ವಿಷಯಕ್ಕೆ ಹೋಗು

ರಂಗಮ್ಮನ ವಠಾರ/೪

ವಿಕಿಸೋರ್ಸ್ದಿಂದ

ಬಾಡಿಗೆಗೆ ಇದ್ದ ಮನೆಯನ್ನು ನೋಡಲು ಇಬ್ಬರು ಮೂವರು ಬಂದರು. ವರ್ಷ
ವರ್ಷಗಳಿಂದ ನುಡಿದು ನುರಿತಿದ್ದ ಸ್ವರದಲ್ಲಿ ರಂಗಮ್ಮ ಹೇಳಿದರು: "ಕೊಳಾಯಿ ಇದೆ,
ಲೈಟಿದೆ, ಬಚ್ಚಲಿದೆ, ಕಕ್ಕಸಿದೆ." ಸಮಾಧಾನದ ಛಾಯೆಯನ್ನು ಆ ಮುಖಗಳ ಮೇಲೆ
ಕಾಣದೆ ಇದ್ದಾಗ ರಂಗಮ್ಮ ಕೊನೆಯ ಯತ್ನ ಮಾಡಿದರು: "ಬಾಡಿಗೆ ಇಪ್ಪತ್ತೇ
ರೂಪಾಯಿ. ಬೇಕಾದರೆ ನಿಮಗಾಗಿ ಒಂದು ರೂಪಾಯಿ ಕಮ್ಮಿ ಮಾಡ್ತೀನಿ."
-"ನಾಳೆ ಬಂದು ಹೇಳ್ತೀನಿ."
-"ಮನೆಯವರನ್ನ ವಿಚಾರಿಸಿ ತಿಳಿಸ್ತೀನಿ."
-"ಹತ್ತೊಂಭತ್ತು ರೂಪಾಯಿಯೇ ಅಖೈರು ಹಾಗಾದರೆ?"
-"ಅಂತೂ ನಾನು ಬಂದು ಹೇಳೋವರೆಗೂ ದಯವಿಟ್ಟು ಯಾರಿಗೂ
ಕೊಡ್ಬೇಡಿ."
ಆದರೆ ಪರಿಣಾಮ ಒಂದೇ. ಒಮ್ಮೆ ನೋಡಿ ಹೋದವರು ಮತ್ತೆ ಬರಲಿಲ್ಲ.
ರಂಗಮ್ಮ ತಮ್ಮೊಳಗೇ ಗೊಣಗಿದರು. ನಾರಾಯಣಿಯ ಗಂಡನನ್ನು
ಹನ್ನೊಂದು ದಿನ ಕಳೆಯುವುದಕ್ಕೆ ಮುಂಚೆ ಕಳಿಸಬಾರದಿತ್ತೆಂಬ ಅಂಶ ಬೇರೆ ಅವರ
ಮನಸ್ಸನ್ನು ಆಗಾಗ್ಗೆ ಕುಟುಕುತ್ತಿತ್ತು. ಬಿಡಾರ ಖಾಲಿಯಾಗಿಯೇ ಉಳಿದಷ್ಟು ದಿನವೂ
ಹೆಚ್ಚುತ್ತಿತ್ತು ಆ ಯೋಚನೆ.
ಮನೆಯನ್ನು ಹತ್ತೊಂಭತ್ತು ರೂಪಾಯಿ ಬಾಡಿಗೆಗೆ ಕೊಡಬೇಕೆಂಬುದು ಅವರ
ನಿರ್ಧಾರವಾಗಿತ್ತು. ಹಾಗೆ ಬಾಡಿಗೆ ಹೆಚ್ಚಿಸುವುದು ಈ ಕೆಲವು ವರ್ಷಗಳಿಂದ ಅವರು
ಅನುಸರಿಸುತ್ತ ಬಂದಿದ್ದ ಪದ್ಧತಿ. ಮೊದಲಿನಲ್ಲಿ ಆ ಮನೆಗಳಿಗೆಲ್ಲ ಅವರಿಗೆ ದೊರೆಯು
ತ್ತಿದ್ದುದು ಐದೈದು ರೂಪಾಯಿ ಬಾಡಿಗೆ. ಆಗ ವಿದ್ಯುದ್ದೀಪವಿರಲಿಲ್ಲ. ಅದು ಬಂದ
ಮೇಲೆ ಬಾಡಿಗೆ ಏಳು ರೂಪಾಯಿಗೆ ಏರಿತು. ಯುದ್ಧದ ಸಮಯದಲ್ಲಿ ಬೇರೆ ಬೇರೆ
ಕಾರಣಗಳನ್ನು ಹೇಳಿ ಬಾಡಿಗೆ ಹನ್ನೆರಡೂವರೆ ಎಂದು ರಂಗಮ್ಮ ಗೊತ್ತು ಮಾಡಿದರು.
ಕೆಲವರು ಅಷ್ಟನ್ನು ತೆರಲಾಗದೆ ಹೊರಟು ಹೋಗಬೇಕಾಯಿತು. ಆಗ ಹೊಸತಾಗಿ
ಬಂದವರಿಂದ ಪಡೆದುದು ಹದಿನಾಲ್ಕು ರೂಪಾಯಿ. ಆನಂತರ ಹದಿನೈದು_ಹೀಗೆ.
ವಠಾರಕ್ಕೆ ಅತ್ಯಂತ ಹಳಬಾರದ ಸುಬ್ಬುಕೃಷ್ಣಯ್ಯನ ಸಂಸಾರ ಈಗಲೂ ಕೊಡುತ್ತಿ
ದ್ದುದು ಹನ್ನೆರಡೂವರೆ ರೂಪಾಯಿ ಬಾಡಿಗೆಯೇ. ಆದರೆ ಹೊಸಬರಾದ ನಾರಾಯಣ-
ಕಾಮಾಕ್ಷಿಯರ ಮನೆಬಾಡಿಗೆ ಹತ್ತೊಂಭತ್ತು. ಹಾಗೆ ತರತಮವೆಣಿಸುವುದರಲ್ಲಿ ತಪ್ಪಿಲ್ಲ
ವೆಂಬುದು ರಂಗಮ್ಮನ ದೃಡ ಅಭಿಪ್ರಾಯ. ಅವರ ದೃಷ್ಟಿಯಲ್ಲಿ ಮನೆಗೆ ತಕ್ಕಂತೆ
ಬಾಡಿಗೆಯಲ್ಲ. ಬಾಡಿಗೆ ಅವರವರ ಅನುಕೂಲತೆಗೆ ತಕ್ಕಂತೆ, ಸಂಪಾದನೆಗೆ ಅನುಗುಣ
ವಾಗಿ. ಇಂಥವರು ತಮ್ಮ ವಠಾರಕ್ಕೆ ಬಿಡಾರ ಬರುವರೆಂಬುದು ಖಚಿತವಾದಾಗ ಅವರ

ಪೂರ್ವೇತಿಹಾಸವನ್ನೂ ಈಗಿನ ಇರುವಿಕೆಯನ್ನೂ ಕೂಲಂಕಷವಾಗಿ ರಂಗಮ್ಮ ಕೇಳಿ
32
ಸೇತುವೆ

ತಿಳಿದುಕೊಳ್ಳದೆ ಇರುತ್ತಿರಲಿಲ್ಲ.
ರಂಗಮ್ಮನ ವಠಾರದಲ್ಲಿ ಯಾವ ಮನೆಯೂ ಹೆಚ್ಚು ದಿನ ಖಾಲಿಯಾಗಿ
ಬಿದ್ದುದೇ ಇಲ್ಲ. ಈ ಸಲ ಮಾತ್ರ ಕೊನೆಯ ಮನೆಗೆ ಯಾರೂ ಬರದೆ ಇದ್ದುದನ್ನು
ಕಂಡು ಅವರಿಗೆ ಕಸಿವಿಸಿಯಾಯಿತು.
ನಾರಾಯಣಿಯ ಸಂಸಾರದ ವಿಷಯ ವಠಾರದಲ್ಲಿ ಈಗ ಯಾರೂ ಮಾತನಾಡು
ತ್ತಿರಲಿಲ್ಲ. ಮೀನಾಕ್ಷಮ್ಮನ ಮಗನೇನೋ ಒಂದು ದಿವಸ ಪುಟ್ಟನಿಗಾಗಿ ಕಾದು ನೋಡಿದ.
"ಚಿಕ್ಕಮಾವಳ್ಳಿ ದೂರ ಕಣೋ. ಅಲ್ಲಿಂದ ಪುಟ್ಟ ಬರೋದಿಲ್ಲ," ಎಂದು
ಮೀನಾಕ್ಷಮ್ಮ ತಿಳಿಯ ಹೇಳಿದ ಮೇಲೆ, ಆ ಹುಡುಗ ಪುಟ್ಟನನ್ನು ಮರೆತು ವಠಾರದ
ಉಳಿದವರೆಡೆಯಿಂದ ತನ್ನ ಸ್ನೇಹಿತರನ್ನು ಆಯ್ದುಕೊಂಡ.
ತಮ್ಮೊಡನೆ ವಾಸ ಮಾಡಲು ಹೊಸತಾಗಿ ಬರುವ ಸಂಸಾರ ಯಾವುದೆಂದು ತಿಳಿ
ಯುವ ಕುತೂಹಲ ಮಾತ್ರ ವಠಾರದ ಎಲ್ಲರಿಗೂ ಇತ್ತು.
ದಿನ ಕಳೆಯುತಿತ್ತು. ಕೊನೆಯ ಮನೆಗೆ ಇನ್ನೂ ಮುಚ್ಚಿದ ಬಾಗಿಲೇ.
'ಅದೆಂಥ ಕೆಟ್ಟ ಘಳಿಗೇಲಿ ಬಿಟ್ಟಳೋ ಮಹಾರಾಯಿತಿ' ಎಂದು ತಮ್ಮೊಳಗೇ
ರಂಗಮ್ಮ ವಟಗುಟ್ಟದಿರಲಿಲ್ಲ.
ತಿಂಗಳ ಹದಿಮೂರನೆಯ ತಾರೀಖಿನ ದಿನ ಮನೆ ನೋಡಲು ಮತ್ತೆ ಒಬ್ಬಾತ
ಬಂದ.
ವಠಾರದೊಳಕ್ಕೆ ಅಪರಿಚಿತ ಕಾಲಿಟ್ಟುದನ್ನು ಮೊದಲು ನೋಡಿದ ಅವಿವಾಹಿತೆ
ಅಹಲ್ಯ ರಂಗಮ್ಮನಿಗೆ ವರದಿ ಮಾಡಿದಳು.
"ರಂಗಮ್ನೋರೆ, ಯಾರೋ ಬಂದಿದ್ದಾರೆ."
ಯಾರಾದರೂ ಬರುವುದು ಮನೆ ನೋಡುವುದಕ್ಕೆ ಎಂಬ ವಿಷಯದಲ್ಲಿ ರಂಗಮ್ಮ
ನಿಗೆ ಸಂದೇಹವಿರಲಿಲ್ಲ. ಅವರು ಬೆನ್ನು ಬಾಗಿ ನಡೆದು ಬಂದು, ಸೊಂಟದ ಮೇಲೆ ಕೈ
ಇರಿಸಿ ದೇಹವನ್ನೆತ್ತರಿಸಿ ಬಂದವನನ್ನು ನೋಡಿದರು.
ಎಲ್ಲ ಬಾಗಿಲುಗಳೆಡೆಯಿಂದಲೂ ಇಣಕಿ ನೋಡುತ್ತಿದ್ದ ಹೆಂಗಸರತ್ತ, ತನ್ನನ್ನೇ
ಹಿಂಬಾಲಿಸಿ ಬಂದ ಆರೇಳು ಸಣ್ಣ ಸಣ್ಣ ಹುಡುಗರತ್ತ, ದೃಷ್ಟಿ ಬೀರುತ್ತ ಆತ ಹೇಳಿದ:
"ಯಾವುದೋ ಮನೆ ಖಾಲಿ ಇದೆಯಂತೆ..."
"ಬನ್ನಿ," ಎಂದು ಸ್ವಾಗತಿಸಿ ರಂಗಮ್ಮ ನಡೆಗೋಲನ್ನೂರಿಕೊಂಡು ಓಣಿ
ಯುದ್ದಕ್ಕೂ ಮುಂದೆ ನಡೆದರು. ಆತ ಹಿಂಬಾಲಿಸಿದ..ಕಚ್ಚಿ ಪಂಚೆ: ಹಳೆಯದಾಗಿ
ಮಾಸಿದ್ದ ರೇಶಿಮೆಯ ಜುಬ್ಬ: ಎಣ್ಣೆ ಹಾಕಿ ಹಿಂದಕ್ಕೆ ಬಾಚಿದ್ದ, ಸ್ವಲ್ಪ ನೀಳವಾಗಿಯೇ
ಇದ್ದ ನಯವಾದ ಕ್ರಾಪು: ತೆಳ್ಳ್ಳಗೆ-ಎತ್ತರ:ಕೋಲು ಮುಖ...ವೀಳ್ಯ ಜಗದಿದ್ದ ತುಟಿ
ಗಳು ಕೆಂಪಗಿದ್ದವು.
ಆಹಲ್ಯಾ, ಕಾಮಾಕ್ಷಿಯ ಮನೆ ಬಾಗಿಲಿಗೆ ಜಿಗಿದು ಹೇಳಿದಳು"
"ನೋಡಿ ಬೇಕಾದರೆ, ಇವರು ಖಂಡಿತ ಒಪ್ಪೋದಿಲ್ಲ."
ಹೆಣ್ಣನ್ನು ನೋಡಲು ಗಂಡು ಬಂದ ಹಾಗೆ!

ರಂಗಮ್ಮನ ವಠಾರ
33

ರಂಗಮ್ಮ ಬಂದವನೊಡನೆ ಕೊನೆಯ ಮನೆಯ ಒಳಹೊಕ್ಕಿದ್ದನ್ನು ಕಂಡು,
ಅಹಲ್ಯಾ ಹೇಳಿದಳು:
“ಈಗ ರಂಗಮ್ಮ ಏನು ಹೇಳ್ತಾರೆ ಗೊತ್ತೇನು?"
"ಗೊತ್ತು, ಗೊತ್ತು."
"ಕೊಳಾಯಿ ಇದೆ, ಲೈಟಿದೆ, ಬಚ್ಚಲಿದೆ, ಕಕ್ಕಸಿದೆ..."
ಹೇಳುತ್ತ ಹೇಳುತ್ತ ಅಹಲ್ಯಾ ನಕ್ಕಳು, ಕಾಮಾಕ್ಷಿಗೂ ನಗು ತಡೆಯಲಾಗಲಿಲ್ಲ.
ಇವರ ಸಂಭಾಷಣೆ ಕೇಳಿ ಪಕ್ಕದ ಮನೆಯೊಳಗಿದ್ದ ಕಮಲಮ್ಮನಿಗೂ ನಗು ಬರದಿರಲಿಲ್ಲ.
ಸರಿಯಾಗಿಯೇ ಹೇಳಿದ್ದಳು ಅಹಲ್ಯಾ.ರಂಗಮ್ಮ ಎತ್ತಿಕೊಳ್ಳುತ್ತ ಆ
ಮಾತನ್ನೇ ಆಡಿದರು.
ಆದರೆ ಬಂದವನು ಸ್ವಲ್ಪ ವಿಚಿತ್ರವಾಗಿದ್ದ.
"ಕೊಳಾಯಿ ಆಗ್ಲೇ ನೋಡ್ದೆ. ಬರುತ್ಲೆ ಎದುರುಗಡೇನೇ ಇದೆ, ಅಲ್ವೆ?"
ಬಂದವನ ಆ ಮಾತಿಗೆ ಏನು ಉತ್ತರ ಕೊಡಬೇಕೆಂಬುದು ರಂಗಮ್ಮನಿಗೆ
ತೋಚದೆ ಹೋಯಿತು. ಆದರು ಆವರು ಸುಧಾರಿಸಿಕೊಂಡರು.
"ಹೌದು ಅದೇ. ಪ್ರತಿ ಮನೆಗೂ ಮೂರು ಮೂರು ಬಿಂದಿಗೆ ನೀರು, ಜಾಸ್ತಿ
ಬೇಕಾದರೆ ಮೂರು ಮೂರು ಬಿಂದಿಗೆಗೆ--"
ಬಂದವನು ನಡುವೆ ಬಾಯಿಹಾಕಿದ:
"ಅಯ್ಯೋ ಅದು ಪರವಾಗಿಲ್ಲಾಂದ್ರೆ. ಏನೋ ಇಷ್ಟು ಚಿಲ್ಲರೆ ದುಡು. ಅಷ್ಟೇ
ತಾನೇ?"
ರಂಗಮ್ಮ ಒಂದು ಕ್ಷಣ ತೆಪ್ಪಗಾಗಿ ಹೂಂಗುಟ್ಟಿದರು.
ಆತ ಛಾವಣಿಯನ್ನು ದಿಟ್ಟಿಸುತ್ತ ವಿದ್ಯುತ್ ಗುಂಡಿಯನ್ನು ಒತ್ತಿ ನೋಡಿದ.
"ಮೇನ್ ಸ್ವಿಚ್ಚು ಆಫ್ ಮಾಡಿದೀರೇನೋ?"
"ಹೂಂ. ಚಿಕ್ಕ ಹುಡುಗರು. ಅಪಾಯ ಅಂತ."
"ಸರಿ, ಸರಿ, ನ್ಯಾಯವೇ."
ಆತನ ಮುಖದ ಮೇಲೆ ಯಾವ ಭಾವವಿದೆಯೆಂದು ತಿಳಿಯಲು ರಂಗಮ್ಮ
ದಿಟ್ಟಿಸಿ ನೋಡಿದರು. ನಿಶ್ಚಲವಾಗಿತ್ತು ಮುಖಮುದ್ರೆ, 'ಆಸಾಮಿ ಜೋರಾಗಿ
ದಾನೆ' ಎನಿಸಿತು ರಂಗಮ್ಮನಿಗೆ. ಯಾಕೋ ಅವರಿಗೆ ಅಧೈರ್ಯವಾಯಿತು.
ಮನೆಯಿಂದ ಹೊರಕ್ಕೆ ಕಾಲಿಡುತ್ತ ಆತ ಹೇಳಿದ:
"ಚಪ್ಪಲಿ ಹೊರಗೇ ಬಿಟ್ಟು ಬಂದೆ. ಪರವಾಗಿಲ್ಲ ತಾನೆ?"
"ನಮ್ಮ ವಠಾರದಲ್ಲಿ ನಾಯಿ ಇಲ್ಲ," ಎಂದು ಹೇಳಿ ರಂಗಮ್ಮ ಸುಮ್ಮನಾದರು.
ಆತ, ಒಣಿಯಲ್ಲಿ ತುಂಬಿದ್ದ ಹುಡುಗರ ತಂಡವನ್ನು ಮತ್ತೊಮ್ಮೆ ನೋಡಿ,
ಕೇಳಿದ:
"ಬಚ್ಚಲು ಮನೆ ಎಲ್ಲಿದೆ?"
ಅಲ್ಲೆ ಪಕ್ಕದಲ್ಲೆ ಹಿತ್ತಿಲ ಗೋಡೆಗೆ ಅಂಟಿಕೊಂಡಿದ್ದ ಮುರುಕು ಕೊಠಡಿಯನ್ನು
ರಂಗಮ್ಮ ತೋರಿಸಿದರು. ಮಗನ ಮದುವೆಯ ಬಳಿಕ ಸಾಲುಮನೆಗಳನ್ನು ಕಟ್ಟಿಸಿ
ದಾಗ ಮೊದಲೇನೋ ಬಚ್ಚಲುಮನೆಯಲ್ಲಿ ಹಂಡೆ ಹುಗಿಸಿದ್ದರು. ಆದರೆ ಆಮೇಲೆ
ದಿನನಿತ್ಯವೂ ನಡೆಯತ್ತಿದ್ದ ವಿವಾದಗಳನ್ನು ಬಗೆಹರಿಸಲಾಗದೆ, ಹಂಡೆಯನ್ನು
ಅಗೆದು, ತೆಗೆದು ಒಳಕ್ಕೆ ಒಯ್ದಿದ್ದರು.
ಬಚ್ಚಲು ಮನೆಯ ಆ ಸ್ಥಿತಿಗೆ ವಿವರಣೆ ಎಂಬಂತೆ ರಂಗಮ್ಮ ಹೇಳಿದರು:
"ಎಲ್ಲರ ಅನುಕೂಲಕ್ಕಾಗಿ ಬಚ್ಚಲು ಮನೇನ ಹೀಗೇ ಬಿಟ್ಟಿದ್ದೇವೆ. ಯಾರು
ಬೇಕಾದರೂ ಉಪಯೋಗಿಸ್ಬಹುದು."
"ಅವರವರ ಮನೇಲಿ ನೀರು ಕಾಯಿಸಿ ಹೊತ್ಕೊಂಡು ಬರ್ಬೇಕು ಅಲ್ವೆ?"
"ಹೌದು. ಬೇಕಾದರೆ ಒಳಗೆ ಅಡುಗೆ ಮನೇಲಿ ಸ್ನಾನ ಮಾಡೋಕೂ
ಏರ್ಪಾಟಿದೆ. ಎಷ್ಟೋ ಜನ ಹಾಗೇ ಮಾಡ್ತಾರೆ.
"ನಿಜ, ನಿಜ. ಅದೇ ಅನುಕೂಲ."
ಬಚ್ಚಲು ಮನೆಯ ಎದುರಿಗೆ ತಿರುಗಿ ಆತ ಹೇಳಿದ:
"ಇದು ಕಕ್ಕಸೂಂತ ಕಾಣುತ್ತೆ."
"ಹೌದು. ಬೊಂಬಾಯಿ ಕಕ್ಕಸು. ಸಿಮೆಂಟು ಹಾಕಿದೆ."
ಆತನಿಗೆ ಆಶ್ಚರ್ಯವಾದಂತೆಯೂ ತೋರಲಿಲ್ಲ. ನಗಲೂ ಇಲ್ಲ ಆತ. ರಂಗಮ್ಮ
ನನ್ನೇ ನೋಡಿ ಮುಖ್ಯ ಪ್ರಶ್ನೆ ಕೇಳಿದ:
"ಬಾಡಿಗೆ ಎಷ್ಟು?"
"ನಡೀರಿ. ಒಳಗೆ ಹೋಗೋಣ."
ಪುನಃ ರಂಗಮ್ಮನೇ ಮುಂದಾದರು. ಹಗಲಲ್ಲೂ ಕತ್ತಲು ಕವಿದಿರುತ್ತಿದ್ದ
ಮನೆ. ಬಾಗಿಲ ಹೊರಗ ಕುಳಿತು ಓಣಿಯ ಬೆಳಕನ್ನು ಆತ ದಿಟ್ಟಿಸಿದ. ಹೆಂಗಸರೂ
ಹುಡುಗರೂ ಅತ್ತಿತ್ತ ಹಾದು ಹೋಗುತ್ತಿದ್ದರು. ತನ್ನನ್ನು ನೋಡುವುದಕೋಸ್ಕರ
ಅವರು ಹಾಗೆ ಮಾಡುತ್ತಿದ್ದರೆಂದು ಬಂದವನಿಗೆ ತಿಳಿಯದೆ ಇರಲಿಲ್ಲ.
ರಂಗಮ್ಮ ಗೋಡೆಗೊರಗಿ ಕುಳಿತು, ಹೇಳಿದರು:
"ಬಾಡಿಗೆ ಇಪ್ಪತ್ತು ರೂಪಾಯಿ."
"ಹೆಚ್ಚಾಯ್ತು ಅಲ್ವೆ?"
ರಂಗಮ್ಮ ಸುಮ್ಮನಿದ್ದರು. ಅವರು ಕೇಳಬೇಕಾಗಿದ್ದ ಬೇರೆ ಕೆಲವು ಪ್ರಶ್ನೆಗಳು
ಉಳಿದಿದ್ದುವು.
"ನೀವು ಯಾವ ಜನ?"
"ಬ್ರಾಹ್ಮಣ. ಯಾಕೆ, ಸಂಶಯ ಬಂತೆ?"
"ಹಾಗಲ್ಲ. ಬ್ರಾಹ್ಮಣರಲ್ದೋರು ಯಾರೂ ಮನೆ ವಿಚಾರಿಸ್ಕೊಂಡು ನಮ್ಮ
ವಠಾರಕ್ಕೆ ಬರೋದೇ ಇಲ್ಲ. ಬೇರೆ ಜನಕ್ಕೆ ನಾವು ಮನೆ ಕೊಡೋದೂ ಇಲ್ಲ." ಅದು ಪೂರ್ತಿ ನಿಜವಾಗಿರಲಿಲ್ಲ. ಎಷ್ಟೋ ವೇಳೆ ಬ್ರಾಹ್ಮಣೇತರ ಹುಡುಗರಿಗೆ
ಮೇಲಿನ ಕೊಠಡಿಯನ್ನು ಅವರು ಕೊಟ್ಟುದಿತ್ತು. ಆದರೆ, ಆ ಹುಡುಗರು ಅಲ್ಲಿ
ಅಡುಗೆ ಮಾಡಬಾರದೆಂಬ ಶರೆತವಿತ್ತು.
"ನಿಮ್ಮ ಹೆಸರು?"
"ಶಂಕರನಾರಾಯಣಯ್ಯ ಅಂತ. ನಾವು ಸ್ಮಾರ್ತರು."
"ಅದೇನೂ ಪರವಾಗಿಲ್ಲ. ನಮ್ಮ ವಠಾರದಲ್ಲಿ ಎಲ್ಲಾ ಥರದೋರೂ ಇದಾರೆ.

ಒಟ್ಟಿನಲ್ಲಿ ಬ್ರಾಹ್ಮಣರಾದರಾಯ್ತು."
"ಏನೂ ತೊಂದರೆ ಇಲ್ಲ. ನಾಲ್ಕು ಜನರ ಜತೇಲಿ ಹೊಂದಿಕೊಂಡು
ಹೋಗ್ತೇವೆ."
"ಸಂತೋಷ. ನಿಮಗೆ ಮದುವೆಯಾಗಿದೆ ತಾನೆ?"
ಆ ಪ್ರಶ್ನೆ ಕೇಳಿ ಆತನಿಗೆ ನಗು ಬಂತು. ಬಾಯಿ ಕಣ್ಣುಗಳನ್ನು ತೆರೆದು ಆತ
ಹಲ್ಲು ಕಿರಿದ.
"ಮದುವೆಯಾಗಿದೇಂತ್ಲೆ ಈ ತಾಪತ್ರಯ. ಇಲ್ದಿದ್ರೆ ಮನೆ ಹುಡುಕ್ಕೊಂಡು
ಯಾಕ್ಬರ್ತಿದ್ದೆ?"
ಆ ರಸಿಕತನದ ಉತ್ತರ ರಂಗಮ್ಮನಿಗೆ ಇಷ್ಟವಾಯಿತು. ಅವರೂ ಬಾಯ
ಗಲಿಸಿ, ಇನ್ನೂ ಉಳಿದಿದ್ದ ಕೆಲವು ಹಲ್ಲುಗಳನ್ನು ತೋರಿಸುತ್ತ, ಸದ್ದಿಲ್ಲದೆ ನಕ್ಕರು.
ಮರುಕ್ಷಣವೆ ಮಾಮೂಲಿನ ಉಪಚಾರದ ಮಾತುಗಳು ಹೊರಬಿದ್ದುವು.
"ಹಾಗೆ ಕೇಳ್ದೇಂತ ತಪ್ಪು ತಿಳ್ಕೋಬೇಡಿಪ್ಪಾ. ಬ್ರಹ್ಮಚಾರಿಗಳಿಗೆ ನಾವು ಮನೆ
ಕೊಡೋದಿಲ್ಲ."
ಬಂದವನಿಗಂತೂ, ಬ್ರಹ್ಮಚಾರಿಯಾಗಿದ್ದಾಗ ಮನೆ ಸುಲಭವಾಗಿ ಸಿಗದೆ ಪಟ್ಟಿದ್ದ
ಕಷ್ಟ ನೆನಪಿಗೆ ಬಂತು.
ಬ್ರಹ್ಮಚಾರಿಗಳಿಗೆ ರಂಗಮ್ಮನ ವಠಾರದಲ್ಲಿ ಆಸ್ಪದವಿಲ್ಲವೆಂಬುದೂ ಪೂರ್ತಿ ಸರಿ
ಯಾಗಿರಲಿಲ್ಲ. ವಿಮಾ ಸಂಸ್ಥೆಯ ಚಂದ್ರಶೇಖರಯ್ಯ ಹಿಂದೆ ಮನೆ ಕೇಳಲು ಬಂದಿ
ದ್ದಾಗ, ತನಗೆ ಮದುವೆಯಾಗಿದೆ ಎಂದೇ ಹೇಳಿದ್ದ. ಆದರೆ ವಾಸವಾಗಿರಲು ಬಂದಾಗ
ಇದ್ದುದು ಒಬ್ಬನೇ. ರಂಗಮ್ಮ ಅವನನ್ನು ತರಾಟೆಗೆ ತೆಗೆದುಕೊಂಡಿದ್ದರು. ಒಮ್ಮೆ
" ಊರಲ್ಲಿದಾಳೆ" ಎಂದಿದ್ದ. ಮತ್ತೊಮ್ಮೆ "ತವರ್ಮನೇಲಿ." ರಂಗಮ್ಮ ಮತ್ತೂ ಗಲಾಟೆ
ಮಾಡಿದಾಗ ಅವನು ರೇಗಿ ಹೇಳಿದ: "ನಿಮಗೇನಮ್ಮ ಬಂದಿರೋ ಕಷ್ಟ? ಈ ವಠಾರ
ದಲ್ಲಿ ನನ್ನಷ್ಟು ತೆಪ್ಪಗೆ ಇರೋ ಇನ್ನೊಬ್ಬ ಮನುಷ್ಯನ್ನ ತೋರ್ಸಿ. ನಾನಿಲ್ಲಿರೋದು
ವಾರಕ್ಕೆರಡು ದಿನ. ಅಷ್ಟಕ್ಕೆ...." ರಂಗಮ್ಮ ಸುಮ್ಮನಾಗಿದ್ದರು. ಆತ ಸಮಯಕ್ಕೆ
ಸರಿಯಾಗಿ ಬಾಡಿಗೆ ಕೊಡುತ್ತದ್ದ. ವಿದ್ಯಾವಂತ. ಟೀಕ್ ಟಾಕ್ ಉಡುಪು ಧರಿಸಿ
ಅವನು ಹೋಗಿ ಬರುತ್ತಿದ್ದಾಗಲೆಲ್ಲ ರಂಗಮ್ಮನಿಗೆ ತಮ್ಮ ವಠಾರದ ಬಗೆಗೆ ಹೆಮ್ಮೆ
ಎನಿಸುತ್ತಿತ್ತು.

ಆದರೆ ಮತ್ತೊಮ್ಮೆ ಅಂಥದೇ ಪ್ರಯೋಗ ನಡೆಸಲು ಅವರು ಸಿದ್ದರಿರಲಿಲ್ಲ
ಮುಂದೇನು ಪ್ರಶ್ನೆ ಬರುವುದೋ ಎಂದು ಕಾದು ಕುಳಿತಿದ್ದ ಶಂಕರ ನಾರಾಯಣಯ್ಯ
ನನ್ನು ನೋಡುತ್ತ ರಂಗಮ್ಮ ಕೇಳಿದರು:
"ಎಷ್ಟು ಮಕ್ಕಳು ?"
"ಸದ್ಯಕ್ಕೆ ಒಂದೇನು, ಹೆಣ್ಣು, ಎರಡು ವರ್ಷದ್ದು,"
"ನನಗೂ ಇಬ್ಬರು, ಹೆಣ್ಣು ಮಕ್ಕಳು ದೊಡ್ಡವರೂಂತಿಟ್ಕೊಳ್ಳಿ"
"ಹಾಗೇನು ಸಂತೋಷ."
"ನಿಮ್ಮ ತಾಯಿನೂ ಇದಾರೋ."
"ಯಾರೂ ಇಲ್ಲ ನಾವು ಮೂರೇ ಜನ."
ರಂಗಮ್ಮನಿಗೆ ಸಮಾಧಾನವೆಸಿಸಿತು. ಸಾಮಾನ್ಯವಾಗಿ, ಮನೆ ತುಂಬ ಮಕ್ಕಳಿ
ರಬೇಕು ಎಂದು ಹೇಳುವವರೇ ರಂಗಮ್ಮ. ಆದರೆ ವಠಾರ ತುಂಬ ಮಕ್ಕಳು, ಮಕ್ಕಳ
ತಾಯಂದಿರೇ ಇರಬೇಕೆಂಬ ವಿಷಯದಲ್ಲಿ ಅವರಿಗೆ ಬಿನ್ನಾಭಿಪ್ರಾಯವಿತ್ತು.
ತಮ್ಮ ವಠಾರದಲ್ಲಿ ವಾಸವಾಗಲು ಬೇಕಾದ ಅರ್ಹತೆ ಬಹಳ ಮಟ್ಟಿಗೆ ಆ
ಮನುಷ್ಯನಿಗೆ ಇದ್ದಂತೆ ರಂಗಮ್ಮನಿಗೆ ತೋರಿತು ಆದರೂ ಅವರ ಪ್ರಶ್ನಾವಳಿ ಕೊನೆ
ಮುಟ್ಟಿರಲಿಲ್ಲ.
"ಎಲ್ಲಿ ಕೆಲಸ?"
ಹಿಂದಿನ ಕಾಲದಲ್ಲಿ ಬ್ರಾಹ್ಮಣನನ್ನು ಯಾರೂ ಹಾಗೆ ಕೇಳುತ್ತಿದ್ದರು? ಆದರೆ
ಈಗ ಆ ಪ್ರಶ್ನೆಯನ್ನು ಸ್ಪಷ್ಟವಾಗಿ ಕೇಳುವುದಿಲ್ಲ ಅಗತ್ಯವಿತ್ತು ಗಾದೆಯೇ ಇರಲಿಲ್ಲವೇ?
ಉದ್ಯೋಗಂ...
"ನಾನು ಪೇಂಟರ್."
ರಂಗಮ್ಮನಿಗೆ ಅರ್ಥವಾಗಲಿಲ್ಲ.
"ಆಠಾರಾ ಕಛೇರಿಯಲ್ಲಿದೀರಾ?"
"ಇಲ್ಲ. ನನು ಚಿತ್ರ ಬರೀತೀನಿ ಬಣ್ಣದ್ದು ಬೋರ್ಡು ಬರೀತೀನಿ."
" ಓ.."
ಸ್ವರವನ್ನು ಸ್ಲಲ್ಪ ದೀರ್ಘವಾಗಿಯೇ ರಂಗಮ್ಮ ಎಳೆದರು. ಅವರಿಗೆ ನಿರಾಶೆ
ಯಾಯಿತು ಆದರೂ, ತನ್ನ ಉದ್ಗಾರದೊಡನೆ ನೆಲೆಸಿದ ಮೌನವನ್ನು ಮುರಿದು,
ಅವರು ಮಾತು ಮುಂದುವರಿಸಿದರು.
"ಎಷ್ಟು ಬರುತ್ತೆ ಸಂಬಳ?"
ಯಾರನ್ನೂ 'ಸಂಬಳ' ಎಷ್ಟು ಎಂದು ಕೇಳಕೂಡದೆಂದು ರಂಗಮ್ಮನ ಮಗ
ತಾಯಿಗೆ ಭೋಧನೆ ಮಾಡಿದ್ದ. ಹಾಗೆ ಕೇಳುವುದು ಸರಿಯಲ್ಲವೆಂಬುದನ್ನು ಮನ
ಗಾಣಿಸಿಕೊಡಲು ಬಹಳ ಪ್ರಯಾಸಪಟ್ಟಿದ್ದ ಆದರೆ ಬಾಡಿಗೆಗೆ ಮನೆ ಕೇಳಲು ಬರುವವ
ರನ್ನು ಆ ರೀತಿ ಪ್ರಶ್ನಿಸದೆ ಅನ್ಯಗತಿಯೇ ಇರಲಿಲ್ಲ ಹೀಗಾಗಿ ಪ್ರಶ್ನೆಯ ಜೊತೆಯಲ್ಲೇ
'ಹೀಗೆ ಕೇಳ್ದೇಂತ ಏನೂ ತಿಳ್ಕೋಬೇಡಿಪ್ಪಾ' ಎಂದು ಹೇಳಲು ಮಗ ಕಲಿಸಿ
ಕೊಟ್ಟಿದ್ದ. ಮರೆಯದೇ ಈ ಸಲವೂ ಅದನ್ನು ರಂಗಮ್ಮ ಅಂದರು.
"ಸಂಬಳ ಇಲ್ಲ."
ರಂಗಮ್ಮನಿಗೆ ಆ ಉತ್ತರ ಅರ್ಥವಾಗಲಿಲ್ಲ.
"ಅಂದರೆ?"
"ಸಂಬಳ ಇಲ್ಲ-ಸಂಪಾದನೆ. ಸ್ವಂತದ ಸಂಪಾದನೆ. ಕೆಲಸ ಮಾಡಿದಷ್ಟೂ
ದುಡ್ಡು ಬರುತ್ತೆ."
"ತಿಂಗಳಿಗೆ ಒಂದರುವತ್ತು ರೂಪಾಯಿ ಬರುತ್ತೋ?"
"ನೂರು ನೂರೈವತ್ತು ರೂಪಾಯಿ ಬರುತ್ತೆ."
ರಂಗಮ್ಮ ಸುಮ್ಮನಾದರು. ಚಿತ್ರ ಬರೆದು ಅಷ್ಟು ಸಂಪಾದಿಸಬಹುದೆಂದು
ಅವರಿಗೆ ಗೊತ್ತಿರಲಿಲ್ಲ.ಸಂಪಾದನೆಯಲ್ಲೂ ಸ್ಥಾನಮಾನದಲ್ಲೂ ಚಂದ್ರಶೇಖರಯ್ಯ
ನನ್ನಾಗಲೀ ತಮ್ಮ ಮಗನನ್ನಾಗಲಿ ಮೀರಿಸುವವರು ಆ ವಠಾರಕ್ಕೆ ಬರಬಹುದೆಂದು
ಅವರು ಭಾವಿಸಿರಲಿಲ್ಲ. ಶಂಕರನಾರಾಯಣಯ್ಯನ ಬಗೆಗೆ ಗೌರವವೇನೂ ಅವರಲ್ಲಿ
ಉಂಟಾಗಲಿಲ್ಲ, ನಿಜ. ಆದರೆ, ಆ ಮನುಷ್ಯನಿಗೆ ಬಾಡಿಗೆ ಕೊಡುವ ಸಾಮರ್ಥ್ಯವಿದೆ
ಎಂದು ಅವರು ತಿಳಿದುಕೊಂಡರು.
"ಯಾವತ್ತು ಬರ್ತೀರಾ?"
"ಬಾಡಿಗೆ ವಿಷಯವೇ ಇತ್ಯರ್ಥವಾಗಿಲ್ವಲ್ಲಾ ಇನ್ನೂ ?"
"ಆಗ್ಲೇ ಹೇಳ್ಲಿಲ್ವೆ? ಇಪ್ಪತ್ತು ರೂಪಾಯಿ."
"ಎಲ್ಲಾದರೂ ಉಂಟೆ? ಏನಂದಾರು ಯಾರಾದರೂ?"
ರಂಗಮ್ಮನಿಗೆ ಸ್ವಲ್ಪ ರೇಗಿತು. ಅವರು ಬಿಗಿಯಾಗಿಯೇ ಅಂದರು:
"ನಿಮಗೆ ಇಷ್ಟವಾದರೆ ಬನ್ನಿ. ಕಷ್ಟವಾದರೆ ಬಿಡಿ. ಹತ್ತೊಂಭತ್ತು ರೂಪಾ
ಯಿಗಿಂತ ಕಮ್ಮಿ ಸಾಧ್ಯವೇ ಇಲ್ಲ."
"ಕಕ್ಕಸಿಗೆ ಬೇರೆ ಕೊಡ್ಬೇಕೇನು?"
ಮಾತಿನ ಜತೆ ಅಣಕದ ನಸುನಗೆಯಿತ್ತು. ಆದರೆ ರಂಗಮ್ಮನಿಗೆ ಅದು ಅರ್ಥ
ವಾಗಲಿಲ್ಲ.
"ಇಲ್ಲ. ನೀರಿಗೆ ಮಾತ್ರ___"
"ಸರಿ, ಸರಿ. ಅದನ್ನು ಆಗ್ಲೇ ಹೇಳಿದೀರಿ."
"ಇಷ್ಟೆ. ಒಪ್ಪಿಗೆಯಾದರೆ ಬನ್ನಿ. ನಿಮ್ಮ ಮನೆಯವರನ್ನ ಕರಕೊಂಡು ಬಂದು
ತೋರಿಸಿ, ಬೇಕಾದರೆ."
"ಅದೇನೂ ಪರವಾಗಿಲ್ಲ. ನಾನು ನೋಡಿದರೆ ಸಾಕು."
"ತಿಂಗಳ ಬಾಡಿಗೆ ಮುಂಗಡ ಕೊಡ್ಬೇಕು."

ಶಂಕರನಾರಾಯಣಯ್ಯ ಸ್ವಲ್ಪ ಹೊತ್ತು ಯೋಚಿಸಿ ಹೇಳಿದ:

"ಹದಿನೈದನೇ ತಾರೀಕು ಸಾಯಂಕಾಲ ಬಂದ್ದಿಡ್ತೀನಿ.. ಅರ್ಧ ತಿಂಗಳಿನ ಬಾಡಿಗೆ
ಮುಂಗಡ ಕೊಡ್ರೀನಿ."
ಈ ಲೆಕ್ಕಾಚಾರದಲ್ಲೆಲ್ಲ ರಂಗಮ್ಮ ಎಂದೂ ಬಿಟ್ಟುಕೊಟ್ಟವರಲ್ಲ. ಕಟ್ಟುನಿಟ್ಟಾ
ಗಿಯೇ ಅವರು ಹೇಳಿದರು:
"ಅದೊಂದು ಸಾಧ್ಯವಿಲ್ಲ. ನಾಳೆ ದಿವಸ ಚೆನ್ನಾಗಿದೆ. ಬಂದು ಹತ್ತೊಂಭತ್ತು
ರೂಪಾಯಿ ಮುಂಗಡ ಕೊಟ್ಟ ಕರಾರು ಪತ್ರ ಮಾಡೊಂಡು ಹೋಗಿ.. ನಾಡಿದ್ದು
ಬಿಡಾರ ಬಂದ್ದಿಡಿ.. ಮುಂದಿನ ತಿಂಗಳು ಮೊದಲ್ನೆ ತಾರೀಕಿಗೆ, ಅಥವಾ ಐದನೇ
ತಾರೀಕಿನೊಳಗೆ.. ಈ ಅರ್ಧ ತಿಂಗಳ ಬಾಡಿಗೆ ಕೊಡಿ."
ವಠಾರದ ಒಡತಿಯೊಡನೆ ಚರ್ಚೆ ವ್ಯರ್ಥವೆಂದು ಮನಗೊಂಡ ಶಂಕರನಾರಾಯ
ಣಯ್ಯ ಸಂದರ್ಶನವನ್ನು ಮುಕ್ತಾಯಗೊಳಿಸಿದ.
“ಹಾಗೇ ಆಗ್ಲಿ."
ಬಂದವನು ಹೊರಡಲು ಎದು ನಿಂತನೆಂದ ರಂಗಮ್ಮನೂ ಎದ್ದರು. ಆದರೆ
ಈಗಿರುವ ಮನೆಯನ್ನು ಆತ ಬಿಡಲು ಕಾರಣವೇನೆಂದು ತಿಳಿಯುವ ಒಂದು ಕೆಲಸ
ಉಳಿದಿತ್ತು, ಅದಕ್ಕೆ ಪೀಠಿಕೆಯಾಗಿ ಪಟ್ಟ ಪ್ರಶ್ನೆಗಳನ್ನು ರಂಗಮ್ಮ ಕೇಳಬೇಕಾಯಿತು.
“ನೀವು ಕೆಲಸ ಮಾಡೋದೆಲ್ಲಿ?"
"ಗಾಂಧಿನಗರದಲ್ಲಿ"
"ಹಾಲಿ ಅಲ್ಲೇ ವಾಅಸವಾಗಿದೀರೋ?"
"ಇಲ್ಲ. ಈಗಿರೋದು ಶೇಷಾದ್ರಿಪುರದಲ್ಲಿ."
ಮತ್ತೆ! ಅದೇ ಸಮೀಪ ಅಲ್ವೆ ನಿಮ್ಗೆ?"
"ಬೆಂಗಳೂರಲ್ಲಿ ದೂರವೇನು, ಸಮೀಪವೇನು, ಎಲ್ಲಾ ಒಂದೇ."
ರಂಗಮ್ಮನಿಗೆ ಬೇಕಾಗಿದ್ದುದು, ಆ ಉತ್ತರದಿಂದ ದೊರೆಯಲಿಲ್ಲ, ಅವರು ನೇರ
ವಾಗಿಯೇ ಕೇಳಬೇಕಾಯಿತು.
“ಈಗೀರೊ ಮನೇನ ಯಾಕೆ ಬಿಡ್ತಿದೀರಿ ಹಾಗಾದರೆ?"
"ಒಂದು ಅರ್ಧ ಕ್ಷಣ ಶಂಕರನಾರಾಯಣಯ್ಯನ ದೃಷ್ಟಿ ಶೀತಲವಾಯಿತು.
ಆದರೂ ಉತ್ತರ ಕೊಡಲು ಆತ ತಡಮಾಡಲಿಲ್ಲ.
“ಈಗಿರೋ ಮನೆ ಅಷ್ಟು ಅನುಕೂಲವಾಗಿಲ್ಲ, ಕಡಿಮೆ ಬಾಡಿಗೇದು. ಜವುಗು
ಜಾಗ, ಶ್ರೀರಾಮಪುರದ ಹವಾ ಚೆನಾಗಿದೇಂತ ಡಾಕ್ಟರು ಬೇರೆ ಹೇಳಿದ್ರು-----"
"ಹೌದು, ಹೌದು. ಅದು ನಿಜವೇ. ಆರೋಗ್ಯದ ದೃಷ್ಟಿಯಿಂದ ಇದು
ಒಳ್ಳೆ ಜಾಗ. ನಮ್ಮ ವಠಾರದ ವಿಷಯದಲ್ಲಂತೂ ಇಲ್ಲಿ ಯಾರನ್ನು ಬೇಕಾದರೂ
ಕೇಳಿ, ಹೇಳ್ತಾರೆ. ಮಳೆ ಇರಲಿ, ಛಳಿ ಇರಲಿ, ಸೆಖೆ ಇರಲಿ, ರಂಗಮ್ಮನ ವಠಾರದಲ್ಲಿ
ಎಲ್ಲಾ ಒಂದೇ!"

“ ಕೇಳೋದೇನ್ಬಂತು-ಕಣ್ಣಾರೆ ನಾಅನೇ ಕ್ಂದ್ಮೇಲೆ ?"
ರಂಗಮ್ಮನಿಗೆ ತೃಪ್ತಿಯಾಯಿತು. ಬಾಗಿದ ದೇಹದಿಂದ ತಲೆಯನ್ನಷ್ಟೆ ಮೇಲ
ಕ್ಕೆತ್ತಿ ಆತನನ್ನು ನೋಡುತ್ತ ಆಕೆ ಹೇಳಿದರು:
"ಹೋಗ್ಬಿಟ್ಟು ಬರ್ತೀರಾ ಹಾಗಾದ್ರೆ? ನಾಳೆ ಬರ್ತೀರಾ?"
ಆತ 'ಹೂಂ'ಗುಟ್ಟಿದ. ಹಿಂಬಾಲಿಸಿ ಬಂದ ಎಲ್ಲರ ದೃಷ್ಟಿಗಳನ್ನೂ ಹಿಂದೆ
ಬಿಟ್ಟು, ಅಂಗಳಕ್ಕಿಳಿದು, ಕಾಲಿಗೆ ಚಪ್ಪಲಿ ಸಿಕ್ಕಿಸಿಕೊಂಡ. ರಂಗಮ್ಮ ಅಂಗಳದ ವರೆಗೂ
ಬಂದರು.
ಪರೀಕ್ಷೆಯಲ್ಲಿ ಉತ್ತರ ಕೊಟ್ಟು ಬಸವಳಿದು ಬಂದಿದ್ದ ಶಂಕರನಾರಾಯಣಯ್ಯ
ಜುಬ್ಬದ ಜೇಬಿನಿಂದ ಕರವಸ್ತ್ರ ಹೊರತೆಗೆದು ಮುಖ ಒರೆಸಿದ...ಆ ಕ್ಷಣ ಏನನ್ನೋ
ನಿರೀಕ್ಷಿಸಿ ಆತನ ಕಣ್ಣಿ ವೆಗಳು ಕುಣಿದುವು.
"ಒಂದು ವಿಷಯ ನಿಮ್ಮನ್ನ ಕೇಳ್ಬೇಕಾಗಿದೆಯಲ್ಲಮ್ಮ."
"ಏನಪ್ಪಾ ಅದು?"
"ಖಾಲಿ ಮನೇಲಿ ವಾಸವಾಗಿದ್ದೋರು ಅದನ್ನ ಬಿಟ್ಟು ಹೋಗಿ ಎಷ್ಟು ಸಮಯ
ವಾಯ್ತು?"
"ಒಂದು ಎರಡು ವಾರ,ಅಷ್ಟೇ. ಯಾಕಪ್ಪಾ?"
"ಅವರು ಮನೆ ಖಾಲಿ ಮಾಡಲು ಕಾರಣ?"
ರಂಗಮ್ಮನಿಗೆ ಉಗುಳು ಗಂಟಲಲ್ಲಿ ಸಿಲುಕಿಕೊಂಡಿತು. ತಮ್ಮನ್ನು ಮೀರಿಸಿದ
ಜಾಣರಿಲ್ಲ ಎಂದು ಭಾವಿಸಿದ್ದುದಕ್ಕೆ ಇದೀಗ ಶಿಕ್ಷೆ ಎಂದುಕೊಂಡರು. ನಿಜ ಹೇಳಿದರೆ
ಈತ ಬರದೇ ಹೋಗಬಹುದೆಂದು ಅವರಿಗೆ ಭಯವಾಯಿತು. ಸಾವು ಸಂಭವಿಸಿದ
ಮನೆಯಲ್ಲಿ ಸಂಸಾರ ಹೂಡಲು ತಾವಾಗಿಯೇ ಇಷ್ಟಪಡುವವರು ಯಾರು?
ರಂಗಮ್ಮ ಉತ್ತರ ಕೊಡಲು ಅನುಮಾನಿಸುತ್ತಿದ್ದುದನ್ನು ಕಂಡು ಆತನೇ
ಮುಂದುವರಿಸಿದ:
"ಹೇಳಿ. ಪರವಾಗಿಲ್ಲ."
"ಬಡವ....ಇಷ್ಟು ಬಾಡಿಗೆ ಕೊಡೋದು ಕಷ್ಟವಾಯ್ತೂಂತ___"
ಆತ ನಕ್ಕುಬಿಟ್ಟ.
"ನೋಡಿಮ್ಮಾ, ನಾನು ಬರದೇ ಹೋಗ್ಬಹುದೂಂತ ನೀವು ಮುಚ್ಚುಮರೆ
ಮಾಡ್ತಿದೀರ."
"ಹಾಗೇನಿಲ್ಲ....ಅದು... ಈ..."
"ಅಲ್ಲೇ ಕೆಳಗೆ ಹೋಟೆಲಿನವರನ್ನ ಕೇಳ್ದೆ-ಯಾವುದಾದರೂ ಮನೆ ಖಾಲಿ
ಇದೆಯೇ ಅಂತ. ರಂಗಮ್ಮನ ವಠಾರದಲ್ಲೊಂದು ಖಾಲಿ ಇರಬೇಕು-ಅಲ್ಲಿ ಯಾರೋ
ಮೊನ್ನೆ ಸತ್ತರೂಂತ ಆತ ಅಂದ."
"ಹಾಂಗದ್ನೆ? ಅಯ್ಯೋ ಪರಮಾತ್ಮಾ!"
"ಯಾಕೆ? ಯಾರೂ ಸಾಯಲಿಲ್ವೇನು?"

"ಸತ್ತರು. ಅದು ಬೇರೆ ವಿಷಯ. ಆದರೆ ಸತ್ತದ್ದಕ್ಕೆ ಖಾಲಿ ಆಯ್ತೂಂತ
ಅನ್ಬೇಕೆ?"
"ಅದರಲ್ಲಿ ಏನೀಗ ತಪ್ಪು? ಹುಟ್ಟೋದು ಎಷ್ಟು ಸ್ವಾಭಾವಿಕವೋ ಸಾಯೋದು
ಅಷ್ಟೆ ಸ್ವಾಭಾವಿಕ. ಪಟ್ಟಣವಾಸದಲ್ಲಿ ಅದಕ್ಕೆಲ್ಲ ಮಹತ್ವ ಕೊಡೋಕಾಗುತ್ಯೆ?
ಈಗ ಆತ್ಮಹತ್ಯೇನೆ ಮಾಡ್ಕೊಂಡ್ರೂಂತ ಇಟ್ಕೊಳ್ಳಿ. ಆ ಮನೇನ ಬಿಟ್ಟಿಡೋಕೆ
ಆಗುತ್ಯೆ?"
"ಅದು ನಿಜ, ನಿಮಗೆ ತಿಳಿವಳಿಕೆ ಇರೋದ್ರಿಂದ ಹೀಗೆ ಹೇಳ್ತೀರಾ. ಆದರೆ
ಬೇರೆಯವರು___"
"ಅದೆಲ್ಲಾ ದೊಡ್ಡದಲ್ಲಾಂದ್ರೆ!"
"ಹೆಂಗಸರು ಮಕ್ಕಳು ಸಾವುಗೀವು ಅಂದ್ರೆ ಸ್ವಲ್ಪ ಹೆದರ್ಕೋತಾರೆ."
"ನಮ್ಮ ಚಂಪಾ ವಿಷಯದಲ್ಲಿ ಅಂಥ ಯೋಚನೆ ಮಾಡ್ಬೇಕಾದ್ದೇ ಇಲ್ಲ.
ಇಂಥಾಂದು ಆಕೆ ಎಷ್ಟೋ ನೋಡಿದಾಳೆ."
ಸಾವಿನ ಮನೆ ಬೇಡವೆಂದು ಆತ ಹೇಳಲಿಲ್ಲವಲ್ಲಾ ಎಂದು ರಂಗಮ್ಮನ ಕಣ್ಣು
ಗಳು ಕೃತಜ್ಞತೆಯಿಂದ ತುಂಬಿದವು.
"ಅಂದ ಹಾಗೆ, ಆ ಮನೆಗೆ ಒಂದಿಷ್ಟು ಸುಣ್ಣ ಸಾರಿಸಿ ಸ್ವಚ್ಛ ಮಾಡಿಸಿ ಇಟ್ಟಿರಿ!"
"ಆಗಲಿ ಮಾಡಿಸ್ತೀನಿ."
ವಠಾರದ ಬೇರೆ ಮನೆ ಖಾಲಿಯಾಗಿದ್ದಿದ್ದರೆ ರಂಗಮ್ಮ ಒಪ್ಪುತ್ತಿರಲಿಲ್ಲ.
ಬೀದಿಗೆ ಇಳಿಯುತ್ತಿದ್ದ ಆತನ ದೃಷ್ಟಿ ಗೋಡೆಯ ಮೇಲಿದ್ದ 'ಮನೆ ಬಾಡಿಗೆಗೆ
ಇದೆ' ಬೋರ್ಡಿನತ್ತ ಹೋಯಿತು.
"ಇದೇನು ಸುಣ್ಣದ ಕಡ್ಡೀಲಿ ಬರೆಸಿದೀರಲ್ಲಾ. ನಾನು ಬಂದ್ಮೇಲೆ ಮರದ
ಹಲಿಗೇಲಿ ಬರ್ಕೊಡ್ತೀನಿ, ಸೊಗಸಾಗಿ. ಭದ್ರವಾಗಿ. ಖಾಯಂ ಆಗಿ ಇರುತ್ತೆ. ಒಳಗೆ
ಇಟ್ಕೊಂಡ್ರೆ ಯಾವತ್ತು ಬೇಕಾದ್ರೂ ಉಪಯೋಗಿಸ್ಬಹುದು."
ರಂಗಮ್ಮ ನಕ್ಕರು.
"ಆಗಲೀಪ್ಪಾ. ನಿಮ್ಮದೇ ವಠಾರ. ಅದೇನು ಮಾಡ್ತಿರೋ ಮಾಡಿ."