ವಿಷಯಕ್ಕೆ ಹೋಗು

ಮೋಹನದಾಸರು

ವಿಕಿಸೋರ್ಸ್ದಿಂದ

ಉಗಾಭೋಗ (೧)

ಉಡುಪಿಯ ಕೃಷ್ಣನೆ ಸಡಗರ ನಿನಗ್ಯಾಕೆ ಬಡವನಾದವನ ಭವ ಮಡುವಿನೊಳಗೆ ನೂಕಿ ಮಿಡುಕಿಸಿಕೊಂಬುವದು ಥರವೇನು ಹರಿಯೇ ಒಡಲಿಗೋಸುಗ ನಿನ್ನ ಬೇಡ ಬಂದವನಲ್ಲ ದೃಢ ಭಕ್ತಿ ಜ್ಞಾನಕೊಟ್ಟು ರಕ್ಷಿಸು ಹರಿಯೇ ಕಡಲ ಶಯನ ನಮ್ಮ ಮೋಹನ್ನ ವಿಠಲ ಅಡದು ದಧಿಯ ದಾಟಿಸಿ ಕಡೆಗಾಣಿಸು ಸುಲಭದಿಂದ ||


ಉಗಾಭೋಗ (೨)

ಮಧ್ವರಾಯರ ಭಾಗ್ಯ ಎಂಥದೋ ವರ್ಣಿಸಲು ಶುದ್ಧ ಸತ್ವಾತ್ಮಕವಾದ ಶರೀರವು ಅದ್ವೈತ ಮತವೆಂಬೊ ಅರಣ್ಯವಾ ಪೊಕ್ಕು ನಿಧ್ವಂಸ ಮಾಡಿ ವಾದಗಳನೆ ಗೆದ್ದು ಪದ್ಧತಿ ತಪ್ಪದಂತೆ ಮತವನ್ನುದ್ಧರಿಸಿ ವೃದ್ಧಿಗೈಸಿದರು ಸರ್ವ ಸಜ್ಜನರನ್ನು ಸಿದ್ಧರಾವೆಂದು ಗೀರ್ವಾಣರೆಲ್ಲರು ಎದ್ದೆದ್ದು ಕುಣಿದರು ಕರವ ಹೊಡೆದು ವಿದ್ವಾಂಸ ನಾನೆಂದು ಅಹಂಕರಿಸದೆ ಇವರ ಪಾದ ಪದ್ಮದಲ್ಲಿ ಅತಿ ದೃಢ ಭಕುತಿ ಮಾಡಿ ಮಧ್ವರಾಯರೆ ನಮಗೆ ಉದ್ಧಾರಕರೆಂದು ಪದ್ದೊಪದಿಗೆ ತಿಳಿದು ಕೊಂಡಾಡಿದರೆ ಸಿದ್ಧಿದಾಯಕ ಸಿರಿ ಮೋಹನ್ನ ವಿಠ್ಠಲ ಹೃದೃಶ್ಯದಲಿ ನಿಂತು ಸಲಹುವನು ವೇಗ ||