ಹರಿಕಥಾಮೃತಸಾರ/ಕಕ್ಷ ತಾರತಮ್ಯ ಸಂಧಿ (ದೇವತಾ ತಾರತಮ್ಯ)

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಶ್ರೀರಮಣ ಸರ್ವೇಶ ಸರ್ವಗ ಸಾರಭೋಕ್ತ ಸ್ವತಂತ್ರ

ದೋಷ ವಿದೂರ ಜ್ಞಾನಾನಂದ ಬಲೈಶ್ವರ್ಯ ಸುಖ ಪೂರ್ಣ

ಮೂರುಗುಣ ವರ್ಜಿತ ಸಗುಣ ಸಾಕಾರ ವಿಶ್ವ ಸ್ಥಿತಿ ಲಯೋದಯ ಕಾರಣ

ಕೃಪಾಸಾಂದ್ರ ನರಹರೆ ಸಲಹೊ ಸಜ್ಜನರ//1//


ನಿತ್ಯ ಮುಕ್ತಳೆ ನಿರ್ವಿಕಾರಳೆ ನಿತ್ಯ ಸುಖ ಸಂಪೂರ್ಣೆ

ನಿತ್ಯಾನಿತ್ಯ ಜಗದಾಧಾರೆ ಮುಕ್ತಾಮುಕ್ತ ಗಣ ವಿನುತೆ

ಚಿತ್ತೈಸು ಬಿನ್ನಪವ ಶ್ರೀ ಪುರುಷೋತ್ತಮನ ವಕ್ಷೋ ನಿವಾಸಿನಿ

ಭೃತ್ಯ ವರ್ಗವ ಕಾಯೆ ತ್ರಿಜಗನ್ಮಾತೆ ವಿಖ್ಯಾತೆ//2//


ರೋಮ ಕೂಪಗಳಲ್ಲಿ ಪೃಥ್ ಪೃಥಕು ಆ ಮಹಾ ಪುರುಷನ

ಸ್ವಮೂರ್ತಿ ತಾಮರಸಜಾಂಡಗಳ ತದ್ಗತ ವಿಶ್ವ ರೂಪಗಳ

ಶ್ರೀ ಮಹಿಳೆ ರೂಪಗಳ ಗುಣಗಳ ಸೀಮೆಗಾಣದೆ ಯೋಚಿಸುತ

ಮಮ ಸ್ವಾಮಿ ಮಹಿಮೆಯದು ಎಂತೋ ಎಂದು ಅಡಿಗಡಿಗೆ ಬೆರಗಾದೆ//3//


ಒಂದು ಅಜಾಂಡದೊಳು ಒಂದು ರೂಪದೊಳು ಒಂದು ಅವಯವದೊಳು ಒಂದು ನಖದೊಳಗೆ

ಒಂದು ಗುಣಗಳ ಪಾರುಗಾಣದೆ ಕೃತ ಪುಟಾಂಜಲಿಯಿಂ

ಮಂದಜಾಸನ ಪುಳಕ ಪುಳಕಾನಂದ ಬಾಷ್ಪ ತೊದಲು ನುಡಿಗಳಿಂದ

ಇಂದಿರಾವಲ್ಲಭನ ಮಹಿಮೆ ಗಂಭೀರ ತೆರವೆಂದ//4//


ಏನು ಧನ್ಯರೋ ಬ್ರಹ್ಮ ಗುರು ಪವಮಾನ ರಾಯರು

ಈ ಪರಿಯಲಿ ರಮಾ ನಿವಾಸನ ವಿಮಲ ಲಾವಣ್ಯ ಅತಿಶಯಗಳನು

ಸಾನುರಾಗದಿ ನೋಡಿ ಸುಖಿಪ ಮಹಾನುಭಾವರ ಭಾಗ್ಯವೆಂತೋ

ಭವಾನಿಧವನಿಗೆ ಅಸಾಧ್ಯವೆನಿಸಲು ನರರ ಪಾಡೇನು//5//


ಆ ಪಿತಾಮಹ ನೂರು ಕಲ್ಪ ರಮಾಪತಿಯ ಗುಣ ಜಪಿಸಿ ಒಲಿಸಿ

ಮಹಾ ಪರಾಕ್ರಮ ಹನುಮ ಭೀಮ ಆನಂದ ಮುನಿಯೆನಿಸಿ

ಆ ಪರಬ್ರಹ್ಮನ ಸುನಾಭೀ ಕೂಪಸಂಭವ ನಾಮದಲಿ ಮೆರೆವ

ಆ ಪಯೋಜಾಸನ ಸಮೀರರಿಗೆ ಅಭಿನಮಿಪೆ ಸತತ//6//


ವಾಸುದೇವನ ಮೂರ್ತಿ ಹೃದಯ ಆಕಾಶ ಮಂಡಲ ಮಧ್ಯದಲಿ

ತಾರೇಶನಂದದಿ ಕಾಣುತ ಅತಿ ಸಂತೋಷದಲಿ ತುತಿಪ

ಆ ಸರಸ್ವತಿ ಭಾರತೀಯರಿಗೆ ನಾ ಸತತ ವಂದಿಸುವೆ

ಪರಮೋಲ್ಲಾಸದಲಿ ಸುಜ್ಞಾನ ಭಕುತಿಯ ಸಲಿಸಲಿ ಎಮಗೆಂದು//7//


ಜಗದುದರನ ಸುರೋತ್ತಮನ ನಿಜಪೆಗಳೊಂತಾತು ಕರಾಬ್ಜದೊಳು ಪದಯುಗ ಧರಿಸಿ

ನಖ ಪಂಕ್ತಿಯೊಳು ರಮಣೀಯ ತರವಾದ ನಗಧರನ ಪ್ರತಿಬಿಂಬ ಕಾಣುತ

ಮಿಗೆ ಹರುಷದಿಂ ಪೊಗಳಿ ಹಿಗ್ಗುವ ಖಗ ಕುಲಾಧಿಪ

ಕೊಡಲಿ ಮಂಗಳ ಸರ್ವ ಸುಜನರಿಗೆ//8//


ಯೋಗಿಗಳ ಹೃದಯಕೆ ನಿಲುಕ ನಿಗಮಾಗಮೈಕ ವಿನುತನ

ಪರಮಾನುರಾಗದಲಿ ದ್ವಿಸಹಸ್ರ ಜಿಹ್ವೆಗಳಿಂದ ವರ್ಣಿಸುವ

ಭೂಗಗನ ಪಾತಾಳ ವ್ಯಾಪ್ತನ ಯೋಗ ನಿದ್ರಾಸ್ಪದನು ಎನಿಪ

ಗುರು ನಾಗರಾಜನ ಪದಕೆ ನಮಿಸುವೆ ಮನದೊಳು ಅನವರತ//9//


ದಕ್ಷ ಯಜ್ಞ ವಿಭಂಜನನೆ ವಿರುಪಾಕ್ಷ ವೈರಾಗ್ಯಾಧಿಪತಿ

ಸಂರಕ್ಷಿಸೆಮ್ಮನು ಸರ್ವಕಾಲದಿ ಸನ್ಮುದವನಿತ್ತು

ಯಕ್ಷಪತಿ ಸಖ ಯಜಪರಿಗೆ ಸುರವೃಕ್ಷ ವೃಕ್ಷದಾನುಜಾರಿ

ಲೋಕಾಧ್ಯಕ್ಷ ಶುಕ ದೂರ್ವಾಸ ಜೈಗೀಷವ್ಯ ಸಂತೈಸು//10//


ನಂದಿವಾಹನ ನಳಿನಿಧರ ಮೌಳಿ ಇಂದು ಶೇಖರ ಶಿವ ತ್ರಿಯಂಬಕ

ಅಂಧಕಾಸುರ ಮಥನ ಗಜ ಶಾರ್ದೂಲ ಚರ್ಮಧರ

ಮಂದಜಾಸನ ತನಯ ತ್ರಿಜಗದ್ವಂದ್ಯ ಶುದ್ಧ ಸ್ಫಟಿಕ ಸನ್ನಿಭ

ವಂದಿಸುವೆನು ಅನವರತ ಕರುಣಿಸಿ ಕಾಯೋ ಮಹದೇವ//11//


ಹತ್ತು ಕಲ್ಪದಿ ಲವ ಜಲಧಿಯೊಳು ಉತ್ತಮ ಶ್ಲೋಕನ ಒಲಿಸಿ

ಕೃತಕ್ರುತ್ಯನಾಗಿ ಜಗತ್ಪತಿಯ ನೇಮದಿ ಕುಶಾಸ್ತ್ರಗಳ ಬಿತ್ತರಿಸಿ ಮೋಹಿಸಿ

ದುರಾತ್ಮರ ನಿತ್ಯ ನಿರಯ ನಿವಾಸರೆನಿಸಿದ

ಕೃತ್ತಿ ವಾಸನೆ ನಮಿಪೆ ಪಾಲಿಸೊ ಪಾರ್ವತೀ ರಮಣ//12//


ಫಣಿ ಫಣಾoಚಿತ ಮಕುಟ ರಂಜಿತ ಕ್ವಣಿತ ಡಮರು ತ್ರಿಶೂಲ

ಶಿಖಿ ದಿನ ಮಣಿ ನಿಶಾಕರ ನೇತ್ರ ಪರಮ ಪವಿತ್ರ ಸುಚರಿತ್ರ

ಪ್ರಣತ ಕಾಮದ ಪ್ರಮಥ ಸುರಮುನಿ ಗಣ ಸುಪೂಜಿತ ಚರಣಯುಗ

ರಾವಣ ಮದ ವಿಭಂಜನ ಶೇಷ ಪದ ಅರ್ಹನು ಅಹುದೆಂದು//13//


ಕಂಬುಪಾಣಿಯ ಪರಮ ಪ್ರೇಮ ನಿತಂಬಿನಿಯರು ಎಂದೆನಿಪ

ಲಕ್ಷಣೆ ಜಾಂಬವತಿ ಕಾಳಿಂದಿ ನೀಲಾ ಭದ್ರ ಸಖ ವಿಂದಾರೆಂಬ

ಷಣ್ಮಹಿಷಿಯರ ದಿವ್ಯ ಪದಾಂಬುಜಗಳಿಗೆ ನಮಿಪೆ

ಮಮ ಹೃದಯಾಂಬರದಿ ನೆಲೆಸಲಿ ಬಿಡದೆ ತಮ್ಮರಸನ ಒಡಗೂಡಿ//14//


ಆ ಪರಂತಪನ ಒಲುಮೆಯಿಂದ ಸದಾ ಅಪರೋಕ್ಷಿಗಳೆನಿಸಿ

ಭಗವದ್ರೂಪ ಗುಣಗಳ ಮಹಿಮೆ ಸ್ವಪತಿಗಳ ಆನನದಿ ತಿಳಿವ

ಸೌಪರ್ಣಿ ವಾರುಣಿ ನಗಾತ್ಮಜರ ಆಪನಿತು ಬಣ್ಣಿಸುವೆ

ಎನ್ನ ಮಹಾಪರಾಧಗಳ ಎಣಿಸದೆ ಈಯಲಿ ಪರಮ ಮಂಗಳವ//15//


ತ್ರಿದಿವತರು ಮಣಿ ಧೇನುಗಳಿಗೆ ಆಸ್ಪದನೆನಿಪ ತ್ರಿದಶಾಲಯಾಬ್ಧಿಗೆ

ಬದರನಂದದಲಿ ಒಪ್ಪುತಿಪ್ಪ ಉಪೇಂದ್ರ ಚಂದ್ರಮನ

ಮೃಧು ಮಧುರ ಸುಸ್ತವನದಿಂದಲಿ ಮಧು ಸಮಯ ಪಿಕನಂತೆ ಪಾಡುವ

ಮುದಿರ ವಾಹನನಂಘ್ರಿ ಯುಗ್ಮಂಗಳಿಗೆ ನಮಿಸುವೆನು//16//


ಕೃತಿ ರಮಣ ಪ್ರದ್ಯುಮ್ನ ದೇವನ ಅತುಳ ಬಲ ಲಾವಣ್ಯ ಗುಣ ಸಂತತ ಉಪಾಸನ

ಕೇತು ಮಾಲಾ ಖಂಡದೊಳು ರಚಿಪ

ರತಿ ಮನೋಹರನಂಘ್ರಿ ಕಮಲಕೆ ನತಿಸುವೆನು ಭಕುತಿಯಲಿ

ಮಮ ದುರ್ಮತಿ ಕಳೆದು ಸನ್ಮತಿಯನು ಈಯಲಿ ನಿರುತ ಎಮಗೊಲಿದು//17//


ಚಾರುತರ ನವವಿಧ ಭಕುತಿ ಗಂಭೀರ ವಾರಾಶಿಯೊಳು

ಪರಮೋದಾರ ಮಹಿಮನ ಹೃದಯ ಫಣಿಪತಿ ಪೀಠದಲಿ ಭಜಿಪ

ಭೂರಿ ಕರ್ಮಾಕರನು ಎನಿಸುವ ಶರೀರಮಾನಿ ಪ್ರಾಣಪತಿ ಪದ ವಾರಿರುಹಕೆ ಅನಮಿಪೆ

ಮದ್ಗುರುರಾಯನು ಅಹುದೆಂದು//18//


ವಿತತ ಮಹಿಮನ ವಿಶ್ವತೋ ಮುಖನ ಅತುಳ ಭುಜ ಬಲ ಕಲ್ಪತರುವು

ಆಶ್ರಿತರೆನಿಸಿ ಸಕಲ ಇಷ್ಟ ಪಡೆದು ಅನುದಿನದಿ ಮೋದಿಸುವ

ರತಿ ಸ್ವಯಂಭುವ ದಕ್ಷ ವಾಚಸ್ಪತಿ ಬಿಡೌಜನ ಮಡದಿ ಶಚಿ

ಮನ್ಮಥ ಕುಮಾರ ಅನಿರುದ್ಧರು ಎಮಗೀಯಲಿ ಸುಮಂಗಲವ//19//


ಭವ ವನದಿ ನವ ಪೋತ ಪುಣ್ಯ ಶ್ರವಣ ಕೀರ್ತನ ಪಾದವನರುಹ

ಭವನ ನಾವಿಕನಾಗಿ ಭಕುತರ ತಾರಿಸುವ ಬಿಡದೆ

ಪ್ರವಹ ಮಾರುತದೇವ ಪರಮೋತ್ಸವ ವಿಶೇಷ ನಿರಂತರ

ಮಹಾ ಪ್ರವಹದಂದದಿ ಕೊಡಲಿ ಭಗವದ್ಭಕ್ತ ಸಂತತಿಗೆ//20//


ಜನರನು ಉದ್ಧರಿಸುವೆನೆನುತ ನಿಜ ಜನಕನ ಅನುಮತದಲಿ

ಸ್ವಯಂಭುವ ಮನುವಿನಿಂದಲಿ ಪಡೆದೆ ಸುಕುಮಾರಕರನು ಒಲುಮೆಯಲಿ

ಜನನಿ ಶತ ರೂಪಾ ನಿತಂಬಿನಿ ಮನವಚನಕಾಯದಲಿ ತಿಳಿದು

ಅನುದಿನದಿ ನಮಿಸುವೆ ಕೊಡು ಎಮಗೆ ಸನ್ಮಂಗಳವನೊಲಿದು//21//


ನರನ ನಾರಾಯಣನ ಹರಿಕೃಷ್ಣರ ಪಡೆದೆ ಪುರುಷಾರ್ಥ ತೆರದಲಿ

ತರಣಿ ಶಶಿ ಶತರೂಪರಿಗೆ ಸಮನೆನಿಸಿ

ಪಾಪಿಗಳ ನಿರಯದೊಳು ನೆಲೆಗೊಳಿಸಿ ಸಜ್ಜನ ನೆರವಿಯನು ಪಾಲಿಸುವ

ಔದುಂಬರ ಸಲಹು ಸಲಹೆಮ್ಮ ಬಿಡದಲೆ ಪರಮ ಕರುಣದಲಿ//22//


ಮಧು ವಿರೋಧಿ ಮನುಜ ಕ್ಷೀರೋದಧಿ ಮಥನ ಸಮಯದಲಿ ಉದಯಿಸಿ

ನೆರೆ ಕುಧರಜಾ ವಲ್ಲಭನ ಮಸ್ತಕ ಮಂದಿರದಿ ಮೆರೆವ ವಿಧು

ತವಾಂಘ್ರಿ ಸರೋಜಾ ಯುಗಳಕೆ ಮಧುಪನಂದದಲಿ ಎರಗಲು ಎನ್ಮನದ ಅಧಿಪ

ವಂದಿಪೆನು ಅನುದಿನ ಅಂತಸ್ತಾಪ ಪರಿಹರಿಸು//23//


ಶ್ರೀ ವನರುಹಾಂಬಕನ ನೇತ್ರಗಳೇ ಮನೆಯೆನಿಸಿ

ಸಜ್ಜನರಿಗೆ ಕರಾವಲಂಬನವೀವ ತೆರದಿ ಮಯೂಖ ವಿಸ್ತರಿಪ

ಆ ವಿವಸ್ವಾನ್ ನೆನಿಸಿ ಕೊಂಬ ವಿಭಾವಸು

ಅಹರ್ನಿಶಿಗಳಲಿ ಕೊಡಲೀ ವಸುಂಧರೆಯೊಳು ವಿಪಶ್ಚಿತರೊಡನೆ ಸುಜ್ಞಾನ//24//


ಲೋಕ ಮಾತೆಯ ಪಡೆದು ನೀ ಜಗದೇಕಪಾತ್ರನಿಗಿತ್ತ ಕಾರಣ

ಶ್ರೀ ಕುಮಾರಿ ಸಮೇತ ನೆಲಸಿದ ನಿನ್ನ ಮಂದಿರದಿ

ಆ ಕಮಲಭವ ಮುಖರು ಬಿಡದೆ ಪರಾಕೆನುತ ನಿಂದಿಹರೋ

ಗುಣ ರತ್ನಾಕರನೆ ಬಣ್ಣಿಸಲಳವೆ ಕೊಡು ಎಮಗೆ ಸನ್ಮನವ//25//


ಪಣೆಯೊಳೊಪ್ಪುವ ತಿಲಕ ತುಳಸೀ ಮಣಿಗಣಾನ್ವಿತ ಕಂಠ

ಕರದಲಿ ಕ್ವಣಿತ ವೀಣಾ ಸುಸ್ವರದಿ ಬಹು ತಾಳ ಗತಿಗಳಲಿ

ಪ್ರಣವ ಪ್ರತಿಪಾದ್ಯನ ಗುಣಂಗಳ ಕುಣಿದು ಪಾಡುತ

ಪರಮ ಸುಖ ಸಂದಣಿಯೊಳು ಆಡುವ ದೇವರ್ಷಿ ನಾರದರಿಗೆ ಅಭಿನಮಿಪೆ//26//


ಆ ಸರಸ್ವತಿ ತೀರದಲಿ ಬಿನ್ನೈಸಲು ಆ ಮುನಿಗಳ ನುಡಿಗೆ

ಜಡಜಾಸನ ಮಹೇಶ ಅಚ್ಯುತರ ಲೋಕಂಗಳಿಗೆ ಪೋಗಿ

ತಾ ಸಕಲ ಗುಣಗಳ ವಿಚಾರಿಸಿ ಕೇಶವನೆ ಪರದೈವವು ಎಂದು ಉಪದೇಶಿಸುವ

ಭೃಗು ಮುನಿಪ ಕೊಡಲಿ ಎಮಗೆ ಅಖಿಳ ಪುರುಷಾರ್ಥ//27//


ಬಿಸರುಹಾಂಬಕನ ಆಜ್ಞೆಯಲಿ ಸುಮನಸ ಮುಖನು ತಾನೆನಿಸಿ

ನಾನಾ ರಸಗಳುಳ್ಳ ಹರಿಸ್ಸುಗಳನು ಅವರವರಿಗೊಯ್ದು ಈವ

ವಸುಕುಲಾಧಿಪ ಯಜ್ಞಪುರುಷನ ಅಸಮ ಬಲ ರೂಪಂಗಳಿಗೆ ವಂದಿಸುವೆ

ಜ್ಞಾನ ಯಶಸ್ಸು ವಿದ್ಯ ಸುಬುದ್ಧಿ ಕೊಡಲೆಮಗೆ//28//


ತಾತನ ಅಪ್ಪಣೆಯಿಂದ ನೀ ಪ್ರಖ್ಯಾತಿಯುಳ್ಳ ಅರವತ್ತು ಮಕ್ಕಳ

ಪ್ರೀತಿಯಿಂದಲಿ ಪಡೆದು ಅವರವರಿಗಿತ್ತು ಮನ್ನಿಸಿದೆ

ವೀತಿ ಹೋತ್ರನ ಸಮಳೆನಿಸುವ ಪ್ರಸೂತಿ ಜನನಿ

ತ್ವದಂಘ್ರಿ ಕಮಲಕೆ ನಾ ತುತಿಸಿ ತಲೆಬಾಗುವೆ ಎಮ್ಮ ಕುಟುಂಬ ಸಲಹುವುದು//29//


ಶತ ಧೃತಿಯ ಸುತರೀರ್ವರ ಉಳಿದ ಅಪ್ರತಿಮ ಸುತಪೋ ನಿಧಿಗಳ

ಪರಾಜಿತನ ಸುಸಮಾಧಿಯೊಳು ಇರಿಸಿ ಮೂರ್ಲೋಕದೊಳು ಮೆರೆವ

ವ್ರತಿವರ ಮರೀಚಿ ಅತ್ರಿ ಪುಲಹಾ ಕ್ರತು ವಸಿಷ್ಠ ಪುಲಸ್ತ್ಯ

ವೈವಸ್ವತನು ವಿಶ್ವಾಮಿತ್ರ ಅಂಗಿರರ ಅಂಘ್ರಿಗೆರಗುವೆನು//30//


ದ್ವಾದಶ ಆದಿತ್ಯರೊಳು ಮೊದಲಿಗನಾದ ಮಿತ್ರ

ಪ್ರವಹ ಮಾನಿನಿಯಾದ ಪ್ರಾವಹಿ ನಿರ್ಋತಿ ನಿರ್ಜರ ಗುರು ಮಹಿಳೆ ತಾರಾ

ಈ ದಿವೌಕಸರು ಅನುದಿನ ಆಧಿವ್ಯಾಧಿ ಉಪಟಳವ ಅಳಿದು

ವಿಬುಧರಿಗೆ ಆದರದಿ ಕೊಡಲಿ ಅಖಿಳ ಮಂಗಳವ ಆವ ಕಾಲದಲಿ//31//


ಮಾನನಿಧಿಗಳು ಎನಿಸುವ ವಿಷ್ವಕ್ಸೇನ ಧನಪ ಗಜಾನನರಿಗೆ

ಸಮಾನರು ಎಂಭತ್ತೈದು ಶೇಷ ಶತಸ್ಥ ದೇವಗಣಕೆ ಆ ನಮಿಸುವೆನು

ಬಿಡದೆ ಮಿಥ್ಯಾ ಜ್ಞಾನ ಕಳೆದು ಸುಬುದ್ಧಿನಿತ್ತು

ಸದಾನುರಾಗದಲಿ ಎಮ್ಮ ಪರಿಪಾಲಿಸಲೆಂದೆನುತ//32//


ಭೂತ ಮರುತನು ಅವಾಂತರ ಅಭಿಮಾನಿ ತಪಸ್ವಿ ಮರೀಚಿ ಮುನಿ

ಪುರುಹೂತ ನಂದನ ಪಾದಮಾನಿ ಜಯಂತರು ಎಮಗೊಲಿದು

ಕಾತರವ ಪುಟ್ಟಿಸದೆ ವಿಷಯದಿ ವೀತಭಯನ ಪದಾಬ್ಜದಲಿ

ವಿಪರೀತ ಬುದ್ಧಿಯನು ಈಯದೆ ಸದಾ ಪಾಲಿಸಲೆಮ್ಮ//33//


ಓದಿಸುವ ಗುರುಗಳನು ಜರಿದು ಸಹ ಓದುಗರಿಗೆ ಉಪದೇಶಿಸಿದ

ಮಹದಾದಿ ಕಾರಣ ಸರ್ವಗುಣ ಸಂಪೂರ್ಣ ಹರಿಯೆಂದು ವಾದಿಸುವ

ತತ್ಪತಿಯ ತೋರೆಂದು ಆ ದನುಜ ಬೆಸಗೊಳಲು

ಸ್ತಂಭದಿ ಶ್ರೀದನ ಆಕ್ಷಣ ತೋರಿಸಿದ ಪ್ರಹ್ಲಾದ ಸಲಹೆಮ್ಮ//34//


ಬಲಿ ಮೊದಲು ಸಪ್ತ ಇಂದ್ರರು ಇವರಿಗೆ ಕಲಿತ ಕರ್ಮಜ ದಿವಿಜರು ಎಂಬರು

ಉಳಿದ ಏಕಾದಶ ಮನುಗಳು ಉಚಿಥ್ಥ್ಯ ಚವನ ಮುಖ

ಕುಲರ್ಷಿಗಳು ಎಂಭತ್ತು ಹೈಹಯ ಇಳಿಯ ಕಂಪನಗೈದ ಪೃಥು

ಮಂಗಳ ಪರೀಕ್ಷಿತ ನಹುಷ ನಾಭಿ ಯಯಾತಿ ಶಶಿಬಿಂದು//35//


ಶತಕ ಸಂಕೇತ ಉಳ್ಳ ಪ್ರಿಯವ್ರತ ಭರತ ಮಾಂಧಾತ ಪುಣ್ಯಾಶ್ರಿತರು

ಜಯವಿಜಯಾದಿಗಳು ಗಂಧರ್ವರೆಂಟು ಜನ

ಹುತವಹಜ ಪಾವಕ ಸನಾತನ ಪಿತೃಗಳು ಎಳ್ವರು ಚಿತ್ರಗುಪ್ತರು

ಪ್ರತಿದಿನದಿ ಪಾಲಿಸಲಿ ತಮ್ಮವನೆಂದು ಎಮಗೊಲಿದು//36//


ವಾಸವಾಲಯ ಶಿಲ್ಪ ವಿಮಲ ಜಲಾಶಯಗಳೊಳು ರಮಿಪ ಊರ್ವಶಿ

ಭೇಶ ರವಿಗಳ ರಿಪುಗಳೆನಿಸುವ ರಾಹುಕೇತುಗಳು

ಶ್ರೀಶ ಪದ ಪಂಥಾನ ಧೂಮಾರ್ಚೀರ ದಿವಿಜರು

ಕರ್ಮಜರಿಗೆ ಸದಾ ಸಮಾನ ದಿವೌಕಸರು ಕೊಡಲಿ ಎಮಗೆ ಮಂಗಳವ//37//


ದ್ಯುನದಿ ಶ್ಯಾಮಲ ಸಂಜ್ಞ ರೋಹಿಣಿ ಘನಪ ಪರ್ಜನ್ಯ ಅನಿರುದ್ಧನ ವನಿತೆ

ಬ್ರಹ್ಮಾಂಡಾಭಿಮಾನಿ ವಿರಾಟ ದೇವಿಯರ ನೆನೆವೆನು

ಆ ನಲವಿಂದೆ ದೇವಾನನ ಮಹಿಳೆ ಸ್ವಾಹಾಖ್ಯರು

ಆಲೋಚನೆ ಕೊಡಲಿ ನಿರ್ವಿಘ್ನದಿಂ ಭಗವದ್ಗುಣoಗಳಲಿ//38//


ವಿಧಿಪಿತನ ಪಾದಾಂಬುಜಗಳಿಗೆ ಮಧುಪನಾಂತೆ ವಿರಾಜಿಪಾಮಲ

ಉದಕಗಳಿಗೆ ಸದಾಭಿಮಾನಿಯು ಎಂದೆನಿಸಿಕೊಂಬ ಬುಧಗೆ ನಾ ವಂದಿಸುವೆ ಸಮ್ಮೋದದಿ

ನಿರಂತರವು ಒಲಿದೆಮಗೆ

ಅಭ್ಯುದಯ ಪಾಲಿಸಲೆಂದು ಪರಮೋತ್ಸವದೊಳು ಅನುದಿನದಿ//39//


ಶ್ರೀ ವಿರಿಂಚಾದ್ಯರ ಮನಕೆ ನಿಲುಕಾವ ಕಾಲಕೆ

ಜನನ ರಹಿತನ ತಾವೊಲಿಸಿ ಮಗನೆಂದು ಮುದ್ದಿಸಿ ಲೀಲೆಗಳ ನೋಳ್ಪ

ದೇವಕಿಗೆ ವಂದಿಪೆ ಯಶೋದಾ ದೇವಿಗೆ ಆನಮಿಸುವೆನು

ಪರಮ ಕೃಪಾವಲೋಕನದಿಂದ ಸಲಹುವುದು ಎಮ್ಮ ಸಂತತಿಯ//40//


ಪಾಮರರನ ಪವಿತ್ರಗೈಸುವ ಶ್ರೀ ಮುಕುಂದನ ವಿಮಲ ಮಂಗಳ

ನಾಮಗಳಿಗೆ ಅಭಿಮಾನಿಯಾದ ಉಷಾಖ್ಯ ದೇವಿಯರು

ಭೂಮಿಯೊಳಗುಳ್ಳ ಅಖಿಳ ಸಜ್ಜನರ ಆಮಯಾದಿಗಳ ಅಳಿದು ಸಲಹಲಿ

ಆ ಮರುತ್ವಾನ್ ಮನೆಯ ವೈದ್ಯರ ರಮಣಿ ಪ್ರತಿದಿನದಿ//41//


ಪುರುಟ ಲೋಚನ ನಿನ್ನ ಕದ್ದೊಯ್ದಿರಲು ಪ್ರಾರ್ಥಿಸೆ

ದೇವತೆಗಳ ಉತ್ತರವ ಲಾಲಿಸಿ ತಂದ ವರಾಹ ರೂಪ ತಾನಾಗಿ

ಧರಣಿ ಜನನಿ ನಿನ್ನ ಪಾದಕ್ಕೆರಗಿ ಬಿನ್ನೈಸುವನು

ಪಾದಸ್ಪರ್ಶ ಮೊದಲಾದ ಅಖಿಳ ದೋಷಗಳು ಎಣಿಸದಿರೆಂದು//42//


ವನಧಿವಸನೆ ವರಾದ್ರಿ ನಿಚಯ ಸ್ತನವಿರಾಜಿತೆ

ಚೇತನಾಚೇತನ ವಿಧಾರಕೆ ಗಂಧ ರಸ ರೂಪಾದಿ ಗುಣ ವಪುಷೆ

ಮುನಿಕುಲೋತ್ತಮ ಕಶ್ಯಪನ ನಿಜತನುಜೆ ನಿನಗೆ ಅನಮಿಪೆ

ಎನ್ನವಗುಣಗಳು ಎಣಿಸದೆ ಪಾಲಿಪುದು ಪರಮಾತ್ಮನರ್ಧಾಂಗಿ//43//


ಹರಿ ಗುರುಗಳ ಅರ್ಚಿಸದ ಪಾಪಾತ್ಮರನ ಶಿಕ್ಷಿಸಲೋಸುಗ

ಶನೈಶ್ಚರನೆನಿಸಿ ದುಷ್ಫಲಗಳೀವೆ ನಿರಂತರದಿ ಬಿಡದೆ

ತರಣಿ ನಂದನ ನಿನ್ನ ಪಾದಾಂಬುರುಹಗಳಿಗೆ ಆ ನಮಿಪೆ

ಬಹು ದುಸ್ತರ ಭವಾರ್ಣದಿ ಮಗ್ನನಾದೆನ್ನ ಉದ್ಧರಿಸಬೇಕು//44//


ನಿರತಿಶಯ ಸುಜ್ಞಾನ ಪೂರ್ವಕ ವಿರಚಿಸುವ ನಿಷ್ಕಾಮ ಕರ್ಮಗಳರಿತು

ತತ್ತತ್ಕಾಲದಲಿ ತಜ್ಜನ್ಯ ಫಲರಸವ ಹರಿಯ ನೇಮದಲಿ ಉಣಿಸಿ

ಬಹುಜೀವರಿಗೆ ಕರ್ಮಪನೆನಿಪ

ಗುರುಪುಷ್ಕರನು ಸತ್ಕ್ರಿಯಂಗಳಲಿ ನಿರ್ವಿಘ್ನತೆಯ ಕೊಡಲಿ//45//


ಶ್ರೀನಿವಾಸನ ಪರಮ ಕಾರುಣ್ಯಾನಿ ವಾಸಸ್ಥಾನರು ಎನಿಪ ಕೃಶಾನುಜರು

ಸಹಸ್ರ ಷೋಡಶ ಶತರು ಶ್ರೀ ಕೃಷ್ಣ ಮಾನಿನಿಯರು ಎಪ್ಪತ್ತು

ಯಕ್ಷರು ದಾನವರು ಮೂವತ್ತು

ಚಾರಣ ಅಜಾನಜ ಅಮರರು ಅಪ್ಸರರು ಗಂಧರ್ವರಿಗೆ ನಮಿಪೆ//46//


ಕಿನ್ನರರು ಗುಹ್ಯಕರು ರಾಕ್ಷಸ ಪನ್ನಗರು ಪಿತೃಗಳು ಸಿದ್ಧರು

ಸನ್ನುತ ಅಜಾನಜರು ಸಮರು ಇವರು ಅಮರ ಯೋನಿಜರು

ಇನ್ನಿವರ ಗಣವೆಂತು ಬಣ್ಣಿಸಲು ಎನ್ನೊಳವೆ

ಕರುಣದಲಿ ಪರಮಾಪನ್ನ ಜನರಿಗೆ ಕೊಡಲಿ ಸನ್ಮುದ ಪರಮ ಸ್ನೇಹದಲಿ//47//


ಆ ಯಮುನೆಯೊಳು ಸಾದರದಿ ಕಾತ್ಯಾಯನೀ ವ್ರತಧರಿಸಿ

ಕೆಲರು ದಯಾಯುಧನೆ ಪತಿಯೆಂದು ಕೆಲವರು ಜಾರತನದಲ್ಲಿ

ವಾಯುಪಿತನೊಲಿಸಿದರು ಈರ್ವಗೆ ತೋಯ ಸರಸರ

ಪಾದಕಮಲಕೆ ನಾ ಎರಗುವೆ ಮನೋರಥಂಗಳ ಸಲಿಸಲಿ ಅನುದಿನದಿ//48//


ನೂರುಮುನಿಗಳ ಉಳಿದು ಮೇಲಣ ನೂರು ಕೋಟಿ ತಪೋಧರನ

ಪಾದಾರವಿಂದಕೆ ಮುಗಿವೆ ಕರಗಳನು ಉದ್ಧರಿಸಲೆಂದು

ಮೂರು ಸಪ್ತ ಶತಾಹ್ವಯರ ತೊರೆದು ಈ ಋಷಿಗಳ ಅನಂತರಲಿಹ

ಭೂರಿ ಪಿತೃಗಳು ಕೊಡಲಿ ಎಮಗೆ ಸಂತತ ಸುಮಂಗಳವ//49//


ಪಾವನಕೆ ಪಾವನನು ಎನಿಸುವ ರಮಾ ವಿನೋದಿಯ ಗುಣಗಣoಗಳ

ಸಾವಧಾನದಲಿ ಏಕ ಮಾನಸರಾಗಿ ಸುಸ್ವರದಿ

ಆ ವಿಬುಧಪತಿ ಸಭೆಯೊಳಗೆ ನಾನಾ ವಿಲಾಸದಿ ಪಾಡಿ ಸುಖಿಸುವ

ದೇವ ಗಂಧರ್ವರು ಕೊಡಲಿ ಎಮಗೆ ಅಖಿಳ ಪುರುಷಾರ್ಥ//50//


ಭುವನ ಪಾವನ ಮಾಳ್ಪ ಲಕ್ಷ್ಮೀ ಧವನ

ಮಂಗಳ ದಿವ್ಯ ನಾಮ ಸ್ತವನಗೈವ ಮನುಷ್ಯ ಗಂಧರ್ವರಿಗೆ ವಂದಿಸುವೆ

ಪ್ರವರ ಭೂಭುಜರ ಉಳಿದು ಮಧ್ಯಮ ಕುವಲಯಪರು ಎಂದು ಎನಿಸಿಕೊಂಬರ

ದಿವಸ ದಿವಸಂಗಳಲಿ ನೆನೆವನು ಕರಣ ಶುದ್ಧಿಯಲಿ//51//


ಶ್ರೀ ಮುಕುಂದನ ಮೂರ್ತಿಸಲೆ ಸೌದಾಮಿನಿಯೋಳ್ ಹೃದಯ ವಾರಿಜ

ವ್ಯೋಮ ಮಂಡಲ ಮಧ್ಯದಲಿ ಕಾಣುತಲಿ ಮೋದಿಸುವ

ಆ ಮನುಷ್ಯೋತ್ತಮರ ಪದಯುಗ ತಾಮರಸಗಳಿಗೆ ಎರಗುವೆ

ಸದಾ ಕಾಮಿತಾರ್ಥಗಳಿತ್ತು ಸಲಹಲಿ ಪ್ರಣತ ಜನತತಿಯ//52//


ಈ ಮಹೀ ಮಂಡಲದೊಳಿಹ ಗುರು ಶ್ರೀಮದಾಚಾರ್ಯರ ಮತಾನುಗರು

ಆ ಮಹಾವೈಷ್ಣವರ ವಿಷ್ಣು ಪದಾಬ್ಜ ಮಧುಕರರ ಸ್ತೋಮಕೆ ಅನಮಿಸುವೆನು

ಅವರವರ ನಾಮಗಳನು ಏಂ ಪೇಳ್ವೆ ಬಹುವಿಧ

ಯಾಮ ಯಾಮಂಗಳಲಿ ಬೋಧಿಸಲಿ ಎಮಗೆ ಸನ್ಮತಿಯ//53//


ಮಾರನಯ್ಯನ ಕರುಣ ಪಾರಾವಾರ ಮುಖ್ಯ ಸುಪಾತ್ರರು ಎನಿಪ

ಸರೋರುಹಾಸನ ವಾಣಿ ರುದ್ರ ಇಂದ್ರಾದಿ ಸುರನಿಕರ

ತಾರತಮ್ಯಾತ್ಮಕ ಸುಪದ್ಯಗಳ ಆರು ಪಠಿಸುವರು ಆ ಜನರಿಗೆ

ರಮಾರಮಣ ಪೂರೈಸಲಿ ಈಪ್ಸಿತ ಸರ್ವಕಾಲದಲಿ//54//


ಮೂರು ಕಾಲಗಳಲ್ಲಿ ತುತಿಸೆ ಶರೀರ ವಾನ್ಗ್ಮನಃ ಶುದ್ಧಿ ಮಾಳ್ಪುದು

ದೂರಗೈಸುವದು ಅಖಿಳ ಪಾಪ ಸಮೂಹ ಪ್ರತಿದಿನದಿ

ಚೋರಭಯ ರಾಜಭಯ ನಕ್ರ ಚಮೂರ ಶಸ್ತ್ರ ಜಲಾಗ್ನಿ ಭೂತ

ಮಹೋರಗ ಜ್ವರ ನರಕ ಭಯ ಸಂಭವಿಸದು ಎಂದೆಂದು//55//


ಜಯಜಯತು ತ್ರಿಜಗದ್ವಿಲಕ್ಷಣ ಜಯಜಯತು ಜಗದೇಕ ಕಾರಣ

ಜಯಜಯತು ಜಾನಕೀ ರಮಣ ನಿರ್ಗತ ಜರಾಮರಣ

ಜಯಜಯತು ಜಾಹ್ನವೀ ಜನಕ ಜಯಜಯತು ದೈತ್ಯ ಕುಲಾಂತಕ

ಭವಾಮಯ ಹರ ಜಗನ್ನಾಥ್ ವಿಠಲ ಪಾಹಿಮಾಂ ಸತತ//56//