ರಂಗಮ್ಮನ ವಠಾರ/೨

ವಿಕಿಸೋರ್ಸ್ದಿಂದ

ಸಾವು ಸಂಭವಿಸಿದ ಮಾರನೆಯ ದಿನ...
ನಸುಕು ಹರಿಯುತ್ತಿದ್ದಂತೆ ಒಂದೊಂದಾಗಿ ವಠಾರದ ಮನೆಗಳು ಎಚ್ಚರ
ಗೊಂಡುವು. ಎಂದಿನಂತೆಯೇ ಅದು ಒಂದು ಮುಂಜಾನೆ. ಹೆಚ್ಚೂ ಇಲ್ಲ, ಕಡಮೆಯೂ ಇಲ್ಲ.

ಆಗ ಉರಿಯುತ್ತಿದ್ದುದೆಲ್ಲ ಸೀಮೆಎಣ್ಣೆಯ ಹೊಗೆ ದೀಪಗಳು. ಪ್ರತಿದಿನ,

ಅಂದರೆ ರಾತ್ರೆ, ರಂಗಮ್ಮನ ವಠಾರದಲ್ಲಿ ವಿದ್ಯುದ್ದೀಪಗಳು ಉರಿಯುತ್ತಿದ್ದುದು, ಮೂರು ಘಂಟೆಗಳ ಮಾತ್ರ. ರಾತ್ರೆ ಒಂಧತ್ತೂವರೆಯಿಂದ ಹತ್ತರೊಳಗಾಗಿ ರಂಗಮ್ಮ ದೀಪ ಆರಿಸಿ ಬಿಡುತ್ತಿದ್ದರು. ಆ ಬಳಿಕ 'ದೀಪ ಹಾಕು'ವುದು ಮಾರನೆಯ ಸಂಜೆ ಮಾತ್ರವೇ. ವಠಾರಕ್ಕೆ ಹೊಸತಾಗಿ ಬಾಡಿಗೆಗೆ ಬಂದವರು ಗೊಣಗುವುದಿತ್ತು. ಆದರೆ ನಾಲ್ಕು ದಿನಗಳಲ್ಲೇ ಅವರೂ ಇತರ ಎಲ್ಲರ ಹಾಗೆ ಸರಿಹೋಗುತ್ತಿದ್ದರು. ಕತ್ತಲಿರುವಾಗಲೇ ಏಳಬೇಕಾದವರಿಗೆ ಸೀಮೆಎಣ್ಣೆಯ ದೀಪಗಳೇ ಗತಿ. ಆ ವಿಷಯ ದಲ್ಲಿ ರಂಗಮ್ಮನದು ಸರ್ವ ಸಮತಾ ದೃಷ್ಟಿ. ಸ್ವತಃ ತಾವೇ ನಸುಕಿನಲ್ಲಿ ಎದ್ದಾಗಲೂ ರಂಗಮ್ಮ ವಿದ್ಯುದ್ದೀಪ ಉರಿಸುತ್ತಿರಲಿಲ್ಲ.

ಮೊದಲು ಮಿಣಿಮಿಣಿ ಬೆಳಕಾಗುವುದು ರಾಮಚಂದ್ರಯ್ಯನ ಮನೆಯಲ್ಲಿ, ಆತ

ಟಿ.ಆರ್.ಮಿಲ್ಲಿನಲ್ಲಿ ಸ್ಟೋರ್-ಕೀಪರ್. ಆರು ಗಂಟೆಗೆ ಸರಿಯಾಗಿ ಮಲ್ಲೇಶ್ವರದ ಅಂಗಡಿ ಬೀದಿ ಸೇರಿ, ಕರೆದೊಯ್ಯಲು ಬರುವ ಬಸ್ಸನ್ನೇರಬೇಕು. ಇನ್ನೂ ಮದುವೆ ಯಿಲ್ಲ ಮಹಾರಾಯನಿಗೆ. ಅದು ಮೂವರ ಸಂಸಾರ. ಬಡಕಲು ಬಡಕಲಾಗಿರುವ ತಾಯಿ ಮತ್ತು ಮದುವೆಗೆ ಸಿದ್ದಳಾಗಿರುವ ತಂಗಿ ಅಹಲ್ಯಾ. ಅಹಲ್ಯೆ ಬೇಗನೆ ಏಳು ತ್ತಿರಲಿಲ್ಲ. ಆದರೆ ಆಕೆಯ ಅಣ್ನ ರಾಮಚಂದ್ರನೆದ್ದು, ತಂಬಿಗೆ ನೀರಿನೊಡನೆ ಕತ್ತಲೆಯ ಓಣಿಯಲ್ಲಿ ನಡೆದು, ಸುಬ್ಬುಕೃಷ್ಣಯ್ಯನ ಮನೆಯ ಪಕ್ಕದಲ್ಲಿದ್ದ ಕಕ್ಕಸಿಗೆ ಹೋಗುತ್ತಿದ್ದ. ಅದು ಜೋಡಿ ಕಕ್ಕಸು. ವಠಾರದ ಗಂಡಸರಿಗೊಂದು. ಹೆಂಗಸರಿಗೊಂದು. ಹೆಂಗಸರ ವಿಭಾಗಕ್ಕೆ ಹಳೆಯ ಎರಡು ಸೀಮೆಎಣ್ಣೆ ಡಬ್ಬಗಳನ್ನು ಬಿಡಿಸಿ ತಗಡನ್ನು ಮರದ ಚೌಕಟ್ಟಿಗೆ ಒಡೆದು ಬಾಗಿಲು ತಯಾರಿಸದ್ದರು. ಗಾಳಿ ಬೀಸಿದಾಗಲೆಲ್ಲ ಬಡೆದು ಸದ್ದು ಮಾಡುತ್ತ ಆ ಬಾಗಿಲು ವಠಾರಕ್ಕೆ ಕಾವಲುಗಾರನಾಗುತ್ತಿತ್ತು.

ರಾಮಚಂದ್ರಯ್ಯನ ಮನೆಯಲ್ಲಿ ತಾಯಿ ಮಕ್ಕಳ ಮಾತು ಕೇಳಿದುಡನೆಯೇ

ಪದ್ಮಾವತಿಗೆ ಎಚ್ಚರ. ಆಕೆ ನಾರಾಯಣಿಯ ಮಕ್ಕಳಿಗೆ ಉಣಬಡಿಸಿದ ಮೂರು ಮಕ್ಕಳ ತಾಯಿ. ಪದ್ಮಾವತಿ ಎದ್ದು ಕುಳಿತು, ಕತ್ತಲೆಯಲ್ಲಿ ಕ್ಷಣಕಾಲ ಗಂಡನನ್ನು ನೋಡುತ್ತ ಲಿದ್ದು, ಬಳಿಕ ಮೈ ಮುಟ್ಟಿ ಎಬ್ಬಿಸುತ್ತಿದ್ದಳು. ರಾಜಾ ಮಿಲ್ಲಿನ ಟೈಂ ಕಿಪರ್ ನಾಗ ರಾಜರಾಯ "ಆಂ... ಊಂ.." ಎಂದು ಪ್ರತಿಭಟಿಸುತ್ತಿದ್ದ, ತಬ್ಬಿಕೊಂಡಿದ್ದ ನಿದ್ದೆ ಯನ್ನು ಬಿಟ್ಟುಕೊಡಲು ಇಷ್ಟಪಡೆದೆ.

ಪದ್ಮಾವತಿ ಗಂಡನ ತೋಳನ್ನು ಮುಟ್ಟಿ ಕುಲುಕಿ ಹೇಳುತ್ತಿದ್ದಳು

"ಏಳೀಂದ್ರೆ.. ಬೆಳಗಾಘೋಯ್ತು."

ಬೆಳಗು ಆಗಬೇಕಾದರೆ ಆರು ಘಂಟೆಯವರೆಗೂ ಎಲ್ಲರೂ ಕಾದಿರಬೇಕೆಂಬ

ನಿಯಮ ಎಲ್ಲಿದೆ? ಆಗಿನ್ನೂ ಐದೋ, ಈದೂಕಾಅಲೋ, ಸಹಸ್ರ ಸಂಸಾರಗಳಿಗೆ ಆಗಲೇ ಬೆಳಗು.

ಹೊತ್ತಿಗೆ ಏಳುವ ಇನ್ನೊಬ್ಬ ವ್ಯಕ್ತಿ ನಾರಾಯಣ.ಹಿಂದೂಸ್ಥಾನ

ವಿಮಾನ ಕಾರಖಾನೆಯಲ್ಲಿ ಲೆಕ್ಕ ಕೂಡಿಸಿ ಕಳೆಯುವ ಗುಮಾಸ್ತೆ. ವಿಮಾನಪುರದಲ್ಲಿ 'ನ_ರಾಯನ್' ಎಂದು ಬದಲಾಗಿತ್ತು ಆತನ ಹೆಸರು.ಹೊಸ ಸಂಸಾರ ಹೂಡಿದ ಈ ಪತಿರಾಯ ಐದು ಘಂಟೆಗೇ ಎಚ್ಚರವಾದರೂ ಏಳದೆ, ತನ್ನ ಹಾಸಿಗೆಯ ಮೇಲೆಯೇ ಮುದುಡಿ ಮಲಗಿದ್ದ ಹೆಂಡತಿ ಕಾಮಾಕ್ಷಿಯನ್ನು ಕತ್ತಲಲ್ಲೇ ಎವೆಯಿಕ್ಕದೆ ನೋಡುತ್ತಿದ್ದ. ಅಷ್ಟರಲೇ ಆಲಾರಾಂ ಗಡಿಯಾರದ ಕಿಟಿಕಿಟಿ.ನಾರಾಯಣ ಕೈಚಾಚಿ ಅಲಾರಾಂ ಗುಂಡಿಯನ್ನು ಅದುಮಿ ಆ ಸದ್ದನ್ನು ಅಡಗಿಸುತ್ತಿದ್ದ. ಅದೇ ಕೈಯಿಂದ ಕಾಮಾಕ್ಷಿಯನ್ನು ಸುತ್ತುವರಿದು ಬರಸೆಳೆದು ನಾರಾಯಣ ಆಕೆಯ ಕಿವಿ ಯೊಳಕ್ಕೆ ಕುಟುರುತ್ತಿದ್ದ:

"ಕಾಮೂ...ಕಾಮೂ...ಏ ಕಾಮೂ..."

ಊ...ಎಂದು ರಾಗವೆಳೆಯುತ್ತಿದ್ದಳು ಕಾಮಾಕ್ಷಿ-ಏಳಬೇಡಿ.ಹೋಗಬೇಡಿ,

ಎನ್ನುವಂತೆ, ನಾರಯಣ ಆಕೆಯ ತಲೆಗೂದಲನ್ನೊಮ್ಮೆ ಮೂಸಿ, ನಕ್ಕು, ಎದ್ದು ಕುಳಿತು, ದೀಪ ಹಚ್ಚುತ್ತಿದ್ದ...ಆ ಬಳಿಕ ಸ್ಟವ್ ಉರಿಸುವುದು, ಅದರ ಮೇಲೆ ಅನ್ನ ಕ್ಕಾಗಿ ನೀರು...

ವೈದಿಕ ಕಾರ್ಯಕ್ಕೆಂದು ಕಮಲಮ್ಮನ ಗಂಡ ಪರವೂರಿಗೆ ಹೋಗಿದ್ದ.

ಹಾಗೆಂದು, ಒಂಟಿ ಜೀವವಾದ ಕಮಲಮ್ಮನೇನೂ ಸ್ವಸ್ಥವಾಗಿ ಮಲಗುವ ಹಾಗಿರಲಿಲ್ಲ. ಚಿರದುಃಖಿನಿಯಾದ ಆ ಹೆಂಗಸು ಬೇಗನೆ ಏಳುತ್ತಿದ್ದಳು.ರಾತ್ರಿ ರುಬ್ಬಿ ಇಟ್ಟಿದ್ದ ಹಿಟ್ಟನ್ನು ಹುಯ್ದು ಸಣ್ಣ ಪುಟ್ಟ ಹೇರಳ ದೋಸೆಗಳನ್ನು ಆಕೆ ಸಿದ್ಧಪಡಿಸಬೇಕು. ಇಡ್ಲಿಗಳನ್ನು ಬೇಯಿಸಬೇಕು.ಆರು ಘಂಟೆಗೆ ಐದು ನಿಮಿಷವಿರುವಾಗಲೇ ಎದುರು ಬೀದಿಯ ಹುಡುಗನೊಬ್ಬ ಬಂದು ತಿಂಡಿಯ ಆ ಬುಟ್ಟಿಯನ್ನು ಮಾರಾಟಕ್ಕೆ ಒಯ್ಯು ತ್ತಿದ್ದ. ತಲೆ ನೋವಿರಲಿ,ಮೈಕೈ ಮುಟ್ಟಿದರೆ ನೋಯುತ್ತಿರಲಿ, ಕಮಲಮ್ಮ ಐದು ಘಂಟೆಯ ಸುಮಾರಿಗೆ ಎದ್ದೇಬಿಡುತ್ತಿದ್ದಳು.ಎರಡು ಒಲೆಯುರಿಸು ತ್ತಿದ್ದಳು.ಬೆಂಕಿಯ ನಾಲಿಗೆಗಳು ನಗುತ್ತ ಕುಣಿಯುತ್ತ ಗೋಡೆಗೆ ನೇತು ಹಾಕಿದ್ದ ಚಿಮಿಣಿ ದೀಪವನ್ನು ಅಣಕಿಸುತ್ತಿದ್ದುವು.

ರಾಮಚಂದ್ರಯ್ಯನ ಮನೆಗೂ ರಂಗಮ್ಮನದಕ್ಕೂ, ನಡುವಿನ ಮನೆಯಲ್ಲಿ ಹಸ್ತ

ಸಾಮುದ್ರಿಕದ ಜ್ಯೋತಿಷಿ ಪದ್ಮನಾಭನಿದ್ದ.ಮಧ್ಯ ವಯಸ್ಕ. ಮಗಳು ಮದುವೆ ಯಾಗಿ ಗಂಡನ ಮನೆ ಸೇರಿದ್ದಳು. ಮಗ ಅರವತ್ತು ರೂಪಾಯಿ ಸಂಬಳದ ಕೆಲಸ ದೊರಕಿಸಿಕೊಂಡು ಹೈದರಾಬಾದಿನಲ್ಲಿ ಹೆಂಡತಿ, ಪದ್ಮನಾಭನಿಗೂ ಬೇಗನೆ ಏಳುವ ಅಭ್ಯಾಸ. ಹಾಗೆ ಎದ್ದು ಏನಾದರೂ ಶ್ಲೋಕವನ್ನು ಆತ ಗುಣುಗುಣಿಸುತ್ತಿದ್ದ ಅದು ಯಾವ ಶ್ಲೋಕ ಎಂಬುದು ಎಂದೂ ಯಾರಿಗೂ ತಿಳಿಯುವ ಹಾಗಿರಲಿಲ್ಲ. ಹೆಂಡತಿ ಮತ್ತು ಮಗುವನ್ನು ಬಚ್ಚಲು ಮನೆಯ ಮತ್ತು ನೀರಿನ ಸಂಕಷ್ಟಗಳಿಗೆ ಬಿಟ್ಟು
ಕೊಟ್ಟು, ಆತ ಮಲ್ಲೇಶ್ವರದ ಈಜು ಕೊಳದಲ್ಲಿ ಸ್ನಾನ ಮಾಡಿ ಬರಲು ಎದ್ದು
ಬಿಡುತ್ತಿದ್ದ.
ಸಾಲು ಮನೆಗಳು ಕವಲೊಡೆದಿದ್ದ ಕಟ್ಟಡಕ್ಕೆ ಒಂದು ಮಹಡಿಯಿತ್ತು.ರಂಗ
ಮ್ಮನ ಮಹಡಿಯ ಮಹಲು!ಕೆಳ ಭಾಗದಲ್ಲಿ ನಾಲ್ಕು ಸಂಸಾರಗಳಿದ್ದುವು. ಮೇಲೆ
ಮೂರು.ಕೆಳಗೆ ರಂಗಮ್ಮನ ಮನೆಯ ಭಾಗಕ್ಕೇ ಅಂಟಿಕೊಂಡು ಒಬ್ಬ ತಾಯಿ ಮತ್ತು
ಇಬ್ಬರು ಮಕ್ಕಳಿದ್ದರು. ಕೋಲಾರದವರು. ದೊಡ್ಡವನು ಎಂಜನಿಯರಿಂಗ್
ಕಾಲೇಜಿನಲ್ಲಿ ಓದುತ್ತಿದ್ದ. ಅವನ ಜತೆಗೆಂದು ಚಿಕ್ಕವನೂ ಇಲ್ಲಿಗೇ ಬಂದಿದ್ದ, ಇಂಟರ್
ಪರೀಕ್ಷೆ ಕಟ್ಟಲು. ಬೆಂಗಳೂರಿನಲ್ಲಿ ಹುಡುಗರು ಕೆಟ್ಟು ಹೋಗಬಹುದೆಂದು ತಾಯಿಯೂ
ಒಟ್ಟಿಗೆ ಬಂದಿದ್ದಳು. ಎಂದಾದರೊಮ್ಮೆ ಮಕ್ಕಳಿಗೆ ಪಿತೃದರ್ಶನವೂ ಆಗುತ್ತಿತ್ತು.
ತಾಯಿ ಆ ಮಕ್ಕಳನ್ನು ಬೆಳಗ್ಗೆ ಬೇಗನೆ ಎಬ್ಬಿಸುತ್ತಿದ್ದಳು. ವಿದ್ಯುದ್ದೀಪ ಅವರಿಗೂ
ಇರಲಿಲ್ಲ. ಆದರೆ ಶುಭ್ರ ಪ್ರಕಾಶ ಬೀರುತ್ತಿದ್ದ ಕಂದೀಲಿತ್ತು.
ಆ ಕಂದೀಲಿನ ಬೆಳಕು ಎದುರು ಭಾಗದಲ್ಲಿದ್ದ ತಮ್ಮ ಮನೆಯ ಬಾಗಿಲಿನ ಬಿರುಕು
ಗಳೆಡೆಯಿಂದ ಒಳಬಿದ್ದೊಡನೆಯೇ ರಾಜಮ್ಮನಿಗೆ ಎಚ್ಚರವಾಗುತ್ತಿತ್ತು. ರಂಗಮ್ಮನ
ಬಳಿಕ, ಆಕೆ ಆ ವಠಾರದ ಇನ್ನೊಬ್ಬ ವಿಧವೆ. ದೊಡ್ಡ ಮಗ ಗುಂಡಣ್ಣ ಉಂಡಾಡಿ;
ಎರಡನೆಯವನಿಗೆ ಒಳ್ಳೆಯ ಡಾಕ್ಟರೊಬ್ಬರ ಬಳಿಯಲ್ಲಿ ಕೆಲಸವಿತ್ತು. ವಾಸ್ತವವಾಗಿ
ಅದು ಜವಾನನ ಕೆಲಸ. ಅಷ್ಟೇ ಸಂಬಳ. ಆದರೆ ಜವಾಬ್ದಾರಿ ಕಂಪೌಂಡರನದು.
ಆ ಕಾರಣದಿಂದ ರಾಜಮ್ಮ ತನ್ನ ಮಗನಿಗೆ 'ಕಂಪೋಂಡ್ರು ಕೆಲಸ'ವೆಂದೇ ಹೇಳು
ತ್ತಿದ್ದಳು. 'ಕಂಪೋಂಡ್ರು' ಮನೆ ಬಿಡುವುದು ಏಳು ಘಂಟೆಗಾದರೂ ರಾಜಮ್ಮನಿಗೆ
ಬೆಳಗಿನ ಜಾವ ನಿದ್ದೆ ಬರುತ್ತಿರಲಿಲ್ಲ. 'ಅವರು' ಇದ್ದಾಗ ನಸುಕಿನಲ್ಲೆ ಎದ್ದು
ಅಭ್ಯಾಸ.
ರಾಜಮ್ಮನ ಮನೆಯ ಬಲ ಭಾಗಕ್ಕೆ, ಹೊರ ಅಂಗಳಕ್ಕೆ ತಗಲಿಕೊಂಡಿದ್ದುದು
ಪೋಲೀಸ್ ಕಾನ್ ಸ್ಟೇಬಲ್ ರಂಗಸ್ವಾಮಿಯ ಮನೆ. ಪೋಲೀಸನೊಬ್ಬ ಮನೆಯ
ಎದುರು ಭಾಗದಲ್ಲೇ ಇರುವುದು ಮೇಲೆಂಬುದು ರಂಗಮ್ಮನ ಅಭಿಪ್ರಾಯವಾಗಿತ್ತು.
ವಠಾರದ ನಸುಕಿನ ಗದ್ದಲ ಕೇಳುತ್ತಲೆ ರಂಗಸ್ವಾಮಿಯ ಹೆಂಡತಿಗೆ ಎಚ್ಚರವಾಗುತ್ತಿತ್ತು.
ಆಕೆ ಗೂರಲು ರೋಗಿ. ಎದ್ದು ಕುಳಿತು ಕೆಮ್ಮುತ್ತಿದ್ದಳು. ಮೂವರು ಮಕ್ಕಳ
ಮೇಲಿನ ಹೊದಿಕೆ ಸರಿಪಡಿಸಿ ಮತ್ತೂ ಕೆಮ್ಮುತ್ತಿದ್ದಳು. ರಂಗಸ್ವಾಮಿ ಮಾತ್ರ ಏಕ
ಪ್ರಕಾರವಾಗಿ ಗೊರಕೆ ಹೊಡೆಯುತ್ತಿದ್ದ.

ಆ ಮನೆಗೆ ಎದುರಾಗಿ ಮಾಧ್ಯಮಿಕ ಶಾಲೆಯ ಉಪಾಧ್ಯಾಯರೊಬ್ಬರಿದ್ದರು_
ಲಕ್ಷ್ಮೀನಾರಾಯಣಯ್ಯ. ಆ ಬಡ ಸಂಸಾರದ ಸದಸ್ಯರ ಸಂಖ್ಯೆ ಒಟ್ಟು ಏಳು.
ಸಣ್ಣಪುಟ್ಟ ಮಕ್ಕಳು ಐವರು. ಅವರನ್ನು ಹೊತ್ತು ಹೆತ್ತಿದ್ದ ತಾಯಿ. ಮಕ್ಕಳಾಗ
ಲಿಲ್ಲವೆಂಬ ಕಾರಣದಿಂದ ಗಂಡನ ಮನೆಯಿಂದ ಓಡಿಸಲ್ಪಟ್ಟಿದ್ದ ಉಪಾಧ್ಯಾಯರ

ಯುವತಿ ತಂಗಿ, ವಠಾರದ ಗುಜುಗುಜು ಕೇಳಿಸಿದಂತೆ ಉಪಾಧ್ಯಾಯರ ಹೆಂಡತಿ
ಎಚ್ಚರಗೊಂಡು, ಅಡುಗೆ ಮನೆಯಲ್ಲಿ ಮಲಗಿದ್ದ ನಾದಿನಿಗೆ ಹೇಳುತ್ತಿದ್ದಳು:
"ಏ ಸುಮಂಗಳಾ...ಏಳೇ...ಏಳೇ...ಬೆಳಗಾಯ್ತೂಂತ ಕಾಣುತ್ತೆ."
ಹಾಗೆ ಹೇಳಿ ಆಕೆ ಹೊದಿಕೆಯನ್ನು ಮತ್ತಷ್ಟು ಬಲವಾಗಿ ಮುಖದ ಮೇಲೆಳೆದು
ಕೊಳ್ಳುತ್ತಿದ್ದಳು. ಮಕ್ಕಳ ಕಾಲುವೆಯ ಆಚೆ ದಡದಲ್ಲಿ ಮಲಗಿದ್ದ ಲಕ್ಷ್ಮೀನಾರಾ
ಯಣಯ್ಯ ಮಗ್ಗುಲು ಹೊರಳಿ, ಗೋಡೆಗೆ ಮೂಗು ಮುಟ್ಟಿಸುತ್ತ, ನಿದ್ದೆಯ
ಇನ್ನೊಂದು ಅಧ್ಯಾಯ ಆರಂಭಿಸುತ್ತಿದ್ದರು.
ಕೆಳಗಿನ ಮನೆಗಳಲ್ಲೆಲ್ಲ ಅಡ್ಡಗೋಡೆಯೊಂದು ಎರಡು ಕೊಠಡಿಗಳಿವೆಯೇನೋ
ಎಂಬ ಭ್ರಮೆಗೆ ಕಾರಣವಾಗಿತ್ತು. ಮಹಡಿಯ ವಿಭಾಗದಲ್ಲಿ ಅಂತಹ ಏರ್ಪಾಟಿರಲಿಲ್ಲ.
ಒಂಟಿ ಇಟ್ಟಿಗೆಯಿಟ್ಟು ಒಟ್ಟು ಮೂರು ಕೊಠಡಿಗಳನ್ನು ಮಾಡಿದ್ದರು. ಒಂದೊಂದು
ಕೊಠಡಿಯೂ ಒಂದೊಂದು ಮನೆ. ಆದರೆ ಮಹಡಿಯಾಗಿದ್ದುದರಿಂದ ಬಾಡಿಗೆಯ
ವಿಷಯದಲ್ಲಿ ಯಾವ ಮನೆಗೂ ಅವು ಕಡಿಮೆಯಾಗಿರಲಿಲ್ಲ.
ಮೊದಲ ಕೊಠಡಿಮನೆಯಲ್ಲಿ ಮೂವರು ವಿದ್ಯಾರ್ಥಿಗಳಿದ್ದರು. ಪರಸ್ಪರ
ತುಂಬಾ ಹೊಂದಿಕೊಂಡಿದ್ದ ಹುಡುಗರು! ರಾತ್ರೆ ರಂಗಮ್ಮ ದೀಪ ಆರಿಸುತ್ತಾರೆಂದು
ಅವರೆಂದೂ ನೊಂದುಕೊಂಡವರಲ್ಲ. ಬೆಳಗ್ಗೆ ದೀಪವಿಲ್ಲವೆಂದು ಚಡಪಡಿಸಿದವರೂ
ಅಲ್ಲ. ವಠಾರದಿಂದ ಎಷ್ಟೋ ಹಕ್ಕಿಗಳು ಹೊರಹೋದ ಮೇಲೆಯೇ ಅವರಿಗೆ ಬೆಳಕು
ಹರಿಯುತ್ತಿತ್ತು.
ಎರಡನೆಯ ಕೊಠಡಿಮನೆಯ ನಿವಾಸಿ, ಒಬ್ಬಂಟಿಗನಾದ ಚಂದ್ರಶೇಖರಯ್ಯ.
ಒಂದು ವಿಮಾಸಂಸ್ಥೆಯ ಈ ಪ್ರತಿನಿಧಿ ಉಸಿರಾಟದ ಸದ್ದೂ ಇಲ್ಲದೆ ನಿದ್ದೆ ಹೋಗು
ವಷ್ಟು ಸಮರ್ಥ. ತಿಂಗಳಲ್ಲಿ ಹತ್ತು ದಿನ ಆತ ಊರಲ್ಲಿದ್ದರೇ ಹೆಚ್ಚು. ಇದ್ದಾಗ,
ತಡವಾಗಿ ಮನೆಗೆ ಬರುವುದು, ತಡವಾಗಿ ಏಳುವುದು.

ಮೂರನೆಯ ಕೊಠಡಿಮನೆಯಲ್ಲಿದ್ದುದು ಸಾವಿತ್ರಮ್ಮನ ಸಂಸಾರ. 'ಅವರ
ಯಜಮಾನರು' ಹೆಚ್ಚಾಗಿ ಸ‍ರ್ಕೀಟಿನ ಮೇಲೆಯೇ ಇರುತ್ತಿದ್ದರು. ಆತ ಹಲವು
ಪ್ರಕಾಶನ ಸಂಸ್ಥೆಗಳ ಪ್ರತಿನಿಧಿ. ಕನ್ನಡದ ಅಪೂರ್ವ ವಿದ್ವ‍ತ್ತನ್ನೆಲ್ಲ ಪುಸ್ತಕಗಳ ರೂಪ
ದಲ್ಲಿ ಕಬ್ಬಿಣದೊಂದು ಪೆಟ್ಟಿಗೆಯಲ್ಲಿ ಹೊತ್ತು ಆತ ಊರೂರು ತಿರುಗುತ್ತಿದ್ದರು.
ಇಬ್ಬರು ಮಕ್ಕಳು ಆ ದಂಪತಿಗೆ. ಇಂಟರ್ ಪರೀಕ್ಷೆಗೆ ಎರಡು ಸಾರೆ ಕಟ್ಟಿ ಎರಡು
ಭಾಗಗಳಲ್ಲಷ್ಟೆ ಉತ್ತೀರ್ಣನಾದವನು ಜಯರಾಮು. ಎರಡು ವಾರಪತ್ರಿಕೆಗಳ
ಮಕ್ಕಳ ವಿಭಾಗಕ್ಕೆ ಸದಸ್ಯನಾಗಿದ್ದ ಆತನನ್ನು ಸುತ್ತಮುತ್ತಲಿನವರೆಲ್ಲ ಕವಿಯೆಂದು
ಕರೆಯುತ್ತಿದ್ದರು. ಆತನ ತಂಗಿ, ತಾಯ್ತಂದೆಯರ ದೃಷ್ಟಿಯಲ್ಲಿ 'ಇನ್ನೂ ಚಿಕ್ಕ
ಹುಡುಗಿ.' ಆದರೆ ಅಕ್ಕ ಪಕ್ಕದ ಮನೆ ಹೆಂಗಸರ ಅಭಿಪ್ರಾಯದ ಪ್ರಕಾರ 'ಬೆಳೆದು
ನಿಂತವಳು.' ಆದರೆ ಪುಟ್ಟ ರಾಧಾ ಈಗಲೂ ತಾಯಿಯ ಜತೆಯಲ್ಲೆ ಮೈಮುದುಡಿ
ಕೊಂಡು ಮಲಗುತ್ತಿದ್ದಳು. ಕತ್ತಲ್ಲನ್ನು ಕಂಡರೆ ಅವಳಿಗೆ ಭಯ. ಕವಿ ಜಯರಾಮು

ಮಾತ್ರ ಬೇಗನೆ ಎದ್ದು ಉಷೆಯನ್ನು ಇದಿರುಗೊಳ್ಳಲೆಂದು ವಠಾರದಿಂದ ಹೊರಬಿದ್ದು
ದೂರ, ಬಲು ದೂರ, ಸಾಗುತ್ತಿದ್ದ.
ವಠಾರದ ಹಿಂಭಾಗದ ಮನೆಯ ಸುಬ್ಬುಕೃಷ್ಣಯ್ಯ ಏಳುವುದು ಸ್ವಲ್ಪ ನಿಧಾನ
ವಾಗಿಯೇ. ಒಂಭತ್ತು ಗಂಟೆಗೆ ಸರಿಯಾಗಿ ಆತ ಶ್ರೀನಿವಾಸ ಶೆಟ್ಟರ ಅಂಗಡಿ ಬಾಗಿ
ಲಲ್ಲಿದ್ದರಾಯಿತು.
ಅದರ ಎದುರು ಭಾಗದಲ್ಲೇ ನಾರಾಯಣಿಯ ಮನೆ....
ಎಂದಿನಂತೆಯೇ ಈ ದಿನವೂ ಈ ಮುಂಜಾನೆಯೂ...
ಎಚ್ಚರವಾಗಿ ಬಹಳ ಕಾಲ ಕಂಬಳಿ ಹೊದೆದು ಕುಳಿತಿದ್ದ ರಂಗಮ್ಮ, ನಿನ್ನೆ-ಈ
ದಿನ-ನಾಳೆಗಳ ಬಗೆಗೆ ಯೋಚಿಸಿದರು. ಬಳಿಕ ಎದ್ದು ಬಾಗಿಲು ತೆರೆದರು. ಮಬ್ಬು
ಬೆಳಕಿನ ಗಾಳಿ ಅವರ ಮುದಿಮುಖಕ್ಕೆ ಮುತ್ತಿಟ್ಟಿತು...ಬೀಗದ ಕೈ ಗೊಂಚಲನ್ನೆತ್ತಿ
ಕೊಂಡು ನಡೆಗೋಲನ್ನೂ ರುತ್ತ ಅವರು ಹೊರಬಂದರು. ಅವರ ದೃಷ್ಟಿ ಓಣಿಯ
ಕೊನೆಗೆ-ನಾರಾಯಣಿಯ ಮನೆಯತ್ತ_ಹರಿಯಿತು. ಅವರು ಮೆಲ್ಲನೆ ಅಲ್ಲಿಗೆ
ನಡೆದರು. ಬಾಗಿಲಿಗೆ ಒಳಗಿನಿಂದ ಅಗಣಿ ಹಾಕಿರಲಿಲ್ಲ. ರಂಗಮ್ಮ ಬಾಗಿಲನ್ನು
ಹಿಂದಕ್ಕೆ ತಳ್ಳಿದರು. ನಾರಾಯಣಿ ಮಲಗಿದ್ದಲ್ಲಿ ತಲೆಯ ಭಾಗದಲ್ಲಿರಿಸಿದ್ದ ಹಣತೆ
ಎಣ್ಣೆ ಆರಿ ನಂದಿ ಹೋಗಿತ್ತು. ನಾಲ್ವರು ಮಕ್ಕಳನ್ನೂ ಮೂಲೆಯಲ್ಲಿ ಒಂದಾಗಿ
ಮಲಗಿಸಿ ಹೊದಿಸಿತ್ತು. ನಾರಾಯಣಿಯ ಗಂಡ ಬರಿ ಚಾಪೆಯ ಮೇಲೆ ಮಕ್ಕಳತ್ತ
ಮುಖ ತಿರುಗಿಸಿ ಮಲಗಿದ್ದ. 'ಅಯ್ಯೋ ಪಾಪ!' ಎನಿಸಿತು ರಂಗಮ್ಮನಿಗೆ. ಅವರು
ಮತ್ತೆ ಬಾಗಿಲೆಳೆದುಕೊಂಡರು.
ರಂಗಮ್ಮ ಹೊರ ಹಿತ್ತಿಲಿಗೆ ಬಂದು ಕೊಳಾಯಿಗೆ ಹಾಕಿದ್ದ ಬೀಗ ತೆಗೆದರು.
ವಠಾರದ ಎಲ್ಲರನ್ನೂ ಉದ್ದೇಶಿಸಿ ಅವರೆಂದರು:
“ಕೊಳಾಯಿ ಬೀಗ ತೆಗೆದಿದೀನಿ....ಬನ್ರೇ....”
ಒಬ್ಬೊಬ್ಬರಾಗಿ ಕೊಡವೆತ್ತಿಕೊಂಡು ಎಲ್ಲರೂ ಬಂದರು-ಮೀನಾಕ್ಷಮ್ಮ,
ಪದ್ಮಾವತಿ, ಕಮಲಮ್ಮ, ಕಾಮಾಕ್ಷಿ, ರಾಜಮ್ಮ, ರಾಧಾ...ಎಲ್ಲರೂ.
ನಾರಾಯಣಿಯಂತೂ ಕಾಹಿಲೆ ಮಲಗಿದ ಮೇಲೆ ನೀರಿಗೆ ಬಂದೇ ಇರಲಿಲ್ಲ. ಆಕೆ
ಬರದೇ ಇದ್ದುದರಿಂದ ಏನೋ ಕೊರತೆಯಾದಂತೆ ಯಾರಿಗೂ ಅನಿಸಲಿಲ್ಲ.
ಎಂದಿನಂತೆಯೇ ಮತ್ತೊಂದು ದಿನ ಯಾವ ಬದಲಾವಣೆಯೂ ಇಲ್ಲದೆ ತಮ್ಮ
ವಠಾರದಲ್ಲಿ ಆರಂಭವಾಯಿತೆಂದು ರಂಗಮ್ಮ ಸಮಾಧಾನದ ನಿಟ್ಟುಸಿರು ಬಿಟ್ಟರು.