ರಂಗಮ್ಮನ ವಠಾರ/೧೯
ಆಗಾಗ್ಗೆ ಕಾಗದದಲ್ಲಿ ರಂಗಮ್ಮ ಮಗನಿಗೆ ಷರಾ ಬರೆಸುವುದಿತ್ತು. ಅದು ಎಷ್ಟೋ
ವರ್ಷಗಳಿಂದ ಅವರು ಬರೆಸುತ್ತಲೇ ಬಂದ ಒಕ್ಕಣೆ.
'ಪಾಮಿಸ್ಟ್ರಿ ಪ್ರೊಫೆಸರ್ ಪದ್ಮನಾಭಯ್ಯ' ರಂಗಮ್ಮನ ಕೈ ನೋಡಿ ಭವಿಷ್ಯ ನುಡಿ
ದಿರಲಿಲ್ಲ ನಿಜ. ಆದರೆ, ರಂಗಮ್ಮನನ್ನು ಬಿಟ್ಟು ವಠಾರ ಇದ್ದೀತು ಎಂದು ಹೇಳುವ
ಸಾಹಸ ಮಾಡಲು ಯಾರೂ ಸಿದ್ಧರಿರಲಿಲ್ಲ.
ಜಾಗೃತಾವಸ್ಥೆಯಿರಲಿ, ಸ್ವಪ್ನಾವಸ್ಥೆಯಿರಲಿ - ರಂಗಮ್ಮನ ಹೆಚ್ಚಿನ ಆಯುಸ್ಸೆಲ್ಲ
ವಠಾರದ ಚಿಂತನೆಯಲ್ಲಿ ಕಳೆದು ಹೋಗುತಿತ್ತು.
"ನಿಮ್ಮ ವಠಾರದಲ್ಲಿ ಎಷ್ಟು ಸಂಸಾರಗಳಿವೆ ರಂಗಮ್ನೋರೆ?" ಎಂದು ಯಾರಾ
ದರು ಕೇಳಿದರೆ, ಅವರು ಕೊಡುತ್ತಿದ್ದ ಉತ್ತರ:
"ಹದಿನಾಲ್ಕು."
"ಹದಿನೈದಲ್ವೆ ಅಜ್ಜಿ?"
-ಎಂದು ಯಾರಾದರೂ ತಿದ್ದಲು ಹೋಗುವುದಿತ್ತು. 'ಅಜ್ಜಿ' ಎಂಬ ಸಂಬೋ
ಧನೆ ಅವರಿಗೆ ಪ್ರಿಯವಾಗಿರಲಿಲ್ಲ. ಸ್ವಲ್ಪ ರೇಗುತ್ತ, ಅವರು ಸಾರುತ್ತಿದರು:
"ಹದಿನೈದಲ್ಲ, ಹದಿನಾಲ್ಕೇ!"
ನಿಜವಾಗಿ, ಅವರದನ್ನೂ ಸೇರಿಸಿ ಸಂಸಾರಗಳಾಗುತ್ತಿದ್ದುವು. ಆದರೆ
ಅವರ ಲೆಕ್ಕದ ರೀತಿ ಬೇರೆ. ಹದಿನಾಲ್ಕು ಸಂಸಾರಗಳು ತಮ್ಮ ಮನೆಯಲ್ಲಿವೆ, ವಠಾರ
ದಲ್ಲಿವೆ, ಎಂದು ಅವರು ಸಾಧಿಸುತ್ತಿದ್ದರು.
ಸ್ವಲ್ಪ ಕಾಲದ ಹಿಂದೆ ನಡೆದ ಅಹಲ್ಯಾ-ವೆಂಕಟೇಶರ ಪ್ರಕರಣವನ್ನು ರಂಗಮ್ಮ
ಮರೆತಿರಲಿಲ್ಲ. ಅದರಿಂದ ಅವರ ಮನಸ್ಸಿಗೆ ತುಂಬಾ ನೋವಾಗಿತ್ತು. ರಾಜಮ್ಮ ತನ್ನ
ಮಾತಿಗೆ ಬೆಲೆ ಕೊಡಲಿಲ್ಲವೆಂಬುದು ಆಗಾಗ್ಗೆ ಅವರಿಗೆ ನೆನಪಾಗುತಿತ್ತು.
ಅದನ್ನು ಮರೆಸುವಂತಹ ಒಳ್ಳೆಯ ಕೆಲಸವನ್ನೇನಾದರೂ ಮಾಡಲು ಅವರು
ಹಾತೊರೆಯುತ್ತಿದ್ದರು.
ಹಿಂದೆಯೇ ಅವರ ಮನಸ್ಸಿನೊಳಗಿದ್ದು ಮೂಲೆ ಸೇರಿದ್ದ ವಿಷಯ ಚಳಿಗಾಲದ
ಅನಂತರ ಹೊಂಬಿಸಿಲಿನಲ್ಲಿ ಗರಿಗೆದರಿಕೊಂಡು ಹೊರಬಂತು.
ಒಂದು ಸಂಜೆ ಹೊರ ಅಂಗಳದಲ್ಲಿ ನಿಂತಿದ್ದ ಅವರು ವಠಾರಕ್ಕೆ ಹಿಂತಿರುಗುತ್ತಿದ್ದ
ಚಂದ್ರಶೇಖರಯ್ಯನನ್ನು ಕಂಡರು. ಆತ ಇತ್ತೀಚಿಗೆ ಇಸ್ತ್ರಿ ಹಾಕಿದ್ದ ತನ್ನ ಹಳೆಯ
ಗ್ಯಾಬರ್ಡೀನ್ ಸೂಟನ್ನು ತೊಟ್ಟಿದ್ದ. ರಂಗಮ್ಮನ ಕಣ್ಣಿಗೆ ಸಿಂಗರಿಸಿದ ಮದುವಣಿಗನ
ಹಾಗೆಯೇ ಅವನು ಕಂಡ.
"ಏನು ಚಂದ್ರಶೇಖರಯ್ಯ, ನಿಮ್ಮ ಹತ್ತಿರ ಮಾತನಾಡೋಣ ಅಂದ್ರೆ ನಿಮಗೆ
ಒಂದು ನಿಮಿಷವೂ ಪುರುಸೊತ್ತೇ ಇಲ್ವಲ್ಲಾ?" ಎಂದು ರಂಗಮ್ಮ ಪೀಠಿಕೆ ಹಾಕಿದರು.
"ಪುರುಸೊತ್ತು ನಿಮಗಿರೊಲ್ಲಾಂತ ನಾನೇ ಬಂದು ಮಾತಾಡ್ಸೊಲ್ಲ. ಅಷ್ಟೆ,"
ಎಂದು ಚಂದ್ರಶೇಖರಯ್ಯ ವಿವರಣೆ ಕೊಟ್ಟ, ರಂಗಮ್ಮ ನಿಲ್ಲಿಸಿಕೊಂಡು ಭೈರಿಗೆ ಕೊರೆಯುವರೇನೊ ಎ೦ಬ ಭಯದಿ೦ದ, ಮಹಡಿ ಮೆಟ್ಟಲುಗಳನ್ನೇರತೊಡಗಿದ.
"ಕೆಳಗೆ ನಮ್ಮನೇಗ್ಬನ್ನಿ ಸ್ವಲ್ಪ," ಎ೦ದು ರ೦ಗಮ್ಮ ಕರೆದರು. ಅವರ ದೃಷ್ಟಿಗೆ,
ಕೊನೆಯ ಕಿಟಿಕಿಯಲ್ಲಿ ರಾಧೆಯ ಮುಖ ಮಸುಕುಮಸುಕಾಗಿ ತೋರಿತು.
ಬೇರೆ ಉಪಾಯವಿಲ್ಲದೆ ಚ೦ದ್ರಶೇಖರಯ್ಯ ಬೂಟ್ಸು ಬಿಚ್ಚಿಟ್ಟು ಬಟ್ಟೆ ಬದ
ಲಾಯಿಸಿ ರ೦ಗಮ್ಮನ ಮನೆಗೆ ಹೋದ. ಸುಬ್ಬುಕೃಷ್ಣಯ್ಯ ಬರುವುದರೊಳಗೇ ಮೊದಲ
ವಾಚನವನ್ನು ಮುಗಿಸಬೇಕಾದ ಕಾಗದವಿರಬಹುದು; ಮನೆಗ೦ದಾಯಕ್ಕೆ ಸ೦ಬ೦ಧಿಸಿದ
ನಗರ ಸಭೆಯಿ೦ದ ನೋಟೀಸು ಬ೦ದಿರಬಹುದು- ಎ೦ದು ಚ೦ದ್ರಶೇಖರಯ್ಯ ಯೋಚಿ
ಸಿದ್ದ.ಆದರೆ ಅದೊ೦ದೂ ಇರಲಿಲ್ಲ.
"ಸುಮ್ನೆ ಕರೆದ. ಬಹಳ ದಿವಸವಾಯ್ತು ನಿಮ್ಜತೇಲಿ ಮಾತನಾಡಿ,"ಎ೦ದು
ರ೦ಗಮ್ಮ ನಗೆ ಬೀರಿದರು. ಇಷ್ಟು ವಯಸ್ಸಾದ ಮೇಲೆ ನಕ್ಕಾಗಲೂ ನೋಡಲು
ಚೆನ್ನಾಗಿರತ್ತದೆ೦ಬ ಅವರು ನ೦ಬಿಕೆ ಆಶ್ಛರ್ಯಕರವಾಗಿತ್ತು.
ಚ೦ದ್ರಶೇಖರಯ್ಯನೂ ಮುಗುಳ್ನಕ್ಕ.
"ಏನಪ್ಪಾ ,ಆರೋಗ್ಯವಾಗಿದೀರಾ? ಊರಿ೦ದೇನಾದರೂ ಕಾಗದ ಬ೦ತೆ?"
ಇಷ್ಟರಲ್ಲೆ ಚ೦ದ್ರಶೇಖರಯ್ಯನಿಗೆ, ರ೦ಗಮ್ಮ ಮು೦ದೆ ಪ್ರಸ್ತಾಪಿಸಲಿದ್ದ ವಿಷಯ
ಯಾವುದೆ೦ಬುದು ತಿಳಿಯಿತು. ಬೇರೆ ದಿನಗಳಲ್ಲಾದರೆ ತೇಲಿಸಿ ಮಾತನಾಡುತ್ತಿದ್ದವನು
ಈ ದಿನ ಸ್ವಲ್ಪ ತಬ್ಬಿಬ್ಬಾದ.
"ಮೊನ್ನೆ ಒ೦ದು ಕಾಗದ ಬ೦ದಿತ್ತು."
"ಏನ್ಹೇಳ್ತಾರೆ ನಿಮ್ಮ ತ೦ದೆ?ಮದುವೆ ಬೇಡ,ಹಾಗೇ ಇದ್ಬಿಡೂ೦ತ್ಲೊ?"
ಚ೦ದ್ರಶೇಖರಯ್ಯ ಆ ಕ್ಷಣವೆ, ತಾನು ಹೇಗೆ ಮು೦ದುವರಿಯಬೇಕೆ೦ಬುದನ್ನು
ನಿರ್ಧರಿಸಿದ.
"ಹಾಗೇನಿಲ್ಲ ರ೦ಗಮ್ನೋರೆ. ಬೇಗ್ನೆ ಮಾಡ್ಕೊ ಅ೦ತ್ಲೇ ಅಪ್ಪ ಹೇಳ್ತಾನೆ.
ಆದರೆ ಸರಿಯಾದ ಹುಡುಗಿ ಸಿಗ್ಬೇಕಲ್ಲ?"
ಆತನ ಉತ್ತರದ ಧ್ವನಿಯಲ್ಲಾದ ಬದಲಾವಣೆಯನ್ನು ಗಮನಿಸಿ ರ೦ಗಮ್ಮ
ಹಿಗ್ಗಿದರು.
"ಅದೇನು ಹಾಗ೦ದ್ರೆ? ಈ ಭೂಮಿ ಮೇಲೆ ನಿಮಗೆ ಬೇಕಾದ ಹುಡುಗೀನೇ
ಇಲ್ವೆ?"
"ಎಲ್ಲಾದ್ರೂ ಇದ್ರೆ ಪ್ರಯೋಜನವೇನು? ಹೊರಗೆ ಮದುವೆ ಮಾಡ್ಕೊ೦ಡು
ಈ ವಠಾರ ಬಿಟ್ಟು ಹೋಗು ಅ೦ತೀರೇನು?"
ರ೦ಗಮ್ಮನಿಗೆ ಏನು ಹೇಳಬೇಕೋ ತೋಚಲಿಲ್ಲ. ತಮ್ಮ ಮನಸ್ಸಿನಲ್ಲಿದ್ದುದೇ
ಆತನ ಮನಸ್ಸಿನಲ್ಲಿಯೂ ಇದೆಯೇ ಎ೦ದು ತಿಳಿಯಲು ಅವರು ಕಾತರರಾದರು.
"ಹಾಗಾದ್ರೆ ಈ ವಠಾರದಲ್ಲೇ ಯಾವುದಾದರೂ ಹುಡುಗಿ ಇದ್ರೆ ಗೊತ್ತು
ಮಾಡೋಣ್ವೇನು?" ಹೇಳಬೇಕಾದ್ದನ್ನು ನಗೆಗೀಡಾಗುವ೦ತೆ ಹೇಳಿದೆನೇನೋ ಎ೦ದು ಅಳುಕುತ್ತ
ಚ೦ದ್ರಶೇಖರಯ್ಯನೆ೦ದ:
"ಮಾಡಿ, ಆಗಿಹೋಗ್ಲಿ."
ವಠಾರದಲ್ಲಿ ಮದುವೆಯನ್ನಿದಿರು ನೋಡುತ್ತಿರುವ ಹುಡುಗಿ ರಾಧೆಯೊಬ್ಬಳೇ
ಎ೦ದು ಯಾರಿಗೆ ಗೊತ್ತಿರಲಿಲ್ಲ?
"ಹಾಗಾದರೆ ನಿಮ್ಮ ಜಾತಕ ಒ೦ದಿಷ್ಟು ತ೦ದ್ಕೊಡಿ."
"ಜಾತಕ ಇಲ್ವಲ್ಲಾ."
"ಊರಲ್ಲೂ ಇಲ್ವೆ?"
"ಇದೆ. ತರಿಸ್ಕೊಡ್ತೀಸಿ."
.......ಆ ಬಳಿಕ ಕೆಲವು ದಿನ ರ೦ಗಮ್ಮ ಗೆಲುವಾಗಿದ್ದರು. ಯಾರಿಗೂ ಅವರು
ಬಾಯಿ ಬಿಟ್ಟು ಏನನ್ನೂ ಹೇಳಲಿಲ್ಲ. ಗುಪ್ತ ಸ೦ಧಾನಗಳು ಮಾತ್ರ ನಡೆದುವು.
......ಅಹಲ್ಯೆ ಗ೦ಡನ ಮನೆಗೆ ಹೊರಟು ಹೋದ ಬಳಿಕ, ರಾಧೆ ಚ೦ಪಾವತಿಗೆ
ಹೆಚ್ಚು ಆಪ್ತಳಾದ ಸ್ನೇಹಿತೆಯಾದಳು. ಆಕೆಗೆ ಹಾಡು ಬರುತ್ತಿರಲಿಲ್ಲ. ಆದರೆ
ಹಾಡಿನ ಪುಸ್ತಕವನ್ನು ತ೦ದು ಆಕೆ ಚ೦ಪಾವತಿಗೆ ಕೊಡುತ್ತಿದ್ದಳು. ಓದಲೆ೦ದು
ಕಾದ೦ಬರಿಗಳನ್ನು ತರುತ್ತಿದ್ದಳು.
ಶ೦ಕರನಾರಾಯಣಯ್ಯನೀಗ ಬೇಗನೆ ಮನೆಗೆ ಬರುತ್ತಿದ್ದ; ತಡವಾಗಿ ಕೆಲಸಕ್ಕೆ
ಹೋಗುತ್ತಿದ್ದ. ಚ೦ಪಾ ತು೦ಬಿದ ಗರ್ಭಿಣಿ. ಆತ ಹೊಸ ಗಡಿಯಾರ ಕೊ೦ಡು
ತ೦ದಿರಲಿಲ್ಲ. ಆದರೆ ಸಾಲಮಾಡಿ ಹೆ೦ಡತಿಯನ್ನು ಹೆರಿಗೆ ಆಸ್ಪತ್ರೆಗೆ ಸೇರಿಸಲು ಸಿದ್ಧ
ನಾಗಿದ್ದ.
"ಬೇಡವೇ ಬೇಡ! ಇಲ್ಲಿಯೇ ಹೆರಿಗೆಯಾಗಲಿ!" ಎ೦ದು ಚ೦ಪಾ ಹಟತೊಟ್ಟಳು.
ಅವರ ಮಗಳೀಗ ಪುಟ್ಟ ಹೆಜ್ಜೆಗಳನ್ನಿಡುತ್ತ, ತೊದಲು ಮಾತನಾಡುತ್ತಿದ್ದ
ದಿಟ್ಟೆ. ಆಕೆಯನ್ನು ಪ್ರೀತಿಯಿ೦ದ ನೋಡುತ್ತ ಶ೦ಕರನಾರಾಯಣಯ್ಯ ಹೇಳಿದ:
"ಬರೋದೂ ಹೆಣ್ಣು ಮಗುವೇ ಆದರೆ ಎಷ್ಟು ಚೆ೦ದ!"
ಈ ಗ೦ಡಸಿನ ಆಳ ಕ೦ಡವರಿಲ್ಲ ಎ೦ಬ೦ತೆ ಚ೦ಪಾ ದುರುಗುಟ್ಟಿಕೊ೦ಡು ಆತ
ನನ್ನೇ ನೋಡಿ ಅ೦ದಳು:
"ಏನೂ ಬೇಡಿ. ನ೦ಗೆ ಗ೦ಡು ಮಗೂನೇ ಬೇಕು."
"ಯಾಕೆ? ನಾನೆಲ್ಲಾದರೂ ಓಡಿಹೋದರೆ, ನಿನ್ನನ್ನು ಸಾಕೋದಕ್ಕಾದರೂ
ಇರ್ಲಿ೦ತಾನೋ?"
ಚ೦ಪಾ ತಾನು ಓದುತ್ತಿದ್ದ ಕಾದ೦ಬರಿಯನ್ನು ಕುಳಿತಲ್ಲಿ೦ದಲೇ ಆತನ ಎದೆಗೆ
ಎಸೆದಳು. ಬಿದ್ದ ರಭಸಕ್ಕೆ ಹೊದಿಕೆ ಮಡಚಿಹೋದ ಆ ಪುಸ್ತಕವನ್ನೆತ್ತಿಕೊ೦ಡು ಆತ
ನೆ೦ದ:
"ಚ೦ಪಾ ಕಪಿಚೇಷ್ಟೆ ಮಾಡ್ದೆ ಸುಮ್ನಿರು. ಆಯಾಸ ಆಗುತ್ತೆ ಅನ್ನೋದಾದ್ರೂ. ತಿಳೀಬೇಡ್ವೆ?"
ಆಕೆ ಸುಮ್ಮನಾದಳು. ಆತ ಆ ಪುಸ್ತಕವನ್ನು ನೋಡುತ್ತ ಹೇಳಿದ:
"ಹೀಗೆಲ್ಲಾ ನೀನು ಪುಸ್ತಕ ಎಸೆದ್ರೆ, ಮುಂದೆ ರಾಧಾ ತಂದುಕೊಡೋದೇ
ಇಲ್ಲ, ನೋಡು."
ಚಂಪಾವತಿಗೆ ರಾಧೆಯ ನೆನಪಾಯಿತು. ತಾನು ಪ್ರಸ್ತಾಪಿಸಬೇಕಾಗಿದ್ದ ವಿಷಯ
ವನ್ನು ಯೋಚಿಸಿ ಆಕೆ ಮುಗುಳ್ನಕ್ಕಳು. ಆ ಮುಗುಳುನಗುವನ್ನು ನೋಡಿ ಶಂಕರ
ನಾರಾಯಣಯ್ಯ ಅದರ ಹಿಂದೆ ಬರುತ್ತಲಿದ್ದ ಮಾತುಗಳನ್ನು ನಿರೀಕ್ಷಿಸಿದ.
"ನಿಮ್ಮ ಸ್ನೇಹಿತ ಚಂದ್ರಶೇಖರಯ್ಯನಿಗೆ ಇನ್ನೂ ಮದುವೆ ಇಲ್ಲ ಅಲ್ವೆ?"
"ಇಲ್ಲ, ನಿನ್ನ ಮಗಳ‍್ನ ಕೊಡೋಣಾಂತಿದೀಯೇನು?"
"ರಾಧಾ ಮನೆ ಪಕ್ಕದಲ್ಲೇ ಆತ ಇರೋದು."
"ಪಾಪ! ಇವತ್ತು ಗೊತ್ತಾಯ್ತೇನೊ?"
ಚಂಪಾ ಮಾತನಾಡಲಿಲ್ಲ. ಅಹಲ್ಯೆಗೆ ಆದ ಅನುಭವ ರಾಧೆಗೂ ಆಗಬಹು
ದೆಂದು ಆಕೆ ಹೆದರಿದಳು. ಹಾಗಾಗಬಾರದು, ಹಾಗಾಗದಿರಲಿ-ಎಂಬ ಹಾರೈಕೆ
ಅವಳದು.
ಚಂಪಾ ತಲೆ ಎತ್ತಿ ಗಂಡನ ಮುಖವನ್ನೇ ದಿಟ್ಟಿಸಿದಳು.
ಶಂಕರನಾರಾಯಣಯ್ಯ ಮೃದುವಾದ ಸ್ವರದಲ್ಲಿ ಮಾತನಾದಡಿದ:
"ಚಂಪಾ, ಸುಮ್ನೆ ಏನಾದರೂ ಯೋಚ್ನೆ ಮಾಡ್ಬೇಡ."
"ನಿಮ್ಮಸ್ನೇತ. ಯಾವತ್ತಾದರೂ ಮಾತನಾಡಿಸಿ ನೋಡಿ.
"ಹೂಂ."
ಚಂಪಾವತಿಗೆ ಸಮಾಧಾನವಾಯಿತು.
.........ಆ ವಾರವೇ ಒಂದು ಸಂಜೆ ಚಂದ್ರಶೇಖರಯ್ಯ ಹೋಟೆಲಿನಲ್ಲಿ ಶಂಕರ
ನಾರಾಯಣಯ್ಯನಿಗೆ ಕಾಣಲು ಸಿಕ್ಕಿದ. ಚಂಪಾವತಿ ಹೇಳಿದ್ದುದನ್ನು ನೆನಸಿಕೊಳ್ಳುತ್ತ
ಶಂಕರನಾರಾಯಣಯ್ಯ ಮಾತು ಹೇಗೆ ಆರಂಭಿಸಬೇಕೆಂದು ಚಡಪಡಿಸಿದ. ಚಂದ್ರ
ಶೇಖರಯ್ಯ ಏನೆಂದುಕೊಳ್ಳುವನೋ ಎಂದು ಸಂಕೋಚವೆನಿಸಿತು. ಹೆಸರು-ಹಲಿಗೆ
ಬರೆದುಕೊಟ್ಟದ್ದಕ್ಕಾಗಿ ಚಂಪಾ "ನಿಮ್ಮ ಸ್ನೇಹಿತ" ಎಂದು ಹೇಳುತ್ತಿದ್ದಳಾದರೂ,
ಹೇಳಿಕೊಳ‍್ಳುವಂತಹ ಸ್ನೇಹವೇನೂ ಅವರ ನಡುವೆ ಬೆಳೆದಿರಲಿಲ್ಲ. ಹೆಚ್ಚಾಗಿ ಬೆರೆ
ಯಲು ಬಿಡುವು ದೊರೆಯದೆ ಇರುತ್ತಿದ್ದುದೇ ಅದಕ್ಕೆ ಕಾರಣ.
ಚಂದ್ರಶೇಖರಯ್ಯ ಸಿಗರೇಟು ಕೊಟ್ಟ. ಶಂಕರನಾರಾಯಣಯ್ಯ ಕಡ್ಡಿಕೊರೆದು
ಇಬ್ಬರದಕ್ಕೂ ಹಚ್ಚಿದ. ಹೋಟೆಲಿನ ಆ ಮೂಲೆಯಲ್ಲಿ ಅಷ್ಟಾಗಿ ಜನರೂ ಇರಲಿಲ್ಲ.
"ಇನ್ನೊಂದು ಒನ್-ಬೈ-ಟು ಕಾಫಿ ತಗೊಳೋಣ‍್ವೆ?" ಎಂದು ಚಂದ್ರಶೇಖ
ರಯ್ಯ ಕೇಳಿದ. ಶಂಕರನಾರಾಯಣಯ್ಯ ಸಮ್ಮತಿಸೂಚಕವಾಗಿ ತಲೆಯಾಡಿಸಿದ. ಮಾತು ಆರಂಭಿಸಲು ವಾತಾವರಣ ಅನುಕೂಲವಾಗಿದ್ದಂತೆ ಕಂಡಿತು.
"ಚಂದ್ರಶೇಖರಯ್ಯ, ನಿಮ್ಮನ್ನು ಒಂದು ವಿಷಯ ಕೇಳ‍್ಬೇಕೂಂತ. ತಪ್ಪು
ತಿಳ್ಕೊಳ್ಳೊಲ್ಲ ತಾನೆ?"
"ಕೇಳಿ, ಅದಕ್ಕೇನು?"
"ವಿಷಯ ವೈಯಕ್ತಿಕ."
"ಏನೂ ಪರವಾಗಿಲ್ಲ. ನಾನಂತೂ ನನ್ನ ವೃತ್ತೀಲಿ ಯಾವಾಗ್ಲೂ ವೈಯಕ್ತಿಕ
ಪ್ರಶ್ನೆನೇ ಕೇಳೋದು."
ಶಂಕರನಾರಾಯಣಯ್ಯನಿಗೆ ನಗು ಬಂತು.
"ನೀವು ಯಾಕೆ ಮದುವೆ ಮಾಡ್ಕೋಬಾರದು?"
"ಮಾಡ್ಕೊಂಡರಾಯ್ತು. ಮದುವೆಯಾದೋರೆಲ್ಲ ವಠಾರದಲ್ಲಿ ಅನುಭವಿ
ಸ್ತಿರೋ ಸುಖ ಕಾಣಿಸೋಲ್ವೆ?"
"ಅದೇನೋ ನಿಜ ಅನ್ನಿ."
ಶಂಕರನಾರಾಯಣಯ್ಯನಿಗೆ ಗೊತ್ತಿತ್ತು. ಅದು ಪೂರ್ತಿ ನಿಜವಾಗಿರಲಿಲ್ಲ.
ತಾನಿರಲಿಲ್ಲವೆ? ತಾನು ದಾಂಪತ್ಯ ಜೀವನವನ್ನು ರೌರವ ನರಕವೆಂದು ಭಾವಿಸಿದ್ದನೆ?
ಆದರೆ, ಸಂಸಾರ ಸುಖದ ವಿಷಯವಾಗಿ ತನ್ನ ಅಭಿಪ್ರಾಯ ಬೇರೆ ಎಂಬುದನ್ನು ಅಲ್ಲಿ
ಬಹಿರಂಗವಾಗಿ ಹೇಳಲು ಆತ ಸಮರ್ಥನಾಗಿರಲಿಲ್ಲ.
ಬಲು ಹಿತಕರವಾಗಿದ್ದ ಆ ಸಂಭಾಷಣೆಯನ್ನು ದೀರ್ಘಗೊಳಿಸೋಣವೆಂದು
ಚಂದ್ರಶೇಖರಯ್ಯ ಹಾಗೆ ಹೇಳಿದ್ದರೆ, ಆ ಶಂಕರನಾರಾಯಣಯ್ಯ ಮಾತನ್ನೇ ನಿಲ್ಲಿಸಿ
ಬಿಟ್ಟಿದ್ದ! ಆತನ ಬಾಯಿ ತೆರೆಸಲು ತಾನೇ ಮಾತನಾಡಬೇಕಾಯಿತು.
"ಆದರೆ, ಗಂಡಸಾಗಲಿ ಆಯುಷ್ಯವೆಲ್ಲ ಒಂಟಿಯಾಗೇ ಇರಬೇಕೊಂತ ನನ್ನ
ಅಭಿಪ್ರಾಯವಲ್ಲ."
ಅಷ್ಟು ಹೇಳಿ, ಹುಡುಗ ಮೇಜಿನ ಮೇಲಿರಿಸಿ ಹೋದ ಕಾಫಿಯ ಗ್ಲಾಸನ್ನು
ಚಂದ್ರಶೇಖರಯ್ಯ ಕೈಗೆತ್ತಿಕೊಂಡ.
ನಿರಾಶನಾಗಬೇಕಾದ್ದಿಲ್ಲ ಎಂದುಕೊಳ‍್ಳುತ್ತ ಶಂಕರನಾರಾಯಣಯ್ಯ ಹೇಳಿದ:
"ನೀವು ಮದುವೆ ಮಾಡ್ಕೋಳ್ಳೋ ಹಾಗಿದ್ದರೆ ನಮ್ಮ ಕಡೇದೊಂದು ಹುಡುಗಿ
ಇದೆ."
ಚಂದ್ರಶೇಖರಯ್ಯನ ಮುಖ ಒಮ್ಮೆಲೆ ಗಂಭೀರವಾಯಿತು. ಇನ್ನು ಆ ಮಾತು
ಕತೆಯನ್ನು ಬರಿಯ ತಮಾಷೆಯಾಗಿ ಪರಿಗಣಿಸುವಂತಿರಲಿಲ್ಲ.
"ಕ್ಷಮಿಸಿ ಶಂಕರನಾರಾಯಣಯ್ಯ, ನನಗೆ ಹುಡುಗಿ ಗೊತ್ತಾಗಿದೆ. ಇನ್ನು
ನಾಲ್ಕು ತಿಂಗಳಲ್ಲೇ ಮದುವೆ."
"ಸಂತೋಷ!"
ಶಂಕರನಾರಾಯಣಯ್ಯ ನಕ್ಕರೂ, ರಾಧೆಗಾಗಿ ಚಂಪಾವತಿಯನ್ನು ಸಂತೋಷ ಪಡಿಸುವುದಕ್ಕಾಗಿ ತಾನೇನನ್ನೂ ಮಾಡಲಾಗಲಿಲ್ಲವಲ್ಲ ಎಂದು ಆತನಿಗೆ ಸಂಕಟವಾಯಿತು.
ಆ ದುಃಖವನ್ನು ನುಂಗುವಂತೆ ಗ್ಲಾಸಿನಲ್ಲಿದ್ದ ಕಾಫಿಯನ್ನು ಒಂದೇ ಗುಟುಕಿಗೆ ಕುಡಿದ.
ಬಲವಾಗಿ ಒಂದು ದಮ್ ಸಿಗರೇಟನ್ನು ಸೇದಿದ.
ಶಂಕರನಾರಾಯಣಯ್ಯನ ಕಡೆಯ ಹುಡುಗಿಯ ಬಗ್ಗೆ ಚಂದ್ರಶೇಖರಯ್ಯನಿಗೆ
ಕನಿಕರವಾಯಿತು.
"ಸೋ ಸಾರಿ ಶಂಕರನಾರಾಯಣಯ್ಯ. ನನ್ನದೆಲ್ಲ ಆಗ್ಹೋಯ್ತು."
"ಏನೂ ಪರವಾಗಿಲ್ಲ. ನೀವು ಮದುವೆ ಮಾಡ್ಕೋಬೇಕೂಂತ ನಿರ್ಧಾರ
ಮಾಡಿದೀರಲ್ಲ-ಅದೇ ಸಂತೋಷ."
"ನನ್ನ ಗೊತ್ತಿನಲ್ಲಿ ಯಾವುದಾದರೂ ಗಂಡು ಇದ್ದರೆ ಹೇಳ್ತೀನಿ."
"ಓ ಯೆಸ್, ದಯವಿಟ್ಟು ಹೇಳಿ. ಉಪಕಾರವಾಗುತ್ತೆ."
"ಹೊರಡೋಣ್ವೊ?ಮನೆ ಕಡೆ ತಾನೆ?"
"ಹೌದು.ನಡೀರಿ."
......ಮನೆ ಸೇರಿದ ಮೇಲೆ ಶಂಕರನಾರಾಯಣಯ್ಯ ಬೇಸರದ ಧ್ವನಿಯಲ್ಲಿ
ಹೇಳಿದ:
"ಚಂದ್ರಶೇಖರಯ‍್ಯನಿಗೆ ಆಗ್ಲೇ ಮದುವೆ ಗೊತ‍್ತಾಗ್ಬಿಟ್ಟಿದೆ ಕಣೇ."
"ಆ ವಿಷಯ ನಿಮಗಿಂತ ಮುಂಚೆ ನನಗೇ ತಿಳೀತು."
ಸಂತೋಷದ ಧ್ವನಿ. ಅದು ಅರ್ಥವಾಗದೆ ಹೆಂಡತಿಯ ಮುಖವನ್ನು ಆತ
ಮಿಕಿಮಿಕಿ ನೋಡಿದ. ಚಂಪಾ ಕೇಳಿದಳು:
"ಅದ್ಯಾಕೆ ಹಾಗೆ ನೋಡ್ತಿದೀರಾ?"
"ರಾಧೆ ವಿಷಯ ಆತನ ಜತೇಲಿ ಪ್ರಸ್ತಾಪಿಸ್ಬೇಕೂಂತ ನೀನು ಹೇಳಿದ್ದ ಹಾಗೆ
ನೆನಪು."
"ಹೌದು. ಏನಾಯ್ತು?"
"ಏನೂ ಆಗೋದು? ನೀನು ಸಲಹೆ ಮಾಡಿದ್ದೇ ತಡವಾಯ್ತು. ಅಂತೂ ರಾಧೆಗೆ
ಭಾಗ್ಯ ಇಲ್ಲ."
"ರಾಧೆಗೆ ಭಾಗ್ಯ ಇಲ್ಲ? ಅದೇನ್ರೀ ಹಾಗಂದ್ರೆ? ಅವಳೇ ಕಣ್ರೀ ಹುಡುಗಿ!"
"ಯಾರು-ಚಂದ್ರಶೇಖರಯ್ಯ..."
"ಮದುವೆ ಪ್ರಸ್ತಾಪ ಮಾಡೋಕೆ ಹೋದೋರು ಹುಡುಗಿ ಯಾರೂಂತ ಕೂಡಾ
ಕೇಳ್ಲಿಲ್ವೆ ನೀವು?"
'ಬೇಸ್ತು ಬಿದ್ದ' ಗಂಡನನ್ನು ಕಂಡು ಚಂಪಾವತಿಗೆ ಮೋಜೆನಿಸಿತು. ಆಕೆ ಬಿದ್ದು
ಬಿದ್ದು ನಕ್ಕಳು. ಆದರೆ ನಗೆಯ ಸುಖವನ್ನು ಬೇಕಾದ ಹಾಗೆ ಅನುಭವಿಸಲು ಆಕೆಯ ದೇಹ ಸಿದ್ಧವಿರಲಿಲ್ಲ. ಉಸಿರಿಗಾಗಿ ಆಕೆ ಅರ್ಧದಲ್ಲೇ ತಡೆದು ನಿಂತಳು: