ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ ತುಗ್ರ್ಯೇನ್ಯೆಫ್, ಐವಾನ್ ಸ್ಯಿರ್ಗ್ಯೇಯೆವ್ಯಿಚ್
ತುಗ್ರ್ಯೇನ್ಯೆಫ್, ಐವಾನ್ ಸ್ಯಿರ್‍ಗ್ಯೇಯೆವ್ಯಿಚ್ 1818-83 ಹೆಸರಾಂತ ರಷ್ಯನ್ ಕಾದಂಬರಿಕಾರ, ನಾಟಕಕಾರ, ಹಾಗೂ ಸಣ್ಣ ಕತೆಗಾರ. ರಷ್ಯನ್ ಸಾಹಿತ್ಯದ ಕಡೆಗೆ ಪಶ್ಚಿಮ ಯುರೋಪಿನ ಜನರ ಗಮನವನ್ನು ಸೆಳೆದ ರಷ್ಯನ್ ಸಾಹಿತಿಗಳಲ್ಲಿ ಮೊದಲಿಗ.
ಹುಟ್ಟಿದ್ದು ಆರಲ್‍ನಲ್ಲಿ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ. ತಾಯಿ ಸ್ವಭಾವತಃ ಕ್ರೂರಿ. ವಿಶ್ವಾಸವಿದ್ದರೂ ಮಗನನ್ನು ಅತ್ಯಂತ ಕಠಿಣವಾದ ರೀತಿಯಲ್ಲಿ ಬೆಳೆಸಿದಳು ; ತನ್ನ ತಾಯಿಯ ಕ್ರೂರವರ್ತನೆ, ದರ್ಪ, ನಿರಂಕುಶ ಪ್ರವೃತ್ತಿಗಳೇ ಈತ ಸಮಾಜವನ್ನು ಬಹಳವಾಗಿ ದ್ವೇಷಿಸಲು ಕಾರಣವಿರಬೇಕು.
ಮನೆಯಲ್ಲಿನ ವಿದ್ಯಾಭ್ಯಾಸ ಮುಗಿಸಿದ ಈತ ಮಾಸ್ಕೊ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷ ಕಾಲ ಇದ್ದು ಅನಂತರ ಸೇಂಟ್ ಪೀಟರ್ಸ್‍ಬರ್ಗ್ ವಿಶ್ವವಿದ್ಯಾಲಯ ಸೇರಿ ಪದವೀಧರನಾಗಿ (1838) ಅನಂತರ ಬರ್ಲಿನ್ ನಗರಕ್ಕೆ ತೆರಳಿ ಅಲ್ಲಿ ತತ್ತ್ವಶಾಸ್ತ್ರವನ್ನು ಅಭ್ಯಾಸ ಮಾಡಿದ. ಪಶ್ಚಿಮ ಯುರೋಪಿನ ಸಂಸ್ಕøತಿ ಮತ್ತು ರಾಜಕೀಯ ಸಂಸ್ಥೆಗಳಿಂದ ಪ್ರಭಾವಿತನಾಗಿ ಪಾಶ್ಚಾತ್ಯ ಸಂಸ್ಕøತಿಯ ಆರಾಧಕನಾದ.
ರಷ್ಯಕ್ಕೆ ಹಿಂತಿರುಗಿ (1841) ಗೃಹಸಚಿವಶಾಖೆ ಒಂದರಲ್ಲಿ ಎರಡು ವರ್ಷ ಕೆಲಸ ಮಾಡಿ ಕೆಲಸಕ್ಕೆ ರಾಜೀನಾಮೆಯಿತ್ತು ಪೂರ್ಣವಾಗಿ ಸಾಹಿತ್ಯರಚನೆಯಲ್ಲಿ ತೊಡಗಿದ. ಈತನ ಮೊದಲ ಕವನ ಪರಾಶಾ ಅದೇ ವರ್ಷ ಪ್ರಕಟವಾಯಿತು. ಮೊದಲಲ್ಲಿ ಈತನ ಒಲವು ಕಾವ್ಯದ ಕಡೆಗಿದ್ದಿತಾದರೂ ಕ್ರಮೇಣ ಅದು ತನ್ನ ಜಾಯಮಾನಕ್ಕೆ ಒಗ್ಗತಕ್ಕದಲ್ಲವೆಂದು ಭಾವಿಸಿ ಈತ ಗದ್ಯದಲ್ಲಿ ಬರೆಯಲು ತೊಡಗಿದ. 1852ರಲ್ಲಿ ಈತನ ಪ್ರಥಮ ಕಥಾಸಂಕಲನ ಷಿಕಾರಿಯ ಚಿತ್ರಗಳು ಪ್ರಕಟಗೊಂಡಿತು. ಈ ಕೃತಿ ಈತನಿಗೆ ರಷ್ಯನ್ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನವನ್ನುಗಳಿಸಿಕೊಟ್ಟಿತು. ರಷ್ಯದ ಜೀತವ್ಯವಸ್ಥೆಯನ್ನು ಕಟುವಾಗಿ ಟೀಕಿಸಿ ಎತ್ತಿ ತೋರಿಸಿ ಇಲ್ಲಿನ ಕ್ರಾಂತಿಕಾರಕ ಚಿತ್ರಗಳು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದವು. ರಷ್ಯದ ಚಕ್ರವರ್ತಿ ಎರಡನೆಯ ಅಲೆಕ್ಸಾಂಡರ್‍ನ ಮೇಲೆ ಈ ಕೃತಿ ಅತ್ಯಂತ ಪರಿಣಾಮಕಾರಿ ಪ್ರಭಾವ ಬೀರಿ ಜೀತದಾಳು ವ್ಯವಸ್ಥೆಯನ್ನು ತೊಡೆದು ಹಾಕುವಂತೆ ಪ್ರೇರೇಪಿಸಿತು. ಇತಿಹಾಸವನ್ನು ಬದಲಿಸಲು ಸಾಹಿತ್ಯ ಹೇಗೆ ಸಹಾಯಕವಾಗಬಹುದು ಎಂಬುದನ್ನು ತೋರಿಸಲು ಈ ಪುಸ್ತಕ ಉತ್ತಮ ನಿದರ್ಶನವಾಗಿದೆ. ಇಷ್ಟಾದರೂ ರಷ್ಯದ ಅಧಿಕಾರವರ್ಗ ಈತನಿಗೆ ಅಷ್ಟಾಗಿ ಮನ್ನಣೆ ಕೊಡಲಿಲ್ಲ. 1852ರಲ್ಲಿ ಹೆಸರಾಂತ ಸಾಹಿತಿ ಗಾಗಲ್‍ನಿಗೆ ಶ್ರದ್ದಾಂಜಲಿಯನ್ನು ಸಲ್ಲಿಸಲು ಈತ ಪ್ರಕಟಿಸಿದ ಲೇಖನ ಈತನನ್ನು ಸರ್ಕಾರದ ಕ್ರೋಧಕ್ಕೀಡುಮಾಡಿದ್ದುದಲ್ಲದೆ 18 ತಿಂಗಳುಗಳ ಕಾಲ ಕಾರಾಗೃಹ ವಾಸಕ್ಕೆ ಗುರಿ ಮಾಡಿತು.
1850ರಿಂದ 1860ರ ಅವಧಿಯಲ್ಲಿ ಈತನ ಪ್ರಮುಖ ಕೃತಿಗಳಾದ ರೂಡಿನ್, ಎ ನೆಸ್ಟ್ ಆಫ್ ಜಂಟಲ್‍ಫೋಕ್, ಆನ್ ದಿ ಈವ್, ಮುಂತಾದ ಕೃತಿಗಳು ಪ್ರಕಟವಾದವು. ಇವುಗಳಲ್ಲಿ ಕಂಡುಬರುವ ಉದಾರ ಮನೋಭಾವ ಮತ್ತು ರಷ್ಯದ ಜನಜೀವನದಲ್ಲಿ ಪರಿಹರಿಸಲಾಗದಿದ್ದ ಘರ್ಷಣೆಗಳ ಯಥಾವತ್ತಾದ ಚಿತ್ರಣ ಈತನ ಖ್ಯಾತಿಯನ್ನು ಹೆಚ್ಚಿಸಿದವು. ಈ ಎಲ್ಲ ಕಾದಂಬರಿಗಳ ನಾಯಕರೂ ಉದಾರ ಮನೋಭಾವವುಳ್ಳವರು; ಸಾಮಾಜಿಕ ಮತ್ತು ನೈತಿಕ ಸಮಸ್ಯೆಗಳ ಅರಿವುಳ್ಳವರು. ಆದರೆ ಇವರು ತಮ್ಮ ಭಾವನೆಗಳನ್ನು ಕಾರ್ಯರೂಪಕ್ಕೆ ತರುಲು ಅಶಕ್ತರಾದರು. ಇಂಥ ಜನರನ್ನು ಗುರುತಿಸಲು ರಷ್ಯನ್ ಸಾಹಿತಿಗಳು ಅನಾವಶ್ಯಕ ಮನುಷ್ಯ ಎಂಬ ಪದವನ್ನು ಉಪಯೋಗಿಸುತ್ತಿದ್ದರು. ಈ ಸಂಪ್ರದಾಯವನ್ನು ಮೊದಲು ಮಾಡಿದವ ಪುಷ್ಕಿನ್. ತುಗ್ರ್ಯೇನ್ಯೆಫ್ ಇದನ್ನು ಮುಂದುವರಿಸಿದ.
ಫಾದರ್ಸ್ ಅಂಡ್ ಸನ್ಸ್ (1861) ಈತನ ಅತ್ಯಂತ ಉತ್ತಮ ಕಾದಂಬರಿ. ಇದರ ನಾಯಕ ಬಜರೋವ್. ತೀವ್ರವಾದಿಗಳಂತೆ ಸಂಪ್ರದಾಯ ಮತ್ತು ಅರಸೊತ್ತಿಗೆಗಳ ವಿರೋಧಿ, ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದವ, ಸಮಾಜದ ಓರೆಕೋರೆಗಳನ್ನು ತಿದ್ದಲು ವೈe್ಞÁನಿಕ ಮಾರ್ಗದಿಂದ ಮಾತ್ರ ಸಾಧ್ಯವೆಂದು ನಂಬಿದವ. ತೀರ ಬಿಚ್ಚುಮನಸ್ಸಿನ ಒರಟು ಸ್ವಭಾವದ. ಧೈರ್ಯಶಾಲಿ ಯುವಕ. ಆದರೆ ಯಾವ ಸಂಪ್ರದಾಯವನ್ನು ತುಚ್ಚವಾಗಿ ಕಾಣುತ್ತಿದ್ದನೋ ಅದೇ ಸಂಪ್ರದಾಯಕ್ಕೆ ಈತ ಶರಣು ಹೋಗಬೇಕಾಯಿತು. ಬಜರೋವ್ ಒಡಿನ್‍ಕ್ಸೋವ ಎಂಬ ಶ್ರೀಮಂತ ತರುಣಿಯ ಪ್ರೇಮಪಾಶಕ್ಕೆ ಸಿಕ್ಕಿ ಕ್ರಾಂತಿಕಾರಿ ತತ್ತ್ವಗಳ ಬಗ್ಗೆ ತನ್ನಲ್ಲಿದ್ದ ನಂಬಿಕೆಗಳನ್ನು ಸಡಿಲಗೊಳಿಸುತ್ತಾನೆ. ಆತ್ಮವಿಶ್ವಾಸವನ್ನೂ ರಷ್ಯದ ಜನತೆಯಲ್ಲಿ ತನಗಿದ್ದ ನಂಬಿಕೆಯನ್ನೂ ಕಳೆದುಕೊಂಡು ಜೀವನದಲ್ಲಿ ಜುಗುಪ್ಸೆ ಹೊಂದಿ ಪ್ರಾಣ ಬಿಡುತ್ತಾನೆ. ರಷ್ಯದ ಯುವಕರು ಕ್ರಾಂತಿಯುಂಟುಮಾಡಲು ಹಂಬಲಿಸುತ್ತಿದ್ದರೂ ರಷ್ಯದ ಅಂದಿನ ವಾತವರಣ ಕ್ರಾಂತಿಗೆ ಹೇಗೆ ಅನುವಾಗಿಲ್ಲವೆಂದು ತೋರಿಸಲು ಬಾಜರೋವಿನ ಪಾತ್ರವನ್ನು ತುಗ್ರ್ಯೇನ್ಯೆಫ್ ಸೃಷ್ಟಿಸಿದಂತಿದೆ. ಯೌವನದ ಕಾವಿನಲ್ಲಿ ಆದರ್ಶಗಳು ಹೇಗೆ ಹಿಂದಕ್ಕೆ ಸರಿಯುತ್ತವೆ ಎಂಬ ಕಟುಸತ್ಯವನ್ನು ಇಲ್ಲಿ ಕಾಣಬಹುದು. ಇದು ಆ ಕಾಲದ ರಷ್ಯನ್ ತೀವ್ರವಾದಿಗಳನ್ನು ಕೆರಳಿಸಿತು. ಅವರು ತುಗ್ರ್ಯೆನೈಫ್‍ನ ಜೀವನದರ್ಶನವನ್ನು, ಸೂಕ್ಷ್ಮವಿಡಂಬನೆಯನ್ನು ಅರ್ಥಮಾಡಿಕೊಳ್ಳಲಾರದೆ ಈತನನ್ನು ಪ್ರತಿಗಾಮಿ ಎಂದು ಕರೆದರು. ತನ್ನ ಕಾದಂಬರಿ ಎಬ್ಬಿಸಿದ ಕೋಲಾಹಲ ಸೂಕ್ಷ್ಮಸ್ವಭಾವದ ಈತನ ಮೇಲೆ ವಿಶೇಷ ಪರಿಣಾಮವನ್ನುಂಟುಮಾಡಿತು. ಸ್ಮೋಕ್ (1867) ಎಂಬ ಈತನ ಆತ್ಮಕಥಾರೂಪದ ಕಾದಂಬರಿಯಲ್ಲಿ ಕಂಡುಬರುವಂತೆ ಈತನು ತನ್ನ ಸಾಹಿತ್ಯ ರಚನೆಯನ್ನೇ ನಿಲ್ಲಿಸಿಬಿಡಬೇಕೆಂಬ ನಿರ್ಧಾರಕ್ಕೂ ಬಂದಿದ್ದ. ಕೆಲವು ಕಾಲ ತಾಯ್ನಾಡನ್ನು ತ್ಯಜಿಸಿ ವಿದೇಶಯಾತ್ರೆಯನ್ನು ಕೈಕೊಂಡ. ಮತ್ತೆ ಮತ್ತೆ ರಷ್ಯಕ್ಕೆ ಹಿಂತಿರುಗುತ್ತಿದ್ದರೂ ಅಲ್ಲಿ ಹೆಚ್ಚು ದಿನ ನಿಲ್ಲುತ್ತಿರಲಿಲ್ಲ. ಸ್ಮೋಕ್ ಕಾದಂಬರಿಯಲ್ಲಿ ರಷ್ಯದ ಅಂದಿನ ಜೀವನದ ಬಗೆಗೆ ತನ್ನಲ್ಲಿದ್ದ ಜುಗುಪ್ಸೆಯನ್ನು ಈತ ವಿವರವಾಗಿ ತೋಡಿಕೊಂಡಿದ್ದಾರೆ. ರಷ್ಯದ ಜನಜೀವನದಲ್ಲಿ ತನ್ನಂಥವರು ಅನವಶ್ಯಕ ಎಂಬ ಭಾವನೆ ಈತನನ್ನು ಮಾನಸಿಕಯಾತನೆಗೆ ಎಡೆ ಮಾಡಿತು. ಕ್ರಮೇಣ ಬೆನ್ನೆಲುಬಿನ ಕ್ಯಾನ್ಸರ್ ಕಾಯಿಲೆಯಿಂದ ಬಳಲಿದ ಈತ 1883ರಲ್ಲಿ ಪ್ಯಾರಿಸ್ಸಿನ ಬಳಿ ಸೀನ್ ನದಿಯ ದಡದಲ್ಲಿನ ಬಾಗಿನಾಲ್ ಹಳ್ಳಿಯಲ್ಲಿ ತನ್ನ ಕೊನೆಯುಸಿರನ್ನೆಳೆದ.
ಈತ ನಿಜಕ್ಕೂ ಪ್ರತಿಭಾವಂತ ಸಣ್ಣ ಕತೆಗಾರ. ಫಸ್ಟ್ ಲವ್ (1870) ; ಎಲಿಯರ್ ಆಫ್ ದಿ ಸ್ಟೆಪ್ಸ್ (1870); ಟಾರೆಂಟ್ಸ್ ಆಫ್ ಸ್ಪ್ರಿಂಗ್ (1871); ಕ್ಲಾರಮಿಲಿಚ್ (1881) - ಇವು ಈತನ ಅತ್ಯುತ್ತಮ ಸಣ್ಣ ಕತೆಗಳು. ಈತ ಜೀವನದ ನಿಷ್ಕøಷ್ಟತೆ, ಸ್ಪಷ್ಟತೆ. ರಮ್ಯತೆಗಳ ವಾಸ್ತವ ಚಿತ್ರಣವನ್ನು ಚಿತ್ರಿಸುವಲ್ಲಿ ಹೆಸರಾದವ. ಈತನ ಬಹುತೇಕ ಪುಸ್ತಕಗಳು ಇಂಗ್ಲಿಷ್ ಭಾಷೆಗೆ ಅನುವಾದವಾಗಿವೆ.
ಸಾಹಿತ್ಯರಂಗದಲ್ಲಿ ಎಷ್ಟೇ ಬದಲಾವಣೆಗಳಾಗಿದ್ದರೂ ಇಂದಿಗೂ ಈತ ರಷ್ಯದ ಮತ್ತು ಯುರೋಪಿನ ಸಾಹಿತ್ಯ ಕ್ಷಿತಿಜದ ಪ್ರಮುಖ ಸಾಹಿತಿ ಎನಿಸಿದ್ದಾನೆ. (ಜಿ.ಎಚ್.ಆರ್.; ಎಸ್.ಎಸ್.)
ತುಗ್ರ್ಯೆನೈಫ್ ಜೀವದಾಳುಗಳು ಮತ್ತು ಭೂಮಾಲಿಕರು - ಈ ಎರಡು ವರ್ಗಗಳನ್ನೇ ಚಿತ್ರಿಸಿದ. ಜಮೀನ್ದಾರರದು ನಾಶವಾಗುವ ವರ್ಗ ಎಂದು ಚಿತ್ರಿಸಿದ. ನಿರರ್ಥಕ ವೃತ್ತಿಗಳು (ಇವರು ಹುಟ್ಟದೆ ಹೋಗಿದ್ದರೆ ಏನೂ ನಷ್ಟವಾಗುತ್ತಿರಲಿಲ್ಲ ಎನ್ನುವಂಥ ಜನರು) ಹಲವರನ್ನು ಕುತೂಹಲಕರವಾಗಿ ಚಿತ್ರಿಸಿದ. `ಫಾದರ್ಸ್ ಆಂಡ್ ಸನ್ಸ್ ಕಾದಂಬರಿಯ ಬಜರೋವ್‍ನ ಪಾತ್ರದಲ್ಲಿ `ನಿಹಿಲಿಸ್ಟ್ ಅನ್ನು ಸೃಷ್ಟಿಸಿದ. ನಿಹಿಲಿಸಂ ಎನ್ನುವ ಪದವನ್ನು ಅವನೇ ಸೃಷ್ಟಿಸಿದ. ಎಲ್ಲ ಪದ್ಧತಿಗಳನ್ನೂ ಸಂಸ್ಥೆಗಳಲ್ಲಿ ತಿರಸ್ಕರಿಸಿ, ಪರಿಣಾಮ ಏನೇ ಆಗಲಿ, ಅವನ್ನೆಲ್ಲ ನಾಶಮಾಡಿಬಿಡಬೇಕೆಂಬ ಪಂಥ ನಿಹಿಲಿಸಂ ತುಗ್ರ್ಯೆನೈಫ್‍ನ ಕಾದಂಬರಿಯಿಂದ ಜನರು ಈ ಪಂಥದ ವಿಷಯವಾಗಿ ---- ಈ ಪಾತ್ರದ ಸೃಷ್ಟಿಯಿಂದಾಗಿ ಕಾದಂಬರಿಕಾರ ಹಲವರು ಉಗ್ರವಾದಿಗಳ ಕೋಪಕ್ಕೆ ಗುರಿಯಾದ. (ಎಲ್.ಎಸ್.ಎಸ್.)