ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/16ನೆಯ ಶತಮಾನಗಳ ಕಾವ್ಯ

ವಿಕಿಸೋರ್ಸ್ ಇಂದ
Jump to navigation Jump to search

ಎಲಿಜಬೆತ್ ಯುಗದ ನಾಟಕ ಪ್ರಪಂಚಕ್ಕೆ ಷೇಕ್ಸ್ಪಿಯರ್ ಇರುವಂತೆ ಆ ಯುಗದ ಕಾವ್ಯಲೋಕಕ್ಕೆ ಎಡ್ಮಂಡ್ ಸ್ಪೆನ್ಸರ್. ಕವಿಗಳ ಕವಿ ಎಂದು ಕೀರ್ತಿಶಾಲಿಯಾಗಿರುವ ಸ್ಪೆನ್ಸರ್ ತನ್ನ ಕಾಲದ ರಾಜಕೀಯ ಮತ್ತು ಧಾರ್ಮಿಕ ಘಟನೆಗಳನ್ನು ರೂಪಕವಾಗಿ ಫೇರಿ ಕ್ವೀನ್ ಎಂಬ ತನ್ನ ಸುದೀರ್ಘವಾದ ಕಾವ್ಯದಲ್ಲಿ ಚಿತ್ರಿಸಿದ್ದಾನೆ. ಮಧ್ಯಯುಗದ ಆದರ್ಶವೀರರ ಕಥೆಗಳ ಮಾದರಿಯ ಮೇಲೆ ರಚಿತವಾಗಿರುವ ಈ ಕಾವ್ಯ ಶ್ರೀಮಂತ ಯುವಕರಿಗೆ ಒಳ್ಳೆಯ ನಡತೆಯ ಶಿಕ್ಷಣವೀಯುವ ಉದ್ದೇಶವುಳ್ಳದ್ದೆಂದು ಸ್ಪೆನ್ಸರನೇ ಹೇಳಿದ್ದಾನೆ. ಅದ್ಭುತ ಘಟನೆಗಳು ನೀತಿಬೋಧಕವಾದ ಸಾಂಕೇತಿಕ ಪ್ರಸಂಗಗಳು, ಸಮಕಾಲೀನ ಘಟನೆಗಳ ಮತ್ತು ವ್ಯಕ್ತಿಗಳ ಪರೋಕ್ಷ ಚಿತ್ರಗಳು ಸುಂದರ ವರ್ಣನೆಗಳು ಸುಮಧುರ ಛಂದೋವಿಲಾಸ ಮುಂತಾದ ಅನೇಕ ಗುಣಗಳಿಂದ ಶೋಭಿಸುವ ಈ ಕಾವ್ಯ ಇಂಗ್ಲಿಷ್ ಕಾವ್ಯಗಳಿಗೆ ಗುರುವಿನಂತಿದೆ. ದಿ ಷೆಪಡ್ರ್ಸ್ ಕ್ಯಾಲೆಂಡರ್ ಎಂಬ ಗೊಲ್ಲಗೀತೆಗಳ ವರ್ಗಕ್ಕೆ ಸೇರಿದ ಕವನವನ್ನೂ ಇನ್ನೂ ಆನೇಕ ಸಣ್ಣಪುಟ್ಟ ಕವನಗಳನ್ನೂ ಸ್ಪೆನ್ಸರ್ ರಚಿಸಿದ್ದಾನೆ. ಏನೇ ಬರೆಯಲಿ ಅವನ ವರ್ಣನಾವ್ಯೆಖರಿ ಮತ್ತು ನಾದಮಧುರತೆ ಎಲ್ಲೆಲ್ಲೂ ಎದ್ದು ಕಾಣುತ್ತವೆ. ನುರಿತ ಚಿತ್ರಕಾರನಂತೆ ಪದಗಳ ಪ್ರಯೋಗದಿಂದ ಚೆಲುವಿನ ಕೃತಿಗಳನ್ನು ಈತ ಸೃಷ್ಟಿಸಿದ್ದಾನೆ. ಅವನ ಫೇರಿ ಕ್ವೀನ್ ಕವನದ ಛಂದಸ್ಸು ಅನೇಕ ಇಂಗ್ಲಿಷ್ ಕವಿಗಳಿಗೆ ಅಭಿವ್ಯಕ್ತಿ ಮಾಧ್ಯಮವನ್ನೊದಗಿಸಿದೆ. ಇಂಗ್ಲಿಷ್ ಸಾನೆಟ್ಟುಗಳ ಚರಿತ್ರೆಯಲ್ಲೂ ಸ್ಪೆನ್ಸರನಿಗೆ ಹಿರಿಯ ಸ್ಥಾನವಿದೆ. ಅವನ ಸಮಕಾಲೀನನಾಗಿದ್ದ ಸರ್ ಫಿಲಿಪ್ ಸಿಡ್ನಿಯೂ ಪ್ರಸಿದ್ಧ ಸಾನೆಟ್ಟುಗಳನ್ನಲ್ಲದೆ ಇತರ ಬಗೆಯ ಭಾವಗೀತೆಗಳನ್ನೂ ಆರ್ಕೇಡಿಯ ಎಂಬ ರಮ್ಯಕಥೆಯನ್ನೂ ಅಪಾಲಜಿ ಫಾರ್ ಪೊಯಸಿ ಎಂಬ ಕಾವ್ಯಸಮರ್ಥನಾತ್ಮಕವಾದ ಪ್ರಬಂಧವನ್ನೂ ಬರೆದಿದ್ದಾನೆ. ಲಾಡ್ಜ್, ನ್ಯಾಷ್, ಮಾರ್ಲೊ ಇವರೆಲ್ಲರೂ ಹಲಕೆಲವು ಒಳ್ಳೆಯ ಭಾವಗೀತೆಗಳನ್ನು ರಚಿಸಿದ್ದಾರೆ.