ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ ಅಂಗಾರಕ

ವಿಕಿಸೋರ್ಸ್ ಇಂದ
Jump to navigation Jump to search

ಅಂಗಾರಕ[ಸಂಪಾದಿಸಿ]

ದೂರಾನುಸಾರ ಸೂರ್ಯನಿಂದ ನಾಲ್ಕನೆಯ ಗ್ರಹ (ಮಾರ್ಸ್). ಮೂರನೆಯದು ಭೂಮಿ. ಮಂಗಳ, ಕುಜ ಎಂಬುವು ಪರ್ಯಾಯ ನಾಮಗಳು. ಸೂರ್ಯನಿಂದ ಇದರ ದೂರ ಸರಾಸರಿ 227.9 ಮಿಲಿಯನ್ ಕಿಮೀ. 15 ಅಥವಾ 17 ವರ್ಷಗಳಿಗೊಮ್ಮೆ (1939, 1956, 1971, ಇತ್ಯಾದಿ) ಇದು ಭೂಮಿಗೆ ಅತ್ಯಂತ ಸಮೀಪದಲ್ಲಿ, ಎಂದರೆ 55,706,000 ಕಿಮೀ ದೂರದಲ್ಲಿ ಬರುತ್ತದೆ. ವ್ಯಾಸ 6810 ಕಿಮೀ. ಎಂದರೆ ಭೂಮಿಯ ಅರ್ಧಕ್ಕಿಂತ ಸ್ವಲ್ಪ ಹೆಚ್ಚು. ಅಂಗಾರಕದ ವರ್ಷದಲ್ಲಿ 687 ದಿವಸಗಳಿದ್ದು, ಅಂಗಾರಕದ ದಿವಸದ ಅವಧಿ ಭೂಮಿಯದಕ್ಕಿಂತ ತುಸು ಹೆಚ್ಚು. ಕಕ್ಷಾ ತಳಕ್ಕೆ ಅಕ್ಷದ ಬಾಗು 24º. ಭೂಕಕ್ಷ ಬಾಗುವೂ ಸು. 23º-28º. ಗುರುತ್ವಾಕರ್ಷಣಬಲ ಭೂಮಿಯದರ 0.38ರಷ್ಟು ಮಾತ್ರವಿದೆ. ಗ್ರಹವನ್ನು ಸುತ್ತುವರಿದು ತೆಳು ವಾಯುಮಂಡಲವಿದೆ. ಆದರೆ ಭೂಮಿಯ ವಾಯುಮಂಡಲದ ಶೇ.5 ರಷ್ಟು ಮಾತ್ರ. ಆಕ್ಸಿಜನ್ ಅತ್ಯಲ್ಪವಿದೆ. ನೀರಿನ ಹಬೆ ಇಲ್ಲವೆಂದೇ ಹೇಳಬಹುದು. ಆದರೆ ಮೇರುಪ್ರದೇಶದ ಶಿಖರಗಳು ಹಿಮದಿಂದ ಹಿಮಾವೃತವಾಗಿರುವಂತೆ ಕಾಣುತ್ತವೆ. ಶುಕ್ರ ಮೇಘಾವೃತವಾಗಿದೆ. ಕುಜನಿಗೆ ಇಂಥ ಮಸುಕೇನೂ ಇಲ್ಲ. ಚಂದ್ರನಲ್ಲಿರುವಂಥ ಪರ್ವತಗಳಿಲ್ಲ. ತೆಳುಗೆರೆಗಳ ಬಲೆಗಳಿಂದ ಕೂಡಿದ ಕಪ್ಪಾದ ಗುರುತುಗಳು ಚಳಿಗಾಲದಲ್ಲಿ ಕಣ್ಮರೆಯಾಗಿ ವಸಂತಋತುವಿನಲ್ಲೂ ಬೇಸಗೆಯಲ್ಲೂ ಮತ್ತೆ ಕಾಣಿಸಿಕೊಳ್ಳುತ್ತವೆ. ಇವು ಸಸ್ಯರಾಶಿಗಳಿಂದ ಆವೃತವಾದ ನೀರಾವರಿ ಕಾಲುವೆಗಳಿರಬಹುದೆಂಬ ಭಾವನೆಯನ್ನುಂಟುಮಾಡುತ್ತವೆ. ಇವನ್ನು ಇಟಲಿ ದೇಶದ ಖಗೋಳವಿಜ್ಞಾನಿ ಷಿಯಾಪರೆಲ್ಲಿ (1835-1910) 1877ರಲ್ಲಿ ಮೊದಲು ಗುರುತಿಸಿದ. ಅಮೆರಿಕದ ವಿಜ್ಞಾನಿ ಪರ್ಸಿವಲ್ ಲೊವೆಲ್ (1855-1916) ಈ ಗುರುತುಗಳನ್ನು ವಿಶೇಷವಾಗಿ ಅಭ್ಯಸಿಸಿ ಗ್ರಹದ ಮೇಲೆ ಬುದ್ಧಿಶಾಲಿ ಜನರಿರುವರೆಂಬ ಊಹೆಯನ್ನು ಮುಂದಿಟ್ಟ. ಇದು ನಿಜವಲ್ಲ ಎಂದು ತರುವಾಯದ ಕುಜ ಪರೀಕ್ಷಣೆಗಳಿಂದ ತಿಳಿದುಬಂದಿದೆ.

ಗ್ರಹದ ಬಣ್ಣ ಕೆಂಪು ಎಂದೇ ಇದಕ್ಕೆ ಗ್ರೀಕರ ಯುದ್ಧದೇವತೆಯಾದ ಮಾರ್ಸ್ನ ಹೆಸರು ಬಂದಿದೆ.ಡೀಮೋಸ್ ಮತ್ತು ಫೋಬೋಸ್ ಎಂಬ ಎರಡು ಉಪಗ್ರಹಗಳಿವೆ. ಇವು ಯುದ್ಧದೇವತೆಯ ಸೇವಕರ ನಾಮಗಳು. ಡೀಮೋಸ್ನ ವ್ಯಾಸ ಕೇವಲ 16 ಕಿಮೀ. ಇದು ಅಂಗಾರಕದ ಸುತ್ತ 30 ಗಂ. 18 ಮಿ.ಗಳಲ್ಲಿ ಒಂದು ಪ್ರದಕ್ಷಿಣೆ ಮುಗಿಸುತ್ತದೆ. ಫೋಬೋಸ್ನ ವ್ಯಾಸ 58 ಕಿಮೀ. ಪರಿಭ್ರಮಣಕಾಲ ಕೇವಲ 7 ಗಂ 39 ಮಿ. ಇದು ಅಂಗಾರಕದ ದಿವಸಕ್ಕಿಂತ ಕಡಿಮೆಯಾಗಿರುವುದರಿಂದ ಫೋಬೋಸ್ ಪಶ್ಚಿಮದಲ್ಲಿ ಮೂಡಿ ಪುರ್ವದಲ್ಲಿ ಕಂತುವಂತೆ ಕಂಡುಬರುತ್ತದೆ. ಇದೊಂದು ಏಕೈಕ ವಿರಳ ವಿದ್ಯಮಾನ. ಈ ಉಪಗ್ರಹವನ್ನು ಅಮೆರಿಕದ ಖಗೋಳವಿಜ್ಞಾನಿ ಅಸಫ್ ಹಾಲ್ (1829-1907) 1877ರಲ್ಲಿ ಆವಿಷ್ಕರಿಸಿದ.

ಈಚೆಗೆ ಆಕಾಶನೌಕೆಗಳು ಅಂಗಾರಕಗ್ರಹದ ಸಮೀಪ ಹಾದುಹೋಗಿ ಅಲ್ಲಿಯ ದೃಶ್ಯವನ್ನು ಭೂಮಿಗೆ ಪ್ರಸರಿಸಿವೆ. 1964ರಲ್ಲಿ ಮ್ಯಾರಿನರ್- 4 ಎಂಬ ಅಮೆರಿಕದ ನೌಕೆ 8ತಿಂಗಳ ಕಾಲ 5393500000 ಕಿಮೀ ದೂರ ಪ್ರಯಾಣ ಮಾಡಿ ಮಂಗಳವನ್ನು 5,700 ಕಿಮೀ ದೂರದಿಂದ ಸಂದರ್ಶಿಸಿದೆ. ಆಗ ಭೂಮಿ ಅಂಗಾರಕಗಳ ನಡುವಿನ ಅಂತರ 2150960000 ಕಿಮೀ. ಈ ಯಾನದಿಂದ ತಿಳಿದುಬಂದಿರುವ ಕೆಲವು ವಿವರಗಳು ಹೀಗಿವೆ- ಅಂಗಾರಕಗ್ರಹಕ್ಕೆ ಭೂಮಿಗಿರುವಂಥ ಪ್ರಬ¯ಕಾಂತ ಕ್ಷೇತ್ರವಾಗಲಿ ವಾನ್ ಅಲನ್ ರೇಡಿಯೇಷನ್ ಪಟ್ಟಿಯಾಗಲಿ ಇರುವುದಿಲ್ಲ. ವಾತಾವರಣ ಭೂಮಿಯದಕ್ಕಿಂತ ಅಧಿಕ ಸಾಂದ್ರ. ದಟ್ಟ ದೂಳಿನಿಂದ ಕೂಡಿದೆ. ಗ್ರಹದ ತಳದ ಬಲು ಭಾಗ ಬಹುತೇಕ ಮರುಭೂಮಿ. ನೀರಿನ ಅಂಶ ಅತ್ಯಲ್ಪ. 4-126 ಕಿಮಿ.ಗಳಷ್ಟು ಅಗಲ ಬಾಯಿಗಳಿರುವ ಮಹಾಕೂಪಗಳು ಅಲ್ಲಿವೆ. ಅಂಗಾರಕ ಬಲುಮಟ್ಟಿಗೆ ಚಂದ್ರನನ್ನು ಹೋಲುವುದು.

ಅಂಟಾರ್ಟಿಕದಲ್ಲಿ ದೊರಕಿದ ALH84001 ಎಂಬ ಉಲ್ಕಾಶಿಲೆ ಅಂಗಾರಕದಿಂದ ಬಂದಿದ್ದು ಅದರಲ್ಲಿ ಸೂಕ್ಷ್ಮಜೀವಿಗಳನ್ನು ಹೋಲುವ ಪಳೆಯುಳಿಕೆ ದೊರಕಿದೆ. ಅಂಗಾರಕದ ಮೇಲೆ 3.5 ಬಿಲಿಯನ್ ವರ್ಷಗಳ ಹಿಂದೆ ಇಂಥ ಜೀವಿಗಳಿದ್ದಿರಬಹುದು ಎಂಬ ಕಲ್ಪನೆ ವಿಜ್ಞಾನಿಗಳಿಗೆ ಹೊಸ ಉತ್ಸಾಹವನ್ನು ಮೂಡಿಸಿದೆ.

ಈಚಿನ ದಿನಗಳಲ್ಲಿ ಬಾಹ್ಯಾಕಾಶ ಯಾನದಲ್ಲಿ ಅಂಗಾರಕ ಮುಖ್ಯ ಗುರಿಯಾಗಿದೆ. 1990ರಿಂದೀಚೆಗೆ ಅನೇಕ ನೌಕೆಗಳು ಹಾರಿವೆ. ಮಾರ್ಸ್ ಆರ್ಬಿಟರ್ ಎಂಬುದು ಅಂಗಾರಕವನ್ನು ಸುತ್ತುತ್ತಿದೆ. ಮಾರ್ಸ್ ಪಾತ್ ಫೈಂಡರ್ ಎಂಬ ನೌಕೆ ಸೋಜರ್ನರ್ ಎಂಬ ಪುಟ್ಟ ಗಾಡಿಯನ್ನು (1997) ಅಂಗಾರಕದ ಮೇಲೆ ಓಡಾಡಿಸಿತು. ಈಚೆಗೆ ಸ್ಪಿರಿಟ್ ಮತ್ತು ಆಪರ್ಚುನಿಟಿ ಎಂಬೆರಡು ನೌಕೆಗಳೂ ಅಂಗಾರಕದ ಮೇಲೆ ಚಲಿಸುತ್ತ ಉತ್ತಮ ಮಾಹಿತಿಯನ್ನು ಒದಗಿಸಿವೆ. (ಆರ್.ಆರ್.ಯು.)

ತಪೋಬಲದಿಂದ ಅಂಗಾರಕ ನವಗ್ರಹಗಳಲ್ಲಿ ಒಬ್ಬನಾದ. ಇವನ ಜನನಕ್ಕೆ ವಿಷ್ಣು ಮತ್ತು ಭೂದೇವಿ ಕಾರಣರೆಂದು ಬ್ರಹ್ಮವೈವಸ್ವತಪುರಾಣವೂ ವಿಷ್ಣುವಿನ ಬೆವರಿನಿಂದ ಬಂದನೆಂದು ಪದ್ಮಪುರಾಣವೂ ಶಿವನ ಬೆವರಿನಿಂದ ಹುಟ್ಟಿದ ಭೂದೇವಿಯ ಸಾಕುಮಗನೆಂದು ಶಿವ ಮತ್ತು ಮತ್ಸ್ಯಪುರಾಣಗಳೂ ತಿಳಿಸುತ್ತವೆ.

[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]

ಭಾರತೀಯ ಜೋತಿಷ್ಯ ಶಾಸ್ತ್ರದಲ್ಲಿ ಅಂಗಾರಕನನ್ನು ಭ್ರಾತೃಕಾರಕನೆಂದು ಕರೆಯಲಾಗಿದೆ. ಯಾರ ಜನ್ಮ ಜಾತಕದಲ್ಲಿ ಅಂಗಾರಕ ಪ್ರಬಲನಾಗಿರುತ್ತಾನೋ ಅಂಥವರು ರಜೋಗುಣವನ್ನು ಅಧಿಕವಾಗಿ ಹೊಂದಿರುವವರು. ದರ್ಪಾನ್ವಿತರೂ ಕೋಪಿಷ್ಟರೂ ಆಗಿರುತ್ತಾರೆ. ಮೇಷ ವೃಶ್ಚಿಕ ರಾಶಿಗಳೇ ಅಂಗಾರಕ ಸ್ವಕ್ಷೇತ್ರಗಳಾಗಿದ್ದು ಮೇಷವೇ ಇವನ ತ್ರಿಕೋಣ ರಾಶಿಯಾಗಿರುತ್ತದೆ.