ವಿಭೂತಿ ವಿಭೂತಿಯೆಂಬ ಮಾತಿಂಗಂಜಲೇಕೋ
ಅದು ವಿಭೂತಿ ಅಹುದೊ ಅಲ್ಲೊ ಎಂಬ ಕ್ರಮವನರಿಯಬೇಕಲ್ಲದೆ ? ಕೊಂತವೆಂದರೆ ಕರುಳು ಹರಿವುದೆ ಇರಿಯದನ್ನಕ್ಕ ? ನಿಃಕ್ರಿಯ ನಿಃಕಾಮ್ಯ ನಿರುಪಾಧಿಕದಿಂದ ಶ್ರೇಷ್ಠಾಚಾರವಿಡಿದು ಚರಿಸುವುದು ವಿಭೂತಿ. ಅದಕ್ಕಂಜುವುದು
ಬೆಚ್ಚುವುದು
ಅದಕ್ಕೆ ತಪ್ಪಿದಡೆ ತಪ್ಪಿದುದು
ಅಲ್ಲಿ ಶಿಕ್ಷಿಸಲುಂಟು ಬುದ್ಧಿಗಲಿಸಲುಂಟು. ಅಂತಲ್ಲದೆ ಕುಮಂತ್ರವನೊಡಲೊಳಗಿಂಬಿಟ್ಟುಕೊಂಡು ಧನದುಪಾಧಿಕೆಗೆ ಅಹುದನಲ್ಲವ ಮಾಡಿ
ಕುಚೇಷ್ಟೆವಿಡಿದು ಚರಿಸುವುದು ವಿಭೂತಿಯೆ ? ಅಲ್ಲ. ಅದಕಂಜಲಿಲ್ಲ ಬೆಚ್ಚಲಿಲ್ಲ. ಅದೇನು ಕಾರಣವೆಂದೆಡೆ_ ವಿಭೂತಿಯಲ್ಲಾಗಿ. ಇಂತೀ ಉಭಯದ ಸಕೀಲವ ಸಜ್ಜನ ಶುದ್ಧಸಾತ್ವಿಕರು ಬಲ್ಲರಲ್ಲದೆ ಎಲ್ಲರೂ ಬಲ್ಲರೆ ಕೂಡಲಚೆನ್ನಸಂಗನಲ್ಲಿ ?