ಸಂಸಾರದೊಳಗಿರ್ದ ಕೈಕೊಂಡು ಸದ್ಭಕ್ತನು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಂಸಾರದೊಳಗಿರ್ದ ಸದ್ಭಕ್ತನು ಲಿಂಗದೊಡನೆ ಸಹಭೋಜನವ ಮಾಡಬೇಕಾದಡೆ ಜಂಗಮಪ್ರಸಾದವ ಕೈಕೊಂಡು ತನ್ನ ಲಿಂಗಕ್ಕರ್ಪಿಸಿ ಆ ಲಿಂಗದೊಡನೆ ಸಹಭೋಜನವ ಮಾಡಬೇಕಲ್ಲದೆ
ಜಂಗಮಪ್ರಸಾದವಿಲ್ಲದೆ ಲಿಂಗದೊಡನೆ ಸಹಭೋಜನವ ಮಾಡಲಾಗದು. ಅದೇನು ಕಾರಣವೆಂದೊಡೆ : ಜಂಗಮಪ್ರಸಾದವು ಲಿಂಗಕ್ಕೆ ಪರಮಜೀವಕಳೆಯಾದ ಕಾರಣ. ಅಂತಪ್ಪ ಜಂಗಮದಲ್ಲಿ ರೂಪು ಕುರೂಪು ಕುಲಛಲವ ನೋಡಲಾಗದು. ಆ ಜಂಗಮದಲ್ಲಿ ವಿದ್ಯೆ ಶಾಸ್ತ್ರ ಬುದ್ಧಿವರ್ಧನ ಜ್ಞಾನ ಆಚಾರ ಮಾತಿನ ಜಾಣ್ಮೆಯ ಹುಡುಕಲಾಗದು. ಆ ಜಂಗಮದಲ್ಲಿ ಉಚ್ಚನೀಚವನರಸಲಾಗದು. ಆ ಜಂಗಮದಲ್ಲಿ ಹಾಸ್ಯ ರಹಸ್ಯ ಉದ್ದೇಶ ಉದಾಸೀನಂಗಳ ಮಾಡಲಾಗದು. ಆ ಜಂಗಮದಲ್ಲಿ ಪಂಕ್ತಿಭೇದ
ಪಾಕಭೇದವ ಮಾಡಲಾಗದು. ಆ ಜಂಗಮದಲ್ಲಿ ಮದಮತ್ಸರಂಗಳಿಂದೆ ಹಗೆತನವ ಸಾಧಿಸಬಾರದು. ಆ ಜಂಗಮದ ಮೇಲೆ ಮಿಥ್ಯಾಲಾಪದಿಂದೆ ಇಲ್ಲದ ಅಪವಾದವ ಕಲ್ಪಿಸಬಾರದು. ಆ ಜಂಗಮಕ್ಕೆ ಕೋಪಾಟೋಪದ ಉದ್ರೇಕದಿಂದೆ ನಿಷು*ರವಾಕ್ಯ ನುಡಿಯಲಾಗದು. ಆ ಜಂಗಮವ ಹಾದಿ ಮಾರ್ಗ ಬೀದಿ ಬಾಜಾರಂಗಳಲ್ಲಿ ಕಂಡು ಗರ್ವ ಅಹಂಕಾರದಿಂದೆ ಬೀಗಿ ಬೆರೆತುಕೊಂಡು ಹೋಗಲಾಗದು. ಆ ಜಂಗಮದ ಸನ್ನಿಧಿಯಲ್ಲಿ ಆನೆ ಕುದುರೆ ಅಂದಳ ಪಲ್ಲಕ್ಕಿಗಳ ಏರಲಾಗದು. ಆ ಜಂಗಮವು ಬರುವ ಇದಿರಿನಲ್ಲಿ ತೂಗುದೊಟ್ಟಿಲು
ಚಪ್ಪರಮಂಚ
ಗಗನದುಪ್ಪರಿಗೆ ಉನ್ನತ ಚೌಕಿಯ ಮೇಲೆ ಕುಳ್ಳಿರಲಾಗದು. ಆ ಪರಮಜಂಗಮವು ತಮ್ಮ ಕರುಣದಿಂದೆ ಲಿಂಗಾರ್ಪಿತಕ್ಕೆ ಜಂಘೆಯನಿಟ್ಟು ನಡೆದು ಮನೆಗೆ ಬಂದಲ್ಲಿ ಕಂಡು ಅಡ್ಡಮೋರೆಯನ್ನಿಕ್ಕಲಾಗದು. ಇಂತೀ ಭೇದಗುಣಂಗಳ ಜಂಗಮದಲ್ಲಿ ಮಾಡುವ ತಾಮಸಭಕ್ತರಿಗೆ ಗುರುವಿಲ್ಲ
ಲಿಂಗವಿಲ್ಲ
ಜಂಗಮವಿಲ್ಲ
ಪಾದೋದಕ ಪ್ರಸಾದವು ಮುನ್ನವೇ ಇಲ್ಲ. ಮುಕ್ತಿಯೆಂಬುದು ಎಂದೆಂದಿಗೂ ಇಲ್ಲ. ಇಂತಪ್ಪ ಅಜ್ಞಾನ ತಾಮಸಭಕ್ತನು ಲಿಂಗದೊಡನೆ ಸಹಭೋಜನವ ಮಾಡಿದಡೆ ಶುನಿ ಸೂಕರ ಕುಕ್ಕುಟ ಬಸುರಲ್ಲಿ ಬಂದು ಬಂದು ಸೂರ್ಯಚಂದ್ರರುಳ್ಳನ್ನಕ್ಕರ ಹೊಲೆಯರ ಬಾಗಿಲ ಕಾಯ್ದುಕೊಂಡಿರ್ಪುದು ತಪ್ಪದು ನೋಡಾ ಅಖಂಡೇಶ್ವರಾ.