ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹೆಳವನಕಟ್ಟೆ ಗಿರಿಯಮ್ಮ

ವಿಕಿಸೋರ್ಸ್ದಿಂದ

ಹೆಳವನಕಟ್ಟೆ ಗಿರಿಯಮ್ಮ - ಸು. 1750. ಕನ್ನಡದ ಕವಯಿತ್ರಿ. ಧಾರವಾಡ ಜಿಲ್ಲೆಯ ರಾಣೆಬೆನ್ನೂರು ಈಕೆಯ ಜನಸ್ಥಳ. ತಂದೆ ಭಿಪ್ಟಪ್ಪ. ಮಲೆಬೆನ್ನೂರಿನ ಶಾನುಭೋಗ ಕೃಷ್ಣಪ್ಪನ ಮಗ ತಿಪ್ಪರಸ ಈಕೆಯ ಗಂಡ. ಈಕೆಯ ಜೀವನ ಚರಿತ್ರೆಯ ವಿಷಯವಾಗಿ ಅನೇಕ ಕಥೆಗಳು ಜನಜನಿತವಾಗಿವೆ. ಈಕೆ ಪವಾಡಗಳನ್ನು ಮಾಡಿದಂತೆಯೂ ಪ್ರತೀತಿಯಿದೆ. ಮಲೆಬೆನ್ನೂರಿನ ಸಮೀಪದಲ್ಲಿರುವ ಹೆಳವನಕಟ್ಟೆ ರಂಗನಾಥ ಸ್ವಾಮಿಯ ಭಕ್ತೆಯಾಗಿದ್ದ ಗಿರಿಯಮ್ಮ, ತನ್ನ ಕೃತಿಗಳನ್ನು ಆ ದೇವರ ಅಂಕಿತದ ಲ್ಲಿಯೇ ಬರೆದಿದ್ದಾಳೆ. ಇದರಿಂದಾಗಿ ಈಕೆ ಹೆಳವನಕಟ್ಟೆ ಗಿರಿಯಮ್ಮ ಎಂದೇ ಹೆಸರಾಗಿದ್ದಾಳೆ.

ಈಕೆ ಚಂದ್ರಹಾಸನ ಕಥೆ, ಸೀತಾಕಲ್ಯಾಣ, ಉದ್ದಾಳಿಕನ ಕಥೆ, ಗಜೇಂದ್ರಮೋಕ್ಷ, ಬ್ರಹ್ಮಕೊರವಂಜಿ, ಶಂಕರಗಂಡನ ಹಾಡು, ಕೃಷ್ಣಕೊರವಂಜಿ, ಲವಕುಶರ ಕಾಳಗ ಎಂಬ ಗ್ರಂಥಗಳನ್ನು ರಚಿಸಿದ್ದಾಳೆ. ಇವೇ ಅಲ್ಲದೆ 40ಕ್ಕೂ ಹೆಚ್ಚು ಕೀರ್ತನೆ ಅನೇಕ ಒಗಟುಗಳನ್ನೂ ಬರೆದಿರುವಂತೆ ತಿಳಿದುಬರುತ್ತದೆ. ಈಕೆಯ ಕೃತಿಗಳಲ್ಲಿ ಚಂದ್ರಹಾಸನ ಕಥೆ ಮುಖ್ಯವಾದದ್ದು. ಇದರಲ್ಲಿ 4 ಸಂಧಿಗಳೂ 455 ಪದ್ಯಗಳೂ ಇವೆ. ಈ ಕಥೆಗೆ ಮೂಲ ಜೈಮಿನಿಭಾರತದ ಚಂದ್ರಹಾಸೋಪಾಖ್ಯಾನ. ಜೈಮಿನಿಭಾರತದಲ್ಲಿ ಷಟ್ಪದಿಯಲ್ಲಿರುವ ಚಂದ್ರಹಾಸೋಪಾಖ್ಯಾನ ಇಲ್ಲಿ ಸಾಂಗತ್ಯ ಪಡೆದಿದೆ. ಚಂದ್ರಹಾಸನ ಕಥೆಯಲ್ಲಿ ಬರುವ ಚಂದ್ರಹಾಸನ ಬಾಲ್ಯಲೀಲೆಗಳನ್ನು ಸ್ತ್ರೀಸಹಜ ಹೃದಯದಿಂದ ಮನಮುಟ್ಟುವಂತೆ ವರ್ಣಿಸಿದ್ದಾಳೆ. ಈಕೆಯ ಉಳಿದ ಕೃತಿಗಳು ಸರಳವೂ ಸುಲಭವೂ ಆಗಿದ್ದು ಓದುಗರ ಮನಮುಟ್ಟುವಂತಿವೆ. ಸಮಕಾಲೀನ ಸಮಾಜದ ಆಚಾರವಿಚಾರ, ನಂಬಿಕೆಪದ್ಧತಿಗಳು ಈಕೆಯ ಕೃತಿಗಳಲ್ಲಿ ಸಂದರ್ಭೋಚಿ ತವಾಗಿ ನಿರೂಪಿತವಾಗಿವೆ. ಸಾಮಾಜಿಕ ಪ್ರಜ್ಞೆಯಿರುವ ಈಕೆ ಹರಿದಾಸ ಭಕ್ತಿಪಂಥದಲ್ಲಿ ಪ್ರಮುಖಳು.

ಯಾಕೆ ಮರುಳಾದೆ ಹೀಂಗೆ ಎಲೆ ಮನವೆ[ಸಂಪಾದಿಸಿ]

ಯಾಕೆ ಮರುಳಾದೆ ಹೀಂಗೆ ಎಲೆ ಮನವೆ
ಕಾಕು ಬುದ್ಧಿಯ ಬಿಡು ಬಿಡು ಸುಮ್ಮನೆ || ಪ ||
ಧನದಾಸೆಯನು ಮರಿ ಮನುಮಥನ
ಬಾಣಕಳುಕದಿರು ತೊಳಲದಿರು
ನೆಲದಾಸೆಗೆ ನೀನದರ
ಅನುವರಿತು ಹರಿಯ ಸ್ಮರಿಸು ಮನವೆ || 1 ||
ಅನ್ಯರಾಗುಣ ದೋಷಯೆಣಿಸದಲೆ
ನಿನ್ನಿರವ ನೋಡು ಕಂಡ್ಯಾ ಮನವೆ
ಬಂಣಗಾರಿಕೆಯ ಬರಿದೆ ಔದಂಬ್ರ
ಹಣ್ಣಿನಂತೀ ಕಾಯವು ಮನವೆ || 2 ||
ತಮ್ಮ ಬುದ್ಧಿ ತಲೆಗೆ ಸುತ್ತಿ ಸಂಸಾರ
ಭ್ರಮೆಗೊಂಡು ಬಳಲಾದಿರೋ
ಕಮಲಪತ್ರಕ್ಕೆ ಒಳಗಿನ ಜಲದಂತೆ
ನೆಲಕೆ ನಿರ್ಲೇಪನಾಗೋ ಮನವೆ || 3 ||
ಈ ದೇಹ ಸ್ಥಿರವಲ್ಲವೊ ಕಾಲನಾ
ಬಾಧೆಗೊಳಗಾಗದಿರೋ ಮನವೆ
ಭೇದ ದುರ್ಗುಣವ ತ್ಯಜಿಸು ನೀ
ಗೇರು ಬೀಜದಂದದಿ ತಿಳಿಯೆ ಮನವೆ || 4 ||
ಮಾಡು ಹರಿ ಸೇವೆಯನ್ನು ಮನದಣಿಯೆ
ಬೇಡು ಹರಿಭಕ್ತಿಯನ್ನು
ಕೊಡು ಹೆಳವನಕಟ್ಟೆಯ ವೆಂಕಟನ
ಬೇಡಿ ಮುಕ್ತಿಯನು ಪಡೆಯೊ ಮನವೆ || 5 ||


--ವ್ಯಕ್ತಿಯ ಉನ್ನತಿಗೆ ಅಥವಾ ಪತನಕ್ಕೆ ಮನಸ್ಸೇ ಕಾರಣ. ಚಂಚಲವಾದ ಮನಸ್ಸನ್ನು ನಿಯಂತ್ರಣದಲ್ಲಿಡುವುದು ಬಹಳ ಕಷ್ಟ. ಹೆಣ್ಣು, ಹೊನ್ನು, ಮಣ್ಣಿಗೆ ಮನುಷ್ಯನು ಬೇಗನೆ ವಶವಾಗುವನು. ನಶ್ವರದಲ್ಲೇ ನೆಲೆಸಲಿಚ್ಛಿಸುವ ಮನಸ್ಸನ್ನು ಬದಲಾಯಿಸಿ ಶಾಶ್ವತ ಸುಖ ಕೊಡುವ ಭಕ್ತಿಯಲ್ಲಿ ಸ್ಥಿರಗೊಳಿಸುವುದು ಅವಶ್ಯ.