ರಂಗಮ್ಮನ ವಠಾರ/೩

ವಿಕಿಸೋರ್ಸ್ದಿಂದ


ನಾರಾಯಣಿಯ ಗಂಡ ಎಲ್ಲಿಂದಲೋ ಸಾಲ ಪಡೆದು ಒಂದಿಷ್ಟು ಅಕ್ಕಿ ತಂದು
ಗಂಜಿ ಬೇಯಿಸಿದ. ಮಾರಲೆಂದು ಸಿದ್ಧಪಡಿಸುತ್ತಿದ್ದುದರಲ್ಲಿ ಸ್ವಲ್ಪ ತಿಂಡಿ ಉಳಿಸಿ


ಕೊಂಡು ಕಮಲಮ್ಮ ಎಳೆಯ ಮಕ್ಕಳಿಗೆ ಕೊಟ್ಟಳು. ದೊಡ್ದ ಹುಡುಗ ಶಾಲೆಗೆ ಹೋಗುವುದನ್ನು ನಿಲ್ಲಿಸಿ, ಚಿಕ್ಕವರನ್ನು ನೋಡಿಕೊಂಡ. ಕಾಮಾಕ್ಷಿ ಕೊನೆಯ ಕೂಸಿಗೆ ಹಸುವಿನ ಹಾಲು ಕುಡಿಸಿದಳು.

ಸಾವಿನ ಮನೆಗೆ ಸಂಕೀತವಾಗಿದ್ದ ಹಣತೆ, ಆಗಾಗ್ಗೆ ಎಣ್ಣೆ ಇಲ್ಲದೆ ಆರಿದರೂ,

ಒಂದು ಎರಡು ಮೂರು ಎಂದು ಕಳೆದ ದಿನಗಳನ್ನು ಲೆಕ್ಕ ಹಾಕಿತು.

ಅಳು-ನಗು, ಸಾಧನೆ- ಸಂಪಾದನೆ, ಸುಖ-ಸಂಕಟ, ಹೀಗೆ ಬದುಕಿನ ಬಣ್ಣ

ಬಣ್ಣದ ಅಲೆಗಳು ವಠಾರದ ಜೀವನ ಸರೋವರದಲ್ಲಿ ಹುಟ್ಟಿ, ಅಳಿಯುತ್ತ ಇದ್ದುವು.

ಆದರೆ ರಂಗಮ್ಮ ಗೆಲುವಾಗಿರಲಿಲ್ಲ. ಅವರ ಸುಕ್ಕುಗಟ್ಟಿದ್ದ ಮುಖ ಬಾಡಿ

ಕೊಂಡು ಮತ್ತಷ್ಟು ಸಪ್ಪೆಯಾಯಿತು. ಒಮ್ಮೆ ಸಿಡುಕು, ಮರುಕ್ಷಣವೇ ಸಂತೋಷ- ಇದು ಅವರ ಸ್ವಭಾವ. ಆದರೆ ಈಗ ದಿನವೆಲ್ಲ ಮುಖ ಗಂಟಿಕ್ಕಿಕೊಂಡೇ ಇರುತ್ತಿತ್ತು...

...ರಾಧಾ ಮೂರು ಎಂದು ಹೇಳಿ ನಾಲ್ಕು ಕೊಡ ನೀರು ಒಯ್ದಳೆಂದು ಅವರು

ಗದರಿದರು. ರಾಧಾಗೆ ಅಳು ಬಂತು.

ಜಯರಾಮು ಕಿಟಿಕಿಯಿಂದ ಮುಖ ಹೊರ ಹಾಕಿ ಕೆಳಕ್ಕೆ ರಂಗಮ್ಮನತ್ತ

ನೋಡುತ್ತ ರಾಗವೆಳೆದ:

"ನಾಲ್ಕು ಕೊಡ ನೀರು ಹೊತ್ಕೊಂಡು ಈ ಮಹಡಿ ಮೆಟ್ಟಲು ಹತ್ತೋದು

ಮನುಷ್ಯರಿಂದ ಸಾಧ್ಯವೇ ರಂಗವ್ನೋರೆ? ಅದೂ ರಾಧಾ, ಪುಟ್ಟ ಹುಡುಗಿ?"

ರಾಧಾ ಪುಟ್ಟ ಹುಡುಗಿಯಲ್ಲವೆಂದು ವಾದಿಸುತ್ತಿದ್ದ ಇಬ್ಬರು ಮೂವರು

ಹೆಂಗಸರು ಕೊಳಾಯಿಯ ಬಳಿ ನಿಂತಿದ್ದರು. ಅವರಿಗೆ ಕೇಳಿಸಲೆಂದೇ ಜಯರಾಮು ಹಾಗೆ ಹೇಳಿದ್ದ.

ಆತ ನಿರೀಕ್ಷಿಸಿದ್ದಂತೆಯೇ ಚಚೆರ್ ನಾಲ್ಕು ಕೊಡಗಳನ್ನು ಮರೆತು ರಾಧಾಳತ್ತ

ತಿರುಗಿತು.

ಮದುವೆಯಾಗದೇ ಇದ್ದ ಇಬ್ಬರು ಗಂಡುಮಕ್ಕಳ ತಾಯಿ ರಾಜಮ್ಮ ಯಾವುದೋ

ಸಂಕಟವನ್ನು ಮರೆಸಲು ಹಾದಿಯಾಗಲೆಂದು ಮಾತನಾಡಿದಳು:

"ಚೆನ್ನಾಗಿದೆ...ಪುಟ್ಟ ಹುಡುಗಿ...ಊಹೂಹೂಹು...ಪಾಪ! ದೃಷ್ಟಿ

ತಾಕೀತು."

"ಯಾಕೆ ಸುಮ್ಸುಮ್ಮೆ ಜಗಳ ಕಾಯ್ತಿಯೋ?" ಎಂದು ಜಯರಾಮುವಿನ

ತಾಯಿ ವಿನಂತ ಮಾಡುವ ಧ್ವನಿಯಲ್ಲಿ ಮಗನಿಗೆ ಅಂದಳು.

ಗುಂಡಣ್ಣ ಹೆಬ್ಬಾಗಿಲ ಬಳಿ ತಲೆ ಹಾಕಿ ಗಡಸು ಸ್ವರದಲ್ಲಿ ಗದರಿದ:

"ಏನಮ್ಮಾ ಅದು ಗಲಾಟೆ?"

ರಂಗಮ್ಮ ಅಲ್ಲಿಂದ ಒಳಕ್ಕೆ ಬಂದರು. ಕಟ್ಟಡದ ಕೆಳಭಾಗದಲ್ಲಿದ್ದ ನಾಲ್ಕು ಮನೆ

ಗಳಲ್ಲೂ ಹಗಲು ಹೊತ್ತು ಕೂಡ ಸಾಕಷ್ಟು ಬೆಳಕು ಇರುತ್ತಿರಲ್ಲಿಲ.ಆದರೆ ರಂಗಮ್ಮ ನಿಗೆ, ದೃಷ್ಟಿ ಮಂದವಾಗಿದ್ದರೂ, ಅಭ್ಯಾಸಬಲದಿಂದ, ಆ ಮನೆಗಳ ಒಳಗಿದ್ದ ಪ್ರತಿ ಯೊಂದೊಂದೂ ತೆರೆದ ಬಾಗಿಲುಗಳೆಡೆಯಿಂದ ಕಾಣಿಸುತ್ತಿತ್ತು.
ರಂಗಮ್ಮನ ಗಂಟಲಿನಿಂದ ಆಂ_ಊಂ_ನರಳಾಟದ ಧ್ವನಿ ಹೊರಟಿತು. ಹಲ್ಲು
ಕಡಿತದ ಸಪ್ಪಳ ಕೇಳಿಸಿತು. ಎಲ್ಲಿಲ್ಲದ ಬೇಸರದಿಂದ ಹಿಂಡಿಹೋಗಿತ್ತು ಮನಸ್ಸು.
ಓಣಿಯಲ್ಲಿ ಪದ್ಮನಾಭನ ಮನೆಯ ಮುಂದುಗಡೆ ಯಾವುದೋ ಮಗು ಇಸ್ಸಿ
ಮಾಡಿತ್ತು.
ಕಟಕಟನೆ ಸದ್ದು ಮಾಡಿಕೊಂಡು ಹಾಸುಗಲ್ಲುಗಳ ಮೇಲೆ ನಡೆಯುತ್ತ ರಂಗಮ್ಮ
ಅಲ್ಲಿಗೆ ಬಂದರು.
"ಯಾರ ಮಗೂನೇ ಇದು?........ವಠಾರದ ಆಚೆಗೆ ಬೀದಿಗೆ ಕಳಿಸೀಂತ ಎಷ್ಟು
ಸಾರಿ ಹೇಳಿಲ್ಲ ನಿಮಗೆ?...."
ಯಾವ ಮನೆಯಿಂದಲೂ ಉತ್ತರ ಹೊರಡಲಿಲ್ಲ. ರಂಗಮ್ಮನ ಸ್ವರ ಕಿರಿಚಿ
ಕೊಳ್ಳುವ ಮಟ್ಟಕ್ಕೇರಿತು:
"ಕಿವಿ ಕೇಳಿಸೋಲ್ವೇನ್ರೇ? ಪದ್ಮಾವತೀ, ಕಮಲಮ್ಮ, ಯಾರ ಮಗೂನ್ರೇ
ಇದು?"
"ನಮ್ಮದಲ್ಲಪ್ಪ", " ನಮ್ಮದಲ್ಲ" ಎಂದು ಉತ್ತರಗಳು ಬಂದುವು. ತಾಯಂದಿರು
ತಮ್ಮ ಎಳೆಯ ಮಕ್ಕಳನ್ನು ಹಿಡಿದು ತಿರುಗಿಸಿ ಪರೀಕ್ಷಿಸಬೇಕಾಯಿತು.
"ಇದೊಳ್ಳೇ ತಮಾಷಿ. ಹಾಗಾದರೆ ಬೀದಿ ಮಕ್ಕಳು ಬಂದುವೇನು ಇಲ್ಲಿಗೆ?"
ಎಂದು ಗಟ್ಟಿಯಾದ ಸ್ವರದಲ್ಲಿ ರಂಗಮ್ಮ ಕೇಳಿದರು.
ನಾರಾಯಣಿಯ ಮಗ ಪುಟ್ಟು ಹೊರ ಬಂದು ವಿಷಾದದ ಧ್ವನಿಯಲ್ಲಿ ಹೇಳಿದ:
"ನಮ್ಮನೇ ಮಗು ಅಜ್ಜಿ, ನಾನು ನೋಡೇ ಇರ್ಲಿಲ್ಲ. ತೆಗೀತೀನಿ."
ತಾಯಿಯಿಲ್ಲದ ತಬ್ಬಲಿ ಮಕ್ಕಳು...ರಂಗಮ್ಮನ ಗಂಟಲು ಒಣಗಿತು.
ಇಸ್ಸಿ ಎತ್ತಲು ಹುಡುಗ ಯಾವುದೋ ಹಳೆಯ ಪತ್ರಿಕೆಯ ಚೂರುಗಳನ್ನು
ತರುತ್ತಿದ್ದಂತೆ ಕಮಲಮ್ಮನ ಸ್ವರ ಕೇಳಿಸಿತು.
"ತಾಳೋ ಮರಿ. ನಾನು ತೆಗೀತೀನಿ, ತಾಳೋ...."
ರಂಗಮ್ಮ ಹಾಗೆಯೇ ಮುಂದಕ್ಕೆ ನಡೆಯುತ್ತ ಹಿತ್ತಿಲ ಬಾಗಿಲವರೆಗೆ ಬಂದರು.
ಆ ಕೊನೆಯ ಸಂಸಾರಕ್ಕೊದಗಿದ ದುರ್ಗತಿಯನ್ನು ನೆನೆಯುತ್ತ ಅವರಿಗೆ ಸಂಕಟವೆನಿಸಿತು,
ಉಗುಳು ನುಂಗುವಂತಾಯಿತು.
ಹಿತ್ತಿಲ ಬಾಗಿಲ ಬಳಿ ಕಸದ ಗುಪ್ಪೆ ಇತ್ತು. ಮೀನಾಕ್ಷಮ್ಮನ ಮನೆಯದೇ
ಎಂಬುದು ಖಚಿತವಾಗಿದ್ದರೂ ರಂಗಮ್ಮ ಎಂದಿನಂತೆ ಮಾತನಾಡಿದರು:
"ಯಾರ್ರೇ ಇಲ್ಲಿ ಕಸದ ಗುಪ್ಪೆ ಹಾಕಿರೋರು? ಬಾಗಿಲು ತೆರೆದು ಹೊರಕ್ಕೆ
ಎಸಿಯೋಕೆ ಆಗಲ್ವೇನ್ರೆ? ಮುನ್ಸಿಪಾಲ್ಟಿಯೋರು ವಠಾರದ ಒಳಕ್ಕೆ ಬರ್ತಾರೇಂತ
ತಿಳ್ಕೊಂಡಿದೀರೇನ್ರೇ?...."

ಮೀನಾಕ್ಷಮ್ಮ ಎಂದಿನಂತೆ ಸಾವಧಾನವಾಗಿಯೇ ಉತ್ತರವಿತ್ತಳು:

"ನಾನು ರಂಗಮ್ನೋರೆ....ಬಂದೆ, ಎತ್ತಿ ಹಾಕ್ತೀನಿ..."
ರಂಗಮ್ಮ ಗೊಣಗುತ್ತ ಹಿಂತಿರುಗಿ, ಓಣಿಯುದ್ದಕ್ಕೂ ನಡೆದು ಈ ತುದಿಗೆ
ಬಂದು, ತಮ್ಮ ಮನೆಯ ಬಾಗಿಲ ಬಳಿ ನಿಂತರು.
ರಾಜಮ್ಮ ರಂಗಮ್ಮನ ಪರವಾಗಿ ಕೊಳಾಯಿಗೆ ಬೀಗ ತಗಲಿಸಿ, ಬೀಗದ ಕೈಯನ್ನು
ತಂದುಕೊಟ್ಟಳು:
"ಆಯ್ತೇನು ನೀರು ಎಲ್ರಿಗೂ?"
"ಆಯ್ತು ರಂಗಮ್ನೋರೆ."
ಇದು ಕೂಡ ಪದ್ಧತಿಯ ಮಾತು.
ರಂಗಮ್ಮ ತಮ್ಮ ಮನೆಯೊಳಕ್ಕೆ ಬಂದರು. ಒಲೆ ಹಚ್ಚಬೇಕಿನ್ನು. ತಮಗಾಗಿ
ನೀರು ಬಿಸಿ ಮಾಡಿ, ಆಡುಗೆ ಮನೆಯಲ್ಲೇ ಇದ್ದ ಬಚ್ಚಲಲ್ಲಿ ಸ್ನಾನ ಮಾಡಬೇಕು. ಆ
ಬಳಿಕ ದೇವರ ಪೂಜೆ. ತಮ್ಮ ಒಪ್ಪೊತ್ತಿನ ಊಟಕ್ಕಾಗಿ ಅನ್ನ, ಸಾರು.
ಈ ದಿನ ಏನೂ ಬೇದವೆಂದು ತೋರಿತು ರಂಗಮ್ಮನಿಗೆ. ಕಾಯಿಸದೆ ಹಾಗೆಯೇ
ಇರಿಸಿದ್ದ ಅರ್ಧ ಪಾವು ಹಾಲನ್ನು ನೋಡುತ್ತ ಅವರು ಗೋಡೆಗೊರಗಿ ಕುಳಿತರು.
ಯೋಚನೆಗಳು ಅವರನ್ನು ಕಾಡಿದುವು.
ಏನು ಮಾದಬೇಕು? ತಾನೇನು ಮಾಡಬೇಕು?
ತಿಂಗಳಿಗೆ ಹದಿನೇಳರಂತೆ ಮೂರು ತಿಂಗಳು...ಮೂರು ಸಾರೆ ಹತ್ತು ಮತ್ತು
ಮೂರು ಸಾರೆ ಏಳು..ಮೂವತ್ತು ಮತ್ತು ಇಪ್ಪತೋಂದು...ಐವತೋಂದು....
ಅದಂತೂ ದೊರೆಯುವ ಆಸೆ ಇರಲಿಲ್ಲ. ಒಂದು ತಿಂಗಳ ಬಾಡಿಗೆಯನ್ನೂ
ಮುಂಗಡವಾಗಿ ಆ ಸಂಸಾರ ಕೊಟ್ಟಿರಲಿಲ್ಲ. ಹೀಗಾಗಿ ಅಷ್ಟು ಹಣವೂ ಕೈ ಬಿಟ್ಟು
ಹೋದ ಹಾಗೆಯೇ.
ಆದರೆ ಅಷ್ಟೇ ಹಣವೆಂದು ಹೇಳುವುದು ಹೇಗೆ? ಮುಂದಿನ ಹತಿ ಏನು?
ಆ ಮಹಾರಾಯ ಮನೆಯನ್ನಾದರೂ ಖಾಲಿ ಮಾಡಿದರೆ ಚೆನ್ನಾಗಿತ್ತು...
ಆದರೆ ಆತ ಖಾಲಿ ಮಾಡುವ ಯಾವ ಚಿಹ್ನೆಯೂ ಇರಲಿಲ್ಲ. ನಿರುದ್ಯೋಗ
ಬೇರೆ..ಮಕ್ಕಳನ್ನು ಸಾಕುವುದಕ್ಕಾದರೂ ಎರಡನೇ ಮದುವೆ? ಅಷ್ಟೆಲ್ಲ ಸಾಮರ್ಥ್ಯ
ಆ ಗಂಡಸಿಗೆ ಇದ್ದ ಹಾಗೆ ತೋರಲಿಲ್ಲ. ಅಂದ ಬಳಿಕ-?
ಬೇಕಾದಷ್ಟು ಕಾಲ ಬಾಡಿಗೆ ಇಲ್ಲದೆಯೇ ಇಲ್ಲಿ ಇರು- ಎಂದು ಹೇಳಿದ ಹಾಗೆ
ಅದು ಹೇಗೆ ಸಾಧ್ಯ? ಶ್ರೀರಾಮಪುರದಲ್ಲೇ ಪ್ರಖ್ಯಾತವಾಗಿರುವ ರಂಗಮ್ಮನ
ವಠಾರವೇನು ಧರ್ಮಛತ್ರ ಕೆಟ್ಟು ಹೋಯ್ತೆ?
ಹಾಗಾದರೆ ಆತನಿಗೆ ಹೇಳಬೇಕು, ಮನೆ ಖಾಲಿ ಮಾಡು ಅಂತ.
ಹಾಗೆ ಹೇಳುವುದು ಮಾಅತ್ರ ಸುಲಭವಾಗಿರಲಿಲ್ಲ.
ಏನು ಮಾಡಬೇಕೆಂಬುದು ತೋಚದೆ, ಹಲ್ಲಿನ ಸದ್ದು ಮಾಡುತ್ತ ಆಂ-ಹೂಂ-
ಎಂದು ನರಳುತ್ತ ರಂಗಮ್ಮ ಸಂಕಟಪಟ್ಟರು.
ನಾಲ್ವತ್ತು ವರ್ಷ ವಯಸ್ಸಾಗಿದ್ದಾಗಲೇ ವಿಧವೆಯಾಗಿದ್ದರು ರಂಗಮ್ಮ. ಆ
ಪುಣ್ಯಾತ್ಮ ಬಿಟ್ಟು ಹೋದ ಆಸ್ತಿಯೆಂದರೆ ಬಾಲ್ಯಾವಸ್ಥೆಯಲ್ಲಿದ್ದ ಒಂದು ಗಂಡು,
ಎರಡು ಹೆಣ್ಣು ಮತ್ತು ಪುಟ್ಟ ಮನೆ. ಅವರು ತೀರಿಕೊಂಡಾಗ ಮಹಡಿ ಕಟ್ಟುವ
ಕೆಲಸ ಅರ್ಧದಲ್ಲೇ ನಿಂತಿತ್ತು. ಆವರೆಗೂ ಪುಕ್ಕಲು ಜೀವಿಯಾಗಿ ಗಂಡನ ನೆರಳಾಗಿದ್ದ
ರಂಗಮ್ಮ ಆ ಬಳಿಕ ಧೈರ್ಯ ತಳೆದು ದಿನ ಕಳೆದರು.
ಮನೆಯ ಅರ್ಧವನ್ನು ಅವರು ಬಾಡಿಗೆಗೆ ಕೊಟ್ಟರು. ಮಹಡಿ ಕಟ್ಟುವ ಕೆಲಸ
ಪೂರ್ತಿಯಾಯಿತು. ಕ್ರಮೇಣ ಕೆಳ ಭಾಗದಲ್ಲಿ ನಾಲ್ಕು ಮನೆಗಳಾದುವು. ಮಹಡಿಯ
ಮೂರು ಕೊಠಡಿಗಳನ್ನು ಓದುವ ಹುಡುಗರಿಗೆ ಬಾಡಿಗೆಗೆ ಕೊಟ್ಟುದಾಯಿತು.
ಬೆಳೆದು ನಿಂತ ಎರಡು ಹುಡುಗಿಯರನ್ನೂ ಹೆಚ್ಚು ಖರ್ಚಿಲ್ಲದೆಯೇ ರಂಗಮ್ಮ
ಮದುವೆ ಮಾಡಿಕೊಟ್ಟರು. ಆದರೆ ಮಗನಿಗೆ ಮಾತ್ರ ತುಂಬ ಅನುಕೂಲವಾಗಿದ್ದ
ಕಡೆಯೇ ಸಂಬಂಧ ಕುದುರಿಸಿದರು.ವರದಕ್ಷಿಣೆಯಾಗಿ ಬಂದುದನ್ನೆಲ್ಲ ಬಳಸಿ, ಮನೆಯ
ಹಿಂಭಾಗದ ಹಿತ್ತಿಲಲ್ಲಿ ಎರಡು ಸಾಲು ನಾಲ್ಕು-ನಾಲ್ಕು ಮನೆಗಳನ್ನು ಕಟ್ಟಿಸಿದ್ದಾಯಿತು.
ಜನ ಅದನ್ನು ವಠಾರವೆಂದು ಕರೆದರು. ಹಾಗೆ ಕರೆಯಲು ಯಾರು ಮೊದಲು
ಮಾಡಿದರೊ! ರಂಗಮ್ಮ ವಿಧವೆಯಾದ ಮೇಲೂ ಬಹಳ ಕಾಲ ಕೃಷ್ಣಪ್ಪನವರ ಮನೆ
ಯಾಗಿಯೇ ಇದ್ದುದು ಕ್ರಮೇಣ ರಂಗಮ್ಮನ ವಠಾರವಾಗಿ ಮಾರ್ಪಟ್ಟಿತು.
ಅದು ಹಲವು ವರ್ಷಗಳಿಗೆ ಹಿಂದಿನ ಮಾತು,ಈಗ ರಂಗಮ್ಮ ವೃದ್ಧೆ. ಇಬ್ಬರು
ಹೆಣ್ಣು ಮಕ್ಕಳಿಗೂ ಎಷ್ಟೋ ಮಕ್ಕಳಾಗಿದ್ದುವು. ಮಗನೂ ಸಂಸಾರವಂದಿಗನಾಗಿ ತಂದೆ
ಯಾಗಿದ್ದ. ಆಗಾಗ್ಗೆ ವರ್ಗವಾಗುತ್ತಿದ್ದ ಆತ ಈಗ ಇದ್ದುದು ಕಡೂರಿನಲ್ಲಿ.
ಯಾರಾದರೂ ಕೇಳಿದರೆ ರಂಗಮ್ಮ ಹೇಳುತ್ತಿದ್ದರು:
"ಇಲ್ಲೇ ಕಡೂರಲ್ಲಿ. ಒಪ್ಪೊತ್ತಿನ ಪ್ರಯಾಣ... "
ತಾನು ಹೋದಲ್ಲಿಗೆ ತಾಯಿಯನ್ನೂ ಕರೆದೊಯ್ಯಬೇಕೆಂದು ಮಗ ಎಷ್ಟೋ
ಪ್ರಯತ್ನಿಸಿದ್ದ.

"ತಿಂಗಳಿಗೊಂದ್ಸಾರಿ ಬಾಡಿಗೆ ವಸೂಲ್ಮಾಡ್ಕೊಂಡು ಬಂದರಾಯ್ತು," ಎಂದಿದ್ದ.
ರಂಗಮ್ಮ ಒಪ್ಪಿರಲಿಲ್ಲ. ತಮ್ಮ ಆ ವಠಾರವನ್ನು ಬಿಟ್ಟು ಒಂದು ದಿನದ ಮಟ್ಟಿಗೂ
ದೂರಹೋಗಲು ಅವರು ಸಿದ್ಧವಿರಲಿಲ್ಲ.
ಅವರು ಸೂಚಿಸಿದ್ದೊಂದೇ ಪರಿಹಾರ:
"ಆದಷ್ಟು ಬೇಗ್ನೆ ಈ ಊರ್ಗೇ ವರ್ಗ ಮಾಡಿಸ್ಕೊಂಡ್ಬಿಡಪ್ಪ...."
ವಠಾರದ ಮೇಲ್ವಿಚಾರಣೆಯೇನು ಸುಲಭದ ಕೆಲಸವೆ? ಹುಡುಗರಿಗೆ ಏನೂ
ತಿಳಿಯದು. ಏನೂ ತಿಳಿಯದು...
ಒಂಟಿಯಾಗಿಯೇ ಇರುವುದು ರಂಗಮ್ಮನಿಗೆ ಅಭ್ಯಾಸವಾಯಿತು. ಒಮ್ಮೊಮ್ಮೆ
ಒಬ್ಬೊಬ್ಬ ಮಗಳು ಚಿಳ್ಳೆ ಪಿಳ್ಳೆಗಳೊಡನೆ ಅಲ್ಲಿಗೆ ಬರುವುದಿತ್ತು. ಆಗ ರಂಗಮ್ಮ
ವಠಾರದ ಮೇಲ್ವಿಚಾರಣೆಯ ಜತೆಗೆ ಮೊಮ್ಮಕ್ಕಳ ಲಾಲನೆ ಪಾಲನೆಯನ್ನು ಮಾಡುತ್ತ
ಸುಖಿಯಾಗುತ್ತಿದ್ದರು.
...ಈಗ ಭಿನ್ನವಾದ ಈ ಸನ್ನಿವೇಶ.
ಯಾರಾದರೂ ಹೇಳುವುದು ಸಾಧ್ಯವಿತ್ತು:
"ನಿರ್ಗತಿಕ ಬಡಪಾಯಿ ಆತ....ಹೋಗಲಿ ಬಿಡಿ, ಇದ್ದುಕೊಳ್ಳಲಿ."
ಆದರೆ ರಂಗಮ್ಮನಿಗೆ ತಿಳಿಯದೆ? ಹಾಗೆ ಒಮ್ಮೆ ಮೊದಲಾಯಿತೆಂದರೆ ಅದಕ್ಕೆ
ಕೊನೆಯುಂಟೆ? ಯಾರು ನಿರ್ಗತಿಕರಲ್ಲ? ಬಡಪಾಯಿಗಳಲ್ಲ?
ಅದು ಆ ತಿಂಗಳ ಮೂರನೆಯ ವಾರ. ಆಗಲೆ ಮನೆ ಖಾಲಿಯಾದರೆ ಮುಂದಿನ
ತಿಂಗಳ ಮೊದಲನೆ ತಾರೀಖಿನಿಂದಲೇ ಯಾರಾದರೂ ಬರುವುದು ಸಾಧ್ಯವಿತ್ತು, ಅದೂ
ಹೆಚ್ಚು ಬಾಡಿಗೆಗೆ-ಎರಡು ರೂಪಾಯಿಯಾದರೂ ಹೆಚ್ಚು ಬಾಡಿಗೆಗೆ. ಈಗಲೇ ಖಾಲಿ
ಯಾಗದೆ ಹೋದರೆ ಮತ್ತೂ ಒಂದು ತಿಂಗಳು ನಷ್ಟವೇ.
ಮಗನಿಗೆ ಬೆಂಗಳೂರಿಗೇ ವರ್ಗವಾದಮೇಲೆ ಮುಂಭಾಗದ ಮನೆಯ ಕೆಳಭಾಗದ
ನಾಲ್ಕು ಸಂಸಾರಗಳನ್ನೂ ಬಿಡಿಸಿ, ದುರಸ್ತಿ ಪಡಿಸಿ, ತಾವೆಲ್ಲ ಅಲ್ಲಿ ವಾಸ ಮಾಡಬೇಕು;
ಈಗ ತಾನಿರುವ ಮನೆಯನ್ನೂ ಬಾಡಿಗೆಗೆ ಕೊಡಬೇಕು-ಎಂಬುದು ರಂಗಮ್ಮನ ಅಪೇಕ್ಷೆ
ಯಾಗಿತ್ತು. ಮುಂದೆ, ಹಿಂಭಾಗದ ನಾಲ್ಕು ಮನೆಗಳ ಒಂದೊಂದು ಸಾಲನ್ನು ತಮ್ಮ
ಇಬ್ಬರು ಹೆಣ್ಣು ಮಕ್ಕಳಿಗೆ ಬಿಟ್ಟು ಹೋಗಬೇಕು ಎಂದುಕೊಂಡಿದ್ದರು.
ಇಲ್ಲ; ಬಾಡಿಗೆ ಹೋದರೆ ಹೋಗಲಿ ಎಂದು ಅವರು ಉಪೇಕ್ಷೆ ಮಾಡುವುದು
ಸಾಧ್ಯವಿರಲಿಲ್ಲ.
'ನಾನು ನಿರ್ದಯಳೂಂತ ಹೇಳೋ ಧೈರ್ಯ ಯಾರಿಗಿದೆ? ಈಗ ಮೂರು
ತಿಂಗಳ ಬಾಡಿಗೆ ಬಿಟ್ಟಿರೋದು ಸಾಲದೆ? ಶವ ಸಂಸ್ಕಾರಕ್ಕೇಂತ ಐದು ರೂಪಾಯಿ
ಬೇರೆ...'
ಯೋಚಿಸುತ್ತಿದ್ದ ರಂಗಮ್ಮನಿಗೆ ನಾರಾಯಣಿಯ ನೆನಪಾಯಿತು. ಮೊದಲ
ಸಾರೆ ಬಾಡಿಗೆಗೆ ಮನೆ ಕೇಳಲು ಬಂದ ಆಕೆ, ಚೊಚ್ಚಲ ಮಗುವನ್ನೆತ್ತಿಕೊಂಡು ನಗು
ನಗುತ್ತ ಮಾತನಾಡಿದ್ದಳು.
ಆಗ ಕೇಳಿದ್ದರು ರಂಗಮ್ಮ:
"ಮಗು__"
"ಗಂಡು," ಎಂದಿದ್ದಳು ನಾರಾಯಣಿ.
"ನನ್ನದೂ ಮೊದಲನೇದು ಗಂಡೇ."
"ಓ!"
ಆದರೆ, ನಾಲ್ಕು ಮಕ್ಕಳ ತಾಯಿಯಾಗಿ, ಸಾಯುವ ಕಾಲಕ್ಕೆ ಹೇಗಾಗಿ ಹೋಗಿ
ದ್ದಳು ಆ ನಾರಾಯಣಿ!
'ಬ್ರಹ್ಮಲಿಪಿ ಅಳಿಸೋರು ಯಾರು?' ಎಂದು ತಮ್ಮಷ್ಟಕ್ಕೆ ರಂಗಮ್ಮ ಅಂದು
ಕೊಂಡರು.
ಕನಿಕರದ ಅನುತಾಪದ ಒರತೆಗಳನ್ನು ಹತ್ತಿಕ್ಕಿ ರಂಗಮ್ಮ ಕರ್ತವ್ಯದ ಬಗೆಗೆ

ಚಿಂತಿಸಿದರು.
ಕರ್ತವ್ಯ ಸ್ಪಷ್ಟವಾಗಿತ್ತು. ಅದು ಸಾರುತ್ತಿತ್ತು:
'ಮನೆ ಖಾಲಿ ಮಾಡಿಸಬೇಕು: ಬೇಗನೆ ಖಾಲಿ ಮಾಡಿಸಬೇಕು.'
ರಂಗಮ್ಮ ನಿಟ್ಟುಸಿರು ಬಿಟ್ಟು ಒಲೆ ಹಚ್ಚಿದರು.
ಕಕ್ಕಸಿಗೆ ಹೋದಾಗ ಅವರಿಗೆ ಕಾಣಿಸಿತು. ನಾರಾಯಣಿಯ ಗಂಡ ಒಲೆಯ
ಬುಡದಲ್ಲಿ ಕುಳಿತು ಮಕ್ಕಳಿಗೆ ಗಂಜಿ ಬಡಿಸುತ್ತಿದ್ದ. ಹೊರಗಿನಿಂದ ತೂರಿಬರುತ್ತಿದ್ದ
ಬಿಸಿಲನ್ನು ಸಹಿಸಲಾರದೆ ಕಣ್ಣು ಕಿರಿದುಗೊಳಿಸುತ್ತ ಹಣತೆ ಉರಿಯುತ್ತಿತ್ತು.
'ಈಗಲೇ ಹೇಳೋಣವೇ?'
"ಈಗಲೇ ಹೇಳೋಣವೇ?" ಎಂದು ರಂಗಮ್ಮ ತಮ್ಮನ್ನೇ ಪ್ರಶ್ನಿಸಿದರು.
"ಬೇಡ . ಮಧ್ಯಾಹ್ನ ಹೇಳಿದರಾಯ್ತು. ಇಲ್ಲವೆ ಸಂಜೆ ಹೇಳಿದರಾಯ್ತು"
ಎಂದು ತಮಗೆ ತಾವೇ ಉತ್ತರಿಸಿಕೊಂಡರು.
...ಆದರೆ ಮಧ್ಯಾಹ್ನ ಆತ ಮನೆಯಲ್ಲೇ ಇರಲಿಲ್ಲ. ಸಂಜೆಯಾದರೂ ಬರಲಿಲ್ಲ.
ಮಾಡಬೇಕಾದ್ದೇನೆಂಬುದು ಇತ್ಯರ್ಥವಾಗಿದ್ದರೂ ಆ ಕೆಲಸವನ್ನಷ್ಟು ಬೇಗನೆ
ಮುಗಿಸುವುದಾಗಲಿಲ್ಲವಲ್ಲ ಎಂದು ರಂಗಮ್ಮನಿಗೆ ಕಸಿವಿಸಿಯಾಯಿತು. ದುಗುಡ ಹೆಚ್ಚಿತು.
ನಿಷ್ಕಾರಣವಾಗಿ ರೇಗುತ್ತ, ಏನಾದರೊಂದು ನೆಪ ತೆಗೆದು ಯಾರಿಗಾದರೂ ಛೀಮಾರಿ
ಹಾಕುತ್ತ, ವಠಾರದ ಉದ್ದಗಲಕ್ಕೂ ಅವರು ಓಡಾಡಿದರು.
ಕತ್ತಲಾಗುತ್ತ ಬಂದಾಗ ರಂಗಮ್ಮ ಚಿಕ್ಕವರನ್ನು ಆಡಿಸುತ್ತ ನಿಂತಿದ್ದ ನಾರಾ
ಯಣಿಯ ದೊಡ್ಡ ಹುಡುಗನನ್ನು ಕರೆದರು.
"ಎಲ್ಹೋಗಿದಾನೋ ನಿಮ್ಮಪ್ಪ?"
"ಗೊತ್ತಿಲ್ಲ ಅಜ್ಜಿ."
"ಬರ್ತಾನೇನು ರಾತ್ರೆ?"
"ಹೂಂ. ಬರ್ತಾರೆ."
ಆ ಬಳಿಕ ಅಸ್ಪಷ್ಟವಾದ ನಾಲ್ಕು ಮಾತುಗಳನ್ನು ರಂಗಮ್ಮ ಗೊಣಗಿದರು. ಅದೇ
ನೆಂದು ತಿಳಿದುಕೊಳ್ಳುವ ಗೊಡವೆಗೂ ಆತ ಹೋಗಲಿಲ್ಲ.
ಹುಡುಗ ತಾಯಿಯಿಲ್ಲದ ತನ್ನ ಮನೆಯತ್ತ ಹೊರಟ. ಆಗ ರಂಗಮ್ಮ
ಮತ್ತೊಮ್ಮೆ ಆತನ ಹೆಸರು ಹಿಡಿದು ಕರೆದರು.

"ನಿಮ್ಮಪ್ಪ ಬಂದ ತಕ್ಷಣ ನನ್ನನ್ನ ನೋಡ್ಬೇಕೂಂತ ಹೇಳು."
" ಹೂನಜ್ಜಿ."
ತನ್ನ ತಂದೆಯನ್ನು ಯಾಕೆ ಕರೆದಿರಬಹುದೆಂದು ಆ ಹುಡುಗ ಯೋಚಿಸಲಿಲ್ಲ.
ರಂಗಮ್ಮ ತಮ್ಮ ಮನೆಯಲ್ಲಿ 'ದೀಪ ಹಾಕಿ'ದರು. ಕಮಲಮ್ಮ ಬಂದು ನಾರಾಯಣಿಯ
ಮನೆಯಲ್ಲೂ ಗುಂಡಿಯೊತ್ತಿದಳು. ಪಾತ್ರೆಯಲ್ಲಿ ಬೆಳಗ್ಗೆ ಮಾಡಿ ಉಳಿದಿದ್ದ
ಗಂಜಿಯಿತ್ತು.

"ನೀವೆಲ್ಲಾ ಊಟ ಮಾಡಿ ಮಲಕೊಂಡ್ಬಿಡೀಪ್ಪಾ ಪುಟ್ಟೂ. ಎಷ್ಟು ಹೊತ್ತಿಗೆ
ಬರ್ತಾರೋ ಏನೋ ನಿಮ್ಮಪ್ಪ."
"ಹೂಂ."
"ಊಟಕ್ಕಿಡ್ಲೇನು?"
"ಬೇಡಿ ಅತ್ತೆ. ನಾವೇ ಬಡಿಸ್ಕೋತೀವಿ ಅತ್ತೆ."

ಅತ್ತೆ ಕವ:ಲಮ್ಮ! ಆಕೆಗೆ ಹೆಣ್ಣು ಮಗುವಿರಲಿಲ್ಲ...ಯಾವ ಮಗುವೂ ಇರ
ಲಿಲ್ಲ. ಲಂಗ ತೊಡುವ ಪುಟ್ಟ ಮಗಳು ಇದ್ದಿದ್ದರೆ ಆ ಹುಡುಗನನ್ನೇ ಕಮಲಮ್ಮ
ಖಂಡಿತವಾಗಿಯೂ ಅಳಿಯನನ್ನಾಗಿ ಮಾಡಿಕೊಳ್ಳುತ್ತಿದ್ದಳು.
ಕಮಲಮ್ಮ ನಿಟ್ಟುಸಿರುಬಿಟ್ಟು ಗಂಜಿಯ ಪಾತ್ರೆಯತ್ತ ಮತ್ತೊಮ್ಮೆ ನೋಡಿದಳು.
ಅಲ್ಲಿ ಹೆಚ್ಚೇನೂ ಇರಲಿಲ್ಲ
"ಇದರಲ್ಲೇನೂ ಮಿಗಿಸ್ಬೇಡಿ. ನಿಮ್ಮಪ್ಪ ಊಟ ಮಾಡ್ಕೊಂಡೇ ಬರ್ತಾರೆ."
"ಹೂಂ ಅತ್ತೆ."
....ಮಕ್ಕಳು ಊಟ ಮಾಡಿ ಒಂದನ್ನೊಂದು ತಬ್ಬಿಕೊಂಡು ನಿದ್ದೆಹೋದವು.
ಬಲು ಭಾರವಾದ ಹೃದಯವನ್ನು ಹೊತ್ತು ಅತ್ಯಂತ ಹಗುರವಾದ ಕಳ್ಳ ಹೆಜ್ಜೆ
ಗಳನ್ನಿ ಡುತ್ತ ಒಂಭತ್ತು ಘಂಟೆಯ ಸುಮಾರಿಗೆ ನಾರಾಯಣಿಯ ಗಂಡ ಮನೆಗೆ ಬಂದ.
ಇನ್ನು ರಂಗಮ್ಮ ಹೆಚ್ಚು ದಿನ ತಡೆಯಲಾರರೆಂಬ ಭಯ ಆತನಿಗಿದ್ದೇ ಇತ್ತು. ವಠಾರಕ್ಕೆ
ಹಿಂತಿರುಗಿದಾಗಲೆಲ್ಲ ಅಳುಕು ಹೆಚ್ಚುತ್ತಿತ್ತು....ಹಗಲು ಉದ್ಯೋಗಕ್ಕಾಗಿ ಆತ ಅಲೆ
ಯುತ್ತಿದ್ದ. ಆದರೆ ಎಲ್ಲ ಯತ್ನಗಳೂ ಪರಿಚಯದವರಿಂದ ಪುಡಿಕಾಸು ಸಾಲ ಪಡೆ
ಯುವುದರಲ್ಲೇ ಮುಕ್ತಾಯವಾಗುತ್ತಿದ್ದುವು. ಹೇಡಿ ಮನಸ್ಸು ಒಮ್ಮೊಮ್ಮೆ ‌ಎಲ್ಲಿ
ಗಾದರೂ ಓಡಿಹೋಗೆನ್ನುತ್ತಿತ್ತು. ಆದರೆ, ಮಕ್ಕಳ ನೆನಪಾದಗಲೆಲ್ಲ ಒತ್ತರಿಸಿ ಬರು
ತ್ತಿತ್ತು ಅಳು.
ನಿದ್ದೆ ಹೋಗುತ್ತಿದ್ದ ಮಕ್ಕಳನ್ನು ಕಂಡು ಆತನಿಗೆ ತುಸು ಸಮಾಧಾನವೆನಿಸಿತು.
ಗಂಜಿಯ ಪಾತ್ರೆಯನ್ನು ನೋಡಿದ. ಅಲ್ಲೇನೂ ಇರಲಿಲ್ಲ. ಹಸಿವೆಯಾಗಿತ್ತು. ಆತ
ಸಂಜೆ ಒಮ್ಮೆ ಬರಿಯ ಕಾಫಿ ಕುಡಿದಿದ್ದ; ಯಾರೋ ಸ್ನೇಹಿತ ಕೊಟ್ಟಿದ್ದ ಸಿಗರೇಟು
ಸೇದಿದ್ದ_ಅಷ್ಟೆ. ಈಗ ಮನೆಯಲ್ಲಿ ಒಲೆ ಹಚ್ಚಲು ಮನಸ್ಸಾಗಲಿಲ್ಲ. ಅಲ್ಲದೆ ಇರುವ
ಸ್ವಲ್ಪ ಅಕ್ಕಿ ಆದಷ್ಟು ದಿನ ಬರಬೇಕಲ್ಲವೆ?.... ಆತ ಎರಡು ಲೋಟ ನೀರು
ಕುಡಿದ. ದೀಪ ಆರಿಸಿ ಮಲಗಿಕೊಳ್ಳಬೇಕೆಂದು, ಚಾಪೆಯನ್ನೆತ್ತಿ ಮಕ್ಕಳ ಬಳಿಯಲ್ಲೇ
ಸುರುಳಿ ಬಿಡಿಸಿದ.
ಅಷ್ಟರಲ್ಲಿ ರಂಗಮ್ಮ ಬರುತ್ತಿದ್ದ ಸದ್ದಾಯಿತು. ಅವರ ದೃಷ್ಟಿಗೆ ಬೀಳುವುದಕ್ಕೆ
ಮುಂಚೆಯೇ ದೀಪ ಆರಿಸಬೇಕೆಂದು ಆತ ಮುಂದಾದ. ಸಾಧ್ಯವಾಗಲಿಲ್ಲ. ರಂಗಮ್ಮ
ಆಗಲೇ ಬಾಗಿಲು ಸಮೀಪಿಸಿದ್ದರು. ಅಲ್ಲಿಗೇ ಬಂದಿದ್ದರು ಅವರು.
ನಾರಾಯಣಿಯ ಗಂಡ ವಠಾರದೊಳಕ್ಕೆ ಬಂದುದನ್ನು ರಂಗಮ್ಮ ಗಮನಿಸಿದ್ದರು.
ಹುಡುಗ ಹೇಳಿದೊಡನೆ ತಮ್ಮನ್ನು ಕಾಣಲು ಆತ ಬರಬಹುದು ಎಂದು ಕಾದು ಕುಳಿ
ತರು. ಬರಲಿಲ್ಲ. ಹುಡುಗ ಹೇಳಲು ಮರೆತನೇನೋ ಎಂದುಕೊಂಡರು. ಹೇಳಿದರೂ
ಬರದೇ ಇರಬಹುದು-ಎಂಬ ಶಂಕೆ ತಲೆದೋರಿ, ಬಲವಾಯಿತು. ಆತ ತಪ್ಪಿಸಿಕೊಳ್ಳಲು
ಯತ್ನಿಸುತ್ತಿದ್ದಾನೆಂದು ರಂಗಮ್ಮ ಸಿಟ್ಟಾದರು. ತಾವೇ ಹೋಗಿ ನೋಡುವುದು
ಮೇಲೆಂದು ಎದ್ದರು.
ಬಾಗಿಲ ಬಳಿ ನಿಂತು, ಮಕ್ಕಳು ಆಗಲೆ ಮಲಗಿದ್ದುವೆಂಬುದನ್ನು ಮನಗಂಡಾಗ,
ತಮ್ಮ ಸಂದೇಶ ಆತನಿಗೆ ತಲುಪಿಯೇ ಇಲ್ಲವೆಂಬುದು ಸ್ಪಷ್ಟವಾದಗ, ರಂಗಮ್ಮನ ಸಿಟ್ಟು
ಅರ್ಧ ಇಳಿಯಿತು. ಆ ಕ್ಷಣವೇ ಕನಿಕರದ ಹೊನಲಿನಲ್ಲಿ ಕರ್ತವ್ಯ ತೇಲಿ ಹೋದೀತೆಂದು
ಹೆದರಿ, ಅವರು ಬಿಗಿಯಾದರು.
ಆದರೂ ಒರಟಾಗಿ ವರ್ತಿಸುವುದು ಅವರಿಂದಾಗಲಿಲ್ಲ. ಗಲಾಟೆ ಇಲ್ಲದೆ ಒಮ್ಮೆ
ಮನೆ ಖಾಲಿಯಾದರೆ ಸಾಕಪ್ಪ- ಎಂದುಕೊಂಡರು. ಮಾತುಗಳು ನಯವಾಗಿಯೇ
ಬಂದುವು.
"ಊಟ ಆಯ್ತೆ?"
"ಆಯ್ತು ರಂಗಮ್ನೋರೆ."
ಇಲ್ಲಿ ನಿಜದ ಬದಲು ಸುಳ್ಳು ಸಹ್ಯವಾಗಿತ್ತು.
ಆತನ ಉತ್ತರ ನಿಜವೋ ಅಲ್ಲವೋ ಎಂದು ಪರೀಕ್ಷಿಸುವ ಆಕಾಂಕ್ಷೆಯೇನೂ
ರಂಗಮ್ಮನಿಗಿರಲಿಲ್ಲ.
"ಸ್ವಲ್ಪ ಮನೇ ಕಡೆ ಬಾಪ್ಪಾ."
"ಬಂದೆ, ನಡೀರಿ."
ಆತ ಹಾಗೆಯೇ ಹೊರಡಲು ಸಿದ್ಧನಾದ.
"ದೀಪ ಆರಿಸ್ಬಿಡು" ಎಂದು ಹೇಳಿ ರಂಗಮ್ಮ ತಮ್ಮ ಮನೆಯತ್ತ ಹೆಜ್ಜೆ ಇಟ್ಟರು.
ನಾರಾಯಣಿಯ ಗಂಡ ದೀಪ ಆರಿಸಿ, ಮೌನವಾಗಿ ಅವರನ್ನು ಹಿಂಬಾಲಿಸಿದ
....ಗೋಡೆಗೊರಗಿ ನೆಲದಮೇಲೆ ಕುಳಿತ ನಾರಾಯಣಿಯ ಗಂಡನನ್ನು ರಂಗಮ್ಮ
ದಿಟ್ಟಿಸಿದರು.
"ಕೆಲಸ ಸಿಗಲಿಲ್ಲ?..."
"ಹುಡುಕ್ತಾ ಇದೀನಿ ರಂಗಮ್ನೋರೆ."
"ಇದೇನೂ ಮೊದಲ್ನೇ ಸಲ ಅಲ್ವಲ್ಲಾ? ಹಿಂದೆ ಕೆಲಸ ಸಿಕ್ದಾಗ್ಲೆಲ್ಲ ಕಳ
ಕೊಂಡ್ಬಿಟ್ಟೆ."
"ಏನು ಮಾಡ್ಲಿ ಹೇಳಿ? ನನ್ನ ಹಣೇ ಬರಹ."
ರಂಗಮ್ಮ ಮಾತ್ರ ಹಾಗೆಂದು ಒಪ್ಪಲು ಸಿದ್ಧರಿರಲಿಲ್ಲ. ಈ ಗಂಡಸಿನ ಯೋಗ್ಯ
ತೆಯೇ ಅಷ್ಟು ಎಂಬುದು ಅವರಿಗೆ ಖಚಿತವಾಗಿತ್ತು. ಅವರ ಗಂಟಲಿನಿಂದ ಅಸ್ಪಷ್ಟವಾದ
ಸ್ವರಗಳು ಹೊರಬಿದ್ದುವು:
"ಮೂರು ತಿಂಗಳ ಬಾಡಿಗೆ ನಿಂತು ಹೋಗಿದೆ."
"ಕೆಲಸ ಸಿಕ್ಕಿದ ತಕ್ಷಣ ಕೊಟ್ಬಿಡ್ತೀನಿ ರಂಗಮ್ನೋರೆ. "
ಹಾಗೆ ಹೇಳಿದ್ದ ಮಹಾನುಭಾವರನ್ನು ಹಿಂದೆಯೂ ಕಂಡಿದ್ದರು ರಂಗಮ್ಮ. ಆ
ಮಾತಿಗೆ ಬೆಲೆ ಎಷ್ಟೆಂಬುದೂ ಅವರಿಗೆ ಗೊತ್ತಿತ್ತು.
" ಹುಡುಗರ ಹಾಗೆ ಆಡ್ತೀಯಪ್ಪಾ ನೀನು," ಎಂದು ಸ್ವರವನ್ನು ಸ್ವಲ್ಪ ತೀಕ್ಷ್ಣ
ಗೊಳಿಸಿ ರಂಗಮ್ಮ ಹೇಳಿದರು.
ನಾರಾಯಣಿಯ ಗಂಡ ತಲೆ ತಗ್ಗಿಸಿದ. ಈತನಿನ್ನು ಅಳುವುದಕ್ಕೆ ಆರಂಭಿಸ
ಬಹುದೆಂದು ರಂಗಮ್ಮನಿಗೆ ತೋರಿತು. ಮೌನವಾಗಿ ಅವರು ಒಂದು ಕ್ಷಣ ಕಳೆದರು.
ಸದ್ಯಃ ಆತ ಅಳಲಿಲ್ಲ. ಬೇರೆ ಬಿಡಾರ ಇನ್ನೆಲ್ಲಿ ಹುಡುಕಬೇಕು ಎಂಬ ಯೋಚನೆಯಲ್ಲಿ
ಅವನು ಮುಳುಗಿದ್ದ.
ಗಂಭೀರ ಧ್ವನಿಯಲ್ಲಿ ರಂಗಮ್ಮನೆಂದರು:
"ನನಗೆ ಗೊತ್ತಿದೆಯಪ್ಪಾ. ಈ ಮೂರು ತಿಂಗಳ ಬಾಡಿಗೆ ಐವತ್ತೊಂದು
ರೂಪಾಯಿ ಕೊಡೋದು ನಿನ್ನಿಂದಾಗೋಲ್ಲ. ಮುಂದೆಯೂ ಪ್ರತಿ ತಿಂಗಳು ಹದಿನೇಳು
ರೂಪಾಯಿ ಕೊಡೋದೂ ನಿನ್ನಿಂದಾಗೋಲ್ಲ."
ಪ್ರತಿಕ್ರಿಯೆ ಏನು ಎಂದು ಆತನ ಮುಖಭಾವದಿಂದ ತಿಳಿಯಲು ರಂಗಮ್ಮ
ಪ್ರಯತ್ನಿಸಿದರು. ಆದರೆ ಆತನ ತಲೆಗೂದಲಿನ ನೆರಳು ಮುಖದ ಮೇಲೆ ಬಿದ್ದು,
ಏನೂ ಕಾಣಿಸಲಿಲ್ಲ.
"ನೋಡಪ್ಪಾ, ನಾನು ತೀರ್ಮಾನ ಮಾಡ್ಬಿಟ್ಟಿದ್ದೀನಿ."
ಈಗಲೂ ಆತ ತಲೆ ಎತ್ತಲಿಲ್ಲ. ಆ ತೀರ್ಮಾನ ಏನೆಂದು ತಿಳಿಯುವ ಕುತೂ
ಹಲವೂ ಅವನಿಗಿದ್ದಂತೆ ತೋರಲಿಲ್ಲ.
"ಬಾಕಿಯಾಗಿರೋ ಐವತ್ತೊಂದು ರೂಪಾಯಿ ಅನುಕೂಲವಾದಾಗ ಕೊಡು.
ನಾಳೆಯ ದಿವಸ ಮನೆ ಖಾಲಿ ಮಾಡು."
ಈಗ ಆತ ತಲೆ ಎತ್ತಿದ. ಅಸಹಾಯಕತೆ ಮಂಜಿನ ಪರದೆಯಾಗಿ ಕಣ್ಣ ಬೊಂಬೆ
ಗಳನ್ನು ಮುಚ್ಚಿಕೊಂಡಿತ್ತು. ಆ ಮನುಷ್ಯನಿಗೆ ತುಟಿಗಳೇ ಇಲ್ಲವೆನೋ ಎಂಬಂತೆ
ಮುಖ ಮುದುಡಿತ್ತು. ಆತ ಮೂಕನಾಗಿಯೇ ಇದ್ದ.
ಇದೊಳ್ಳೇ ಪ್ರಾರಬ್ಧ ಎಂದುಕೊಂಡರು ರಂಗಮ್ಮ.
ಆದರೆ ಅಷ್ಟರಲ್ಲೇ, ಅಸಹನೀಯವಾಗಿದ್ದ ಮನವನ್ನು ಮುರಿದು ಗಂಟಲು
ಸರಿಪಡಿಸುತ್ತ ಆತ ಮಾತನಾಡಿದ:
"ಇನ್ನೊಂದು ತೊಂಗಳಾದರೂ ಪುರಸೊತ್ತು ಕೊಡಿ ರಂಗಮ್ನೋರೆ."
ಅದೀಗ ನಿಷ್ಠುರವಾಗಿ ಮಾತನಾಡಬೇಕಾದ ಸಂದರ್ಭ.
" ಇಲ್ಲ " ಎಂದರು ರಂಗಮ್ಮ. ಸ್ವಲ್ಪ ತಡೆದು ಅವರು ಮುಂದುವರಿದರು:
"ಸಾಧ್ಯವೇ ಇಲ್ಲ, ಮನೆ ಖಾಲಿ ಮಾಡ್ಲೇಬೇಕು."4
ರೂಪು ತಳೆಯುತ್ತಿದ್ದ ಮಾತು ಆತನ ಗಂಟಲಲ್ಲೇ ಇಂಗಿ ಹೋಯಿತು.
ಸ್ವರವೇರಿಸಿ ರಂಗಮ್ಮ ನುಡಿದರು:
"ನೋಡಪ್ಪಾ, ಇನ್ನೂ ಒಂದು ದಿವಸ ಜಾಸ್ತಿ ಅವಕಾಶ ಕೊಡ್ತೀನಿ. ಶನಿವಾರ
ಸಾಯಂಕಾಲ ಹೊತ್ತಿಗೆ ಮನೆ ಖಾಲಿ ಮಾಡೇ ತೀರ್ಬೇಕು. ಭಾನುವಾರ ಮನೆ
ನೋಡೋಕೆ ಬರ್ತಾರೆ."
ಯಾರಾದರೂ ಮನೆ ನೋಡಲು ಬರಬಹುದು ಎಂಬ ನಿರೀಕ್ಷೆಯನ್ನು 'ಬರ್ತಾರೆ'
ಎಂದು ರಂಗಮ್ಮ ಮಾರ್ಪಾಡಿಸಿದ್ದರು. ಹಾಗೆ ಹೇಳುವುದು ಅಗತ್ಯವಾಗಿತ್ತು.
ಆ ನಿರಾಶೆಯಲ್ಲೂ ಆತ ಏನೋ ಹೇಳಲೆತ್ನಿಸಿದ:
"ಒಂದು ತಿಂಗಳು__"
"ಇಲ್ಲವಪ್ಪಾ, ಇಲ್ಲ. ನನ್ನನ್ನ ರೇಗಿಸ್ಬೇಡ. ನಾಲ್ಕು ಜನರ ಕೈಲಿ ಕೆಟ್ಟೋಳು
ಅನ್ನಿಸ್ಬೇಡ."
"ಇಲ್ಲ ರಂಗಮ್ನೋರೆ. ಮುಖ್ಯ ನನ್ನ ಹಣೇಲಿ ಹೀಗೆ ಬರೆದಿತ್ತು."
ಆತ ಕಣ್ಣುಗಳನ್ನು ಹಿಂಡಿ ಒಂದೊಂದು ಹನಿ ಕಂಬನಿ ಉದುರಿಸಲು ಯತ್ನಿಸಿದ.
ಆದರೆ ಅವು ಬತ್ತಿ ಹೋಗಿದ್ದುವು.
ಹೆಣ್ಣಿಗಿಂತಲೂ ಕಡೆಯಾಗಿ ವರ್ತಿಸುತ್ತಿದ್ದ ಆತನನ್ನು ಕಂಡು ರಂಗಮ್ಮನ ಸೈರಣೆ
ತಪ್ಪಿತು. ಚೆನ್ನಾಗಿ ಬಯ್ಯಬೇಕೆನಿಸಿತು. ವಠಾರದಲ್ಲೇ ಮುಂದೆಯೂ ಆತ ಇರುವ
ಪ್ರಮೇಯವಿದ್ದರೆ ಹೇಳುತ್ತಲೂ ಇದ್ದರೇನೋ ಆದರೆ 'ಹಾಳಾಗಿ ಹೋಗಲಿ'
ಎಂದು ಈಗ ಅವರು ಸುಮ್ಮನಾದರು.
ನಾರಾಯಣಿಯ ಗಂಡನೆದ್ದು, ಚಾಪೆಯ ಮೇಲೆ ನಿದ್ದೆ ಬಾರದೆ ಹೊರಳಾಡುವ ಸುಖಕ್ಕಾಗಿ ಮಕ್ಕಳೆಡೆಗೆ ನಡೆದ.
ಮರುದಿನವೂ ಆತ ಮಕ್ಕಳಿಗೆ ಗಂಜಿ ಬೇಯಿಸಿಕೊಟ್ಟು ಹೊರ ಹೋದ.
ರಂಗಮ್ಮ ವಠಾರಕ್ಕೆಲ್ಲಾ ತಿಳಿಯುವಂತೆ ಡಂಗುರ ಸಾರಿದರು:
"ನಾರಾಯಣಿಯ ಗಂಡ ಮನೆ ಖಾಲಿ ಮಾಡ್ತಾನೆ."
"ಎಲ್ಲಿಗೆ ಹೋಗ್ತಾರಂತೆ? ಕೆಲಸ ಸಿಕ್ತೇನು?"
"ಏನೋಪ್ಪ. ಅಂತೂ ಶನಿವಾರ ಸಾಯಂಕಾಲದೊಳಗೆ ಮನೆ ಖಾಲಿ
ಮಾಡ್ತಾನೆ."
ನಾರಾಯಣಿ ಬಿಟ್ಟುಹೋಗಿದ್ದ ಮಕ್ಕಳಲ್ಲಿ ಕಿರಿಯದು ಎದೆ ಹಾಲಿಲ್ಲದೆ ಬಿರು
ಗಣ್ಣು ಬಿಡುತ್ತಿತ್ತು. ಅದನ್ನು ಗಟ್ಟಿಯಾಗಿ ತಬ್ಬಿಕೊಂಡು ಕಮಲಮ್ಮ ಬಾಡಿದ
ಮುಖದಿಂದ ಆ ಸುದ್ದಿ ಕೇಳಿದಳು.
ಕೇಳಿದವರು ನಂಬಲಿ ನಂಬದಿರಲಿ, ರಂಗಮ್ಮ ಹೇಳುವ ವೈಖರಿ ಅಂಥದು.
ಒಂದು ಸಂಸಾರವನ್ನು ವಠಾರದಿಂದ ರಂಗಮ್ಮ ಹೊರಹಾಕಿದಳು ಎಂಬ ಮಾತು
ಪ್ರಸಾರವಾಗುವ ಇಷ್ಟ ಅವರಿಗಿರಲಿಲ್ಲ.

ಕಡಮೆ ಬಾಡಿಗೆಗೆ ಮನೆ ಹುಡುಕಿ ಹುಡುಕಿ ಸಿಗದೆ ಇದ್ದ ಹಸ್ತಸಾಮುದ್ರಿಕದ
ಪದ್ಮನಾಭನ ಹೆಂಡತಿಯೆಂದಳು:
"ಕಮ್ಮಿ ಬಾಡಿಗೆಗೆ ಅವರಿಗೆ ಬೇರೆ ಮನೆ ಸಿಗ್ತೋ ಏನೋ."

ರಂಗಮ್ಮ ಒಣ ನಗೆ ನಕ್ಕರು.ಮಾತನಾಡಲಿಲ್ಲ."ಮೂರು ತಿಂಗಳ ಬಾಡಿಗೆ
ಬಿಟ್ಟುಕೊಟ್ಟಿದ್ದೀನಿ" ಎಂದು ವಠಾರಕ್ಕೆಲ್ಲ ಸಾರಿ ಹೇಳುವ ಅಪೇಕ್ಷೆ ಅವರಿಗಾಯಿತು.
ಆದರೆ ಅದನ್ನು ಅವರು ಅದುಮಿ ಹಿಡಿದರು. ಹಾಗೆ ಇತರರೆದುರು ಜಾಹೀರು ಮಾಡು
ವುದರಿಂದ, ಆಗುವ ಲಾಭಕ್ಕಿಂತ ನಷ್ಟವೇ ಹೆಚ್ಚೆಂಬುದು ಅವರಿಗೆ ಸ್ಪಷ್ಟವಾಗದಿರಲಿಲ್ಲ.
ಆದರೆ ತಿಳಿದವರಿಗೆ ತಿಳಿದೇ ಇತ್ತು.
ಮೀನಾಕ್ಷಮ್ಮನ ಮಗ ತನ್ನ ತಾಯಿಯ ಎದುರಿನಲ್ಲೇ ನಾರಾಯಣಿಯ ಮಗ
ನನ್ನು ಕೇಳಿದ:
"ನೀವೆಲ್ಲ ಹೊರಟ್ಹೋಗ್ತೀರೇನೋ ಪುಟ್ಟೂ?"
"ಏನೋ. ಅಪ್ಪ ಹೇಳೇ ಇಲ್ಲ."
"ನಮ್ಮ ಸ್ಕೂಲಿಗೆ ಇನ್ನು ಬರಲ್ವೇನು ಹಾಗಾದ್ರೆ?"
ಶಾಲೆಯ ಪ್ರಸ್ತಾಪದಿಂದ ಪುಟ್ಟನ ಕಣ್ಣುಗಳು ಹನಿಗೂಡಿದುವು.
ಮಗನಿಗೆಂದು ತಿಂಡಿ ಮಾಡುತ್ತಿದ್ದ ಮೀನಾಕ್ಷಮ್ಮ ಹೆಚ್ಚಾಗಿಯೇ ತಯಾರಿಸಿ
ನಾರಾಯಣಿಯ ಮಕ್ಕಳಿಗೂ ಕೊಟ್ಟಳು.
ರಾತ್ರೆ ತಂದೆ ಬರುವವರೆಗೂ ಪುಟ್ಟ ನಿದ್ದೆ ಹೋಗಲಿಲ್ಲ. ತಂದೆಯನ್ನು ಕಾಣು
ತ್ತಲೇ ಆತ ಕೇಳಿದ:
"ಅಪ್ಪ, ನಾವೆಲ್ಲಿಗೆ ಹೋಗ್ತೀವಪ್ಪ?"
"ಸುಡುಗಾಡಿಗೆ!"
ಸೋತು ಬಂದಿದ್ದ ತಂದೆಯ ಧ್ವನಿ ಕರ್ಕಶವಾಗಿತ್ತು. ಪುಟ್ಟ ಮತ್ತೊಂದು
ಪ್ರಶ್ನೆ ಕೇಳದೆ, ಮಾತನಾಡದೆ, ಉಳಿದ ಮೂವರ ಜತೆಯಲ್ಲಿ ತಾನೂ ಮಲಗಿ ನಿದ್ದೆ
ಹೋದ.
ಆ ತಂದೆಗೆ ರಾತ್ರೆ ಸರಿಯಾಗಿ ನಿದ್ದೆ ಬರಲಿಲ್ಲ. ಆ ರಾತ್ರೆ ಕಳೆದು ಬರುವ
ದಿನವೇ ಶನಿವಾರ. "...ಶನಿವಾರ ಸಾಯಂಕಾಲದ ಹೊತ್ತಗೆ ಮನೆ ಖಾಲಿ ಮಾಡೇ
ತೀರ್ಬೇಕು..." ನಾರಾಯಣಿ ಸತ್ತಳೆಂದು ಸಾರುತ್ತಿದ್ದ ಹಣತೆ ಆರಿ ಹೋಗಿತ್ತಲ್ಲ?
ಅದನ್ನು ಮತ್ತೆ ಬೆಳಗುವ ಗೋಜಿಗೆ ಆತ ಹೋಗಲಿಲ್ಲ. ಆ ಯಾವ ಕಟ್ಟು ಕಟ್ಟಳೆಗೂ
ಆಗ ಅರ್ಥವಿದ್ದಂತೆ ಅವನಿಗೆ ತೋರಲಿಲ್ಲ....ಬಗೆಹರಿಯದ ಯೋಚನೆಗಳ ಸಹವಾಸ
ದಲ್ಲಿ ಆ ಇರುಳು ನಿಧಾನವಾಗಿ ಕರಗಿತು.
ಕಿರ್ರ್ ಎಂದು ರಾಮಚಂದ್ರಯ್ಯನ ಮನೆಬಾಗಿಲ ಸದ್ದು. ಅನಂತರ ಅದರೆದುರು
ಮನೆ. ಅಷ್ಟರಲ್ಲಿ ನಾರಾಯಣನ ಗಡಿಯಾರದ ಅಲಾರಂ...
ನಾರಾಯಣಿಯ ಗಂಡ ಬೇಗನೆದ್ದ. ದೀಪ ಹಚ್ಚಲಿಲ್ಲ. ಕತ್ತಲೆಯಲ್ಲೆ ಪಾತ್ರೆ
ಗಳನ್ನು ತಡವಿ ನೋಡಿ ಮುಖದ ಮೇಲಿಷ್ಟು ನೀರು ಹನಿಸಿದ. ಮಗನನ್ನು ಮೈ
ಮುಟ್ಟಿ ಎಚ್ಚರಿಸಿದ.
"ಲೋ...ಪುಟ್ಟೂ...ಪುಟ್ಟೂ...ಲೋ..."
ಗಡಬಡಿಸಿ ಎದ್ದು ಹುಡುಗ ಹೆದರಿಕೊಂಡೇ ಕೇಳಿದ:
"ಏನಾಯ್ತಪ್ಪಾ, ಅಪ್ಪಾ...."
"ಏನೂ ಇಲ್ಲ ಕಣೋ. ನಾನು ಒಂದಿಷ್ಟು ಹೊರಗೆ ಹೋಗ್ಬಿಟ್ಟು ಬರ್ತೀನಿ...
ಇವತ್ತು ನೀನೇ ಗಂಜಿ ಬೇಯಿಸ್ತೀಯಾ?"
"ಹೂಂ. ಹೂಂ...ಎಷ್ಟೊತ್ತಿಗೆ ಬರ್ತಿಯಪ್ಪಾ?"
"ಮಧ್ಯಾಹ್ನವೇ ಬಂದ್ಬಿಡ್ತೀನಿ ಕಣೋ....ಇನ್ನು ಮಲಕ್ಕೋ."
"ಹೂಂ..."
ಯಾರಿಗೂ ತಿಳಿಯದಂತೆ ಹೊರಹೋಗಬೇಕೆಂದು ಆತ ಬಯಸಿದ್ದರೂ ಕಮ
ಲಮ್ಮ ತನ್ನ ಮನೆಯ ಬಾಗಿಲಲ್ಲೆ ನಿಂತಿದ್ದಳು. ತಂದೆ ಮಗನ ಗುಸುಗುಸು ಮಾತನ್ನು
ಕೇಳಿದ ಮೇಲೆ ಆಕೆ ಸುಮ್ಮನಿರುವುದು ಸಾಧ್ಯವಿರಲಿಲ್ಲ.
"ಏನೂ ಬೇಗ್ನೆ ಹೊರಟ್ಬಿಟ್ಟಿದೀರಲ್ಲಾ?"
"ಹೂಂ ಕಣ್ರೀ....ಬೇರೆ ಬಿಡಾರ ಗೊತ್ಮಾಡ್ಬೇಕು."
_ಗದ್ಗದಿತ ಕಂಠ.
"ಆಗಲಿ ಹೋಗ್ಬಿಟ್ಟು ಬನ್ನಿ."
"ಮಕ್ಕಳ್ನ ಒಂದಿಷ್ಟು_"
" ನೋಡ್ಕೋತೀನಿ. ಹೋಗಿ. "
ಬೆಳಗಾಯಿತು. ರಂಗಮ್ಮ ನಡೆಗೋಲಿನ ಸದ್ದು ಮಾಡುತ್ತ ಒಂದು ಸುತ್ತು
ಬಂದು ಹೋದರು.
ಪುಟ್ಟ ಒಲೆ ಹಚ್ಚಲಿಲ್ಲ. ಕಮಲಮ್ಮನೇ ಬೇಯಿಸಿ ಹಾಕಿದಳು. ಕಾಮಾಕ್ಷಿ
ಎಳೆಯ ಮಗುವನ್ನೆತ್ತಿಕೊಂಡು ಆಡಿಸಿದಳು.
ಈ ದಿನ ಮನೆ ಖಾಲಿಯಾಗುವುದೋ ಇಲ್ಲವೋ ಎಂಬ ಸಂದೇಹ ರಂಗಮ್ಮ
ನನ್ನು ಬಾಧಿಸುತ್ತಲೇ ಇತ್ತು. ಅವರು ದಿನವೆಲ್ಲ ಸಿಡಿದುಕೊಂಡೇ ಮಾತನಾಡಿದರು.
ಗಟ್ಟಿಯಾಗಿಯೇ ಗೊಣಗಿದರು.
ನಾಲ್ಕು ಘಂಟೆಗೆ ನಾರಾಯಣಿಯ ಗಂಡ ಬಂದ. ಎರಡು ಗೋಣಿ ಚೀಲಗಳಲ್ಲಿ
ಮನೆಯ ಎಲ್ಲಾ ಸಾಮಾನುಗಳನ್ನು ತುರುಕಿದ. ಆಗಲೆ ಮೂಲೆ ಸೇರಿದ್ದ ಹಣತೆ
ಯನ್ನೂ ಬಿಡಲಿಲ್ಲ.
ಅವರನ್ನು ಕರೆದೊಯ್ಯಲು, ಕುಂಟುತ್ತಿದ್ದ ಬಡಕಲು ಕುದುರೆಯ ಹರಕು
ಜಟಕಾ ಗಾಡಿಯನ್ನು ‌ತಂದುದಾಯಿತು.
ಮೀನಾಕ್ಷಮ್ಮನ ಮಗ ಕೊನೆಯ ಘಳಿಗೆವರೆಗೂ ಪುಟ್ಟನನ್ನು ಬಿಡಲಿಲ್ಲ.
ಗೆಳೆತನದ ನೆನಪಿಗೆಂದು ನೀಲಿ ಕೆಂಪು ಬಣ್ಣದ ತನ್ನ ಒಂದು ಪೆನ್ಸಿಲನ್ನು ಆತ ಪುಟ್ಟನಿಗೆ
ಕೊಟ್ಟ.
"ಮರೀಬೇಡ ಪುಟ್ಟೂ."
"ಇಲ್ಲ. ಮರೆಯೋಲ್ಲ."
"ಪ್ರತಿ ಭಾನುವಾರವೂ ಆಟ ಆಡೋಕೆ ಬರ್ಬೇಕು."
" ಹೂಂ. ಬರ್ತೀನಿ."
ಆದರೆ ಹೊಸ ಬಿಡಾರ ಎಲ್ಲಿ ಎಷ್ಟು ದೂರ ಎಂಬುದು ಇಬ್ಬರಿಗೂ ಗೊತ್ತಿರಲಿಲ್ಲ.
ತೆರವಾದ ಮನೆಯ ಒಳಹೊಕ್ಕು ದೀಪದ ಬಲ್ಬನ್ನು ನೋಡಿ ಬಂದು, ರಂಗಮ್ಮ
ನಾರಾಯಣಿಯ ಗಂಡನನ್ನು ಕೇಳಿದರು:
"ಮನೆ ಎಲ್ಮಾಡಿದೀಯಪ್ಪ?"
"ಚಿಕ್ಕಮಾವಳ್ಳೀಲಿ ರಂಗಮ್ನೋರೆ."
"ಎಷ್ಟು ಬಾಡಿಗೆ?"
"ಸದ್ಯ ಒಬ್ಬ ಸ್ನೇಹಿತನ ಮನೇಲಿ ಹೋಗಿರ್ತೀನಿ."
"ಓ...ಹಾಗೋ..."
ಸಂಜೆ ಬೇಗನೆ ಆ ಪ್ರದೇಶ ಬಿಡಬೇಕೆಂದು ಆತ ಬಯಸಿದ್ದ. ವಠಾರಕ್ಕೆ ಹಿಂತಿ
ರುಗುವ ಗಂಡಸರಿಗೆಲ್ಲ ಮುಖ ತೋರಿಸುವ ಇಚ್ಛೆ ಆತನಿಗಿರಲಿಲ್ಲ.
ಮನೆಯಲ್ಲೇ ಇದ್ದ ಗುಂಡಣ್ಣ ಸಾಮಾನಿನ ಚೀಲಗಳನ್ನು ಹೊರ ಅಂಗಳಕ್ಕೆ
ತಂದು ಸಾಬಿಯ ಕೈಗೊಪ್ಪಿಸಲು ನೆರವಾದ.
ವಠಾರದ ನಿವಾಸಿಗಳಲ್ಲಿ ಹೆಚ್ಚಿನ ಹೆಂಗಳೆಯರು ಅಂಗಳಕ್ಕೆ ಬಂದು ನಿಂತರು.
ಮನೆಯೊಳಗಿದ್ದ ಕವಿ ಜಯರಾಮು ಮಹಡಿಯ ಮೇಲಿನ ಕಿಟಕಿಯಿಂದ ಕೆಳಗಿಣಿಕಿ
ನೋಡಿದ.
ಏಳು ವರ್ಷಗಳ ಹಿಂದೆ ಸೊಗಸಾದೊಂದು ಜಟಕಾ ಗಾಡಿ ಆ ವಠಾರಕ್ಕೆ
ಬಂದಿತ್ತು. ಯೌವನ ಸೌಂದರ್ಯ ಆರೋಗ್ಯಗಳ ಪ್ರತಿಮೂರ್ತಿಯಾಗಿ ಚೊಚ್ಚಲ ಮಗು
ಪುಟ್ಟನೊಡನೆ ನಾರಾಯಣಿ ಆ ಗಾಡಿಯಿಂದ ಕೆಳಕ್ಕಿಳಿದಿದ್ದಳು. ಆ ಬಳಿಕ ಆಕೆಯ
ಗಂಡ. ಪುಟ್ಟನ ತಂದೆ ಇಷ್ಟು ವರ್ಷಗಳ ಕಾಲವೂ ವಠಾರದ ಪಾಲಿಗೆ 'ನಾರಾಯಣಿಯ
ಗಂಡ'ನಾಗಿಯೇ ಉಳಿದಿದ್ದ.
ಕಮಲಮ್ಮ ಸೆರಗಿನಿಂದ ಕಣ್ಣೊತ್ತಿಕೊಳ್ಳುತ್ತ, ಕಾಮಾಕ್ಷಿಯ ಕಂಕುಳಿನಿಂದ
ನಾರಾಯಣಿಯ ಹಸುಗೂಸನ್ನು ಪಡೆದು ಪುಟ್ಟನಿಗೆ ಕೊಟ್ಟಳು. ಜೋಲು ಮೋರೆ
ಹಾಕಿಕೊಂಡಿದ್ದ ಪುಟ್ಟ ಆ ಮಗುವನ್ನು ತನ್ನ ಕಂಕುಳಿಗೇರಿಸಿದ.
"ಪೋಲಿ ಅಲೀಬೇಡ ಪುಟ್ಟೂ. ನಿಮ್ಮಪ್ಪನಿಗೆ ಕೆಲಸ ಸಿಕ್ಕಿದ ತಕ್ಷಣ ಸ್ಕೂಲಿಗೆ
ಹೋಗು...."
___ಎಂದು ರಂಗಮ್ಮ ಆ ಹುಡುಗನನ್ನು ಉದ್ದೇಶಿಸಿ ಹಿತದ ಮಾತನ್ನಾಡಿದರು.
'ಹೂಂ' ಎನ್ನಲು ಯತ್ನಿಸಿದ ಪುಟ್ಟು. ಆದರೆ ಆ ಸ್ವರ ರಂಗಮ್ಮನಿಗೆ
ಕೇಳಿಸಲಿಲ್ಲ.
ಹಾದಿಹೋಕರೂ ಒಂದು ಕ್ಷಣ ನಿಂತು ಬಿಡಾರ ಬದಲಾಯಿಸುತ್ತಿದ್ದ ಸಂಸಾರ
ವನ್ನು ನೋಡಿದರು. ಅಕ್ಕಪಕ್ಕದಿಂದಲೂ ಎದುರುಗಡೆಯಿಂದಲೂ ನಾಲ್ಕಾರು
ಹೆಂಗಸರು ಹೊರ ಬಂದು ನಿಂತರು. ಅಲ್ಲೇ ಬೀದಿಯ ಮೂಲೆಯಲ್ಲಿ ಅಂತಸ್ತಿನ
ಮನೆಯಿತ್ತು. ಅಂತಸ್ತಿನ ಮನೆಯವರ ದೊಡ್ಡ ಮಗಳು ಪಾಠ ಪ್ರವಚನಗಳಿಲ್ಲದ ಆ
ದಿನ ಕಾಲೇಜಿಗೆ ಹೋಗಿರಲಿಲ್ಲ. 'ಕಥೆಪುಸ್ತಕ' ಹಿಡಿದು 'ಬಾಲ್ಕನಿ'ಯಲ್ಲಿ ಕುಳಿತಿದ್ದ
ಆಕೆ ಎದ್ದು ನಿಂತು, ಮೊದಲು ಜಯರಾಮುವನ್ನೂ ಬಳಿಕ ಕೆಳಗಿನ ದೃಶ್ಯವನ್ನೂ
ನೋಡಿದಳು.
"ಬರ್ತೀವಿ ರಂಗಮ್ನೋರೆ," ಎಂದ ನಾರಾಯಣಿಯ ಗಂಡ.
"ಆಗಲಿ, ಹೋಗ್ಬನ್ನೀಪ್ಪಾ."
"ಆಮೇಲೆ ಬಂದು ನೋಡ್ತೀನಿ...."
"ಆಗಲಿ. ಆಗಲಿ."
ಎರಡು ಸಾರೆ ಬಾರುಕೋಲಿನ ರುಚಿ ತಾಗಿ ಕುಪ್ಪಳಿಸಿದ ಮೇಲೆ ಗಾಡಿಯನ್ನು
ಕುದುರೆ ಮುಂದಕ್ಕೆಳೆಯಿತು. ಗುಂಪು ಕೂಡಿದ ಬೀದಿ ಹುಡುಗರು ಕುದುರೆ ಕುಪ್ಪಳಿಸಿ
ದಾಗ 'ಹೊಹ್ಹೋ' ಎಂದು ನಕ್ಕರು.
ಜಟಕಾ ಸಾಗಿತು. ವಠಾರದವರೆಲ್ಲ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದರು.
'ಹೋಗ್ರೋ' ಎಂದು ಗುಂಡಣ್ಣ ಕೈ ಬೀಸಿದೊಡನೆ ಬೀದಿಯ ಹುಡುಗರು ಚೆದರಿ
ಹೋದರು.
ಕಮಲಮ್ಮನೊಬ್ಬಳೇ,ಬಹಳ ಹೊತ್ತು, ಗಾಡಿ ಹೋದ ದಿಕ್ಕನ್ನು ನೋಡುತ್ತ
ನಿಂತಳು.
ರಂಗಮ್ಮ ಒಳಗಿನಿಂದ ರಟ್ಟಿನ ತುಂಡೊಂದನ್ನು ತಂದು, ಬೀದಿಗೆ ಕಾಣಿಸುವ
ಹಾಗೆ, ಹೊರಗೋಡೆಯ ಮೇಲಿದ್ದ ಮೊಳೆಗೆ ತಗಲ ಹಾಕಿದರು. ಆ ರಟ್ಟಿನ ಮೇಲೆ
ಸುಣ್ಣದ ಕಡ್ಡಿಯಲ್ಲಿ ಬರೆದಿತ್ತು:
ಮನೆ ಬಾಡಿಗೆಗೆ ಇದೆ
ಕೆಳ ಭಾಗದ ಮೊದಲ ಮನೆಯ ಪೋಲೀಸನ ಹುಡುಗ ಅಕ್ಷರಕ್ಕೆ ಅಕ್ಷರ
ಜೋಡಿಸಿ ಅದನ್ನೋದಿದ. ಕೈತಟ್ಟಿ ಕುಣಿಯುತ್ತ ಅದನ್ನೇ ಆತ ಕಂಠಪಾಠ ಮಾಡಿದ:
" ಮನೆ ಬಾಡಿಗೆಗೆ ಇದೆ....
...ಮನೆ ಬಾಡಿಗೆಗೆ ಇದೆ."