ವಿಕಿಸೋರ್ಸ್:ದೃಶ್ಯ ಸಂಪಾದಕ
ಕಸ್ತೂರ ಬಾ ೩೧೧ ಬಾ ಮತ್ತು ಗಾಂಧೀಜಿಯವರ ವಿವಾಹ ನೆರವೇರಿತು. ಆಗ ಇವರಿಬ್ಬರಿಗೂ ಹನ್ನೆರಡು ವರ್ಷ ವಯಸ್ಸು. ಸಂಪ್ರದಾಯವಂತ ಧನಿಕ ಮನೆತನದಲ್ಲಿ ಬೆಳೆದ ಕಸ್ತೂರ ಬಾ ಗೆ ಓದುಬರೆಹ ಬರುತ್ತಿರಲಿಲ್ಲ. ಗಾಂಧೀಜಿ ಆಕೆಯನ್ನು ವಿದ್ಯಾವಂತಳನ್ನಾಗಿ ಮಾಡಲು ತುಂಬ ಪ್ರಯತ್ನಪಟ್ಟರು. ಆದರೆ ಅದು ಫಲಿಸಲಿಲ್ಲ. ಕಸ್ತೂರ ಬಾಗೆ ಆಗ ಕಲಿಯುವ ಅಗತ್ಯ ಕಾಣಿಸಲಿಲ್ಲ. ಆದರೆ ಮುಂದೆ ಅದಕ್ಕಾಗಿ ಅವರು ಪಶ್ಚಾತ್ತಾಪಪಟ್ಟದ್ದುಂಟು. ಅಲ್ಪಸ್ವಲ್ಪ ಗುಜರಾಥಿಯನ್ನು ಮಾತ್ರ ಅವರು ಅಭ್ಯಾಸ ಮಾಡಿದರು. ಗಾಂಧೀಜಿಗೆ ತಮ್ಮ ಹೆಂಡತಿ ಆದರ್ಶ ಸತಿಯಾಗಬೇಕೆಂಬ ಹೆಬ್ಬಯಕೆಯಿತ್ತು. ಇದಕ್ಕಾಗಿ ಅವರು ಕಸ್ತೂರ ಬಾರ ಚಲನವಲನಗಳ ಮೇಲೆ ನಿರ್ಬಂಧ ಹೇರಿದರು. ಆಕೆ ತಮಗೆ ಸದಾ ವಿಧೇಯಳಾಗಿರಬೇಕೆಂದಾಶಿಸಿದರು. ಕಸ್ತೂರ ಬಾ ಎಂದೂ ಪತಿಗೆ ಅವಿಧೇಯರಾಗಿ ನಡೆಯದಿದ್ದರೂ ಪತಿಯ ಈ ಕಟ್ಟುಕಟ್ಟಳೆಗಳು ಅವರಿಗೆ ಸಹನವಾಗುತ್ತಿರಲಿಲ್ಲ. ಕೆಲವು ವೇಳೆ ಗಾಂಧೀಜಿಯ ಅಪ್ಪಣೆಯಿಲ್ಲದೆ ದೇವಸ್ಥಾನಕ್ಕೋ ಗೆಳತಿಯರ ಮನೆಗೋ ಹೋಗುತ್ತಿದ್ದರು. ಇದು ಗಾಂಧೀಜಿಗೆ ಅಪರಾಧವಾಗಿ ತೋರಿ ಅದು ಮುನಿಸಿನಲ್ಲಿ ಪರ್ಯವಸಾನವಾಗುತ್ತಿತ್ತು. ಕೋಪದಲ್ಲಿ ಒಮ್ಮೆ ಹೆಂಡತಿಯನ್ನು ತೌರುಮನೆಗೆ ಕಳುಹಿಸಿಬಿಟ್ಟಿದ್ದೂ ಉಂಟು. ಕಸ್ತೂರ ಬಾ ತುಟಿ ಎರಡು ಮಾಡದೆ ಇದೆಲ್ಲವನ್ನು ಸಹಿಸಿದರು. ತಮ್ಮ ಈ ವರ್ತನೆಗಾಗಿ ಗಾಂಧೀಜಿ ಮುಂದೆ ಜಿಗುಪ್ಸೆ ಪಟ್ಟುಕೊಂಡರು. ಇಂಗ್ಲೆಂಡಿನಲ್ಲಿ ಬಾರ್-ಅಟ್-ಲಾ ವ್ಯಾಸಂಗವನ್ನು ಮುಗಿಸಿ ಮರಳಿದ ಗಾಂಧೀಜಿ ವಕೀಲಿ ವೃತ್ತಿ ಕೈಗೊಂಡರು. ಆದರೆ ಅದರಲ್ಲಿ ಯಶಸ್ಸು ಸಿಗಲಿಲ್ಲ. ಅಷ್ಟರಲ್ಲಿ ದಕ್ಷಿಣ ಆಫ್ರಿಕದಿಂದ ಅವರಿಗೆ ಕರೆ ಬಂತು. ಮೊಕದ್ದಮೆಯೊಂದನ್ನು ನಡೆಸಿಕೊಡಲು ಹೋದ ಗಾಂಧೀಜಿ ಮೂರು ವರ್ಷ ಅಲ್ಲಿಯೇ ನಿಂತರು. ವಿದೇಶೀಯರ ದಬ್ಬಾಳಿಕೆಯಿಂದ ನರಳುತ್ತಿದ್ದ ಭಾರತೀಯರ ಉದ್ಧಾರಕ್ಕೆ ಕಂಕಣ ತೊಟ್ಟರು. ಮೂರು ವರ್ಷಗಳ ಅನಂತರ ಭಾರತಕ್ಕೆ ಮರಳಿ, ಕಸ್ತೂರ ಬಾ ಮತ್ತು ಎರಡು ಮಕ್ಕಳೊಂದಿಗೆ ಮತ್ತೆ ಆಫ್ರಿಕಕ್ಕೆ ಹೊರಟರು. ವಿದೇಶದಲ್ಲಿ ಗಾಂಧೀಜಿ ಮತ್ತು ಕಸ್ತೂರ ಬಾ ಅವರ ಸಂಸಾರ ಆರಂಭವಾಯಿತು. ಉನ್ನತಾದರ್ಶಧ್ಯೇಯ ಸಾಧನೆಗಾಗಿ ಅನವರತ ಶ್ರಮಿಸುತ್ತಿದ್ದ ಗಾಂಧೀಜಿಯವರೊಡನೆ ಬಾಳು ನಡೆಸುವಾಗ ಕಸ್ತೂರ ಬಾ ಅನೇಕ ಅಗ್ನಿಪರೀಕ್ಷೆಗಳನ್ನೆದುರಿಸಬೇಕಾಯಿತು. ಒಮ್ಮೆ ಅವರ ಮನೆಗೆ ಬಂದಿದ್ದ ಹರಿಜನರೊಬ್ಬರ ಕಲ್ಮಶಪಾತ್ರೆಯನ್ನು ತೊಳೆಯಲು ಬಾ ನಿರಾಕರಿಸಿದರು. ಕೋಪಗೊಂಡ ಗಾಂಧೀಜಿ ಅವರನ್ನು ಮನೆಯಿಂದಾಚೆ ತಳ್ಳಲು ಹೊರಟರು. ಬಾ ಅಳುತ್ತಾ, ಅಯ್ಯೋ ಇದೇನು ನಿಮಗೆ ಸ್ವಲ್ಪವೂ ನಾಚಿಕೆಯಿಲ್ಲವೇ, ಈ ವಿದೇಶದಲ್ಲಿ ನಾನೆಲ್ಲಿಗೆ ಹೋಗಲಿ? ಇಲ್ಲಿ ನನಗೆ ಯಾರಿದ್ದಾರೆ? ನಿಮ್ಮ ಹೆಂಡತಿಯಾದ ಮಾತ್ರಕ್ಕೆ ನಾನು ಈ ಎಲ್ಲ ಅವಮಾನಗಳನ್ನೂ ಸಹಿಸಿಕೊಂಡಿರಬೇಕೆ? ನಿಮ್ಮ ದಮ್ಮಯ್ಯ, ದಯವಿಟ್ಟು ಬಾಗಿಲು ಮುಚ್ಚಿ. ನೋಡಿದವರೇನಂದಾರು? ಎಂದು ದೈನ್ಯವಾಣಿಯಿಂದ ನಿವೇದಿಸಿಕೊಂಡರು. ಈ ಮಾತುಗಳನ್ನು ಕೇಳಿ ಗಾಂಧೀಜಿಗೆ ನಾಚಿಕೆಯಾಯಿತು. ತಮ್ಮ ಹೆಂಡತಿ ತಮ್ಮನ್ನು ಬಿಟ್ಟಿರಲು ಅಸಾಧ್ಯವಾದರೆ ಆಕೆಯನ್ನು ಬಿಟ್ಟಿರುವುದಕ್ಕೆ ತಮಗೂ ಸಾಧ್ಯವಿಲ್ಲ ಎಂದು ಬಗೆದರು. ಮತ್ತೊಮ್ಮೆ ಇಂಥದ್ದೇ ಪ್ರಸಂಗವೊಂದು ನಡೆಯಿತು. ಗಾಂಧೀಜಿ ವಿದೇಶದಿಂದ ಭಾರತಕ್ಕೆ ಮರಳುವಾಗ ಅಲ್ಲಿಯ ಭಾರತೀಯರೆಲ್ಲ ಅವರಿಗೆ ಅನೇಕ ಕಾಣಿಕೆಗಳನ್ನು ಕೊಟ್ಟರು. ಗಾಂಧೀಜಿಗೆ ಅವುಗಳನ್ನು ತೆಗೆದುಕೊಂಡು ಹೋಗಲಿಷ್ಟವಿರಲಿಲ್ಲ. ಆದರೆ ಇದಕ್ಕೆ ಬಾ ರವರನ್ನೊಪ್ಪಿಸುವುದು ತುಂಬಾ ಕಷ್ಟವಾಯಿತು. ಬಾ ಎಷ್ಟೆಷ್ಟೋ ವಾದಿಸಿದರೂ ಗಾಂಧೀಜಿಯ ನಿರ್ಧಾರ ಬದಲಾಗಲಿಲ್ಲ. ಕೊನೆಗೆ ಆ ಒಡವೆ ವಸ್ತುಗಳನ್ನೆಲ್ಲ ಅಲ್ಲಿಯೇ ಬಿಟ್ಟುಬರಲೊಪ್ಪಿದರು. ಹೀಗೆ ಅವರ ಆರಂಭದ ಸಂಸಾರ ಜೀವನದಲ್ಲಿ ಹಲವು ವಿರಸಗಳು ಬರುತ್ತಿದ್ದರೂ ಅವು ಶಾಂತಿಯಲ್ಲಿ ಮುಕ್ತಾಯವಾಗುತ್ತಿದ್ದವು. ಕಸ್ತೂರ ಬಾರವರ ಸಹನೆಯೇ ಕೊನೆಗೆ ಗೆಲ್ಲುತ್ತಿತ್ತು. ಕಸ್ತೂರ ಬಾ ಎಂತಹ ಸಂಕಷ್ಟ ಬಂದರೂ ಸಂಪ್ರದಾಯ ನಿಷ್ಠೆಯನ್ನು ಬಿಟ್ಟವರಲ್ಲ. ಆಚಾರ ವ್ಯವಹಾರಗಳನ್ನು ಮೀರಿ ನಡೆದವರಲ್ಲ. ಮೊದಲಿನಿಂದಲೂ ಅವರು ಬೆಳೆದ ವಾತಾವರಣ ಅಂಥದಾಗಿತ್ತು. ಇಮ್ಮೆ ಆಫ್ರಿಕದಲ್ಲಿದ್ದಾಗ ಅವರು ತೀವ್ರ ಕಾಯಿಲೆಗೊಳಗಾದರು. ಅದು ವಾಸಿಯಾದ ಮೇಲೆ ಶಕ್ತಿಗೊಡಲು ಮಾಂಸದ ಕಷಾಯವನ್ನು ಕುಡಿಯುವಂತೆ ವೈದ್ಯರು ಸೂಚಿಸಿದರು. ಆದರೆ ಆಕೆ ತಮ್ಮ ಪ್ರಾಣ ಹೋದರೂ ಮಾಂಸದ ಕಷಾಯವನ್ನು ಮುಟ್ಟುವುದಿಲ್ಲವೆಂದರು. ಗಾಂಧೀಜಿಯವರಿಗೂ ಅವರ ನಿರ್ಧಾರ ಸಂತೋಷವನ್ನೇ ತಂದಿತು. ಬಾ ಮತ್ತು ಬಾಪೂರವರ ಬಾಳಿನಲ್ಲಿ ೧೯೦೬ ಮಹತ್ವದ ವರ್ಷ. ಆಗ ಗಾಂಧೀಜಿ ಬ್ರಹ್ಮಚರ್ಯವ್ರತವನ್ನು ಸ್ವೀಕರಿಸಿದರು. ಕಸ್ತೂರ ಬಾ ಸಂತೋಷದಿಂದ ಅದಕ್ಕೆ ಸಮ್ಮತಿಯಿತ್ತರು. ಅವರ ಚಿತ್ರಸ್ಥೈರ್ಯ ಮತ್ತು ಅಪೂರ್ವ ಸಂಯಮಗಳನ್ನು ಕಂಡು ಗಾಂದೀಜಿಯವರೇ ಬೆರಗಾದರು. ಅಂದಿನಿಂದ ಅವರ ದಾಂಪತ್ಯ ಜೀವನ ಪವಿತ್ರವಾಯಿತು; ಋಷಿ ಸದೃಶವಾಯಿತು. ಗಾಂಧೀಜಿಯವರು ದಕ್ಷಿಣ ಆಫ್ರಿಕದಲ್ಲಿ ಆರಂಭಿಸಿದ ಸತ್ಯಾಗ್ರಹ ಚಳವಳಿಯಲ್ಲಿ ಕಸ್ತೂರ ಬಾ ಸ್ವಸಂತೋಷದಿಂದ ಭಾಗವಹಿಸಿದರು; ಆರು ವರ್ಷಗಳ ಕಾಲ ನಡೆದ ದೀರ್ಘ ಚಳವಳಿಯಲ್ಲಿ ಅನೇಕ ಬಾರಿ ಸೆರೆಗೆ ಹೋದರು. ಅವರ ಶ್ರದ್ಧೆ ಸಾಹಸಗಳನ್ನು ಕಂಡು ಎಲ್ಲರಿಗೂ ಬೆರಗಾಯಿತು. ಕಟ್ಟಕಡಗೆ ಜಯಗಳಿಸಿದ ಗಾಂಧೀಜಯವರನ್ನು ಕಂಡು ಬಾ ಕೃತಾರ್ಥರಾದರು. ಕೇವಲ ತಮ್ಮ ಸಂಸಾರದ ಜೀವನೋಪಾಯವನ್ನು ಗಳಿಸುವುದಕ್ಕೆ ದೇಶ ಬಿಟ್ಟು ಹೊರಟ ದಂಪತಿಗಳು ನೂರಾರು ಸಂಸಾರಗಳಿಗೆ ಜೀವನೋಪಾಯವನ್ನು ತೋರಿಸಿಕೊಟ್ಟು ಸ್ವದೇಶಕ್ಕೆ ಹಿಂದಿರುಗಿದರು. ಗಾಂಧೀಜಿ ಸಬರಮತಿಯಲ್ಲಿ ಸ್ಥಾಪಿಸಿದ ಆಶ್ರಮದಲ್ಲಿ ಕಸ್ತೂರ ಬಾ ರವರೇ ಮೊಟ್ಟಮೊದಲ ಶಿಷ್ಯೆ. ಇಡೀ ಆಶ್ರಮವೇ ಆಕೆಯ ಸಂಸಾರವಾಯಿತು. ಆಶ್ರಮದ ಎಲ್ಲ ಜವಾಬ್ದಾರಿಗಳನ್ನೂ ದಕ್ಷತೆಯಿಂದ ನಿರ್ವಹಿಸುತ್ತ ಅಲ್ಲಿಯ ಪ್ರತಿಯೊಬ್ಬ ನಿವಾಸಿಗೂ ಅವರು ತಾಯಿಯಂತಿದ್ದರು. ಅಲ್ಲಿಯೂ ಆಕೆ ಗಾಂಧೀಜಿಯ ಕಠಿಣ ಪರೀಕ್ಷೆಗಳಿಗೊಳಗಾಗಬೇಕಾಯಿತು. ಆಶ್ರಮದಲ್ಲಿ ಅಸ್ಪೃಶ್ಯ ಸಂಸಾರವೊಂದು ನೆಲೆಸಿದಾಗ ಆಶ್ರಮದ ಇತರರಂತೆ ಬಾ ರವರಿಗೂ ಅಸಮಾಧಾನವಾಯಿತು. ಇದರಿಂದ ನೊಂದ ಗಾಂಧೀಜಿಯವರು ಉಪವಾಸ ಕೈಗೊಂಡರು. ಕೊನೆಗೆ ಬಾ ಸಂಪೂರ್ಣವಾಗಿ ಪತಿಗೆ ಶರಣಾದರು. ಅಂದಿನಿಂದ ಅಸ್ಪೃಶ್ಯತೆಯೆಂಬುದು ಅವರ ಮನಸ್ಸಿನಲ್ಲಿ ಇಣುಕಲಿಲ್ಲ. ಗಾಂಧೀಜಿ ಹರಿಜನರ ಮೇಲ್ಮೆಗಾಗಿ ಕೈಗೊಂಡ ಪ್ರತಿಯೊಂದು ಕಾರ್ಯದಲ್ಲೂ ನೆರವಾಗಿ ನಿಂತು ಹೃತ್ಪೂರ್ವಕವಾಗಿ ಸೇವೆ ಸಲ್ಲಿಸಿದರು. ಇಷ್ಟೇ ಅಲ್ಲ, ಲಕ್ಷ್ಮಿ ಎಂಬ ಅನಾಥ ಹರಿಜನ ಕನ್ಯೆಯೊಬಳ್ಳನ್ನು ಅವರು ಸಾಕಿ ಸಲಹಿದರು. ೧೯೩೬ರಲ್ಲಿ ಅಮೃತಸರದಲ್ಲಿ ಏರ್ಪಡಿಸಿದ್ದ ಹರಿಜನರ ಮಹಾಸಭೆಗೆ ಬಾ ರವರೇ ಅಧ್ಯಕ್ಷಿಣಿ. ಅಂದು ಅವರು ಮಾಡಿದ ಸರಳ ಭಾಷಣದಲ್ಲಿ ಹರಿಜನರ ಬಗೆಗಿನ ಅನುಕಂಪ ಸಹಾನುಭೂತಿಗಳು ಸುವ್ಯಕ್ತವಾಗಿವೆ. ದ್ರವ್ಯ ಸಂಚಯಮಾಡುವುದು ಗಾಂಧೀಜಿಯವರ ಆದರ್ಶಕ್ಕೆ ವಿರೋಧವಾಗಿದ್ದಿತು. ಬಾ ತಮ್ಮ ಬಳಿಯಲ್ಲಿಟ್ಟುಕೊಂಡಿದ್ದ ಒಂದೆರಡು ರೂಪಾಯಿಗಳ ಸಮಾಚಾರ ಗಾಂಧೀಜಿಯವರಿಗೆ ಹೇಗೋ ತಿಳಿದು ಆಶ್ರಮದ ನಿವಾಸಿಗಳೆಲ್ಲರೆದುರಿಗೆ ಅದನ್ನು ಬಹಿರಂಗಪಡಿಸಿದರು. ಮತ್ತೊಮ್ಮೆ ಆಶ್ರಮದ ನಿವಾಸಿಯೊಬ್ಬರು ಅಸ್ವಸ್ಥರಾದಾಗ ಅವರಿಗೆ ತಕ್ಕ ಶುಶ್ರೂಷೆ ಮಾಡಲಿಲ್ಲವೆಂದು ತಿಳಿದು ಗಾಂಧೀಜಿ ಬಾ ರನ್ನು ಎಲ್ಲರೆದುರಿಗೂ ಆಕ್ಷೇಪಣೆ ಮಾಡಿದರು. ಮರುಮಾತನಾಡದೆ ಬಾ ಈ ನೋವು ಅವಮಾನಗಳನ್ನು ನುಂಗಿದರು. ೧೯೧೭ರಲ್ಲಿ ರೈತರ ಉದ್ಧಾರಕ್ಕಾಗಿ ಗಾಂಧೀಜಿ ಚಂಪಾರಣ್ಯದಲ್ಲಿ ಚಳವಳಿ ಪ್ರಾರಂಭಿಸಿದಾಗ ಕಸ್ತೂರ ಬಾ ಎಂದಿನಂತೆ ಪತಿಯ ದಾರಿಯಲ್ಲಿ ಅತ್ಯಾನಂದದಿಂದ ನಡದರು. ಹಳ್ಳಿ ಹಳ್ಳಿಗೂ ಹೋಗಿ ಅಲ್ಲಿಯ ಜನರಿಗೆ ಶಿಸ್ತು, ಶುಚಿ, ಸದಾಚಾರ, ಸದ್ವರ್ತನೆಗಳನ್ನು ಹೇಳಿಕೊಟ್ಟರು. ಮುಂದೆ ಪತಿಯೊಡನೆ ಅವರು ಕೈಗೊಂಡ ರಾಷ್ಟ್ರಸೇವೆಗೆ ಈ ಚಳವಳಿಯೇ ನಾಂದಿಯಾಯಿತು. ಅನಂತರ ಗಾಂಧೀಜಿ ಕೈಗೊಂಡ ಪ್ರತಿಯೊಂದು ಚಳವಳಿಯಲ್ಲೂ ಬಾ ಭಾಗವಹಿಸಿ ನಿರ್ಭಯದಿಂದ ತಮ್ಮ ಶಕ್ತಿ ಮೀರಿ ದೇಶಸೇವೆ ಮಾಡಿದರು. ೧೯೨೨ರ ಅಸಹಾಕರ ಚಳವಳಿಯ ಕಾಲದಲ್ಲಿ ಗಾಂಧೀಜಿಯವರು ಬಂಧನಕ್ಕೊಳಗಾದಾಗ ಅವರ ಸ್ಥಾನದಲ್ಲಿ ನಿಂತು ದಿಕ್ಕುಗೆಟ್ಟ ಜನತೆಗೆ ಮಾರ್ಗದರ್ಶನ ನೀಡಿ, ರಚನಾತ್ಮಕ ಹೋರಾಟಕ್ಕೆ ಕರೆಯಿತ್ತವರು ಕಸ್ತೂರ ಬಾ. ೧೯೩೦ ರಲ್ಲಿ ಕಾನೂನುಭಂಗ ಚಳವಳಿಯ ಬಿಸಿ ದೇಶದೆಲ್ಲೆಡೆ ವ್ಯಾಪಿಸಿತು. ಆಗ ಕಸ್ತೂರ ಬಾ ವಿಶ್ರಾಂತಿಯಿಲ್ಲದೆ ಹಗಲಿರುಳು ಒಂದೇ ಸಮನಾಗಿ ದುಡಿದರು. ಜನತೆಯ ಕರೆ ಬಂದೆಡೆ ಅವರು ಪ್ರತ್ಯಕ್ಷರಾಗುತ್ತಿದ್ದರು. ಸ್ಥಳೀಯ ಮುಖಂಡರನ್ನು ಕಾಣುತ್ತ, ಆಯಾ ಪ್ರದೇಶಗಳ ವಿದ್ಯಮಾನಗಳನ್ನು ಪರಿಶೀಲಿಸುತ್ತ, ಅಗತ್ಯಬಿದ್ದಾಗ ಹೇಳಿಕೆಗಳನ್ನು ಕೊಡುತ್ತ, ಆಗಾಗ್ಗೆ ಆಸ್ಪತ್ರೆಗಳಿಗೆ ಹೋಗಿ ಸತ್ಯಾಗ್ರಹಿಗಳ ಯೋಗಕ್ಷೇಮವನ್ನು ವಿಚಾರಿಸುತ್ತ, ಜನತೆಯಲ್ಲಿ ಧೈರ್ಯವನ್ನು ತುಂಬುತ್ತ ಅವರು ಅವಿರತವಾಗಿ ಶ್ರಮಿಸುತ್ತಿದ್ದರು. ಪತಿಯ ಪ್ರತಿನಿಧಿಯಾಗಿ ಜನತೆಯ ಮಧ್ಯೆ ನಿಂತು ಕಾಂಗ್ರೆಸಿನ ಸೂತ್ರವನ್ನು ಹಿಡಿದು ಕಾರ್ಯಭಾರ ನಿರ್ವಹಿಸಿದ ರೀತಿ ಅತ್ಯಾಶ್ಚರ್ಯಕರವಾದುದು. ಅವರ ದೇಹದ ದುರ್ಬಲತೆಯನ್ನು ಗಮನಿಸಿ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದಾಗ, ಬಾಪೂವಿನ ಸ್ಥಾನದಲ್ಲಿ ನಿಂತು, ಅವರ ಹಾಗೆ ಕೆಲಸ ಮಾಡುವ ಇಂಥ ಸಮಯಗಳು ನನ್ನ ಬಾಳಿನಲ್ಲಿ ಅಪೂರ್ವ. ಆದ್ದರಿಂದ ನನಗೀನ ವಿಶ್ರಾಂತಿಯ ಯೋಚನೆಯೇ ಇಲ್ಲ-ಎಂದು ಉತ್ತರಿಸಿದರು. ಅವರು ಮಾತೃವಾತ್ಸಲ್ಯದಿಂದ ಆಡುತ್ತಿದ್ದ ಮಾತುಗಳು ಜನತೆಯ ಹೃದಯವನ್ನು ನೇರವಾಗಿ ಮುಟ್ಟುತ್ತಿದ್ದವು. ನೊಂದವರು ಸೋತವರು ಕುಗ್ಗಿದವರು ಆಕೆಯ ಆಶ್ರಯ ಬಯಸುತ್ತಿದ್ದರು. ಅವರಿಗೆ ಅಲ್ಲಿ ಅಪೂರ್ವವಾದ ಸಾಂತ್ವನ ದೊರೆಯುತ್ತಿತ್ತು. ಹೆಂಡತಿ ಮತ್ತು ಮಗಳನ್ನು ಕಳೆದುಕೊಂಡ ರೈತನೊಬ್ಬ ಮೂರು ತಿಂಗಳ ಕೂಸಿನೊಡನೆ ಬಾ ರ ಬಳಿಗೆ ದೀನನಾಗಿ ಬಂದಾಗ ಬಾ ಅವನಿಗೆ ಆಶ್ರಯ ನೀಡಿದರು. ತನ್ನ ಒಬ್ಬನೇ ಮಗ ಬಾ