ರಂಗಮ್ಮನ ವಠಾರ/ಓದಿದ ಬಳಿಕ

ವಿಕಿಸೋರ್ಸ್ದಿಂದ

ಓದಿದ ಬಳಿಕ

"ಓದಿಯಾಯಿತೆ?"
"ಓಹೋ!"
"ಹೇಗಿದೆ?"
"..............."
"ಸುಮ್ಮನಿದ್ದೀರಲ್ಲ?"
"ಹೇಗಿದೆ ಅಂತ ಹೇಳಲು ಸ್ವಲ್ಪ ಕಾಲಾವಕಾಶ ಬೇಕು."
"ಆಗಲಿ. ಸಂದೇಹಗಳೇನಾದರೂ ಇದ್ದರೆ ಕೇಳಿ."
".......ನಿಮ್ಮ ಈ ಕಾದಂಬರಿಗೆ ಕಥಾನಾಯಕ-ಕಥಾನಾಯಿಕೆ ಯಾರು?"
"ಹಲವರು!"
"ಆದರೆ ಸಾಮಾನ್ಯವಾಗಿ ನಮ್ಮ ಕಾದಂಬರಿಗಳಲ್ಲಿ ಹೀಗಿಲ್ಲ"
"ನಿಜ. ಕಾದಂಬರಿ ಈ ರೀತಿಯಾಗಿಯೂ ಇರಬಹುದು. ಅಲ್ಲದೆ, ಇದು ತೀರಾ
ಹೊಸತೂ ಅಲ್ಲ."
"ಈ ಕಾದಂಬರಿಯಲ್ಲಿರೋದು ವಠಾರ ಜೀವನ, ಅಲ್ಲವೆ?"
"ಹೌದು."
"ವಠಾರ ಜೀವನವನ್ನು ಚಿತ್ರಿಸಿದ್ದೇವೆಂದು ಈ ಮೊದಲೇ ಹೇಳಿಕೊಂಡವ
ರುಂಟು."
"ಗೊತ್ತು. ಆದರೆ ಜೀವನವನ್ನು ನೋಡುವ ದೃಷ್ಟಿಗಳಲ್ಲಿ ವ್ಯತ್ಯಾಸವಿರ್ತದೆ.
ಇಲ್ಲಿರುವುದು ನನ್ನ ದೃಷ್ಟಿ"
"ನೀವು ಕಾದಂಬರಿಯನ್ನು ಬರೆದ ಉದ್ದೇಶ?"
"ಕಾದಂಬರಿಗಳನ್ನು ಜನ ಯಾಕೆ ಓದ್ತಾರೆ? ಮನೋರಂಜನೆಗೇಂತ, ಇಲ್ಲವೆ
ಕಾಲ ಹರಣಕ್ಕೇಂತ. ಇದನ್ನಾದರೂ ಆದರು ಕೈಗೆತ್ತಿಕೊಳ್ಳೋದು ಅದೇ ಉದ್ದೇಶ
ದಿಂದ ಅಂತ ನಾನು ಬಲ್ಲೆ!"
"ಅಷ್ಟೇ ಅಂತೀರಾ?"

"ಅದೀಗ ನಿಜಸ್ಥಿತಿ. ಆದರೆ ನಾನು ಬರಿಯ ಮನೋರಂಜನೆಯನ್ನು ಗುರಿ
ಯಾಗಿಟ್ಟು ಯಾವತ್ತೂ ಕೃತಿ ರಚಿಸೋದಿಲ್ಲ. ಇಲ್ಲಿಯೂ ಅಷ್ಟೆ. ಇದು ವಾಸ್ತವ
ಜೀವನವನ್ನು ಅವಲಂಬಿಸಿದೊಂದು ಕಟ್ಟುಕತೆ. ಇದನ್ನೋದುವಾಗ ಓದುಗರಿಗೆ ವಿವಿಧ
ರಸಾನುಭವವಾದೀತು ಅಂತ ನನ್ನ ನಂಬುಗೆ. ಆದರೆ ಅಷ್ಟೇ ಅಲ್ಲ. ಓದಿಯಾದ
ಮೇಲೂ ನಮ್ಮ ಸಮಾಜದೊಂದು ಜನ ವಿಭಾಗದ ಜೀವನಚಿತ್ರ ಅವರ ನೆನಪಿನಲ್ಲಿ
ಉಳಿಯಬೇಕು ಅನ್ನೋದು ನನ್ನ ಬಯಕೆ. ಆ ಚಿತ್ರ ಬದುಕಿನ 'ಏನು?'-'ಯಾಕೆ?'

ಗಳನ್ನು ಪ್ರಚೋದಿಸುವಂತಾಗಬೇಕು ಅನ್ನೋದು ನನ್ನ ಅಪೇಕ್ಷೆ."
"ಇಲ್ಲಿ ನೀವು ಚಿತ್ರಿಸಿರೋದು ಬ್ರಾಹ್ಮಣರ ವಠಾರ."
"ಹೌದು."
"ನೀವು ಬ್ರಾಹ್ಮಣರೆ?"
"..........."
"ಬ್ರಾಹ್ಮಣೇತರರೇ?"

"..........."
"ಯಾಕೆ ಮುಗುಳ್ನಗ್ತಿದ್ದೀರಿ?"
"ನಾನು ಮನುಷ್ಯ. ಮಾನವನಾಗಿ ಇಲ್ಲಿ ಬದುಕನ್ನು ನೋಡಿದ್ದೇನೆ."
"ಸಂತೋಷ. ನೀವು ಹೀಗೆ ಉತ್ತರ ಕೊಡ್ತೀರಿ ಅಂತ ನಿರೀಕ್ಷಿಸಿಯೇ ಇದ್ದೆ!"
"ಈ ಕಾದಂಬರಿಯಲ್ಲಿ ಚಿತ್ರಿತವಾಗಿರುವ ಸಮಾಜ ಎಂಥದು? ಸುತ್ತಮುತ್ತಲೂ
ಔದ್ಯೋಗಿಕ ಬೆಳವಣಿಗೆಯಾಗ್ತಲೇ ಇದ್ದು, ಪಾಳೆಯಗಾರ ಆಚಾರ ವಿಚಾರಗಳ ಮೇಲೆ
ಒಂದೇ ಸಮನೆ ಆಘಾತವಾಗ್ತಿದೆ. ಇಲ್ಲಿ ಹೆಚ್ಚಿನ ಜನ ಬದಲಾವಣೆಯನ್ನು ಸ್ವಾಗತಿ
ಸದೆ ಇದ್ದರೂ ಅನಿವಾರ್ಯವೆಂದು ಒಪ್ಪಿಕೊಳ್ಳೋದನ್ನು ಕಾಣ್ತೇವೆ. ಹೊಸ ಹಳೆಯ
ಮನೋವೃತ್ತಿಗಳ ನಡುವೆ ವಠಾರ ಜೀವನದಲ್ಲಿ ತಾಕಲಾಟಗಳಾಗೋದನ್ನು ಕಾಣ್ತಲೇ
ಇರ್ತೇವೆ. "
"ಆದರೆ ಬೇರೆ ರೀತಿಯ ವಠಾರಗಳೂ ಇವೆ, ಅಲ್ಲವೇ?"
"ಇವೆ. ಔದ್ಯೋಗಿಕ ವ್ಯವಸ್ಥೆಯ ಒತ್ತಡಕ್ಕೆ ಸಿಲುಕಿ, ಹಿಂದಿನ ಜೀವನ ಕ್ರಮ
ಎಷ್ಟೋ ಕಡೆ ಬಿರುಕು ಬಿಟ್ಟಿದೆ. ಈಗೀಗ ವಿವಿಧ ಜಾತಿ ಕೋಮುಗಳ ಜನ ಒಂದೇ
ಕಡೆ ವಾಸವಾಗಿರುವ ವಠಾರಗಳೂ ಕಾಣಸಿಗ್ತವೆ. ಕನ್ನಡ ನಾಡಿನ ದೊಡ್ಡ ದೊಡ್ಡ
ನಗರಗಳಲ್ಲಿ ಅಕ್ಕಪಕ್ಕದ ಮನೆಯವರು ಯಾರೂಂತ ನಿವಾಸಿಗಳಿಗೆ ತಿಳೀದೇ ಇರೋ
ದುಂಟು. ಆದರೆ ಅದನ್ನು ತಿಳಕೊಳ್ಳೋದಕ್ಕೆ ಬಿಡುವಾಗಲೀ ಅಪೇಕ್ಷೆಯಾಗಲೀ
ಇರದ ವಠಾರ ಜೀವನವನ್ನು ಮುಂಬಯಿಯಂಥ ಶಹರಗಳಲ್ಲಿ ಕಾಣ್ತೇವೆ. ಅಲ್ಲಿ
ರೂಪುಗೊಂಡಿರುವ ಹಣದ, ದುಡಿಮೆಯ, ಸಮಾಜ ವ್ಯವಸ್ಥೆಯೊಳಗೆ ಜಾತಿ ಮತಗಳ
ಕಟ್ಟುಪಾಡು ಆಶ್ಚರ್ಯವೆನಿಸುವ ರೀತಿಯಲ್ಲಿ ಸಡಿಲವಾಗಿದೆ, ಅದು 'ಚಾಳ್' ಜೀವನ.
ನಮ್ಮ ನಾಡಿನ ವಠಾರ ಜೀವನಕ್ಕಿಂತ ಭಿನ್ನವಾದದ್ದು."
"ನಮ್ಮಲ್ಲಿ ಈಗಿರುವ ವಠಾರ ಜೀವನವೂ ಕ್ರಮೇಣ ಬದಲಾಗ್ತದೇಂತ ನಿಮ್ಮ
ಅಭಿಪ್ರಾಯವಲ್ವೆ?"
"ಹೌದು. ಖಂಡಿತವಾಗಿಯೂ. ಪ್ರತಿ ದಿನವೂ ಅದು ಬದಲಾಗ್ತಲೇ ಇದೆ.
ಮಾರ್ಪಾಟು ಹೊಂದುತಿರೋ ನಮ್ಮ ಬದುಕಿನ ವ್ಯವಸ್ಥೆ ವಠಾರ ಜೀವನದಲ್ಲೂ
ಸ್ವಾಭಾವಿಕವಾಗಿಯೇ ಪ್ರತಿಬಿಂಬಿತವಾಗ್ತಿದೆ.
"ನಿಮ್ಮ ಪಾತ್ರಗಳು__"
"ಏನು? ಹೇಳಿ."
"ಪುಸ್ತಕವನ್ನೋದಿದ ಪ್ರತಿಯೊಬ್ಬರೂ ಹೆಚ್ಚಿನ ಪಾತ್ರಗಳನ್ನೆಲ್ಲ ಸುತ್ತು
ಮುತ್ತಲೂ ಗುರುತಿಸಬಹುದು."
"ಹಾಗಾಯಿತೆಂದರೆ ನಾನು ಧನ್ಯ. ಸಾಹಿತ್ಯಕೃತಿ ಜೀವಂತ ವ್ಯಕ್ತಿಗಳ ಛಾಯ
ಗ್ರಹಣವಲ್ಲ; ಅವರ ನಡೆನುಡಿಗಳ ವರದಿಯಲ್ಲ. ಆದರೆ ಸೂಕ್ಷ್ಮ ನಿರೀಕ್ಷಣೆಯ
ಸಾಮರ್ಥ್ಯವುಳ್ಳ ಬರೆಹಗಾರ ಬದುಕಿನಲ್ಲಿ ಕಾಣುವ ವಿಧವಿಧದ ವ್ಯಕ್ತಿಗಳಿಂದ ಸಮಾನ
ಗುಣಗಳನ್ನು ಆಯ್ದುಕೊಳ್ಳಬೇಕು. ಪ್ರತಿಯೊಂದು ಪಾತ್ರದ ಸೃಷ್ಟಿಯ ಹಿಂದೆಯೂ
ಅಂಥದೇ ಗುಣಗಳುಳ್ಳ ಎಷ್ಟೋ ವ್ಯಕ್ತಿಗಳ ಸ್ವಭಾವ ನಿರೀಕ್ಷಣೆಯ ಮೊತ್ತವಿರಬೇಕು.
ಅಂಥ ಮೊತ್ತವೇ ಕಲಾವಿದನಾದ ಬರೆಹಗಾರನಿಗೆ ದೊರೆಯೋ ಆವೆಮಣ್ಣು. ಅದನ್ನು
ಹದಗೊಳಿಸಿದ ಬಳಿಕ, ಬರೆಹಗಾರ ಶಿಲ್ಪಿಯ ಕೌಶಲ ಪ್ರತಿಭೆಗಳಿಗೆ ಅನುಗುಣವಾಗಿ
ಕೃತಿ ಸಿದ್ಧವಾಗ್ತದೆ. ವಾಸ್ತವವಾದದಂಥ ಒಳ್ಳೆಯ ಪ್ರವೃತ್ತಿ ಅಪೇಕ್ಷಿಸೋದು
ಅದನ್ನು."
"ನಿಮ್ಮ 'ರಂಗಮ್ಮನ ವಠಾರ' ಆ ಸಿದ್ಧಾಂತಕ್ಕೆ ಅನುಗುಣವಾಗಿಯೇ ಇದೆ
ಅಂತೀರಾ?"
"ಪ್ರಯತ್ನವನ್ನಂತೂ ಮಾಡಿದ್ದೇನೆ."
"ನಮ್ಮ ಆಧುನಿಕ ಸಾಹಿತ್ಯದಲ್ಲಿ ಕಾಣುವ ವಾಸ್ತವವಾದದ ಪ್ರವೃತ್ತಿ ಪಾಶ್ಚಾತ್ಯ
ಸಾಹಿತ್ಯದ ಪ್ರಭಾವದ ಫಲವಾಗಿ ಹುಟ್ಟಿತು, ಅಲ್ಲವೆ?"
"ಆರಂಭದಲ್ಲಿ ಹಾಗಾಯಿತು ಎನ್ನದಿರಲಾರೆ. ವಿದೇಶೀಯರ ಆಳ್ವಿಕೆಗೆ ಒಳ
ಗಾದ ನಾವು ಅವರ ಸಾಹಿತ್ಯದಿಂದ ಪ್ರಭಾವಿತರಾಗುವುದು ಅನಿವಾರ್ಯವಾಗಿತ್ತು...
ಆಧುನಿಕ ಕನ್ನಡ ಸಾಹಿತ್ಯದ ಮೊತ್ತ ಮೊದಲಿನ ಲಲಿತ ಕೃತಿಗಳೇ ವಾಸ್ತವವಾದದ
ಬಾವುಟವನ್ನು ಹಾರಿಸಿದುವು ಅನ್ನೋದು ಅಭಿಮಾನದ ಸಂಗತಿ. ೧೮೮೭ನೆಯ ಇಸವಿ
ಯಲ್ಲಿ ಪ್ರಕಟವಾದ ಕನ್ನಡದ ಪ್ರಪ್ರಥಮ ಏಕಾಂಕ ನಾಟಕ 'ಇಗ್ಗಪ್ಪ ಹೆಗಡೆಯ
ವಿವಾಹ ಪ್ರಹಸನ' ಮತ್ತು ೧೮೯೯ರಲ್ಲಿ ಪ್ರಕಟವಾದ ಪ್ರಪ್ರಥಮ ಕಾದಂಬರಿ
'ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯವು'__ ಇವು ಎರಡೂ ವಾಸ್ತವವಾದದ
ಹೆದ್ದಾರಿಯನ್ನು ಹಾಕಿಕೊಟ್ಟುವೂಂತ ಧಾರಾಳವಾಗಿ ಹೇಳಬಹುದು."
"ಜೀವನವನ್ನು ಸಾಹಿತ್ಯ ನಿರೂಪಿಸಬೇಕು ಅಲ್ವೆ?"
"ಜೀವನವನ್ನು ಸಾಹಿತ್ಯ ನಿರೂಪಿಸಲೂ ಬೇಕೂ, ರೂಪಿಸಲೂ ಬೇಕು."
"ಆದರೆ ಬದುಕಿನ ಯಥಾರ್ಥ ಚಿತ್ರಣವೊಂದರಿಂದಲೇ ಎರಡೂ ಕೆಲಸಗಳು
ಆಗಲಾರವು. ನಿಜವೆ?"
"ಸರಿ ಹೇಳಿದಿರಿ. ಯಾವುದೋ ದೇಶದ ಯಾವುದೋ ಕಾಲದ ಸಾಹಿತ್ಯವನ್ನು
ಉದಾಹರಿಸಿ ವಾಸ್ತವವಾದವನ್ನು ಒರಟು ನಿಸರ್ಗವಾದವಾಗಿ ವಿವರಿಸುವವರಿದ್ದಾರೆ.
ಅದು ಸರಿಯಲ್ಲ. ಸಮಾಜದ ಹಿತೇಚ್ಛುವಾದ, ನಾಳೆಯ ನವ್ಯತೆಯನ್ನು ಗುರುತಿಸ

ಬಲ್ಲ, ಬರೆಹಗಾರನ ಕೈಯಲ್ಲಿ ವಾಸ್ತವವಾದದ ಪ್ರವೃತ್ತಿ ಸಂಜೀವಿನಿಯಾಗ್ಬೇಕು.
ಯಥಾರ್ಥವಾದಕ್ಕೆ ಕಟ್ಟುಬಿದ್ದು, ಸುಲಭ ಲಭ್ಯವಲ್ಲವೆಂಬ ಒಂದೇ ಕಾರಣದಿಂದ,
ಅಸ್ಪಷ್ಟವಾದ-ಆದರೆ ಒಳ್ಳೆಯ- ಚಿತ್ರಗಳನ್ನು ಎತ್ತಿ ತೋರಿಸದೇ ಇರುವುದೂ ಸರಿ
ಯಲ್ಲ. ನಿಜ ಸ್ಥಿತಿಯ ಚಿತ್ರಣದಲ್ಲಿ ಆಗಾಗ್ಗೆ ಅಪೇಕ್ಷಣೀಯ ಪರಿಸ್ಥಿತಿಯು ಸೂಕ್ಷ್ಮ
ಬಣ್ಣಗಳನ್ನೂ ಉಪಯೋಗಿಸ್ಬೇಕು."
"ಪೇಂಟರ್ ಶಂಕರನಾರಾಯಣಯ್ಯ ಮತ್ತು ಚಂಪಾ ಈ ಜೋಡಿಯ ವಿಷಯ
ದಲ್ಲಿ ಹಾಗೆ ಹೇಳಬಹುದಲ್ಲ?"
"ಹೌದು, ಸರಿಯಾಗಿಯೇ ಊಹಿಸಿದಿರಿ."
"ಪಾತ್ರಗಳನ್ನು ಒಂದೋ ಕರಿಯದಾಗಿ ಇಲ್ಲವೆ ಬಿಳಿಯದಾಗಿ ಚಿತ್ರಿಸುವುದು
ವಾಸ್ತವವಾದದ ಪ್ರವೃತ್ತಿ ವಿರುದ್ಧವೇ?”
"ವಿರುದ್ಧ. ನಮ್ಮ ಪಾತ್ರಗಳು ಒಮ್ಮೊಮ್ಮೆ ಸಕಲ ಸದ್ಗುಣ ಸಂಪನ್ನರು ಇಲ್ಲವೆ
ದುರಾಚಾರಗಳ ದಾನವರು. ಇದು ಸರಿಯಲ್ಲ. ಪ್ರತಿಯೊಬ್ಬನಲ್ಲಿ ಒಳ್ಳೆಯ ಗುಣ
ಗಳೂ ಇರ್ತವೆ; ಕೆಟ್ಟ ಗುಣಗಳೂ ಇರ್ತವೆ. ಗುಣಗಳ ದಾಮಾಶಯಕ್ಕೆ ತಕ್ಕಂತೆ ಆ
ವ್ಯಕ್ತಿಗಳನ್ನು ಒಳ್ಳೆಯವರೆಂದೋ ಕೆಟ್ಟವರೆಂದೋ ಕರೀತೇವೆ. ಆದರೆ 'ಒಳ್ಳೆಯವರು'
ಎಂದಾಗ ಅವರಲ್ಲಿ ದುರ್ಗುಣಗಳೇ ಇಲ್ಲ ಅನ್ನೋದಾಗಲೀ 'ಕೆಟ್ಟವರು' ಎಂದಾಗ
ಅವರು ಕಡು ಪಾಪಿಗಳೇ ಎಂದಾಗಲೀ ಅರ್ಥವಲ್ಲ."
"ರಂಗಮ್ಮನನ್ನು ಉದಾತ್ತ ವ್ಯಕ್ತಿಯಾಗಿ ನೀವು ಯಾಕೆ ಚಿತ್ರಿಸಿಲ್ಲ ಅನ್ನೋದು
ಈಗ ತಿಳೀತು"
"ರಂಗಮ್ಮನನ್ನು 'ದೇವತೆ'ಯಾಗಿ ಚಿತ್ರಿಸೋದು ಆದರ್ಶದ ಪರಮಾವಧಿ
ಯಾದೀತು. ಹಲವು ಒಳ್ಳೆಯ ಗುಣಗಳಿದ್ದರೂ ರಂಗಮ್ಮ 'ದೇವತೆ'ಯಾಗೋದು
ಸಾಧ್ಯವಿల్ల. ಆಕೆಯ ಜೀವನ ವಿಧಾನ, ಅದನ್ನು ಕೋದಿರುವ ಆರ್ಥಿಕ ಸೂತ್ರ,
ಅಂತಹ ಅವಕಾಶವನ್ನು ಆಕೆಗೆ ಕೊಡೋದಿಲ್ಲ."
“ಅದು ನಿಜ... ಇತರ ಪಾತ್ರಗಳೂ ಅಷ್ಟೆ. ಒಬ್ಬೊಬ್ಬರ ಮೂರ್ಖತನ ಕಂಡು
ನಗು ಬಂದರೂ ಬುದ್ಧಿವಂತಿಕೇನ ನೋಡಿ ಮೆಚ್ಚಬೇಕೆನಿಸಿದರೂ ಅವರ ಒಟ್ಟು ಬದು
ಕಿನ ಬಗೆಗೆ ಮರುಕ ಅನಿಸ್ತದೆ."
"ಸಮಾಜ ವ್ಯವಸ್ಥೆ ಅವರನ್ನು ಇರಿಸಿದೆಯಲ್ಲಾ ಅಂತ ಮರುಕ
ವಾಗ್ಬೇಕು."
"ಆ ಉದ್ದೇಶದಿಂದಲೆ ನೀವು ಕೃತಿ ರಚಿಸಿದ್ದೀರಿ ಅಲ್ಲವೆ?"
"ಹೌದು.... ಆದರೆ ಪ್ರಯತ್ನ ಯಶಸ್ವಿಯಾಗಿದೆಯೋ ಇಲ್ಲವೋ!"
"ಅದನ್ನು ಹೇಳಬೇಕಾದವರು ನಾವು."
"ತಲೆ ಬಾಗಿದೆ"

25

"ನಿಮ್ಮ 'ರಂಗಮ್ಮನ ವಠಾರ' ಕೃತಿ ಬರುತದೇಂತ ಓದಿದಾಗ ಏನನಿಸಿತು ಗೊತ್ತೆ?"

"ಏನು?"
"ನಿರಂಜನರೂ ಅದೇ ವಿಷಯ ಬರೆಯ ಹೊರಟರಲ್ಲಾ ಅಂತ."
ಆ ವಿಷಯ ಎಂದಿರಾ?ವಿಷಯದ ಬಗ್ಗೆ ನನ್ನ ಆಕ್ಷೇಪವಿಲ್ಲ.ಭಿನ್ನಾಭಿಪ್ರಾಯ
ವಿರೋದು ಅದರ ನಿರುಪಣೆಗೆ ಸಂಬಂಧಿಸಿ.ವಿಷಯ ಯಾವುದೇ ಆದರೂ ಬದುಕನ್ನು
ನೋಡೋ ದೃಷ್ಟಿ ಒಂದಿರುತ್ತದೆ!ನಿಮ್ಮ ಊಹೆಗೆ ಆಧಾರವೇ ಇಲ್ಲ್ ಎನ್ನಲಾರೆ.'ವಠಾರ'
ಪದವನ್ನು 'ಗಟಾರ' ಅಂತ ಈಗಾಗಲೇ ಬಳಸಿದ್ದರಿಂದ ಹಾಗಗಿದೆ.ಒಂದೇ ಪದಕ್ಕೆ ಬೇರೆ ಬೇರೆ ಅರ್ಥಗಳಿರೋದು ಸಾಧ್ಯ.ಆದರೆ,ಯಾವುದಾದರೂ ಪದಕ್ಕೆ ವಿಪರೀತಾರ್ಥ ಕಲ್ಪಿಸಿ ಅದೀ ಸತ್ಯ ಅಂತ ಸಾಧಿಸೋ ಆಧುನಿಕ ಶಬ್ದಬ್ರಹ್ಮರಿಗೆ ನಮ್ಮ ನಾಡಿನಲ್ಲಿ ಅಭಾವವಿಲ್ಲ."
"ನಿಮ್ಮ ಈ ಕೃತಿಯೂ ಕೈಹೊತ್ತಿಗೆಯ ರೂಪದಲ್ಲೇ ಹೊರಗೆ ಬಂದು ಸುಲಭ ಬೆಲೆಗೆ ಓದುಗರಿಗೆ ದೊರೆಯುವಂತಾದುದಕ್ಕೆ ನೀವು ಸಂತೋಷಪಡ್ತೀರಿ ಅಲ್ಲವೆ?"
"ಹೌದು.ಅದಕ್ಕಾಗಿ ವಾಹಿನಿ ಪ್ರಕಾಶನದ ಒಡೆಯರಿಗೆ ನಾನು ಕೃತಜ್ಞ್."
"ವಿವಹರಣೆಗಳಿಗಾಗಿ ಋಣಿ.ಹೊರಡಲು ಸಮ್ಮತಿ ಕೊಡಿ.ಏಕಾಂತದಲ್ಲಿ ಎಲ್ಲಾ
ದರೂ ಕೂತ್ಕೊಂಡು ನಿಮ್ಮ ಪಾತ್ರಗಳಾದ ರಂಗಮ್ಮ_ಚಂಪಾವತಿ-ಶಂಕರನಾರಾ
ಯಣಯ್ಯ-ಚಂದ್ರಶೇಖರಯ್ಯ-ಜಯರಾಮು-ರಾಧೆ, ಆ ಓದುವ ಹುಡುಗರು_
ಪೋಲೀಸ್ ರಂಗಸ್ವಾಮಿ,ಇವರೆಲ್ಲರ ಜತೆ ಇನ್ನೊಮ್ಮೆ ಬೆರೀಬೇಕು.ಆ ಬಳಿಕ
'ರಂಗಮ್ಮನ ವಠಾರ'ದ ಬಗೆಗೆ ಅಭಿಪ್ರಾಯ ತಿಳಿಸ್ತೇನೆ."
"ಹಾಗೆಯೇ ಆಗಲಿ."


೨೫

ನಿರಂಜನ