ರಂಗಮ್ಮನ ವಠಾರು/ವಾಚಕ ಮಹಾಶಯ

ವಿಕಿಸೋರ್ಸ್ ಇಂದ
Jump to navigation Jump to search

ವಾಚಕ ಮಹಾಶಯ

ನಿರಂಜನ: ಮೂವತ್ತು ಸಂಪುಟಗಳಲ್ಲಿ...... ಸರಣಿಯ ಮೂರನೆಯ ಸಂಪುಟ
ನಿಮ್ಮ ಮುಂದಿದೆ. ಇದರಲ್ಲಿ ನನ್ನ ಮೂರು ಕಾದಂಬರಿಗಳು ಅಡಕವಾಗಿವೆ_
'ರಂಗಮ್ಮನ ವಠಾರ,' 'ದೂರದ ನಕ್ಷತ್ರ' ಮತ್ತು 'ನವೋದಯ.'

ಇವುಗಳಲ್ಲಿ, ತನ್ನ ವಿಶಿಷ್ಟ ಕಥನ ವಿಧಾನದಿಂದಾಗಿ ಜನಪ್ರಿಯವಾದ ಕಾದಂಬರಿ,
'ರಂಗಮ್ಮನ ವಠಾರ.' ಹದಿನಾಲು 'ಮನೆ'ಗಳಾಗಿ ವಿಂಗಡಿಸಲ್ಪಟ್ಟು, ಹದಿನಾಲ್ಕು
ಸಂಸಾರಗಳಿಗೆ ಆಸರೆ ನೀಡಿರುವ ವಠಾರವೇ ಈ ಕೃತಿಯ ಕೇಂದ್ರಬಿಂದು. ಇಡೀ
ಕಾದಂಬರಿಗೆ ನಾಯಕ-ನಾಯಿಕೆ ಇಲ್ಲ, ಆದರೆ, ಜೋಡಿಗಳು ಸಾಕಷ್ಟಿವೆ. ಹದಿನಾಲ್ಕು
ವಸತಿಗಳೆಂದ ಮೇಲೆ ಹಿರಿ-ಕಿರಿಯರ ಒಟ್ಟು ಸಂಖ್ಯೆ ತೀರಾ ಚಿಕ್ಕದಾಗುವುದೂ
ಶಕ್ಯವಿಲ್ಲ!

ನಮ್ಮ ನಗರ ಪಟ್ಟಣಗಳಲ್ಲಿ ವಠಾರಗಳು-ಚಾಳ್ ಗಳು-ಇನ್ನೂ ಇವೆ. ಬಹು
ಮಹಡಿ ಕಟ್ಟಡಗಳ ಉದ್ಭವದೊಂದಿಗೆ, ವಠಾರ ಮನೆಗಳು ಅಪಾರ್ಟ್ ಮೆಂಟ್ ಗಳಾಗಿ
ರೂಪುಗೊಂಡಿರುವುದೂ ಉಂಟು. ಈ ಆಕಾಶವಾಸ ಬಡ ಮಧ್ಯಮ ವರ್ಗದವರ
ಪಾಲಿಗೆ ಕೇವಲ ಕನಸು. ಏನಿದ್ದರೂ ರಂಗಮ್ಮನ ಬಾಡಿಗೆದಾರರ ಕಥೆ ಸಾರ್ವ
ಕಾಲಿಕ. ಈಗಿನ ಪೀಳಿಗೆಯವರಿಗಂತೂ ಇದು ತಾಜಾ ಸರಕು.

****

ಅಧ್ಯಾಪಕ ಸಂಕುಲದ ಬಗೆಗೆ ನನ್ನ ಕುತೂಹಲ ವಿದ್ಯಾರ್ಥಿ ದೆಸೆಯಿಂದಲೇ
ಆರಂಭ. ಉಪಾಧ್ಯಾಯರ ಪ್ರತಿಭೆ, ಬೋಧನ ಸಾಮರ್ಥ್ಯ, ಮಾನವೀಯ ನಡ
ವಳಿಕೆ - ಇವಷ್ಟೇ ಆಗ ನನಗೆ ಮುಖ್ಯವಾಗಿದ್ದುವು. ಅವರ ಜಾತಿ ಗೀತಿ ನನಗೆ ಅಮುಖ್ಯ
ವಾಗಿತ್ತು. ಆದರೆ ಅವರ ಮನೆಗಳ ಬಳಿ ಸಾರಿದಾಗ, ಧಾರ್ಮಿಕ ಆಚಾರಗಳಲ್ಲಿ
ವ್ಯತ್ಯಾಸ ಕಾಣುತ್ತಿದ್ದೆ. ನನ್ನದಲ್ಲದ ಪ್ರಪಂಚದಲ್ಲಿ ತೋರಿ ಬರುತ್ತಿದ್ದ ವೈವಿಧ್ಯ
ನನ್ನನ್ನು ವಿಸ್ಮಯಕ್ಕೆ ಗುರಿ ಮಾಡುತ್ತಿತ್ತು.

ನೀಲೇಶ್ವರದಲ್ಲಿ ಹೈಸ್ಕೂಲು ಶಿಕ್ಷಣ ಮುಗಿಸಿ, ಲೇಖನಿಯ ಬಲದಿಂದ ಬದುಕ
ಲೆಂದು ಮಂಗಳೂರು ತಲಪಿದೆ. 'ರಾಷ್ಟ್ರ ಬಂಧು'ವನ್ನು ಸೇರುವುದಕ್ಕೆ ತುಸು ಮುನ್ನ
ನಾನು ಕಂಡ ವ್ಯಕ್ತಿ ಕಯ್ಯಾರರು, ಅವರು ಆಗ 'ಸ್ವದೇಶಾಭಿಮಾನಿ' ಸಾಪ್ತಾಹಿಕದಲ್ಲಿ
ಉಪ ಸಂಪಾದಕರಾಗಿದ್ದರು. ನನಗೆ ಅವರೊಂದು ಸಲಹೆ ನೀಡಿದರು: "ನಿಮಗೆ
ಪತ್ರಿಕೋದ್ಯಮ ಬೇಡ. ನೀವು ಮಾಸ್ಟ್ರಾಗಿ." ಮಾಸ್ಟ್ರಾಗದೆ ಪತ್ರಿಕೋದ್ಯಮಿಯೇ
ಆದೆ. ಆದರೆ, ಅಗತ್ಯವಾಗಿದ್ದ ಚೂರು ಪಾರು ಹೆಚ್ಚಿನ ಸಂಪಾದನೆಗಾಗಿ, ಒಂದೆರಡು
ಕಡೆ ಟ್ಯೂಷನ್ ಇಟ್ಟುಕೊಂಡೆ. ಅಂತೂ ಒಂದು ಬಗೆಯ ಮಾಸ್ಟ್ರಾದೆ! ಸುಪ್ತಪ್ರಜ್ಞೆ
ಯಲ್ಲಿ ಈ ಮಾಸ್ತರಿಕೆ ನನಗೆ ಬಹಳ ಕಾಟ ಕೊಟ್ಟಿರಬೇಕು. ಆ ಕಾರಣದಿಂದಲೆ ಜಯ
ದೇವ ನನ್ನ 'ದೂರದ ನಕ್ಷತ್ರ' ಕಾದಂಬರಿಯಲ್ಲಿ ಮೂರ್ತರೂಪ ತಳೆದ.
vi

ಆ ವರ್ಷಗಳಲ್ಲಿ ಕನ್ನಡ ನಾಡಿನ ಉದ್ದ ಅಗಲ ಅಳೆದಿದ್ದೆ. ಸ್ವಾತಂತ್ರ್ಯ
ಪ್ರಾಪ್ತಿಯ ಅನಂತರದ ಭ್ರಮೆ ನಿರಸನ ಸಾಕಷ್ಟು ನೋವು ಉಂಟು ಮಾಡಿತ್ತು. ಆ
ನೋವು ಉಲ್ಬಣಿಸಿದ್ದು, ಜಾತೀಯತೆಯ ವಿರಾಟ್ ರೂಪವನ್ನು ನಾನು ಕಂಡಾಗ.
ಈ ಪಿಡುಗು ಕ್ರಮೇಣ ಸರ್ವವ್ಯಾಪಿಯಾಗತೊಡಗಿತು.

ಆ ಹಿನ್ನೆಲೆಯಲ್ಲಿ ಕರ್ನಾಟಕದ ರಾಜ್ಯ ಉದಿಸಿತು. ಕನ್ನಡಿಗರ ಪಾಲಿಗೆ
ಅದೊಂದು ಮಹಾಸಂಭವ. ಜಯದೇವ ಈಗಲೂ ಅಧಾಪಕ. ನೂತನ ರಾಜ್ಯೋ
ದಯದ ವೀಕ್ಷಕ. 'ದೂರದ ನಕ್ಷತ್ರ'ದ ಕಥೆಯ ಮುಂದುವರಿಕೆಯೇ “ನವೋದಯ.'

****

ಪುಟ್ಟದಾದ ಒಂದೂರು. ಒಂದು ಪ್ರಾಥಮಿಕ ಶಾಲೆ, ಒಂದು ಮಾಧ್ಯಮಿಕ
ಶಾಲೆ, ನೀಲಿ ನಕಾಶೆಯಲ್ಲಿ ಕಂಗೊಳಿಸಿದ ಫ್ರೌಡಶಾಲೆ. ನಾಲ್ಕಾರು ಉಪಾಧ್ಯಾಯರು
ಮಕ್ಕಳಿಗೆ ಪಾಠ ಹೇಳುವ ಆಟದಲ್ಲಿ ನಿರತರು.

ಕಾಲದ ಚೌಕಟ್ಟಿನಲ್ಲಿ ವಿಸ್ತಾರ ಬದುಕಿನ ಪುಟ್ಟ ಭಾಗವನ್ನು ಕಲಾತ್ಮಕವಾಗಿ ಸೆರೆ
ಹಿಡಿಯುವ ಪ್ರಯತ್ನವಿದೆ 'ದೂರದ ನಕ್ಷತ್ರ'ದಲ್ಲಿ, 'ನವೋದಯ'ದಲ್ಲಿ.

ಇತರ ಪಾತ್ರಗಳು ಹಲವಿದ್ದರೂ, ಇಲ್ಲಿ ಪ್ರಮುಖರು ಅಧಾಪಕರು. ವೈಯು
ಕ್ತಿಕ ಮತು ಸಾಮುದಾಯಿಕ ಜೀವನದಲಿ ಅನಪೇಕಣಿಯ ಅಂಶಗಳು ಸಾಕಷ್ಟಿದ್ದರೂ
ಅವನ್ನು ಮೆಟ್ಟಿ ನಿಲ್ಲಬಲ್ಲ ಮಾನವೀಯ ಗುಣವೂ ಒಂದಿದೆ. ಆ ಗುಣ ಇಲ್ಲಿ ಇರುಳಿನ
ಹಣತೆಯಾಗಿ ಮಂದ ಬೆಳಕು ಬೀರಿದೆ; ದಡಗಳನ್ನು ಜೋಡಿಸುವ ಸೇತುವೆಯಾಗಿದೆ.
****
ಈ ಸಂಪುಟದ ಆನುಬಂಧದಲ್ಲಿ, ಮೇಲೆ ಪ್ರಸ್ತಾಪಿಸಿದ ಕಾದಂಬರಿಗಳನ್ನು
ಕುರಿತು ಇನ್ನಿಷ್ಟು ವಿವರಗಳನ್ನು ಕಲೆ ಹಾಕಿದ್ದೇನೆ. ಸಂಪುಟದ ಓದಿಗೆ ಅದು ಸಹಾಯಕ.

'ನಿರಂಜನ: ಮೂವತ್ತು ಸಂಪುಟಗಳಲ್ಲಿ.' ಐ.ಬಿ.ಎಚ್. ಪ್ರಕಾಶನದ ಯೋಜನೆ,
ಅದಕ್ಕೆ ಕಾರಣರು ಸಂಸ್ಥೆಯ ಜನರಲ್ ಮ್ಯಾನೇಜರ್ ಶ್ರೀ ಜಿ. ಕೆ. ಅನಂತರಾಮ್
ಅವರು. ಗದಗಿನ ತ್ವರಿತ ಮುದ್ರಣದ ಶ್ರೀ ಫ. ಶಿ. ಭಾಂಡಗೆಯವರು ಈ ಸಂಪುಟವನ್ನು
ಒಂದೂವರೆ ತಿಂಗಳಲ್ಲಿ ಅಂದವಾಗಿ ಮುದ್ರಿಸಿದ್ದಾರೆ.

--ಇವರಿಗೆ ನಾನು ಕೃತಜ್ಞ.


9–6–1987
ನಿರಂಜನ

'ಕಥೆ' 515 7ನೇ ಮುಖ್ಯಬೀದಿ,

46ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-560 04!