ಹರಿಕಥಾಮೃತಸಾರ/ಗುಣತಾರತಮ್ಯ

ವಿಕಿಸೋರ್ಸ್ ಇಂದ
Jump to navigation Jump to search

ಶ್ರೀಧರಾ ದುರ್ಗಾ ಮನೋರಮ ವೇಧಮುಖ ಸುಮನಸ ಗಣ ಸಮಾರಾಧಿತ ಪದಾಂಬುಜ

ಜಗದಂತರ್ ಬಹಿರ್ವ್ಯಾಪ್ತ

ಗೋಧರ ಫಣಿಪ ವರಾತಪತ್ರ ನಿಷೇಧ ಶೇಷ ವಿಚಿತ್ರ ಕರ್ಮ

ಸುಬೋಧ ಸುಖಮಯ ಗಾತ್ರ ಪರಮ ಪವಿತ್ರ ಸುಚರಿತ್ರ//1//


ನಿತ್ಯ ನಿರ್ಮಲ ನಿಗಮ ವೇದಯ ಉತ್ಪತ್ತಿ ಸ್ಥಿತಿ ಲಯ ದೂರವರ್ಜಿತ

ಸ್ತುತ್ಯ ಪೂಜ್ಯ ಪ್ರಸಿದ್ಧ ಮುಕ್ತಾಮುಕ್ತ ಗಣ ಸೇವ್ಯ

ಸತ್ಯಕಾಮ ಸ=ಶರಣ್ಯ ಶಾಶ್ವತ ಭೃತ್ಯವತ್ಸಲ ಭಯ ನಿವಾರಣ

ಅತ್ಯಧಿಕ ಸಂಪ್ರಿಯತಮ ಜಗನ್ನಾಥ ಮಾಂ ಪಾಹಿ//2//


ಪರಮ ಪುರುಷನ ರೂಪ ಗುಣವ ಅನುಸರಿಸಿ ಕಾಂಬಳು ಪ್ರವಹದಂದದಿ

ನಿರುಪಮಳು ನಿರ್ದುಷ್ಟ ಸುಖ ಸಂಪೂರ್ಣಳು ಎನಿಸುವಳು

ಹರಿಗೆ ಧಾಮತ್ರಯಳು ಎನಿಸಿ ಆಭರಣ ವಸನ ಆಯುಧಗಳು ಆಗಿದ್ದು

ಅರಿಗಳನು ಸಂಹರಿಸುವಳು ಅಕ್ಷರಳು ಎನಿಸಿಕೊಂಡು//3//


ಈತಗಿಂತ ಅನಂತ ಗುಣದಲಿ ಶ್ರೀ ತರುಣಿ ತಾ ಕಡಿಮೆಯೆನಿಪಳು

ನಿತ್ಯಮುಕ್ತಳು ನಿರ್ವಿಕಾರಳು ತ್ರಿಗುಣ ವರ್ಜಿತಳು

ಧೌತ ಪಾಪ ವಿರಿಂಚಿ ಪವನರ ಮಾತೆಯೆನಿಪ ಮಹಾಲಕುಮಿ

ವಿಖ್ಯಾತಳು ಆಗಿಹಳು ಎಲ್ಲ ಕಾಲದಿ ಶ್ರುತಿ ಪುರಾಣದೊಳು//4//


ಕಮಲ ಸಂಭವ ಪವನರೀರ್ವರು ಸಮರು ಸಮವರ್ತಿಗಳು

ರುದ್ರಾದಿ ಅಮರಗಣ ಸೇವಿತರು ಅಪರಬ್ರಹ್ಮ ನಾಮಕರು

ಯಮಳರಿಗೆ ಮಹಾಲಕ್ಷ್ಮಿ ತಾನುತ್ತಮಳು ಕೋಟಿ ಸಜಾತಿ ಗುಣದಿಂದ

ಅಮಿತ ಸುವಿಜಾತಿ ಅಧಮರು ಎನಿಪರು ಬ್ರಹ್ಮ ವಾಯುಗಳು//5//


ಪತಿಗಳಿಂದ ಸರಸ್ವತೀ ಭಾರತಿಗಳು ಅಧಮರು ನೂರು ಗುಣ ಪರಿಮಿತ ವಿಜಾತಿ ಅವರರು

ಬಲ ಜ್ಞಾನಾದಿ ಗುಣದಿಂದ ಅತಿಶಯರು ವಾಗ್ದೇವಿ ಶ್ರೀ ಭಾರತಿಗೆ

ಪದಪ್ರಯುಕ್ತ ವಿಧಿ ಮಾರುತರವೋಳ್ ಚಿಂತಿಪುದು

ಸದ್ಭಕ್ತಿಯಲಿ ಕೋವಿದರು//6//


ಖಗಪ ಫಣಿಪತಿ ಮ್ರುಡರು ಸಮ ವಾಣಿಗೆ ಶತಗುಣ ಅವರರು ಮೂವರು

ಮಿಗಿಲೆನಿಸುವನು ಶೇಷ ಪದದಿಂದಲಿ ತ್ರಿಯಂಬಕಗೆ

ನಗಧರನ ಷಣ್ಮ ಹಿಷಿಯರು ಪನ್ನಗ ವಿಭೂಷಣಗೈದು

ಮೇನಕಿ ಮಗಳು ವಾರುಣಿ ಸೌಪರ್ಣಿಗಳಿಗೆ ಅಧಿಕವು ಎರಡು ಗುಣ//7//


ಗರುಡ ಶೇಷ ಮಹೇಷರಿಗೆ ಸೌಪರಣಿ ವಾರುಣಿ ಪಾರ್ವತಿ ಮೂರರು ದಶಾಧಮ

ವಾರುಣಿಗೆ ಕಡಿಮೆ ಎನಿಸುವಳು ಗೌರೀ

ಹರನ ಮಡದಿಗೆ ಹತ್ತು ಗುಣದಲಿ ಸುರಪ ಕಾಮರು ಕಡಿಮೆ

ಇಂದ್ರಗೆ ಕೊರತೆಯೆನಿಸುವ ಮನ್ಮಥನು ಪದದಿಂದಲಿ ಆವಾಗ//8//


ಈರೈದು ಗುಣ ಕಡಿಮೆ ಅಹಂಕಾರಿಕ ಪ್ರಾಣನು ಮನೋಜ ನಗಾರಿಗಳಿಗೆ

ಅನಿರುದ್ಧ ರತಿ ಮನು ದಕ್ಷ ಗುರು ಶಚಿಯು ಆರು ಜನ ಸಮ

ಪ್ರಾಣನಿಂದಲಿ ಹೌರಗ ಎನಿಪರು ಹತ್ತು ಗುಣದಲಿ

ಮಾರಜಾದ್ಯರಿಗೆ ಐದು ಗುಣದಿಂದ ಅಧಮ ಪ್ರವಹಾಖ್ಯ//9//


ಗುಣದ್ವಯದಿಂ ಕಡಿಮೆ ಪ್ರವಹಗೆ ಿನ ಶಶಾಂಕಯಮ ಸ್ವಯಂಭುವ ಮನು ಮಡದಿ ಶತರೂಪ

ನಾಲ್ವರು ಪಾದ ಪಾದಾರ್ಧ ವನಧಿ ನೀಚ

ಪಾದಾರ್ಧ ನಾರದ ಮುನಿಗೆ ಭೃಗು ಅಗ್ನಿ ಪ್ರಸೂತಿಗಳು

ಎನಿಸುವರು ಪಾದಾರ್ಧ ಗುಣದಿಂದ ಅಧಮರಹುದೆಂದು//10//


ಹುತವಹಗೆ ದ್ವಿಗುಣ ಅಧಮರು ವಿಧಿಸುತ ಮರೀಚಾದಿಗಳು

ವೈವಸ್ವತನು ವಿಶ್ವಾಮಿತ್ರರಿಗೆ ಕಿಂಚಿದ್ ಗುಣಾಧಮನು

ವ್ರತಿವರ ಜಗನ್ಮಿತ್ರ ವರ ನಿರ್ಋತಿ ಪ್ರಾವಹಿ ತಾರರಿಗೆ

ಕಿಂಚಿತ್ ಗುಣ ಅಧಮ ಧನಪ ವಿಶ್ವಕ್ಸೇನರು ಎನಿಸುವರು//11//


ಧನಪ ವಿಶ್ವಕ್ಸೇನ ಗೌರೀ ತನಯರಿಗೆ ಉಕ್ತ ಇತರರು ಸಮರೆನಿಸುವರು

ಎಂಭತ್ತೈದು ಜನ ಶೇಷ ಶತರೆಂದು

ದಿನಪರಾರು ಏಳಧಿಕ ನಾಲ್ವತ್ತನಿಲರು ಏಳು ವಸು

ರುದ್ರರೀರೈದು ಅನಿತು ವಿಶ್ವೇ ದೇವ ಋಭು ಅಶ್ವಿನೀ ಪಿತೃ ಧರಣೀ//12//


ಇವರಿಗಿಂತಲಿ ಕೊರತೆಯೆನಿಪರು ಚ್ಯವನ ಸನಕಾದಿಗಳು

ಪಾವಕ ಕವಿ ಉಚಿಥ್ಥ್ಯ ಜಯಂತ ಕಶ್ಯಪ ಮನುಗಳು ಎಕದಶ

ಧ್ರುವ ನಹುಷ ಶಶಿಬಿಂದು ಹೈಹಯ ದೌಷ್ಯಂತಿ ವಿರೋಚನನ ನಿಜ ಕುವರ

ಬಲಿ ಮೊದಲಾದ ಸಪ್ತ ಇಂದ್ರರು ಕಕುತ್ಸ್ಥ ಗಯ//13//


ಪೃಥು ಭರತ ಮಾಂಧಾತ ಪ್ರಿಯವ್ರತ ಮರುತ ಪ್ರಹ್ಲಾದ ಸುಪರೀಕ್ಷಿತ

ಹರಿಶ್ಚಂದ್ರ ಅಂಬರೀಷ ಉತ್ತನಪಾದ ಮುಖ

ಶತ ಸುಪುಣ್ಯ ಶ್ಲೋಕರು ಗದಾ ಭ್ರುತಗೆ ಅಧಿಷ್ಠಾನರು

ಸುಪ್ರಿಯವ್ರತಗೆ ದ್ವಿಗುಣ ಅಧಮರು ಕರ್ಮಜರು ಎಂದು ಕರೆಸುವರು//14//


ನಳಿನಿ ಸಂಜ್ಞಾ ರೋಹಿಣೀ ಶ್ಯಾಮಲ ವಿರಾಟ್ ಪರ್ಜನ್ಯರು ಅಧಮರು

ಯಲರು ಮಿತ್ರನ ಮಡದಿ ದ್ವಿಗುಣ ಅಧಮಳು ಬಾಂಬೊಳಗೆ

ಜಲ ಮಯ ಬುಧ ಅಧಮನು ದ್ವಿಗುಣದಿ ಕೆಳಗೆನಿಸುವಳು ಉಷಾ

ಶನೈಶ್ಚರಳಿಗೆ ಈರು ಗುಣಾಧಮರು ಉಷಾ ದೇವಿ ದ್ಯಸಿಯಿಂದಾ//15//


ಎರಡು ಗುಣ ಕರ್ಮಾಧಿಪತಿ ಪುಷ್ಕರ ಕಡಿಮೆ

ಆಜಾನು ದಿವಿಜರು ಚಿರ ಪಿತೃಗಳಿಂದ ಉತ್ತಮರು ಕಿಂಕರರು ಪುಷ್ಕರಗೆ

ಸುರಪನಾಲಯ ಗಾಯಕ ಉತ್ತಮ ಎರಡೈದು ಗುಣದಿಂದಾಧಮ

ತುಂಬುರಗೆ ಸಮ ನೂರುಕೋಟಿ ಋಷಿಗಳು ನೂರುಜನರುಳಿದು//16//


ಅವರವರ ಪತ್ನಿಯರು ಅಪ್ಸರ ಯುವತಿಯರು ಸಮ

ಉತ್ತಮರನುಳಿದು ಅವರರೆನಿಪರು ಮನುಜ ಗಂಧರ್ವರು ದ್ವಿಷಡ್ಗುಣದಿ

ಕುವಲಯಾಧಿಪರು ಈರು ಐದು ಗುಣ ಅವನಿಪ ಸ್ತ್ರೀಯರು

ದಶೋತ್ತರ ನವತಿ ಗುಣದಿಂದ ಅಧಮರು ಎನಿಪರು ಮಾನುಷೋತ್ತಮರು//17//


ಸತ್ವಸತ್ವರು ಸತ್ವರಾಜಸ ಸತ್ವತಾಮಸ ಮೂವರು

ರಜಸ್ಸತ್ವ ಅಧಿಕಾರಿಗಳು ಭಗವದ್ಭಕ್ತರು ಎನಿಸುವರು

ನಿತ್ಯ ಬದ್ಧರು ರಜೋರಜರು ಉತ್ಪತ್ತಿ ಭೂಸ್ವರ್ಗದೊಳು

ನರಕದಿ ಪೃಥ್ವಿಯೊಳು ಸಂಚರಿಸುತಿಪ್ಪರು ರಜಸ್ತಾಮಸರು//18//


ತಮಸ್ಸಾತ್ವಿಕರು ಎನಿಸಿಕೊಂಬರು ಅಮಿತನ ಆಖ್ಯಾತ ಅಸುರರ ಗಣ

ತಮೋ ರಾಜಸರು ಎನಿಸಿಕೊಂಬರು ದೈತ್ಯ ಸಮುದಾಯ

ತಮಸ್ತಾಮಸ ಕಲಿ ಪುರಂಧ್ರಿಯು ಅಮಿತ ದುರ್ಗುಣ ಪೂರ್ಣ

ಸರ್ವಾಧಮರೊಳು ಅಧಮಾಧಮ ದುರಾತ್ಮನು ಕಲಿಯೆನಿಸಿಕೊಂಬ//19//


ಇವನ ಪೋಲುವ ಪಾಪಿ ಜೀವರು ಭುವನ ಮೂವರೊಳಿಲ್ಲ ನೋಡಲು

ನವ ವಿಧ ದ್ವೇಷಗಳಿಗೆ ಆಕಾರನು ಎನಿಸಿಕೊಳುತಿಪ್ಪ

ಬವರದೊಳು ಬಂಗಾರದೊಳು ನಟ ಯುವತಿ ದ್ಯೂತಾ ಪೇಯ ಮೃಷದೊಳು

ಕವಿಸಿ ಮೋಹದಿ ಕೆಡಿಸುವನುಯೆಂದರಿದು ತ್ಯಜಿಸುವದು//20//


ತ್ರಿವಿಧ ಜೀವ ಪ್ರತತಿಗಳ ಸಗ್ಗ ಆವೊಳೆಯಾಣ್ಮ ಆಲಯನು ನಿರ್ಮಿಸಿ

ಯುವತಿಯರೊಡಗೂಡಿ ಕ್ರೀಡಿಸುವನು ಕೃಪಾಸಾಂದ್ರ

ದಿವಿಜ ದಾನವ ತಾರತಮ್ಯದ ವಿವರ ತಿಳಿವ ಮಹಾತ್ಮರಿಗೆ

ಬಾನ್ನವಿರ ಸಖ ತಾನೊಲಿದು ಉದ್ಧರಿಸುವನು ದಯದಿಂದ//21//


ದೇವ ದೈತ್ಯರ ತಾರತಮ್ಯವು ಪಾವಮಾನಿ ಮತಾನುಗರಿಗೆ ಇದು ಕೇವಲ ಅವಶ್ಯಕವು

ತಿಳಿವುದು ಸರ್ವ ಕಾಲದಲಿ

ದಾವಶಿಖಿ ಪಾಪಾಟವಿಗೆ ನವ ನಾವೆಯೆನಿಪುದು ಭವ ಸಮುದ್ರಕೆ

ಪಾವಟಿಗೆ ವೈಕುಂಠ ಲೋಕಕೆ ಇದೆಂದು ಕರೆಸುವುದು//22//


ತಾರತಮ್ಯ ಜ್ಞಾನ ಮುಕ್ತಿ ದ್ವಾರವು ಎನಿಪುದು ಭಕ್ತ ಜನರಿಗೆ ತೋರಿ ಪೇಳಿ

ಸುಖಾಬ್ಧಿಯೊಳು ಲೋಲ್ಯಾಡುವುದು ಬುಧರು

ಕ್ರೂರ ಮಾನವರಿಗಿದು ಕರ್ಣ ಕಟೋರವು ಎನಿಪುದು

ನಿತ್ಯದಲಿ ಅಧಿಕಾರಿಗಳಿಗಿದನ ಅರುಪುವುದು ದುಸ್ತರ್ಕಿಗಳ ಬಿಟ್ಟು//23//


ಹರಿಸಿರಿವಿರಿಂಚಿ ಈರಭಾರತಿ ಗರುಡ ಫಣಿ ಪತಿ ಷಣ್ಮಹಿಷಿಯರು

ಗಿರಿಜನಾಕ ಈಶ ಸ್ಮರ ಪ್ರಾಣ ಅನಿರುದ್ಧ ಶಚೀದೇವೀ

ಗುರು ರತೀ ಮನು ದಕ್ಷ ಪ್ರವಹಾ ಮರುತ ಮಾನವಿ ಯಮ ಶಶಿ ದಿವಾಕರ

ವರುಣ ನಾರದ ಸುರಾಸ್ಯ ಪ್ರಸೂತಿ ಭೃಗು ಮುನಿಪ//24//


ವ್ರತತಿಜಾಸನ ಪುತ್ರರೆನಿಸುವ ವ್ರತಿವರ ಮರೀಚಿ ಅತ್ರಿ

ವೈವಸ್ವತನು ತಾರಾ ಮಿತ್ರ ನಿರ್ಋತಿ ಪ್ರವಹ ಮಾರುತನ ಸತಿ

ಧನ ಈಶ ಅಶ್ವಿನಿಗಳ ಈರ್ಗಣಪತಿಯು ವಿಶ್ವಕ್ಸೇನ ಶೇಷನು ಶತರು

ಮನುಗಳು ಉಚಿಥ್ಯ ಛಾವಣ ಮುನಿಗಳಿಗೆ ನಮಿಪೆ//25//


ಶತ ಸುಪುಣ್ಯ ಶ್ಲೋಕರು ಎನಿಸುವ ಕ್ಷಿತಿಪರಿಗೆ ನಮಿಸುವೆನು

ಬಾಗೀರಥಿ ವಿರಾಟ್ ಪರ್ಜನ್ಯ ರೋಹಿಣಿ ಶ್ಯಾಮಲಾ ಸಂಜ್ಞಾಹುತ ವಹನ ಮಹಿಳಾ

ಬುಧ ಉಷಾ ಕ್ಷಿತಿ ಶನೈಶ್ಚರ ಪುಷ್ಕರರಿಗೆ

ಆನತಿಸಿ ಬಿನ್ನಯಿಸುವೆನು ಭಕ್ತಿ ಜ್ಞಾನ ಕೊಡಲೆಂದು//26//


ನೂರಧಿಕವು ಆಗಿಪ್ಪ ಮತ್ತೆ ಹದಿನಾರು ಸಾವಿರ ನಂದ ಗೋಪ ಕುಮಾರನ

ಅರ್ಧಾಂಗಿಯರು ಅಗಸ್ತ್ಯ ಆದೇ ಮುನೀಶ್ವರರು

ಊರ್ವಶೀ ಮೊದಲಾದ ಅಪ್ಸರ ನಾರಿಯರು ಶತ ತುಂಬುರರು

ಕಂಸಾರಿ ಗುಣಗಳ ಕೀರ್ತನೆಯ ಮಾಡಿಸಲಿ ಎನ್ನಿಂದ//27//


ಪಾವನರು ಶುಚಿ ಶುದ್ಧ ನಾಮಕ ದೇವತೆಗಳು ಆಜಾನ ಚಿರ ಪಿತೃ

ದೇವ ನರ ಗಂಧರ್ವರು ಅವನಿಪ ಮಾನುಷೋತ್ತಮರು

ಈ ವಸುಮತಿಯೊಳು ಉಳ್ಳ ವೈಷ್ಣವರ ಅವಳಿಯೊಳು ಇಹನೆಂದು

ನಿತ್ಯಡಿ ಸೇವಿಪುದು ಸಂತೋಷದಿಂ ಸರ್ವ ಪ್ರಕಾರದಲಿ//28//


ಮಾನುಷೋತ್ತಮರನ ವಿಡಿದು ಚತುರಾನನ ಅಂತ ಶತ ಉತ್ತಮತ್ವ

ಕ್ರಮೇಣ ಚಿಂತಿಪ ಭಕ್ತರಿಗೆ ಚತುರ ವಿಧ ಪುರುಷಾರ್ಥ

ಶ್ರೀನಿಧಿ ಜಗನ್ನಾಥ ವಿಠಲ ತಾನೇ ಒಲಿದು ಈವನು

ನಿರಂತರ ಸಾನುರಾಗದಿ ಪಠಿಸುವುದು ಸಂತರಿದ ಮರೆಯದಲೆ//29//