ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹುಲಿಯೂರುದುರ್ಗ

ವಿಕಿಸೋರ್ಸ್ದಿಂದ

ಹುಲಿಯೂರುದುರ್ಗ

ಭಾರತದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆ ಕುಣಿಗಲು ತಾಲ್ಲೂಕಿನಲ್ಲಿ ಕುಣಿಗಲಿನ ದಕ್ಷಿಣಕ್ಕೆ 24 ಕಿಮೀ ದೂರದಲ್ಲಿರುವ ಗ್ರಾಮ; ಹೋಬಳಿ ಕೇಂದ್ರ. ಇದು 1873ರ ತನಕ ಇದೇ ಹೆಸರಿನ ತಾಲ್ಲೂಕು ಕೇಂದ್ರವಾಗಿತ್ತು.

ಮೊದಲು ಈ ಸ್ಥಳ ಅರಣ್ಯಪ್ರದೇಶದಿಂದ ಸುತ್ತುವರಿದಿದ್ದು ಹುಲಿಗಳು ಹೆಚ್ಚಾಗಿದ್ದುದರಿಂದ ಈ ಊರಿಗೆ ಹುಲಿಯೂರುದುರ್ಗ ಎಂಬ ಹೆಸರು ಬಂತೆಂದು ಪ್ರತೀತಿ. ಊರ ಸನಿಹದಲ್ಲಿ ಬೆಟ್ಟವಿದೆ. ಇದು ಸಮುದ್ರಮಟ್ಟದಿಂದ 844.6 ಮೀ (2,771 ಅಡಿ) ಎತ್ತರವಿದೆ. ಇದನ್ನೂ ಹುಲಿಯೂರುದುರ್ಗವೆಂದು ಕರೆಯಲಾಗುತ್ತದೆ. ಈ ಊರನ್ನೂ ಬೆಟ್ಟದ ಮೇಲಿರುವ ಕೋಟೆಯನ್ನೂ ಕಟ್ಟಿಸಿದವನು ಮಾಗಡಿ ಕೆಂಪೇಗೌಡ. ಕೋಟೆಯ ಒಳಗೆ ನೀರಿನ ಚಿಲುಮೆಗಳು, ಪಾಳು ಮನೆಗಳು, ಮದ್ದುಗುಂಡುಗಳ ಉಗ್ರಾಣ, ಕಣಜ ಮುಂತಾದ ಅವಶೇಷಗಳಿವೆ. ಬೆಟ್ಟದ ಹತ್ತಿರ ಗೋಪಾಲಕೃಷ್ಣ ದೇವಾಲಯವಿದೆ; ನವರಂಗದಲ್ಲಿ ಅಂದವಾಗಿ ಕೆತ್ತಿರುವ ಕಣಶಿಲೆಯ ಕಂಬಗಳಿವೆ. ಈ ಬೆಟ್ಟದ ಪಕ್ಕದಲ್ಲಿರುವ ಹೇಮಗಿರಿ ಬೆಟ್ಟ ಹುಲಿಯೂರುದುರ್ಗಕ್ಕಿಂತ ಉನ್ನತವಾಗಿದೆ. ಬೆಟ್ಟದ ಶಿಖರದಲ್ಲಿ ಮಲ್ಲಿಕಾರ್ಜುನ ದೇವಾಲಯವಿದೆ. ಪೂರ್ವದ ಇಳಿಜಾರು ಭಾಗದಲ್ಲಿ ವರದರಾಜನ ದೇವಾಲಯವಿದ್ದು, ಇಲ್ಲಿಯ ಪೂಜಾವಿಗ್ರಹವನ್ನು ಹೇಮಗಿರಿಯಪ್ಪ ಎಂದು ಕರೆಯಲಾಗುತ್ತದೆ. ಇದರ ದಕ್ಷಿಣದ ಇಳಿಜಾರು ಪ್ರದೇಶದಲ್ಲಿ ಭೈರವ ದೇವಾಲಯವಿದೆ. (ಕೆ.ಆರ್.ಆರ್.; ಎಸ್.ಜಿ.)