ಲಿಂಗಕ್ಕೆ ನಾದವಿಲ್ಲ. ಅದೇನು ಕಾರಣ? ನಿಃಶಬ್ದಮಯವಾದ ಕಾರಣ. ಜಂಗಮಕ್ಕೆ ಬಿಂದುವಿಲ್ಲ. ಅದೇನು ಕಾರಣ? ಅದು ಶಬ್ದಮಂತ್ರೋಪದೇಶವನುಳ್ಳುದಾದ ಕಾರಣ. ಅದುಕಾರಣ
ನಾದ ಸ್ವರೂಪವೇ ಜಂಗಮ; ಬಿಂದುಸ್ವರೂಪವೇ ಲಿಂಗ. ಇದುಕಾರಣ
ಲಿಂಗವೇ ಜಂಗಮದ ಲಿಂಗ; ಆ ಜಂಗಮವೇ ಲಿಂಗದ ಪ್ರಾಣ. ಆ ನಾದ ಬಿಂದು ಸ್ವರೂಪ ಲಿಂಗವಪ್ಪ ಜಂಗಮಕ್ಕೆ ಆಧಾರವಪ್ಪ ಚಿತ್ಕಲಾ ಸ್ವರೂಪನೇ ಭಕ್ತನು. ಈ ನಾದ ಬಿಂದು ಕಳೆಗಳ ಕೂಡಿಕೊಂಡಿಪ್ಪ ಶಿವತತ್ವವು
ತಾನೇ ಲಿಂಗ ಜಂಗಮ ಭಕ್ತನೆಂದು ಮೂರುತೆರನಾದನು ನೋಡಾ. ಈ ಮೂರು ಒಂದೆಯೆಂದು ಅರಿದೆನು ನೋಡಾ. ಎನ್ನ ಶರಣತ್ವದ ಆದಿಯನು
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.