ರಂಗಮ್ಮನ ವಠಾರ/೧೭

ವಿಕಿಸೋರ್ಸ್ ಇಂದ
Jump to navigation Jump to search

ಬಯಕೆ ಹೆಚ್ಚುತ್ತಿತ್ತು. ಆದರೆ ಈ ಸಲ ಯಾರೂ ಬರಲಿಲ್ಲ.
ಮಂಜು ಕವಿದ ಒಂದು ಮುಂಜಾನೆ ರಂಗಮ್ಮನೆಂದರು:
"ಮಳೆ ಹೋಯ್ತೂಂತ ಕಾಣುತ್ತೆ."
ಹೊರಗೆ ತೋರಿಸದೆ ಇದ್ದರೂ ಒಳಗೆ ,ಮಳೆ ನಿಂತಿತಲ್ಲಾ ಎಂದು ಅವರೆಗೆಷ್ಟೋ
ಸಮಾಧಾನವೆನಿಸಿತ್ತು.
ನಾದಿನಿ ಹೋದಂದಿನಿಂದ ಉಪಾಧ್ಯಾಯರ ಹೆಂಡತಿ ಕಷ್ಟಕ್ಕೆ ಒಳಗಾಗಿದ್ದಳು.
ಐದು ಜನ ಮಕ್ಕಳಿದ್ದ ಆ ಸಂಸಾರದ ಗೃಹಕೃತ್ಯವನ್ನು ಒಬ್ಬಳಿಂದಲೇ ನೆರವೇರಿಸಿ
ಕೊಂಡು ಹೋಗುವುದು ಸುಲಭವಾಗಿರಲಿಲ್ಲ. ಸಾಲದುದಕ್ಕೆ ಅವಳ ಆರೋಗ್ಯವೂ
ಸರಿಯಾಗಿರಲಿಲ್ಲ. ಈ ವರ್ಷ ವರ್ಗ ಬೇರೆ ಆಗುವುದೆಂದು ಕಿಂವದಂತಿ ಹುಟ್ಟಿಕೊಂಡು
ಲಕ್ಷ್ಮೀನಾರಾಯಣಯ್ಯ ಗಾಬರಿಯಾಗಿದ್ದರು. ಈ ಸಲ ಬೀಸುತ್ತಿದ್ದ ದೊಣ್ಣೆಯಿಂದ
ತಪ್ಪಿಸಿಕೊಳ್ಳಲಾಗುವುದಿಲ್ಲವೆಂಬುದು ಅವರಿಗೆ ಸ್ಪಷ್ಟವಾಗಿತ್ತು.
"ಮುಂದಿನ ಏಪ್ರಿಲ್ ಹೊತ್ತಿಗೆ ವರ್ಗವಾದರೂ ಆಗಬಹುದು" ಎಂದು ಲಕ್ಷ್ಮೀ
ನಾರಾಯಣಯ್ಯ ರಂಗಮ್ಮನಿಗೆ ಸುದ್ದಿ ತಿಳಿಸಿದರು.
"ವರ್ಗವಾದರೂ ಎಲ್ಲಾದರೂ, ಹತ್ತಿರಕ್ಕೇ ಆಗುತ್ತೆ. ಸಂಸಾರವನ್ನೆಲ್ಲಾ ಇಲ್ಲೇ
ಬಿಟ್ಟಿರ್ರ್ತೀನಿ," ಎಂದು ಮುಂದಿನ ಯೋಜನೆಯನ್ನೂ ಲಕ್ಷ್ಮೀನಾರಾಯಣಯ್ಯ ತಿಳಿ
ಸಿದ್ದರಿಂದ, 'ಮನೆ ಬಾಡಿಗೆಗೆ ಇದೆ' ಬೋರ್ಡಿನ ವಿಚಾರ ರಂಗಮ್ಮ ಯೋಚಿಸಿಲಿಲ್ಲ.
............
ಈ ನಡುವೆ ವಠಾರದ ನೆಮ್ಮದಿಯನ್ನು ಕದಡಿದೊಂದು ಪ್ರಕರಣ ನಡೆದು
ಹೋಯಿತು.
ಅದು ಆರಂಭವಾದುದು ನೀರಿನ ನಲ್ಲಿಯ ಬಳಿ. ರಾಧೆಯ ಬಕೀಟಿನ ಹಿಂದೆ
ರಾಜಮ್ಮನ ಬಿಂದಿಗೆ ಇತ್ತು, ಆನಂತರ ಅಹಲೈಯ ಸರದಿ.
"ಒಂದು ರಾಶಿ ಬಟ್ಟೆ ಬಿದ್ದಿದೆ ಒಗೆಯೋಕೆ. ನಾನು ಮೊದಲು ನೀರು ಹಿಡಕೋ
ತೀನಿ ಕಣೇ," ಎಂದು ಅಹಲ್ಯಾ ರಾಧೆಗೆ ಹೇಲಿದರು. ರಾಧೆ ಬೇಡವೆನ್ನಲಿಲ್ಲ. ಅವ
ರಿಬ್ಬರೂ ಸ್ಥಳ ಬದಲಿಸಿಕೊಂಡರು. ತಟ್ಟೆಯಲ್ಲಿ ಉಪ್ಪಿಟ್ಟು ತುಂಬಿ ವೆಂಕಟೇಶನಿಗೆ
ಕೊಟ್ಟು ಬಂದ ರಾಜಮ್ಮನಿಗೆ, ಅಹಲ್ಯಾ ತನಗಿಂತ ಮುಂದಾಗಿ ನಿಂತಿದ್ದುದು ಕಂಡಿತು.
ಆಕೆ ಏನಾಗಿತ್ತೆಂಬುದನ್ನು ಗಮನಿಸದೆ ಅಹಲ್ಯೆಯತ್ತ ಧಾವಿಸಿದಳು.
"ಅಹಹಹಾ ನೀನೇ! ನಡಿ ಹಿಂದೆ!" ಎಂದು ಅಹಲ್ಯೆಯ ತೋಳು ಹಿಡಿದು ಆಕೆ
ಎಳೆದಳು.
ಆಗ ಕೊಳಾಯಿಯ ಬಳಿ ಇದ್ದ ಪದ್ಮಾವತಿಯೆಂದಳು:
"ನನ್ನದಾಯ್ತು. ಇನ್ನು ಹಿಡಕೊಳ್ಳೀಮ್ಮಾ."
ಅಹಲ್ಯಾ ತನ್ನ ಬಿಂದಿಗೆ ಇಡಬೇಕು. ಆದರೆ ರಾಜಮ್ಮ ಬಿಡಲೊಲ್ಲಳು. ಅಹಲ್ಯಾ

20
 

ಮತ್ತು ರಾಧಾ ಅದೇನನ್ನೋ ಹೇಳಲು ಹೊರಟರು. ಆದರೆ ಸ್ವರವೇರಿಸಿ ಬೈಯು
ವುದರಲ್ಲೆ ನಿರತಳಾದ ರಾಜಮ್ಮನಿಗೆ ಅದು ಒಂದೂ ಕೇಳಿಸಲಿಲ್ಲ. ಕಲಿಕಾಲದ ಹುಡುಗಿ
ಯರು ಬಜಾರಿಗಳೆಂದು ಆಕೆ ಸಾರಿದಳು. ಹಿಡಿಯುವರಿಲ್ಲದೆ ನೀರು ವೃಥಾ ಹರಿದು
ಹೋಯಿತು.
ಗದ್ದಲ ಕೇಳಿ ಬಂದ ರಂಗಮ್ಮ ಆಕ್ರೋಶ ಮಾಡಿದರು:
"ಅಯ್ಯೊ ನಮ್ಮಪ್ಪಾ! ನೀರು ಸುರಿದು ಹೋಗ್ತಾ ಇದೆಯಲ್ಲೇ!"
ತಾಯಿಯ ಸ್ವರ ಕೇಳಿ ವೆಂಕಟೇಶ ಉಪ್ಪಿಟ್ಟನ್ನು ಅರ್ಧದಲ್ಲೇ ಬಿಟ್ಟು ಹೊರ
ಬಂದ. ಆತನನ್ನು ನೋಡುತ್ತಲೆ ಅಹಲ್ಯಾ ಅಳತೊಡಗಿದಳು.
"ಹೋಗ್ಲಿ. ನಾನೇ ಹಿಡಕೊತೀನಿ", ಎಂದು ರಾಧಾ ತನ್ನ ಬಕೀಟನ್ನು ಕೊಳಾ
ಯಿಯ ಕೆಳಗಿಟ್ಟಳು.
ರಾಜಮ್ಮ ಗಟ್ಟಿಯಾಗಿ ಕಿರಿಚಿಕೊಳ್ಳುತ್ತ ಆ ಬಕೀಟನ್ನು ಪಕ್ಕಕ್ಕೆ ತಳ್ಳಿದರು. ಆ
ಗಲಾಟೆಯ ಮಧ್ಯೆ ನಿಜ ಸಂಗತಿ ರಾಜಮ್ಮನಿಗೆ ಹೊಳಿಯಿತು. ಅಹಲ್ಯಾ ರಾಧೆಯರು
ಸ್ಥಳಗಳನ್ನು ಮಾತ್ರ ಬದಲಾಯಿಸಿಕೊಂಡಿದ್ದರೆಂಬುದು ಸ್ಪಷ್ಟವಾಯಿತು. ತಪ್ಪು ತನ್ನ
ದೆಂದು ಗೊತ್ತಾದೊಡನೆ ಅವಳು ಮತ್ತಷ್ಟು ಗಟ್ಟಿಯಾಗಿ ಕೂಗಾಡಿದಳು:
"ರಾಮ ರಾಮಾ! ಈ ಹುಡುಗಿಯರು ಹೊಡೆಯೋಕೇ ಬರ್ತಾವಲ್ಲೇ!"
ಬೀದಿಯಲ್ಲೂ ಜನ ಗುಂಪು ಕಟ್ಟಿಕೊಂಡು ವಠಾರದತ್ತ ನೋಡತೊಡಗಿದರು.
ವೆಂಕಟೇಶ ತಾಯಿಗೆ ಹೇಳಿದ:
"ನೀನು ಬಾಮ್ಮ ಒಳಕ್ಕೆ. ಎಲ್ಲರ್ದೂ ಆದ್ಮೇಲೆ ನೀರು ಹಿಡ್ಕೊ."
ಮಗನೂ ಹುಡುಗಿಯರ ಪಕ್ಷ ವಹಿಸಿದ್ದನ್ನು ಕಂಡು ರಾಜಮ್ಮನಿಗೆ ರೇಗಿ
ಹೋಯಿತು.
"ಅಯ್ಯೋ ಮುಂಡೇಗಂಡಾ! ನೀನೂ ನಿಮ್ಮಮ್ಮನಿಗೆ ಅಂತಿಯೇನೋ!" ಎಂದು
ರಾಜಮ್ಮ ತನ್ನ ಬಿಂದಿಗೆ ಎತ್ತಿಕೊಂಡಳು.
"ಈ ನಲ್ಲಿ ನೀರೇ ಬೇಡ. ಬೀದಿ ಕೊಳಾಯಿಯಿಂದ ತರ್ತೀನಿ,"ಎಂದು ಹೇಳಿ
ಅವಳು ಎದುರುಗಡೆ ದೊಡ್ಡ ಮಹಲಿನ ಹೊರಭಾಗದಲ್ಲಿದ್ದ ಬೀದಿ ಕೊಳಾಯಿಯತ್ತ
ಸಾಗಿದಳು.
ವಠಾರದ ಕೊಳಾಯಿಯನ್ನು ಆಗಲೆ ನಿಲ್ಲಿಸಿಬಿಟ್ಟಿದ್ದರು ರಂಗಮ್ಮ. ರಾಜಮ್ಮ
ಹೊರಟು ಹೋದ ಮೇಲೆ ಅವರು ಮತ್ತೊಮ್ಮೆ ನಲ್ಲಿ ತಿರುಗಿಸಿದರು. ರಾಧಾ ನೀರು
ಹಿಡಿದಳು. ಅಹಲ್ಯಾ ಅಳುತ್ತಾ ಒಳಹೋದ ಮೇಲೆ ಆಕೆಗೆ ಒಂದೇಟು ಕೊಟ್ಟು,
ಮಗಳ ಬದಲು ಆಕೆಯ ತಾಯಿ ಹೊರ ಬಂದಳು.
ವೆಂಕಟೇಶ ಕೋಪದಿಂದ ಮುಖ ಊದಿಸಿಕೊಂಡು, ಉಪ್ಪಿಟ್ಟನ್ನು ಅರ್ಧದಲ್ಲೇ
ಬಿಟ್ಟು, ಚಪ್ಪಲಿ ಮೆಟ್ಟಿ ಹೊರಟು ಹೋದ.

ಬೀದಿಯ ಕೊಳಾಯಿ ತೆರವಾಗಿರಲಿಲ್ಲ. ಶ್ರೀಮಂತರ ಮನೆಯ ಮಾಲಿಯೂ

ಜವಾನರೂ ನೀರು ಹಿಡಿದು ಒಳಕ್ಕೊಯ್ದು ಹೂ ಗಿಡಗಳಿಗೆ ಚಿಮುಕಿಸುತ್ತಿದರು.
ಬೀದಿಯ ಕೊಳಾಯಿಯ ನೀರಿಗೆ ದುಡು ಕೊಡಬೇಕಾಗಿರಲಿಲ್ಲಿವಾದ್ದರಿಂದ ಅದನ್ನೇ
ಹೊದೋಟಕ್ಕಗಿ ಆ ದೊಡ್ಡ ಮನೆಯವರು ಉಪಯೋಗಿಸುವುದು ಸಹಜವಾಗಿತ್ತು.
"ಒಂದೆರಡು ಬಿಂದಿಗೆ ನೀರು ಹಿಡ್ಕೋತೀನಪ್ಪಾ," ಎಂದು ರಾಜಮ್ಮ
ಆಂಗಲಾಚಿದಯಳು.
"ಒಂದ್ಗಂಟೆ ಒತ್ತು ಬಿಟ್ಕಂಬನ್ನಿ," ಎಂದನೊಬ್ಬ. ಇನ್ನೊಬ್ಬ ಹೇಳಿದ:
"ವಠಾರದ ಕೊಳಾಯಿ ಕೆಟ್ಟೋಗೈತೆ?"
ಆ 'ಶೂ- ಮುಂಡೇವು'ಗಳೆದುರು ಬೇಡುತ್ತ ನಿಲ್ಲುವುದು ಮಾನಗೇಡೆಂದು
ರಾಜಮ್ಮ ಬುಸುಗುಟ್ವಿಕೊಂಡು ವಠಾರಕೈ ವಾಪಸು ಬಂದಳು. ಮನೆಯೊಳಗೇ ಇದ್ದು,
ಎಲ್ಲರದೂ ಆದ ಬಳಿಕ ತಾನು ನೀರು ಹಿಡಿದುಕೊಂಡಳು.
...ಅಷ್ಟೇ ಆಗಿದ್ದರೆ ಅದು ನಾಲ್ಕು ದಿನಗಳೊಳಗೆ ಮರೆತು ಹೋಗಬೇಕಾದ
ಸಾಮಾನ್ಯ ವಿಷಯವಾಗುತ್ತಿತು.
ಆದರೆ ಅದು ಅಷ್ಟೇ ಆಗಿರಲಿಲ್ಲ.
ಹಾಗೆಂದು ಮೊದಲು ಕಂಡು ಹಿಡಿದವಳು ಚಂಪಾ.
ಒಂದು ಮಧ್ಯಾಹ್ನ 'ಚಂದ್ರಲೇಖಾ' ಚಿತ್ರದ ಮ್ಯಾಟಿನಿ ಪ್ರದರ್ಶನ ನೋಡಲು
ಚಂಪಾವತಿಯ ನಾಯಕತ್ವದಲ್ಲಿ ವಠಾರದಿಂದ ಒಂದು ತಂಡ ಸೆಂಟ್ರಲ್ ಟಾಕೀಸಿಗೆ
ಹೊರಟಿತು. ಬರಲು ಬಹಳ ಜನ ಒಪ್ಪಿದ್ದರೂ ಹೊರಟಾಗ ಅವರಿದ್ದುದು ಚಂಪಾ
ವತಿಯ ಮಗುವನ್ನೂ ಸೇರಿಕೊಂಡು ಆರು ಜನ. ರಾಧಾ ಅಹಲ್ಯಾ, ಕಾಮಾಕ್ಷಿಯರ
ಉತ್ಸಾಹ ಹೇಳತೀರದು. ಮೀನಾಕ್ಷಮ್ಮನ ಮಗ ಆ ಚಿತ್ರವನ್ನು ಹಿಂದೆಯೇ ನೋಡಿದ್ದ.
ಅತನಿಗೆ ಒಂದಾಣೆ ಲಂಚ ಕೊಟ್ಟು ತಾಯಿ ಒಬ್ಬಳೇ ಗುಂಪಿನ ಜತೆ ಹೊರಟಳು.
ಚಂಪಾವತಿ ಮಗಳನ್ನೆತ್ತಿಕೊಂಡು ಬಂದಳು.
ಈಗ ಸ್ವಲ್ಪ ಸಮಯದಿಂದ ಅಹಲ್ಯೆಯ ಮುಖದ ಮೇಲೊಂದು ಕಳೆ ಇದ್ದು
ದನ್ನು ಚಂಪಾ ಕಂಡಿದ್ದಳು. ಹುಡುಗಿ ಬೆಳೆಯುತ್ತಿರುವುದರಿಂದ ಹಾಗೆ ಎಂದಷ್ಟೇ
ವಿವರಣೆ ಕೊಡಲು ಚಂಪಾ ಸಿದ್ಧಳಿರಲಿಲ್ಲ, ಆ ಕಳೆಯ ಅರ್ಥವೇನೆಂಬುದು ಆಕೆಗೆ
ಗೊತ್ತಿತ್ತು. ಪ್ರಾಯಶಃ ಹೀಗಿದೆಯೇನೋ ಎಂದು ಆಕೆ ಊಹಿಸಿಕೊಂಡಳು. ಆ
ಊಹೆ , ಇತರ ಎಷ್ಟೋ ವಿಷಯಗಳಂತೆ, ಮನಸಿನೊಂದು ಮೂಲೆಯಲ್ಲಿ ವಿಶ್ರಾಂತಿ
ಪಡೆಯಿತು.
ಅವರೆಲ್ಲ ರಾಜಾ ಮಿಲ್ಲನ್ನು ಬಳಸಿಕೊಂಡು ನಡೆದೇ ಹೋದರು. ನಡೆಯುತ್ತಿ
ದ್ದಾಗ ತಮ್ಮನ್ನು ನೋಡುತ್ತಿದ್ದ ಗಂಡಸರ ನೋಟಗಳು ಅವರಿಗೆ ಹೊಸದಾಗಿರಲಿಲ್ಲ.
ಅಹಲ್ಯೆ ಚಂಚಲಳಾಗಿ ಬಾರಿ ಬಾರಿಗೂ ಅತ್ತಿತ್ತ ನೋಡುತ್ತಿದ್ದಳು. ಯಾರನ್ನೋ
ಹುಡುಕುವ ಹಾಗಿತ್ತು ಆಕೆ....

ಅದನ್ನು ಗಮನಿಸಿದ ಚಂಪಾ ಮುಗುಳ್ನಕ್ಕಳು.

ಚಿತ್ರ ಆವರೆಲ್ಲರಿಗೂ ತುಂಬಾ ಹಿಡಿಸಿತು. ಆಗಲೆ ಆರೂವರೆ ಘಂಟೆಯಾಗಿತ್ತು.
ಗಂಡ ಅಷ್ಟರಲ್ಲೇ ಬಂದಿರಬೇಕೆಂದು ಕಾಮಾಕ್ಷಿ ಚಡಪಡಿಸಿದಳು. ಆದರೂ "ಮಲ್ಲೇ
ಶ್ವರದ ಅ೦ಗಡಿ ಬೀದಿ ಮೇಲಿಂದ ಹೋಗೋಣ್ವೇನ್ರಿ?" ಎ೦ದು ಚ೦ಪಾ ಕೇಳಿದಾಗ
ಯಾರೂ ಬೇಡವೆನ್ನಲಿಲ್ಲ.
ಅಂಗಡಿ ಬೀದಿ ತಲಪಿದಾಗ, ಯಾವುದೋ ಬೋರ್ಡಿನತ್ತ ಬೊಟ್ಟುಮಾಡತ್ತ
ರಾಧಾ ಅ೦ದಳು:
"ಅದೇ ನೋಡಿ ಡಾಕ್ಟರ್ ಶಾಪು. ಆ ದಿವಸ ಅಹಲ್ಯಾ ಮನೆಗೆ ಬಂದಿರ್ಲಿಲ್ವೆ?-
ಆ.ಡಕ್ಟರು."
"ರಾಜುಮ್ಮನ ಮಗ ಕೆಲಸ ಮಾಡ್ತಿರೋ ಶಾಪಾ?" ಎಂದು ಮೀನಾಕ್ಷಮ್ಮ ಅತ್ತ.
ನೋಡುತ್ತ ಕೇಳಿದರು. ಚಂಪಾ-ಕಾಮಾಕ್ಷಿಯರೂ ನೋಡಿದರು.
"ಹೂಂ. ಅದೇ," ಎಂದಳು ರಾಧಾ.
ಚಂಪಾ ಸರಕ್ಕನೆ ದ್ರಷ್ಟಿ ತಿರುಗಿಸಿ ಅಹಲ್ಯೆಯನ್ನು ದಿಟ್ಟಿಸಿದಳು. ಲಜ್ಜೆ-ಕಾತರ
ಗಳ ಸಮ್ಮಿಶ್ರಣದ ಸೊಬಗು... ಆ ಔಷಧಾಲಯದತ್ತ ಕಣ್ಣೆತ್ತಿ ನೋಡುವುದಕ್ಕೂ
ಅಧೈರ್ಯ. ಅರ್ಥವಾಯಿತು ಚಂಪಾವತಿಗೆ.
ಅಹಲ್ಯಾ ಮೊದಲಿನಂತೆ ಮಾತನಡತೊಡಗಿದ್ದು, ಬೇರೆ ಬೀದಿಗೆ ಅವರೆಲ್ಲ
ಕಾಲಿಟ್ಟ ಮೇಲೆಯೇ.
ಆ ರಾತ್ರೆ, ಒಂದೆಡೆ ಕಾಮಾಕ್ಶಿ ರಾಜುಕುಮಾರಿಯ ಸಾಹಸಗಳನ್ನು ನಾರಾಯಣ
ನಿಗೆ ಬಣ್ಣಿಸುತ್ತಿದ್ದಂತೆಯೇ, ಇನ್ನೊಂದೆಡೆ ಚಂಪಾ ತನ್ನ ಸಂಶೋಧನೆಯನ್ನು ಗಂಡನಿಗೆ
ತಿಳಿಸಿದಳು.
ಇದು ಸಿನಿಮಾದ ಪ್ರೇಮಕಥೆಯಾಗಿರಲಿಲ್ಲ, ವಾಸ್ತವವಾಗಿತ್ತು.
"ವೆಂಕಟೇಶ ಒಳ್ಳೆಯವನೇ...ಅಲ್ಲ ಅಂತಿಯಾ?" ಎಂದು ಶಂಕರನಾರಾಯ
ಣಯ್ಯ ಹೆಂಡತಿಯನ್ನು ಕೇಳಿದ. ಚಂಪಾವತಿಗೆ, ನಲ್ಲಿ ನೀರಿಗಾಗಿ ಜಗಳವಾದಾಗ
ವೆಂಕಟೇಶ ಹುಡುಗಿಯರ ಪಕ್ಷ ವಹಿಸಿದ್ದು ನೆನಪಾಗಿ ನಗು ಬಂತು.
"ಒಳ್ಳೆಯವನೇ!" ಎನ್ನುತ್ತ, ಆ ಘಟನೆಯನ್ನು ಚಂಪಾ ಗಂಡನಿಗೆ ನೆನಪು
ಮಾಡಿಕೊಟ್ಟಳು.
"ಆತನಿಗೆ ಉದ್ಯೋಗ ಬೇರೆ ಇದೆ. ನಾವು ಪಟ್ಟ ಸುಖ ಅವರು ಅನುಭವಿಸ್ಬೇ
ಕಾದ್ದಿಲ್ಲ!"
ಶಂಕರನಾರಾಯಣಯ್ಯ ಚಂಪಾವತಿಯರ ಸಂಬಂಧವೊ ಹಾಗೆಯೇ ಆರಂಭ
ವಾಗಿತ್ತು. ಆದರೆ ಆಗ ಶಂಕರನಾರಾಯಣಯ್ಯ ನಿರುದ್ಯೋಗಿಯಾಗಿದ್ದ ಕಡುಬಡವ.
ವಿವಾಹ ಸಾಧ್ಯಾವಾಗಲು ಕೆಲವು ವರ್ಷಗಳ ಕಾಲ ಅವರು ಕಾದಿರಬೇಕಾಯಿತು. ಅದು
ಯಮಸಂಕಟ. ಆ ಸುಖವನ್ನು ವೆಂಕಟೇಶ-ಅಹಲ್ಯೆಯರು ಅನುಭವಿಸಬೇಕಾದು

ದಿರಲಿಲ್ಲಿ.

"ಆದರೆ ಅವನಣ್ಣ ಒಬ್ಬನಿದಾನಲ್ಲಾ ವಿಘ್ನೇಶ್ವರ?"
"ಯಾರು ಗುಂಡಣ್ನೆ? ಅವನಿಗೊಂದು ಮದುವೆ ಬೇರೆ!"
ಅದೂ ಹೌದೆನ್ನಿಸಿತು ಚಂಪಾವತಿಗೆ. ಅಹಲ್ಯೆಗೆ ತಾನು ಬೆಂಬಲವಾಗಿ ನಿಂತು
ಆಕೆಯನ್ನು ಸುಖಿಯಾಗಿ ಮಾಡಲು ಯತ್ನಿಸಬೇಕೆಂದು ತೀರ್ಮಾನಿಸಿ ಚಂಪಾ ನಿದ್ದೆ
ಹೋದಳು.
...ಹಾಗೆ ಬೆಂಬಲವಾಗಿ ನಿಲ್ಲಲು ಅವಕಾಶವೇ ಇಲ್ಲದ ಹಾಗೆ ಆನಿರೀಕ್ಷಿತವಾ
ದುದು ನಡೆದು ಹೋಯಿತು.
ಆ ಸಂಜೆ. ಹೊರಗೆ ಹಿತ್ತಲಲ್ಲಿ ಬೀದಿಯ ಬಳಿ ಉಪಾಧ್ಯಾಯರ ಹೆಂಡತಿ
ಮಗುವನ್ನಾಡಿಸುತ್ತ ನಿಂತಿದ್ದಳು. ಒಬ್ಬರ ಮುಖ ಇನ್ನೊಬ್ಬರಿಗೆ ಅಸ್ಪಷ್ಟವಾಗಿ ಮಾತ್ರ
ಕಾಣಿಸುವಷ್ಟು ಕತ್ತಲಾಗಿತ್ತು. ಬೀದಿಯ ದೀಪಗಳು ಹತ್ತಿಕೊಂಡಿದ್ದುವು. ಬೀದಿ
ಯುದ್ದಕ್ಕೂ ಕೆಳಕ್ಕೆ ನೋಡುತ್ತಿದ್ದ ಉಪಾಧ್ಯಾಯರ ಹೆಂಡತಿ ಅವರಿಬ್ಬರನ್ನೂ
ಕಂಡರು. ಅಹಲ್ಯಾ ಮತ್ತು ವೆಂಕಟೇಶ, ಪರಸ್ಪರ ಮುಟ್ಟಿಕೊಂಡೇ ಇದ್ದರೇನೋ
ಎನ್ನುವಂತೆ ಒಬ್ಬರಿಗೊಬ್ಬರು ಸಮೀಪವಾಗಿಯೇ ನಡೆದು ಬರುತ್ತಿದ್ದರು.
ಬೇರೆ ಯಾರಾದರು ಇರಬಹುದೆಂದು ಸಂಶಯ ಬಂದು ಮತ್ತೂ ಸ್ವಲ್ಪ ಹೊತ್ತು ಆಕೆ ತಡೆ
ದಳು. ಅವರೇ. ಸಂದೇಹವೇ ಇರಲಿಲ್ಲ. ಆಕೆಯ ಮೆದುಳು ಬೇಗ ಬೇಗನೇ ಕೂಡಿಸಿ
ಕಳೆದು ನೋಡಿತು. ಹೌದು! ಸಂಜೆಯೆಲ್ಲಾ ಅಹಲ್ಯೆಯನ್ನು ಆಕೆ ವಠಾರದಲ್ಲಿ
ನೋಡಿಯೇ ಇರಲಿಲ್ಲ. ಆತನಿಗಂತೂ ಭಾನುವಾರ. ಪ್ರತಿಯೊಂದು ಸ್ಪಷ್ಟ
ವಾಗಿತ್ತು!
ವೆಂಕಟೇಶನನ್ನು ಬಿಟ್ಟು ಅಹಲ್ಯೆಯೊಬ್ಬಳೆ ಈಗ ಬೇಗನೆ ನಡೆಯುತ್ತಿದ್ದಂತೆ
ಕಂಡಿತು.
ಉಪಾಧ್ಯಾಯರ ಹೆಂಡತಿ ಮಗುವನ್ನೆತ್ತಿಕೊಂಡು ರಾಜಮ್ಮನ ಮನೆಗೆ ಧಾವಿಸಿ
ದಳು. ಗುಂಡಣ್ಣ ಅಲ್ಲಿರಲಿಲ್ಲ. ಇದ್ದವಳು ಮುದುಕಿ ಒಬ್ಬಳೇ.
"ರಾಜಮ್ಮ!ರಾಜಮ್ಮ!"
"ಯಾರು? ಏನು?"
ಬಲು ಪ್ರಯಾಸದಿಂದ ಉಸಿರು ಬಿಡುತ್ತ, ಆಕೆ ತಾನು ಕಂಡುದನ್ನು ರಾಜಮ್ಮ
ನಿಗೆ ಹೇಳಿದಳು. ಕೊಳಾಯಿಯ ಬಳಿ ತನಗೆ ಅವಮಾನವಾದ ದಿನದಿಂದ ಉಗುಳು
ನುಂಗಿಯೇ ಇದ್ದ ರಾಜಮ್ಮ್ ಹೆಡೆ ಮೆಟ್ಟಿದ ನಾಗಿಣಿಯಾದಳು. ಆಕೆ ಬಾಗಿಲ ಬಳಿ
ಬಂದು ನಿಂತಳು. ಉಪಧ್ಯಾಯರ ಹೆಂಡತಿ ತನ್ನ ಮನೆ ಗೋಡೆ ಬಾಗಿಲ ಹಿಂದೆ
ಆವಿತಕೊಂಡಳು.
ಅಹಲ್ಯಾ ಅಂಗಳಕ್ಕೆ ಬಂದು, ಬೇಗ ಬೇಗನೆ ನಡುಮನೆಯ ಹಾದಿಯನ್ನು
ದಾಟಿ ಓಣಗಿಳಿದಳು. ಕತ್ತಲಲ್ಲಿ ನಾಲ್ಕು ಕಣ್ಣುಗಳು ತನ್ನನೇ ನೋಡುತ್ತಿದ್ದುದು

ಆಕೆಗೆ ಕಾಣಿಸಲಿಲ್ಲ.

ಮತ್ತೆ ಎರಡು ನಿಮಿಷಗಳಲ್ಲಿ ವೆಂಕಟೇಶ ಬಂದ. ಆತನನ್ನು ಮನೆಯೊಳಕ್ಕೆ
ಬರಬಿಡುತ್ತ ತಾಯಿ ಕೂಗಾಡಿದಳು.
"ನನ್ನ ಮಾನ ಕಳೀಬೇಕೂಂತ ಮಾಡಿದೀಯೇನೋ ಮುಂಡೇಗಂಡ!"
ಇಂತಹ ವಿಷಯಗಳಲ್ಲಿ ತಪ್ಪೆಲ್ಲಾ ಹುಡುಗಿಯರದೇ ಎಂಬುದು ಆಕೆಯ ನಿಶ್ಚಿತ
ಅಭಿಪ್ರಾಯ. ತನ್ನ ಮಗನನ್ನು ಬಲೆಗೆ ಕೆಡವಲು ಮುಂದಾದ ಪಾಪಿಯನ್ನು ದಂಡಿ
ಸಲು ಕೈಯಲ್ಲಿ ಪೊರಕೆ ಹಿಡಿದು ಆಕೆ ಹೊರಟಳು.
ಮನೆಯ ದೀಪಗಳೆಲ್ಲ ಬೆಳಗಿದವು. ವಠಾರವೆಲ್ಲ ಓಣಿಗೆ ಇಳಿಯಿತು. ರಾಜಮ್ಮ
ನಡು ಓಣಿಯಲ್ಲಿ ನಿಂತು ಗುಡುಗಿದಳು:
"ಎಲ್ಲಿ ಆ ಗಯ್ಯಾಳಿ ಅಹಲ್ಯಾ! ಬಾರೇ ಇಲ್ಲಿ! ನನ್ಮನೇನ ಮುಳುಗಿಸ್ಬೇಕೂಂತ
ಮಾಡಿದೀಯೇನೆ?"
ಸಂದರ್ಭವೇನೆಂದು ಊಹಿಸಿಕೊಂಡ ಚಂಪಾವತಿಯ ಹೃದಯ ತಣ್ಣಗಾಯಿತು.
ಆಕೆ ರಾಜಮ್ಮನನ್ನು ತಡೆಯಬೇಕೆಂದು ಅಂದಳು:
"ನಮ್ಮನೇ ಒಳಗ್ಬನ್ನೀಮ್ಮಾ, ಏನು ಸಮಾಚಾರ?"
"ನೀವು ಸುಮ್ನಿರಿ! ಯಾರೂ ನನ್ನ ತಡೀಬೇಡಿ! ಇವತ್ತು ಇವರ ಮಾನ
ಮರ್ಯಾದೆಯೆಲ್ಲಾ ಧೂಳೆಬ್ಬಿಸಿಬಿಡ್ತೀನಿ. ಕೆಟ್ಟ ರಂಡೆ!"
ರಾಮಚಂದ್ರಯ್ಯ ಮನೆಯಲ್ಲಿರಲಿಲ್ಲ. ಇದೇನು ಗಂಡಾಂತರ ಬಂತೆಂದು ಆತನ
ತಾಯಿ ನಡುಗಿದಳು. ರಾಜಮ್ಮನ ಬಾಯಿ ಮುಚ್ಚಿಸೋಣವೆಂದು ಅಹಲ್ಯೆಯ
ತಾಯಿ ಮಗಳನ್ನು ಕರೆದಳು.
"ಇಲ್ಲಿ ಬಾರೇ ಅಹಲ್ಯಾ! ಏನ್ಮಾಡ್ಕೊಂಡು ಬಂದ್ಯೇ?"
ಏನು ಮಾಡಿಕೊಂಡು ಬಂದಿರಬಹುದೆಂದು ಆಗಲೇ ಊಹಿಸಿದ್ದ ರಾಜಮ್ಮ,
ವಠಾರದ ಹೆಂಗಸರೆಲ್ಲರ ಮುಂದೆ, ಹೆಂಗಸರ ಹಿಂದೆ ನಿಂತಿದ್ದ ಕೆಲವರು ಗಂಡಸರಿಗೂ
ಕೇಳಿಸುವಂತೆ, ಅಂದಳು:
ನನ್ನ ಹೆಣ ಎತ್ತೋಕ್ಮುಂಚೇನೇ ವೆಂಕಟೇಶನ ಮೇಲೆ ಬಲೆ ಬೀಸಿದಾಳಲ್ರೀ ಈ
ಢಾಕಿಣಿ!ವಠಾರನ ಯಾಕಮ್ಮ ಹೊಲಸೆಬ್ಬಿಸ್ತೀಯೇ? ಬೇಕಿದ್ರೆ ಬೇರೆ ಬೀದಿಗೆ
ಹೋಗಿ ಅಂಗಡಿ ತೆರಕೋ!"
ಅಹಲ್ಯೆಯ ತಾಯಿ ಎಂದೂ ಧೈರ್ಯಪ್ರಕೃತಿಯವಳಾಗಿರಲಿಲ್ಲ. ರಾಜಮ್ಮನ
ಮಾತು ಕೇಳಿ ಅವಳ ಜಂಘಾಬಲ ಉಡುಗುಹೋಯಿತು. ಆದರೂ ಆಕೆ ಅಹಲ್ಯೆಯ
ತುರುಬು ಹಿಡಿದು ಹೊರಕ್ಕೆಳೆದು ಧಪಧಪನೆ ಗುದ್ದಿದಳು.
"ಅದೇನು ಬೊಗಳೇ! ಇಂಥಾಮಾತು ಕೇಳೋ ಹಾಗೆ ಮಾಡಿದ್ಯಲ್ಲೇ!"
"ನಾನೇನು ಮಾಡಿಲ್ಲಮ್ಮಾ, ಏನೂ ಮಾಡಿಲ್ಲ" ಎಂದು ಅಹಲ್ಯಾ
ರೋದಿಸಿದಳು.

ವೆಂಕಟೇಶ ಬಿರುಗಾಳಿಯಂತೆ ನುಗ್ಗಿ ತನ್ನ ತಾಯಿಯ ರಟ್ಟೆ ಹಿಡಿದೆಳೆದು
ರಂಗಮ್ಮನ ವಠಾರ
159
 

ಅರಚಿದ:
"ನಡಿಯಮ್ಮಾ ಒಳಗೆ. ನಿನಗೆ ಹುಚ್ಚು!"
"ನನಗೆ ಹುಚ್ಚು!ಹುಚ್ಚು!ತಾಯಿಗೇ ಹೊಡೆಯೋಕೆ ಬರ್ತಿಯಲ್ಲೋ ಪಾಪಿ!"
ರಾಜಮ್ಮ ಅಳತೊಡಗುತ್ತಾ ಕೈಯಲ್ಲಿದ್ದ ಪೊರಕೆಯಿಂದ ಮಗನಿಗೆ ಬಾರಿಸಿ
ದಳು.......
ಇನ್ನು ತಾವು ಓಣಿಗೆ ಪ್ರವೇಶಿಸಬಹುದೆಂದು ನಿರ್ಧರಿಸಿ ರಂಗಮ್ಮ ಹೊರಕ್ಕೆ
ಬಂದು, ಎತ್ತರದ ಧ್ವನಿಯಲ್ಲಿ ಗದರಿದರು:
"ಏನಿದು ಗಲಾಟೆ? ವಠಾರಕ್ಕೆ ಪೋಲೀಸ್ನೋರ್ನ ಕರಕೊಂಡು ಬರ್ಬೇಕೂಂತ
ಮಾಡಿದೀರೋ ಹ್ಯಾಗೆ? ಇಷ್ಟು ಬುದ್ಧಿ ಇಲ್ದೆ ಹೋಯ್ತೆ ನಿಮಗೆ? ಏನು ಸಮಾ
ಚಾರ? ಬನ್ನಿ ಇಲ್ಲಿ__ನಮ್ಮನೇಗೆ ಬನ್ನಿ...ರಾಜಮ್ಮ,ಅಹಲ್ಯಾ_ಎಲ್ರೂ ಬನ್ನಿ."
ರಂಗಮ್ಮನ ಮನೆ ತುಂಬಿ ಹೋಯಿತು. ಅಹಲ್ಯೆಯನ್ನು ಎಳೆದುಕೊಂಡು
ಬಂದರು. ವೆಂಕಟೇಶ, ಉಟ್ಟ ಬಟ್ಟೆಯಲ್ಲೆ_ಬರಿಗಾಲಲ್ಲೆ "ರಾಕ್ಷಸರು! ಪಿಶಾಚಿಗಳು!"
ಎಂದು ಶಪಿಸುತ್ತ ವಠಾರದಿಂದ ಹೊರಹೋದ.
ಅಹಲ್ಯಾ ಅಳುತ್ತಳುತ್ತ ಹೇಳಿದಳು:
"ಏನೂ ಇಲ್ಲ ರಂಗಮ್ನೋರೆ ನನ್ನ ಸ್ನೇಹಿತೆ ಇಂದಿರಾ ಮನೆಗೆ ಹೋಗಿದ್ದೆ.
ಸೇತುವೆ ದಾಟ್ತಿದ್ದಾಗ ರಾಜಮ್ಮನ ಮಗನೂ ಬಂದ್ರು......ಇಷ್ಟು ದೂರ ಒಂದೇ
ರಸ್ತೇಲಿ ನಡಕೊಂಡು ಬಂದ್ವಿ."
'ರಾಜಮ್ಮನ ಮಗ' ಎಂದಿದ್ದಳು ಹುಡುಗಿ ;'ವಂಕಟೇಶ' ಎಂದಲ್ಲ.
ಸ್ವಲ್ಪ ದೂರ ನಡೆದು ಬಂದರೆಂಬುದೇನೋ ನಿಜವೇ.
"ಅಷ್ಟಕ್ಕೆ ಇಷ್ಟೆಲ್ಲಾ ರಂಪ ಮಾಡ್ಬೇಕೆ?" ಎಂದು ಚಂಪಾವತಿ ಸಂಧಿ ಸಾಧಿಸಿ
ಒಳ್ಳೆಯ ಮಾತನ್ನು ಆಡಿದಳು.
"ಔಷಧಿ ತರೋಕೆ ಅವತ್ತೆಲ್ಲಾ ಜತೇಲೆ ಕಳಿಸ್ತಿರ್ಲಿಲ್ವೇನೊ?" ಎಂದು ಕಾಮಾ
ಕ್ಷಿಯೂ ಅಹಲ್ಯೆಯ ಬೆಂಬಲಕ್ಕೆ ಬಂದಳು.
ಅಹಲ್ಯೆ ಆಡಿದುದು ಸತ್ಯವಿರಲಿ ಸುಳ್ಳಿರಲಿ, ಆ ಪ್ರಕರಣವನ್ನು ಮುಂದಕ್ಕೆ
ಬೆಳೆಯಗೊಡಲು ರಂಗಮ್ಮ ಬಿಡುವಂತಿರಲಿಲ್ಲ. ವಠಾರದ ಒಳ್ಳೆ ಹೆಸರಿಗೆ ಮಸಿ ಬಳೆಸಿ
ಕೊಳ್ಳಲು ಅವರು ಸಿದ್ಧರಿರಲಿಲ್ಲ. ಅಷ್ಟರಲ್ಲೇ ಬೇರೊಂದು ಯೋಚನೆಯೂ ಅವರಿಗೆ
ಹೊಳೆಯಿತು. ಅದನ್ನು ಕಾರ್ಯಗತಗೊಳಿಸುವುದಕ್ಕೆ ಪೂರ್ವಭಾವಿಯಾಗಿ ವಠಾರ
ದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಅವರು ಉದ್ಯುಕ್ತರಾದರು.
"ಅಹಲ್ಯಾ,ಬಾಮ್ಮ ಇಲ್ಲಿ. ಇದು ದೇವರ ಪಠ. ಇದನ್ನು ಮುಟ್ಟಿ ಆಣೆ
ಮಾಡಿ ಹೇಳು."
ಅಹಲ್ಯಾ ಹಾಗೆ ಮಾಡಿದಳು.

"ರಾಜಮ್ಮ, ಇಷ್ಟಕ್ಕೆ ಸಾಕು. ಆಗಿರೋದ್ನೆಲ್ಲಾ ಎಲ್ಲರೂ ಮರೆತ್ಬಿಡಿ...ಹೋಗಿ
160
ಸೇತುವೆ
 

ಇನ್ನು,ಹೋಗಿ. ಹೋಗಮ್ಮ ಅಹಲ್ಯಾ."
..ಮನೆಗೆ ಬಂದು ರಾಮಚಂದ್ರಯ್ಯ ವಿಷಯ ತಿಳಿದು, ಇಂಥವರ ಮೇಲೆಯೇ
ಎಂದಿಲ್ಲದೆ,ರೇಗಾಡಿದ.
ಗದ್ದಲವಾದಾಗ ಜಯರಾಮು_ರಾಧಾ ಇಬ್ಬರೂ ಮನೆಯಲ್ಲಿರಲಿಲ್ಲ.
ಬಂದೊಡನೆ ರಾಧಾ`, ಸುದ್ದಿ ಕೇಳಿ, ಚಂಪಾವತಿಯಲ್ಲಿಗೆ ಬಂದು ಅದೇನೆಂದು
ವಿಚಾರಿಸಿದಳು.
ಚಂಪಾ ಚುಟುಕಾಗಿ ಹೇಳಿ,ಅಂದಳು:
"ಏನೋ ಆಯ್ತು ಬಿಡು. ಅದನ್ನೆಲ್ಲಾ ಮನಸ್ಸಿಗೆ ಹಚ್ಕೋಬಾರದು."
ಆದರೆ ತನ್ನ ಗೆಳತಿಯ ಮೇಲೆ ಆರೋಪ ಹೊರಿಸಿದ ರಾಜಮ್ಮನನ್ನು ಕ್ಷಮಿಸಲು
ರಾಧಾ ಸಿದ್ಧಳಿರಲಿಲ್ಲ. ಸಾಮಾನ್ಯವಾಗಿ ಶಾಂತಳಾಗಿಯೇ ಇರುತ್ತಿದ್ದ ರಾಧಾ ಆ ದಿನ
ಔಡುಗಚ್ಚಿ ಅಂದಳು:
"ತಾಳಿ! ಆ ಮುದಿ ಗೂಬೆಗೆ ಮಾಡ್ತೀನಿ ಒಂದಿವ್ಸ!"....
ಮನೆಗೆ ಬಂದ ಮೇಲೆ ಆದುದೆಲ್ಲವನ್ನೂ ತಿಳಿದ ಶಂಕರನಾರಾಯಣಯ್ಯನಿಗೆ
ತುಂಬಾ ಕೆಡುಕೆನಿಸಿತು.
ವೆಂಕಟೇಶ ಬಹಳ ಹೊತ್ತಾದರೂ ಬರಲಿಲ್ಲವೆಂದು ರಾಜಮ್ಮ ಗಾಬರಿ
ಯಾದಳು.
"ಹೋಗಿ ಹುಡ್ಕೋ ಗುಂಡಾ," ಎಂದು ದೊಡ್ಡ ಮಗನಿಗೆ ಹೇಳಿದಳು.
"ನಿನಗೆ ಬುದ್ಧಿ ಇಲ್ಲವಮ್ಮ," ಎಂದು ಹೇಳಿ ಗುಂಡಣ್ಣ ಹಾಸಿಗೆ ಸುರುಳಿ
ಬಿಚ್ಚಿ ಮಲಗಿಕೊಂಡ.
ತನ್ನ ದೊಡ್ಡ ಮಗನ ಕೈಲಿ ಎಂದೂ ಅಂತಹ ಮಾತು ಕೇಳದೆ ಇದ್ದ ರಾಜಮ್ಮ
ತನ್ನ ದೈವವನ್ನು ಹಳಿಯುತ್ತ ಅಳುತ್ತ ಕುಳಿತಳು.
ನಡುರಾತ್ರೆಯ ಹೊತ್ತಿಗೆ ವೆಂಕಟೇಶ ಮನೆಗೆ ಬಂದ.
.....ವೆಂಕಟೇಶ_ಅಹಲ್ಯೆಯರ ವಿಷಯದಲ್ಲಿ ಚಂಪಾ ತೋರಿದ್ದು ಬರಿಯ
ಕನಿಕರವನ್ನು. ಆದರೆ ರಂಗಮ್ಮ ತಾವು ಮನಸ್ಸಿನಲ್ಲಿ ಲೆಕ್ಕ ಹಾಕಿದ್ದನ್ನು ಕೃತಿಗಿಳಿಸಲು
ಹೊರಟರು.
ಆದರೆ ರಾಜಮ್ಮ ಖಂಡ ತುಂಡವಾಗಿ ಹೇಳಿದಳು.
"ಯಾರು? ಆ ಸಕೇಶಿ ಮಗಳನ್ನೆ? ಆ ಬಜಾರಿ ಲೌಡೀನ ಸೊಸೆಯಾಗಿ
ಕರಕೋ ಅಂತ ನನಗೆ ಅಂತೀರಾ? ಈ ವಿಷಯ ಇನ್ನೊಮ್ಮೆ ಎತ್ಬೇಡಿ ರಂಗಮ್ನೋರೆ!"
ತಮಗೆ ಅವಮಾನವಾಯಿತೆಂದುಕೊಂಡರು ರಂಗಮ್ಮ.
ವಿಧವೆಯಾದ ಎದುರುಮನೆಯಾಕೆಯ ಕೇಶರಾಶಿಯನ್ನು ದಿನವೂ ನೋಡು
ತ್ತಿದ್ದ ರಾಜಮ್ಮ ಆಕೆಯ ಮಗಳನ್ನೆ ಸೊಸೆಯಾಗಿ ತರುವುದು ಸಾಧ್ಯವಿತ್ತೆ? ರಾಮ
ಚಂದ್ರಯ್ಯ ಕಾಹಿಲೆ ಮಲಗಿದಾಗ ವಿಷಯ ಬೇರೆಯಾಗಿತ್ತು. ತನ್ನ ಮಗ ವೆಂಕಟೇಶನ
ಹಿರಿಮೆಯನ್ನು ತೋರಿಸುವುದಕ್ಕಾಗಿ ಆತ ಆ ಮನೆಯವರಿಗೆ ನೆರವಾಗುವಂತೆ ರಾಜಮ್ಮ
ಮಾಡಿದ್ದಳು. ಆ ಸಹಾಯದ ಪರಿಣಾಮ ಈ ರೀತಿಯಾಗಬಹುದೆಂಬ ಸಂದೇಹ
ಒಂದಿಷ್ಟಾದರೂ ಇದ್ದಿದ್ದರೆ ಆಕೆ ಅದಕ್ಕೆ ಆಸ್ಪದವೀಯುತ್ತಿರಲಿಲ್ಲ.
ರಂಗಮ್ಮ ಮಾಡುವಂತಹದೇನೂ ಉಳಿಯಲಿಲ್ಲ.ಅವರು ಸೋಲನ್ನೊಪ್ಪ
ಬೇಕಾಯಿತು.
ರಂಗಮ್ಮನ ರಾಯಭಾರದ ವಿವರ ತಿಳಿದ ಮೇಲೆ ಚಂಪಾವತಿಯೂ ನಿರಾಶ
ಳಾದಳು.
ವೆಂಕಟೇಶ ತಾಯಿಯ ಮಾತನ್ನು ಮೀರಿ ಹೋಗುವಷ್ಟರ ಧೈರ್ಯವಂತನಾಗಿರ
ಲಿಲ್ಲ. ಇಬ್ಬರು ಮಕ್ಕಳಿಗಾಗಿಯೂ ರಾಜಮ್ಮ ಕನ್ಯಾನ್ವೇಷಣೆ ನಡೆಸಿದಳು. ಮನಸ್ಸು
ಕಹಿಯಾಗಿದ್ದ ವೆಂಕಟೇಶ ಹೇಳಿದ:
"ನೀನು ಮದುವೆ ಮಾತೆತ್ತಿದರೆ ಈ ಮನೆ ಬಿಟ್ಟು ಹೋಗ್ತೀನಿ."
ಹಾಗೆ ಹೆದರಿಸಿದವನು, 'ಮದುವೆಯಾದರೆ ಅಹಲ್ಯೆಯನ್ನೇ'ಎಂದು ಹೇಳಲಿಲ್ಲ.
ಸೊರಗುತ್ತಿದ್ದ ಅಹಲ್ಯೆಯನ್ನು ಸೂಕ್ಷ್ಮವಾಗಿ ಚಂಪಾ ನಿರೀಕ್ಷಿಸಿದಳು.ವೆಂಕಟೇಶ
ನೊಡನೆ ಸಂಪರ್ಕ ಬೆಳಸಲು ಆಕೆ ಯತ್ನಿಸಿದಂತೆಯೇ ತೋರಲಿಲ್ಲ.
'ಇವರಿಬ್ಬರ ನಡುವೆ ಯಾವ ಮಾತುಕತೆಯೂ ಆಗಿಯೇ ಇಲ್ಲವೇನೋ . ತುಟಿ
ಗಳು ಹೋಗಲಿ,ಕಣ್ಣುಗಳೇ ಪರಸ್ಪರ ಮಾತನಾಡಿದಂತಿಲ್ಲ.ಅಷ್ಟರಲ್ಲೇ ಸುತ್ತಿಗೆ ಏಟು
ಹೊಡೆದು ಅಪ್ಪಚ್ಚಿ ಮಾಡಿದ್ದಾಯ್ತು'...ಎಂದು ಚಂಪಾ ಮನಸ್ಸಿನೊಳಗೇ ಅಂದು
ಕೊಂಡು ನಿಟ್ಟುಸಿರುಬಿಟ್ಟಳು.
ಆದಾದ ಒಂದುವರೆ ತಿಂಗಳಲ್ಲಿ ಅಹಲ್ಯೆಯ ಮದುವೆಯಾಯಿತು. ವಠಾರದ
ಹೊರಗೆ ಊರ ದೇವಸ್ಥಾನದಲ್ಲಿ ನಡೆಯಿತು,ಮದುವೆ. ಆಕೆ ಗಂಡನೊಡನೆ ಚನ್ನ
ಪಟ್ಣಕ್ಕೆ ಹೊರಟು ನಿಂತಳು. ವರ,ರಾಮಚಂದ್ರಯ್ಯನ ಹಳೆಯ ಸಹಪಾಠಿ.ಅಹಲ್ಯೆಯ
ತಾಯಿಯ ಕಡೆಯವರು ಬಂದು ನಿಂತು ಮದುವೆ ಮಾಡಿಸಿದರು.
ರಾಧಾ ಕೊನೆಯ ನಿಮಿಷದವರೆಗೂ ಅಹಲ್ಯೆಯ ಜೊತೆಯಲ್ಲೇ ಇದ್ದಳು.
ಅಹಲ್ಯೆಯನ್ನು ಬೀಳ್ಕೊಡುವಾಗ ತನಗೆ ಅಳು ಬಂದುದನ್ನು ಕಂಡು ಚಂಪಾ
ವತಿಗೆ ಆಶ್ಚರ್ಯವಾಯಿತು. ಆಕೆ ಕಂಪಿಸುವ ಧ್ವನಿಯಲ್ಲಿ ಅಂದಳು:
"ಹೋಗಿ ಬರ್ತೀಯಾ ಅಹಲ್ಯಾ? ಪ್ರಪಂಚದಲ್ಲಿ ಕೆಟ್ಟದ್ದೂ ಇದೆ_ ಒಳ್ಳೇದೂ
ಇದೆ.ಕೆಟ್ಟದನ್ನಷ್ಟೇ ಜ್ಞಾಪಿಸ್ಕೋಬೇಡವಮ್ಮ_ಮನಸ್ಸಿಗೆ ಆಗಿರೋ ನೋವನ್ನೆಲ್ಲಾ
ಮರೆತ್ಬಿಡು...ಬರ್ತೀಯಾ?...ನಮ್ಮನ್ನ ಮರೀಬೇಡವಮ್ಮ."
ಅಹಲ್ಯಾ ಅಳುತ್ತ ರಂಗಮ್ಮನ ವಠಾರದಿಂದ ಹೊರಟು ಹೋದಳು.
ಇದನ್ನೆಲ್ಲಾ ನೋಡುತ್ತಿದ್ದ ಜಯರಾಮುವಿಗೆ ಬೇಕು ಬೇಕೆಂದೇ ಯಾರೋ
ಕಾದ ಕಬ್ಬಿಣದಿಂದ ತನ್ನ ಹೃದಯದ ಮೇಲೆ ಬರೆ ಎಳೆದಂತಾಯಿತು. ಅವನ ಮುಖ

21