ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹೈಡ್ರೊಕಾರ್ಬನ್ನುಗಳು

ವಿಕಿಸೋರ್ಸ್ದಿಂದ
Jump to navigation Jump to search

ಇವು ಆ್ಯಲಿಫ್ಯಾಟಿಕ್, ಆಲಿಸೈಕ್ಲಿಕ್ ಅಥವಾ ಆರೊಮ್ಯಾಟಿಕ್ ವರ್ಗಗಳಿಗೆ ಸೇರಿರಬಹುದು. ಆ್ಯಲಿಫ್ಯಾಟಿಕ್ ಅಥವಾ ಆಲಿಸೈಕ್ಲಿಕ್ ಸಂಯುಕ್ತಗಳಾಗಿರುವಾಗ ದ್ವಿಬಂಧ, ತ್ರಿಬಂಧಗಳನ್ನೊಡಗೊಂಡು ಅಪರ್ಯಾಪ್ತ (ಅನ್ಸ್ಯಾಚುರೇಟಡ್) ಸಂಯುಕ್ತಗಳಾಗಿರಬಹುದು. ಅಥವಾ ಏಕಬಂಧಗಳನ್ನು ಮಾತ್ರ ಒಳಗೊಂಡ ಪರ್ಯಾಪ್ತ ಸಂಯುಕ್ತಗಳಾಗಿರಬಹುದು. ಆರೊಮ್ಯಾಟಿಕ್ ಸಂಯುಕ್ತಗಳು ಒಂದು ವಿಶಿಷ್ಟ ರೀತಿಯ ಅಪರ್ಯಾಪ್ತ ಸಂಯುಕ್ತಗಳು. ಪರ್ಯಾಪ್ತ ಸಂಯುಕ್ತಗಳು ಆಲ್ಕೇನ್ ಅಥವಾ ಸೈಕ್ಲೋಆಲ್ಕೇನುಗಳೆನ್ನಿಸಿ ಕೊಳ್ಳುತ್ತವೆ. ದ್ವಿಬಂಧವುಳ್ಳವು (ಆರೊಮ್ಯಾಟಿಕ್ ಸಂಯುಕ್ತಗಳನ್ನು ಬಿಟ್ಟು) ಆಲ್ಕೇನುಗಳು ಅಥವಾ ಸೈಕ್ಲೋಆಲ್ಕೇನುಗಳು ಮತ್ತು ತ್ರಿಬಂಧವುಳ್ಳ ಸಂಯುಕ್ತಗಳು ಆಲ್ಕೈನುಗಳು.

ಎಲ್ಲ ಬಗೆಯ ಹೈಡ್ರೊಕಾರ್ಬನ್ಗಳೂ ಪ್ರಕೃತಿಯಲ್ಲಿ ಪೆಟ್ರೋಲಿಯಂ ಎಣ್ಣೆಯಲ್ಲಿ ದೊರೆಯುತ್ತವೆ. ಆರೋಮ್ಯಾಟಿಕ್ ಸಂಯುಕ್ತಗಳು ತಕ್ಕಮಟ್ಟಿನ ಪ್ರಮಾಣದಲ್ಲಿ ಕಲ್ಲಿದ್ದಲಿನಲ್ಲಿಯೂ ದೊರೆಯುತ್ತವೆ.

ಬಹು ದ್ವಿಬಂಧಗಳನ್ನುಳ್ಳ ಅನೇಕ ಸಂಯುಕ್ತಗಳು ಸ್ಕ್ವಾಲೀನ್, ಅಲ್ಲೀನ್, ಬ್ಯೂಟಡಯೀನ್, 2, 3 - ಡೈಮೀಥೈಲ್ ಬ್ಯೂಟಡಯೀನ್, ಐಸೋಪ್ರೀನ್, ಕ್ಲೋರೋಪ್ರೀನ್ ಮೊದಲಾದವು-ಇಂಗಾಲಸಂಯುಕ್ತ ರಸಾಯನಶಾಸ್ತ್ರದಲ್ಲಿ ಹಲವು ಪ್ರಮುಖ ಸಂಯುಕ್ತಗಳು.

ತ್ರ್ರಿಬಂಧವುಳ್ಳ ಆ್ಯಲಿಫ್ಯಾಟಿಕ್ ಸಂಯುಕ್ತಗಳು ಅಸಿಟಲೀನ್ ಅಥವಾ ಆಲ್ಕೈನ್ಗಳು. ಪ್ರಕೃತಿಯಲ್ಲ್ಲಿ ಅಲ್ಲಲ್ಲಿ ತ್ರಿಬಂಧಪೂರಿತ ಸಂಯುಕ್ತಗಳು ದೊರೆಯುವುವಾದರೂ ಅವು ಬಲು ವಿರಳ. ಸಾಮಾನ್ಯವಾಗಿ ಇವನ್ನು ಕೃತಕವಾಗಿ ಸಂಯೋಜಿಸಲಾಗುತ್ತದೆ. ಅತಿ ಸರಳ ಆಲ್ಕೈನ್ ಗುಂಪಿನ ಹೈಡ್ರೊಕಾರ್ಬನ್ ಆದ ಅಸಿಟಲೀನನ್ನು ಕ್ಯಾಲ್ಸಿಯಂ ಕಾರ್ಬೈಡ್ ಮತ್ತು ನೀರಿನ ವರ್ತನೆಯಿಂದ ಪಡೆಯಬಹುದು. ದ್ವಿಬಂಧ ಸಂಯುಕ್ತಗಳಿಂದ ತ್ರಿಬಂಧ ಸಂಯುಕ್ತಗಳನ್ನು ತಯಾರಿಸಬಹುದು. ತ್ರಿಬಂಧ ಸಂಯುಕ್ತಗಳು ದ್ವಿಬಂಧ ಸಂಯುಕ್ತಗಳಿಗಿಂತಲೂ ಬಲು ಅಸ್ಥಿರ ಅಥವಾ ಪಟು. ಆಲ್ಕೀನುಗಳಂತೆಯೇ ಆಲ್ಕೈನುಗಳೂ ಸಂಕಲನ ಕ್ರಿಯೆಗಳಲ್ಲಿ ಭಾಗವಹಿಸಬಲ್ಲವು. ತ್ರಿಬಂಧ ಇಂಗಾಲಕ್ಕೆ ಸೇರಿದ ಹೈಡ್ರೊಜನ್ ಪರಮಾಣು ಬಲು ಪಟು. ಇದನ್ನು ಸುಲಭವಾಗಿ ಸೋಡಿಯಂನಂಥ ಪಟು ಲೋಹಗಳ ಪರಮಾಣುಗಳಿಂದ ಪಲ್ಲಟಿಸಬಹುದು. ಹಾಗೆ ದೊರೆತ ಅಸಿಟಲೈಡುಗಳೆಂಬ ಆರ್ಗ್ಯನೋಲೋಹ ಸಂಯುಕ್ತಗಳು ಆನೇಕ ರಾಸಾಯನಿಕ ಸಂಯೋಜನೆಗಳಲ್ಲಿ ಬಲು ಉಪಯುಕ್ತ ಮಧ್ಯವರ್ತಿಗಳು.