ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/20ನೆಯ ಶತಮಾನ - ಆಧುನಿಕ ವಿಮರ್ಶೆ
ಆಧುನಿಕ ಸಾಹಿತ್ಯ ವಿಮರ್ಶೆ : -ಅತ್ಯಂತ ಸಂಕೀರ್ಣವಾದ ಆಧುನಿಕ ಯುಗದಲ್ಲಿ ಒಟ್ಟಾರೆ ಜೀವನವೇ ಅವ್ಯವಸ್ಥೆಗೊಳಗಾಗಿ, ಹಳೆಯ ಮೌಲ್ಯಗಳು ನಶಿಸಿ, ಸಾಹಿತ್ಯ, ಸಂಸ್ಕೃತಿಗಳು ವಿಷಮ ಸನ್ನಿವೇಶಗಳನ್ನು ಎದುರಿಸುತ್ತಿವೆ. ಆದ್ದರಿಂದ ಸಾಹಿತಿ, ವಿಮರ್ಶಕ ಇಬ್ಬರೂ ಅನುಭವ ಹಾಗೂ ಅಭಿವ್ಯಕ್ತಿಯ ಉದ್ದಗಲಗಳನ್ನು ಹಿಗ್ಗಿಸಿಕೊಂಡು ಬೌದ್ಧಿಕಮಟ್ಟವನ್ನು ಹೆಚ್ಚಿಸಿಕೊಳ್ಳಲು ಅನಿವಾರ್ಯವಾಗಿದೆ. ಹೊಸ ಪ್ರಯೋಗಗಳು, ಪ್ರಕಾರಗಳು ರೂಪ ತಾಳುತ್ತಿರುವ ಈ ಕಾಲದಲ್ಲಿ ನಿಶ್ಚಿತವಾದ ಸಂವೇದನೆ ಬೆಳೆಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಮೂಲಭೂತ ಸಮಸ್ಯೆಗಳಿಗೆ ಹೊಸ ಪರಿಹಾರ, ಸಮಾಧಾನಗಳನ್ನು ಕುರಿತು ಶೋಧಿಸುವುದು ವಿಮರ್ಶಕನ ಕರ್ತವ್ಯವಾಗುತ್ತದೆ. ಸಾರ್ವಕಾಲಿಕವಾದ ಮೌಲ್ಯಗಳನ್ನು ರಕ್ಷಿಸುವ ದೃಷ್ಟಿಯಿಂದ ವಿಮರ್ಶೆಗೆ ಕೈ ಹಚ್ಚಿದವರಲ್ಲಿ ಟಿ.ಎಸ್.ಎಲಿಯಟ್, ಐ.ಎ. ರಿಚಡ್ರ್ಸ್ ಮೊದಲಾದವರು ಈ ಯುಗದ ಮಾನವೀಯತೆಯ ಪ್ರತಿನಿಧಿಗಳು. ಮುಖ್ಯವಾಗಿ ಇವರು ರೊಮ್ಯಾಂಟಿಕ್ ತತ್ತ್ವದ ದೋಷಗಳನ್ನು ಎತ್ತಿ ತೋರಿಸಿ, ಬುದ್ಧಿಜೀವಿ ಮಾನವ ಅರ್ಥಪೂರ್ಣ ಜೀವನದ ಮೌಲ್ಯಗಳನ್ನು ಸಾರ್ಥಕಗೊಳಿಸಿಕೊಳ್ಳಬಲ್ಲ ಎಂದು ನಂಬಿದವರು. ಈ ಯುಗದ ಚಿಂತನೆಯ ಮೇಲೆ ಅತ್ಯಂತ ಗಾಢ ವರ್ಚಸ್ಸು ಬೀರಿದ ಫ್ರಾಯ್ಡ್ನ ಮನಶ್ಶಾಸ್ತ್ರತತ್ತ್ವಗಳನ್ನು ಹಲವು ವಿಮರ್ಶಕರು ಮನಗಂಡಿದ್ದಾರೆ. ಸಾಹಿತ್ಯದ ಕೃತಿಗಳನ್ನು ಅರ್ಥೈಸಲು ಇವರು ಮನಶ್ಶಾಸ್ತ್ರದ ತಂತ್ರಪರಿಕರಗಳನ್ನು ಬಳಸುವ ಪ್ರಯತ್ನ ಮಾಡಿದ್ದಾರೆ. ಇವರಲ್ಲಿ ರಾಬರ್ಟ್ ಗ್ರೇವ್ಸ್, ಹರ್ಬರ್ಟ್ ರೀಡ್, ಐ.ಎ. ರಿಚಡ್ರ್ಸ್, ವಿಲಿಯಮ್ ಎಂಪ್ಸನ್ ಮೊದಲಾದವರಿದ್ದಾರೆ. ಇವರ ಗ್ರಂಥಗಳಲ್ಲಿ ಹಳೆಯ ಕವಿಗಳು, ಕೃತಿಗಳನ್ನು ಹೊಸ ಅರಿವಿನ ಬೆಳಕಿನಲ್ಲಿ ಕಾಣುವ ಪ್ರಯತ್ನವೂ ಸೇರಿದೆ. ಆರ್ಕಿಟೈಪಲ್ ಪಂಥ ಇದರ ಒಂದು ಮುಖ.
ಸಮಾಜಶಾಸ್ತ್ರದ ತತ್ತ್ವಗಳನ್ನು ಅನುಸರಿಸಿ ಸಾಹಿತ್ಯಕೃತಿಗಳನ್ನು ಅನುಸರಿಸಿ ಅವಲೋಕಿ ಸುವ ಪ್ರಯತ್ನವೂ ನಡೆದಿದೆ. ಮಾಕ್ರ್ಸ್, ಎಂಗೆಲ್ಸ್ ಮೊದಲಾದವರ ತಾರ್ಕಿಕ ತತ್ತ್ವಗಳ ಹಿನ್ನೆಲೆಯಲ್ಲಿ ವಿಮರ್ಶೆಯನ್ನು ಬೆಳೆಸಿದವರಲ್ಲಿ ಮುಖ್ಯರಾದವರೆಂದರೆ ಸ್ಪ್ಲೆಂಡರ್, ಡೇ ಲೂಇಸ್, ಕಾಲ್ಡ್ ವೆಲ್. ಮಾಕ್ರ್ಸ್ವಾದದ ಪ್ರಭಾವ ಕುಗ್ಗಿದಮೇಲೂ ಸಮಾಜಶಾಸ್ತ್ರದ ತತ್ತ್ವದ ಪಾತಳಿಯ ಮೇಲೆ ರಚಿತವಾದ ವಿಮರ್ಶೆಯನ್ನು ಎಲ್.ಸಿ.ನೈಟ್, ವಿಲಿಯಮ್ಸ್ ಮೊದಲಾದವರು ಮುಂದುವರಿಸಿದರು.
ಸೃಜನ ಸಾಹಿತ್ಯವು ಬೆಳೆದಂತೆ ಸಾಹಿತ್ಯ ಮೀಮಾಂಸೆ ವಿಮರ್ಶೆಗಳೂ ಬೆಳೆವಣಿಗೆ ಗೊಂಡು 20ನೆಯ ಶತಮಾನದ ಸಾಹಿತ್ಯ ಮೀಮಾಂಸೆ, ವಿಮರ್ಶೆಗಳೂ ಬೆಳೆದವು. ಮಾಕಿರ್್ಸಸ್್ಟ ವಿಮರ್ಶೆಯೂ ವಿಮರ್ಶಕರ ಗಮನವನ್ನು ಸೆಳೆಯಿತು.
1908ರಲ್ಲಿ ಅರ್ಥರ್ ಸೀಮನ್ಸನ ದಿ ಸಿಂಬಲಿಸ್ಟ್ ಮೂವ್ಮೆಂಟ್ ಇನ್ ಲಿಟರೇಚರ್ ಪ್ರಕಟವಾಯಿತು. ಸಂಕೇತದ ಸಾಧ್ಯತೆಯತ್ತ ಯೇಟ್ಸ್ ಮತ್ತು ಎಲಿಯಟ್ರ ಗಮನವನ್ನು ಸೆಳೆದ ಕೃತಿ ಇದು. 19ನೆಯ ಶತಮಾನದ ಕಡೆಯ ಭಾಗ ಮತ್ತು 20ನೆಯ ಶತಮಾನದ ಪ್ರಾರಂಭದ ದಶಕಗಳಲ್ಲಿ ಎ.ಸಿ. ಬ್ರ್ಯಾಡ್ಲೆ, ಡಬ್ಲ್ಯು.ಪಿ.ಕೆರ್, ಎಚ್.ಗ್ರಿಯರ್ಸನ್ ಮೊದಲಾದ ಪ್ರಾಧ್ಯಾಪಕರು ವಿಮರ್ಶೆಯ ಕ್ಷೇತ್ರವನ್ನು ಪ್ರಥಮಬಾರಿಗೆ ಪ್ರವೇಶಿಸಿದರು. ಬ್ರ್ಯಾಡ್ಲೆಯ ಉಪನ್ಯಾಸಗಳ ಪ್ರಸಿದ್ಧ ಸಂಗ್ರಹ, ಷೇಕ್ಸ್ಪಿಯರ್ನ ಟ್ರಾಜಿಡಿ 1904ರಲ್ಲಿ ಪ್ರಕಟವಾಯಿತು. ವಿಶ್ವವಿದ್ಯಾಲಯಗಳಲ್ಲಿ ಸಾಹಿತ್ಯದ ಗಂಭೀರ ಅಧ್ಯಯನ ಪ್ರಾರಂಭವಾದ ಕಾಲ ಇದು. ಈ ಕಾಲದಿಂದ ಸಾಹಿತ್ಯ ವಿಮರ್ಶೆಯಲ್ಲಿ ಕಾಲೇಜು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರುಗಳ ಪಾತ್ರ ಪ್ರಮುಖವಾಯಿತು.
ಸೃಜನಶೀಲ ಬರಹಗಾರರೂ ಈ ಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ವಿಮರ್ಶೆ ಬರೆಯಲು ಪ್ರಾರಂಭಿಸಿದರು. ಇವರು ಹೆನ್ರಿ ಜೇಮ್ಸ್ನ ಪ್ರಮುಖ ಕಾದಂಬರಿಯನ್ನು ಕುರಿತು ಬರೆಯುತ್ತ, ಸಾಹಿತ್ಯಕೃತಿಯ ಸಾವಯವ ಸ್ವರೂಪವನ್ನು ಒತ್ತಿ ಹೇಳಿದರು. ಮುಂದೆ ಇದು ತತ್ತ್ವ ವಿಮರ್ಶೆಯ ಮುಖ್ಯ ತತ್ತ್ವ್ವಗಳಲ್ಲಿ ಒಂದಾಯಿತು.
20ನೆಯ ಶತಮಾನದ ಪೂರ್ವಾರ್ಧದಲ್ಲಿ ಟಿ.ಎಸ್. ಎಲಿಯಟ್ ಮತ್ತು ಐ.ಎ. ರಿಚಡ್ರ್ಸ್ ಇವರ ಹೆಸರು ಬಹು ಪ್ರಸಿದ್ಧವಾಗಿದ್ದಿತ್ತು. ಇವರು ತತ್ತ್ವ ವಿಮರ್ಶೆಯ ಉದ್ಘಾಟಕರು. ಎಲಿಯಟ್- ಟ್ರೆಡಿಷನ್ ಅಂಡ್ ಇಂಡಿವಿಜ್ಯುಯಲ್ ಟ್ಯಾಲೆಂಟ್ (1919) ಸಾಹಿತ್ಯ ವಿಮರ್ಶೆಯಲ್ಲಿ ಹೆಗ್ಗುರುತಾಯಿತು. ಆದರೆ ಅವನು ಈ ಲೇಖನದಲ್ಲಿ ವ್ಯಕ್ತಪಡಿಸಿದ ಹಲವು ಅಭಿಪ್ರಾಯಗಳ್ನು ಮುಂದೆ ಸ್ವಲ್ಪಮಟ್ಟಿಗೆ ಬದಲಾಯಿಸಿದ ಎನ್ನುವುದನ್ನು ಗಮನಿಸಬೇಕು.
ತತ್ತ್ವ ವಿಮರ್ಶೆಯ ಬಹು ದೊಡ್ಡ ಸಾಧನೆ ಎಂದರೆ ಕೃತಿಯ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದು, ಕೃತಿಕಾರನ ವ್ಯಕ್ತಿತ್ವ ಮತ್ತು ಜೀವನಗಳಿಗೆ ದೊರೆಯುತ್ತಿದ್ದ ಪ್ರಾಧಾನ್ಯವನ್ನು ನಿರಾಕರಿಸಿ ಕೃತಿಯನ್ನು ಅಲ್ಲಿ ವ್ಯಾಖ್ಯಾನಕ್ಕೆ ಆಧಾರವನ್ನಾಗಿ ಮಾಡಿದ್ದು. ಇದನ್ನನುಸರಿಸಿ ಎಕ್ಸ್ಪ್ಲಿಕೇಷನ್ (ಕೃತಿಯ ಸೂಕ್ಷ್ಮವಾದ ವಿವರವಾದ ಅಧ್ಯಯನ) ವಿಧಾನವು ಮುಖ್ಯವಾಯಿತು. ಕೃತಿಯ ಸಾವಯವ ಸ್ವರೂಪಕ್ಕೆ ಪ್ರಾಧಾನ್ಯ ದೊರೆತು, ಸಾಹಿತ್ಯ ಕೃಷಿಯ ಬೇರೆಬೇರೆ ಅಂತರ್ಗತ ಅಂಶಗಳನ್ನು (ಘಟನೆ, ಕಥಾವಸ್ತು, ಪಾತ್ರ, ಶೈಲಿ, ಪ್ರತಿಮೆಗಳು ಇತ್ಯಾದಿ) ಪ್ರತ್ಯೇಕ ಪ್ರತ್ಯೇಕವಾಗಿ ಪರಾಮರ್ಶಿಸುವ ಬದಲು ಇಡೀ ಕೃತಿ ನೀಡುವ ಅನುಭವ, ಈ ಅನುಭವದ ಸಂವಹನದ ವಿಧಾನ ಇವುಗಳಿಗೆ ಪ್ರಾಧಾನ್ಯ ದೊರೆಯಿತು. ಕೃತಿಯ ರೂಪದ (ಫಾರಂ) ಗ್ರಹಿಕೆ ಮುಖ್ಯವಾಯಿತು. ವಿಲ್ಸನ್, ನೈಟ್, ವಿಲಿಯಂ ಎಂಮ್ಸನ್, ಎಫ್.ಆರ್.ಲೀವಿಸ್ ಮೊದಲಾದವರು ಈ ಪಂಥದ ಪ್ರಮುಖ ವಿಮರ್ಶಕರು. ಜಾನ್ ಮಿಡ್ಲ್ಟನ್ ಮರಿ, ಡಿ.ಎಚ್.ಲಾರೆನ್ಸ್ ಮೊದಲಾದವರನ್ನು ನವ ರೊಮ್ಯಾಂಟಿಕ್ ಗುಂಪಿನವರು ಎಂದು ಗುರುತಿಸುತ್ತಾರೆ. ಮಿಡ್ಲ್ಟನ್ಮರಿ ಶ್ರೇಷ್ಠ ಕಾವ್ಯವೆಲ್ಲ ತರ್ಕವನ್ನು ಮೀರಿದ ಸತ್ಯದ ಅನಾವರಣ ಎಂಬ ಕಲ್ಪನೆಯನ್ನು ಸ್ವೀಕರಿಸಿದ. ಕಲೆಗಾಗಿ ಕಲೆ ಎಂಬುದೇ ತನ್ನ ಭಾವನೆ ಎಂದು ಹೇಳಿದ ಎಕಿನ್ಸ್ (ಎಂದರೆ ಬದುಕಿಗೂ ಕಲೆಗೂ ಸಂಬಂಧವಿಲ್ಲ ಎಂದು, ಕಾದಂಬರಿಯು, ಒಂದು ಜೀವಂತ ಕ್ಷಣದಲ್ಲಿ ಮನುಷ್ಯನಿಗೂ ವಿಶ್ವಕ್ಕೂ ಇರುವ ಸಂಬಂಧದ ನಿರೂಪಣೆ ಎಂದ) ಕಲಾವಿದನನ್ನು ನಂಬಬೇಡ, ಕಥೆಯನ್ನು ನಂಬು ಎನ್ನುವ ಪ್ರಸಿದ್ಧ ಉಕ್ತಿಯನ್ನು ನೀಡಿದವನು ಇವನು.
ಮಿತ್ ಕ್ರಿಟಿಸಿಸಂ ಈ ಶತಮಾನದ ವಿಶಿಷ್ಟ ಕೊಡುಗೆ. ಆರ್ಕಿಟೈಪ್ಸ್ ಗಳನ್ನು ಗುರುತಿಸುವ ಪ್ರಯತ್ನವೂ ಈ ಕಾಲದಲ್ಲಿ ನಡೆಯಿತು. ಫ್ರಾಯ್ಡ್, ಯೂಂಗನ ಮನಶ್ಶಾಸ್ತ್ರದ ಆವಿಷ್ಕರಣಗಳು ಈ ಪ್ರಯತ್ನಕ್ಕೆ ಪ್ರೇರಿತ. ಅಧಾರ ಮಾಡ್ ಬಾಡ್ಕಿನ್, ನಾರ್ಥ್ರಾಫ್ ಫ್ರೈ, ಲೆಸ್ಲಿ ಫೀಲ್ಡರ್, ಕ್ಲಾಡ್ ಲೆವಿಸ್ಟ್ರಾಸ್ ಮೊದಲಾದವರು ಈ ಪಂಥವನ್ನು ಬೆಳೆಸಿದ್ದಾರೆ. ಈ ವಿಮರ್ಶಕರು ಮತ್ತು ಡಿ.ಡಬ್ಲ್ಯು. ಹಾರ್ಡಿಂಗ್, ಲೈಯೊನೆಟ್ ಟ್ರಿಲಿಂಗ್, ನಾರ್ಮನ್ ಬ್ರೌನ್ ಮೊದಲಾದವರು ಮನೋವಿಜ್ಞಾನ ವಿಮರ್ಶೆಯನ್ನು ಬೆಳೆಸಿದರು. ಮಾಕಿರ್ಸ್ಸ್ಟ್ ಪಂಥ ಇಂಗ್ಲೆಂಡಿನಲ್ಲಿ ವಿಶೇಷವಾಗಿ ಬೆಳೆಯಲಿಲ್ಲ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಈ ಪಂಥದ ಪ್ರಭಾವವಿರುವ ಸಾಂಸ್ಕೃತಿಕ ವಿಶ್ಲೇಷಣೆ ಗರಿಗೆದರಿದೆ. ಸಂಸ್ಕೃತಿಯ ಭಾಗವಾಗಿ ಸಾಹಿತ್ಯದ ಅಧ್ಯಯನ ಬೆಳೆಯುತ್ತ ಬಂದಿದೆ. ಕಳೆದ ಅರ್ಧ ಶತಮಾನದಲ್ಲಿ ಭಾಷಾವಿಜ್ಞಾನದ ಅಧ್ಯಯನವೂ ಸಾಹಿತ್ಯ ವಿಮರ್ಶೆಯ ಮೇಲೆ ಪ್ರಭಾವ ಬೀರಿದೆ. ಎಂ.ಎ.ಕೆ.ಹ್ಯಾಲಿಡೆ ಅಂಥವರು ಭಾಷಾವಿಜ್ಞಾನವನ್ನು ಸಾಹಿತ್ಯ ವಿಮರ್ಶೆಗೆ ಬಳಸಿಕೊಂಡೇ, ಸ್ಟ್ರಕ್ಚರಲಿಸಂ ಒಂದು ಮುಖ್ಯ ಬೆಳೆವಣಿಗೆ. ಅನಂತರ, ಇತ್ತೀಚೆಗೆ (2004) ತೀರಿಕೊಂಡ ಜೆಲಿಸ್ ಡೆವೀಡ್, ಡಿಕನ್ಸ್ಟ್ರನ್ ಪಂಥವನ್ನು ಪ್ರಾರಂಭಿಸಿದ. ಇದುವರೆಗೆ ಕೃತಿಯ ಪಠ್ಯ (ಟೆಕ್ಟ್ಸ)ವನ್ನು ವಿಶ್ಲೇಷಿಸುವುದು ಸಾಹಿತ್ಯ ವಿಮರ್ಶೆಯ ವಿಧಾನವಾಗಿತ್ತು. ಈಗ ದಿ ಸ್ಟೆಬಿಲಿಟಿ ಆಫ್ ದಿ ಟೆಕ್ಟ್ಸ (ಪಠ್ಯ ಒಂದೇ ಸಮನೆ ಉಳಿಯುವುದು) ಪ್ರಶ್ನೆಯಾಗಿದೆ ಸ್ಟ್ಯಾನ್ಲಿಫಿಷ್ ಎನ್ನುವ ವಿಮರ್ಶಕನ ಒಂದು ಪುಸ್ತಕದ ಹೆಸರೇ, ‘ಈಸ್ ದೇರ್ ಎ ಟೆಕ್ಟ್ಸ ಇನ್ ದಿಸ್ ಕ್ಲಾಸ್?’
ಇಂಗ್ಲಿಷ್ ಸಾಹಿತ್ಯ ವಿಮರ್ಶೆಯು ಮೊದಲಿನಿಂದ ಇತರ ಭಾಷೆಗಳ ಸಾಹಿತ್ಯ ವಿಮರ್ಶೆಯ ಪ್ರಭಾವಕ್ಕೆ ಒಳಗಾಗಿದೆ. ಪ್ರಾಚೀನ ಗ್ರೀಸ್, ಫ್ರಾನ್ಸ್, ಜರ್ಮನಿ, ರಷ್ಯ ಮುಂತಾದ ದೇಶಗಳ ಸಾಹಿತ್ಯ ವಿಮರ್ಶೆಗಳೂ ಪ್ರಭಾವ ಬೀರಿವೆ. ಆದರೆ ಕಳೆದ ಅರ್ಧ ಶತಮಾನದಲ್ಲಿ ಅಮೆರಿಕ, ಇಂಗ್ಲೆಂಡ್ಗಳ ಸಾಹಿತ್ಯ ವಿಮರ್ಶೆಗಳು ಹೆಣೆದುಕೊಂಡಿವೆ. ಅಲ್ಲದೆ ಡೆರಿಡನಂಥ ಇಂಗ್ಲಿಷೇತರರ ಪ್ರಭಾವವೂ ಗಮನಾರ್ಹವಾಗಿದೆ. ಅಮೆರಿಕ ಮತ್ತು ಯುರೋಪಿನ ಸಾಹಿತ್ಯ ವಿಮರ್ಶೆಗಳ ಪರಿಚಯವಿಲ್ಲದೆ ಇಂಗ್ಲಿಷ್ ಸಾಹಿತ್ಯ ವಿಮರ್ಶೆಯನ್ನು ಅಧ್ಯಯನ ಮಾಡುವುದು ಸಾಧ್ಯವಿಲ್ಲ.