬೇರ್ಪಟ್ಟ ಮೇಲೆ ಹುಲಿಗಳು ತಮ್ಮ ತಮ್ಮ ನಡುವೆಯೂ ಪ್ರಬಲ ಹುಲಿಗಳ ಜೊತೆಗೂ ತೀವ್ರ ಸ್ಪರ್ಧೆ ಎದುರಿಸಬೇಕಾಗುತ್ತದೆ. ನೆಲೆ, ಬೇಟೆ, ಸಂಗಾತಿ, ಎಲ್ಲವೂ ಸ್ಪರ್ಧೆಯ ವಿಷಯಗಳಾಗಿ ಸವಾಲೊಡ್ಡುತ್ತವೆ. ಕೆಲವು ಕೃಷಿಭೂಮಿಗಳತ್ತ ಸಾಗಿ ಹತ್ಯೆಗೀಡಾಗುತ್ತವೆ. ಬಹುಶಃ ಪ್ರತಿವರ್ಷ ಶೇ.20ರಿಂದ 30ರಷ್ಟು ದೇಶಾಂತರೀ ಹುಲಿಗಳೂ ಸಾಯುತ್ತವೆ. ಒಂದಿಷ್ಟು ಬಲಿಷ್ಠವಾಗಿರುವ ಅಲೆಮಾರಿಗಳು ಮಾತ್ರ ಬದುಕುಳಿದು ನೆಲೆಸ್ಥಾಪಿಸಿಕೊಂಡು ಸಂತಾನವನ್ನು ಬೆಳೆಸುತ್ತವೆ. ಸಂತಾನವನ್ನು ಬೆಳೆಸುವ ಸ್ಥಿತಿಗೆ ತಲಪುವ ವೇಳೆಗೆ ಗಂಡುಹುಲಿ ಐದರಿಂದ ಆರು ವರ್ಷ ವಯಸ್ಸಿನದಾಗಿದ್ದರೆ ಹೆಣ್ಣಿನ ವಯಸ್ಸು ಮೂರರಿಂದ ನಾಲ್ಕು ವರ್ಷವಾಗಿರುತ್ತದೆ. ಹೆಣ್ಣುಹುಲಿ ಸರಾಸರಿ ಏಳರಿಂದ ಎಂಟು ವರ್ಷಗಳ ಅವಧಿಯವರೆಗೂ ಮರಿಗಳನ್ನೂ ಹೆರಲು ಸಮರ್ಥವಾಗಿದ್ದರೆ, ಗಂಡುಹುಲಿಗಳು ಮೂರು ನಾಲ್ಕು ವರ್ಷಕಾಲ ಮಾತ್ರ ಸಂತಾನ ಪ್ರಕ್ರಿಯೆಯಲ್ಲಿ ತೊಡಗಿರುವುದು ಸಾಧ್ಯ. ನೆಲೆಯ ನೆಮ್ಮದಿ ಕಂಡುಕೊಂಡ ಕೆಲವು ಹುಲಿಗಳು 12 ರಿಂದ 15 ವರ್ಷಗಳವರೆಗೆ ಜೀವಿಸಿರಬಲ್ಲವಾದರೂ ಸಾಧಾರಣ ಹುಲಿಯೊಂದರ ಜನನದಿಂದ ಗಣನೆಮಾಡುವುದಾದರೆ ಅದರ ಆಯುಷ್ಯ ಪ್ರಮಾಣ ಮೂರರಿಂದ ಐದುವರ್ಷಗಳು ಮಾತ್ರ ಎಂದು ಗುರುತಿಸಬೇಕಾಗುತ್ತದೆ.
ಇಷ್ಟೊಂದು ಕ್ಷಿಪ್ರಗತಿಯ ಮರಣದರವಿದ್ದರೂ ಉತ್ತಮ ಆಹಾರಪ್ರಾಣಿಗಳ ಸಾಂದ್ರತೆಯಿರುವಲ್ಲಿ ಹುಲಿಗಳ ಸಂಖ್ಯೆ ವಾರ್ಷಿಕವಾಗಿ ನಿರೀಕ್ಷೆಗಿಂತ ಹೆಚ್ಚಾಗಿಯೇ ವೃದ್ಧಿಯಾಗುವುದು ಸಾಧ್ಯ. ಹೇಗೆಂದರೆ, ಅವು ಬೇಗನೆ ಸಂತಾನೋತ್ಪತ್ತಿಗೆ ತೊಡಗುತ್ತವೆ. ಗರ್ಭಾವಧಿ ಕಡಿಮೆ ಹೆಚ್ಚು ಮರಿಗಳನ್ನು ಈಯುತ್ತದೆ, ಹಾಗೂ, ವರ್ಷವಿಡೀ ಆವರ್ತಿಸುವ ಅವುಗಳ ಬೆದೆಯ ಕಾಲ (ಮೂರರಿಂದ ನಾಲ್ಕು ವಾರ) ಅಲ್ಪಾವಧಿಯದಾಗಿರುವುದು.
ಮನುಷ್ಯ ಮತ್ತು ಹುಲಿ : ನಿರ್ದಯ ಸಂಘರ್ಷ : ಹಿಂದೆ ಜನಸಂಖ್ಯಾದಟ್ಟಣೆ ಕಡಿಮೆ ಇತ್ತು. ಬೇಟೆಯ ಪ್ರಾಣಿಗಳನ್ನು ನಿರ್ಮೂಲನಮಾಡುವ ಆಧುನಿಕ ತಂತ್ರಕೌಶಲ ಬೆಳೆದಿರಲಿಲ್ಲ. ಹುಲಿಗಳ ಶಿಕಾರಿ ಪದ್ಧತಿಯು ಪುರಾತನವಾಗಿಯೇ ಇತ್ತು. ಹೀಗಾಗಿ ಹುಲಿಗಳು ತಮ್ಮ ನಿವಾಸ ನೆಲೆಗಳಲ್ಲಿ ಸುರಕ್ಷಿತವಾಗಿಯೇ ಇದ್ದವು. ಜೀವಿ ಪರಿಸ್ಥಿತಿಯೊಡನೆ ಹೊಂದಾಣಿಕೆ ಮತ್ತು ಸಂತಾನವನ್ನು ಬೆಳೆಸುವ ಸಾಮಥ್ರ್ಯಗಳಿಂದಾಗಿ ಅವುಗಳ ಅಸ್ತಿತ್ವಕ್ಕೆ ಯಾವುದೇ ಬಾಧಕವಿರಲಿಲ್ಲ. ನಿಜಕ್ಕೂ ಶತಮಾನಗಳ ಹಿಂದೆಯೇ ಹುಲಿಗಳ ಉತ್ತಮ ನೆಲೆಗಳಾಗಿದ್ದ ಭಾರತದ ಗಂಗಾ ನದಿ ಬಯಲು, ದಖನ್ ಪ್ರಸ್ಥಭೂಮಿ, ಥೈಲ್ಯಾಂಡ್, ವಿಯೆಟ್ನಾಮ್ ಮತ್ತು ಜಾವಾ ದ್ವೀಪದ ಗದ್ದೆ ಬಯಲುಗಳನ್ನು ಮನುಷ್ಯ ತನ್ನ ಅನುಕೂಲಗಳಿಗೆ ತಕ್ಕಂತೆ ಮಾರ್ಪಾಡಿಸಿಕೊಂಡು ಬಿಟ್ಟಿದ್ದರಿಂದ ಹುಲಿಯ ನೆಲೆ ದಿಕ್ಕುಗೆಡುವಂತಾಗಿತ್ತು. ಇಷ್ಟಾಗಿಯೂ ಕೆಲವು ದಟ್ಟ ಅರಣ್ಯಗಳು ಅಬಾಧಿತವಾಗಿ ಉಳಿದುಕೊಂಡವು. ಅಲ್ಲಿನ ಭೌಗೋಳಿಕ ವೈಪರೀತ್ಯ, ಕೆಟ್ಟ ಹವಾಮಾನ, ಮಣ್ಣಿನ ಗುಣ ಮತ್ತು ಕಾಯಿಲೆಗಳಿಂದಾಗಿ ಜನಸಾಂದ್ರತೆಗಾಗಲೀ ಕೃಷಿ ಚಟುವಟಿಕೆಗಳಿಗಾಗಲೀ ಅವಕಾಶವಾಗಲಿಲ್ಲ.
ಆದರೆ 18-19 ನೇ ಶತಮಾನಗಳ ವೇಳೆಗೆ ಏಷ್ಯಾದಲ್ಲಿ ವಸಾಹತುಷಾಹಿ ಬೇರೂರತೊಡಗಿದಂತೆಲ್ಲಾ ಚಿತ್ರ ಬದಲಾಗತೊಡಗಿತು. ಪಾರಂಪರಿಕ ಬೇಟೆಯ ನೈಪುಣ್ಯದ ಜೊತೆಗೆ ಬಂದೂಕುಗಳ ನೆರವೂ ದೊರೆತು ವಸಾಹತುಗಾರರು, ರಾಜರುಗಳು, ಸಾಮಾನ್ಯರು ಹುಲಿಗಳ ವಿರುದ್ಧ ವಿನಾಶಕಾರಿ ಯುದ್ಧವನ್ನೇ ಸಾರುವುದಕ್ಕೆ ಅವಕಾಶವಾಯಿತು. ಅದೇ ವೇಳೆಗೆ ರಾಜಕೀಯ ಸ್ಥಿರತೆಯೂ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಪರಿಣಾಮಕಾರಿ ಔಷಧಗಳ ಬಳಕೆಯೂ ಜನಸಂಖ್ಯಾ ಸಾಂದ್ರತೆಯ ಹೆಚ್ಚಳಕ್ಕೆ ಕಾರಣವಾಯಿತು. ಆವರೆಗೂ ಮಾನವ ವಸತಿ ಕೃಷಿಗಳಿಗೆ ಕಷ್ಟ ಸಾಧ್ಯವೆನಿಸಿದ್ದ ಅರಣ್ಯ ಪ್ರದೇಶದೊಳಗೆಲ್ಲಾ ಕಬ್ಬು, ಕಾಫಿ, ಟೀ ಮೊದಲಾದ ವಾಣಿಜ್ಯ ಬೆಳೆಗಳೂ ಸೇರಿದಂತೆ ವ್ಯಾಪಕ ಕೃಷಿ ಚಟುವಟಿಕೆಗಳು ಪ್ರಾರಂಭವಾದವು, ಈ ಕಾಲದಲ್ಲಿ ಹುಲಿಗಳ ಹಿತದೃಷ್ಟಿಯಿಂದ ಅನುಕೂಲಕರವಾಗಿದ್ದ ಏಕೈಕ ಅಂಶವೆಂದರೆ ಕುಮರಿ ಕೃಷಿಗೆ ಅವಕಾಶವಿರದೆ ಇದ್ದದ್ದು ಹಾಗೂ ವ್ಯಾಪಕವಾದ ಅರಣ್ಯ ವಿಸ್ತೀರ್ಣಗಳನ್ನು ಸಂರಕ್ಷಿಸಿ ಅರಣ್ಯಗಳೆಂದು (ರಿಸರ್ವ್ ಫಾರೆಸ್ವ್) ತನ್ನ ಸ್ವಾಧೀನದಲ್ಲಿ ಇರಿಸಿಕೊಂಡ ಸರ್ಕಾರವು, ಹೆಚ್ಚುತ್ತಿದ್ದ ಜನಸಮುದಾಯಕ್ಕೆ ಈ ಅರಣ್ಯಗಳಲ್ಲಿ ಮರ ಕಡಿಯಲು ಇಲ್ಲವೆ ಕೃಷಿ ಮಾಡಲು ಅವಕಾಶ ನೀಡದೇ ಇದ್ದುದು, ಇದರಿಂದಾಗಿ, ಅರಣ್ಯ ಇಲಾಖೆಯವರೇ ತಾಳಿಕೆಮೀರಿ ಮರಕಡಿತದಲ್ಲಿ ತೊಡಗಿದ್ದರೂ 19ನೇ ಶತಮಾನದ ಮಧ್ಯದ ವೇಳೆಗೆ ಭಾರತ ಹಾಗೂ ಬರ್ಮಾಗಳಲ್ಲಿ ಬಹುತೇಕ ಹುಲಿಯ ನೆಲೆಗಳು ಸಂರಕ್ಷಿತ ಕಾಡುಗಳಲ್ಲಿ ಮಾತ್ರ ಉಳಿದುಕೊಂಡವು. ಇದೇ ವೇಳೆಗೆ ಕೃಷಿ ಚಟುವಟಿಕೆಗಳ ಅತಿಕ್ರಮಣದಿಂದ ಕಾಡುಗಳನ್ನು ರಕ್ಷಿಸಲು ಯಾವುದೇ ಕ್ರಮ ತೆಗೆದುಕೊಳ್ಳದೆ ಇದ್ದ ಚೀನಾ ಬಹುತೇಕ ಹುಲಿಯ ನೆಲೆಗಳನ್ನು ಕಳೆದುಕೊಂಡಿತು. ಜನಸಂಖ್ಯೆಯ ಒತ್ತಡ ತುಲನಾತ್ಮಕವಾಗಿ ಕಡಿಮೆ ಇದ್ದುದರಿಂದಲೇ ಥೈಲ್ಯಾಂಡ್, ಇಂಡೋ ಚೈನಾ, ಮಲಯಾ ಮತ್ತು ಸುಮಾತ್ರಗಳಲ್ಲಿ ಹುಲಿಯ ನೆಲೆಗಳು ಉಳಿದುಕೊಳ್ಳುವುದು ಸಾಧ್ಯವಾಯಿತು.
20ನೇ ಶತಮಾನದ ಮಧ್ಯದ ವೇಳೆಗೆ ಬಾಲೀ ದ್ವೀಪದಲ್ಲಿದ್ದ ಹುಲಿಯ ಉಪಜಾತಿ ಅಳಿದುಹೋಯಿತು. ಭಾರತಕ್ಕೆ ಸ್ವಾತಂತ್ರ್ಯ ಲಭಿಸುವ ಹೊತ್ತಿಗೆ ಹುಲಿಗಳ ಅಸ್ತಿತ್ವ ಅಪಾಯದ ದವಡೆಗೆ ಸಿಲುಕಿಬಿಟ್ಟಿತ್ತು. ಹುಲಿಗಳನ್ನು ಕೊಂದವರಿಗೆ ಅಧಿಕೃತವಾಗಿ ಬಹುಮಾನ ಧನವನ್ನು ಘೋಷಿಸಲಾಗಿದ್ದುದರಿಂದ ಹಳ್ಳಿಗರೂ ಬುಡಕಟ್ಟು ಜನರೂ ಸಂದರ್ಭ ಸಿಕ್ಕಿದ ಹಾಗೆಲ್ಲಾ ಹುಲಿಗಳಿಗೆ ಗುಂಡು ಹೊಡೆಯಲು, ವಿಷ ಉಣಿಸಲು, ಹೇಗೆ ಬೇಕಾದರೂ ಕೊಲ್ಲಲು ಕಾತರರಾಗಿದ್ದರು. ಹೆಚ್ಚು "ಆಹಾರ ಬೆಳೆಯಿರಿ" (ಗ್ರೋ ಮೋರ್ ಫುಡ್) ಆಂದೋಲನವಂತೂ ಜನರನ್ನು ಹುಲಿಯ ಅಳಿದುಳಿದ ನೆಲಗಳನ್ನೆಲ್ಲಾ ಕೃಷಿ ಭೂಮಿಗಳನ್ನಾಗಿ ಪರಿವರ್ತಿಸಲು ಪ್ರೋತ್ಸಾಹ ಕೊಟ್ಟಿದ್ದಲ್ಲದೆ ನಿರಂತರವಾದ ಮಾನವ-ಹುಲಿ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತ್ತು. ಇದೇ ಆಂದೋಲನದ ಭಾಗವಾಗಿ ಬಂದೂಕುಗಳ ಲೈಸೆನ್ಸ್ಗಳನ್ನು ಉದಾರವಾಗಿ ವಿತರಿಸಿದ್ದರಿಂದ ಈಗಾಗಲೇ ಪಾರಂಪರಿಕ ಬೇಟೆಯ ವಿಧಾನಗಳಿಂದ ನಡೆಯುತ್ತಿದ್ದ ಕಾಡು ಪ್ರಾಣಿಗಳ ಹತ್ಯೆ ಇನ್ನಷ್ಟು ಸುಲಭ ಸಾಧ್ಯವಾಯಿತು. ಮಹಾಯುದ್ಧದ ಆನಂತರದ ಕಾಲಕ್ಕೆ ಜೀಪುಗಳು ಮತ್ತು ಬ್ಯಾಟರಿ ಟಾರ್ಚುಗಳ ಬಳಕೆ ಪ್ರಾರಂಭವಾಗಿ, ಬೇಟೆಗಾರರಿಗೆ ಹೆಚ್ಚಿನ ಸೌಲಭ್ಯಗಳ ಪೂರೈಕೆಯಾದಂತಾಯಿತು. ಇದೇ ವೇಳೆಗೆ, ಲೈಸೆನ್ಸ್ ಪಡೆದ ವಿದೇಶಿ ಮತ್ತು ಭಾರತೀಯ ಮೃಗಯಾವಿನೊದಿ ಬೇಟೆಗಾರರೂ ವನ್ಯಜೀವಿ ಹತ್ಯೆಗೆ ತಮ್ಮ ಕಾಣಿಕೆ ಸಲ್ಲಿಸಿದರು. ಮೈಸೂರಿನ ಪ್ರಸಿದ್ಧ ಚರ್ಮ ಹದಗಾರರೊಬ್ಬರು ತಾವು 1940ರ ದಶಕದಲ್ಲಿ ಪ್ರತಿ ವರ್ಷ ಈ ಬೇಟೆಗಾರರು ತಂದೊಪ್ಪಿಸುತ್ತಿದ್ದ 600ಕ್ಕೂ ಹೆಚ್ಚು ಹುಲಿ ಚರ್ಮಗಳನ್ನು ಹದಗೊಳಿಸುತ್ತಿದ್ದುದಾಗಿ ಅಂದಾಜು ಮಾಡಿದ್ದಾರೆ. ಹಣಕ್ಕಾಗಿ ಬೇಟೆಯಾಡುವ ಸ್ಥಳೀಯರ ಬೇಟೆಯ ಸಂಭ್ರಮಕ್ಕೆ ಉದಾಹರಣೆ ಕೊಡುವುದಾದರೆ, "ನರಿಬೊಡಿ" (ಎಂದರೆ, ಹುಲಿಗೆ ಗುಂಡಿಕ್ಕುವ) ಎಂಬ ವಿಶೇಷಣಕ್ಕೆ ಪಾತ್ರರಾದ (ದಿವಂಗತ) ಚಂಗಪ್ಪ ಎನ್ನುವವರು 1947 ರಿಂದ 1964 ಅವಧಿಯಲ್ಲಿ ನಾಗರಹೊಳೆಯ ಸಮೀಪದ ತಮ್ಮ ಗ್ರಾಮದ ಆಸುಪಾಸಿನಲ್ಲೇ 27 ಹುಲಿಗಳನ್ನು ಕೊಂದಿದ್ದರು.
1960ರ ದಶಕದ ಪ್ರಾರಂಭದಲ್ಲಿ ಮುಂದಿನ ದಶಕದೊಳಗೆ ಹುಲಿಗಳು ನಾಮಾವಶೇಷವಾಗಿ ಬಿಡುತ್ತವೆಂದು ನಿಶ್ಚಯವಾಗಿ ತೋರಿತ್ತು. ಪರಿಸ್ಥಿತಿ ಇಷ್ಟೊಂದು ಹೀನಾಯವಾಗಿ ಕಂಡುಬರಲು ಕಾರಣವೇನೆಂದರೆ, ಕೈ ಬೆರಳೆಣಿಕೆಯಷ್ಟು ಆದ್ಯ ಸಂರಕ್ಷಣಾವಾದಿಗಳನ್ನು ಹೊರತುಪಡಿಸಿ (ಇ.ಪಿ.ಜೀ, ಸಲೀಮ್ಅಲಿ, ಬಿಲ್ಲಿ ಅರ್ಜುನ್ ಸಿಂಗ್, ಜಾಫರ್ ಫತೇ ಅಲಿ ಖಾನ್ ಹಾಗೂ ಎಂ. ಕೃಷ್ಣನ್) ಯಾರಿಗೂ ಭಾರತದ ವನ್ಯ ಜೀವಿಗಳಿಗೆ ಏನಾಗುತ್ತಿದೆ ಎಂಬುದರ ಬಗೆಗೆ ಜ್ಞಾನೋದಯವಾಗುವುದಿರಲಿ ಅತ್ತಕಡೆ ಗಮನ ಹರಿಸುವ ವ್ಯವಧಾನವೂ ಇರಲಿಲ್ಲ. 1967ರಲ್ಲಿ ನ್ಯೂಯಾರ್ಕ್ನ ವೈಲ್ಡ್ಲೈಫ್ ಕನ್ಸ್ರ್ವೇಷನ್ ಸೊಸೈಟಿಯ ಜಾರ್ಜ್ ಷಾಲರ್ರವರು ಹುಲಿಗಳ ಬಗೆಗಿನ ಪ್ರಪಥಮ ವೈಜ್ಞಾನಿಕ ಅಧ್ಯಯನವನ್ನು ಪೂರ್ಣಗೊಳಿಸಿದರು. ತಮ್ಮ "ದಿ ಡಿಯರ್ ಅಂಡ್ ದ ಟೈಗರ್" ಎಂಬ ಶ್ರೇಷ್ಠ ಅಧ್ಯಯನ ಕೃತಿಯಲ್ಲಿ ಷಾಲರ್ರವರು ಹುಲಿಯ ಜೀವ ಪರಿಸ್ಥಿತಿಯ ಅತಿ ಮುಖ್ಯ ಅಂಶಗಳನ್ನು ವಿಶ್ಲೆಷಿಸುವುದರೊಂದಿಗೆ, ಹುಲಿಯ ಅಸ್ತಿತ್ವ ಅತಿ ಅಪಾಯದ ಸ್ಥಿತಿಗೆ ತಲಪಿರುವುದರತ್ತ ಜಗತ್ತಿನ ಗಮನ ಸೆಳೆದಿದ್ದಾರೆ.
ಹುಲಿ ಸಂರಕ್ಷಣೆಯ ಪ್ರಥಮ ಪ್ರಯತ್ನ : 1930-1990 : ಅಳಿವಿನಂಚಿಗೆ ತಲಪಿದ ಹುಲಿಯ ಉಳಿವಿಗಾಗಿ ಅಂತರರಾಷ್ಟ್ರಿಯ ಸಂರಕ್ಷಣಾವಾದಿ ಸಮುದಾಯದ ಕಾಳಜಿ ಕಾತರಗಳಿಗೆ ಪ್ರತಿಸ್ಪಂದಿಸಿದ ಕೆಲವು ಏಷಿಯನ್ ದೇಶಗಳು 1970ರ ದಶಕದ ಪ್ರಾರಂಭದಲ್ಲಿ ಹುಲಿ ಸಂರಕ್ಷಣೆಗಾಗಿ ಕಾನೂನುಗಳನ್ನು ಜಾರಿಗೊಳಿಸಿದವು. ಆದರೆ, ಭಾರತ ಮತ್ತು ನೇಪಾಳದ ಕೆಲವು ಅಭಯಾರಣ್ಯಗಳಲ್ಲಿ ಮಾತ್ರವೇ ಹುಲಿಗಳನ್ನು ಅವುಗಳ ನೆಲೆಯಲ್ಲಿ ರಕ್ಷಿಸಬೇಕಾದ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಯಿತು. ಹುಲಿ ಸಂರಕ್ಷಣೆಗಾಗಿ ಬದ್ಧವಾಗಿದ್ದ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ರಾಜಕೀಯ ನಾಯಕತ್ವ, ವನ್ಯಜೀವಿ ಪರವಾದ ತಿಳುವಳಿಕಸ್ಥರ ಚಿಕ್ಕ ಸಂಘಟನೆಗಳು ಹಾಗೂ ರಾಜ್ಯ ಅರಣ್ಯ ಇಲಾಖೆಗಳಲ್ಲಿದ್ದ ಶಿಸ್ತುಬದ್ಧ ಅಧಿಕಾರಿಗಳ ಬಲ-ಹೀಗೆ, ಭಾರತದಲ್ಲಿ ಹುಲಿ ಸಂರಕ್ಷಣೆಗಾಗಿ 3 ಶಕ್ತಿಗಳು ಕೈಜೋಡಿಸುವಂತಾದುದು ಒಂದು ವರವೆಂದೇ ಹೇಳಬೇಕು. ಇದರಿಂದಾಗಿ ಅನೇಕ ಅಭಯಾರಣ್ಯಗಳಲ್ಲಿ ಹೊಸ ವನ್ಯಜೀವಿ ಕಾನೂನುಗಳನ್ನು ಜಾರಿಗೆ ತರಲು ಸಾಧ್ಯವಾಯಿತು. ಕಡೇ ಪಕ್ಷ ಈ ಅಭಯಾರಣ್ಯಗಳಲ್ಲಾದರೂ ಹುಲಿಗಳೂ ಅವುಗಳ ಆಹಾರ ಪ್ರಾಣಿಗಳೂ ನೆಲೆಗಳೂ ಕ್ಷೇಮವಾಗಿದ್ದವು. ನೇಪಾಳ ಹಾಗೂ ಆಗಿನ ರಷ್ಯನ್ ಒಕ್ಕೂಟದ ಕೆಲವು ಭಾಗಗಳನ್ನು ಹೊರತುಪಡಿಸಿದಂತೆ, ಉಳಿದ ಎಲ್ಲಾ ದೇಶಗಳು ಪರಿಣಾಮಕಾರಿ ಹುಲಿ ಸಂರಕ್ಷಣೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾದವು. ಇದರ ಪರಿಣಾಮವಾಗಿ ಏಷ್ಯಾದ ಬಹು ಭಾಗಗಳಲ್ಲಿ ಹುಲಿಯ ಅವನತಿ ಮುಂದುವರೆಯಿತು. ಹುಲಿಯನ್ನು ಸಂಕ್ಷಿಸುವ ಅಂತರರಾಷ್ಟ್ರಿಯ ಆಂದೋಲನಗಳು ಪ್ರಾರಂಭಗೊಳ್ಳುತ್ತಿರುವಂತೆಯೇ ಇನ್ನೊಂದೆಡೆ ಜಾವಾ ದ್ವೀಪದ ಹುಲಿ ಪ್ರಭೇದವೂ ಕ್ಯಾಸ್ಪಿಯನ್ ಉಪಜಾತಿಯ ಹುಲಿಗಳೂ ಶಾಶ್ವತವಾಗಿ ಕಣ್ಮರೆಯಾದ ದುರಂತ ಸತ್ಯವೂ ಪ್ರಕಟವಾಯಿತು.
ಸಂರಕ್ಷಣೆಯ ಇತಿಹಾಸದ ಪುಟಗಳಿಂದ ನಾವು ಪಾಠ ಕಲಿಯಬೇಕೆಂದರೆ ಭಾರತದಲ್ಲಿ ಹುಲಿ ಸಂರಕ್ಷಣೆಗಾಗಿ ನಡೆದ ಪ್ರಯತ್ನಗಳ ಮುಖ್ಯಾಂಶಗಳನ್ನು ವಿಶ್ಲೇಷಿಸುವುದು ಬಹು ಮುಖ್ಯ. ಈ ಪ್ರಯತ್ನದ ಅತಿ ಪರಿಣಾಮಕಾರಿ ಘಟಕವೆಂದರೆ, ಹೊಸ ವನ್ಯಜೀವಿ ಕಾನೂನುಗಳನ್ನು ಜಾರಿಗೆ ತರುವ ಹೊಣೆ ಹೊತ್ತ ಭಾರತದ ಅರಣ್ಯಾಧಿಕಾರಿಗಳು ಇಡೀ ವ್ಯವಸ್ಥೆಗೆ ಅತಿ ಪ್ರಾಯೋಗಿಕವೂ ಸಂರಕ್ಷಣಾಪರವೂ ಆದ ದೃಷ್ಟಿಕೋನವನ್ನು ಅಳವಡಿಸಿದುದು. ಜೆ.ಜೆ.ದತ್ತ, ಸರೊಜ್ ರಾಜ್ ಚೌಧರಿ, ಕೈಲಾಶ್ ಸಂಕಾಲ, ಸಂಜಯ್ ದೇಬ್ರಾಯ್, ಹೆಚ್.ಎಸ್.ಪನ್ವರ್, ಫತೇಸಿಂಗ್ ರಾಥೋರ್ ಮತ್ತಿತರರು ಹುಲಿ ಸಂರಕ್ಷಣೆಯ ಮಹತ್ವದ ಜವಾಬ್ದಾರಿ ಹೊತ್ತು ಅತಿ ಜರೂರಾದ ಕಾರ್ಯಗಳನ್ನು ಸಮಂಜಸವಾಗಿ ನಿರ್ವಹಿಸಿದರು. ಮೊದಲನೆಯದಾಗಿ ಹುಲಿಯ ಸಂರಕ್ಷಿತ ನೆಲೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸುಸಜ್ಜಿತರಾದ ಅರಣ್ಯ ರಕ್ಷಕರನ್ನು ನೇಮಿಸುವುದು. ಎರಡನೆಯದೆಂದರೆ, ಹುಲಿಯ ನೆಲೆಗಳಲ್ಲಿ ಜಾನುವಾರು ಮೇವು, ಕಾಡ್ಗಿಚ್ಚು, ಮರಕಡಿತ, ಸೌದೆ ಮತ್ತು ಕಿರು ಅರಣ್ಯ ಉತ್ಪನ್ನಗಳ ಸಂಗ್ರಹಗಳನ್ನು ತಡೆಯುವ ಮೂಲಕ ಜೀವರಾಶಿಯ ದುರುಪಯೋಗದ ಒತ್ತಡಗಳನ್ನು ತಡೆಯುವುದು. ಹುಲಿ ಯೋಜನೆಯ ನಿರ್ದೇಶಕರುಗಳು ತಮ್ಮ ತಮ್ಮ ಯೋಜನಾ ಪ್ರದೇಶಗಳಲ್ಲಾದರೂ ತಮ್ಮ ಇಲಾಖೆಯವರೇ ನಡೆಸುತ್ತಿದ್ದ ಮರಹನನ ಕಾರ್ಯವನ್ನು ತಡೆಯುವಲ್ಲಿ ಯಶಸ್ವಿಯಾದರು. ಇನ್ನೊಂದು ದೂರದೃಷ್ಟಿಯ ಕ್ರಮವೆಂದರೆ ಸಂರಕ್ಷಿತ ಹುಲಿಯ ನೆಲೆಗಳಲ್ಲಿ ವಸತಿ ಹೂಡಿದ್ದ ಜನಸಂಖ್ಯಾ ಸಾಂದ್ರತೆಯನ್ನು ತಗ್ಗಿಸುವ ಪ್ರಯತ್ನವಾಗಿ ಅಂತಹ ಜನರಿಗೆ ಹುಲಿಯ ನೆಲೆಗಳಿಂದ ದೂರದ ಭೂ ಪ್ರದೇಶಗಳಲ್ಲಿ ಪುನರ್ವಸತಿ ಕಲ್ಪಿಸುವುದು. ಹುಲಿ ಸಂರಕ್ಷಣೆಯ ಪ್ರಾಂರಭಿಕ ಪ್ರಯತ್ನದಲ್ಲಿನ ಸಂರಕ್ಷಣಾಪರ ಧೋರಣೆಯಿಂದ ಕೆಲವೊಮ್ಮೆ ಸ್ಥಳೀಯ ಜನರ ತಾತ್ಕಾಲಿಕ ಆಸಕ್ತಿಗಳಿಗೆ ಧಕ್ಕೆಯೊದಗಿರಬಹುದಾದರೂ ಹುಲಿಗಳೂ ಸೇರಿದಂತೆ ಸಕಲ ವನ್ಯಜೀವಿ ಸಂಕುಲವೇ ಈ ಕ್ರಮಗಳಿಂದ ಪ್ರಯೋಜನ ಪಡೆಯುವಂತಾಯಿತೆಂಬುದು ಸತ್ಯ.
ಸಂರಕ್ಷಣೆಯ ಮೊದಲ ದಶಕದಲ್ಲಿ (1974-84) ಈ ಅರಣ್ಯ ನೆಲೆಗಳು ಆಶ್ಚರ್ಯಕರ ರೀತಿಯಲ್ಲಿ ಚೇತರಿಸಿಕೊಂಡವು. ಹುಲಿಗಳ ಮತ್ತು ಅವುಗಳ ಬೇಟೆಯ ಪ್ರಾಣಿಗಳ ಸಂಖ್ಯೆಯಲ್ಲೂ ಗಮನಾರ್ಹ ವೃದ್ಧಿ ಗೋಚರಿಸತೊಡಗಿತು. ಹುಲಿ ಯೋಜನೆಯ ಕ್ಷೇತ್ರಗಳಲ್ಲೂ (ಕಾನ್ಹಾ, ರಣಥಂಬೋರ್, ಕಾರ್ಬೆಟ್, ಮಾನಾಸ್, ಕಾಜೀರಂಗ) ಇತರ ನೆಲೆಗಳಲ್ಲೂ (ನಾಗರಹೊಳೆ, ಆನೆಮಲೈ, ದುದ್ವಾ, ಬಾಂದವಗಡ) ಗಮನಾರ್ಹ ಪುನಶ್ಚೇತನ ಕಂಡುಬಂದಿತು. ಪ್ರವಾಸೋದ್ಯಮಕ್ಕೆ ತೆರೆದಿಟ್ಟ ಅರಣ್ಯಪ್ರದೇಶಗಳಲ್ಲಿ, ಉದಾಹರಣೆಗೆ, ಭಾರತದ ಕಾನ್ಹ, ರಣಥಂಭೋರ್, ಅಂತೆಯೇ ನೇಪಾಳದ ಚಿತ್ವಾನ್ಗಳಲ್ಲಿ ಪ್ರವಾಸಿಗರು ಜೀಪುಗಳಲ್ಲೋ ಆನೆಯ ಮೇಲೆ ಕುಳಿತೋ ಹುಲಿಗಳನ್ನು ಸುತ್ತುವರಿದು ವೀಕ್ಷಿಸುವ ದೃಶ್ಯ ಸಾಮಾನ್ಯವಾಯಿತು. ಆ ದಿನಗಳ ಸಂಭ್ರಮದ ಸೊಗಸನ್ನು ಬೆಲಿಂಡಾ ರೈಟ್, ಫತೇಸಿಂಗ್ರಾಥೋರ್, ವಾಲ್ಮಿಕ್ ಥಾಪರ್ ಮತ್ತಿತರರು ಅದ್ಭುತ ಛಾಯಾಚಿತ್ರಗಳಲ್ಲೂ ಚಲನಚಿತ್ರಗಳಲ್ಲೂ ಸೆರೆಹಿಡಿದಿದ್ದಾರೆ. 1980ರ ಪ್ರಾರಂಭದ ವೇಳೆಗೆ ಈ ಪರಿಸ್ಥಿತಿ ಒಂದುವಿಧವಾದ ಸಂತೃಪ್ತ ಭಾವನೆಗೂ ಎಡೆಗೊಟ್ಟಿತು. ಹುಲಿಯೋಜನೆಯ ನಿರ್ದೆಶಕರೊಬ್ಬರು "ಹುಲಿಸಂರಕ್ಷಣೆ ಆಯ್ತಲ್ಲ, ಇವಾಗ ಇನ್ನೇನು ಮಾಡ್ತೀರಿ?" ಎಂದು ಕೇಳುವಷ್ಟರಮಟ್ಟಿಗೆ ಉದಾಸೀನ ಪ್ರವೃತ್ತಿ ಬೆಳೆಯಿತು. ಅಂತರರಾಷ್ಟ್ರಿಯ ಸಂರಕ್ಷಣಾ ಸಂಘಟನೆಗಳು ಯಶಸ್ಸಿನ ಕಥೆ ಬರೆದು ಮುಗಿಸುವ ಕಾತುರತೆಯಿಂದ ತಾವು ಹುಲಿಯನ್ನು ಸಂರಕ್ಷಿಸಿಬಿಟ್ಟಿದ್ದೇವೆಂದು ಸಾರಲು ಧಾವಂತಪಟ್ಟರು. ಹೆಚ್ಚು ಹುಲಿಗಳ ದಟ್ಟಣೆಯಿರುವ ಈ ಬೆರಳೆಣಿಕೆಯಷ್ಟು ಪ್ರದೇಶಗಳು ಸಮಗ್ರ ಹುಲಿನೆಲೆಯ ತೀರ ಚಿಕ್ಕ ಭಾಗವಾಗಿದೆಯೆನ್ನುವುದು ಎಲ್ಲರಿಗೂ ಮರೆತುಹೋಗಿತ್ತು. ಇತರ ನೆಲೆಗಳಲ್ಲಿ ಹುಲಿಯ ಅವನತಿ ಮುಂದುವರಿದೇ ಇತ್ತು.
ಅಜ್ಞಾನ : ಸಂತೃಪ್ತಿಯ ತಾಯಿ : ಭಾರತೀಯ ಅರಣ್ಯ ಇಲಾಖೆಯನ್ನು ಪ್ರತಿನಿಧಿಸುವ ಹಕ್ಕುದಾರಿಕೆಯ ಅಧಿಕಾರಷಾಹೀ ಮನೋವೃತ್ತಿಯೇ ಇಲ್ಲಿನ ಅರಣ್ಯಗಳಲ್ಲಿನ ಹುಲಿಸಂರಕ್ಷಣೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದಕ್ಕೆ ಪ್ರಮುಖ ಕಾರಣಗಳಲ್ಲೊಂದಾಗಿತ್ತು, ನಿಜ. ಆದರೆ ಅದೇ ಸಂಕುಚಿತ ಮನೋವೃತ್ತಿಯೇ, ಹುಲಿಸಂರಕ್ಷಣಾ ಕಾರ್ಯವಿಧಾನಗಳಿಗೆ ವನ್ಯಜೀವಿ ವಿಜ್ಞಾನದ ಅಳವಡಿಕೆಯಿರಲಿ, ಅದರ ಸಾಧ್ಯತೆಯ ಬಗೆಗೆ ಕೂಡಾ ಯೋಚಿಸುವುದಕ್ಕೂ ಎಡೆಗೊಡಲಿಲ್ಲ. ಯಾವುದೇ ವನ್ಯಜೀವಿಸಂರಕ್ಷಣಾ ನಿರ್ವಹಣೆಯ ಯಶಸ್ಸು ಇಲ್ಲವೇ ವೈಫಲ್ಯಗಳನ್ನು ನಿರ್ಣಯಿಸುವುದಕ್ಕೆ ವನ್ಯಜೀವಿಗಳ ಸಂಖ್ಯೆಯ ವಸ್ತುನಿಷ್ಠ ಪರಿವೀಕ್ಷಣೆ (ಆಬ್ಜೆಕ್ಟಿವ್ ಮಾನಿಟರಿಂಗ್) ಅವಶ್ಯಕವೆಂದು ಪಾಶ್ಚಾತ್ಯ ಜೀವಿ ಪರಿಸ್ಥಿತಿ ಶಾಸ್ತ್ರಜ್ಞರು ಹಲವಾರು ದಶಕಗಳಿಂದಲೇ ಪ್ರತಿಪಾದಿಸುತ್ತಾ ಬಂದಿದ್ದಾರೆ. ದೊಡ್ಡ ಅರಣ್ಯಗಳಲ್ಲಿರುವ ಎಲ್ಲಾ ವನ್ಯ ಪ್ರಾಣಿಗಳನ್ನು ಒಂದೊಂದಾಗಿ ಎಣಿಸುವುದು ಸಾಧ್ಯವೇ ಇಲ್ಲವೆಂದು ಮೊದಲಿಗೇ ಕಂಡುಕೊಂಡ ವಿಜ್ಞಾನಿಗಳು ಪ್ರಾಣಿಸಂಖ್ಯೆಯನ್ನು ವಸ್ತುನಿಷ್ಠವಾಗಿ ಅಂದಾಜು ಮಾಡಲು ಹಲವಾರು ಕ್ರಮಬದ್ಧವಾದ ಮಾದರಿ ಸಂಗ್ರಹಣಾ ತಂತ್ರಗಳನ್ನು (ಸ್ಯಾಂಪಲಿಂಗ್ ಟೆಕ್ನಿಕ್ಸ್) ಅಭಿವೃದ್ಧಿಪಡಿಸಿದರು. ಈ ತಂತ್ರಗಳಿಂದ ಏನಿಲ್ಲವೆಂದರೂ ಪ್ರಾಣಿಸಂಖ್ಯೆಯ ಹೆಚ್ಚಳ ಇಲ್ಲವೇ ಇಳಿಮುಖವಾಗಿರುವುದನ್ನು ಗುರುತಿಸಲು ಸಾಧ್ಯವಿತ್ತು.
ಇಂಥ ಕ್ರಮಬದ್ಧವಾದ ವಸ್ತುನಿಷ್ಠ ಮಾದರಿ ಸಂಗ್ರಹಣಾ ತಂತ್ರಗಳನ್ನು ಮೊದಲಿನಿಂದಲೂ ಕಡೆಗಣಿಸಿದ ಭಾರತೀಯ ಅರಣ್ಯಾಧಿಕಾರಿಗಳು ಕಡಿಮೆ ಸಾಂದ್ರತೆಯಲ್ಲಿರುವ ಹುಲಿಯಂತಹ ಸಂಕೋಚ ಪ್ರವೃತ್ತಿಯ ಪ್ರಾಣಿಗಳನ್ನು ಒಂದೊದಾಗಿ ಎಣಿಸುವ ದೇಶವ್ಯಾಪಿ ಕಾರ್ಯಕ್ರಮವನ್ನು ಕೈಗೆತ್ತಿಕೊಂಡರು. ಇದಕ್ಕಾಗಿ ಅವರು ತೀರ ಸರಳವೂ ಅಸಮರ್ಥನೀಯವೂ ಆದ ಹೆಜ್ಜೆ ಗುರುತಿನ ಗಣತಿ (ಪಗ್ಮಾರ್ಕ್ ಸೆನ್ಸ್ಸ್) ಎನ್ನುವ ವಿಧಾನವನ್ನು ಕಂಡುಹಿಡಿದರು. ಈ ವಿಧಾನವನ್ನು ಅನುಸರಿಸಿ ದೇಶದಲ್ಲಿರುವ ಎಲ್ಲ ಹುಲಿಗಳ ಹೆಜ್ಜೆ ಗುರುತುಗಳನ್ನು ಏಕಕಾಲದಲ್ಲಿ ಸಂಗ್ರಹಿಸಬಹುದೆಂದೂ ಭಾವಿಸಲಾಗುತ್ತದೆ. ಹುಲಿಗಳ ಎಲ್ಲ ನಾಲ್ಕೂ ಹೆಜ್ಜೆ ಗುರುತುಗಳ ಮುದ್ರೆಗಳು ಪರಿಶೀಲನೆಗೆ ದೊರಕಿರುವ ಕೆಲವು ಸಂದರ್ಭಗಳಲ್ಲಿ ಕ್ಷೇತ್ರಕರ್ಯದಲ್ಲಿ ಪರಿಣತರಾದವರು ಕೆಲವು ಹುಲಿಗಳನ್ನು ಮಾತ್ರ ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತದೆ, ನಿಜ. ಆದರೆ ಇದೇ ಕ್ರಮದಲ್ಲಿ ಪ್ರತಿಯೊಂದು ಹುಲಿಯನ್ನು ಎಣಿಸಿಬಿಡಬಹುದೆಂಬ ಸಿದ್ಧಾಂತ ಮಾತ್ರ ಕಾಡಿನ ಹುಲಿಗಳಿರಲಿ, ಮೃಗಾಲಯದಲ್ಲಿರುವ ಹುಲಿಗಳ ವಿಷಯದಲ್ಲೂ ಸಾಬೀತು ಮಾಡಲಾಗಿಲ್ಲ. ಈ ವಿಧಾನದ ಸತ್ಯಾಸತ್ಯತೆಯನ್ನು ತಿಳಿಯಲು ಉಲ್ಲಾಸ ಕಾರಂತರು ನಡೆಸಿದ ಸೀಮಿತ ಪರೀಕ್ಷೆಗಳೂ ಈ ಸಿದ್ಧಾಂತ ವಿಫಲವೆಂದೇ ಸಾರಿದವು.
ಈ ಹುಲಿಗಣತಿಯನ್ನು ಇನ್ನಷ್ಟು ಗೊಂದಲಗೊಳಿಸುವ ವಾಸ್ತವಿಕ ಅಂಶಗಳೆಂದರೆ ಹುಲಿಗಳ ಸಂಖ್ಯೆಯಲ್ಲಿ ವರ್ಷಕ್ಕೆ ಶೇ.15-20ರಷ್ಟು ಬದಲಾವಣೆಯ ಸಾಧ್ಯತೆ; ಹೆಜ್ಜೆ ಗುರುತು ಬೇರೆ ಬೇರೆ ಬಗೆಯ ಮಣ್ಣುಗಳ ಮೇಲೆ ವಿಭಿನ್ನ ರೀತಿಯಲ್ಲಿ ಮೂಡುವುದು; ಪ್ರಾಣಿಯ ವೇಗಕ್ಕೆ ತಕ್ಕಂತೆ ಆಗಬಹುದಾದ ಹೆಜ್ಜೆ ಗುರುತಿನ ವ್ಯತ್ಯಯ; ಒಂದೇ ಪಾದದ ಗುರುತುಗಳನ್ನೇ ಮತ್ತೆ ಮತ್ತೆ ಸಂಗ್ರಹಿಸುವುದು, ಹಾಗೂ ಅನೇಕ ಜಾಡುಗಳಲ್ಲಿ ಹೆಜ್ಜೆ ಗುರುತು ಮೂಡಲು ಅವಶ್ಯಕವಾದ ಮಣ್ಣು ಇಲ್ಲದಿರುವುದು, ಹೀಗಾಗಿ ವನ್ಯಜೀವಿ ಸಂರಕ್ಷಣಾ ಪ್ರಯತ್ನಗಳ ಯಶಸ್ಸನ್ನು ಸಾಬೀತುಪಡಿಸುವುದಕ್ಕಾಗಿ ಮುಂದಿಡಲಾದ ಹುಲಿಗಳ ಸಂಖ್ಯೆಯ ಆಕರ್ಷಕ ದಾಖಲೆಗಳಿಗೂ ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸವೇ ಉಳಿಯಿತು. ಹೀಗೆ ಅತಿ ಸುಲಭವಾಗಿ ದಕ್ಕುವ, ಮೇಲು ನೋಟಕ್ಕೆ ಖಚಿತವೆಂಬಂತೆ ತೋರುವ ಹುಲಿ ಸಂಖ್ಯೆಗಳ ಭ್ರಮೆಯಿಂದ ತೇಲತೊಡಗಿದ ಅಧಿಕಾರಿಗಳಿಗೆ, ಹುಲಿ ಸಂರಕ್ಷಣಾ ಕ್ರಮಗಳಿಗೆ ಶುದ್ಧ ವಿಜ್ಞಾನವನ್ನು ಅನ್ವಯಿಸುವುದರ ಅಗತ್ಯವೇ ತೊಚದಂತಾದುದು ದೊಡ್ಡ ವಿಪರ್ಯಾಸ.
ಹುಲಿ ಸಂರಕ್ಷಣೆಗೆ ಶುದ್ಧ ವಿಜ್ಞಾನವನ್ನು ಅನ್ವಯಿಸುವ ಬಗೆ ಹೇಗೆ? ನಾಗರಹೊಳೆ ಅರಣ್ಯದಲ್ಲಿ ಬೇಟೆಯ ಆಹಾರ ಪ್ರಾಣಿಗಳ ಸಾಂದ್ರತೆಯನ್ನು ಅಂದಾಜು ಮಾಡಲು, ಟ್ರಾನ್ಸೆಕ್ಟ್ ಎಂದು ಕರೆಯಲಾಗುವ ಮೂರು ಕಿ.ಮೀ. ಉದ್ದದ ಸೀಳುದಾರಿಗಳನ್ನು ರಚಿಸಿಕೊಳ್ಳಲಾಯಿತು. ಪ್ರತಿದಿನ ಸೂರ್ಯ ಮೂಡುವ ವೇಳೆಗೆ, ಈ ಸೀಳುದಾರಿಗಳಲ್ಲಿ ಬಲುಎಚ್ಚರದಿಂದ ನಡೆಯುತ್ತ ಪ್ರಾಣಿಗಳ ಚಲನವಲನಕ್ಕಾಗಿ ಹುಡುಕಾಡಿ, ಕಾಟಿಯೋ ಕಡವೆಯೋ ಬೇರೊಂದು ಪ್ರಾಣಿಯೋ ಕಂಡಕೂಡಲೇ ಆ ಪ್ರಾಣಿ ಯಾವುದು ಎಷ್ಟಿವೆ ಎಂಬ ವಿವರಗಳನ್ನಲ್ಲದೆ, ರೇಂಜ್ ಫೈಂಡರ್ ಎಂಬ ಉಪಕರಣದ ಮೂಲಕ ಸೀಳುದಾರಿಯಲ್ಲಿ ಎಣಿಕೆದಾರ ನಿಂತಿರುವ ಸ್ಥಳಕ್ಕೂ ಆ ಪ್ರಾಣಿಗಳಿರುವ ಜಾಗಕ್ಕೂ ಇರುವ ದೂರವನ್ನು ಗುರುತುಮಾಡಿಕೊಳ್ಳುವುದು. ಆರು ಜನ ಸಹಾಯಕರ ನೆರೆವಿನೊಂದಿಗೆ ಎರಡು ವರ್ಷಗಳ ಅವಧಿಯಲ್ಲಿ ಈ ಸೀಳುದಾರಿಗಳಲ್ಲಿ ಸುಮಾರು 460 ಕಿ.ಮೀ.ಗಳಷ್ಟು ದೂರವನ್ನು ಕ್ರಮಿಸಿ ಮಾಹಿತಿಗಳನ್ನು ಸಂಗ್ರಹಿಸಲಾಯಿತು. ಈ ಎಲ್ಲ ಮಾಹಿತಿಗಳಿಂದ ಮಾದರಿ ಸಂಗ್ರಹಣೆಗೆ ಕ್ರಮಿಸಿದ ಅರಣ್ಯದ ಸ್ಥಿತಿಗತಿ ಹಾಗೂ ಸಸ್ಯಾಹಾರಿ ಪ್ರಾಣಿಗಳ ಸಂಖ್ಯಾ ಸಾಂದ್ರತೆಯನ್ನು ಅಂದಾಜು ಮಾಡಲು ಬಳಸಿಕೊಳ್ಳಲಾಯಿತು. ಈ ಅಧ್ಯಯನದಲ್ಲಿ ಕೆಲಸ ಮಾಡಿದ ಕರ್ನಾಟಕದ ಅರಣ್ಯಾಧಿಕಾರಿಗಳು ಈ ಸೀಳುದಾರಿ ಗಣತಿಯ ಮೂಲಕ ಬೇರೆ ಬೇರೆ ಗೊರಸಿನ ಪ್ರಾಣಿಗಳ ಸಂಖ್ಯಾ ಸಾಂದ್ರತೆಯನ್ನು ಸಾಕಷ್ಟು ಖಚಿತವಾಗಿ ನಿರ್ಣಯಿಸಲು ಸಮರ್ಥರಾಗಿದ್ದರು.
ಹುಲಿಗಳು ಮಾಮೂಲಿ ಸಂಚಾರಕ್ಕೆ ಬಳಸುವ ಕಾಡಿನ ರಸ್ತೆಗಳಲ್ಲಿ ನಡೆದಾಡಿ ಉಲ್ಲಾಸ ಕಾರಂತರೂ, ಅವರ ಕ್ಷೇತ್ರ ಸಹಾಯಕರೂ ಹುಲಿಯ ಹಿಕ್ಕೆ (ಸ್ಕಾಟ್)ಗಳನ್ನು ಸಂಗ್ರಹಿಸಿದರು. ಈ ಹಿಕ್ಕೆಗಳ ದುರ್ವಾಸನೆ ಸಹಿಸಲು ಅಸಾಧ್ಯವಾಗಿದ್ದರೂ ಹುಲಿಗಳ ಬಗೆಗೆ ಸಾಕಷ್ಟು ಮಾಹಿತಿ ನೀಡಬಲ್ಲ ಆಕರಗಳಾಗಿದ್ದವು. ಒಂದು ನಿರ್ದಿಷ್ಟ ಪ್ರದೇಶದಲ್ಲಿ ಹೆಚ್ಚು ಹುಲಿಗಳಿವೆಯೆಂದರೆ ಹಿಕ್ಕೆಗಳೂ ಹೆಚ್ಚಾಗಿ ಕಂಡುಬರಬೇಕಷ್ಟೆ. ಹೀಗೆ 100 ಕಿ.ಮೀ. ನಡಿಗೆಯ ಪ್ರದೇಶದಲ್ಲಿ ಕಂಡುಬರುವ ಹುಲಿಗಳ ಹಿಕ್ಕೆಗಳ ಸಾಮಾನ್ಯ ಪಟ್ಟಿಯನ್ನು ನಮೂದಿಸುವುದು ಸಾಧ್ಯ. ಈ ಲೆಕ್ಕಾಚಾರದಿಂದ ಒಂದು ಪ್ರದೇಶದಲ್ಲಿ ಎಷ್ಟು ಹುಲಿಗಳಿವೆಯೆನ್ನುವುದನ್ನು ತಿಳಿಯಲು ಸಾಧ್ಯವಿಲ್ಲವಾದರೂ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆಯೋ ಇಳಿಮುಖವಾಗಿದೆಯೋ ಎನ್ನುವುದು ಗೊತ್ತಾಗುವುದರಿಂದ ನಿರ್ವಹಣಾಧಿಕಾರಿಗಳಿಗೆ ಅರಣ್ಯ ಪ್ರದೇಶದಲ್ಲಿನ ಹುಲಿಗಳ ಸಂಖ್ಯೆಯ ಅಂದಾಜಿನ ಬಗೆಗೆ ವಸ್ತುನಿಷ್ಠ ಮಾಹಿತಿ ಪಡೆದುಕೊಳ್ಳುವುದು ಸಾಧ್ಯ.
ಯಾವುದೇ ಗೊಂದಲವಿಲ್ಲದೆ ಒಂದೊಂದು ಹುಲಿಯನ್ನೂ ಪ್ರತ್ಯೇಕವಾಗಿ ಗುರುತಿಸುವುದಕ್ಕೆ ಇರುವ ಅತ್ಯುತ್ತಮ ಮಾರ್ಗವೆಂದರೆ ಕ್ಯಾಮೆರಾ ಟ್ರ್ಯಾಪ್ಗಳನ್ನು ಬಳಸುವುದು. ಈ ಕ್ಯಾಮೆರಾಗಳನ್ನು ಅರಣ್ಯದಲ್ಲಿ ಹುಲಿಗಳು ಸಂಚರಿಸುವ ನಿರ್ದಿಷ್ಟ ದಾರಿಗಳಲ್ಲಿ ಅಳವಡಿಸಿದ್ದು ಹುಲಿ ಆ ಮಾರ್ಗವಾಗಿ ನಡೆದಾಡುವಾಗ ಕ್ಯಾಮೆರಾ ತನ್ನಂತಾನೇ ಚಿತ್ರ ತೆಗೆಯುವುದು. ಹುಲಿ ತನ್ನ ಚಿತ್ರವನ್ನು ತಾನೇ ತೆಗೆದುಕೊಳ್ಳುತ್ತದೆ ಎಂದರೂ ಸರಿಯೇ. ಆಯಾ ಹುಲಿಯ ಮೈಮೇಲಿನ ಪಟ್ಟೆಗಳು ವಿಶಿಷ್ಟವಾಗಿದ್ದು ಈ ಪಟ್ಟೆಗಳ ಮೂಲಕ ಒಂದೊಂದು ಹುಲಿಯನ್ನೂ ನಿದಿಷ್ರ್ಟವಾಗಿ ಗುರುತಿಸಲು ಸಾಧ್ಯ. ಅಲ್ಲದೆ ಆಯಾ ಪ್ರದೇಶದಲ್ಲಿರುವ ಹುಲಿಗಳ ಸಂಖ್ಯೆಯನ್ನೂ ಅತಿ ಖಚಿತವಾಗಿ ನಿರ್ಣಯಿಸಬಹುದಾಗಿದ್ದು ಹುಲಿಗಳು ಆಯಾ ಜಾಡಿನಲ್ಲಿ ಎಷ್ಟು ಸಲ ಓಡಾಡುತ್ತವೆಯೆಂಬುದನ್ನು ನಮೂದಿಸುವ ಕ್ಯಾಪ್ಚರ್-ರೀಕ್ಯಾಪ್ಚರ್ ಎಂಬ ಲೆಕ್ಕಾಚಾರದ ಮಾದರಿಗಳ ನೆರವಿನಿಂದ ಈ ಗಣತಿಯನ್ನು ಇನ್ನಷ್ಟು ನಿಖರವಾಗಿ ದಾಖಲಿಸಬಹುದು.
ಹುಲಿಗಳ ವಾಸಕ್ಷೇತ್ರದ ವಿಸ್ತೀರ್ಣವೇನು, ಅವು ಎಷ್ಟು ದಿನಗಳಿಗೊಮ್ಮೆ ಬೇಟೆಯಾಡುತ್ತವೆ, ಅವು ಕ್ರಮಿಸುವ ದಾರಿ ಎಂಥದು, ಕೌಟುಂಬಿಕ ನೆಲೆಯಿಂದ ಅವು ಚದುರುವ ಬಗೆ, ದೀರ್ಘಾವಧಿಯಲ್ಲಿ ಅವು ಬದುಕುಳಿಯುವ ಪ್ರಮಾಣದರ-ಮೊದಲಾದ ಪ್ರಾಥಮಿಕ ಮಾಹಿತಿಗಳನ್ನು ಅರಿತುಕೊಳ್ಳುವುದಕ್ಕೂ ಅವುಗಳ ವರ್ತನೆಯನ್ನು ಸಮೀಪದಿಂದ ಗಮನಿಸುವುದಕ್ಕೂ ರೇಡಿಯೋ ಟೆಲೆಮೆಟ್ರಿ ವಿಧಾನವು ಬಹುಮಹತ್ವದ್ದಾಗಿದೆ. ಸಂಶೋಧಕ ತನ್ನ ಭುಜದ ಮೇಲೆ ಗ್ರಾಹಕವನ್ನು ನೇತುಹಾಕಿಕೊಂಡು ಕೈಯಲ್ಲೊಂದು ಆಂಟೆನಾವನ್ನು ಹಿಡಿದುಕೊಂಡು ಪ್ರತಿದಿನ ಅನೆಯ ಮೇಲೋ ನಡಿಗೆಯಲ್ಲೋ ನಾಗರಹೊಳೆ ಕಾಡಿನಲ್ಲಿ ಸುತ್ತಾಡುತ್ತ ತಾನು ರೇಡಿಯೋ ಕಾಲರ್ ತೊಡಿಸಿದ್ದ ಹುಲಿಗಳ ಚಲನವಲನಗಳ ಅಭ್ಯಾಸದಲ್ಲಿ ತೊಡಗಿರುತ್ತಾನೆ. ಈ ತಂತ್ರದ ಮೂಲಕ ಸಂಶೋಧಕರಿಗೆ ಹುಲಿಗಳ ಗುಪ್ತ ಸಾಮ್ರಾಜ್ಯವನ್ನು ಪ್ರವೇಶಿಸುವುದು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ನಾಗರಹೊಳೆಯ ದಟ್ಟಕಾಡಿನ ನಡುವೆ ಹುಲಿಯನ್ನು ಪತ್ತೆ ಹಚ್ಚುವುದಾದರೂ ಹೇಗೆ ಸಾಧ್ಯ?
ಚಿತ್ವಾನ್ನ ಹುಲಿ ಸಂಶೋಧನಾ ಯೋಜನೆಯಿಂದಲೂ ಅನಂತರ ನಾಗರಹೊಳೆಯಲ್ಲಿ ನಡೆದ ಕ್ಷೇತ್ರ ಅಧ್ಯಯನದಿಂದಲೂ ಕಂಡುಕೊಂಡ ಅಂಶಗಳು ಆವರೆಗಿನ ಭಾರತದ ಹುಲಿಗಣತಿಗಳು ತೀರ ಅಸ್ಥಿರವಾಗಿರುವುದನ್ನು ತೋರಿಸಿಕೊಟ್ಟವು. ಇಷ್ಟಾದರೂ ಒಂದು ದಶಕದ ಹಿಂದೆಯೇ ಹುಲಿ ಯೋಜನೆಯ ನೀತಿರೂಪಕರೂ ನಿರ್ವಹಣಾಧಿಕಾರಿಗಳೂ ಎಲ್ಲ ಟೀಕೆಟಿಪ್ಪಣಿಗಳನ್ನು ಮೂಲೆಗೊತ್ತಿ ಕುಳಿತರು. ಹುಲಿಗಳ ಇರುವಿಕೆಯ ಸರಳಕುರುಹುಗಳ ಸಂಗ್ರಹಣೆ, ಬೇಟೆಯ ಆಹಾರ ಪ್ರಾಣಿಗಳ ಸಾಂದ್ರತೆಯ ಅಂದಾಜು, ಇಲ್ಲವೇ ಕ್ಯಾಮೆರಾ ಟ್ರ್ಯಾಪ್ಗಳ ಬಳಕೆಯ ಮೂಲಕ ಹುಲಿಗಳ ದಟ್ಟಣೆಯ ಸಮೀಕ್ಷೆಯಂತಹ ಪರ್ಯಾಯ ತಂತ್ರಗಳ ಬಗೆಗೂ ಅಷ್ಟೇ ನಿರ್ಲಕ್ಷ್ಯ ತಾಳಿದರು.
ಹುಲಿ ಸಂರಕ್ಷಣೆ: ಮುರಳಿ ಸಂಕಷ್ಟದಲ್ಲಿ : 1990ರ ದಶಕದ ಪ್ರಾರಂಭದಲ್ಲಿ ತೀವ್ರವಾದ ಸಾಮಾಜಿಕ ಆರ್ಥಿಕ ವೈಪರೀತ್ಯಗಳಿಂದಾಗಿ ಹುಲಿ ಸಂರಕ್ಷಣೆ ಆಧಾರ ತಪ್ಪಿ ಮತ್ತೆ ನೆನೆಗುದಿಗೆ ಬೀಳುವಂತಾಯಿತು. ಮೊದಲು ದೊರೆತಿದ್ದ ಸೀಮಿತ ಯಶಸ್ಸಿನ ಆಧಾರ ಸ್ಥಂಭಗಳು ಕುಸಿಯತೊಡಗಿದ್ದವು. ಇಂದಿರಾಗಾಂಧಿಯವರ ನಂತರದ ಪ್ರಧಾನಿಗಳ ಆಡಳಿತದಲ್ಲಿ ವನ್ಯಜೀವಿ ಸಂರಕ್ಷಣೆಗೆ ರಾಜಕೀಯ ಬೆಂಬಲ ದೊರಕದೆ ಹೋಯಿತು. ಹೊಸದಾಗಿ ಉದ್ಭವಿಸಿದ ರಾಜಕೀಯ ಸಂಸ್ಕøತಿಯ ಆಶ್ರಯದಲ್ಲಿ ನೆಮ್ಮದಿಯನ್ನು ಕಂಡುಕೊಂಡ ಅಧಿಕಾರವರ್ಗ ಹಿಂದಿನ ಅಧಿಕಾರಿಗಳ ಕರ್ತವ್ಯನಿಷ್ಠ ಕಾಠಿಣ್ಯವನ್ನು ತೊರೆದು ನಯನಾಜೂಕುಗಳನ್ನು ಕಲಿತರು. 1970ರ ದಶಕದ ವನ್ಯಜೀವಿಪರವಾದವನ್ನು ಅಡಗಿಸುವಂತೆ ಮೇಲೆದ್ದ ಪರಿಸರವಾದೀ ಹೊಸ ಗಾಳಿಯೊಂದು ಬಾಯಿಮಾತಿನಲ್ಲಿ ಜೀವಿವೈವಿಧ್ಯವನ್ನು ಉಳಿಸುವ ಕಾಳಜಿಯನ್ನು ವ್ಯಕ್ತಪಡಿಸಿದರೂ ಸ್ಥಳೀಯ ಜನರು ಮಾರುಕಟ್ಟೆಯ ಲಾಭಕ್ಕಾಗಿ ಅರಣ್ಯ ಉತ್ಪನ್ನಗಳನ್ನು ಬಳಸಿಕೊಳ್ಳಲು ಅವಕಾಶವಿರಬೇಕೆಂದು ಪ್ರಬಲವಾಗಿ ಪ್ರತಿಪಾದಿಸತೊಡಗಿತು.
ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಸಂರಕ್ಷಣಾವಾದಿ ಸಮೂಹಗಳೂ ಧನವಿನಿಯೋಗ ಸಂಸ್ಥೆಗಳೂ ಹುಲಿಯ ಕೊನೆಯ ನೆಲೆಯಾಗಿ ಅಳಿದುಳಿದ ಶೇ.3ರಷ್ಟು ಭೂಭಾಗದಲ್ಲೂ ಕೈಚಾಚುವ "ತಾಳಿಕೆಯ ಬಳಕೆ" (ಸಸ್ಟೇನಬಲ್ ಯೂಸ್) ಸಿದ್ಧಾಂತವನ್ನು ಪ್ರತಿಪಾದಿಸತೊಡಗಿದವು. ವನ್ಯಜೀವಿ ಸಮಸ್ಯೆಗಳ ಬಗೆಗೆ ಅಲ್ಪಸ್ವಲ್ಪ ತಿಳಿದವರೂ ಆಸಕ್ತಿಯೇ ಇಲ್ಲದವರೂ ರಾಜಕೀಯ ಲಾಭದ ದೃಷ್ಟಿಯಿಂದ ಈ ಸಿದ್ಧಾಂತ ಬಹು ಸಮಂಜಸವಾಗಿದೆಯೆಂದು ಹೇಳ ತೊಡಗಿದರು. ಹುಲಿ ಯೋಜನೆಯ 20ನೇ ವಾರ್ಷಿಕೋತ್ಸವದ ನೆನಪಿಗಾಗಿ ದೆಹಲಿಯಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ವಿಚಾರ ಸಂಕಿರಣವೊಂದು ಜನರ ಅಗತ್ಯಗಳನ್ನು ಕುರಿತು ಚರ್ಚಿಸುವ ವೇದಿಕೆಯಾಗಿ ಮಾರ್ಪಟ್ಟಿತು. ಅದರಲ್ಲಿ ಭಾಗವಹಿಸಿದ್ದವರಿಗೆ ಹುಲಿಯ ಜೀವಿ ಪರಿಸ್ಥಿತಿಯ ಕನಿಷ್ಠ ಅಗತ್ಯಗಳ ವಿಚಾರವೊಂದೂ ನೆನಪಿಗೆ ಬಾರದೆಹೋಯಿತು. ಅಧಿಕೃತ ಸಾಕ್ಷ್ಯಚಿತ್ರವೊಂದು ಹುಲಿ ಸರ್ವತ್ರ ಸುಕ್ಷೇಮಿಯಾಗಿರುವುದೆಂದು ಘೋಷಿಸಿಯೇ ಬಿಟ್ಟಿತು. ಈ ಸಂಕುಚಿತ ಸಂತೃಪ್ತಿ ತಪ್ಪುದಾರಿಗೆಳೆಯುವಂಥದು. ವಾಸ್ತವದಲ್ಲಿ ಹುಲಿಗಳ ಬದುಕಿಗೆ ಈಗಾಗಲೇ ಇದ್ದ ಕಂಟಕಗಳ ಜೊತೆಗೆ ಮತ್ತೂ ಒಂದು ಆತಂಕ ತಲೆಯೆತ್ತತೊಡಗಿತ್ತು - ಪೂರ್ವದೇಶಗಳ ವೈದ್ಯರು ತಯಾರಿಸುವ ಔಷಧಕ್ಕಾಗಿ ಹುಲಿಯ ಎಲುಬುಗಳನ್ನು ಪೂರೈಸುವ ಹೊಸ ದಂಧೆ ಪ್ರಾರಂಭವಾಗಿತ್ತು.
ಅತಾರ್ಕಿಕ ಗಣತಿಯ ಫಲಿತಾಂಶಗಳಿಂದಲೂ ರಣಥಂಬೋರ್ನಲ್ಲಿ ತಮಗೆ ಪರಿಚಿತವಾಗಿದ್ದ ಹುಲಿಗಳ ಹತ್ಯೆಯಿಂದಲೂ ಬೇಸರಗೊಂಡಿದ್ದ ಕೆಲವು ಹುಲಿ ಸಂರಕ್ಷಣಾವಾದಿಗಳು ವ್ಯಕ್ತಪಡಿಸಿದ್ದ ಅಳುಕು-ಆತಂಕಗಳು 1993ರ ಮಧ್ಯಭಾಗದಲ್ಲಿ ಗಂಭೀರ ಸ್ವರೂಪವನ್ನೇ ತಾಳುವಂತಾಯಿತು. ದೆಹಲಿಯ ಸಂರಕ್ಷಣಾವಾದಿ ಅಶೋಕ್ ಕುಮಾರ್ರವರೂ ಅವರ ಸಹಚರರೂ ಭಾರತದಾದ್ಯಂತ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದ ಹುಲಿಹತ್ಯೆಯನ್ನು ಸಾಕ್ಷ್ಯಾಧಾರಗಳ ಸಮೇತ ಬಹಿರಂಗಪಡಿಸಿದರು. ಆಗಿನ ಹುಲಿ ಯೋಜನೆಯ ನಿರ್ದೇಶಕರು, ಹುಲಿ ಮರಣಶಯ್ಯೆಯಲ್ಲಿರುವ ರೋಗಿಯೇನೂ ಅಲ್ಲವೆಂದೂ ಅತ್ಯಂತ ಸುರಕ್ಷಿತವಾಗಿದೆಯೆಂದೂ ಪ್ರತಿಪಾದಿಸುತ್ತಲೇ ಇದ್ದರು; ಇನ್ನೊಂದೆಡೆ ವ್ಯಾಪಕ ತನಿಖೆಗಳು ಪರಿಸ್ಥಿತಿ ವಿಷಮವಾಗಿರುವುದನ್ನು ಸಾರಿದವು. ಹುಲಿಗಳ ನಿಜವಾದ ಸಂಖ್ಯೆ ಮತ್ತು ಎಷ್ಟು ಹುಲಿಗಳನ್ನು ಬೇಟೆಯಾಡಲಾಗಿದೆಯೆನ್ನುವುದರ ಬಗೆಗೆ ನಿಖರವೆನ್ನಬಹುದಾದ ಅಂದಾಜುಗಳಿಲ್ಲದಿರುವುದರಿಂದ ಹುಲಿಬೇಟೆ ಹಾಗೂ ಅದರ ಪರಿಣಾಮಗಳ ನೈಜ ಸ್ವರೂಪವೇನೆಂದು ತಿಳಿಯಲಾಗಿಲ್ಲ. ಆದರೆ, ಇನ್ನು ಮುಂದಕ್ಕಂತೂ ಈ ಬಗೆಯ ಅಲಕ್ಷ್ಯ, ಉದಾಸೀನಗಳಿಗೆ ಅವಕಾಶವಿಲ್ಲವೆಂಬುದು ಖಂಡಿತ. (ಹುಲಿಸಂರಕ್ಷಣೆಯನ್ನು ಕುರಿತಾದ) "ಸಮಸ್ಯೆ ಗಂಭೀರವಾಗಿದೆ" ಎಂದು ಆಗಿನ ಪರಿಸರಖಾತೆಯ ಸಚಿವರು ಕೊನೆಗೂ ಒಪ್ಪಿಕೊಂಡರು.
ವಿನಾಶದಿಂದ ಸಂರಕ್ಷಣೆಯತ್ತ : ಹುಲಿಯ ನೆಲೆಗಳ ವ್ಯಾಪ್ತಿ ಕುಗ್ಗುತ್ತಿರುವುದರಿಂದ ವಂಶವಾಹೀ ವೈವಿಧ್ಯತೆಯೂ ಇರುವುದಿಲ್ಲವಾಗಿ ಕೆಲವೆಡೆ ಹುಲಿಗಳ ಸಂಖ್ಯಾಭಿವೃದ್ಧಿಗೆ ದೀರ್ಘಕಾಲೀನ ಆತಂಕವೊದಗಲಿದೆಯೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಇನ್ನು ಹಲವರು ಸಂರಕ್ಷಣಾ ಸಿದ್ಧಾಂತಗಳು ಜನಪರವಾದಾಗ ಮಾತ್ರ ಭವಿಷ್ಯದಲ್ಲಿ ಹುಲಿಸಂರಕ್ಷಣೆ ಸಾಧ್ಯವೆಂದು ವಾದಿಸುತ್ತಾರೆ. ಆದರೆ, ಲಾಡ್ರ್ಸ್ ಕೇನ್ಸ್ರವರು ಹೇಳುವಂತೆ, "ದೀರ್ಘಾವಧಿಯ ಲೆಕ್ಕಾಚಾರದಲ್ಲಿ ತೊಡಗಿದರೆ ಆ ವೇಳೆಗೆ ನಾವೆಲ್ಲಾ ಸತ್ತೇಹೋಗಿರುತ್ತೇವೆ". ಹೀಗಾಗಿ ಭವಿಷ್ಯಕ್ಕಿಂತ ಕಣ್ಣಮುಂದಿರುವ ಸಂಕಷ್ಟವನ್ನು ಅಲಕ್ಷಿಸದೆ ಪರಿಹಾರ ಹುಡುಕುವುದೇ ಮುಖ್ಯ. ಹುಲಿಗಳ ಉಳಿವಿಗಿರುವ ದೀರ್ಘಕಾಲೀನ ಆತಂಕಗಳ ಬಗೆಗೆ ಯೋಚಿಸುತ್ತ ಕೂರುವ ಬದಲು, ಇರುವ ವಿರಳವಾದ ಸಂಪನ್ಮೂಲಗಳನ್ನು ದೀರ್ಘಕಾಲೀನ ಪರಿಹಾರಗಳಿಗೆ ಮೀಸಲಾಗಿಡಲು ಪ್ರಯತ್ನಿಸುವುದರಿಂದಲೂ ಇನ್ನು ಎರಡು ದಶಕಗಳಲ್ಲಿ ಹುಲಿಯ ಅವಸಾನವನ್ನೇ ಕಾಣಬೇಕೇ ಹೊರತು ಬೇರೇನೂ ಸಾಧಿತವಾಗುವುದಿಲ್ಲ.
ಜೀವ ವಿಜ್ಞಾನಿಗಳಾದ ಮೆಲ್ವಿನ್ ಸನ್ಕ್ವಿಸ್ಟ್, ಜಾರ್ಜ್ ಷಾಲರ್ ಮತ್ತು ಅಲನ್ ರೆಬಿನೊವಿಟ್ಜ್ರವರ ಸಂಶೋಧನೆಗಳಿಗೆ ಹೊಂದಿಕೊಂಡಂತೆ, ಹುಲಿಗಳ ಬಗೆಗೆ ಉಲ್ಲಾಸ ಕಾರಂತರು ನಾಗರಹೊಳೆಯಲ್ಲಿ ನಡೆಸಿದ ಸಂಶೋಧನೆಗಳು ತೋರಿಸಿಕೊಟ್ಟಿರುವುದೇನೆಂದರೆ: ಏಷ್ಯದ ಬಹುಭಾಗಗಳಲ್ಲಿ ಹುಲಿಗಳ ಸಂಖ್ಯೆ ಇಳಿಮುಖವಾಗಿರುವುದಕ್ಕೆ ಅವುಗಳ ಆಹಾರವಾದ ಪ್ರಾಣಿಗಳನ್ನು ಜನರು ಬೇಟೆಯಾಡುತ್ತಿರುವುದೇ ಕಾರಣ. ಈ ಅವನತಿಯ ಮುಂದುವರೆದ ಭಾಗವಾಗಿ, ಹುಲಿಯ ಮೂಳೆಗಳನ್ನು ಬಳಸಿ ತಯಾರಿಸುವ ನಾಟಿ ಔಷಧಗಳ ದಂಧೆಯೇ ಹುಲಿಯ ವಿರುದ್ಧದ ಅಂತಿಮ ನಿರ್ಣಾಯಕ ಯುದ್ಧವಾಗಿ ಪರಿಣಮಿಸುವ ಸಾಧ್ಯತೆಯಿದೆ. ನಮಗೀಗ ಗೊತ್ತಿರುವಂತೆ, ಹುಲಿಯ ನಿವಾಸ ನೆಲೆಗಳ ವಿಸ್ತೀರ್ಣ, ಸಂಖ್ಯಾಸಾಂದ್ರತೆ ಮತ್ತು ಉಳಿವಿನ ಪ್ರಮಾಣಗಳೆಲ್ಲ ಪ್ರಧಾನವಾಗಿ ಬೇಟೆಯ ಪ್ರಾಣಿಗಳ ಸಾಂದ್ರತೆಗೇ ಹೊಂದಿಕೊಂಡಿವೆ. ಬೇಟೆಯ ಪ್ರಾಣಿಗಳ ದಟ್ಟಣೆ ಹೆಚ್ಚಿದ್ದಾಗ, ಜನರು ಅಷ್ಟಿಷ್ಟು ಬೇಟೆಯಾಡಿದರೂ ಹುಲಿಗಳಿಗೆ ಬಾಧಕವಿಲ್ಲ. ಬೇಟೆಯ ಪ್ರಾಣಿಗಳ ಸಾಂದ್ರತೆ ಕಡಿಮೆಯಾದಂತೆ ಹುಲಿಗಳ ಆಹಾರಭಂಡಾರ ಕುಗ್ಗುವುದರಿಂದ ಅವುಗಳ ನಿವಾಸನೆಲೆ ಅನಿವಾರ್ಯವಾಗಿ ವಿಸ್ತಾರವಾಗ ಬೇಕಾಗುತ್ತದೆ. ಸಂತಾನ ಪೋಷಕ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತದೆ, ವಂಶಾಭಿವೃದ್ಧಿಯೂ ತಗ್ಗುತ್ತದೆ. ಹುಲಿಗಳ ಸಂತತಿ ದಿನೇ ದಿನೇ ಅಪಾಯದಂಚಿನತ್ತ ಸಾಗುತ್ತದೆ. ಅಂತಿಮವಾಗಿ, ಎಲ್ಲೋ ಕೆಲವು ಹುಲಿಗಳು ಹತ್ತಾರು ವರ್ಷ ಜೀವನವನ್ನು ಸಾಗಿಸಲು ಶಕ್ತವಾದರೂ, ಹುಲಿಯ ಅಳಿವು ಖಚಿತವೂ ಅಂತಿಮವೂ ಆಗಿರುತ್ತದೆ. ಇದನ್ನು ಎರಡು ದಶಕಗಳ ಹಿಂದೆಯೇ ಜಾವಾ ಹುಲಿಯ ಪ್ರಭೇದದ ಅವಸಾನ ನಮಗೆ ತೋರಿಸಿಕೊಟ್ಟಿದೆ.
ಬದಲಾಗುತ್ತಿರುವ ನಮ್ಮ ಸಾಮಾಜಿಕ ಸಿದ್ಧಾಂತಗಳಿಗೆ ತಕ್ಕಂತೆ ಹುಲಿ ತನ್ನ ಸಹಜವರ್ತನೆ, ದೇಹದ ಗಾತ್ರ,
ಮಾಂಸಾಹಾರದ ಅಭ್ಯಾಸಗಳನ್ನು ಬದಲಿಸಿಕೊಳ್ಳಲಾಗುವುದಿಲ್ಲವಷ್ಟೆ! ನಮ್ಮ ಕಣ್ಣಿಗೆ ಕಾಣುವ ಪ್ರಪಂಚದೊಳಗೆ ಹುಲಿಯ ಜೈವಿಕ ಅಗತ್ಯಗಳಿಗೂ ಒಂದಿಷ್ಟು ಅವಕಾಶ ಕಲ್ಪಿಸಲೇಬೇಕು; ಇಲ್ಲವಾದಲ್ಲಿ, ಹುಲಿಯ ಅವಸಾನವಾಗುವುದು ಖಂಡಿತ. ಆದ್ದರಿಂದ, ರಾಜಕೀಯ ಹೊಂದಾಣಿಕೆಗಳಿಗಾಗಿ ನಾವು ರೂಪಿಸಿಕೊಂಡ ಸಾಮಾಜಿಕ ಧೋರಣೆಗಳ ಚೌಕಟ್ಟಿನಲ್ಲಿ ಹುಲಿಯ ಬದುಕನ್ನು ನೋಡುವುದಕ್ಕೆ ಬದಲಾಗಿ ಈ ನಾಜೂಕಿನ ಪ್ರಾಣಿಯ ಜೀವಿ ಪರಿಸ್ಥಿತಿಯ ಅಗತ್ಯಗಳಿಗೆ ತಕ್ಕಂತೆ ಅದರ ಉಳಿವಿಗಾಗಿ ರೂಪರೇಖೆಗಳನ್ನು ನಾವು ಸಿದ್ಧಪಡಿಸಬೇಕಾಗಿದೆ. ಇದಕ್ಕಾಗಿ ಕೆಲವೊಂದು ಕಠಿಣವಾದ "ಜನಪರ" ವಲ್ಲದ ತೀರ್ಮಾನಗಳನ್ನು ಕೈಗೊಳ್ಳಬೇಕಾಗಿಯೂ ಬರಬಹುದು.
ಮೊದಲನೆಯದಾಗಿ, ಕೃಷಿ ಮತ್ತು ಅರಣ್ಯಜೈವಿಕ ಉತ್ಪನ್ನ ಸಂಗ್ರಹಣೆಯಂತಹ ಆರ್ಥಿಕ ಚಟುವಟಿಕೆಯನ್ನು ಅವಲಂಬಿಸಿರುವ ಜನದಟ್ಟಣೆಯ ಮಾನವ ವಸತಿಗಳೊಡನೆ ಹುಲಿಗಳ ಸಹಬಾಳ್ವೆ ಸಾಧ್ಯವಿಲ್ಲವೆಂಬುದನ್ನು ನಾವು ಗಮನಿಸಬೇಕು. ಆದ್ದರಿಂದ ಪ್ರಮುಖ ಹುಲಿನೆಲೆಗಳಲ್ಲಿ ಮನುಷ್ಯ ಮತ್ತು ಜಾನುವಾರು ಸಾಂದ್ರತೆಯನ್ನು ತಗ್ಗಿಸುವುದು ಅವಶ್ಯಕ. ವಿವೇಚನಾಯುತವೂ ಉತ್ತಮವೂ ಆದ ಪುನರ್ವಸತಿ ಕಾರ್ಯಕ್ರಮಗಳನ್ನು ರೂಪಿಸುವುದರಿಂದ ವನ್ಯಪಶುಗಳ ನೆಲೆಯ ಮೇಲಣ ಒತ್ತಡ ತಗ್ಗುತ್ತದೆ. ಕಳ್ಳಬೇಟೆ ಇಲ್ಲದಂತಾಗುತ್ತದೆ. ಕಾಡುಪ್ರಾಣಿಗಳು ಮೇವಿಗಾಗಿ ಜಾನುವಾರುಗಳೊಡನೆ ಹೆಣಗಾಡುವ ಸ್ಥಿತಿ ಇರುವುದಿಲ್ಲ. ಹುಲಿಯ ಅತಿಮುಖ್ಯ ನೆಲೆಗಳನ್ನು ಸಂಪೂರ್ಣವಾಗಿ ಬೇಟೆಯಿಂದಲೂ ಇತರ ಒತ್ತಡಗಳಿಂದಲೂ ಪಾರು ಮಾಡುವುದು ಸಾಧ್ಯವಾಗುವುದಾದರೆ ಕಾಡಿನಲ್ಲಿರುವ ಜನರ ಪುನರ್ವಸತಿಗಾಗಿ ಅಷ್ಟೇನೂ ಮಹತ್ವದ್ದಲ್ಲದ ಕಾಡಿನ ಭಾಗಗಳನ್ನೇ ಮೀಸಲಾಗಿಟ್ಟರೂ ಪರವಾಗಿಲ್ಲ.
ಎರಡನೆಯದಾಗಿ, ಮಾರುಕಟ್ಟೆಗಾಗಿ ಅರಣ್ಯ ಉತ್ಪನ್ನಗಳ ಸಂಗ್ರಹಣೆಯೇ ಹುಲಿಯ ನೆಲೆಗಳ ಅವನತಿಗೆ ಪ್ರಮುಖ ಕಾರಣವೆಂಬುದನ್ನು ನೆನಪಿಟ್ಟುಕೊಳ್ಳಬೇಕು. ಹುಲಿಯ ನೆಲೆಗಳಿಗೂ ಸ್ಥಳೀಯ ಇಲ್ಲವೇ ದೂರದ ಮಾರುಕಟ್ಟೆಗಳಿಗೂ ಸಂಪರ್ಕವೇ ಸಾಧ್ಯವಾಗದಂತೆ ಅರಣ್ಯಗಳಿಂದ ಸೌದೆ, ಮರಮುಟ್ಟು, ಮೇವು, ಸಗಣಿ ಮತ್ತಿತರ ಕಿರುಅರಣ್ಯ ಉತ್ಪನ್ನಗಳೆಲ್ಲದರ ಸಂಗ್ರಹಣೆಯನ್ನು ನಿಷೇಧಿಸಬೇಕು. ಇಂಥ ಉತ್ಪನ್ನಗಳನ್ನು ಸಂಗ್ರಹಿಸುವ ಏಜೆನ್ಸಿಗಳು ಸರ್ಕಾರದ್ದಾಗಿರಲಿ, ಸ್ವಯಂಸೇವಾ ಸಂಘಟನೆಗಳಾಗಿರಲಿ, ಸ್ಥಳೀಯ ಜನರೇ ಆಗಿರಲಿ, ಅಂಥ ಎಲ್ಲ ಬಗೆಯ ಅರಣ್ಯ ಮಾರುಕಟ್ಟೆಯ ಸಂಪರ್ಕಗಳನ್ನೂ ಕಡಿದುಹಾಕಬೇಕು.
ಮೂರನೆಯದಾಗಿ, ನಮ್ಮ ನಿರ್ವಹಣಾ ಪ್ರಯತ್ನಗಳು ಎಷ್ಟೇ ಶ್ರೇಷ್ಠಮಟ್ಟದವಾಗಿದ್ದರೂ ಸಮಾಜದಲ್ಲಿ ಅಪರಾಧಿ ಶಕ್ತಿಗಳು ಇದ್ದೇ ಇರುತ್ತವೆಯೆಂಬುದನ್ನು ಮರೆಯಬಾರದು. ಅಂಥ ದುಷ್ಟಶಕ್ತಿಗಳನ್ನು ಮಟ್ಟಹಾಕುವುದಕ್ಕೆ ಪರಿಣಾಮಕಾರಿಯಾದ ಪ್ರತಿಬಲವೊಂದು ಇರಲೇಬೇಕು. ಆದ್ದರಿಂದ ಹುಲಿಯ ನೆಲೆಗಳ ಸುತ್ತಲಿನ ಜೀವಿಪರಿಸ್ಥಿತಿಯ ಅಭಿವೃದ್ಧಿಗಾಗಿನ ನಮ್ಮ ಯತ್ನಗಳಿಗೆ ತಕ್ಕಂತೆ ರಕ್ಷಣಾತ್ಮಕ ಸಂಪನ್ಮೂಲಗಳೂ ಮಾನವಬಲವೂ ಇದ್ದೇ ಇರಬೇಕು. ಹುಲಿನೆಲೆಗಳೊಳಗೆ ಕಳ್ಳಬೇಟೆಗೆ ತೊಡಗಿರುವವರ ನಿಯಂತ್ರಣದ ಜೊತೆಗೆ ದೂರದ ಊರುಗಳಲ್ಲಿದ್ದು ವನ್ಯಜೀವಿ ವ್ಯಾಪರದಲ್ಲಿ ತೊಡಗಿರುವವರನ್ನೂ ನಿರ್ದಯವಾಗಿ ಮಟ್ಟಹಾಕಬೇಕು.
ನಾಲ್ಕನೆಯದಾಗಿ, ನಮ್ಮ ಹುಲಿಸಂರಕ್ಷಣಾ ಪ್ರಯತ್ನಗಳು ಹೇಗೆ ಸಾಗುತ್ತಿವೆಯೆನ್ನುವುದರ ಮೌಲ್ಯಮಾಪನವು ವಿವರವಾಗಿಯೂ ನಿರಂತರವಾಗಿಯೂ ನಡೆಯುತ್ತಿರಬೇಕು. ಇದಕ್ಕಾಗಿ ವಿಶ್ವಾದ್ಯಂತ ಅನುಸರಿಸಲಾಗುವ ವೈಜ್ಞಾನಿಕ ವಿಧಾನಗಳನ್ನೇ ಅನುಸರಿಸಬೇಕಾಗುತ್ತದೆ. ಸಿದ್ಧಾಂತಗಳನ್ನು ರೂಪಿಸುವ ನಮ್ಮ ಅಧಿಕಾರ ವರ್ಗದವರು ಬೌದ್ಧಿಕ ತಿರಸ್ಕಾರ ಅವಜ್ಞೆಗಳನ್ನು ತೊರೆದು ವನ್ಯಜೀವಿ ಸಿದ್ಧಾಂತಗಳ ಜೊತೆಗೆ ವನ್ಯಜೀವಿ ವಿಜ್ಞಾನದ ತತ್ವಗಳನ್ನೂ ಹಾಸುಹೊಕ್ಕಾಗಿ ರೂಢಿಸಿಕೊಳ್ಳುವುದು ಅವಶ್ಯಕ.
ಕೊನೆಯದಾಗಿ, ಕಟಿಬದ್ಧವಾದ ರಾಜಕೀಯ ನಾಯಕತ್ವ ಮತ್ತು ಸಾರ್ವಜನಿಕ ಜಾಗೃತಿಯಿಲ್ಲದೆ ಯಾವುದೇ ಮಹತ್ವದ ಬದಲಾವಣೆ ಜಾರಿಗೆ ತರುವುದು ಅಸಾಧ್ಯ. ರಾಜಕಾರಣಿಗಳು, ಅಧಿಕಾರಿಗಳು, ಮಾಧ್ಯಮಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕರು - ಇವರೆಲ್ಲರ ಧೋರಣೆಗಳಲ್ಲಿ ಅಗತ್ಯವಾದ ಬದಲಾವಣೆಗಳನ್ನು ಮೂಡಿಸಲು ಹುಲಿಪರವಾದ ಪ್ರಬಲ ಸಂಘಟನೆಯೊಂದು ರೂಪುಗೊಳ್ಳಬೇಕು. ಈ ಪರವಾದಿಗಳಲ್ಲಿ ಹುಲಿಯಂತಹ ಬಲಿಷ್ಠ ಬೇಟೆಗಾರನ ಅತಿನಾಜೂಕಾದ ಜೀವಿ ಪರಿಸ್ಥಿತಿಯ ಬಗೆಗೆ ಸ್ಪಷ್ಟವೂ ಆತ್ಮೀಯವೂ ಆದ ತಿಳುವಳಿಕೆಯಿರಬೇಕು.
ಕಾಡಿನ ಪೊದೆಗಳ ನಡುವೆ ಮೌನವಾಗಿ ಸಂಚರಿಸುತ್ತ ಹುಲಿ ಅದರೊಳಗೆ ಅಕ್ಷರಶಃ ಕರಗಿ ಅದೃಶ್ಯವಾಗುವುದನ್ನು ನೋಡುವಾಗ ಸಂಶೋಧಕರಲ್ಲ್ಲಿ ತೀವ್ರತರವಾದ ಮೆಚ್ಚುಗೆಯೂ ಭಯಮಿಶ್ರಿತವಾದ ಗೌರವವೂ ಮೂಡುತ್ತದೆ. ಮೃಗಾಲಯದಲ್ಲಿರುವ ಹುಲಿ ಎಂದೂ ಇಂಥ ಭಾವನೆಯನ್ನು ಮೂಡಿಸಲಾರದು. ವನ್ಯಪರಿಸರದಲ್ಲಿರುವ ಹುಲಿಯ ಬಗೆಗಿನ ಇಂಥ ಪ್ರೀತಿಗೌರವಗಳ ತುಡಿತವೇ ಹುಲಿಯ ಉಳಿವಿಗೆ - ಇಲ್ಲವೇ ಶಾಶ್ವತ ಅಳಿವಿಗೆ - ಎಡೆಗೊಡುವುದು.
ಹುಲಿ ಸಂರಕ್ಷಣೆ ಏಕೆ? : ನಾವು ಹುಲಿಯನ್ನು ಏಕೆ ಸಂರಕ್ಷಿಸಬೇಕೆನ್ನುವ ವಾದವನ್ನು ಪುಷ್ಟೀಕರಿಸಲು ಅನೇಕ ವಿವೇಚನಾಯುತವಾದ ಅಂಶಗಳನ್ನು ಮುಂದಿಡಬಹುದು. ಉದಾಹರಣೆಗೆ ಹೇಳುವುದಾದರೆ, ಭಾರತದ ಅಧಿಕಾಂಶ ಜನರು ಕೃಷಿಕರೂ ಗ್ರಾಮಸ್ಥರೂ ಆಗಿದ್ದಾರೆ. ಇವರ ಕೃಷಿ ಉತ್ಪನ್ನಗಳೂ ಏಳಿಗೆಯೂ ಮಣ್ಣಿನ ಸವಕಳಿಯ ತಡೆ, ಭೂಜಲದ ಸ್ಥಿರತೆ, ಸ್ಥಳೀಯ ಹವಾಗುಣದ ಏರಿಳಿತಗಳ ನಿಯಂತ್ರಣವನ್ನು ಅವಲಂಬಿಸಿರುತ್ತದೆ. ಹುಲಿಗೆ ಆಶ್ರಯ ನೀಡುವ ಅರಣ್ಯಗಳೇ ಈ ಎಲ್ಲ ಕೆಲಸಗಳನ್ನು ನಿರ್ವಹಿಸುವ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ. ನಮ್ಮ ನಾಡಿನ ಮುಖ್ಯ ನದಿಗಳ ಮೂಲ ಸ್ಥಾನಗಳೂ ಈ ಅರಣ್ಯಗಳೇ. ವಿವೇಚನೆಯಿಂದ ಮೇಲ್ವಿಚಾರಣೆ ಮಾಡಿದಲ್ಲಿ, ಕೆಲವು ಅರಣ್ಯಗಳಿಂದ ನಮ್ಮ ಹಳ್ಳಿಗರೂ ನಗರವಾಸಿಗಳೂ ದೈನಂದಿನ ಅಗತ್ಯಗಳಿಗೆ ತಕ್ಕಷ್ಟು ಸೌದೆ, ಮರ, ಬಿದಿರು, ಹೆಣಿಗೆಯ ಬೆತ್ತ ಮತ್ತು ಹಲವಾರು ಬಗೆಯ ಕಿರು ಅರಣ್ಯ ಉತ್ಪನ್ನಗಳನ್ನು ಪಡೆಯಬಹುದಾಗಿದೆ.
ಇದಕ್ಕಿಂತ ಮುಖ್ಯವಾದ ವಿಷಯವೆಂದರೆ, ಭೂಮಿಯಲ್ಲಿನ ಖನಿಜ ಸಂಪನ್ಮೂಲಗಳು ಕ್ಷಿಪ್ರವಾಗಿ ಮುಗಿದು ಹೋಗುತ್ತಿವೆ. ಹೆಚ್ಚುತ್ತಿರುವ ಜನಸಂಖ್ಯೆಯ ನಡುವೆ ಮನುಷ್ಯ ಉತ್ತಮ ಜೀವನ ಸೌಲಭ್ಯಗಳಿಗಾಗಿ ಕಾತರಿಸುತ್ತಿದ್ದಾನೆ. ಆಹಾರ, ಬಟ್ಟೆ, ವಸತಿ, ಇಂಧನ ಹಾಗೂ ಜೀವರಕ್ಷಕ ಔಷಧಗಳಿಗಾಗಿ ಬೇಡಿಕೆ ಹೆಚ್ಚುತ್ತಿದೆ. ಇವೆಲ್ಲ ಅಗತ್ಯಗಳಿಗಾಗಿ ಜೈವಿಕ ತಂತ್ರಜ್ಞಾನವನ್ನೇ ಅವಲಂಬಿಸುವಂತಾಗುತ್ತದೆ. ಆದರೆ, ಈವರೆಗೂ ವಿಜ್ಞಾನಿಗಳು ಸಂಶೋಧಿಸಿರುವುದು, ಅರಣ್ಯದ ಜೈವಿಕ ಶ್ರೀಮಂತಿಕೆಯ ಅಲ್ಪಭಾಗವನ್ನು ಮಾತ್ರ. ಅರಣ್ಯಗಳು ಜೀವಾಧಾರಕ ಉತ್ಪನ್ನಗಳ ಭಂಡಾರವೆಂಬುದನ್ನು ಮರೆಯಲಾಗದು. ಲಕ್ಷಾಂತರ ಸಸ್ಯ ಮತ್ತು ಪ್ರಾಣಿ ಜೀವಗಳ ನೆಲೆಯಾದ ಅರಣ್ಯದ ಕೇಂದ್ರ ಜೀವಿಗಳಲ್ಲಿ ಹುಲಿಯೂ ಒಂದು. ಹುಲಿ, ಜೀವಿಸ್ಥಿತಿ ಸಂಬಂಧಗಳ ಸಂಕೀರ್ಣ ಸರಪಳಿಯ ಒಂದು ತುದಿಯಲ್ಲಿರುವಂಥದು. ಈ ಸರಪಳಿಯಲ್ಲಿ ಸೂರ್ಯನಿಂದ ನೇರ ಶಕ್ತಿಯನ್ನು ಪಡೆದು ಆಹಾರವನ್ನು ಉತ್ಪಾದಿಸುವ ಸಸ್ಯವರ್ಗಗಳೂ ಹುಲಿಗೆ ಆಹಾರವಾದ ಸಸ್ಯಾಹಾರೀ ಪ್ರಾಣಿಗಳೂ ಸೇರಿವೆ. ಈ ಸಂಬಂಧಗಳು ಎಷ್ಟು ಸಂಕೀರ್ಣವಾಗಿವೆಯೆಂದರೆ, ಮನುಷ್ಯನಿಗೆ ಉಪಯೋಗವಾಗುವಂಥ ಜೀವರಾಶಿಗಳನ್ನು ಮಾತ್ರ ಪ್ರತ್ಯೇಕಿಸಿ ಸಂರಕ್ಷಿಸುತ್ತೇವೆಂದು ಹೊರಟರೆ ಅದೆಂದೂ ಸಾಧ್ಯವಾಗಲಾರದು. ಇವೆಲ್ಲ ಸಂಕೀರ್ಣ ಜೈವಿಕರೂಪ ಸಂಪರ್ಕಗಳನ್ನೂ ಜೀವಿ ಪರಿಸ್ಥಿತಿ ಪ್ರಕ್ರಿಯೆಗಳನ್ನೂ ಖಚಿತವಾಗಿ ಕಾಪಾಡಬಹುದಾದ ಮುಖ್ಯ ವಿಧಾನಗಳಲ್ಲಿ ಒಂದೆಂದರೆ ಹುಲಿಯಂತಹ ಪ್ರಮುಖ ಬೇಟೆಗಾರ ಪ್ರಾಣಿಗಳು ಬೇಟೆಗಾರ ಪ್ರಾಣಿ-ಆಹಾರಪ್ರಾಣಿ-ಸಸ್ಯವರ್ಗಗಳ ಸುಸಂಬದ್ಧವಾದ ಒಕ್ಕೂಟದಲ್ಲಿ ಉಳಿದುಕೊಂಡಿರಲೇಬೇಕು. ಶೇ. 97ರಷ್ಟು ಭೂಭಾಗವನ್ನು ಆಕ್ರಮಿಸಿಕೊಂಡಿರುವ ಮಾನವ ಸಮಾಜ ನೂರಾರು ವರ್ಷಗಳಿಂದ ಪರಿಹರಿಸಿಕೊಳ್ಳುವ ಸಾಧ್ಯವಾಗದೆ ಇರುವ ಯಾವುದೇ ಒಂದು ಸಮಸ್ಯೆಯ ಪರಿಹಾರಕ್ಕಾಗಿ, ಈಗ ಹುಲಿಗಳು ಉಳಿದುಕೊಂಡಿರುವ ಶೇಕಡಾ ಮೂರರಷ್ಟು ಭೂಪ್ರದೇಶವನ್ನೂ ಕಿತ್ತುಕೊಳ್ಳುವುದೆಂದರೆ ಅದು ಮೂರ್ಖತನವಲ್ಲದೆ ಮತ್ತೇನು?
ಮುಂದಿಡಬಹುದಾದ ಇನ್ನೂ ಕೆಲವು ವಾದಗಳಿವೆ. ಅಳಿದುಳಿದಿರುವ ಹುಲಿಯ ನೆಲೆಗಳು ಪ್ರಕೃತಿಯ ಅದ್ಭುತ ಪ್ರಯೋಗ ಶಾಲೆಗಳೂ ಆಗಿವೆ. ಈ ಪ್ರಯೋಗ ಶಾಲೆಗಳಿಂದ ನಾವು ಗಮನಿಸಬೇಕಾದ, ಕಲಿಯಬೇಕಾದ ಸಂಗತಿಗಳು ಸಾಕಷ್ಟಿವೆ. ಹುಲಿಯ ಆವಾಸವಾದ ಕಾಡುಗಳು ನಾವು ಯಾವ ಪ್ರಕೃತಿಯ ಮಡಿಲಿನಿಂದ ಜೀವ ತಾಳಿದ್ದೇವೆಯೋ ಅದೇ ಪ್ರಪಂಚದ ಕೊನೆಯ ಕೊಂಡಿಗಳು, ಕಲಿಕೆಯ ಮೂಲಸ್ಥಾನಗಳು; ಮುಂದಿನ ಪೀಳಿಗೆಗಳಿಗಾಗಿ ನಾವು ರಕ್ಷಿಸಿಡಬೇಕಾದ ಅಪೂರ್ವ ಗ್ರಂಥಾಲಯಗಳು. ಪ್ರಗತಿಯ ಹೆಸರಿನಲ್ಲೋ ತಾತ್ಕಾಲಿಕ ಸ್ಥಳೀಯ ಲಾಭಗಳಿಗಾಗಿಯೋ ಈ ಕಾಡುಗಳನ್ನು ನಾಶಮಾಡುವುದೆಂದರೆ ಮತ್ತೆಲ್ಲಿಂದಲೂ ತಂದಿಡಲಾಗದ ಪ್ರಾಚೀನ ಗ್ರಂಥಾಲಯವನ್ನು ಸುಟ್ಟು ಬೂದಿಮಾಡಿದಂತೆಯೇ ಸರಿ.
ಮೇಲೆ ಹೇಳಿದ ವಾದದ ಅಂಶಗಳು ಎಷ್ಟೇ ಸತಾರ್ಕಿಕವಾಗಿದ್ದರೂ ಉಪಯೋಗಪರವೂ ಸ್ವಾರ್ಥಶೀಲವೂ ಮನುಷ್ಯನನ್ನೇ ಮುಖ್ಯವಾಗಿಟ್ಟುಕೊಂಡು ಮಂಡಿಸಿದ ವಿಚಾರಗಳೂ ಆಗಿವೆ. ಇದರ ಜೊತೆಗೆ ಹುಲಿಯನ್ನು ಸಂರಕ್ಷಿಸುವ ಪ್ರಯತ್ನಗಳಿಗೆ ಬಲವಾದ ನೈತಿಕ ಒತ್ತಾಯಗಳೂ ಇರಬೇಕಲ್ಲವೆ? ಹುಲಿಗಳೂ ಇನ್ನಿತರ ವನ್ಯಜೀವಿ ಪ್ರಭೇದಗಳೂ ಲಕ್ಷಾಂತರ ವರ್ಷಗಳ ಅವಧಿಯ ವಿಕಾಸದಿಂದ ಉತ್ಪನ್ನವಾದವುಗಳು. ಭೌಗೋಳಿಕ ಹವಾಮಾನ ಪರಿವರ್ತನೆ, ಖಂಡಾಂತರ ಚಲನೆ, ಹಿಮನದಿಗಳ ಹಿನ್ನಡೆ ಮುನ್ನಡೆಗಳು, ಜ್ವಾಲಾಮುಖಿಗಳ ಸಿಡಿತ ಮತ್ತಿತರ ಬೃಹತ್ತಾದ ಪ್ರಾಕೃತಿಕ ಶಕ್ತಿಗಳು ಈ ಭೂಮಿಯ ವಿಕಸನ ಪ್ರಸರಣಗಳಿಗೆ ಎಡೆಗೊಟ್ಟವು. ಈ ಏರಿಳಿತಗಳ ನಡುವೆಯೇ ಜೈವಿಕರೂಪಗಳು ಹುಟ್ಟಿ ಮರಣಿಸಿ ಹೊಸ ಜೀವಿಗಳಿಗೆ ದಾರಿಮಾಡಿಕೊಟ್ಟವು. ಇವತ್ತಿನ ಪರಿಸ್ಥಿತಿಯೇ ಬೇರೆ. ಮನುಷ್ಯ ಪ್ರಪಂಚದ ಇಡೀ ಭೂದೃಶ್ಯಪರವನ್ನೇ ರೂಪಾಂತರಗೊಳಿಸಿಬಿಟ್ಟಿದ್ದಾನೆ. ಕ್ರಿಮಿಕೀಟಗಳನ್ನು ಹೊರತುಪಡಿಸಿದಂತೆ ಜೀವವಿಕಾಸದ ಅದ್ಭುತ ಪ್ರಕ್ರಿಯೆಯನ್ನೇ ನಿಷ್ಕ್ರಿಯಗೊಳಿಸಿಬಿಟ್ಟಿದ್ದಾನೆ.
ಪ್ರಾಕೃತಿಕ ಆಯ್ಕೆಯ ಬೆರಗು ಹುಟ್ಟಿಸುವ ಪ್ರಕ್ರಿಯೆಯಿಂದ ಹುಲಿಯಂತಹ ಜೀವಪ್ರಭೇದದ ಸೃಷ್ಟಿ ಸಾಧ್ಯವಾಗಿದೆ. ಹೀಗಿರುವಾಗ, ಭೂಮಿಯ ಜೀವಚರಿತ್ರೆಯ ಕೊನೆಯ ಕ್ಷಣಗಳಲ್ಲಿ ಅವತರಿಸಿ ಬಂದ ಮಾನವ ಜೀವಿಗಳಿಗೆ ಮೂಲತಃ ಇತರ ಜೀವಪ್ರಭೇದಗಳನ್ನು ಈ ಭೂಮಿಯಿಂದಲೇ ಅಳಿಸಿಬಿಡುವ ಬಲಗಾರಿಕೆಯ ನೈತಿಕ ಹಕ್ಕು ಇದೆಯೇ? ಅಥವಾ, ಈ ಭೂಮಿಯ ಕೈಯಗಲದಷ್ಟು ಪ್ರದೇಶದೊಳಗೆ ಉಳಿದುಕೊಂಡಿರುವ ಇಂತಹ ಜೀವಿಗಳನ್ನು ಉಳಿಸುವ ಹೊಣೆಗಾರಿಕೆಯಿದೆಯೇ? ಎರಡನೇ ಪ್ರಶ್ನೆಗೆ ನಿಮ್ಮ ಉತ್ತರ ಹೌದು ಎಂದಾದಲ್ಲಿ, ಹುಲಿ ತನ್ನ ಕೊನೆಯ ನೆಲೆಯಲ್ಲಾದರೂ ಒಂದು ಜೀವ ಪ್ರಭೇದವಾಗಿ ಉಳಿದುಕೊಳ್ಳಬೇಕೆನ್ನುವ ಹಕ್ಕು, ಅದನ್ನು ನಿರ್ನಾಮ ಮಾಡಬೇಕೆನ್ನುವ ನಾಲ್ಕಾರು ಜನಗಳ ಹಕ್ಕಿಗಿಂತ ಮಿಗಿಲಾದುದು. ನಾವು ಚಿಂತಿಸಬಹುದಾದ ಯಾವುದೇ ನೀತಿನಿಯಮಗಳ ಅಥವಾ ಸಾಮಾಜಿಕವಾದ ಚೌಕಟ್ಟಿನೊಳಗೆ ಈ ಸಂರಕ್ಷಣಾವಾದಕ್ಕೆ ನೈತಿಕಸಮರ್ಥನೆ ಇದ್ದೇ ಇದೆ.
(ಕೆ. ಉಲ್ಲಾಸ ಕಾರಂತ)