ವಿಷಯಕ್ಕೆ ಹೋಗು

ರಂಗಮ್ಮನ ವಠಾರ/೧೩

ವಿಕಿಸೋರ್ಸ್ದಿಂದ

'ಈಗ ಬೇಡ'-ಎಂದು ಧೈರ್ಯವಾಗಿ ಹೇಳಿ ಬಂದಿದ್ದ ನಿಜ. ಹಿಂದೆಯೇನೋ,
ಮದುವೆಯಾಗುವುದರಲ್ಲಿ ಅರ್ಥವಿಲ್ಲ ಎಂತ ಆತ ಖಡಾಖಂಡಿತವಾಗಿ ವಾದಿಸುತ್ತಿದ್ದ.
ಈಗ ವಾದಿಸುತ್ತಿರಲಿಲ್ಲ. ಮದುವೆ ಅನಿವಾರ್ಯವೆಂದು ಬಾಯಿ ತೆರೆದು ಹೇಳುತ್ತಿರ
ಲಿಲ್ಲವಾದರೂ ಹಾಗೆಂದು ಅತನಿಗೆ ಆಗಲೇ ಮನವರಿಕೆಯಾಗಿತ್ತು.
ಆ ಯೋಚನೆ ಬಂದಾಗಲೆಲ್ಲ ರಾಧಾ ಈಗ ಅವನ ಕಣ್ಣೆದುರು ನಿಂತಂತಾಗು
ತ್ತಿತ್ತು. ತಾನು ಬಂದ ಹೊಸತಿನಲ್ಲಿ, ಇದೊಂದು ಬರಿಯ ಹುಡುಗ ಎಂದು ಆತ
ಸುಮ್ಮನಿದ್ದ. ಆದರೆ ಈ ಎರಡು ವರ್ಷಗಳಲ್ಲಿ ಆಕೆ ಎಷ್ಟೊಂದು ಬೆಳೆದುಬಿಟ್ಟಿದ್ದಳು.
ಒಂಟಿ ಇಟ್ಟಿಗೆಯ ಗೋಡೆಯಾಚೆ ನಿದ್ದೆ ಹೋಗಿತ್ತು ಆ ಸಂಸಾರ....ಜಯ
ರಾಮು... ರಾಧಾ.

೧೩

ಬೇಸೆಗೆಯ ಬೇಗೆಗೆ ಊರು ಬೇಯುತ್ತಿದ್ದಾಗಲೇ ಒಮ್ಮೆಲೆ ಒಂದು ಸಂಜೆ ಮಳೆ
ಹನಿಯಿತು.
"ಮಳೆ ಬಂತು! ಮಳೆ ಬಂತು!" ಎಂದು ವಠಾರದ ಹುಡುಗರೆಲ್ಲ ಕುಣಿದರು.
ರಂಗಮ್ಮನೂ ಹೆಬ್ಬಾಗಿಲ ಬಳಿ ನಿಂತು ಒದ್ದೆಯಾಗುತ್ತಿದ್ದ ಅಂಗಳವನ್ನು ನೋಡಿದರು.
ಮಳೆ ಬರತೊಡಗಿದಾಗ ಅವರ ಮುಖ ಎಂದೂ ಗೆಲುವಾಗುತ್ತಿರಲಿಲ್ಲ.

ಆ ದಿನ ಹನಿ ಮಳೆ ಅಷ್ಟಕ್ಕೆ ನಿಂತಿತು.
ರಂಗಮ್ಮ ಸಮಾಧಾನದ ನಿಟ್ಟುಸಿರು ಬಿಟ್ಟು ಒಳಕ್ಕೆ ಬಂದರು.
ಕರಿಯ ಮೋಡಗಳು ಕರಗಿ ಹೋಗಿ, ಅರಳೆ ರಾಶಿ ತೋರಿ ಬಂದು, ಶುಭ್ರ
ಆಕಾಶ ಕಾಣಿಸಿಕೊಂಡು, ಹೊಂಬಿಸಿಲು ಭೂಮಿಯ ಮೇಲೆ ಬಿತ್ತು.
"ಹೋ ಹೋ ಹೋ ಹೋ!" ಎಂದು ಹುಡುಗರು ಗದ್ದಲ ಮಾಡುತ್ತ ಅಂಗಳ
ಬಿಟ್ಟು ಬೀದಿಗಿಳಿದರು.
ರಂಗಮ್ಮನಿಗೆ ಗೊತ್ತಿತ್ತು. ಇದು ಆರಂಭ ಮಾತ್ರ. ಕಷ್ಟದ ದಿನಗಳ ಮುಂದಿ
ದ್ದುವು. ಪ್ರತಿವರ್ಷವೂ ಆ ದುಸ್ಥಿತಿಯ ಪುನರಾವರ್ತನೆ ಆಗುತ್ತಲೇ ಇದ್ದು, ರಂಗಮ್ಮ
ನಿಗೇನೋ ಬಹಳ ಮಟ್ಟಿಗೆ ಅದು ರೂಢಿಯಾಗಿತ್ತು. ಆದರೂ ಮಳೆಗಾಲದಲ್ಲಿ
ರಂಗಮ್ಮನ ವಠಾರ ಕಳೆಗೆಟ್ಟು ಹೋಗುತ್ತಿದ್ದುದನ್ನು ಅವರು ಕಾಣುತ್ತ ಬಂದಿದ್ದರು.
ದೇವರ ಮುಂದೆ ಕುಳಿತಾಗ, "ಮಳೆಗಾಲ ಸುಲಭವಾಗಿ ಕಳೆದುಹೋಗಲಪ್ಪಾ ಪರ
ಮಾತ್ಮಾ" ಎಂದು ಹೆಚ್ಚಿನ ಪ್ರಾರ್ಥನೆಯನ್ನು ಸೇರಿಸುತ್ತಿದ್ದರು.
ಮತ್ತೆ ನಾಲ್ಕು ದಿನ ಹನಿ ಬೀಳಲಿಲ್ಲ.
ಐದನೆಯ ದಿನ ಮಳೆ ಗುಡುಗು ಮಿಂಚುಗಳ ಆರ್ಭಟದೊಡನೆ ಬಂತು.ಬೆಂಗ
ಳೂರಿನ ತುಂತುರು ಹನಿಯಾಗಿ ಬರದೆ ಮಲೆನಾಡಿನ ಘನಘೋರ ಮಳೆಯಾಗಿ ಸುರಿ
ಯಿತು. ರಂಗಮ್ಮ ಸಪ್ಪೆಮೋರೆ ಹಾಕಿಕೊಂಡು, ತಮ್ಮ బలದೊಳಗೆ ಸೋರದೇ
ಇದ್ದ ಜಾಗದಲ್ಲಿ ಬೆಚ್ಚಗೆ ಕುಳಿತರು.
ರಂಗಮ್ಮನ ವಠಾರದಲ್ಲಿ ಹೆಚ್ಚಿನ ಮನೆಗಳೆಲ್ಲಾ ಸೋರುತ್ತಿದ್ದುವು. ಮಳೆ ಸುರಿ
ಯುತ್ತಿದ್ದಾಗಲೆಲ್ಲಾ 'ಥೂ! ಹಾಳು ಮನೆ...ಬೇಗನೇ ಬೇರೆಲ್ಲಿಗಾದರೂ ಹೋಗ್ಬೇಕು'
ಎಂದು ಉದ್ಗಾರ ತೆಗೆಯದವರು ಇರಲಿಲ್ಲ.
ಈ ಸಲವೂ ಅಷ್ಟೆ, ಹಾವಳಿ ಮಾಡುತ್ತ ಸುರಿದುದು ಪ್ರತಿ ವರ್ಷಕ್ಕಿಂತ
ಬೇರೆಯಲ್ಲದ ಮಳೆ.
ಜಯರಾಮು, ರಾಧಾ, ಅವರ ತಾಯಿ ಸೋರುತ್ತಿದ್ದ ನಾಲ್ಕಾರು ಕಡೆಗೆಲ್ಲ
ಪಾತ್ರೆಗಳನ್ನಿಟ್ಟರು. ಪಕ್ಕದ ಕೊಠಡಿ-ಮನೆಯ ಚಂದ್ರಶೇಖರಯ್ಯ ಹೊರ
ಹೋಗಿದ್ದ.
"ಪಕ್ಕದ್ಮನೆಯೊಳಗೆ ಮಳೆ ನೀರು ಬಿದ್ದು ಎಲ್ಲಾ ಒದ್ದೆಯಾಗಿ ಹೋಗುತ್ತೆ
ಅಲ್ವೆ ಅಣ್ಣ?”
ಆ ಪ್ರಶ್ನೆಯೊಡನೆ ರಾಧಾ ಜಯರಾಮುವಿನ ಮುಖ ನೋಡಿದಳು. ಆದರೆ
ಆತನ ಪ್ರಶ್ನಾರ್ಥಕ ದೃಷ್ಟಿಯನ್ನು ಎದಿರಿಸಲಾರದೆ, ನೀರು ಸುರಿಯುತ್ತಿದ್ದ ಛಾವಣಿ
ಯತ್ತ దిಟ್ಟಿಸಿದಳು.
ತಾಯಿ ರಾಧೆಯ ಮಾತಿಗೆ ಅರ್ಥ ಕಲ್ಪಿಸುವ ಗೊಡವೆಗೆ ಹೋಗದೆ
ಹೇಳಿದಳು:
"ಅದೇನೇನು ಹರವಿದಾನೋ ಮಹಾರಾಯಾ.."
ಮಹಡಿಯ ಕೆಳಗಿನ ನಾಲ್ಕು ಮನೆಗಳಷ್ಟೇ ಮಳೆಯನ್ನು ಸ್ವಲ್ಪ ಮಟ್ಟಿಗಾದರೂ
ತಡೆಹಿಡಿದು ಇದಿರಿಸುತ್ತಿದ್ದುವು.
ರಂಗಸ್ವಾಮಿ 'ಡ್ಯೂಟಿ'ಯ ಮೇಲೆ ಹೋಗಿದ್ದ. ಉಪಾಧ್ಯಾಯರು ತಂಗಿ
ಸುಮ೦ಗಳೆಯನ್ನು ಕರೆದುಕೊಂಡು ಭಾವನ ಊರಿಗೆ ತೆರಳಿದ್ದರು. ಆ ಎರಡೂ ಮನೆ
ಗಳ ಒಡತಿಯರು ಗಾಳಿ ಬೀಸಿದಾಗ ಒಳಬರುತ್ತಿದ್ದ ಮಳೆಯನ್ನು ತಡೆಯಲೆಂದು ಕಿಟಿಕಿ
ಗಳನ್ನು ಮುಚ್ಚಿದರು. ಹಾಗೆ ಮುಚ್ಚಿದ ಮೇಲೂ ಕಿಟಿಕಿಯ ಎಡೆಗಳಿಂದ ಇಳಿದು
ಒಳಕ್ಕೆ ಹರಿಯುತ್ತಿದ್ದ ನೀರನ್ನು ಅವರು ಬಟ್ಟೆ ಅದ್ದಿ ಪಾತ್ರೆಗೆ ಹಿಂಡಿದರು.
ಅವಾಂತರವಾಗುತ್ತಿದ್ದುದು ಓಣಿ ಮನೆಗಳಲ್ಲಿ. ನೀರು ಓಣಿಯಿಂದ ಸರಿಯಾಗಿ
ಹೊರಗೆ ಹರಿಯದೆ ಮನೆಗಳೊಳಕ್ಕೆ ಬರುತ್ತಿತ್ತು. ಹೆಂಚಿನ ಬಿರುಕುಗಳಿಂದೆಲ್ಲ ನೀರು
ಸುರಿಯುತ್ತಿತ್ತು. ಎದುರಿನ ಎರಡು ಮನೆಗಳಿಗಾದರೆ, ಗಾಳಿ ಬೀಸುತ್ತ ಮಳೆ ಬಂದಾಗ
ಮಾತ್ರ ತೊಂದರೆ. ಓಣಿ ಮನೆಗಳಲ್ಲಿ, ಗಾಳಿ-ಮಳೆ ಜತೆಯಾಗಿಯೇ ಬಂದರೆ
ಅಷ್ಟೊಂದು ಅಪಾಯವಿರಲಿಲ್ಲ. ಹೆಚ್ಚಿನ ನೀರು ಛಾವಣಿ ಹೊರಕ್ಕೆ ಹರಿಯು
ರಂಗಮ್ಮನ ವಠಾರ
127

ತ್ತಿತ್ತು. ಮಳೆಯಷ್ಟೇ ಬಲವಾಗಿ ಸುರಿದಾಗ ಮಾತ್ರ ಆ ಮನೆಗಳು ಕೆರೆಗಳಾಗುತ್ತಿ
ದ್ದುವು. ಗೋಡೆ ತೊಯ್ದು ಎಲ್ಲಿ ಉರುಳುವುದೋ ಎಂದು ಭಯವಾಗುತ್ತಿತ್ತು. ಒಲೆ
ಒದ್ದೆಯಾಗುತ್ತಿತ್ತು.
ಎಷ್ಟೋ ವರ್ಷಗಳ ಅನುಭವವಿದ್ದವರು ಈ ಸಲವೂ ಗೊಣಗುತ್ತ ಸೋರುವ
ನೀರನ್ನು ಹಿಡಿಯಲು ಎಂದಿನಂತೆ ಯತ್ನಿಸಿದರು. ಈ ವರ್ಷದ ಮಳೆಗೆ ಹೊಸತಾಗಿ
ಸೋರಿದ ಜಾಗಗಳನ್ನು ಗುರುತಿಸಿದರು.
ಪರಿಸ್ಥಿತಿ ಹೀಗಿದ್ದರೂ ವಠಾರದ ಹಳಬರೆಲ್ಲ ಬಕೀಟುಗಳನ್ನೋ ಬಾಯಿ ಅಗಲ
ವಿದ್ದ ಪಾತ್ರೆಗಳನ್ನೋ ತಂದು ಛಾವಣಿಯಿಂದ ಕೆಳಕ್ಕೆ ಹರಿಯುವ ನೀರು ಬೀಳುತ್ತಿದ್ದ
ಕಡೆ ಇಟ್ತರು.ಹಾಗೆ ಹಿಡಿದ ನೀರಿಗೆ ಅವರು ದುಡ್ದು ಕೊಡಬೇಕಾದ ಅಗತ್ಯ
ವಿರಲಿಲ್ಲ!
ಚಂಪಾ ವಠಾರದಲ್ಲಿ ಅನುಭವಿಸಿದ ಮೊದಲ ಮಳೆ ಇದು. ಸೋರುವ
ಮನೆಯನ್ನೇನೋ ಹಿಂದೆಯೂ ಆಕೆ ಕಂಡಿದ್ದಳು.ಆದರೆ ರಂಗಮ್ಮನ ವಠಾರದ ಮನೆ
ಹಿಂದಿನ ದಾಖಲೆಗಳನ್ನೆಲ್ಲ ಮೀರಿಸುವ ಹಾಗಿತ್ತು.
ಮಗು ಅಳತೊಡಗಿತು.ಮೀಜಿನ ಮೇಲೆ ಸೋರುತ್ತಿರಲಿಲ್ಲ.ಚಂಪಾ
ಹಾಸಿಗೆ, ಬಟ್ಟೆ ಬರೆಗಳನ್ನು ಅದರ ಮೇಲಿಸಿದಳು.ಇದ್ದ ಪಾತ್ರೆಗಳನ್ನೆಲ್ಲ ಸೋರು
ತ್ತಿದ್ದ ಜಾಗಗಳಿಗೆ ಸಮನಾಗಿ ಹಂಚಿದಳು.ಹುಬ್ಬು ಗಂಟಿಕ್ಕಿ ಮಗುವನ್ನೆತ್ತಿ
ಕೊಂಡಳು.
"ಅಳಬೇಡ.ಅಳಬೇಡ್ವೆ...."ಎಂದು ಸಂತೈಸುವ ಮಾತನ್ನಾಡಿದಳು.
ಈ ಸೌಭಾಗ್ಯ ತನಗೊಬ್ಬಳಿಗೇ ಮೀಸಲಾಗಿರಲಾರದು ಎಂದು ಸಮಾಧಾನಪಟ್ಟು
ಕೊಂಡಳು.ಬಾಗಿಲ ಬಳಿ ಬಂದಾಗ,ಸ್ವಲ್ಪ ಬಾಗಿ ನೋಡಿದಾಗ,ಮಳೆಯ ನೀರು
ಹಿಡಿಯಲೆಂದು ಓಣಿ ಮನೆಗಳವರು ಬಕೀಟು,ಪಾತ್ರೆಗಳನ್ನಿಟ್ಟುದನ್ನು ಕಂಡಳು.ನಗು
ಬಂತು.ತಾನೂ ಒಂದು ಬಕೀಟು ತಂದು,ತನ್ನ ಮನೆಯ ಛಾವಣಿಯಿಂದ ಧಾರೆ
ಕಟ್ಟಿ ಸುರಿಯುತ್ತಿದ್ದ ನೀರನ್ನು ಹಿಡಿದಳು.ಮಳೆಯ ಧಾರೆಯ ಆಚೆ ಎದುರು ಮನೆ
ಬಾಗಿಲಲ್ಲಿ ಮೀನಾಕ್ಷಿ ನಿಂತಿದ್ದಳು.ಹೊಸ ಬಿಡಾರದವಳ ಅನುಭವವನ್ನು ಕಂಡು ಆಕೆಗೆ
ನಗು.ಚಂಪಾವತಿ ಸಿಟ್ಟಾಗಲಿಲ್ಲ;ತಾನು ನಕ್ಕಳು.
ಸಂಜೆಯ ಹೊತ್ತಿಗೆ ಮಳೆ ನಿಂತಿತು. ಗಂಡಸರು ಮನೆಗೆ ಬಂದು,ಹೆಂಗಸರ
ಗೊಣಗಾಟಕ್ಕೆ ಕಿವಿಕೊಟ್ಟರು.
ಆ ರಾತ್ರಿ ರಂಗಮ್ಮ ಹೊರಗೆ ಬರಲೇ ಇಲ್ಲ.ಊಟವಾಯ್ತೆ? ಅಡುಗೆ ಏನು?
ಎಂದು ಯಾರನ್ನೂ ಅವರು ವಿಚಾರಿಸಲಿಲ್ಲ.
ಆ ಬೀದಿಯುದ್ದಕ್ಕೂ ದೀಪ ಆರಿಹೋಯಿತು.ನಡುರಾತ್ರಿಯಲ್ಲಿ ಎಲ್ಲಾ
ದರೂಬಂದು ಬಿಡಬಹುದೆಂದು ರಂಗಮ್ಮ ವಿದ್ಯುತ್ ಹಿಡಿಯನ್ನು ಮೇಲಕ್ಕೆ

ತಳ್ಳಿಬಿಟ್ಟರು.

ತಣ್ಣಗಿದ್ದ ನೆಲದ ಮೇಲೆ ಗಂಡಸರು ಮಕ್ಕಳಿಗಾಗಿಯೂ ತಮಗಾಗಿಯೂ ಚಾಪೆ
ಹಾಸಿಗೆಗಳನ್ನು ಹೆಂಗಸರು ಹಾಸಿದರು.
"ಸುಡುಗಾಡು ಮನೆ!" ಎಂದ ಶಂಕರನಾರಾಯಣಯ್ಯ.
"ಹಾಗನ್ಬೇಡಿ. ರಾತ್ರಿ ಹೊತ್ತು ಕೆಟ್ಟ ಮಾತು..."ತನ್ನ ಅಸಹಾಯತೆಗಾಗಿ
ನೊಂದಿದ್ದ ಗಂಡನನ್ನು ಸಂತೈಸಲೆಂದು ಚಂಪಾ ಮೃದುವಾಗಿ ಮಾತನಾಡಿದಳು.
"ಈ ವಠಾರದಲ್ಲಿ ಜಾಸ್ತಿ ದಿನ ಇರೋಕಾಗೊಲ್ಲ ಚಂಪಾ."
"ಒಳ್ಳೇ ಮನೆ ಸಿಕ್ಕಿದಾಗ ಹೋದರಾಯ್ತು."
"ಆ ಹೆಣ್ಣಿನ ಧ್ವನಿ ದೃಢವಾಗಿರಲಿಲ್ಲ. ಹೆಚ್ಚು ಬಾಡಿಗೆ ಕೊಟ್ಟು ಒಳ್ಳೆಯ ಮನೆಗೆ
ಹೋಗುವ ಶಕ್ತಿ ತಮಗಿಲ್ಲವೆಂದು ಅವರಿಬ್ಬರೂ ತಿಳಿದಿದ್ದರು.
"ನೋಡು. ಇದೇ ನಾನು ನಿನಗೆ ಕೊಡ್ತಿರೋ ಸುಖ."
"ಶ್.....ಮಾತಾಡ್ಬೇಡಿ."
ಗಂಡನ, ತನ್ನ ಮತ್ತು ಮಗುವಿನ ಮೇಲೆ ಬೆಚ್ಚಗಿನ ಹೊದಿಕೆಯನ್ನಾಕೆ ಬಿಗಿ
ಯಾಗಿ ಎಳೆದುಕೊಂಡಳು.
ಆದರೆ ನಡುರಾತ್ರಿಯ ಮೇಲೆ ಮತ್ತೆ ಮಳೆ ಬಂತು. ವಠಾರದ ಸಂಸಾರಗಳು
ಎದ್ದು ಕುಳಿತುಕೊಳ್ಳಬೇಕಾಯಿತು.
ಮರುದಿನವೆಲ್ಲ ರಂಗಮ್ಮ ತನ್ನಷ್ಟಕ್ಕೆ ಗೊಣಗುತ್ತ ಓಡಾಡಿದರು. ಅವರು
ಯರನ್ನೂ ಮಾತನಾಡಿಸಲಿಲ್ಲ. ಯಾರೂ ಅವರನ್ನು ಮಾತನಾಡಿಸಲಿಲ್ಲ.
ಮಧ್ಯಾಹ್ನದ ಬಳಿಕ ಬಿಸಿಲು ಬಂತು. ರಂಗಮ್ಮ ಮೆಲ್ಲನೆ ಹೊರಬಂದು ಹೆಂಗಸ
ರತ್ತ ನಡೆದರು; ಮೌನವನ್ನು ಮುರಿದರು.
__"...ಬಹಳ ಸೋರುತ್ತೇನಮ್ಮ?"
__"...ಅದೇನು ಸುಡುಗಾಡು ಹೆಂಚೋ."
__"...ಹೆಂಚು ಇರಿಸಿದ್ದು ಸರಿಯಾಗ್ಲಿಲ್ಲಾಂತ ಎಂಟು ವರ್ಷದ ಕೆಳಗೆ
ಮತ್ತೊಮ್ಮೆ ಎತ್ತಿ ಹಾಸಿದ್ದಾಯ್ತು."
__"ಏನಪ್ಪಾ ಮಾಡೋದು? ಒಂಟಿ ನಾನು.ಏನಾಗುತ್ತೆ ನನ್ಕೈಲಿ?"
ಹೆಂಗಸರೆಲ್ಲ ಒಂದೇ ರೀತಿಯಾಗಿ ಉದ್ದುದ್ದವಾಗಿ ಉತ್ತರ ಕೊಟ್ಟರು. ಒಂದಂ
ಗುಲ ಜಾಗವೂ ಬೆಚ್ಚಗಿರಲಿಲ್ಲ....ಒಂದು ನಿಮಿಷವೂ ರಾತ್ರೆ ಯಾರೂ ನಿದ್ದೆ ಮಾಡ
ಲಿಲ್ಲ..... ಇತ್ಯಾದಿ.
ರಂಗಮ್ಮನ ಎಡಪಕ್ಕದಲ್ಲಿದ್ದ ಮೂಲ ಕಟ್ಟಡದ ಒಂದು ಮನೆ-ಇಬ್ಬರು
ವಿದ್ಯಾರ್ಥಿಗಳೂ ಅವರ ತಾಯಿಯೂ ಇದ್ದುದು-ಸೋರುತ್ತಿರಲಿಲ್ಲ.
"ಅಲ್ಲಿಯಾದರೂ ನೀವು ಕೆಲವರು ಹೋಗಿ ಮಲಕ್ಕೋಬಹುದಾಗಿತ್ತು ಕಣ್ರಿ...
ಆದರೆ ಆಕೆ ಬೀಗ ಹಾಕ್ಕೊಂಡು ಹೋಗಿದಾಳೆ.ಏನ್ಮಾಡೋಕಾಗುತ್ತೆ?

"ರಂಗಮ್ಮ ಮಾತಿಗೆ ಹಾಗೆ ಹೇಳಿದರು ಅಷ್ಟೆ. ಮಕ್ಕಳೊಡನೆ ಆ ತಾಯಿ ಊರಿಗೆ

ಹೋದಾಗ ಬರಲಿದ್ದ ಮಳೆಯ ನೆನಪು ರಂಗಮ್ಮನಿಗೆ ಆಗಿತ್ತು. ಆದರೆ ಅವರು ಬೀಗದ
ಕೈ ಕೇಳಿರಲಿಲ್ಲ. ಬಾಡಿಗೆ ಸಂದಾಯವಾದ ಮನೆಯ ಬೀಗದ ಕೈ ಕೇಳುವುದೆಂದರೇನು?
ಅಥವಾ ಕೇಳಿ ಇಸಕೊಂಡಿದ್ದರೂ ಎಷ್ಟು ಜನರಿಗೆ ಆ ಜಾಗವನ್ನು ಕೊಟ್ಟು ತೃಪ್ತಿ
ಪಡಿಸುವದು ಸಾಧ್ಯವಿತ್ತು?
ರಂಗಮ್ಮ ಹಲವಾರು ರಟ್ಟುಗಳ ಚೂರುಗಳನ್ನು ಸಂಗ್ರಹಿಸಿ ಇಟ್ಟಿದ್ದರು, ಮಗನ
ನೆರವಿನಿಂದ. ಪ್ರತಿಯೊಂದು ಮನೆಗೂ ನಾಲ್ಕುನಾಲ್ಕನ್ನು ಹಂಚಲು ಅವರು
ಮುಂದಾದರು.
"ಗುಂಡಣ್ಣಾ, ಒಳಗೇ ನಿಂತ್ಕೊಂಡು ಸೋರೋ ಹೆಂಚು ಯಾವುದೂಂತ
ನೋಡಿ ಇದನ್ನೆಲ್ಲಾ ಇಡ್ತೀಯೇನಪ್ಪಾ?"
ಪರೋಪಕಾರಿಯಾದ ಗುಂಡಣ್ಣ, ರಂಗಮ್ಮನ ಅಪೇಕ್ಷೆಯಂತೆ ಸಿದ್ಧನಾದ.
ಆದರೆ ಆತನಿಗೆ, ಛಾವಣಿಯ ಮೇಲಕ್ಕೆ ಹೋಗಿ ಸರಿಪಡಿಸೆಂದು ರಂಗಮ್ಮ ಹೇಳಲಿಲ್ಲ.
ಬೇರೆ ಯಾರೂ ಸೂಚಿಸಲಿಲ್ಲ.
"ಮೊದಲ್ನೇ ದಿವಸದ ಮಳೆಗೆ ಮಾತ್ರ ಹೀಗಾಗುತ್ತೆ" ಎಂದು ಬೇರೆ, ರಂಗಮ್ಮ
ಚಂಪಾವತಿಯ ಎದುರು ಅಂದರು. ವಠಾರದ ಹಳಬರಿಗೆ ಆ ವಿಷಯದ ನಿಜರೂಪ
ತಿಳಿದಿತ್ತು. ರಂಗಮ್ಮ ಹೇಳಿದೊಡನೆ ನಂಬುವ ಮುಗ್ಧೆಯೂ ಚಂಪಾವತಿಯಾಗಿ
ರಲಿಲ್ಲ.
ಅನಂತರ ಪ್ರತಿ ಸಂಚೆಯೂ ಮಳೆ ಸುರಿಯಿತು. ಸಂಚೆ ಬಂದ ಮಳೆ ರಾತ್ರಿ
ಬಹಳ ಹೋತ್ತಿನ ತನಕವೂ ಇರುತ್ತಿತ್ತು. ಸೋರುವುದು ತಪ್ಪಲಿಲ್ಲ.
ನಗರದಲ್ಲಿ ಬೆಚ್ಚಗಿನ ಮನೆಗಳಿದ್ದವರು ಗೊಣಗುತ್ತಿದ್ದರು.
"ಹಗಲು ಯಾಕೆ ಬರುತ್ತೋ ಈ ಮಳೆ. ಸಾಯಂಕಾಲವಂತೂ ಪಿಕ್ಚರಿಗೆ,
ವಾಕಿಂಗಿಗೆ ಯಾವುದಕ್ಕೂ ಹೋಗೋ ಹಾಗಿಲ್ಲ. ನಾವೆಲ್ಲ ನಿದ್ದೆ ಹೋದ ಮೇಲೆ
ರಾತ್ರೆ ಈ ಮಳೆ ಬರಬಾರ್ದೆ?"
ಆದರೆ ರಂಗಮ್ಮನ ವಠಾರದವರು ಹೇಳುತ್ತಿದ್ದುದೇ ಬೇರೆ:
"ಈ ಮಳೆ ಹಗಲಾದರೂ ಬಂದು ಹೋಗಲಪ್ಪಾ. ರಾತ್ರೆ ಬರದೇ ಇರ್ಲಿ.
ಮಕ್ಕಳು ಮರಿ ರಾತ್ರೆ ಹೋತ್ತು ಬೆಚ್ಚಗಿದ್ದು ನಿದ್ದೇನಾದರೂ ಮಾಡುವಂತಾಗಲಪ್ಪಾ."
ಆದರೆ ಮಳೆ ಇವರು ಯಾರ ಅಪೇಕ್ಷೆಯನ್ನೂ ಪರಿಶೀಲಿಸಿದಂತೆ ತೋರಲಿಲ್ಲ.
ಅದು ತನಗಿಷ್ಟ ಬಂದಂತೆ ಸುರಿಯುತ್ತಿತ್ತು.
ಮಳೆಯ ಕಾಟದೊಡನೆ, ವಠಾರಕ್ಕೆ ಕಂಬಳಿ ಹುಳಗಳ ಪ್ರವೇಶವಾಯಿತು.
ಹೆಂಚಿನ ಎಡೆಗಳಲ್ಲೂ ಗೋಡೆಯ ಮೂಲೆಗಳಲ್ಲೂ ಅವು ಮನೆ ಮಾಡಿದುವು. ಜೊರೋ
ಎಂದು ಮಳೆ ಸುರಿಯುತ್ತಿದ್ದರೆ ಟಪ್ಪ ಟಪ್ಪ ಎಂದು ಕಂಬಳಿ ಹುಳಗಳು ಕೆಳಕ್ಕೆ ಉರುಳು
ತ್ತಿದ್ದುವು.

17

ಕಂಬಳಿ ಹುಳಕ್ಕೆ ಸಂಬಂಧಿಸಿದ ಮೊದಲ ಆರ್ತನಾದದ ಕೀರ್ತಿ ಈ ವರ್ಷ ಕಾಮಾ
ಕ್ಷಿಗೆ ಸಂದಿತು. ಮೆಲಿನಿಂದ ಬಿದ್ದ ಕಂಬಳಿ ಹುಳು ಆಕೆಯ ಕಿವಿಯನ್ನು ಸವರಿಕೊಂಡು
ಕೆಳಕ್ಕೆ ಉರುಳಿತು. ಐದು ನಿಮಿಷಗಳೂ ಆಗಿರಲಿಲ್ಲ. ತುರಿಸುತ್ತಲಿದ್ದಂತೆ ಕಿವಿ
ದಪ್ಪಗಾಯಿತು; ಮರದ ತುಂಡಿನಂತಾಯಿತು.
"ಅಯ್ಯಯ್ಯೊ-ಇನ್ನೇನು ಗತಿ?" ಎಂದು ಆಕೆ ಕೂಗಾಡಿದಳು.
ಅದರಿಂದೇನೂ ಅಪಾಯವಿಲ್ಲವೆಂದು ರಂಗಮ್ಮ ವಿವರಿಸಿದರು.
"ಒಂದಿಷ್ಟು ಬಿಸಿನೀರಿನ ಶಾಖ ಕೊಟ್ಟು ಕೊಬರಿ ಎಣ್ಣೆ ಸವರು, ಸರಿ
ಹೋಗುತ್ತೆ." ಎಂದು ಅವರು ಗೃಹವೈದ್ಯ ಹೇಳಿಕೊಟ್ಟರು.
ಅಷ್ಟರಲ್ಲಿ ಬೇರೆ ಹುಡುಗರೂ ಕಿರಿಚಿಕೊಂಡರು. ಹುಡುಗರಿಗೆ, ಹುಳಗಳ ಹರಿ
ದಾಟವನ್ನಷ್ಟೆ ಕಂಡು ತೃಪ್ತಿಯಾಗಿರಲಿಲ್ಲ. ಕೋಲುಗಳಿಂದ ಅವುಗಳನ್ನು ಮುಟ್ಟಿ
ಕೆದಕಿದರು. ಬೆರಳುಗಳಿಂದ ಪರೀಕ್ಷಿಸಿ ನೋಡಿದರು. ಪರಿಣಾಮ_ಕೋಲಾಹಲ.
ಚಂಪಾ ತನ್ನ ಪುಟ್ಟ ಕಂದನನ್ನು ಕಂಬಳಿ ಹುಳಗಳಿಂದ ಜೋಪಾನವಾಗಿಡಲು
ತುಂಬಾ ಶ್ರಮಪಡಬೇಕಾಯಿತು.
ಇತರರ ಗದ್ದಲ ಕಡಮೆಯಾದ ಮೇಲೂ ಕಾಮಾಕ್ಷಿಯ ಸ್ವರ ಕೇಳಿಸುತ್ತಿತ್ತು.
"ಅವರು ಬರ್ಲಿ. ನಾನಿನ್ನು ಒಂದು ಘಳಿಗೇನೂ ಈ ಮನೇಲಿ ಇರೋದಿಲ್ಲ,
ಇವತ್ತೇ ನನ್ನ ತವರೂರಿಗೆ ಹೊರಟ್ಹೋಗ್ತೀನಿ...."
ಕಕ್ಕಸಿಗೆಂದು ತಂಬಿಗೆ ಹಿಡಿದು ಹೊರಟು ಬಂದು ಜಯರಾಮು ಓಣಿಯಲ್ಲಿ
ನಿಂತು, ರಂಗಮ್ಮನವರನ್ನು ನೋಡುತ್ತ ಹೇಳಿದ:
"ವಠಾರ ಕೆಟ್ಹೋಯ್ತು ರಂಗಮ್ನೋರೇ, ವಠಾರ ಕೆಟ್ಟು ಹೋಯ್ತು."
"ಏನೋ ಅದು?"
"ಈ ಮಳೆ_ಕಂಬಳಿ ಹುಳ ಥೂ ಥೂ ಥೂ."
ರಂಗಮ್ಮ, ಹಲ್ಲುಗಳು ಕಡಮೆಯಾಗಿದ್ದ ಒಸಡನ್ನು ಅಮುಕುತ್ತಾ, ಜಯ
ರಾಮುವನ್ನು ದುರುಗುಟ್ಟಿ ನೋಡಿದರು. ಜಯರಾಮು ಆ ನೋಟವನ್ನು ಲೆಕ್ಕಿಸದೆಯೇ
ಮಾತನಾಡಿದ:
"ಕಂಬಳಿ ಹುಳ ಬಂದು ಜನರೂ ಕೆಟ್ಹೋದ್ರು..."
"ಸಾಕು ಕಣೋ."
"ನಾನ್ಹೇಳ್ತೀನಿ ರಂಗಮ್ನೋರೆ. ಈ ವಠಾರಾನ ರಿಪೇರಿ ಮಾಡಿಸೋಕೆ ಆಗೋದೇ
ಇಲ್ಲ."
"ಆಗದಿದ್ರೆ ಅಷ್ಟೇ ಹೋಯ್ತು."
"ಇದಕ್ಕಿರೋದು ಒಂದೇ ಉಪಾಯ ರಂಗಮ್ನೋರೆ. ಈ ಮನೆಗಳ್ನೆಲ್ಲಾ ಕಿತ್ತು
ಹಾಕಿಸಿ, ಈ ಹದಿನಾಲ್ಕು ಹದಿನೈದರ ಬದಲು ನಾಲ್ಕು ಮನೆ ತಾರಸೀದು ಸೊಗಸಾಗಿ

ಕಟ್ಟಿಸಿ."

ರಂಗಮ್ಮ ಕೋಪ-ಸಂಕಟಗಳನ್ನು ತಡೆಯಲಾರದೆ, ಜಯರಾಮುವಿನ ಕಿವಿ
ಹಿಂಡಲೆಂದು ಧಾವಿಸಿ ಬಂದರು. ಆದರೆ ಆತ ಕಕ್ಕಸಿಗೆ ಓಡಿಹೊದ.
ರಂಗಮ್ಮ ಗಟ್ಟಿಯಾಗಿ ಕೂಗಾಡಿದರು:
"ತಾರಸಿ ಮನೆ ಕಟ್ಟಿಸೋಕೆ ನನ್ಹತ್ರ ದುಡ್ಡಿಲ್ಲ. ನಾನು ಯಾರನ್ನೂ ವಠಾರ
ದಲ್ಲಿ ಕಟ್ಟಿ ಹಾಕಿಲ್ಲ. ಬೇಕಾದೋರು ಇರಿ-ಬೇಡವಾದೋರು ಹೋಗಿ!... ನಾನು
ಮಾತ್ರ ಬಂಗ್ಲೇಲಿದೀನೇನು? ನಿಮ್ಮ ಹಾಗೆ ನಾನೂ ಇಲ್ವೇನು ಈ ವಠಾರದಲ್ಲೇ?"
ಯಾರೂ ಮಾತನಾಡಲಿಲ್ಲ. ರಂಗಮ್ಮ ಹಾಗೆ ಕೂಗಾಡತೊಡಗಿದನ್ನು ಕಂಡು
ಎಲ್ಲರಿಗೂ ಸಂತೋಷವಾಯಿತು. ಅವರೆಲ್ಲ ಕೋಲುಗಳಿಗೆ ಪೊರಕೆ ಕಟ್ಟಿ ಕಂಬಳಿ
ಹುಳಗಳನ್ನು ಗುಡಿಸಲು ಮುಂದಾದರು.
ಕತ್ತಲಾಯಿತು. ಇನ್ನು ಒಂದು ಕ್ಷಣವೂ ಇಲ್ಲಿ ಇರಲಾರೆನೆಂದು ಕೂಗಾಡಿದ
ಕಾಮಾಕ್ಷಿ ಗಂಡನ ಮುಖ ನೋಡಿದ ಮೇಲೆ ತೆಪ್ಪಗಾದಳು. ಕಿವಿಯೂ ತುಸು ಮೃದು
ವಾದಂತೆ ಕಂಡಿತು. ಗಂಡ ಅದನ್ನು ಮುಟ್ಟಿದ ಮೇಲೆ ಆಕೆಗೆ ಸ್ವಲ್ಪ ಹಾಯೆನಿಸಿತು. ಆ
ಸಂಜೆ ಆತನೇ ಅಡುಗೆಯ ಕೆಲಸಕ್ಕಿಳಿದ. ಕುದಿಯುತ್ತಿದ್ದ ಸಾರಿಗೆ ಕಂಬಳಿ ಹುಳ ಬೀಳ
ಬಹುದೆಂಬ ಹೆದರಿಕೆಯಿಂದ ಅದನ್ನು ಮುಚ್ಚಿಯೇ ಇಡಬೇಕಾಯಿತು. ಆದರೆ ಕೊತ
ಕೊತ ಎನ್ನುತ್ತಿದ್ದ ಬಿಸಿ ನೀರು ಮತ್ತು ಬೇಳೆ ಮುಚ್ಚಳವನ್ನು ನೂಕಿಕೊಂಡು ಪ್ರತಿ
ಬಾರಿಯೂ ಹೊರಕ್ಕೆ ಹರಿಯುತ್ತಿದ್ದುವು.
"ಇದರ ಮನೆ ಹಾಳಾಯ್ತು!" ಎಂದು ನಾರಾಯಣ ಶಪಿಸಿದ. ಆದರೆ ನಿರ್ದಿಷ್ಟ
ವಾಗಿ ಯಾವುದನ್ನು ಕುರಿತು ತಾನು ಶಪಿಸಿದ್ದೆಂಬುದು ಆತನಿಗೇ ಗೊತ್ತಿರಲಿಲ್ಲ.
ಮಳೆ ಬಿಸಿಲುಗಳ ನಡುವೆ ನೆಗಡಿ, ಕೆಮ್ಮು, ಜ್ವರಗಳು ವಠಾರಕ್ಕೆ ಭೇಟಿ
ಕೊಟ್ಟುವು. ಮಕ್ಕಳು ಮಲಗಿದರು. ದೊಡ್ಡವರನ್ನೂ ಆ ಕಾಯಿಲೆಗಳು ಕಾಡಿದುವು.
ವಠಾರದ ಜನ ಔಷಧಿಗಾಗಿ ಮ್ಯುನಿಸಿಪಲ್ ಆಸ್ಪತ್ರೆಗೆ ಹೋಗಿ ಬಂದರು.
ಸ್ವತಃ ರಂಗಮ್ಮನೂ ಒಂದೆರಡು ದಿನ ಮಲಗಿದ್ದರು.
"ಮಗನಿಗೆ ಕಾಗದ ಬರೀಬೇಕೇ?" ಎಂದು ಅವರನ್ನು ಕೇಳಿದ್ದಾಯ್ತು.
"ಏನೂ ಬೇಡ. ಇದೆಲ್ಲಾ ಎರಡು ದಿವಸದ ಕಾಹಿಲೆ. ಎದ್ಬಿಡ್ತೀನಿ," ಎಂದು
ರಂಗಮ್ಮ ಆತ್ಮವಿಶ್ವಾಸದಿಂದ ಹೇಳಿದರು.
ಕಮಲಮ್ಮ, ಪದ್ಮಾವತಿ, ಮೀನಾಕ್ಶಮ್ಮ, ಪದ್ಮನಾಭಯ್ಯನ ಹೆಂಡತಿ, ಅಹಲ್ಯೆಯ
ತಾಯಿ-ಯಾರಾದರೊಬ್ಬರು ರಂಗಮ್ಮನ ಬಳಿಯಲ್ಲೇ ಇದ್ದು ಸೇವೆ ಮಾಡಿದರು.
ಬಂದು ವಿಚಾರಿಸಿಕೊಂಡು ಹೋಗುವ ವಿಷಯದಲ್ಲಿ ವಠಾರದ ಯಾರೂ ಹಿಂದಾಗಲಿಲ್ಲ.
ರಾಜಮ್ಮ ತನ್ನ ಕಂಪೌಂಡರ್ ಮಗನಿಗೆ ಹೇಳಿ ರಂಗಮ್ಮನಿಗೆ ಔಷಧಿ ತರಿಸಿದಳು,
ಆದರೆ ಆ ಸೀಮೆ ಔಷಧಿಯನ್ನು ರಂಗಮ್ಮ ಕುಡಿಯಲಿಲ್ಲ.

ತಾವೇ ಹೇಳಿದ್ದಂತೆ, ಎರಡು ದಿವಸ ಕಳೆದು ಮೂರನೆಯ ದಿನವೇ ಅವರು
ಎದ್ದು ಕುಳಿತರು. ರಂಗಮ್ಮ ನಕ್ಕಾಗ, ಎಲ್ಲರಿಗೂ ಸಂತೋಷವಾಯಿತು.

ಮೀನಾಕ್ಷಮ್ಮ ಚಂಪಾವತಿ ಹೇಳಿದಳು:
"ರಂಗಮ್ಮ ಗಟ್ಟಿ ಜೀವ ಕಣ್ರೀ. ಎಂಥ ಕಾಹಿಲೇನೇ ಬರ್ಲಿ. ಹುಷಾರಾಗಿ
ಏಳ್ತಾರೆ."
ಅಹಲ್ಯೆಯ ಅಣ್ಣ ರಾಮಚಂದ್ರಯ್ಯ ನೋಡಲು ಹೃಷ್ಟಪುಷ್ಟನಾಗಿಯೇ ಇದ್ದ.
ಆತ ಕಾಹಿಲೆ ಬೀಳಬಹುದೆಂದು ಯಾರೂ ಭಾವಿಸಿರಲಿಲ್ಲ. ಒಂದು ಸಂಜೆ ಹಿಂತಿರು
ಗಿದವನು "ಮೈ-ಕೈ ನೋವು" ಎಂದ. "ಹಸಿವಿಲ್ಲ, ಊಟ ಬೇಡ" ಎಂದು ಬೆಚ್ಚನೆ
ಹೊದ್ದು ಮಲಗಿದ. ಮೈ ಕಾದು ಕೆಂಡವಾಯಿತು. ತಾಯಿ ಗಾಬರಿಯಾದಳು.
ಕಾಯಿಲೆ ಎಂಬ ಪದಕ್ಕೆ ಸಾವು ಎಂಬ ಅರ್ಥವೇ ಆಕೆಗೆ ತೋರುತ್ತಿದ್ದುದು. ಆಕೆಯ
ಗಂಡ ತೀರಿಕೊಂಡಿದ್ದುದೂ ಹಾಗೆಯೇ. ಮಗ ಒಪ್ಪಲಿಲ್ಲವೆಂದು ಆಕೆ ಕೇಶಮುಂಡನ
ಮಾಡಿಸಿಕೊಂಡಿರಲಿಲ್ಲ. "ಯಾವುದಾದರೂ ಕ್ಷೇತ್ರಕ್ಕೆ ಹೋಗಿ ಮಾಡಿಸ್ಕೋಬೇಕು"
ಎಂದು, ಕೇಳಿದವರಿಗೆ ಹೇಳುತಿದ್ದಳು. 'ಸಕೇಶಿಯಾಗಿ ಉಳಿದದ್ದಕ್ಕೆ ದೇವರು ಈ
ಶಿಕ್ಷೆ ಕೊಡುತ್ತಿದ್ದಾನೆಯೆ?' ಎಂದು ಆ ತಾಯಿ ಮನಸ್ಸಿನಲ್ಲೆ ಹೆದರಿದಳು.
ಬಂದು ನೋಡಿದ ಚಂಪಾ ಅಂದಳು:
"ಔಷಧಿ ತರೋಕೆ ತಡಮಾಡ್ಬೇಡಿ."
ಕಂಗಾಲಾಗಿದ್ದ ತಾಯಿ ಕೇಳಿದಳು:
"ಎಲ್ಲಿಂದ ತರೋಣ್ವೆ ಅಹಲ್ಯಾ? ಮುನಿಸಿಪಾಲ್ಟಿ ಆಸ್ಪತ್ರೆಯಿಂದ್ಲೇನೇ!"
ಆಕೆಯ ಗಂಡನಿಗೆ- ಅಹಲ್ಯೆಯ ತಂದೆಗೆ- ಅಲ್ಲಿಂದಲೇ ತಂದಿದ್ದರು.
"ಬೇಡಮ್ಮ. ಮಲ್ಲೇಶ್ವರದಲ್ಲಿ ಒಬ್ರು ಡಾಕ್ಟರಿದಾರೆ."
"ನಿಂಗೆ ಗೊತ್ತೆ ಅಹಲ್ಯಾ?"
ಅಹಲ್ಯೆ ತಡವರಿಸಿ ಹೇಳಿದಳು:
"ರಾಜಮ್ಮನವರ ಮಗ ಅಲ್ಲೇ ಕೆಲಸ ಮಾಡ್ತಾರಮ್ಮ."
ಅಹಲ್ಯೆಯ ತಾಯಿ ಅಳುತ್ತ ರಾಜಮ್ಮನವರಲ್ಲಿಗೆ ಹೋದಳು.
"ಏನಾದರೂ ಮಾಡಿ ರಾಜಮ್ಮ. ನಿಮ್ಮ ಮಗನಿಗೆ ಹೇಳಿ."
"ಅಳಬೇಡಿ. ಯಾಕೆ ಅಳ್ತೀರಾ?" ಎಂದು ರಾಜಮ್ಮನ ಮಗ ವೆಂಕಟೇಶ ಆ
ತಾಯಿಯನ್ನು ಹಿಂಬಾಲಿಸಿ ಬಂದ. ರಾಮಚಂದ್ರಯ್ಯನ ನಾಡಿ ಹಣೆ ಮುಟ್ಟಿ
ನೋಡಿದ. ಅಹಲ್ಯಾ ಸಜಲನಯನೆಯಾಗಿ ವೆಂಕಟೇಶನನ್ನೇ ನೋಡಿದಳು.
"ಡಾಕ್ಟರನ್ನ ಕರಕೊಂಡು ಬರ್ಬೇಕೇನಪ್ಪಾ?" ಎಂದು ತಾಯಿ ಕೇಳಿದಳು.
"ಈಗೇನು ಬೇಡಿ. ಒಂದೆರಡು ದಿವಸ ಔಷಧಿ ತಗೊಳ್ಲಿ. ಆಮೇಲೆ ಬೇಕಾ
ದರೆ ಡಾಕ್ಟರನ್ನು ಕರಕೊಂಡ್ಬರ್ತೀನಿ."
"ದುಡ್ಡು ಎಷ್ಟು ಕೊಡ್ಬೇಕಪ್ಪ ಈಗ?"
"ಈಗ ಬೇಡಿ. ಆಮೇಲೆ ಕೊಟ್ಟೀರಂತೆ...ಶೀಷೆ ಇದೆಯೇನು?"

"ಇದೆ."

"ನನ್ಜತೇಲಿ ಯಾರಾದರೂ ಬನ್ನಿ. ಔ‍ಷಧಿ ಕೊಡಿಸ್ತೀನಿ."
ತಾಯಿ ಮಗಳ ಮುಖ ನೋಡಿದಳು.
"ಹೋಗಿ ತರ್ತೀಯಾ ಅಹಲ್ಯಾ?"
"ಹೂಂ."
"ಒಬ್ಬಳೇ ಬರೋಕಾಗುತ್ತಾ ವಾಪಸ್ಸು?"
"ಹೂಂ."
ಅಹಲ್ಯಾ ವೆಂಕಟೇಶನ ಹಿಂದೆ ಹೊರಟು ಹೋದಳು. ವಠಾರದ ಹಲವರು
ಅದನ್ನು ನೋಡಿದರು. ರಾಮಚಂದ್ರಯ್ಯ ಕಾಹಿಲೆ ಮಲಗಿದ್ದ. ಯಾರೂ ಮಾತ
ನಾಡಲಿಲ್ಲ.
ಅಹಲ್ಯಾ ಔಷಧಿ ತಂದಾಗ, ಮಗನ ಯೋಚನೆಯಲ್ಲೇ ಇದ್ದ ತಾಯಿ, 'ಒಬ್ಬಳೇ
ಬರೋದು ಕಷ್ಟವಾಯ್ತೇ?' ಎಂದು ಮಗಳನ್ನು ಕೇಳಲಿಲ್ಲ.
ಔಷಧಿ ಸೇವನೆ ಕ್ರಮವಾಗಿ ನಡೆಯಿತು.
ಮಾರನೆಯ ದಿನವೂ ವೆಂಕಟೇಶನ ಜತೆಯಲ್ಲಿ ಅಹಲ್ಯೆ ಆಸ್ಪತ್ರೆಗೆ ಹೋದಳು.
ಜ್ವರ ಹಾಗೆಯೇ ಇತ್ತು.
ಮೂರನೆಯ ಸಂಜೆ ಪುಟ್ಟ ಕಾರೊಂದು ವಠಾರರೆದುರು ಬೀದಿಯಲ್ಲಿ ನಿಂತಿತು.
'ಯಾರೋ ವಿಳಾಸ ತಪ್ಪಿ ಬಂದಿರಬೇಕು,' ಎಂದುಕೊಂಡರು, ಹೊರಗೇ
ನಿಂತಿದ್ದ ರಂಗಮ್ಮ.
ರಂಗಮ್ಮನ ವಠಾರದ ಮುಂದೆ ಕಾರು ನಿಂತಿದನ್ನು ಬೀದಿಯ ಆಚೆಗಿನವರೂ
ವಠಾರದವರೂ ಜತೆಯಾಗಿಯೇ ನೋಡಿದರು.
ವೆಂಕಟೇಶ ಹೊರಕ್ಕಿಳಿದಾಗ, ಕಾರು ತಮ್ಮ ವಠಾರಕ್ಕೇ ಬಂದುದೆಂದು ತಿಳಿದು
ರಂಗಮ್ಮನಿಗೆ ಸಂತೋಷವಾಯಿತು. ಆತನ ಕೈಯಲ್ಲಿ 'ಬ್ಯಾಗ್' ಇತ್ತು. ಅವನ
ಹಿಂದೆ ಡಾಕ್ಟರು ಬಂದರು.
ಆಗ ಎಲ್ಲರಿಗೂ ರಾಮಚಂದ್ರಯ್ಯನನ್ನು ನೋಡಲು ಡಾಕ್ಟರು ಬಂದರೆಂಬುದು
ಸ್ಪಷ್ಟವಾಯಿತು. ರಾಜಮ್ಮ ಬೀಗುತ್ತ ಮಗನ ಹಿಂದೆ ತಾನೂ ನಡೆದಳು.
ವಠಾರವನ್ನು ನೋಡಿ 'ಹುಂ' ಎಂದರು ಡಾಕ್ಟರು. ರೋಗಿಯನ್ನು ಆಸ್ಪತ್ರೆಗೆ
ಸಾಗಿಸಬೇಕಾಗುವುದೇನೋ ಅನಿಸಿತು ಅವರಿಗೆ. ಪರೀಕ್ಷಿಸಿದರು. ಅವರು ಮುಖ
ಗಂಟಿಕ್ಕಲಿಲ್ಲ ಎಂದು ವೆಂಕಟೇಶನಿಗೆ ಸಮಾಧಾನ.
"ಛಳಿ ಜ್ವರ. ಮಲೇರಿಯಾ. ಇನ್ನೆರಡೇ ದಿವಸ. ಇಳಿದು ಹೋಗುತ್ತೇ,"
ಎಂದು ಡಾಕ್ಟರು ವೆಂಕಟೇಶನನ್ನೂ ರೋಗಿಯ ತಾಯಿ ಮತ್ತು ತಾಯಿಯ ಮಗಳನ್ನೂ
ನೋಡುತ್ತ ಹೇಳಿದರು.
ಮತ್ತೆ ಕಾರಿನತ್ತ ಹೋಗುತ್ತ ಅವರೆಂದರು:

"ಇದೇ ಏನಯ್ಯಾ ನಿನ್ನ ವಠಾರ? ಮೈ ಗಾಡ್! ಹುಂ!"