ಸಂಚಿಕೆ-೧೦/ಅತ್ರಿಯಿಂದಗಸ್ತ್ಯಗೆ

ವಿಕಿಸೋರ್ಸ್ದಿಂದ
<<       ಅಯೋಧ್ಯಾ ಸಂಪುಟಂ     >>       ಕಿಷ್ಕಿಂದಾ ಸಂಪುಟಂ       <<      ಲಂಕಾ ಸಂಪುಟಂ        >>     ಶ್ರೀ ಸಂಪುಟಂ        <<


ಸಂಚಿಕೆ 10 – ಅತ್ರಿಯಿಂದಗಸ್ತ್ಯಂಗೆ


ಅತ್ರಿಮುನಿಯಾಶ್ರಮಕ್ಕಾರತಿಯನೆತ್ತಿತ್ತು

ರವಿಯ ಹೊಂದಳಿಗೆಯಿಂದೋಕುಳಿಯನೆರಚುವಾ

ತ್ರೇತಾ ವಿಪಿನಸಂಧ್ಯೆ. ಕೀರ್ತನಂಗೈದಿರ್ದುದಾ

ಆಶ್ರಮ ದ್ರುಮಶಿಖರ ನೀಡ ನಿಕಟಾಭಿಮುಖ

ಕಲಕಲ ತುಮುಲ ಪಕ್ಷಿಗಾನಂ. ಪವಿತ್ರಸತಿ,

ಅನಸೂಯೆ, ಸೃಷ್ಟಿಗೌರಿಯ ಕಲಾಪೂಜೆಯಂ

ಧ್ಯಾನಿಸುತ್ತಾನಂದ ಶಾಂತಿಯಿಂದಿರೆ, “ಮಹಾ

ಮುನಿಸತಿಯೆ, ಕೃಪೆದೋರೆಮಗೆ ನಿನ್ನ ಮಕ್ಕಳಿಗೆ !”

ಎಂಬ ದನಿಗೇಳ್ದತ್ತಕಡೆ ತಿರುಗಿದಳ್. ಮುದುಕಿ

ಕಣ್‌ ಕೀಲಿಸೀಕ್ಷಿಸಿರೆ ಗುರುತನರಿಯಲ್, “ರಾಮನಾಂ ೧೦

ಸೀತೆಯಿವಳೆನ್ನ ಸತಿ, ಲಕ್ಷ್ಮಣನೀತನೆನಗೆ

ಸಹೋದರಂ !” ಎನುತೆ ತನ್ನಂ ತಾನೆ ಪರಿಚಯಿಸಿ,

ಮಣಿಯೆ ಮುಂಬರಿದಾತನಂ, ಕಿರುಗೈದ ಕಣ್ಗಳಿಂ

ಕಿರಿಹಿಡಿದು ದಿಟ್ಟಿಸುತ್ತಾ ಶಿಥಿಲೆಯಾ ವಲಿತೆ

ಆ ಸ್ಥವಿರೆ ಮೇಲೆಳ್ದಳತ್ರಿಭಾರ್ಯೆ, ಪಿಂತೊರ್ಮೆ

ತನ್ನಯ ತಪೋಮಹಿಮೆಯಿಂದೆ ಬರಗಾಲಮಂ

ತಡೆಗಟ್ಟಿ, ಶೀರ್ಣವಾರಿಯ ಜಾಹ್ನವಿಗೆ ಸಲಿಲ

ಸಂಪೂರ್ಣತೆಯನೆಸಗಿ, ಮೇಣೀರೈದಿರುಳ್ಗಳಂ

ದೇವಕಾರ್ಯನಿಮಿತ್ತಮೊಂದಿರುಳ್ಮಾಡಿದಾ

ಪಾಂಡುರ ಜರಾ ಮೂರ್ಧಜೆಯ ವೇಪಮಾನಮಾ ೨೦

ವ್ರತಗೇಹಮಂ ದೇಹಮಂ ಪಿಡಿನೊಯ್ಯನೆಯೆ

ರಾಮಚಂದ್ರಂ. ವಂದಿಸಲ್ಕನಿಬರುಂ ಆರೈ,

ಆ ನಮಸ್ಕಾರ್ಯೆ, ಪರಸಿದಳತ್ರಿಋಷಿಭಾರ್ಯೆ

ಕಣ್‌ ತೊಯ್ಯೆ ಸೊಗಸಿ.

“ಬಾ ಕಂದ, ರಘುರಾಮಾರ್ಯ ;

ಬಾ ಮಗಳೆ, ವೈದೇಹಿ ; ಬಾರ, ಲಕ್ಷ್ಮಣದೇವ ;

ನಿಮ್ಮನತಿಥಿಗಳಾಗಿ ಪಡೆದ ನಮ್ಮಾಶ್ರಮಕೆ

ಬಾಳ್ ಪಣ್ತುದಿಂದು. ನೋಡದೊ, ಸಂಜೆ ನನ್ನವೊಲೆ

ರಾಮಾನುರಾಗದಿಂದುಜ್ವಲಿಸುತಸ್ತಗಿರಿಯಾ

ಪರ್ಣಶಾಲೆಗೆ ಪುಗಲ್ಕುಜ್ಜುಗಂಗೈಯುತಿದೆ !

ನೋಡಲ್ಲಿ : ಮಂದೈಪ ಕಳ್ತಲೆಯ ಮರ್ಬಿನೊಳ್ ೩೦

ಸ್ವಲ್ಪಪರ್ಣದ ಮಹೀರುಹಮುಂ ನಿರೀಕ್ಷಣೆಗೆ

ತೋರ್ಪುದು ಘನೀಭೂತಮಾಗಿ. ಆ ಬಂದರದೊ

ಸ್ನಾನಾರ್ದ್ರ ಸಲಿಲಸಂಪ್ಲುತ ವಲ್ಕಲರ್, ಕಲಶ

ಸಂಲಗ್ನ ಕರರಾ ತಪಸ್ವಿಗಳ್, ನದಿಯಿಂದೆ

ತಂತಮ್ಮ ಪರ್ಣಾಲಯಕ್ಕೆ. ಆ ಬಂದನದೊ

ಪತಿದೇವನಾತನೆ ಮಹರ್ಷಿ, ಭಗವಾನ್ ಅತ್ರಿ !”

ನಿರ್ವಿಕಲ್ಪ ಸಮಾಧಿಯೊಂದನಿರ್ವಚನೀಯ

ಮೌನಮಂ ಕರುವಿಟ್ಟ ಶಾಂತಿಯ ನಿಜಾಕೃತಿಯೊ

ಪೇಳೆನಲ್ಕೈತಂದನಾ ಸನಾತನ ಯೋಗಿ,

ಪ್ರತ್ಯಕ್ಷ ಪ್ರಾಚೀನತಾ ಪ್ರತಿಮನಾದೊಡಂ ೪೦

ನವ್ಯ ಕಾಲತ್ರಯ ಜ್ಞಾನಿ. ಮಣಿದೆಳೆಯರಂ

ಪರಸಿದನು ಮಂತ್ರಿಸುತೆ ಓಂ ಶಾಂತಿಯಂ. ನುಡಿಸಿ

ನಲ್ಮೆಯಿಂ ಕರೆದೊಯ್ದನೆಲೆವನೆಗೆ.

ಭರತನಂ

ಬೀಳ್ಕೊಂಡನಂತರಂ, ರಾವಣ ಸಹೋದರನ

ಖರನಲೆಗೆ ಮುನಿಗಣಂ ಚಿತ್ರಾದ್ರಿಯಂ ತ್ಯಜಿಸೆ,

ಕಹಿನೆನಹಿಗವಚತ್ತು ರಾಮಚಂದ್ರನುಮದಂ

ಕಳೆದು ಬಂದಾ ಸುದ್ದಿಯಂ ಕೇಳಿದತ್ರಿಋಷಿ

ನೋಡಿದನು ತನ್ನ ಮಡದಿಯ ಮೊಗವನಾಕೆಯುಂ

ಸೀತೆಯ ದೆಸೆಗೆ ನೋಡಿ ಸುಯ್ದಳೆರ್ದೆಗರಗಿ. “ಹಾ,

ವಿಧಿಯ ಕೃತಿಕೌಶಲಕವಧಿಯಿಹುದೆ ?” ಎಂದೆನುತೆ ೫೦

ತನಗೆ ತಾನಾಡಿಕೊಂಡಾ ಮುನಿ ಧರಾತ್ಮಜೆಯ

ಪತಿಗೆ, “ಶಿಲ್ಪಿಯ ನಿಶಿತ ಟಂಕದ ಮೊನೆಯ ಕಠಿನ

ಶಿಕ್ಷೆಗಲ್ಲದೆ ಪೊಣ್ಮುವುದೆ ಕಲಾಪೂರ್ಣಮಹ

ದೇವತಾ ವಿಗ್ರಹಂ ?” ಎನುತನ್ಯವಿಷಯಮಂ

ನುಡಿದೊಡಗಿದನ್ ದಂಡಕಾರಣ್ಯದಾ ಮತ್ತೆ

ರಾಕ್ಷಸೋಪದ್ರವದ ಕಷ್ಟಕಥೆಯಂ. ಕೇಳ್ದ

ರಾಮನ ಮನದಿ ಸಾಹಸಂ ಕುತೂಹಲಿಯಾಗಿ

ಹೆದೆಯೇರಿದತ್ತು ; ಲಕ್ಷ್ಮಣನ ಕೆಚ್ಚಿಗೆ ನಖಂ

ಮೂಡಿ, ಪರಚಿದತ್ತಾಶ್ರಮ ಮನದ ಮೃದುತನದ

ಮೆಲ್ಮೆತ್ತೆಯಂ ; ಭೀಮಕಾಂತತೆಗೆ ಪುಲಕಿಸುತೆ ೬೦

ಕಂಪಿಸಿದಳಾ ಸೀತೆ. ಕಂಡದಂ ಮುನಿಪತ್ನಿ

ಜನಕಸುತೆಯಂ ಬಿಗಿದು ತಕ್ಕೈಸಿ, ಮುಂದೊದಗಿ

ಬರಲಿರ್ಪ ಕಡುಪಿಗಿಂದೆಯೆ ಮಂತ್ರವರ್ಮಮಂ

ತೊಡಿಪವೊಲ್, ಪೇಳ್ದಳುಪದೇಶಮಂ ಪತಿವ್ರತಾ

ಪ್ರೇಮ ಮಹಿಮಾ ಶಕ್ತಿಯಂ. ಮೇಣ್ ಪ್ರೀತಿದಾನಮಂ

ಪೂವೊಂದನಿತ್ತಳಾಕೆಗೆ ಮಾನಸಿಕ ಸೃಷ್ಟಿಯಂ,

ಆಶೀರ್ವದಿಸಿ ರಕ್ಷಾಕವಚವೀವಂತೆವೋಲ್.

ಅತ್ತ ಮುನಿಯಂದೆ ಲಕ್ಷ್ಮಣ ರಾಮರರಿಯುತಿರೆ

ಮುಂದಿರ್ದ ಮಾರ್ಗದ ಮಹಾರಣ್ಯಗಹನಮಂ,

ಆಶ್ರಮಸ್ಥಳಗಳನ್ ಮೇಣನಾರ್ಯರ ಮತ್ತೆ ೭೦

ದಸ್ಯು ಕೈರಾತ ರುಧಿರಾಶನಪ್ರಿಯತೆಯಂ,

ಕೇಳ್ದಳಿತ್ತನಸೂಯೆ ಮಧುರಭಾಷಿಣಿ ಜನಕ

ಜಾತೆಯ ವದನದಿಂ ಸ್ವಯಂವರದ ವೃತ್ತಮಂ,

ವನವಾಸ ಕಾರಣಕಥೆಯನಂತೆ ಭರತನಾ

ಭ್ರಾತೃಭಕ್ತಿಯ ತಪೋನಿಷ್ಠೆಯಂ. ಅನ್ನೆಗಂ

ಕಾರ್ತಿಕಾಭ್ರದೊಳುದಿಸಿ ಬಂದನು ಸುಧಾಕರಂ

ಪರ್ಣಕುಟಿಯಾ ಕುಟಜಪರ್ಣಂಗಳೆಡೆಯಿಂದೆ

ರೌಪ್ಯಧಾರಾವೃಷ್ಟಿಯಂ ಸೂಸಿ, ಕಣ್ಮನಕೆ

ಮಾಯೆಯಂ ಬೀಸಿ. ಕಾಲಂ ನುಂಗಿ ನೊಣೆದಿರ್ದ

ತನ್ನೆಳವೆಯಂ ಮತ್ತೆ ಕಾಣ್ಬ ಮೋಹಕೆ ಮುಪ್ಪು ೮೦

ಕಾತರಿಸಿತೆನೆ, ಅತ್ರಿಸತಿ ಸೀತೆಯಂ ತನ್ನ

ಕೈಗಳಿಂ ಕೈಗೈದು ನೋಡಿ, ಮನದಣಿ ಮೆಚ್ಚಿ,

ಕೊಂಡಾಡಿ, ಪರಸಿ ಕಳುಹಿದಳಾಕೆಯಂ ತನ್ನ

ರಾಮಾಭಿರಾಮ ಶಯ್ಯಾತಲಕ್ಕೆ.

ಕಳೆದರಯ್

ಅತ್ರಿ ಅನಸೂಯಾ ಪವಿತ್ರ ಸನ್ನಿಧಿಯೊಳಾ

ಋಷಿರಜನಿಯಂ. ಉಷಾ ಮುಖದ ಕಿತ್ತಿಳೆಗೆಂಪು

ಮಾರ್ಪೊಳೆವ ಪೊಳೆಯ ನೀರಂ ಮಿಂದು, ಮುನಿಗಣಂ

ಬೆರೆಸಿ ಹುತವಹ ಕಾರ್ಯಮಂ ಗೆಯ್ದು, ಕಂಪಿಡಿದ

ಪೊಗೆಗಾಳಿಯೋಲೆಳ್ದು ಬೀಳ್ಕೊಂಡರನಿಬರಂ

ವಾಚಂ ಯಮಿಗಳಂ. ಅರಣ್ಯಗೋಚರರೊರೆಯೆ ೯೦

ಪಣ್ಪಲಂ ಪೂಗಳ್ಗೆ ತಾಂ ದಿನದಿನಂ ನಡೆದು

ಸಮೆದ ಬನವಟ್ಟೆಯಂ ; ಜರೆಯ ಬೀಳ್ಕೊಳುವಂತೆ

ಜವ್ವನಂ, ನರೆಯನುಳಿವಂತೆ ಹರಯಂ, ಮತ್ತೆ

ಸಾಹಸಂ ಶಾಂತಿಯನಗಲ್ವವೋಲ್ ಸೀತೆಯುಂ

ರಾಮನುಂ ಸೌಮಿತ್ರಿಯುಂ ಬಿಟ್ಟು ಮುನಿಗಳಂ

ಪೊಕ್ಕರಯ್ ದುರ್ಗಮದ ದಂಡಕಾರಣ್ಯಮಂ,

ಪೊಗುವಂತಿನಂ ಸಾಂದ್ರ ವರ್ಷಾಭ್ರಗಹ್ವರಕೆ.

ಪುಲಕಿಸಿತು ನಿಶ್ಶಬ್ದ ರುಂದ್ರ ದಂಡಕ ವನಂ

ಕೂಡೆ ಪುಲಕಿಸುವಂತೆ ಲಂಕಾ ಲಲಾಟಸ್ಥ

ರಾವಣ ವಿಧಿಯ ಮನಂ. ಕಂಪಿಸಿತು ಕಾಯಲತೆ ೧೦೦

ದಂಡಕಾರಣ್ಯ ದೈತ್ಯತೆಯನವಲೋಕಿಸುತೆ

ಭೂಸುತೆಗೆ. ಕಾಂತಾರ ಭೀಷಣಭ್ರುಕುಟಿಯಂ

ಪ್ರತಿಭಟನಮಂ ಕಂಡು ಕಣ್ಪೆಳರಿ ಲಕ್ಷ್ಮಣಂ

ನೋಡಿದನ್ ರಘುರಾಮನಂ ಧೈರ್ಯಭೀಮನಂ :

ಚಂಡಕರ ತೇಜಸ್ವಿ ಕೋದಂಡಧರನಾಗಿ

ನಡೆಯುತಿರ್ದನ್ ಧೀರ ಗಮನದಿಂ, ದೃಢತೆ ತಾಂ

ಮೈವೆತ್ತವೋಲ್ ಭಯಂಕರಂ ವಿಪುಲ ವಪು

ರಾಮಚಂದ್ರಂ.

ಪಕ್ಷಿ ನಿಷ್ಕೂಜಿತಂ. ನೀರವಂ,

ಝಿಲ್ಲಿಕಾ ನಾದ ಘರ್ಘರ ಘೋರ ಕರ್ಕಶಂ.

ತರು ಬೃಹದ್ಬಾಹುಕೃಷ್ಣಂ ಬಿಸಿಲ ಕಂಸನಂ ೧೧೦

ಕೊರಳೊತ್ತಿ ಗೋಣ್ಮುರಿಯೆ ಗತಿಸಿದಾತಪ ಶವಂ

ಛಾಯೆಯೋಲುರುಳ್ದುದೆನೆ ಪರ್ವಿದ ವನಾಂಧತಾ

ಭಯ ಭೈರವಂ :-ಪುಗುತ್ತಾ ವಿಪಿನ ಮಧ್ಯಮಂ

ಪೋಗುತಿರೆಯಿರೆ, ಕೂಡೆ ತಾನೆಳ್ದುದೊಂದದ್ಭುತಂ

ಧ್ವನಿ, ಪೊಯ್ದವೋಲಶನಿ. ನಡುಗೆ ವನಗಿರಿಯವನಿ,

ಪತಿಯಂ ಪಿಡಿದಳವನಿಜಾತೆ ಬೆಬ್ಬಳಿಸಿ. ತರು

ಮೂಲಾಗ್ರಮಳ್ಳಾಡಿದತ್ತು ; ಲಟಕಟಿಸಿತ್ತು

ಬಣಗು ಪಳು ; ವೇಗ ಸಂಜಾತ ವಾತಂ ಬೀಸಿ

ಕಸುಗಾಯಿ ಹಸಿಯೆಲೆಗಳುದುರಿ ಬಡಿದುವು ನೆಲಕೆ,

ಮುಗಿಲ್ಗವಣೆಯಾಲಿಕಲ್ಮಳೆಯಂತೆವೋಲ್. ನೋಡೆ, ೧೨೦

ಗಿರಿಯ ಶೃಂಗವೆ ನಡೆದು ಬರ್ಪಂತೆ, ದಂಡಕಾ

ವಿಪಿನದ ವಿಪತ್ತೆ ವಪುವೆತ್ತಂತೆ, ಬಂದುದಯ್

ಹೆಗ್ಗಣ್ಣ ಹೆಬ್ಬಾಯ ಹೇರೊಡಲ ರಕ್ಕಸನ

ಬೀಭತ್ಸ ಛಾಯೆಯ ಭೀಮ ಭೀತಿ ! ಪತ್ತೆಂಟು

ಸಿಂಹ ಕಾಳ್ಕೋಣ ಪೆರ್ಬುಲಿ ಜಿಂಕೆ ಮದ್ದಾನೆ

ಚರ್ಮಂಗಳಿಂ ಸಮೆದ ಚಿತ್ರಸೂತ್ರ ವಿಚಿತ್ರಮಂ

ವಸ್ತ್ರಜಾಲವನುಟ್ಟ ಕಾರ್ಗಪ್ಪು ಮೆಯ್ಕಿಂದೆ,

ತೆಂಗಿನ ಮರದ ತೆರನ ನೀಳ ತೋಳ್ ತುದಿಯಲ್ಲಿ,

ಕೌಂಗಿನುನ್ನತ ಶೂಲದುಗ್ರಾಗ್ರಮಿರಿದೆತ್ತಿ

ಚುರ್ಚಿ ಕೋದಿರ್ದೆರಡು ಬಿಸಿಯ ನೆತ್ತರ್ಬಸಿವ ೧೩೦

ಕೋರೆ ಪೆರ್ಬಂದಿಗಳ್ ಕೂಗುತೊದ್ದಾಡುತಿರೆ

ತೂಗಿ ತೊನೆಯುತ್ತಿರ್ದ ಭೀಕರದ ಕರದಿಂದೆ

ಬಂದನು ವಿರಾಧನತಿ ವಿಷಮ ವಿಷಮೃತ್ಯುವೋಲ್

ಭರದಿಂದೆ. ತುಡುಕಿ ಜನಕಜೆಯಡಿಯನೆತ್ತಿದನ್

ಸೀಗೆಮುಳ್‌ಮೆಳೆಯಂತೆ ಹೊದೆಹೊದೆ ಕೆದರ್ದವನ

ಮುಳ್ಮುಡಿಗೆ, ಶಾಪಹತನಾ ಪಾಪನಾಶಿನಿಗೆ

ಚೈತನ್ಯರೂಪಿಣಿಗೆ ಶಕ್ತಿಮಾತೆಗೆ ನಮಿಸುವೋಲ್ !

ಭೋರ್ಗರೆದನಿಂತೆಂದು ಮತ್ತೆ :

“ಜವ್ವನದೊಡನೆ,

ಜಟೆಯೊಡನೆ, ಕಪಟ ವಲ್ಕಲದೊಡನೆ, ಸಟೆಯೊಡನೆ,

ಪ್ರಮದೆಯೀ ಪೆಣ್ಣೊಡನೆ ಕ್ಷೀಣಜೀವಿತರಾಗಿ ೧೪೦

ಬಂದಿರಯ್ ನೀಮೆನಗಶನಮಾಗಿ ! ಜವ್ವನಕೆ

ಜಟೆಯೇಕೆ ? ನಾರುಡೆಗೆ ನಾರಿಯಿವಳೇಕೆ ? ಈ

ನಟ ತಪಸ್ಸೇಕೆ ಶರ ಚಾಪಾಸಿ ವೀರರಿಗೆ ?

ಭಾರ್ಯೆಯಹಳೆನಗೀ ವರಾರೋಹೆ ! ಬಾಳ್ವಾಸೆ

ನಿಮಗಿರಲ್ಕೋಡಿ ಬರ್ದುಕಿಂ !” ಎನುತೆ ಶೂಲದಿಂ

ಗುರಿಯಿಡುತ್ತಿರೆ, ಮೂರ್ಛೆವೋದತ್ತಿಗೆಯ ನೋಡಿ

ಸೌಮಿತ್ರಿ “ಅಗ್ರಜನೆ, ದೀರ್ಘದರ್ಶಿನಿ ದಿಟಂ

ಆ ಕೈಕೆ !” ಎಂದಾರ್ಭಟಿಸಿ ಬಾಣಮಂ ಪೂಡಿ

ರಯವನೆಚ್ಚನ್ ರಾಕ್ಷಸಾಕೃತಿಗೆ. ಕೀಸಿದಾ

ಕೂರಂಬುಗಳಿಗೊಂದಿನಿತೆ ಘಾಸಿಯಾಗುತ್ತೆ ೧೫೦

ಪಿಶಿತಾಶನುರಿದೆದ್ದನ್. ಇಳುಹಿದನಿಳಾತಳಕೆ

ಮಸ್ತಕದಿ ಧರಿಸಿದ ಧರಾತ್ಮಜೆಯನ್. ಎತ್ತಿದನ್

ಮಿತ್ತುಕೋರೆಯ ಕೈದುವಂ, ವಿಷಮ ಶೂಲಮಂ.

ಮುಂಬರಿದನದ್ರಿವೋಲ್ ರಾಮಲಕ್ಷ್ಮಣರೆಡೆಗೆ

ಯಮದೃಢಗಮನದಿಂದೆ. “ಕಮಠ ಖರ್ಪರ ಸಮಂ

ರಕ್ಕಸನ ಮೆಯ್. ರೂಕ್ಷನಿಗೆ ಕಣ್ಗಳಲ್ಲದೆಯೆ

ಬೇರೆ ಗುರಿ ಸಲ್ಲದಯ್.” ರಾಮನೆನೆ ಲಕ್ಷ್ಮಣಂ

ಗರಿಯ ರೆಕ್ಕೆಯ ಗರುಡವೇಗದ ಸರಳನೆಚ್ಚನ್,

ಕುರುಡುಗೈದನ್ ವಿರಾಧನ ಕಣ್ಗಳಂ ಬಸಿದು

ತೋಡಿ. ಕೋಪಕೆ, ಕಣ್ಣಳಿಯಲಂಧರೋಷದಿಂ ೧೬೦

ತೋಳ್ಗಳಂ ಬೀಸಿ, ಪಳುವಂ ಗುಡಿಸಿದನು ಸೋಸಿ

ರಾಕ್ಷಸಂ. ತಡವಿ ತುಡುಕಿದನಿರ್ವರಂ ಮೃತ್ಯುಮಯ

ಮುಷ್ಟಿಯೊಳ್. ಪೊತ್ತೋಡಿದಂ ಮಿಗಗಳಂ ಕಚ್ಚಿ

ಕೊಂಡುಯ್ವ ವ್ಯಾಘ್ರನೋಲಂತೆ. ಸೀತಾಕಾಂತೆ

ನೋಡಿ ನಡನಡ ನಡುಗಿ ಹಿಂಬಾಲಿಸೋಡಿದಳ್ :

“ಓ ವಿಧಿಯೆ, ರಕ್ಷಿಸಯ್ ! ರಕ್ಷಿಸೋ ರಕ್ಷಿಸಯ್

ದಶರಥೇಂದ್ರ ಪ್ರಿಯ ಕುಮಾರರಂ ! ಕೈಮುಗಿದು

ಬೇಡುವೆನೊ, ರಾಕ್ಷಸೋತ್ತಮ, ನನ್ನನಾದೊಡಂ

ನೀಡುವೆನೊ, ಬಿಡೊ ರಾಮಚಂದ್ರನಂ, ಕಾಪಿಡಯ್

ಊರ್ಮಿಳಾ ಪ್ರಾಣೇಶನಂ !” ರಾಮಖಡ್ಗಕೆ ಮತ್ತೆ ೧೭೦

ಲಕ್ಷ್ಮಣಾಸಿಗೆ ಬಿಳ್ದುವಸುರ ಬಾಹುದ್ವಯಂ

ದೊಪ್ಪ ದೊಪ್ಪನೆ ; ಕೂಡೆ ಪಳುವರಚೆ ಕೆಡೆದುದಾ

ದೈತ್ಯನೊಡಲೊಂದು ಹೆಗ್ಗುಡ್ಡದೋಲ್. ಕಾಡ ಪಳು

ಕೆಸರೇಳೆ ಹೆಪ್ಪುಗಟ್ಟಿದುದು ನೆತ್ತರ್ ವೊನಲ್.

ಬೀಭತ್ಸದಿಂದೆಯುಂ ಸೌಂದರ್ಯಮುದ್ಭವಿಪಂತೆ

ಮೈದೋರ್ದನಮೃತಮಯ ಗಂಧರ್ವನೊರ್ವನಾ

ಮೃತದೇಹದಿಂದೆ : “ಜಯ, ಜಯ, ಹೇ ಮಹಾಪುರುಷ !

ಮನ್ನಿಸೆನ್ನಂ ; ನಾಂ ಕುಬೇರನಾಳ್ ತುಂಬುರಂ.

ರಂಭೆಯ ನಿಮಿತ್ತಮೊಳಗಾದೆನೀ ಶಾಪಕ್ಕೆ.

ಶಾಪಮೋಚನೆ ಗೈದಿರೆನಗೆ. ವಂದನೆ ನಿಮಗೆ. ೧೮೦

ದಂಡಕಾರಣ್ಯಮಿದು ಭೀರುಗೆ ಭಯಂಕರಂ ;

ರಸಿಕ ಧೀರಗೆ ಕಲಾಶಂಕರಂ : ನನ್ನಂತೆವೋಲ್ !

ಮುಂಬರಿಯಿಮೆರಡು ಗಾವುದ ದೂರದಾಚೆಯೊಳ್

ಶರಭಂಗ ಋಷ್ಯಾಶ್ರಮಂ. ನಮಿಪೆನಿದೊ ಪೋಪೆನಾಂ.

ಸೊಗಮಕ್ಕೆ, ಗೆಲಮಕ್ಕೆ, ತುದಿಗೆ ಮಂಗಳಮಕ್ಕೆ !”

ಗಂಧರ್ವನಾದನಂತರ್ಧಾನಮಿಂತೆಂದು

ಪರಸಿ. ಸೂಚಿತ ಪಥಂಬಿಡಿದು, ಬನದಿಂ ಬನಕೆ

ಬೇಗವೇಗಂ ನಡೆದು, ಬೈಗುವೊಳ್ತಿನ ಕಡೆಗೆ

ಸಾರ್ತಂದರಾಶ್ರಮಕೆ ಶರಭಂಗನಾ. ದಸ್ಯು

ಹಿಂಸೆಗೆ ಸಿಲುಕಿ, ಮರಣ ಮುಖನಾಗಿ, ಮಾತಳಿದು ೧೯೦

ಮಲಗಿರ್ದ ಚರ್ಮಾಸ್ಥಿಮಾತ್ರನಂ ಕರುಣಕರ

ಗಾತ್ರನಂ ಶರಭಂಗನಂ ಕಂಡು ಮರುಗಿದುದು

ರಾಮನಾತ್ಮಂ ; ಕೋಪದೌರ್ವಾನಳಂ ಜ್ವಲಿಸಿ

ನೀಡಿದತ್ತರಸಿದತ್ತೇಳು ನಾಲಗೆಗಳಂ

ರಕ್ಕಸರ ಮೈಬೇಳ್ವೆಯಂ. ಕೇಳ್ದನನಿತುಮಂ

ದುಷ್ಟದಾನವ ಧೂರ್ತತೆಯ ಕಥೆಯನಾರ್ಯರಾ

ವ್ಯಥೆಯನತಿ ಕಷ್ಟಮಂ. ರಕ್ಷೆಯಂ ಬೇಡಿದಾ

ಯತಿಗಳಿಗಭಯವಿತ್ತನಿಂತೆಂದು :

“ಪೂಜ್ಯರಿರೆ,

ತನ್ನ ಕಜ್ಜಕೆ ಬಂದನಡವಿಗೆಂದರಿಯದಿರಿ.

ತಂದೆಯಾಣತಿ ನೆವಂ. ದಿಟಮೊರೆವೆನಾಲಿಸಿಂ. ೨೦೦

ಭೀಮಕರ್ಮಿಗಳಾರ್ಯವೈರಿಗಳ್ ಅನಾತ್ಮರಂ

ಋಷಿಕಂಟಕರನಿರಿವುದೆನ್ನಯ ಮನಂ. ನಿಜಕೆ

ನಾಥರೀ ಪೃಥಿವಿಗಿನಕುಲರಲ್ತೆ ? ಪ್ರಜೆಗಳಂ

ಪಾಲಿಪುದವರ ಪರಮ ಕುಲಧರ್ಮವೆನೆ, ನಿಮ್ಮ

ರಕ್ಷೆಗೋಸುಗಮೆನಗೆ ದುಷ್ಟಶಿಕ್ಷಣಮರಂ.”

ಕೆಲದಿನದನಂತರಂ ತೀರ್ದ ಶಾಂತಾತ್ಮಂಗೆ

ಶರಭಂಗ ಋಷಿಗಪರಕರ್ಮಂಗಳಂ ರಚಿಸಿ,

ಕಂಗೆಟ್ಟ ಕಿತ್ತಡಿಗಳಿಗೆ ಧೈರ್ಯಮಂ ಪೇಳ್ದು

ಪೊರಮಟ್ಟರಲ್ಲಿಂ ಸುತೀಕ್ಷ್ಣಋಷ್ಯಾಶ್ರಮಕ್ಕೆ.

ಒಡನೊಡನೆ ಬಂದ ವೈಖಾನಸರನೊಡಗೂಡಿ, ೨೧೦

ಮಲೆಯ ಪಳುವಟ್ಟೆಯಂ ಕೊಂಡು ನಡೆತರೆ ಮುಂದೆ

ಮೂಡಿದತ್ತೊಂದು ಶೈಲಂ ವಿಪುಲಮದ್ಭುತಂ,

ಕಾರ ಮೊದಲೊಳ್ ಬಾನ ಕರೆಯಿಂದಣಂ ತೋರಿ

ಮೆಲ್ಲನೊಯ್ಯನೆ ಭೀಮಗಾತ್ರಕ್ಕುರ್ಬಿ ಬೆಳೆದು

ಗಗನ ಶಿಖರಕ್ಕೇರ್ವ ಮೇಘಗೋಪುರದಂತೆ

ನೀಲೋನ್ನತಂ ಮಹಾ. ಪೊಕ್ಕದರ ತಳ್ಪಲಂ

ಬಹುಪುಷ್ಪಪೂರ್ಣ ಫಲಕುಜಕೀರ್ಣಮಟವಿಯಂ

ಕಂಡರು ಸುತೀಕ್ಷ್ಣನಾಶ್ರಮವನೇಕಾಂತಮಂ

ಭಯಕಾಂತಮಂ. ನಮಿಸಿದರು ತಪೋರುದ್ರಂಗೆ,

ಚಿತ್ರಕೂಟಕೆ ರಾಮನೈತಂದ ವಾರ್ತೆಯಂ ೨೨೦

ಕೇಳ್ದಂದಿನಿಂದಾತನಂ ಪ್ರತೀಕ್ಷಿಸುತಿರ್ದ

ಕೆಂಜೆಡೆಯ ಕಿತ್ತಡಿಗೆ. ಋಷಿಸಂಗ ಮಂಗಲದಿಂ

ತಿಂಗಳೊಂದಂ ನಿಂದು, ಕೋಳ್ಮಿಗಗಳಟ್ಟುಳಿಯ

ಕೊಂದು, ಸುತ್ತಣ ಮಲೆಯ ಸೀಮೆಯಂ ಮೇಣಲ್ಲಲ್ಲಿ

ಸಿಂಗರಿಸಿ ಪರ್ವಿದ ತಪೋವನ ಸಮೂಹಮಂ

ಆರ್ಯಾಶ್ರಮಂಗಳಂ ನೋಡುವಾಶೆಗೆ ಮುನಿಯ

ಹರಕೆಯ ಹಿತಾಶಂಸೆಯಂ ಪಡೆಯುತಲ್ಲಿಂದೆ

ಪೊರಮಟ್ಟರವರು ಯಾತ್ರಿಕ ಮುನಿಗಣಂವೆರಸಿ,

ಮೊದಲ ಮಳೆ ಮೀಯಿಸಿದ ಮಲೆಯನಾಡಿನ ಸಿರಿಯ

ಚೆಲುವನೀಂಟಲ್ಕಲೆವ ಕಲೆ ನೋಂತ ಕಬ್ಬಿಗನ ೨೩೦

ಕಣ್ದಿಟ್ಟಿಯಂತೆ. ಐತರೆ ಮುಂದೆ, ಏನೆಂಬೆ ?

ಅಕ್ಷಿಗೌತಣವಾಯ್ತು ; ಹೂವಾಯ್ತು ; ಜೇನಾಯ್ತು ;

ಪಕ್ಷಿಯಿಂಚರವಾಯಿತಿನಿಯಳಪ್ಪುಗೆಯಾಯ್ತು ;

ಪುಣ್ಯಸಲಿಲಪ್ರಸನ್ನತೆಯಾಯಿತಾ ನೆಲಂ :

ವನದೇವಿಯೋಲಗವೊ, ಜಲದೇವಿಯಾಲಯವೊ,

ಸೌಂದರ್ಯಲಕ್ಷ್ಮಿ ನಿರತಂ ಕ್ರೀಡಿಪುಯ್ಯಲೆಯೊ,

ಇಂದ್ರಧನುರಿಂದ್ರಿಯಗಳಿಂದ್ರನಾಡುಂಬೊಲವೊ,

ರತಿಮದನರೋಕುಳಿಯ ಶೃಂಗಾರಮಂಟಪವೊ,

ರಸಋಷಿಗಳಾನಂದ ನಂದನವೊ, ಮಂದಿರವೊ

ಚಂದ್ರ ಚೈತ್ರರಿಗೆಂಬವೋಲಪ್ಪುತಾತ್ಮಮಂ ೨೪೦

ಶೈಲ ಕಂದರ ವಿಪಿನ ವೈಭವದಿನೆಸೆದುದಾ

ತೆರೆತೆರೆಯಲೆವ ಮಲೆಯಸೀಮೆ ! ಆ ಸೊಬಗಿಗೆರ್ದೆ

ಸೋಲ್ದುರ್ಕ್ಕಿದತ್ತು ಸೀತೆಗೆ ಮೈತ್ರಿ. ಸ್ವಾಮಿಯಂ

ಪ್ರೇಮದಿಂ ನೋಡಿ ನುಡಿದಳ್ ನಗೆಮುಗುಳ್ಮಲರೆ

ನಯದಿಂದೆ :

“ಬಗೆಯೊಂದು ಶಂಕೆಯನರುಹಿದಪೆನಾಂ,

ಹೃದಯಪ್ರಿಯ, ಬಾಲಭಾಷಿತನಾದರದಿಂದೆ

ಕೇಳಿ ಕರುಣಿಪುದೆನಗೆ : ಋಷಿಗಳ್ಗೆ ನುಡಿಗೊಟ್ಟೆಯಯ್ ;

ರಾಕ್ಷಸ ವಧೆಗೆ ಪೂಣ್ದೆಯಯ್ ; ವೈರಮಂ ವ್ರತವಾಂತೆಯಯ್,

ಹೇ ಸ್ನೇಹನಿಧಿ ! ಒರ್ವನನ್ಯಾಯಿಯಾದೊಡೇಂ

ಸರ್ವರಾಕ್ಷಸರೆಂತು ಸಂಹಾರಕರ್ಹರಯ್ ? ೨೫೦

ಕ್ಷಾತ್ರಕೇಂ ಕ್ರೌರ್ಯಂ ಕಿರೀಟಮೇ ?”

“ದರಹಸಿತೆ,

ರಾಜಋಷಿ ಜನಕಸುತೆ, ಆ ತಂದೆಯ ಮಗಳ್ಗೆ

ತಕ್ಕುದನೆ ನುಡಿದೆ. ವಿಶ್ವಪ್ರೇಮ ಸಿದ್ಧನಿಂ

ಪಡೆದಿರ್ಪ ಕರುಣೆಯನ್ನೊರೆಯುತಿಹೆಯಾದೊಡಂ,

ಪೂಜ್ಯಮಹುದಾದೊಡಾ ತತ್ವಂ ಪೂರ್ಣದರ್ಶನಕೆ

ಪೊರ್ದದಿರ್ಪುದು, ಸರಳೆ, ಸಾತ್ವಿಕವ್ರತಿಗಳ್ಗೆ

ಸಂಕಟವನೊಡರಿಸುವರೆನ್ನ ಬಾಣಕ್ಕೆ ಬಲಿ.

ಬಾಣಮೊಂದೆಯೆ ಚುರ್ಚಿ ಕೊಲ್ದುದಾದೊಡಮದಕೆ

ಬಿಲ್ಲು ಹೆದೆ ಕೊಪ್ಪು ಕೈಯನಿತುಮುಂ ನೆರಮಾಗಿ

ಕೊಲೆಗೆ ಹೊಣೆಯಪ್ಪುವಂತೆಯೆ ದುಷ್ಟಘಾತುಕಂ ೨೬೦

ತಾನೊರ್ವ ರಕ್ಕಸನಾದರೇನವಗೆ ಬೆಂಬಲಂ

ಸರ್ವ ರಾಕ್ಷಸರಲ್ತೆ ? ಕೃತಿ ಏಕಮಾದೊಡಂ

ಮಾಳ್ಪಾತನಿರ್ಪ ಸೀಮೆಯ ಜನದ ಸಂಸ್ಕೃತಿಗೆ

ಕುರುಪಲ್ತೆ ತಾಂ? ಆರ್ಯ ಸಂಸ್ಕೃತಿಯ ಸುಕೃತಮಂ

ರೂಕ್ಷರೀತಿಯೊಳಡ್ಡಗಟ್ಟುವೀ ರಾಕ್ಷಸರ

ಗಾಮ್ಪತನಮಂ ಮುರಿಯಲಾಂ ಪೂಣ್ದೆನಿನ್ನದಂ,

ಆ ನುಡಿಯ ಸಿಡಿಲಂ, ತಡೆವರಿಹರೆ ? ಶರಭಂಗ

ಋಷಿಗಾದ ಗತಿಯೆ ಮುನಿಗಳಿಗೆಲ್ಲಮಪ್ಪುದೌ,

ಮಿಥಿಳೇಂದ್ರ ಸಂಜಾತೆ, ಬತ್ತಳಿಕೆಯಂ ಬಿಟ್ಟು

ನಾಂ ಕಮಂಡಲುವಿಡಯೆ ! ಶರಧಿ ಮೇಖಲೆಯಾದ ೨೭೦

ಪೃಥಿವೀಶ ಭರತೇಂದ್ರನಾರ್ಯರಕ್ಷಾವ್ರತಂ.

ಪ್ರತಿನಿಧಿಗಳವಗೆ ನಾಂ. ಕರ್ತವ್ಯವೆಮಗಾಯ್ತು

ಋಷಿ ರಕ್ಷಣಂ. ಇಷ್ಟಮುಂ ಮತ್ತೆ ನಿಷ್ಠೆಯುಂ

ಗೋಷ್ಠಿಗೊಂಡೊರೆಯುತಿಹವೀ ದಸ್ಯುಹನನಮಂ !”

ಪತಿಯ ದೃಢವಾಣಿಯಂ ವಾದಮಂ ಕೇಳ್ದು ಸತಿ

ಪೇಳ್ದಳಿನಿತಂಜಿದೋಲಿಂತು : “ತೊದಲಾಗುತಿದೆ

ನನ್ನ ನಾಲಗೆ ನಿನ್ನ ದನಿಗೇಳ್ದು, ಮನದನ್ನ,

ಪುಣ್ಯಾಶ್ರಮಂಗಳಂ ನೆವವೊಡ್ಡುತೈತಂದು

ತಮ್ಮ ನೆಲಮಂ ಸುಲಿಯುತೊಯ್ಯನೆ ವಸತಿಗೈದು,

ದಿನದಿನಕೆ ತಮ್ಮನೊತ್ತುವರಾರ್ಯರಾದೊಡಂ ೨೮೦

ದಸ್ಯುಗಳೆ ದಿಟಮಲ್ತೆ ?”

“ತಿಮಿರಕ್ಕೆ ರವಿ ದಸ್ಯು.

ಜ್ಞಾನಮಜ್ಞಾನಕ್ಕೆ ದಸ್ಯು. ಮಾಯೆಯನಳಿಸಿ

ಮನುಜಹೃದಯವನಾಕ್ರಮಿಸುತಾತ್ಮಮಂ ತನ್ನ

ಕೃಪೆಗುಯ್ವ ಪರಮಾತ್ಮನುಂ ದಸ್ಯು. ನಾಂ ನಿನಗೆ

ನೀನೆನಗೆ ದಸ್ಯು. ಕೇಳಂತೆವೋಲಾರ್ಯರುಂ

ದಸ್ಯುಗಳ್ ದಂಡಕಾರಣ್ಯ ದಕ್ಷಿಣ ಜನದ

ನಯಕೆ. ಪಿರಿತನಕೆ ಮಣಿವುದೆ ಕಿರಿಯ ಸಂಸ್ಕೃತಿಗೆ

ಮೇಲ್ಮೆ. ಪುಣ್ಯಂ ವಿಪತ್ತಿನ ತೆರದಿನೋರೊರ್ಮೆ

ದೈತ್ಯನೋಲಾಕ್ರಮಿಪುದಾತ್ಮಮಂ ಜನತೆಯಂ

ನಾಡೂರ್ಗಳಂ, ಕೃಪಾಬಾಹು ನೀಡಲ್ಕದರ ೨೯೦

ನೆಳಲಲ್ತೆ ಪೇಳ್ ರಾಹು !”

ಮಥಿಸುತೆ ಮನದಿ ವಚನಮಂ

ಪತಿದೇವನಾ, ಮುಂದೆ ಗಮಿಸಿದಳು ವೈದೇಹಿ

ಬೆಟ್ಟ ಕೆರೆ ಕಾಡು ಹೊಳೆ ಮಿಗವಕ್ಕಿ ಹಂದಿ ಹುಲಿ

ತರತರದ ನೋಟಮಂ ಬೆದರುಮಿಗದೋಟಮಂ

ಕೌತುಕದ ಕೂಟಮಂ ಕಣ್ಗೆ ತಣಿವಿಲ್ಲವೆನೆ

ಕಂಡು, ಬಣ್ಣಿಸಿ, ಸವಿದು, ತೋರಿ, ನಡೆದಿರಲಿಂತು,

ಕಂತು ಕೂರ್ತಾತ್ಮರತಿಯೊಡನೆ ಈಸಾಡಲ್ಕೆ

ರಾಗಮಗ್ಗಲಿಸಿತೆನೆ, ಸಂಜೆ ಓಕುಳಿಗೈದ

ಸಲಿಲ ಸುಂದರ ಯೋಜನಾಯತ ತಟಾಕಮಂ

ಕಂಡರೆದುರಿನಲಿ. ಏಕಾಂತತಾ ವೈಣಿಕಂ ೩೦೦

ಮಿಡಿವನೊ ವಿಯದ್ವಿಪಂಚಿಕೆಯ ನಿಶ್ಶಬ್ದತಾ

ತಂತ್ರಿಯನೆನಲ್ಕೆ, ಬಂದತ್ತಲೆದು ಸುಶ್ರುತಿಯ

ಗೀತ ವಾದಿತ್ರ ಮಧುಮಧುರ ಘೋಷಂ. “ನೋಡೆ

ಸುತ್ತಣೀ ವನದೇಶಮೆತ್ತಲುಂ ನಿರ್ಜನಂ.

ವಾದಿತ್ರ ನಿಸ್ವನಮ್ ಇದೆತ್ತಣಿಂ ಬಂದಪುದೊ ?

ಸೋಜಿಗಂ !” ಎಂದೆಲ್ಲರಾ ಕಿವಿಸವಿಯ ದನಿಗೆ

ಮಾರುವೋಗಿರೆ, ಧರ್ಮಭೃತನೆಂಬ ಸಹಚರಂ

ಮುನಿ :

“ಈ ಸರೋವರಂ, ಇಕ್ಷ್ವಾಕುಕುಲಮಣಿಯೆ,

ಪಂಚಾಪ್ಸರಂ. ಮಾಂಡಕರ್ಣಿಯ ಮಹಾಮುನಿಯ

ಭೋಗಮಂದಿರಮಿರ್ಪುದಿದರಂತರಂಗದೊಳ್. ೩೧೦

ಆತನುಗ್ರ ತಪಸೈಗತಿಭೀತರಾಗುತಾ

ತ್ರಿದಶರಟ್ಟಿದರೈದು ಮಿಂಚುಮೆಯ್ ಪೆಣ್ಗಳಂ.

ಭೋಗವಶನಾದನಯ್ ಯೋಗಿ. ಗೃಹಮಂ ರಚಿಸಿ

ಕಾಣ್ಬೇ ತಟಾಕ ತೀರ್ಥದ ಮಧ್ಯೆ, ಯೋಗದಿಂ

ಚಿರಯುವಕನಾಗಿ ಪಂಚಾಪ್ಸರೆಯರಂ ಕೂಡಿ

ಸುಖಿಸುತಿರುವನು ಕಣಾ. ಪೊಣ್ಮಿದಪುದಲ್ಲಿಂದೆ

ಈ ಗೀತವಾದಿತ್ರ ಮೇಳಗಾನಂ.”

ಬೈಗುಬಾನ್

ಕಿತ್ತಿಳೆರಂಗನುಳಿಯೆ, ಕತ್ತಲೆಯ ನೇರಿಳೆಯ

ಪಣ್ಗಪ್ಪು ಕಣ್ಮುಸುಗುತಿಳಿತರೆ ತಿರೆಯನಪ್ಪಿ, ೩೨೦

ಗೋಚರಿಸಿತೊಂದಾರ್ಯವಸತಿ. ಇಂಗುದಿಯೆಣ್ಣೆ

ಜೀವದಾನಂಗೈದ ವಲ್ಕಲದ ಬತ್ತಿಯಂ

ಪೊತ್ತುತುರಿದಾ ಸೊಡರ ಬೆಳಗಿನೊಳ್ ಸಾದರದ

ಸತ್ಕಾರಮಾದುದು ಅತಿಥಿಗಳಿಗೆ. ತಿಂಗಳಂ

ತಂಗುತಾಯೆಡೆ, ಮತ್ತೆ ಮುಂದಣಾಶ್ರಮಕೈದಿ

ತಿಂಗಳಾರಂ ಕಳೆಯುತಲ್ಲಿಂದೆ ಮುಂಬರಿದು

ಆಶ್ರಮದಿನಾಶ್ರಮಕ್ಕೈದಿದರು, ಒಂದೊಂದು

ಎಡೆಯೊಳುಂ ಪಲವಾರು ತಿಂಗಳ್ಗಳಂ, ಮತ್ತೆ

ಒಮ್ಮೊಮ್ಮೆ ವರ್ಷಮಂ, ಕಳೆದು.

ಇಂತಿಂತಿಂತು

ಪತ್ತು ಸೂಳಿಳೆ ನೇಸರಂ ಸುತ್ತುವರಿದತ್ತು.

ಅಂತೆಯೆ ಇಳಾತ್ಮಜೆ ಇನಕುಲಾತ್ಮಜನ ಅಡಿಯ ೩೩೦

ಪಜ್ಜೆವಟ್ಟೆಯ ನಡೆಯೆ, ತರಳೆಯತನಂ ಪಣ್ತು

ತುಂಬಿದುದು ಮೈಗೆ ಮಹಿಳಾ ಮಹದ್‌ಗೌರವಂ,

ಮೇಣಂತೆ ನಡೆನುಡಿಗೆ ಬಗೆಗೆ, ದಿನದಿನ ಚರಿಸೆ

ಕಲ್ಲುಮುಳ್ಳಿಡಿದ ಪಳುವಟ್ಟೆಯುಂ ಸಮೆಸಮೆದು

ನುಣ್ಣಿತಪ್ಪುದೆನಲ್ಕೆ ಸೀತೆ, ಜನಕ ಕುಮಾರ್ತೆ,

ಋಷಿಸಂಗದಿಂ ತಪಸ್ವಿನಿಯಪ್ಪುದಚ್ಚರಿಯೆ ?

ದಶರಥನ ಸೂನುಗಳ್ಗೀರೈದು ಬರಿಸದಾ

ಸಾಹಸದ ರಸಯಾತ್ರೆಯಾದುದಕ್ಷಯಪಾತ್ರೆ

ವೀರ ಸುಂದರ ವಿವಿಧ ಭಾವಾನುಭವಗಳಿಗೆ,

ಒರ್ದಿನಂ ಸಂಜೆ, ಪಡುವಲ್ ಪಣೆಯಮೇಲೆ, ಪನಿ ೩೪೦

ಕಿಡಿಯಾದ ಮಾಳ್ಕೆಯಿಂ, ತಳತಳಿಸುತಿರೆ ಬೆಳ್ಳಿ,

ದಣಿದು ಕೋಳ್ಮಿಗವೇಂಟೆಯೊಳ್ ಮಲೆಯ ತಲೆಯಿಂದೆ

ತಳ್ಪಲಿನೆಲೆಯಮನೆಗೆ ಬರುತಲಿರ್ದಗ್ರಜಂ

ಊರ್ಮಿಳಾವಲ್ಲಭನ ಬೆಮರ್ದ ಮೊಗಮಂ ಕಂಡು

ಕನಿಕರಂಗೊಂಡು ಸುಯ್ದನು, ತನ್ನ ಮಡದಿಯಂ

ಬೆಚ್ಚನೆಯ ನೀರ್ವಿಡಿದು ಪತಿಸೇವೆಗಣಿಯಾಗಿ

ಪರ್ಣಶಾಲೆಯ ಬಾಗಿಲೊಳೆ ಕಾಯುತಿರ್ಪಳಂ

ನೆನೆದು. ಬೆಮರಿನ ಮರೆಯೊಳೊಂದು ಕಂಬನಿ ಹೊಂಚಿ

ಸಮಯಮಂ ಕಾಯುತಿರೆ ತಮ್ಮಂಗೊರೆದನಿಂತು :

“ವನವಾಸದವಧಿ ಕೊನೆಸಾರುತಿದೆ, ಸೌಮಿತ್ರಿ ; ೩೫೦

ಮನೆಯ ನೆನೆದೊಮ್ಮೊಮ್ಮೆ ಬಯಕೆ ಬಾಯಾರುತಿದೆ ;

ಸರಯೂ ಜಲವನೀಂಟಲಾಶೆ ಸೊಂಡಿಲನೆಳೆದು

ಚಾಚುತಿದೆ ! ಕೋಸಲಕೆ ಕಿರಿದಲ್ಲದಿರ್ದೊಡಂ

ಮತ್ತೆ ಕೀಳಲ್ಲದಿರ್ದೊಡಮೀ ವಿಪಿನ ಧರಾ

ಸಾಮ್ರಾಜ್ಯಮಗಲಿಕೆಯನನುಭವಿಸುತಿದೆ ಮನಂ

ತಾಯ್ನಾಡಿನಾ. ವರ್ಷಮಿನ್ನೆರಡು ತೀರ್ವಿನಂ

ಸೇರ್ದಪೆವಯೋಧ್ಯೆಯಂ. ಆ ಪೊಳ್ತಿನನ್ನೆಗಂ

ಸತ್ಸಂಗಮೆಯೆ ಮಂಗಳಂ ತಪಂ !”

ನುಡಿದನನುಜಂ

ತನ್ನಗ್ರಜಾತನ ಕೊರಳ ಖಿನ್ನತೆಯ ತವಿಸಿ :

“ಚರಿಸಿದೆವು ನಾವೆನಿತೊ ಋಷ್ಯಾಶ್ರಮಂಗಳಂ. ೩೬೦

ಕಂಡೆವೆನಿತೆನಿತೊ ಕಿತ್ತಡಿಗಳಂ. ಮೇಣಂತೆ

ಕೇಳ್ದೆವೀಂಟಿದೆವೆನಿತೊ ತತ್ವಪೀಯೂಷಮಂ.

ಚಿತ್ತಕೆತ್ತರವಾಯಿತೆದೆಗೆ ಬಿತ್ತರವಾಯ್ತು ;

ದೊರೆಕೊಂಡುದಾತ್ಮಪ್ರಸನ್ನತೆ. ವಸಿಷ್ಠಗುರು

ಮತ್ತೆ ವಿಶ್ವಾಮಿತ್ರದೇವರಿರ್ವರುಮಿತ್ತ

ಕಲ್ಪಿಗೆ ಕಿರೀಟಮಾದತ್ತು. ವಿಪಿನಾಯನಂ,

ಹೇ ಆರ್ಯ, ನಿನ್ನ ಸಂಗದಿನಂತೆ ದೇವಿಯರ

ಸೇವೆಯಿಂ ನನ್ನಾತ್ಮಕೊಂದಮೃತ ಕೃಪೆಯಾಯ್ತು !”

“ಆರ್ಯವಸತಿಗಳನೇಕಮಂ ಕಂಡೆವಾದೊಡಂ

ಕಂಡೆವಿಲ್ಲಾಮ್ ಅಗಸ್ತ್ಯಋಷ್ಯಾಶ್ರಮವನಿನ್ನುಂ. ೩೭೦

ಬಡಗಣಿಂ ತೆಂಕಣ್ಗೆ ಮೊತ್ತಮೊದಲೈತಂದ

ಮುನಿಯಾರ್ಯನಾತನ್. ಅತಿ ದಕ್ಷಿಣದೊಳಿಹುದಂತೆ

ದಿವ್ಯಾಶ್ರಮಂ. ನಾಳೆ ಪೊರಮಡುವಮಿಲ್ಲಿಂದೆ

ತೆಂಕಣಕೆ. ಸೌಮಿತ್ರಿ, ಆ ಮುನಿಯ ಮಹಿಮೆಯಂ

ಕೀರ್ತಿಸುವ ಕಥೆಯೊಂದನರುಹಿದಪೆನಾಲಿಸಾ !”

ಬೆಳ್ಳಿ ಮುಳುಗಿತ್ತು ; ಕತ್ತಲೆ ಮುಚ್ಚಿ ಮುಸುಗಿತ್ತು ;

ಮಿನುಗುತಿರ್ದುವು ಮಲರಿ ಬಾನ್ನೆಲದೊಳರಿಲ ಹೂ.

ಕಾಡುದಾರಿಯೊಳಿಳಿಯುತಿರೆ, ರಾಮನೊರೆಯುತಿರೆ,

ಕೇಳ್ದನಾ ಲಕ್ಷ್ಮಣಂ ಕಿವಿನಿಮಿರ್ದು :

“ಇರ್ದರಯ್

ಮುನ್ನಿರ್ವರಿಲ್ವಲಂ ವಾತಾಪಿಗಳ್, ಪೆಸರ್ವೆತ್ತ ೩೮೦

ರಾಕ್ಷಸ ಸಹೋದರರ್ : ನೀತಿಯಿಂ ರಾಕ್ಷಸರ್ ;

ಪ್ರೀತಿಯಿಂ ಸೋದರರ್. ಭೀಮಕರ್ಮಿಗಳವರ್

ಮಾಯಾವಿಗಳ್, ಕಾಮರೂಪಿಗಳ್. ಇಲ್ವಲಂ

ಬ್ರಾಹ್ಮಣನ ವೇಷದಿಂ, ಶ್ರಾದ್ಧಮಂ ನೆವವೇಳ್ದು,

ಪಿಂಡಕೆ ನಿಮಂತ್ರಿಸುವನಾರ್ಯರಂ. ವಾತಾಪಿ ತಾಂ

ಮೇಷರೂಪವನಾಂತು ತಮ್ಮ ಮನೆಯಂಗಣದಿ

ಸೊಪ್ಪು ಮೇಯುತ್ತಿಹನ್, ಕಟ್ಟುಗೊಂಡವನೋಲೆ

ನಟಿಸಿ. ಹೋಂತದ ಗಾತ್ರಮಂ ಕಾಣುತುಬ್ಬುವರ್

ಅತಿಥಿಗಳ್ ! ಶುದ್ಧ ಸಂಸ್ಕೃತವಾಡುತಿಲ್ವಲಂ

ಮಂತ್ರಪೂರ್ವಕವಾಗಿ ಸುಲಿಯುವನು ಚರ್ಮಮಂ; ೩೯೦

ಬಿಡಿಸಿ ಬೀವಂ ಕುಯ್ಯುವನು ಮಾಂಸಮಂ. ಶಂಕೆ

ಪುಟ್ಟದಭ್ಯಾಗತರ್ ಪಿಂಡಮಂ ತಣಿವುಂಡು

ತೇಗುವರ್, ಬೆಂದ ಬಾಡಿನ ಕೂಳರಗಲೆಂದು.

ಅನ್ನೆಗಂ ಸಂಸ್ಕೃತವನಾಡುತಿರ್ದಿಲ್ವಲಂ

ತೆಕ್ಕನೆ ಪಿಶಾಚಿ ನುಡಿಯಿಂದೆ ದುರ್ಮಂತ್ರಮಂ

ಕಾಕು ಹಾಕುತೆ ಕೂಗಿ ಕರೆಯುವನ್ ತಮ್ಮನಂ :

‘ವಾತಾಪಿ ಹೊರಗೆ ಬಾ !’ ಕೇಳ್ದು, ಒಡನೆಯೆ ಹೊಟ್ಟೆ

ಕಂಪಿಸುವುದತಿಥಿದೇವರಿಗೆ, ಮೇಕೆಯ ಗೊರಸೊ

ಕೊಂಬೊ ತಿವಿದಂತಾಗಿ, ಕರುಳರಚಿದಂತಾಗಿ

ಪಾರ್ವರೆದ್ದೆದ್ದು ಕುಣಿದಾಡುತಿರಲಾ ಇಲ್ವಲಂ ೪೦೦

‘ಹೊರಗೆ ಬಾ ! ಹೊರಗೆ ಬಾ ! ಬಾ ಹೊರಗೆ !’ ಎಂದೆಂದು

ಕೂಗುವನ್ ವಾತಾಪಿಯಂ, ಗುಳ್ಳೆಯೊಡೆವಂತೆ

ಹೊಡೆ ಬಿರಿದಪುದು ಪಿಂಡವುಂಡರಿಗೆ….ಆಃ ….ಇನಿತು ನಿಲ್,

ಸೌಮಿತ್ರಿ, ಮುಳ್ ಮುದ್ದಿಸಿದೆ ಮತ್ ಪಾದಪದ್ಮಮಂ !

ಕೀಳಲನುಗೈದಪೆನ್.”

ತಡೆಯಲಾರದೆ ಕಥೆಗೆ

ನಗುತಿರ್ದ ಲಕ್ಷ್ಮಣಂ ನೆರವಾದನಣ್ಣಂಗೆ,

ಪಾದಪದ್ಮವ ಮುದ್ದಿಸಿದ ಮುಳ್ಗೆ ಮುಗುಳ್ನಗುತೆ :

“ಏನ್ ಕತ್ತಲೆಯೊ, ಕಾಡಿಗೆಯನೊತ್ತುತಿದೆ ಕಣ್ಗೆ !”

“ಆಲಿಸಾ ! ವನಮೌನಮಿದೆನಿತ್ತು ಭೀಕರಂ,

ಪುಲಿನಿದ್ದೆಯೋಲ್ !….ಧೂರ್ತರೀ ತೆರದಿನಾರ್ಯರಂ ೪೧೦

ಕೊಲುತಿರ್ದರ್. ಅಂತೆಯೆ ಅಗಸ್ತ್ಯನಂ ತೀರ್ಚಲ್ಕೆ

ಕರೆದರೌತಣಕೆ. ಮೇಕೆಯ ತೆರನ ತಮ್ಮನಂ

ಕಡಿದು ಬೇಯಿಸುತಿಲ್ವಲಂ ಬಡಿಸಿದನು ಮುನಿಗೆ,

ಅಗ್ನಿಗಾಜ್ಯಾಹುತಿಯನಿತ್ತದಂ ಮತ್ತೊಮ್ಮೆ

ಪಡೆಯಲಾಸಿಪ ಗಾಂಪನಾದನಾ ರಾಕ್ಷಸಂ.

‘ಹೊರಗೆ ಬಾ, ವಾತಾಪಿ !’ ಎಂದೆನಿತ್ತೊರಲ್ದೊಡಂ

ಬರಲಿಲ್ಲವನ್ : ‘ಜೀರ್ಣಿಸಿಹುದೆನ್ನ ಜಠರಾಗ್ನಿ !

ನಿನ್ನ ಕರೆಗಿನ್ನೆತ್ತಣಿಂ ಬರ್ಪನಯ್ ?’ ಎನುತೆ

ಮುನಿ ನಗಲ್ಕಾತನನಳಿಸಲೆಂದು ಮೇಲ್ವಾಯ್ದು

ರಕ್ಕಸನುರಿದು ಬೂದಿಯಾದನಾ ತೇಜದಿಂ ೪೨೦

ಋಷಿದೇವನಾ !”

ತೆರಳ್ದರಲ್ಲಿಂದೆ ಮರುಪಗಲ್.

ದಾರಿಯೊಳಗಸ್ತ್ಯನ ಸಹೋದರನ ಕಣ್ಗೊಳಿಪ

ದಿವ್ಯಾಶ್ರಮಂಬೊಕ್ಕು, ಮುಂದಣ ಮಾರ್ಗಮಂ ತಿಳಿದು,

ಪಯಣಗೈದರ್ ದಕ್ಷಿಣಾರಣ್ಯ ನಿಬಿಡತೆಗೆ

ನುರ್ಗ್ಗಿ. ಬರೆವರೆ, ನಿಬಿಡಮಾದುದು ಅಡವಿ ; ಅದ್ರಿ

ಕಡಿದಾದುದೆತ್ತರಂ ನಿಡಿದಾದುದಾಳಮುಂ

ತಾನಾಯ್ತಲಾ ಅದ್ಭುತಂ. ತರಂಗಿಣಿಯ ಮೊರೆ

ಗುಹ್ಯಮಾದುದು ಭೀತಿಯಿಂ ; ಹಕ್ಕಿಗಳ ಕೊರಳ

ಸರದಿಂಪು ಹದುಗಿದುದು ಹೆದರಿ. ಬನವೂಗಳುಂ

ಕಂಪನಡಗಿಸುತವಿತುಕೊಂಡುವೆಲೆಯಾಶ್ರಯಕೆ ೪೩೦

ತಮ್ಮ ಸರ್ವಸ್ವಮಂ ತ್ಯಜಿಸಿ. ಓಡಾಡಿತಯ್

ಕರ್ನೆಳಲ ಮೆಯ್ಯ ನಿಶ್ಶಬ್ದತೆಯ ಸುಯ್ಯುಸಿರ

ಭೀತಿಭೂತಂ !

ಸೇರ್ದರಾಭೀಳ ಘೋರದಾ

ಕಾಂತಾರದಂತಮಂ. ರಮ್ಯಮಾಯ್ತಾ ಮುಂದೆ

ಆಶ್ರಮವಗಸ್ತ್ಯನಾ. ಬಾಳೆದೋಂಟಗಳಿಂದೆ

ತೆಂಗುದೋಂಟಗಳಿಂದೆ ಮೇಣಡಕೆ ಏಲಕ್ಕಿ

ಕಬ್ಬುದೋಂಟಗಳಿಂದೆ ಹಬ್ಬಿದಾ ನೋಟಮಂ

ಕಂಡುಬ್ಬುದುದು ಮನಂ ರಾಮಂಗೆ, ಲಕ್ಷ್ಮಣಗೆ,

ಮತ್ತೆ ಮೈಥಿಲಿಗೆ. ಕಾರಣಪುರುಷನಾತನಂ

ಕಂಡೊಡನೆ ಗುರುತಿಸಿದನತಿಥಿಯನಗಸ್ತ್ಯಮುನಿ ೪೪೦

ದೇವ ಸೀತಾನಾಥನಂ. ಮಣಿದ ಮೂವರಂ

ಪರಸಿದನ್, ಸತ್ಕರಿಸಿದನ್ ಧನ್ಯಮಾಯ್ತೆಂದು

ತನ್ನಾಶ್ರಮಂ. ಕೆಲಕಾಲಮಲ್ಲಿ ಗುರುವರನ

ಸನ್ನಿಧಿಯೊಳಿರ್ದು, ತೆಂಕಣನಾಡ ಸೊಬಗಂ

ಸವಿದುಮರಿತುಮಲ್ಲಿಂದೆ ಮುಂದೆ ತೆರಳಲ್ಕೆಳಸಿ

ಬೇಡಿದನಗಸ್ತ್ಯನಂ, ಮುಂದಣವಧಿಯ ವನದ

ವಾಸಮಂ ಕಳೆಯೆ ನೆಮ್ಮದಿಯ ನಲ್ದಾಣಮೊಂದಂ

ಕೃಪೆಯಿಂ ಬೆಸಸಿಮೆಂದು. ಜಾನಿಸಿದನಂತರಂ

ಕಿರುನಗೆಯ ಮೊಗದ ಕಿತ್ತಡಿ ನುಡಿದನಿಂತೆಂದು :

“ದಂಡಕಾರಣ್ಯದೀ ಕಂಟಕದ ಬೀಡಿನೊಳ್ ೪೫೦

ನೆಮ್ಮದಿಯ ಮಾತೇಕೆ, ಪೇಳ್, ಕ್ಷತ್ರಿಯ ಧನುರ್ಧರಗೆ

ನಿನಗೆ ? ಬಗೆಗೆಡ್ಡಮಾಗಿರ್ಪೊಂದು ತಾಣಮಿದೆ :

ನಾತಿದೂರಂ ಶ್ಲಾಘನೀಯಮಾ ಪಂಚವಟಿ ;

ಬಹುಮೃಗ ಮನೋಹರಂ, ಬಹುಪಕ್ಷಿ ಮಂಜುಳಂ,

ನಿತ್ಯಪುಷ್ಪಿತ ವನ ಸುಶೋಭಿತ ತಟಾನ್ವಿತಾ

ಸಲಿಲ ಗದ್ಗದ ನಿನದೆ ಆ ಪುಣ್ಯ ಗೋದಾವರಿಯ

ಸಂಗದಿಂದತಿಮಂಗಳಂ. ರಾಜಯೋಗ್ಯಮುಂ

ಮತ್ತೆ ಋಷಿಯೋಗ್ಯಮುಂ ಸ್ಥಳಮದು ಮಹತ್‌ಕಥಾ

ಕಾರಣಂ ತಾನಪ್ಪುದದು ದಿಟಂ ನಿಮ್ಮಿಂದೆ,

ರಘುನಂದನಾ. ದ್ವಿಯೋಜನ ದೂರಮೀಯೆಡೆಗೆ ೪೬೦

ನಿಕಟಮಾಗಿದೆ ಪಂಚವಟಿ. ಕಾಣ್ಬುದದೊ ಅಲ್ಲಿ

ಓ ಆ ಮಧೂಕ ವನಂ. ಅದನುತ್ತರಿಸೆ ಮುಂದೆ

ಗೋಚರಿಪುದೊಂದು ನ್ಯಗ್ರೋಧ ಭೂರುಹಂ. ಅದಂ

ಮೀರಿ ನಡೆಯುತ್ತೊಂದು ತೆಮರನೇರಲ್ಕೊಡಂ

ತೋರಿದಪುದೊಂದೆತ್ತರದ ಕಾಡಿಡಿದ ಮಲೆಯ

ನೆತ್ತಿ. ಆ ಗಿರಿಚರಣ ತಲಮೆ ತಾಂ ಪಂಚವಟಿ !

ದಾಶರಥಿ, ಶರಧಿಯಾಗಲಿ ನಿನ್ನ ಸಾಹಸಂ.

ಸಾರ್ಥಕಂ ಗೆಯ್ ನನ್ನ ಕೊಟ್ಟಾ ಧನುರ್ಬಾಣಮಂ,

ದಿವ್ಯ ತೂಣೀರಮಂ. ನೆರವಾಗು, ಸೌಮಿತ್ರಿ,

ನಿನ್ನಣ್ಣದೇವಂಗೆ. ಮಗಳೆ, ಸೀತಾದೇವಿ, ೪೭೦

ನಿನ್ನಳಲ ಲೆಕ್ಕಿಸದೆ ಪತಿ ಹಿತಂಕರಿಯಾಗು;

ಲೋಕ ಶಂಕರಿಯಾಗು; ಮೇಣ್ ಯಮ ಭಯಂಕರಿಯಾಗು

ಲೋಕ ಮೂರಕೆ ಶೋಕವಾಗಿಹ ನಿಶಾಚರರ

ನಿಷ್ಠುರ ನೀಚಕುಲಕೆ !”

ಪರಸುತಿರೆ, ಕೊರಳ ಸೆರೆ

ಬಿಗಿದು ಗದ್ಗದವಾಯ್ತು ಮುನಿಗೆ ; ಕಣ್ಬನಿಯುಕ್ಕಿ

ಪರಿದಿರೆ, ಜನಕಜಾತೆಯನೆ ನೋಡುತಳ್ತನಾ

ಸೂರ್ಯವರ್ಚಸ್ವಿ ! ನಮಿಸುತೆ ಪೂಜ್ಯ ಋಷಿಪದಕೆ

ಬೀಳುಕೊಂಡರು ಮೂವರುಂ ಪಂಚವಟಿಗಾಗಿ.

>>  ಮುಂದಿನ ಸಂಚಿಕೆ-೧೧/ಪಂಚವಟಿಯ ಪರ್ಣಕುಟಿ  <<


<<       ಅಯೋಧ್ಯಾ ಸಂಪುಟಂ     >>       ಕಿಷ್ಕಿಂದಾ ಸಂಪುಟಂ       <<      ಲಂಕಾ ಸಂಪುಟಂ        >>     ಶ್ರೀ ಸಂಪುಟಂ        <<