ಶ್ರೀಗುರು ತನ್ನ ಲಿಂಗವನೆ ಅಂಗದ ಮೇಲೆ ಬಿಜಯಂಗೆಯ್ಸಿದನಾಗಿ
ಆ ಲಿಂಗಕ್ಕೆ ನಾನು ಅಷ್ಟವಿಧಾರ್ಚನೆ
ಷೋಡಶೋಪಚಾರಗಳ ಮಾಡಿ
ಚತುರ್ವಿಧಫಲಪದಪುರುಷಾರ್ಥವ ಪಡೆದು
ಆ ಪರಿಭವಕ್ಕೆ ಬರಲೊಲ್ಲದೆ
ನಾನು ನಿಷ್ಕಳವೆಂಬ ಹೊಲದಲ್ಲಿ ಒಂದು ನಿಧಾನವ ಕಂಡೆ. ಆ ನಿಧಾನದ ಹೆಸರಾವುದೆಂದಡೆ; ತ್ರೈಲಿಂಗದ ಆದಿಮೂಲಾಂಕುರವೊಂದಾದ ಚರಲಿಂಗವೆಂದು. ಆ ಚರಲಿಂಗದ ಪಾದಾಂಬುವ ತಂದೆನ್ನ ಇಷ್ಟಲಿಂಗದ ಚತುರ್ವಿಧಫಲಪದಪುರುಷಾರ್ಥವೆಂಬ ಕರಂಗಳಂ ತೊಳೆವೆ. ಅದೆಂತೆಂದೆಡೆ; ಸಾಲೋಕ್ಯಂ ಚ ತು ಸಾಮೀಪ್ಯಂ ಸಾರೂಪ್ಯಂ ಚ ಸಾಯುಜ್ಯತಾ ತದುಪೇಕ್ಷಕಭಕ್ತಶ್ಚ gõ್ಞರವಂ ನರಕಂ ವ್ರಜೇತ್ ಎಂದುದಾಗಿ
ಆ ಚರಲಿಂಗದ ಪ್ರಸಾದವ ತಂದೆನ್ನ ಇಷ್ಟಲಿಂಗದ ಜೀವಕಳೆಯ ಮಾಡುವೆ ಅದೆಂತೆಂದೆಡೆ; ಸ್ವಯಂಪ್ರಕಾಶರೂಪಶ್ಚ ಜಂಗಮೋ ಹಿ ನಿಗದ್ಯತೇ ಮತ್ತಂ
ಜಂಗಮಸ್ಯ ಪದೋದಂ ಚ ಯುಕ್ತಂ ಲಿಂಗಾಭಿಷೇಚನೇ ತತ್ಪ್ರಸಾದೋ ಮಹಾದೇವ ನೈವೇದ್ಯಂ ಮಂಗಲಂ ಪರಂ ಎಂದುದಾಗಿ
ಆ ಲಿಂಗವೆ ಅಂಗ
ಅಂಗವೆ ಲಿಂಗ
ಆ ಲಿಂಗವೆ ಪ್ರಾಣ
ಆ ಪ್ರಾಣ ಲಿಂಗವಾದುದು. ಇದು ಚತುರ್ವಿಧಫಲಪದಪುರುಷಾರ್ಥವ ಮೀರಿದ ಘನವು. ಕೂಡಲಸಂಗಮದೇವಯ್ಯಾ. ಈ ದ್ವಯದ ಪರಿಯ ನಿಮ್ಮ ಶರಣರನೆ ಬಲ್ಲ.