ಹದಿನೆಂಟು ಯುಗದವರು ಲಿಂಗವ ಪೂಜಿಸಿ ದೃಷ್ಟವಾವುದು ನಷ್ಟವಾವುದೆಂದರಿಯದೆ ಭಾವ ಭ್ರಾಮಿತರಾದರು. ಜೀವ ಸಂಕಲ್ಪಿಗಳಾದವರು ಜೀವದಾಹುತಿಯನೆ ಲಿಂಗಕ್ಕರ್ಪಿತವೆಂಬರು
ಭವದ ಬಳ್ಳಿಯ ಹರಿಯಲರಿಯರು
ಇಂಥವನೆ ಭಕ್ತಳ ಇಂಥವನೆ ಪ್ರಸಾದಿ? ಕೇಳು ಕೇಳು ಭಕ್ತನ ಮಹಿಮೆಯ (ಪ್ರಸಾದಿಯ ಮಹಿಮೆಯ): ಪೃಥ್ವಿಯ ಸಾರಾಯದಲಾದ ಪದಾರ್ಥವ ಲಿಂಗಕ್ಕೆ ಕೊಡದ ಭಾಷೆ
ಅಪ್ಪುವಿಂದಾದ ಅಗ್ಘಣೆಯ ಲಿಂಗಕ್ಕೆ ಕೊಡದ ಭಾಷೆ
ತೇಜದಿಂದಾದ ನಿವಾಳಿಯ ಲಿಂಗಕ್ಕೆ ಕೊಡದ ಭಾಷೆ
ವಾಯುವಿನಿಂದಾದ ಪರಿಮಳವ ಲಿಂಗಕ್ಕೆ ಕೊಡದ ಭಾಷೆ ಆಕಾಶದಿಂದಾದ ಶೂನ್ಯವ ಲಿಂಗಕ್ಕೆ ಕೊಡದ ಭಾಷೆ ಇದೇನು ಕಾರಣವೆಂದಡೆ: ಮತ್ತೊಂದು ಪೃಥ್ವಿವುಂಟಾಗಿ
ಮತ್ತೊಂದು ಅಪ್ಪುವುಂಟಾಗಿ
ಮತ್ತೊಂದು ತೇಜವುಂಟಾಗಿ
ಮತ್ತೊಂದು ವಾಯುವುಂಟಾಗಿ ಮತ್ತೊಂದು ಆಕಾಶವುಂಟಾಗಿ
ಇವರ ಮೇಲಣ ಪಾಕದ್ರವ್ಯವ ಲಿಂಗಕ್ಕೆ ಕೊಡುವುದು ಭಕ್ತಿ. ಕೂಡಲಚೆನ್ನಸಂಗಾ ಅರ್ಪಿತ ಮುಖವ ನಿಮ್ಮ ಶರಣ ಬಲ್ಲ.