ರಂಗಮ್ಮನ ವಠಾರ/೧೫

ವಿಕಿಸೋರ್ಸ್ ಇಂದ
Jump to navigation Jump to search

"ಇಲ್ಲ."
ಮಾತು ನಿಂತಿತು. ಮತ್ತೆರಡು ನಿಮಿಷಗಳಲ್ಲಿ ಆತ ಗೊರಕೆ ಹೊಡೆಯುವುದು
ಕೇಳಿಸಿತು.

೧೫

ಆ ವರ್ಷ ವಠಾರಕ್ಕೆ ಬಂದ ಮೂವರು ಹುಡುಗರಿಗೂ ಬೆಂಗಳೂರು ಹೊಸ
ದಾಗಿತ್ತು. ಅಂತಹ ವಠಾರ ಜೀವನವೂ ಹೊಸದು. ಅವರಲ್ಲಿಬ್ಬರು ಊರಲ್ಲಿದ್ದಾಗ
ಕತೆ ಕಾದಂಬರಿಗಳಲ್ಲಿ ಬೆಂಗಳೂರಿನ ವಿಷಯ ಸಾಕಷ್ಟು ಓದಿ ನಾಲಿಗೆ ಚಪ್ಪರಿಸಿದ್ದರು.
ಈಗ ಬೆಂಗಳೂರು ಜೀವನ ಮೈಗೂಡಲು ಅವರಿಗೆ ಹೆಚ್ಚು ಕಾಲ ಹಿಡಿಯಲಿಲ್ಲ.
ಇನ್ನೊಬ್ಬ_ ಪರಮೇಶ್ವರಪ್ಪನ ಕಾಗದ ತಂದುಕೊಟ್ಟು ರಂಗಮ್ಮನೊಡನೆ
ಮಾತನಾಡಿದ ಹುಡುಗ_ ಒಳ್ಳೆಯವನಾಗಿದ್ದ. ಆದರೆ ಆತ ಪುಸ್ತಕದ ಕೀಟ. ಪಠ್ಯ
ಪುಸ್ತಕಗಳ ಹೊರಗೆ ಬೇರೆ ಪ್ರಪಂಚವಿದೆ ಎಂಬುದನ್ನು ಎಂದೂ ಒಪ್ಪಿದವನಲ್ಲ. ಎರಡು
ವಾರಗಳಿಗೊಮ್ಮೆ ತಪ್ಪದೆ ಊರಿಗೆ ಕಾಗದ ಬರೆಯುತ್ತಿದ್ದ. ನಿಯಮಕ್ಕೆ ಮೀರಿ
ಹೋಟೆಲುಗಳಿಗೆ ಭೇಟಿ ಕೊಡುತ್ತಿರಲಿಲ್ಲ. ಸಂಜೆ ಒಬ್ಬನೇ ತಿರುಗಾಡಲು ಹೋಗು
ತ್ತಿದ್ದ. ಆದರೆ ಆಗಲೂ ಕಂಕುಳಲ್ಲೊಂದು ಪುಸ್ತಕವಿರುತಿತ್ತು. ಕತ್ತಲಾದೊಡನೆ
ಕೊಠಡಿಗೆ ಹಿಂತಿರುಗುತಿದ್ದ.
ಸೂಕ್ಷ್ಮ ನಿರೀಕ್ಷೆಯಲ್ಲಿ ಸಮರ್ಥನಾದ ಜಯರಾಮುವಿಗೆ ಈ ಹುಡುಗನ ಗುಣ
ತಿಳಿಯಿತು. ಸ್ನೇಹಿತರನ್ನು ಗಳಿಸಿಕೊಳ್ಳುವ ಆತುರವೇನೂ ಜಯರಾಮುವಿಗೆ ಇರ
ಲಿಲ್ಲವಾದರೂ, ಒಂದೇ ವಠಾರವೆಂದ ಮೇಲೆ ಮಾತನಾಡಿಸದೆ ಇರಬಾರದೆಂದು
ಭಾವಿಸಿದೆ.
ವಠಾರಕ್ಕೆ ಅಂಚೆಯವನು ಬರುತ್ತಿದ್ದುದು ಎಂದಾದರೊಮ್ಮೆ. ಹೊರ ಅಂಗಳ
ದಲ್ಲಿ ಯಾರಾದರೂ ಇದ್ದರೆ, ಆ ಬೀದಿಯಲ್ಲಿ ಅಂಚೆಯವನು ಹಾದು ಹೋದಾಗ
ಎಲ್ಲರ ಕಣ್ಣುಗಳೂ ಅವನ ಕಡೆ ತಿರುಗುತ್ತಿದ್ಧವು. ಆತ ವಠಾರದೊಳಕ್ಕೆ ಬರುವ ಕೃಪೆ
ತೋರಿದ ದಿನ, ಎಲ್ಲರ ಕತ್ತುಗಳೂ ನೀಳವಾಗುತ್ತಿದ್ದುವು. ಕಾಗದ ತಮ್ಮದಿರಬಹುದು,
ತಮ್ಮದೇ ಇರಬೇಕು ಎಂದು ಪ್ರತಿಯೊಂದು ಮನೆಯವರೂ ಭಾವಿಸುತ್ತಿದರು. ಆಗ
ರಂಗಮ್ಮನೂ ಹೊರ ಬಂದು, ಕಾಗದ ಯಾವುದಾದರೂ ಮನೆಯ ಒಳಹೋಗುವು
ದನ್ನು ನೋಡುತ್ತಿದ್ದರು. ಆಗ ಇತರರಿಗೆ ನಿರಾಶೆಯಾಗುತ್ತಿತ್ತು. ಆದರೂ ಅಪ್ಪಿ
ತಪ್ಪಿ ತಮ್ಮ ಕಾಗದವೇ ಆ ಮನೆಯೊಳಗೆ ಹೋಗಿರಬಹುದೆಂಬ ಶಂಕೆ ಕೆಲವರಿಗೆ ತಲೆ

ದೋರದೆ ಇರುತ್ತಿರಲಿಲ್ಲ. ಹೀಗಾಗಿ, ಕಾಗದ ಬಂದು ಯಾವುದಾದರೂ ಮನೆ ಸೇರಿ

ಐದು ನಿಮಿಷಗಳಾಗುವವರೆಗೂ ಅವರು ಕಾಯುತ್ತಿದ್ದರು.
ಒಂದು ದಿನ ಅಂಚೆಯವನು ಗೇಟಿನ ಹೊರಗೆ ನಿಂತು, ಒಂದು ಲಕೋಟೆ
ಯನ್ನು ಕೈಯಲ್ಲೆತ್ತಿ ಹಿಡಿದ. ಹಲವು ಮುಖಗಳು ಸ್ವಾಗತ ಬಯಸಿದುವು.
ಅಂಚೆಯವನು ಕೇಳಿದ:
"ಇಲ್ಲಿ ರಾಜಶೇಖರ ಅಂತ ಯಾರಿದಾರೆ? ಪಿ.ವೈ.ರಾಜಶೇಖರ."
"ಯಾರೂ ಇಲ್ವಲ್ಲಾ!" ಎಂದರು ಒಬ್ಬಿಬ್ಬರು ಹೆಂಗಸರು.
"ಮಹಡಿ ಮೇಲಿರೋರೋ ಏನೋ," ಎಂದಳು ಇನ್ನೊಬ್ಬಳು.
"ಅವರು ಚಂದ್ರಶೇಖರಯ್ಯ ಕಣೇ," ಎಂದು ಮತ್ತೊಬ್ಬಳು ಸಂದೇಹ ಪರಿಹರಿ
ಸಿದ್ದೂ ಆಯಿತು.
"ಅವರಲ್ಲ, ಅವರಲ್ಲ," ಎಂದು ಅಂಚೆಯವನೂ ಧ್ವನಿಗೂಡಿಸಿದ.
ಮೇಲೆ ಪರೀಕ್ಷೆಗೆ ಓದ್ದುತ್ತ ಕುಳಿತಿದ್ದ ಜಯರಾಮು ಅಂಚೆಯವನನ್ನು ನೋಡಿ
ಕೆಳಕ್ಕೆ ಇಳಿದು ಬಂದ. ಅಂಚೆಯವನು ಮತ್ತೊಮ್ಮೆ ತನ್ನ ಪ್ರಶ್ನೆಯನ್ನು ಕೇಳಿ
ದ್ದಾಯಿತು.
ಆ ಕಾಗದ, ಹೊಸತಾಗಿ ಬಂದ ವಿದ್ಯಾರ್ಥಿಗಳದಿರಬಹುದೆಂದು ಜಯರಾಮು
ವಿಗೆ ಹೊಳೆಯಿತು. ಹೊರಗೆ ಬರುತ್ತಿದ್ದ ರಂಗಮ್ಮನನ್ನು ಉದ್ದೇಶಿಸಿ ಆತ ಕೇಳಿದ:
"ಹೊಸದಾಗಿ ಬಂದಿರೋರಲ್ಲಿ ರಾಜಶೇಖರ ಅಂತ ಒಬ್ರಿದಾರೆ. ಅಲ್ವೆ
ರಂಗಮ್ನೋರೆ?"
"ಅದೇ ಆ ಓದೋ ಹುಡುಗರ ಪೈಕಿ?"
"ಹೂಂ. ಹೌದು."
"ಇದಾನೆ__ಇದಾನೆ."
ಅಂಚೆಯವನು ಕಾಗದವನ್ನು ಜಯರಾಮುವಿಗೆ ಕೈಗೆ ಕೊಟ್ಟು ಹೊರಟು
ಹೋದ.
ತನಗೆ ಕಾಗದ ಬರೆಯುವಂತಹ ನೆಂಟರಿಷ್ಟರು ಯಾರೂ ಇಲ್ಲದೆ ಇದ್ದ ರಾಜಮ್ಮ
ಕೇಳಿದಳು:
"ಯಾವೂರಿಂದ ಬಂದಿದೆ?"
ಜಯರಾಮು ಮಾತನಾಡಲಿಲ್ಲ. ಆ ಹೆಂಗಸರನ್ನೆಲ್ಲ ಆತ ದುರದುರನೆ ನೋಡಿ,
ಕಾಗದದೊಡನೆ ಮಹಡಿಯ ಮೆಟ್ಟಲುಗಳನ್ನೇರಿದ.
ಲಕೋಟೆಯ ಮೇಲೆ ವಿಳಾಸ ಬರೆದಿತ್ತು:
ಪಿ.ವೈ.ರಾಜಶೇಖರನಿಗೆ, ರಂಗಮ್ಮನ ವಠಾರ, ಶ್ರೀರಾಮಪುರ, ಬೆಂಗಳೂರು
ಸಿಟಿ. ಸಿಟಿಯ ಮುಂದೆ ಕತ್ತರಿ ಗುರುತು ಹಾಕಿ ನಾಲ್ಕು ಚುಕ್ಕೆ ಇಟ್ಟಿದ್ದರು. ಅದರ
ಕೆಳಗೆ ಕೆಂಪು ಮಸಿಯಲ್ಲಿ ಬೆಂಗಳೂರು ಎಂದು ಇಂಗ್ಲಿಷಿನಲ್ಲಿತ್ತು. ಅದನ್ನು ಆಂಚೆ

ಯವರು ಬರೆದಿರಬೇಕು ಎಂದು ಜಯರಾಮು ಊಹಿಸಿಕೊಂಡ.

ಅವನ ಕಲ್ಪನೆ ಆ ವಿವಿಧ ಪದಗಳ ಸುತ್ತಲೂ ಸ್ವಲ್ಪ ಹೊತ್ತು ಸುಳಿದಾಡಿತು.
ಅದು ಹುಡುಗು ಕೈ ಬರಹ. ದುಂಡಗಿತ್ತು. ರಾಜಶೇಖರನ ತಮ್ಮ ಬರೆದಿದ್ದನೇನೊ?
ಅಥವಾ ತಂಗಿ?..... ಆ ಮೂವರಲ್ಲಿ ಯಾವನು ರಾಜಶೇಖರ? ಆ ಕಾಗದದಲ್ಲಿ ಏನಿ
ದೆಯೊ? ತನ್ನ ತಂದೆ ತನಗೆ ಬರೆಯುವಂತೆ ಅವನ ತಂದೆ ಆತನಿಗೆ ಬರೆದಿರಬಹುದಲ್ಲವೆ?
ಕಾಗದದ ಒಕ್ಕಣೆಯನ್ನು ಊಹಿಸಿಕೊಳ್ಳುವುದು ಜಯರಾಮುವಿಗೆ ಕಷ್ಟ
ವಾಗಿರಲಿಲ್ಲ:
'ಕುಶಲ' ಎಂದಿರಬಹುದು ಮೇಲ್ಗಡೆ. ಇಲ್ಲವೆ, ಕಾಗದದ ಮೂಲೆಯಲ್ಲಿ 'ಕ್ಷೇಮ'
ಎಂದು ಬರೆದು ಕೆಳಗೆ ಎರಡು ಗೆರೆ ಎಳೆದಿರಬಹುದು.....ಚಿ||ಗೆ ಮಾಡುವ
ಆಶೀರ್ವಾದ....ನಾವು ಇಲ್ಲಿ ಎಲ್ಲರೂ ಕ್ಷೇಮ....ನಿನ್ನ ಕ್ಷೇಮದ ಬಗ್ಗೆ ಬರೆಯುತ್ತಿರು.....
ಹಾಗೆ ಕಾಗದ ಬರೆದ ತಂದೆ....ರಾಜಶೇಖರನ ತಂದೆಯನ್ನು ಚಿತ್ರಿಸಿಕೊಳ್ಳಲು
ಜಯರಾಮು ಯತ್ನಿಸಿದ. ಆ ಆಕೃತಿ ಅಷ್ಟು ಸ್ಪಷ್ಟವಾಗಿ ಮೂಡಲಿಲ್ಲ. ತನ್ನ
ಯೋಚನೆಗಳನ್ನು ಕಂಡು ಆತನಿಗೆ ನಗು ಬಂತು.
ರಾಧಾ ಬಾಗಿಲಿನಿಂದ ಹೊರಕ್ಕೆ ಇಣಕಿ ನೋಡಿ ಕೇಳಿದಳು:
"ಯಾರದಣ್ಣ ಕಾಗದ?"
"ನಮಗಲ್ವೆ," ಎಂದ ಜಯರಾಮು, ತನ್ನ ಯೋಚನೆಗಳನ್ನು ನಿಲ್ಲಿಸಿ. ಆ ಸ್ವರ
ದಲ್ಲಿ ಸಿಡುಕಿತ್ತು. ವಠಾರದ ಇತರ ಹೆಂಗಸರು ಹಾಗೆ ತನ್ನ ತಂಗಿಯೂ ಅತಿ ಕುತೂಹಲಿ
ಯಾಗುವುದು ಆತನಿಗೆ ಇಷ್ಟವಿರಲಿಲ್ಲ.
ಜಯರಾಮು ಮೊದಲ ಕೊಠಡಿಯ ಬಾಗಿಲು ಸಂದಿಯೊಳಗಿಂದ ಲಕೋಟೆ
ಯನ್ನು ಒಳಕ್ಕೆ ತಳ್ಳಿದ.
ತರಗತಿ ಮುಗಿದೊಡನೆ ಎಂದಿನಂತೆ ಬಂದವನು ಆ ಹುಡುಗನೇ. ಕಾಲಲ್ಲಿ
ಚಪ್ಪಲಿ ಇಲ್ಲದೆ, ಆತ ಮೆಟ್ಟಲೇರಿದರೆ ಸದ್ದಾಗುತ್ತಿರಲಿಲ್ಲ. ಬಾಗಿಲ ಬೀಗವನ್ನೂ
ಸಾವಧಾನವಾಗಿ ತೆಗೆಯುತ್ತಿದ್ದ.
ಕಿಟಕಿಯ ಬಳಿ ಕುಳಿತಿದ್ದ ಜಯರಾಮುಗೆ, ಆ ಹುಡುಗ ಬಂದುದು ತಿಳಿಯಿತು.
ಆತನೇ ರಾಜಶೇಖರನಿರಬಹುದು; ಕಾಗದ ತೆರೆದು ಓದುತ್ತಿರಬಹುದು ಎಂದು ಜಯ
ರಾಮು ಕಲ್ಪಿಸಿಕೊಂಡ. ಸ್ವಲ್ಪ ಹೊತ್ತದ ಮೇಲೆ ಎದ್ದು, ಆ ಹುಡುಗನನ್ನು ಮಾತ

ನಾಡಿಸೋಣವೆಂದು ಆ ಕೊಠಡಿಯತ್ತ ಸಾಗಿದ.
ಚಾಪೆಯ ಮೇಲೆ ಕುಳಿತುಕೊಂಡು ತಲೆಬಾಗಿಸಿ ಎರಡನೆಯ ಸಾರೆ ಕಾಗದ ಓದು
ತ್ತಿದ್ದ ಹುಡುಗ ಮುಖವೆತ್ತಿ ಬಾಗಿಲಿನತ್ತ ದಿಟ್ಟಿಸಿದ. ತಾನು ಎಷ್ಟೋ ದಿನಗಳಿಂದ
ನೋಡುತ್ತಲಿದ್ದ ವಠಾರದವನು ಅಲ್ಲಿ ನಿಂತಿದುದನ್ನು ಕಂಡು ಆ ಹುಡುಗನಿಗೆ ಸಂಕೋ
ಚವೂ ಆಯಿತು, ಸಂತೋಷವೂ ಆಯಿತು. ಎದ್ದು ನಿಂತು ಆತ ಹೇಳಿದ:
"ಒಳಗ್ಬನ್ನಿ."
"ಪರವಾಗಿಲ್ಲ....ಅಂಚೆಯವನು ಒಂದು ಕಾಗದ ತಂದ್ಕೊಟ್ಟ. ಒಳಗೆ ಹಾಕ್ದೆ. ಸಿಗ್ತೇನು?"
"ಓ__ಸಿಕ್ತು."
"ನೀವೇನಾ ರಾಜಶೇಖರ ಅಂದರೆ?"
"ಹೌದು. ಒಳಗ್ಬನ್ನಿ. ನಿಮ್ಮ ಹೆಸರು ಜಯರಾಮು ಅಲ್ವಾ?"
"ಹೌದು.ಜಯರಾಂ ಅಂತ," ಎಂದು ಸ್ವಲ್ಪ ತಿದ್ದುವ ಧ್ವನಿಯಲ್ಲಿ ಜಯ
ರಾಮು ಹೇಳಿದ. ತನ್ನ ತಾಯಿ ಹೆಸರು ಹಿಡಿದು ಕರೆಯುವುದನ್ನು ಕೇಳಿ ತಿಳಿದು
ಕೊಂಡಿರಬೇಕು ಎಂದು ಲೆಕ್ಕ ಹಾಕಿದ.
ಜಯರಾಮು ಒಳಗೆ ಬರಲಿಲ್ಲವೆಂದು ರಾಜಶೇಖರ ನಿಂತೇ ಇದ್ದ. ಆತನ
ದೃಷ್ಟಿ ಜಯರಾಮು ಹಿಡಿದಿದ್ದ ಪುಸ್ತಕದತ್ತ ಹೋಯಿತು. ತಾನು ಸೆಪ್ಟೆಂಬರ್ ವೀರ
ನೆಂದು ಹೇಳಬೇಕಾದ ಹೊತ್ತು ಬಂತು ಎಂದುಕೊಂಡ ಜಯರಾಮು.
ಮಾತು ಮುಂದುವರಿಸಬೇಕೋ ಬೇಡವೊ ಎಂದು ಸಂಕೋಚಪಡುತ್ತಲೆ ರಾಜ
ಶೇಖರ ಕೇಳಿದ:
"ನೀವು ಕ್ಲಾಸಿಗೆ ಹೋಗೊಲ್ವೊ?"
"ಇಲ್ಲಾರಿ ಸೆಪ್ಟೆಂಬರ್ಗೆ ಕಟ್ಟಿದೀನಿ."
"ಬಿ.ಎಸ್.ಸೀನೆ?"
ಇದು ನುಂಗಲಾರದ ತುತ್ತು ಎನ್ನಿಸಿತು ಜಯರಾಮುಗೆ.
"ಅಲ್ಲ. ಇಂಟರ್. ಒಂದು ಪಾರ್ಟಿದೆ, ಅಷ್ಟೆ."
ಕಣ್ಣುಗಳನ್ನು ಮಿನುಗಿಸುತ್ತ ರಾಜಶೇಖರ ಕೇಳಿದ:
"ನಿಮಗೆ ಪರಮೇಶ್ವರಪ್ಪ ಗೊತ್ತಾ?"
ಪರಮೇಶ್ವರಪ್ಪನ ವಿಷಯವಾಗಿ ಆ ಹುಡುಗನಿಗೆ ತುಂಬ ಗೌರವ ಎಂಬುದು ಆ
ಧ್ವನಿಯಿಂದಲೆ ಸ್ಪಷ್ಟವಾಗುತ್ತಿತ್ತು.
"ಹೌದು ಹೋದ ವರ್ಷ ಇಲ್ಲೇ ಇದ್ರು."
"ಅವರ ಸಹಾಯದಿಂದಲೇ ನಮಗೆ ಈ ಕೊಠಡಿ ಸಿಗ್ತು."
ಪರಮೇಶ್ವರಪ್ಪ ರಂಗಮ್ಮನಿಗೆ ಕಾಗದ ಬರೆದಿದ್ದ ವಿಷಯವಂತೂ ಜಯ
ರಾಮುಗೆ ಗೋತ್ತಿತ್ತು.
"ಪರಮೇಶ್ವರಪ್ಪ ಈಗೇನು ಮಾಡ್ತಾರೆ?"
"ಓ_ಅವರು ಬೆಳಗಾಂವಿಗೆ ಹೊರಟ್ಹೋದ್ರು. ವಕೀಲಿ ಓದ್ತಾರಂತೆ."
"ಅದ್ಯಾಕೆ, ಅಷ್ಟು ದೂರ?"
"ಅಲ್ಲಿ ಮೇಷ್ಟ್ರ ಕೆಲಸ ಸುಲಭವಾಗಿ ಸಿಗ್ತದಂತೆ. ಅವನ್ನೂ ಮಾಡ್ಕಂಡು ವಕೀಲಿ
ಓದ್ತಾರಂತೆ."
"ಓ...ಹಾಗಾ?"
ಸಂಭಾಷಣೆ ಮುಂದುವರಿಸಲು ಬೇರೆ ವಿಷಯವಿಲ್ಲದೆ ರಾಜಶೇಖರ

ತಡವುತ್ತಿದ್ದಂತೆ ಕಂಡಿತು. ಜಯರಾಮುವಂತೂ ಮೊದಲೇ ಕಡಮೆ ಮಾತಿನ
ಮಹಾನುಭಾವ.
"ಆಗಲಿ, ಬರ್ತೀನಿ ರಾಜಶೇಖರ್."
"ಹೂಂ."
ಜಯರಾಮು ತನ್ನ ಬಾಗಿಲಿನತ್ತ ತಿರುಗಿದೊಡನೆಯೇ ರಾಜಶೇಖರ ಕರೆದುದು
ಕೇಳಿಸಿತು.
"ಸಾರ್__ಒಂದ್ನಿಮಿಷ."
ಜಯರಾಮು ತಿರುಗಿ ನೋಡಿದ. ಕಾಗದವನ್ನು ಕೈಲಿ ಹಿಡಿದಿದ್ದಂತೆಯೇ ರಾಜ
ಶೇಖರ ತನ್ನ ಕೊಠಡಿಯ ಹೊರಕ್ಕೆ ಬಂದಿದ್ದ. 'ಸಾರ್' ಸಂಬೋಧನೆಯಿಂದ ಜಯ
ರಾಮುಗೆ ಹೇಗೆ ಹೇಗೋ ಆಯಿತು.
"ಏನು?"
"ನಾಳೆ ನನಗೊಂದು ಮನಿಯಾರ್ಡರ್ ಬರುತ್ತೆ. ಇಲ್ಲಿಗೆ ಪೋಸ್ಟ್ ಬರೋದು
ಎಷ್ಟು ಘಂಟೆಗೆ_ಹೇಳ್ತೀರಾ?"
"ಮನಿಯಾರ್ಡರೆ? ಅದೆಲ್ಲಾ ಬರೋದು ಎರಡ್ನೇ ಪೋಸ್ಟ್ ನಲ್ಲಿ. ಈ ಬೀದಿಗೆ
ಸುಮಾರು ಎರಡು ಘಂಟೆಗೆ ಬರ್ತಾನೆ."
ರಾಜಶೇಖರನ ಮುಖ ಸಪ್ಪಗಾಯಿತು.
"ನನಗೆ ಕ್ಲಾಸಿದೆಯಲ್ಲಾ?"
"ಏನು ಮಾಡೋ ಹಾಗೂ ಇಲ್ಲ. ನಾಳೆ ಒಂದ್ಹೊತ್ತು ನೀವು ರಜಾ
ತಗೋಬೇಕು."
ಆ ಪರಿಸ್ಥಿತಿ ರಾಜಶೇಖರನಿಗೆ ಇಷ್ಟವಿರಲಿಲ್ಲ. ಜಯರಾಮು ಮತ್ತೂ ಅಂದ:
"ಬೇರೆ ಉಪಾಯವೇ ಇಲ್ಲ. ಇನ್ಮೇಲಿಂದ ಮನಿಯಾರ್ಡರೆಲ್ಲಾ ಕಾಲೇಜು
ಆಡ್ರೆಸಿಗೇ ತರಿಸ್ಕೊಳ್ಳಿ.?"
ಪರ ಊರಿನ ಎಷ್ಟೋ ಹುಡುಗರು ಹಾಗೆ ಮಾಡುವುದನ್ನು ಜಯರಾಮು
ಕಂಡಿದ್ದ.
"ಹೂಂ. ಹಾಗೇ ಮಾಡ್ಬೇಕು...." ಎಂದು ಬಾಡಿದ ಮುಖದೊಡನೆ ರಾಜ
ಶೇಖರ ಒಳಹೋದ. ಔಪಚಾರಿಕವಾದ 'ಥ್ಯಾಂಕ್ಸ್' ಪದಪ್ರಯೋಗವೆಲ್ಲ ಆತನಿಗೆ
ಮರೆತು ಹೋಯಿತು. ತನ್ನನ್ನು ಸಾರ್ ಎಂದು ಕರೆಯಬಾರದೆಂದು ಹೇಳಬೇ
ಕೆಂದಿದ್ದ ಜಯರಾಮು. ಆದರೆ ರಾಜಶೇಖರ ಅಷ್ಟು ಬೇಗನೆ ಒಳಸೇರಿಬಿಟ್ಟುದರಿಂದ
ಅದು ಸಾಧ್ಯವಾಗಲಿಲ್ಲ. ಇನ್ನೊಮ್ಮೆ ಕಂಡಾಗ ತಪ್ಪದೆ ಹೇಳಬೇಕು ಎಂದು ಜಯ
ರಾಮು ಮನಸ್ಸಿನಲ್ಲೆ ಅಂದುಕೊಂಡ.
.....ಆ ಕೊಠಡಿಯ ಉಳಿದಿಬ್ಬರು ಹುಡುಗರು ರಾಜಶೇಖರನ ಹಾಗಿರಲಿಲ್ಲ.

19
 

ಅವರಲ್ಲೊಬ್ಬ-ದೇವಯ್ಯ-ಒಂದು ತಿಂಗಳೊಳಗೆ ಕಾಲೇಜಿನ ಸೊಗಸುಗಾರನಾದ.
"ಇದು ಸುಡುಗಾಡು ರೂಮು. ಮುಂದಿನ ಟರ್ಮಿನ ಹೊತ್ತಿಗೆ ಕಾಲೇಜು
ಹಾಸ್ಟೇಲಿಗೇ ಸೇರ್ಕೊಂತೀನಿ." ಎಂದು ಆತ ಪದೇ ಪದೇ ಹೇಳುವುದಿತ್ತು. ಆತನ
ತಾಯಿ ತಂದೆ ರಾಜಶೇಖರನಲ್ಲಿ ವಿಶ್ವಾಸವಿಟ್ಟಿದ್ದರು. ಅವನ ಸಹವಾಸದಲ್ಲಿ ತಮ್ಮ
ಹುಡುಗ ಕೆಡಲಾರನೆಂಬುದು ಅವರು ಇಟ್ಟುಕೊಂಡಿದ್ದ ಆಸೆ. ಆದರೆ ಸ್ವತಃ ಸದ್ಗುಣಿ
ಯಾದರೂ ಮತ್ತೊಬ್ಬರ ಮೇಲೆ ಪ್ರಭಾವ ಬೀರುವಂತಹ ವ್ಯಕ್ತಿತ್ವ ರಾಜಶೇಖರನಿಗೆ
ಇರಲಿಲ್ಲ.
ಆ ಹುಡುಗ ದಿನ ಬಿಟ್ಟು ದಿನ, ಒಮ್ಮೊಮ್ಮೆ ದಿನವೂ, ಸಿನಿಮಾ ನೋಡುತ್ತಿದ್ದ.

ರಾಜಶೇಖರ ಹೇಳುವುದಿತ್ತು:
"ಕಣ್ಣಿಗೆ ಕೆಟ್ದು ಕಣಪ್ಪ. ಎಷ್ಟೂಂತ ನೋಡ್ತೀಯಾ?"
"ಓಗ್ಲಿ ಬಿಡು. ಕಣ್ಣಿಗೆ ಕನ್ನಡಕ ಆಕಿಸ್ಕೊಂಡ್ರಾಯ್ತು."
ಮೊದಮೊದಲು ದೇವಯ್ಯ ರಾಜಶೇಖರನಿಗೆ ತಿಳಿಯದಂತೆ ಹೊರಗೆ ಸಿಗರೇಟು
ಸೇದುತ್ತಿದ್ದ, ಕ್ರಮೇಣ ಅವನೆದುರೇ ಸೇದಿದ. ಆಗಲೂ ರಾಜಶೇಖರ ಒಳ್ಳೆಯ
ಮಾತು ಹೇಳಲು ಪ್ರಯತ್ನಿಸಿದ್ದುಂಟು.
"ಯಾಕಪ್ಪ ಸಿಗರೇಟು ಸೇದ್ತೀಯಾ? ಕ್ಷಯರೋಗ ಬತ್ತದೆ ನೋಡು!"
"ಸಾಕು ಬಿಡೋ. ಊರ ಹೊರ್ಗೆ ಸಾಂಟೋರಿಯಂನೋಡಿದ್ಯೊ ಇಲ್ವೊ?"
ಒಂದು ದಿನ ಕೊಠಡಿಯಲ್ಲೇ ಆತ ಸೆಗರೇಟು ಹಚ್ಚಿದಾಗ ರಾಜಶೇಖರನಿಗೆ
ರೇಗಿತು.
"ಬೇಡಪ್ಪೋ. ಆರ್ಸು. ಆರ್ಸು."
"ಯಾಕೆ? ಬೆಂಕಿ ಅತ್ಕೊಂತದಾ ಮನೆಗೆ?"
"ಲೇ, ಆರ್ಸೋ. ಆಯಮ್ಮಂಗೆ ಗೊತ್ತಾದ್ರೆ ನಮ್ನೆಲ್ಲಾ ಓಡಿಸ್ತಾರೆ."
"ಅದು ಹೆಂಗೆ ಓಡಿಸ್ತಾರೆ? ಬಿಟ್ಟೀ ಕುಂತಿದೀವಾ ಇಲ್ಲಿ? ಬಾಡಿಗೆ ಕೊಡ
ಲ್ವೇನು?"
"ಬ್ರಾಂಬರ ಮನೆ ಕಣಪ್ಪಾ...."
ರಾಜಶೇಖರ ಆ ಬಾಣವೆಸೆದ, ಅದಾದರೂ ತಾಗಬಹುದೆಂದು.
"ನೋಡಿದೀನಿ ಬಿಡು. ಪಕ್ಕದ್ಮನೆಯೋರು ಸೇದಲ್ವಾ?"
ದೇವಯ್ಯನೊಡನೆ ಎದುರು ವಾದಿಸಿ ಗೆಲ್ಲುವುದು ಸಾಧ್ಯವಿರಲಿಲ್ಲ.
ಆತ ಪಾಠಗಳಿಗೆ ಗಮನ ಕೊಡುತ್ತಿರಲಿಲ್ಲ. ತಡವಾಗಿ ಏಳುತ್ತಿದ್ದ.
ರಾಧೆಯನ್ನು ನೋಡಿ ಒಂದೆರಡು ಬಾರಿ ಮುಗುಳ್ನಗುವುದಕ್ಕೂ ದೇವಯ್ಯ
ಯತ್ನಿಸಿದ. ಒಮ್ಮೆ ಹಾಗೆ ಮಾಡಿದಾಗ ರಾಧೆ ಜಯರಾಮುಗೆ ದೂರು ಕೊಟ್ಟಳು.
ಆತಹೊರಬಂದು ಎರಡು ನಿಮಿಷ ಆ ಹುಡುಗನನ್ನೇ ಎವೆಯಿಕ್ಕದೆ ನೋಡಿದ.
ಆದರೆ ಆ ನೋಟದಿಂದೇನೂ ಪರಿಣಾಮವಾಗಲಿಲ್ಲ.

ಒಂದು ರಾತ್ರೆ ದೇವಯ್ಯ ಸ್ವಲ್ಪ ತಡವಾಗಿ ಬಂದ. ಸಿಳ್ಳು ಹಾಕುತ್ತಾ ಮೆಟ್ಟ
ಲೇರಿದ. ದೀಪ ಆರಿಸುವ ಹೊತ್ತಾಯಿತೆಂದು ಕೊನೆಯ 'ಗಸ್ತಿ' ಮಾಡುತ್ತ ಹೆಬ್ಬಾ
ಗಿಲಿಗೆ ಬಂದ ರಂಗಮ್ಮನಿಗೆ ಆ ಸಿಳ್ಳು ಕೇಳಿಸಿತು. 'ಓದುವ ಹುಡುಗರ ಪೈಕಿ'ಯೇ
ಇರಬೇಕೆಂದು ರಂಗಮ್ಮನಿಗೆ ಖಚಿತವಾಯಿತು.
ಅವರು ಸ್ವರವೆತ್ತಿ ಕೂಗಾಡಿದರು:
"ಯಾರದು___ಸಿಳ್ಳು ಹಾಕ್ತಿರೋದು?"
ಉತ್ತರ ಬರಲಿಲ್ಲ.
ರಂಗಮ್ಮನ ರೇಗುತ್ತ ಅಂದರು:
"ಇದೇನು ಸಂತೇ ಬೀದಿ ಕೆಟ್ಹೋಯ್ತೆ? ಮಾನ ಮರ್ಯಾದೆ ಒಂದೂ ಬೇಡ್ವೆ
ಯಾರಪ್ಪಾ ಅದು? ಸಿಳ್ಳು ಹಾಕೋವಷ್ಟು ಸೊಕ್ಕು ಬಂದಿರೋದು ಯಾರಿಗಪ್ಪ?"
ಎದುರಿನ ಹಾಗೂ ಮೇಲ್ಗಡೆಯ ಸಂಸಾರಗಳು ಮೌನವಾಗಿ ರಂಗಮ್ಮನ
ಮಾತಿಗೆ ಕಿವಿಗೊಟ್ಟುವು!
ರಾಧಾ ಅಣ್ಣನಿಗೆಂದಳು:

"ಆ ಹುಡುಗ್ನೇ ಇರ್ಬೇಕು"
ಆ ಹುಡುಗ__ಎಂದರೆ ರಾಧೆಯನ್ನು ನೋಡಿ ಮುಗುಳುನಕ್ಕಿದ್ದವನು. ತಂಗಿಯ
ಊಹೆ ಸರಿ ಎಂಬ ವಿಷಯದಲ್ಲಿ ಜಯರಾಮುಗೆ ಸಂದೇಹವಿರಲಿಲ್ಲ.
ದೇವಯ್ಯ ಮಾತನಾಡಲಿಲ್ಲ. ರಾಜಶೇಖರನ ಎದೆ ಡವಡವನೆ ಹೊಡೆದು
ಕೊಂಡಿತು. ಮತ್ತೊಬ್ಬನಿಗೂ ಗಾಬರಿಯಾಯಿತು. ಆದರೆ ಸಿಳ್ಳು ಹಾಕಿದ ಸದ್
ಗೃಹಸ್ಥ ಬೂಟ್ಸು ತೆಗೆದೆಸೆದು, ಅರ್ಥವಾಗದಂತೆ ಏನನ್ನೋ ಗೊಣಗುತ್ತಾ, ಚಾಪೆಯ
ಮೇಲೆ ಉರುಳಿಕೊಂಡ. ಆದಷ್ಟು ಬೇಗನೆ ಈ ವಠಾರ ಬಿಟ್ಟು ಹೋಗಬೇಕೆಂಬ
ಅವನ ಯೋಚನೆ ಬಲವಾಯಿತು. "ಈ ವಠಾರದಲ್ಲಿ ಓದಲು ಅನುಕೂಲವಿಲ್ಲ.
ಹಾಸ್ಟೆಲಿಗೆ ಸೇರ್ಕೊ ಅಂತ ಪ್ರೊಫೆಸರು ಹೇಳಿದ್ದಾರೆ," ಎಂದೆಲ್ಲ ತಂದೆಗೆ ಬರೆಯ
ಬೇಕೆಂದು ನಿರ್ಧರಿಸಿದ.
ಮೂರನೆಯವನು ಚಿಕ್ಕ ಹುಡುಗ. ಮೊದಲ ಬಾರಿ ಬೆಂಗಳೂರಿಗೆ ಬಂದಾಗ
ಸಿಂಹದ ಬೋನಿನ ಬಾಗಿಲ ಬಳಿ ತಂದು ಬಿಟ್ಟು ಹಾಗಾಗಿತ್ತು ಅವನ ಸ್ಥಿತಿ. ಷೋಕಿ
ಹುಡುಗನ ಜತೆಗಾರನಾಗಿ ಅವನ ಬೇಗನೆ ಚಿಗುರಿಕೊಂಡ. ಆದರೆ ಆ ಹುಡುಗ
ಬಡವ. ಆಗಾಗ್ಗೆ ದೇವಯ್ಯ ಆತನನ್ನು ಕರೆಯುತ್ತಿದ್ದ.
"ಏ, ಬಾರೋ, ಪಿಕ್ಚರ್ ನೋಡ್ಕೊಂಬರಾನ."
"ನೀನ್ಹೋಗು: ನಾ ಒಲ್ಲೆ."
"ಅದ್ಯಾಕೆ ಬೆಕ್ಕಿನ್ಮರಿ ಅಂಗೆ ಅಮರ್ಕೊಂತಿಯಾ ರೂಮ್ನಲ್ಲಿ? ಬಾ-ಬಾ.....
ಟಿಕೆಟಿನ ದುಡ್ಡು ನಾ ಕೊಡ್ತೀನಿ."
ಚಿಕ್ಕ ಹುಡುಗ ದೊಡ್ಡವನೊಡನೆ ಸಿನಿಮಾ ನೊಡಲು ಹೋದ. ಆದರೆ ಆತನ

ಜತೆಯಲ್ಲಿ ಸಿಗರೇಟು ಸೇದಲಿಲ್ಲ. ದೊಡ್ಡವನು ಹುಡುಗಿಯರನ್ನು ನೋಡಿ ನಗೆ
ಮಾತನಾಡಿದಾಗ ಚಿಕ್ಕವನು ನಕ್ಕನೇ ಹೊರತು, ತಾನು ಸ್ವತಃ ಯಾವ ಮಾತನ್ನೂ
ಅಡలిల్ల.
ಚಿಕ್ಕವನು ಸಹವಾಸದೋಷದಿಂದ ಕೆಟ್ಟು ಹೋಗುತ್ತಿದ್ದಾನಲ್ಲಾ ಎಂದು ರಾಜ
ಶೆಖರನಿಗೆ ಕೆಡುಕೆನಿಸಿತ್ತು
ಆದರೆ ಅವನು ಕೆಟ್ಟು ಹೋಗಲಿಲ್ಲ. ಆ ಪುಟ್ಟ ಹುಡುಗನಿಗೆ ಬೇಗನೆ ಪಂದ್ಯಾ
ಟದ ಹುಚ್ಚು ಹಿಡಿಯಿತು. ಎಚ್ಚರದಲ್ಲವೂ ನಿದ್ದೆಯಲ್ಲೂ ಆತ ಕ್ರಿಕೆಟ್ ಮಂತ್ರ
ಜಪಿಸಿದ. ಸ್ವತಃ ಕಣಕ್ಕಿಳಿಯದಿದ್ದರೂ ಕ್ರಿಕೆಟ್ ಪ್ರೇಮಿಯಾದ.
ಆಟಗಳಲ್ಲಿ ಆಸಕ್ತಿಯಿಲ್ಲದ ರಾಜಶೇಖರನಿಗೆ ಆ ಹುಡುಗನ ಕ್ರಿಕೆಟ್ ಪ್ರೇಮ
ಒಪ್ಪಿಗೆಯಾಗದೆ ಹೋದರೂ, ದೇವಯ್ಯನ ಪೋಲಿತನಕ್ಕಿಂತ ಇದು ಸಹಸ್ರ ಪಾಲು
ಮೇಲು ಎನ್ನುವುದು ಅತನ ಅಭಿಪ್ರಾಯವಾಗಿತ್ತು,
ರಂಗಮ್ಮ ಬೇಗ ದೀಪ ಆರಿಸುತ್ತಿದ್ದುದರಿಂದ ರಾಜಶೇಕರನಿಗೆ ಓದಿಕೊಳ್ಳಲು
ಕಷ್ಟವಾಯಿತು. ಒಂದು ರೂಪಾಯಿ ಕೊಟ್ಟ ಆತ ಬೆಡ್‌ಲ್ಯಾಂಪ್ ಕೊಂಡು ತಂದ.
ಆತ ತರುತ್ತಲಿದ್ದಾಗ ಅದನ್ನು ನೋಡಿದ ಜಯರಾಮು ಕೇಳಿದ:
"ರಾತ್ರೆ ಓದೋಕೆ ದೀಪ ಇಲ್ದೆ ತೊಂದರೆ ಆಗುತ್ತೆ ಅಲ್ವೆ?"
"ಹೂಂ. ಕಣ್ರೀ."
'ಸಾರ್' ಹೊರಟು ಹೋಗಿತ್ತು. ಅವರು ಆತ್ಮೀಯ ಗೆಳೆಯರಾಗದೆ ಹೋದರೂ
ಒಳ್ಳೆಯ ಪರಿಚಿತರಾಗಿದ್ದರು.
"ನಮ್ಮನೇಲೂ ಅಂಥದೇ ಓಂದಿದೆ."
ಇನ್ನು ರಾಜಶೇಖರ ಒಂದು ಶೀಷೆ ಸೀಮೆ ಏಣೆ ತರಬೇಕು. ಅದಕ್ಕಾಗಿ ಖಾలి
ಶೀಷೆಯೊಂದನ್ನು ಕೊಳ್ಳಬೇಕು. ತಮ್ಮ ಮನೆಯಲ್ಲಿ ಒಂದು ಖಾಲಿ ಶೀಷೆ ಇದ್ದುದು
ಜಯರಾಮೂಗೆ ನೆನಪಾಗಿ, ಅದನ್ನು ಆತನಿಗೆ ಕೊಟುಬಿಡೋಣವೆನಿಸಿತು. ಆ ವಿಚಾರ
ಮಾತನಾಡಬೇಕೆಂದು ನಾಲಿಗೆ ಸಿದ್ಧವಾಗುತ್ತಿದ್ದಾಗಲೆ 'ತಡೆ' ಎಂದಿತು ಮೆದುಳು.
'ಹಳೇ ಪೇಪರ್-ಶೀಷೆ'ಯವನಿಗೆ ಅದನ್ನು ಮಾರಬೇಕೆಂದು ರಾಧಾ ಆಗಲೇ ಲೆಕ್ಕ
ಹಾಕಿದ್ದಳು. ಅವರ ಮನೆಯ, ಮುಖ ನೋಡುವ ಕನ್ನಡಿ ಒಡೆದು ಹೋಗಿತ್ತು.
ದುಡ್ಡು ಕೂಡಿಟ್ಟು ಅದಷ್ಟು ಬೇಗನೆ ಮತ್ತೊಂದನ್ನು ಕೊಳ್ಳಬೇಕೆಂಬುದು ರಾಧೆಯ
ಯೋಜನೆ...ಅದೇ ಸರಿಯಾಗಿತ್ತು. ಔದಾರ್ಯವನ್ನು ತೋರಿಸೋಣವೆಂದು ಭಾವಿ
ಸಿದ್ದ ಜಯರಾಮು ಆ ಯೋಚನೆಯನ್ನು ಬಿಟ್ಟುಕೊಟ್ಟು ತೆಪ್ಪಗಾದ.
ಅದರೆ ಅ ಬೆಡ್‌ಲ್ಯಾಂಪಿನ ಅಗತ್ಯದ ವಿಷಯವಾಗಿ ಕೊಠಡಿಯಲ್ಲಿ ಏಕಾಭಿಪ್ರಾ
ಯುವಿರಲಿಲ್ಲ. ಅಷ್ಟೇ ಅಲ್ಲ. ಹೊಸ ದೀಪ ಭಿನ್ನಾಭಿಪ್ರಾಯಗಳನ್ನು ಮತ್ತಷ್ಟು
ತೀವ್ರಗೊಳಿಸಿತು.

ರಾಜಶೇಖರನ ಸ್ವರವನ್ನೆ ಅಣಕಿಸುತ್ತ ದೇವಯ್ಯ ಹೇಳಿದ:

"ಆ ದೀಪ ಉರಿಸ್ಬೇಡವೋ ಮಾರಾಯ. ಕಣ್ಣಿಗೆ ಕೆಟ್ದು."
ರಾಜಶೇಖರ ಉತ್ತರ ಕೊಡಲಿಲ್ಲ.
"ನಮಗೆ ನಿದ್ದೆ ಬರದ ಹಾಗೆ ಮಾಡ್ತೀಯಪ್ಪ ನೀನು!"
ದೇವಯ್ಯ ಹೊಸ ಅಸ್ತ್ರ ಪ್ರಯೋಗಿಸಿದ.
ಆದರೆ ಚಿಕ್ಕವನು ಅವನ ಜತೆ ಸೇರಲಿಲ್ಲ.
"ನಂಗೆ ಪರವಾಗಿಲ್ಲ. ದೀಪ ಇದ್ರೂ ನಿದ್ದೆ ಬತ್ತದೆ. ನಮ್ಮನೇಲಿ ದೀಪ ಉರಿ
ಸ್ಕಂಡೆ ಮಲಕ್ಕೋತೀವಿ." ಎಂದ.
"ಬೆಳಕಿಗೆ ರಟ್ಟು ಅಡ್ಡ ಇಡ್ತೀನಿ. ಯಾರಿಗೂ ತೊಂದ್ರೆ ಆಗೋದಿಲ್ಲ ಬಿಡು."
ಆದರೆ ದೇವಯ್ಯ ಮಾತಿನಲ್ಲಿ ಸೋಲಲು ಇಷ್ಟಪಡಲಿಲ್ಲ. ಪುಸ್ತಕಕ್ರಿಮಿ, ಮಹಾ
ಪಂಡಿತ, ಮೆರಿಟ್ ಸ್ಕಾಲರ್_ಎಂದೆಲ್ಲ ರಾಜಶೇಖರನನ್ನು ಲೇವಡಿ ಮಾಡಿದ.
"ಪರೀಕ್ಷೆ ಬರ್ಲಿ. ಆಗ ಗೊತ್ತಾತದೆ,"ಎಂದು ರಾಜಶೇಖರ ಎಚ್ಚರಿಕೆಯ
ಮಾತನ್ನಾಡಿದ.
ಆ ಸ್ವರ ಕೇಳಿ ಚಿಕ್ಕ ಹುಡುಗನಿಗೆ ಭಯವಾಯಿತು. ಆತ ಹೇಳಿದ:
"ನಾನೂ ಓದ್ಕೊಬೇಕು."
ನಿದ್ದೆ ಹೋಗಲು ಸಿದ್ದನಾಗುತ್ತ ದೇವಯ್ಯ ಚಿಕ್ಕವನ ಸ್ವರವನ್ನೂ ಅಣಕಿಸಿದ:
"ಓಹೋಹೋಹೋ... ನಾನೂ ಓದ್ಕೊಬೇಕು. ಭಪ್ಪರೇ ವಿದ್ಯಾಪ್ರವೀಣ!"
ರಾಜಶೇಖರನಿಗೆ ಇದು ಸಹನೆಯಾಗಲಿಲ್ಲ.
"ನೀನು ಹೀಗೆಲ್ಲಾ ಆಡೋದು ನಿಮ್ತಂದೆಗೆ ಗೊತ್ತಾದ್ರೆ ನಿನ್ನ ಚಮ್ಡ ಸುಲೀ
ತಾರೆ ನೋಡ್ಕೊ."
ನಿಜ ಸಂಗತಿಯನ್ನೇ ಹೇಳಿದ್ದ ರಾಜಶೇಖರ. ಆ ಹುಡುಗನ ತಂದೆಯ ಸಿಡುಕು
ಪ್ರವೃತ್ತಿ ಆತನಿಗೆ ಗೊತ್ತೇ ಇತ್ತು. ಆದರೆ ತಂದೆಯ ನೆನಪು ಮಾಡಿ ಕೊಟ್ಟುದು ಆ
ಹುಡುಗನಿಗೆ ರುಚಿಸಲಿಲ್ಲ. ಆತ ಸುಟ್ಟುಬಿಡುವ ಕಣ್ಣುಗಳಿಂದ ರಾಜಶೇಖರನನ್ನು
ನೋಡುತ್ತಾ ಹೇಳಿದ:
"ಅದೇನೋ ಅದು? ನಮ್ತಂದೆಗೆ ಕಾಗದ ಬರೀಬೇಕೂಂತ ಮಾಡಿದೀಯಾ?
ಸಿ.ಐ.ಡಿ.ಕೆಲ್ಸ! ಅಂಥಾದ್ದೇನಾದ್ರೂ ಮಾಡ್ದೆ ಅಂದ್ರೆ_"
ರಾಜಶೇಖರ ಹೆದರಲಿಲ್ಲ. ಆದರೆ ಅವನಿಗೆ ಬೇಸರವಾಯಿತು, ಕಾಲು ಗಂಟೆ
ಆತ ಹೊಸ ದೀಪದ ಬೆಳಕಿನಲ್ಲಿ ಓದಲು ಯತ್ನಿಸಿದ. ಆದರೆ ದುಗುಡ ಒತ್ತರಿಸಿ ಬಂದು
ದೃಷ್ಟಿ ಮಸುಕಾಯಿತು. ಎಷ್ಟೊಂದು ಉತ್ಸಾಹದಲ್ಲಿ ಹೊಸ ದೀಪವನ್ನು ಕೊಂಡು
ತಂದಿದ್ದ ಆತ! ಈಗ ಎಳ್ಳಷ್ಟೂ ಉತ್ಸಾಹ ಉಳಿದಿರಲಿಲ್ಲ. ಪುಸ್ತಕ ಮಡಚಿ ದೀಪ
ಆರಿಸಿ ಆತ ಚಾಪೆಯ ಮೇಲೆ ಉರುಳಿಕೊಂಡ. ತಲೆದಿಂಬು ಕಣ್ಣೀರಿನಿಂದ ತೊಯ್ದು
ಹೋಯಿತು.

ಮೊದಲು ಚಿಕ್ಕವನು ನಿದ್ದೆ ಹೋದ. ದೊಡ್ಡವನು ಉದ್ರಿಕ್ತವಾಗಿದ್ದ ಮನ

ಸ್ಸನ್ನು ನಿದ್ದೆಯ ಹೊದಿಕೆಯೊಳಗೆ ಮುಚ್ಚಲೆತ್ನಿಸುತ್ತ, ಅತ್ತಿತ್ತ ಹೊರಳಾಡಿದ.
ರಾಜಶೇಜರನಿಗೆ ಬಹಳ ಹೊತ್ತು ನಿದ್ದೆ ಬರಲೇ ಇಲ್ಲ. ಬಂದ ಆರಂಭದಲ್ಲಿ
ಅವನು ಆಸೆ ಕಟ್ಟಿಕೊಂಡಿದ್ದ_ತಮ್ಮ ಊರಿನ ತಾವು ಮೂವರು ಜತೆಯಾಗಿಯೇ
ಸ್ನೇಹದಿಂದ ಇರಬೇಕೆಂದು. ಆ ಆಸೆ ಈಗ ಇರಲಿಲ್ಲ. ತನ್ನಿಂದ ಬಲು ದೂರ ಸಾಗಿದ್ದ
ಆ ಜತೆಗಾರ ತನ್ನ ತಂದೆಯನ್ನು ಒಪ್ಪಿಸಿ ಕಾಲೇಜು ಹಾಸ್ಟೆಲಿಗೇ ಹೋಗುವ ಸಂಭವ
ವಿತ್ತು. ಹಾಗೆ ಹೋದರೆ ಕೊಠಡಿಯ ಬಾಡಿಗೆಯ ಪೂರ್ತಿ ಭಾರ ಉಳಿದಿಬ್ಬರ ಮೇಲೆ
ಬೀಳುವುದು. ಜತೆಗಿರಲು ಬೇರೊಬ್ಬ ವಿದ್ಯಾರ್ಥಿ ಸುಲಭವಾಗಿ ಸಿಗುವ ಸಂಭವ
ವಿರಲಿಲ್ಲ.
ಮುಂದಿನ ವರ್ಷವಾದರೂ ಉಚಿತ ವಿದ್ಯಾರ್ಥಿನಿಲಯದಲ್ಲಿ ಜಾಗ ದೊರಕಿಸಿ
ಕೊಳ್ಳಲು ತಾನು ಯತ್ನಿಸಬೇಕೆಂದು ರಾಜಶೇಖರ ಅಂದುಕೊಂಡ.
ನಾಲ್ಕು ಅಡಿಗಳ ಅಂತರದಲ್ಲಿ ಮಲಗಿದ್ದ ಸಹಪಾಠಿಯೊಡನೆ ಹೃದಯ ತೆರೆದು
ಮಾತನಾಡಬೇಕೆಂದು ಆಸೆಯಾಯಿತು, ಅತ್ತು ಮನಸ್ಸು ತಿಳಿಯಾಗಿದ್ದ ರಾಜಶೇಖರನಿಗೆ,
ಆದರೆ ಆ ಸಹಪಾಠಿಗೆ ನಿದ್ದೆ ಬಂದಿತ್ತು,ಅಷ್ಟರಲ್ಲೆ.
.....ಈ ವರ್ಷ ರಂಗಮ್ಮ ಮಹಡಿಯ ಮೇಲಿನ ವಿದ್ಯಾರ್ಥಿಗಳ ವಿಷಯದಲ್ಲಿ
ಒಳ್ಳೇ ಅಭಿಪ್ರಾಯ ತಳೆಯಲಿಲ್ಲ. ಹುಡುಗರಲ್ಲೊಬ್ಬ ಸಿಗರೇಟು ಸೇದುತ್ತಿದ್ದುದೂ
ಅವರಿಗೆ ಗೊತ್ತಾಯಿತು. ನಾಲ್ಕು ದಿನ'ಕಾಲ ಕೆಟ್ಟುಹೋಯ್ತೆಂದು' ಅವರು ಗೊಣ
ಗಿದರು. ಆ ಬಳಿಕ,'ಬಾಡಿಗೆ ಸರಿಯಾಗಿ ಬರ್ತಿದೇಂತ ಸುಮ್ಮನಿದೀನಿ' ಎಂದು ತನಗೆ
ತಾನೇ ಸಮಾಧಾನ ಹೇಳಿಕೊಂಡರು.
ಬಂದ ಆರಂಭದಲ್ಲಿ ಮೂವರು ಹುಡುಗರೂ ವಠಾರಾದ ಕಕ್ಕಸನ್ನು ಉಪಯೋಗಿ
ಸಲು ಯತ್ನಿಸಿದ್ದರು.ಆದರೆ ಅಲ್ಲಿ ಕ್ಯೂ ನಿಂತು ಎರಡು ದಿನಗಳಲ್ಲೇ ಅವರಿಗೆ
ಸಾಕೋಸಾಕು ಅನ್ನಿಸಿಹೋಯಿತು. ಆ ಬಳಿಕ ಪ್ರತಿಯೊಂದಕ್ಕೂ ಅವರು ಹೋಟೆ
ಲನ್ನೇ ಆವಲಂಬಿಸಿದರು. ರಾಜಶೇಖರ ಬೆಳಗ್ಗೆ ಒಂದು ಬಕೀಟು ನೀರನ್ನಷ್ಟು ಒಯ್ದು
ಮೇಲಿಡುತ್ತಿದ್ದ. ಬಾಯಾರಿದಾಗ ಕುಡಿಯುವುದಕ್ಕೂ ಓದಿನ ನಡುವೆ ತೂಕಡಿಸಿದಾಗ
ಕಣ್ಣಿಗೆ ಮುಟ್ಟಿಸುವುದಕ್ಕೂ ಅದು ಉಪಯೋಗವಾಗುತ್ತಿತ್ತು.
ಹೋಟೆಲಿನ ಊಟ ಸೇರದೆ ಚಿಕ್ಕವನು ನಾಲ್ಕು ದಿನ ವಾಂತಿಸಭೇದಿಯಿಂದ ನರ
ಳಿದ್ದೂ ಆಯಿತು.
"ಹುಡುಗ ಹ್ಯಾಗಿದಾನೆ?" ಎಂದು ರಂಗಮ್ಮ ರಾಜಶೇಖರನನ್ನು ಒಂದೆರಡು
ಸಾರಿ ವಿಚಾರಿಸಿ,ಸುಮ್ಮನಾದರು. ಬಡಕಲಾಗಿದ್ದ ಪುಟ್ಟ ಹುಡುಗ ದಿನಕ್ಕೆ ಆರೇಳು
ಸಾರಿ,ಕಕ್ಕಸಿಗೆಂದು ಓಣಿ ದಾಟಿ ಬರುತ್ತಿದ್ದುದನ್ನು ಅವರು ಕಂಡರು.
"ಅದೇನೂಂತ ಇಷ್ಟು ಚಿಕ್ಕ ಹುಡುಗರನ್ನ ಅಷ್ಟು ದೂರ ಕಳಿಸ್ತಾರೋ,
ಎಂದು ರಂಗಮ್ಮ ಈಗಿನ ವಿದ್ಯಾಪದ್ಧತಿಯ ವಿಷಯದಲ್ಲೇ ಅಸಮ್ಮತಿ ಸೂಚಿಸಿದರು.
ರಾಜಶೇಖರ ಎಡೆಬಿಡದೆ ಆ ಹುಡುಗನ ಆರೈಕೆ ಮಾಡಿದ. ಕಾಹಿಲೆ ಗುಣವಾಗಿ
ಹುಡುಗ ಬೇಗನೆ ಚೇತರಿಸಿಕೊಂಡಾಗ, ರಾಜಶೇಖರನಿಗೆ ಸಮಾಧಾನವಾಯಿತು.
ಚಿಕ್ಕವನು ನಾಲ್ಕು ದಿನ ರಜೆ ಪಡೆದು ಊರಿಗೆ ಹೋಗಿ ಬಂದ.
...ಆದರೆ ರಂಗಮ್ಮ ಆ ಹುಡುಗರ ವಿಷಯವಾಗಿ ಕಟು ಮಾತು ಆಡಬೇಕಾದ
ಮತ್ತೊಂದು ಸನ್ನಿವೇಶ ಒದಗಿ ಬಂತು. ಅದಕ್ಕೆ ಕಾರಣ ದೇವಯ್ಯ.
ರಾಧೆಯ ಯೋಚನೆಯನ್ನು ಬಿಟ್ಟುಕೊಟ್ಟ ಆ ಹುಡುಗನ ಕಣ್ಣುಗಳು ವಿಶ್ರಾಂತಿ
ಇಲ್ಲದೆ ಅತ್ತಿತ್ತ ಹೊರಳಿದ್ದುವು. ಎದುರು ಬದಿಯ ಮೂಲೆಯಲ್ಲಿದ್ದ ಮಹಡಿಯ
ದೊಡ್ಡ ಮನೆಯ ಹುಡುಗಿಯನ್ನು ಆತ ಕಂಡ. ಮೊದಮೊದಲು ಏನೋ ಎತ್ತವೋ
ಎಂದು ಸ್ವಲ್ಪ ಅಳುಕು ಆತನನ್ನು ಬಾಧಿಸಿತು. ಆದರೆ ಕ್ರಮೇಣ ಅವನ ಅಭಿಪ್ರಾಯ
ಗಳು ನಿರ್ಧಿಷ್ಟ ರೂಪ ತಳೆದುವು. ಎಲ್ಲ ಹುಡುಗಿಯರೂ ಒಂದೇ-ನೋಡಿ
ಮುಟ್ಟಿ ಆನಂದಿಸಬೇಕಾದ ಬೊಂಬೆಗಳು, ಎಂಬುದು ಅವನ ಅಭಿಪ್ರಾಯಗಳಲ್ಲಿ
ಒಂದು. ಆತನಿಗಿದ್ದುದು ನೋಟದ ಅನುಭವ ಮಾತ್ರ. ಆತ ಹೇಳಿಕೊಳ್ಳುವ ಸ್ಫುರಡಟ೨ಅಟ
ದ್ರೂಪಿಯೇನೂ ಆಗಿರಲಿಲ್ಲ. ಆದರೆ ತಾನು ಅತ್ಯಂತ ಸುಂದರವಾದ ಯುವಕ, ಯಾವ
ಹುಡುಗಿಯಾದರೂ ಸರಿಯೇ ತನ್ನನ್ನು ಕಂಡು ಮೋಹಿಸಲೇಬೇಕು-ಎಂಬುದು ಅವನ
ಧೃಢ ನಂಬಿಕೆಯಾಗಿತ್ತು.
ಅಷ್ಟು ಆತ್ಮವಿಶ್ವಾಸವಿದ್ದ ದೇವಯ್ಯ ಎದುರು ಬೀದಿಯ ಶ್ರೀಮಂತ ಹುಡುಗಿಗೆ
ಕಾಣಿಸುವಂತೆ ಕಿಟಕಿಯ ಬಳಿ ನಿಂತುಕೊಳ್ಳತೊಡಗಿದ. ಬಾಲ್ಕನಿಗೆ ಆಗಾಗ್ಗೆ ಬರುತ್ತಿದ್ದ
ಆ ಹುಡುಗಿ ದೇವಯ್ಯನನ್ನು ನೋಡಿದಳು.ಆದರೆ ಮುಖದ ಮೇಲೆ ಯಾವ ಭಾವನೆ
ಯನ್ನು ತೋರ್ಪಡಿಸಲಿಲ್ಲ. ದೇವಯ್ಯ ಮುಂದಿನ ಹೆಜ್ಜೆಯೆಂದು ಆ ಹುಡುಗಿಯನ್ನು
ನೋಡಿ ಹಲ್ಲು ಕಿರಿದ.ಹುಡುಗಿ ದುರದುರನೆ ವಠಾರದತ್ತ ನೋಡಿದಳು.
"ಕಿಟಕಿಯಿಂದೀಚೆಗೆ ಬಾರೋ. ಓದಕ್ಕೆ ಕಾಣ್ಸಲ್ಲ.."ಎಂದು ರಾಜಶೇಖರ
ಎರಡು ಸಾರಿ ದೂರಿಕೊಂಡ ಮೇಲೆ ದೇವಯ್ಯ ಹೊರಬಂದು ವಠಾರದ ಮಹಡಿ
ಮೆಟ್ಟುಲುಗಳ ಮೇಲೆ ನಿಂತು ನೋಡತೊಡಗಿದ.
ಇದು ಜಯರಾಮುವಿನ ದೃಷ್ಟಿಗೆ ಬಿತ್ತು. ಆ ಹುಡುಗಿಯ ವಿಷಯವಾಗಿ
ಆತನಿಗೆ ತೀರಾ ಕೆಟ್ಟ ಅಭಿಪ್ರಾಯವೂ ಇರಲಿಲ್ಲ; ಅಷ್ಟು ಒಳ್ಳೆಯ ಅಭಿಪ್ರಾಯವೂ
ಇರಲಿಲ್ಲ.ಆದರೆ ದೇವಯ್ಯನ ವಿಷಯದಲ್ಲಿ ಮಾತ್ರ ಮನಸ್ಸು ವ್ಯಗ್ರವಾಯಿತು.
ದೇವಯ್ಯ ನಿಧಾನವಾಗಿ ನಯವಾಗಿ ವರ್ತಿಸಿದ್ದರೆ,ಪರಿಸ್ಥಿತಿ ವಿಕೋಪಕ್ಕೆ
ಹೋಗುತ್ತಿರಲಿಲ್ಲ.ಆದರೆ ಆತನದು ಆತುರ ಪ್ರಕೃತಿ,ಎಲ್ಲಿಲ್ಲದ ಅವಸರ.ಆ ಹುಡುಗಿ
ಕಾಲೇಜಿಗೆ ಹೊರಟಾಗ ಪ್ರತಿ ದಿನವೂ ಬೆಳಗ್ಗೆ ಆಕೆಯ ಹಿಂದೆ ಬಸ್‌ಸ್ಟಾಪಿನವರೆಗೂ
ಹೋದ.
ಒಮ್ಮೆ ಆಕೆ "ಕೋತಿ!"ಎಂದು ಬಯ್ದಳು.
ದೇವಯ್ಯನಿಗೆ ಮುಖಭಂಗವಾಯಿತು.ಇವಳ ಜಂಭ ಎಷ್ಟರ ತನಕ ಇರುತ್ತೋ
ಒಂದು ಕೈ ನೋಡಿಯೇ ಬಿಡಬೇಕು ಎಮಧೂ ತೀರ್ಮಾನಿಸಿದ
ದೃಷ್ಟಿದಾಳಿ ಏಕಪ್ರಕಾರವಾಗಿ ನಡೆಯಿತು.
ಒಂದು ದಿನ ಆತ ವಠಾರದ ಮೆಟ್ಟಲುಗಳ ಮೇಲೆ ನಿಂತು ನೋಡುತ್ತಿದ್ದಂತೆ
ಒಬ್ಬಾಕೆ ಒಳಬಂದು "ಅಮ್ಮಣ್ಣೀ"ಎಂದು ರಂಗಮ್ಮನನ್ನು ಕರೆದಳು. ಆಕೆ ಆ ದೊಡ್ಡ
ಮನೆಯ ಕೆಲಸದವಳೆಂಬುದು ದೇವಯ್ಯನಿಗೆ ಗೊತ್ತಾಗಲಿಲ್ಲ.
ಆಕೆ ತಂದ ಸಂದೇಶ ಕೇಳಿ ರಂಗಮ್ಮ ಕಿಡಿಕಿಡಿಯಾದರು.
"ಎಂಥಾ ಹಲ್ಕಾ ಹುಡುಗ್ರು ಸೇರ್ಕೊಂಡುವಪ್ಪಾ ಈ ವರ್ಷ.."ಎಂದು ಆಕೆ
ಆಕ್ರೋಶ ಮಾಡಿದರು.
ಆ ಸದ್ದು ಕೇಳುತ್ತಲೇ ಗಾಬರಿಯಾಗಿ ದೇವಯ್ಯ ಕೊಠಡಿಯೊಳಕ್ಕೆ ಓಡಿದ.
ರಂಗಮ್ಮ ಬಲು ಪ್ರಯಾಸದಿಂದ ಮೆಟ್ಟಲೇರಿ ಬಂದರು.
"ಯಾರೋ ಅದು?ಯಾಕಪ್ಪಾ ಹೀಗ್ಸಾಯ್ತೀರಾ? ನಿಮಗೆ ಅಕ್ಕ ತಂಗಿ ಇಲ್ವೇ
ನಪ್ಪಾ ಯಾರಿಗೂ?ನಮ್ಮ ವಠಾರಕ್ಕೆ ಕೆಟ್ಟ ಹೆಸರು ತರ್ತೀರಲ್ಲಪ್ಪಾ ನೀವು!"
ದೇವಯ್ಯನ ಮುಖ ಕಪ್ಪಿಟ್ಟಿತ್ತು. ಚಿಕ್ಕ ಹುಡುಗ ಆಶ್ಚರ್ಯದ ನೋಟದಿಂದ
ದೊಡ್ಡವನನ್ನು ನೋಡಿದ್ದ. ರಂಗಮ್ಮ ಹೇಳುತ್ತಿದ್ದು ದು ಜಯರಾಮುಗೆ ಕೇಳಿಸುತ್ತಿದೆ
ಯಲ್ಲ. ಈ ವಠಾರದಲ್ಲಿನ್ನು ತಲೆ ಎತ್ತದ ಹಾಗೆ ಆಯಿತಲ್ಲಾ ಎಂದು ರಾಜಶೇಖರ
ಮನಸ್ಸಿನೊಳಗೆ ಗೋಳಾಡಿದ.
ನಾಲ್ಕೈದು ನಿಮಿಷ ಹೇಳಿದ್ದನ್ನೆ ಹೇಳಿ ರಂಗಮ್ಮ ಕೊನೆಯ ಎಚ್ಚರಿಕೆ
ಕೊಟ್ಟರು:
"ಇದೇ ಆಖೈರು. ಇನ್ನೊಂದ್ಸಲ ಹೀಗೇನಾದ್ರೂ ಆದ್ರೆ ಈ ರೂಮು ಬಿಟ್ಟು
ನೀವು ಹೊರಟ್ಹೋಗ್ಬೇಕು. ತಿಳೀತಾ?ಹುಷಾರಾಗಿರಿ!"
ರಂಗಮ್ಮ ಮೆಲ್ಲನೆ ಕೆಳಕ್ಕಿಳಿದರು. ಗದ್ದಲ ಕೇಳಿ ಹೊರಬಂದಿದ್ದ ಚಂಪಾವತಿ
ಯನ್ನು ನೋಡಿ ಅವರೆಂದರು:
"ನನಗೆ ಗೊತ್ತು, ಆ ಜನವೇ ಹಾಗೆ."
ವಿಷಯ ಏನೆಂದು ತಿಳಿದ ಚಂಪಾ ಅಂದಳು:
"ಆ ಜನ ಅಂತ ಏನು ರಂಗಮ್ನೋರ? ಬ್ರಾಹ್ಮಣ ಹುಡುಗರೇನು ಕಡಿಮೇನೇ?
ಹುಡುಗರು ಅಂದ್ರೆ ಯಾವಾಗಲೂ ಅಷ್ಟೇ. ಈಗಿನೋರಲ್ಲಿ ಸ್ವಲ್ಪ ಪೋಲಿತನ
ಜಾಸ್ತಿ."
"ಪೋಲಿತನ ಅಲ್ಲ ಚಂಪಾ, ಭಂಡತನ-ಭಂಡತನ!"

೧೬

ಜಯರಾಮುವಿನ ಪರೀಕ್ಷೆ ಮುಗಿದು ನವರಾತ್ರಿ ಹಬ್ಬ ಬಂತು.
ಹಬ್ಬ ಬಂದಾಗಲೆಲ್ಲ ರಂಗಮ್ಮನಿಗೆ ಮಕ್ಕಳು ಮೊಮ್ಮಕ್ಕಳನ್ನು ನೋಡುವ