ಲಿಂಗಜಂಗಮ ಜಂಗಮಲಿಂಗದ ಮುಖವ ನೀವಲ್ಲದೆ ಇನ್ನು ಬಲ್ಲವರಾರಯ್ಯಾ ? ಅಂಗದ ಮೇಲೆ ಲಿಂಗವುಳ್ಳುದೆಲ್ಲವೂ ಸಂಗಮನಾಥನೆಂದಲ್ಲಿ ಪರವಾದಿ ಬಿಜ್ಜಳನು ಒರೆದು ನೊಡಲೆಂದಟ್ಟಿದಡೆ ಹಗರಣಿಗರ ಜಂಗಮಮುಖದಲ್ಲಿ ಲಿಂಗವ ಮಾಡಿದವರಾರು ಹೇಳಾ ನೀವಲ್ಲದೆ ? ಮರದ ಮಾನಿಸನ ಕರೆದು `ಓ' ಎನಿಸಿ ನುಡಸಿ ಉಡಿಸಿ ಉಣಿಸಿ ಜಂಗಮಲಿಂಗಪ್ರಾಣಿ ಬಸವಣ್ಣನೆಂಬ ಧ್ವಜವನೆತ್ತಿ ಮೆರೆದವರಾರು ಹೇಳಾ ಈ ಕಲ್ಯಾಣದಲ್ಲಿ ನೀವಲ್ಲದೆ ? ಜಂಗಮಮುಖಲಿಂಗವನರಿಯೆನೆಂದು ಎನ್ನ ಮನಕ್ಕೆ ಸಂದೇಹವನೊಡ್ಡಿ ಜಾರಿದಡೆ ನಾನು ಸೈರಿಸಬಲ್ಲೆನೆ ? ನೀನು ಜಂಗಮಮುಖಲಿಂಗಸಂಬಂಧಿ ಎಂಬುದ ಕೇಳಿ ಆದಿಗಣನಾಥನು ಅಲ್ಲಮಪ್ರಭುವೆಂಬ ನಾಮವ ಧರಿಸಿ ನಿನ್ನನರಿಸಿಕೊಂಡು ಬರುತ್ತಲೈದಾನೆ. ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ
ಸಂಗನಬಸವಣ್ಣಾ
ನೀನೇ ಜಂಗಮಪ್ರಾಣಿಯೆಂದು ನಾನು ನಂಬಿದೆನು.