ಶರಣಸನ್ನಿಹಿತ ಐಕ್ಯವಹಲ್ಲಿ ಹರಿಬ್ರಹ್ಮಾದಿಗಳು ಮೊದಲಾದ ತೆತ್ತೀಸಾದಿ ದೇವರ್ಕಳುಘೇ ಉಘೇ ಎನ್ನುತ್ತಿರಲು ಐಕ್ಯ ಬಸವಣ್ಣಂಗೆಠಾವಾವುದಯ್ಯಾ ಎಂದಡೆ; ಅಂಗದ ಬಲದಲ್ಲಿ ಬ್ರಹ್ಮನ ಸ್ಥಾನ
ಎಡದಲ್ಲಿ ನಾರಾಯಣನ ಸ್ಥಾನ
ಒಲ್ಲೆನಯ್ಯಾ. ಕೊರಳು ಗರಳದ ಸ್ಥಾನ
ಬಾಯಿ ಅಪ್ಪುವಿನ ಸ್ಥಾನ
ನಾಸಿಕ ವಾಯುವಿನ ಸ್ಥಾನ
ಕಣ್ಗಳು ಅಗ್ನಿಯ ಸ್ಥಾನ
ಜಡೆ ಗಂಗೆಯ ಸ್ಥಾನ
ನೊಸಲು ಚಂದ್ರನ ಸ್ಥಾನ
ಹಿಂದು ಸೂರ್ಯನ ಸ್ಥಾನ
ಚರಣಂಗಳು ಅಷ್ಟದಿಕ್ಪಾಲಕರ ಸ್ಥಾನ
ಗುಹ್ಯ ಕಾಮನ ಸ್ಥಾನ
ಹಸ್ತಂಗಳು ಕಪಾಲ ಖಟ್ವಾಂಗ ತ್ರಿಶೂಲ ಡಮರುಗ ಸ್ಥಾನ
ದೇಹ ರುಂಡಮಾಲೆಯ ಸ್ಥಾನ
ಕರ್ಣ ನಾಗೇಂದ್ರನ ಸ್ಥಾನ
ಇಂತೀ ಸ್ಥಾನಂಗಳ ನಾನೊಲ್ಲೆನಯ್ಯಾ. ಹೃದಯಮಧ್ಯದ ಅಂತರಾಳದ ಏಕಪೀಠದ ಸಿಂಹಾಸನವ ತೆರಪ ಕೊಡು ಕೂಡಲಸಂಗಮದೇವಾ.