ಲಿಂಗವಿದ್ದ ಹಸ್ತ ಲಿಂಗಕ್ಕೆ ಪೀಠ ಕಾಣಿರೋ. ಲಿಂಗವ ಪೂಜಿಸುವ ಹಸ್ತವೆ ಶಿವಹಸ್ತ ಕಾಣಿರೋ. ಲಿಂಗವ ಧರಿಸಿಪ್ಪಂಗವೆ ಲಿಂಗದಂಗವಾಗಿ ಲಿಂಗಕ್ಕೂ ಅಂಗಕ್ಕೂ ಭಿನ್ನವಿಲ್ಲ ಕಾಣಿರೋ. ಲಿಂಗಪ್ರಸಾದವ ಕೊಂಬ ಪ್ರಾಣ ಲಿಂಗ ತಾ ನೋಡಾ. ಒಳಹೊರಗೆ ಲಿಂಗಭರಿತವಾಗಿಪ್ಪ ಲಿಂಗದೇಹಿ ಲಿಂಗಪ್ರಾಣಿಗೆ ಲಿಂಗಸಹಭೋಜನವ ಮಾಡಬೇಕೆಂಬುದೆ ಸದಾಚಾರ. ಹೀಂಗಲ್ಲದೆ ಅಂಗಕ್ಕು ಲಿಂಗಕ್ಕು ಭೇದ ಭಾವವ ಕಲ್ಪಿಸಿಕೊಂಡು ಲಿಂಗಸ ಭೋಜನವ ಮಾಡಬಾರದೆಂಬ ಸಂದೇಹ ಸೂತಕ ಪ್ರಾಣಿಗಳಿಗೆ ಅಂಗದಲ್ಲಿ ಲಿಂಗವಿಲ್ಲ
ಮನದಲ್ಲಿ ಮಂತ್ರವಿಲ್ಲ; ಪ್ರಾಣದಲ್ಲಿ ಪ್ರಸಾದವಿಲ್ಲ. ಪ್ರಸಾದವಿಲ್ಲದವರಿಗೆ ಮುಕ್ತಿಯೆಂಬುದೆಂದೂ ಇಲ್ಲ ನೀ ಸಾಕ್ಷಿಯಾಗಿ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.