ಸರವರದೊಳಗೊಂದು ಹಿರಿದು ಕಮಳವು ಹುಟ್ಟಿ
ಪರಿಮಳವಡಗಿತ್ತನಾರೂ ಅರಿಯರಲ್ಲಾ ! ಅರಳಿಲೀಯದೆ ಕೊಯ್ದು ಕರಡಿಗೆಯೊಳಗಿರಿಸಿ ಸುರಕ್ಷಿತವ ಮಾಡಲಾರೂ ಅರಿಯರಲ್ಲಾ ! ಎಡದ ಕೈಯಲಿ ಲಿಂಗ
ಬಲದ ಕೈಯಲಿ ಪುಷ್ಪ ಎರಡನರಿದು ಪೂಜೆಯ ಮಾಡಲರಿಯರಲ್ಲಾ ! (ಇವರಲೋಗರವ) ಮಾಡಿ ಸರುವ ತೃಪ್ತಿಯ ಕೊಟ್ಟು ಭರಿತರಾಗಿಪ್ಪರಿನ್ನಾರು ಹೇಳಾ ! ಪರದೇಶಮಂಡಲವನಿರವನೊಂದನೆ ಮಾಡಿ ಪರಿಯಾಯ ಪರಿಯಾಯವನೊರೆದು ನೋಡುತ್ತ ಕರುವಿಟ್ಟ ರೂಹಿಂಗೆ ಕಣ್ಣೆರಡು ಹಳಚದಂತೆ
ಧರೆಯ ಏರಿಯ ಮೇಲೆ ಮೆಟ್ಟಿನಿಂದು ನೋಡುತ್ತ ಹರಿವ ವೃಷಭನ ಹಿಡಿದು ನೆರೆವ ಸ್ವಾಮಿಯ ಕಂಡು ಜನನ ಮರಣವಿಲ್ಲದಂತಾದೆನಲ್ಲಾ ! ಕರುಣಿ ಕೂಡಲಚೆನ್ನಸಂಗಯ್ಯಾ ಬಸವಣ್ಣನ ಕರುಣ
ಪ್ರಭುವಿಗಲ್ಲದೆ ಇನ್ನಾರಿಗೂ ಅಳವಡದು