ಸಪ್ತಕಮಲದ ಮಧ್ಯದಲ್ಲಿ ಉತ್ಪತ್ತಿಯಾದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಪ್ತಕಮಲದ ಮಧ್ಯದಲ್ಲಿ ಉತ್ಪತ್ತಿಯಾದ ಪರಂಜ್ಯೋತಿ ತತ್ವ ಬ್ರಹ್ಮಾಂಡದಿಂದತ್ತತ್ತಲಾದ ಘನಕೆ ಘನ ಪರಕೆ ಪರವಾದ ಪರಾಪರವು ತಾನೆ ನೋಡಾ. ಆ ಪರಾಪರವು ತಾನೆ ತತ್ವ ಬ್ರಹ್ಮಾಂಡದೊಳಹೊರಗೆ ಸರ್ವವ್ಯಾಪಕನಾಗಿ
ಪರಿಪೂರ್ಣನಾಗಿ
ಸರ್ವವನು ಹೊದ್ದಿಯೂ ಹೊದ್ಧದ
ಮುಟ್ಟಿಯೂ ಮುಟ್ಟದ ಅಕಳಂಕನು ನೋಡಾ. ಸಪ್ತಕಮಲದ ಎಸುಳುಗಳೊಳಗೆ ಆಕ್ಷರಾತ್ಮಕ ಲಿಂಗವಾಗಿ ಅದ್ವಯನು ನೋಡಾ. ನವಚಕ್ರಾಂಬುಜಗಳ ದಳ ಕುಳ ವರ್ಣಾದಿ ದೇವತೆಗಳ ತೋರಿಕೆಯೇನುಯೇನೂ ಇಲ್ಲದ ನಿತ್ಯ ನಿರಂಜನ ನಿರಾಮಯನಾದ ಶರಣಂಗೆ ನಮೋ ನಮೋಯೆಂಬೆನು. ಆ ನಿರಾಮಯ ವಸ್ತುವೆ ಸಂಗನಬಸವಣ್ಣನು ನೋಡಾ. ಆ ಚಿದದ್ವಯವಾದ ಬಸವಣ್ಣನೇ ಎನ್ನ ಅಂಗಲಿಂಗ
ಎನ್ನ ಪ್ರಾಣಲಿಂಗ
ಎನ್ನ ಭಾವಲಿಂಗ
ಎನ್ನ ಸರ್ವಾಂಗಲಿಂಗವು ಕಾಣಾ. ಎನ್ನ ಷಡಾಧಾರದಲ್ಲಿ ಸಂಬಂಧವಾದ ಷಡಕ್ಷರ ಮಂತ್ರವು ಬಸವಣ್ಣನಾದ ಕಾರಣ
`ಬಸವಲಿಂಗ ಬಸವಲಿಂಗ ಬಸವಲಿಂಗಾ'ಯೆಂದು ಜಪಿಸಿ ಭವಾರ್ಣವ ದಾಂಟಿದೆನು ಕಾಣಾ. ಬಸವಣ್ಣನೇ ಪತಿಯಾಗಿ
ನಾನೇ ಸತಿಯಾಗಿ ಶರಣನಾದೆನು ಕಾಣಾ. ಬಸವನೇ ಲಿಂಗವಾದ ಕಾರಣ ನಾನಂಗವಾದೆನು. ಕರ್ತೃವೇ ಬಸವಣ್ಣ
ಭೃತ್ಯನೇ ನಾನು. ಒಡೆಯನೇ ಬಸವಣ್ಣ
ಬಂಟನೇ ನಾನಾದಕಾರಣ ದೇಹವೇ ನಾನು
ದೇಹಿಯೇ ಬಸವಣ್ಣನಯ್ಯ. ಇದು ಕಾರಣ
ಎನ್ನ ನಡೆವ ಚೇತನ
ಎನ್ನ ನುಡಿವ ಚೇತನ
ಎನ್ನ ನಡೆ ನುಡಿಯೊಳಗಿಪ್ಪ ಸರ್ವ ಚೈತನ್ಯಾತ್ಮಕ ಬಸವಣ್ಣನಯ್ಯ. ಇಂತಪ್ಪ ಬಸವಣ್ಣನ ಶ್ರೀಪಾದದಲ್ಲಿ ಅಡಗಿ ನಾನು ಶರಣನಾದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.