ಶ್ರೀಪಾದರಾಜರ ಸಾಹಿತ್ಯ

ವಿಕಿಸೋರ್ಸ್ ಇಂದ
Jump to navigation Jump to search

ಶ್ರೀ ಹರಿಯ ಗುಣಗಾನ

ಇಕ್ಕೋ ನೋಡೆ ರಂಗನಾಥನ ಚಿಕ್ಕ ಪಾದವ (ಪ)

ಸಿಕ್ಕಿತೆ ಶ್ರೀಲಕ್ಷ್ಮೀಪತಿಯ ದಿವ್ಯ ಪಾದವ (ಅ.ಪ)

ಶಂಖ ಚಕ್ರ ಗದಾ ಪದ್ಮ ಅಂಕಿತ ಪಾದವ ಅಂಕುಶ ಕುಲಿಶ ಧ್ವಜರೇಖಾ ಅಂಕಿತ ಪಾದವ ಪಂಕಜಾಸನನ ಹೃದಯದಲ್ಲಿ ನಲಿಯುವ ಪಾದವ ಸಂಕಟಹರಣ ವೆಂಕಟೇಶನ ದಿವ್ಯ ಪಾದವ (೧)

ಲಲನೆ ಲಕ್ಷ್ಮಿಯಂಕದಲ್ಲಿ ನಲಿವ ಪಾದವ ಜಲಜಾಸನನ ಅಭೀಷ್ಟವೆಲ್ಲ ಸಲಿಸುವ ಪಾದವ ಮಲ್ಲರ ಗೆಲಿದು ಕಂಸಾಸುರನ ಕೊಂದ ಪಾದವ ಬಲಿಯ ಮೆಟ್ಟಿ ಭಾಗೀರಥಿಯ ಪಡೆದ ಪಾದವ (೨)

ಬಂಡೆಯ ಬಾಲೆಯ ಮಾಡಿದ ಉದ್ದಂಡ ಪಾದವ ಬಂಡಿಲಿದ್ದ ಶಕಟಾಸುರನ ಒದ್ದ ಪಾದವ ಅಂಡಜ ಹನುಮರ ಭುಜದೊಳೊಪ್ಪುವ ಪಾದವ ಕಂಡೆವೇ ಶ್ರೀರಂಗವಿಠಲನ ದಿವ್ಯ ಪಾದವ (೩)