ಹರಿಕಥಾಮೃತಸಾರ/ಮಾತೃಕಾ ಸಂಧಿ

ವಿಕಿಸೋರ್ಸ್ ಇಂದ
Jump to navigation Jump to search

ಪಾದಮಾನಿ ಜಯಂತನೊಳಗೆ ಸು ಮೇಧನಾಮಕನಿಪ್ಪ ದಕ್ಷಿಣ ಪಾದದುಂಗುಟದಲ್ಲಿ ಪವನನು ಭಾರ ಭೃದ್ರೂಪ | ಕಾದುಕೊಂಡಿಹ ಟಂಕಿ ತರ ಮೊದ ಲಾದ ನಾಮದಿ ಸಂಧಿಗಳಲೀ ರೈದು ರೂಪದಲಿಪ್ಪ ಸಂತತ ನಡೆದು ನಡೆಸುತಲಿ || ೧ ||

ಕಪಿಲ ಚಾರ್ವಾಂಗಾದಿರೂಪದಿ ವಪುಗಳೊಳು ಹಸ್ತಗಳ ಸಂಧಿಯೊ ಳಪರಿಮಿತ ಕರ್ಮಗಳ ಮಾಡುತಲಿಪ್ಪ ದಿನದಿನದಿ | ಕೃಪಣವತ್ಸಲ ಪಾರ್ಶ್ವದೊಳು ಪರ ಸುಫಲಿಯೆನಿಸುವ ಗುದ ಉಪಸ್ಥದಿ ವಿಪುಲಬಲಿ ಭಗಮನವೆನಿಸಿ ತುಂದಿಯೊಳಗಿರುತಿಹನು || ೨ ||

ಐದು ಮೇಲೊಂದಧಿಕ ದಳ ಉ ಳ್ಳೈದು ಪದ್ಮವು ನಾಭಿಮೂಲದಿ ಐದು ಮೂರ್ತಿಗಳಿಹವು ಅನಿರುದ್ಧಾದಿ ನಾಮದಲಿ | ಐದಿಸುತ ಗರ್ಭವನು ಜೀವರ ನಾದಿಕರ್ಮಪ್ರಕೃತಿ ಗುಣಗಳ ಹಾದಿ ತಪ್ಪಲಿಗೊಡದೆ ವ್ಯಾಪಾರಗಳ ಮಾಡುತಿಹ || ೩ ||

ನಾಭಿಯಲಿ ಷಟ್ಕೋಣ ಮಂಡಲ ದೀ ಭವಿಷ್ಯದ್ಭ್ರಹ್ಮನೊಳು ಮು ಕ್ತಾಭ ಶ್ರೀಪ್ರದ್ಯುಮ್ನ ನಿಪ್ಪನುವಿಬುಧಗಣ ಸೇವ್ಯ | ಶೋಭಿಸುತ ಕೌಸ್ತುಭವೆ ಮೊದಲಾ ದಾಭರಣವಾಯುಧಗಳಿಂದ ಮ ಹಾಭಯಂಕರ ಪಾಪಪುರುಷನ ಶೋಷಿಸುವ ನಿತ್ಯ || ೪ ||

ದ್ವಾದಶಾರ್ಕರ ಮಂಡಲವು ಮ ಧ್ಯೋದರದೊಳು ಸುಷುಮ್ನದೊಳಗಿಹು ದೈದು ರೂಪಾತ್ಮಕನು ಅರವತ್ತಧಿಕ ಮುನ್ನೂರು | ಈ ದಿವಾರಾತ್ರಿಗಳ ಮಾನಿಗ ಳಾದ ದಿವಿಜರ ಸಂತಯಿಸುತ ನಿ ಷಾದ ರೂಪಕ ದೈತ್ಯರನು ಸಂಹರಿಪ ನಿತ್ಯದಲಿ || ೫ ||

ಹೃದಯದೊಳಗಿಹುದಷ್ಟದಳಕಮ ಲದರೊಳಗೆ ಪ್ರಾದೇಶನಾಮಕ ನುದಿತ ಭಾಸ್ಕರನಂತೆ ತೋರ್ಪನು ಬಿಂಬನೆಂದೆನಿಸಿ | ಪದುಮ ಚಕ್ರ ಸುಶಂಖ ಸುಗದಾಂ ಗದ ಕಟಕ ಮಕುಟಾಂಗುಲೀಯಕ ಪದಕ ಕೌಸ್ತುಭಹಾರಗ್ರೈವೇಯಾದಿ ಭೂಷಿತನು || ೬ ||

ದ್ವಿದಳ ಪದ್ಮವು ಶೋಭಿಪುದು ಕಂ ಠದಲಿ ಮುಖ್ಯಪ್ರಾಣ ತನ್ನಯ ಸುದರಿಯಿಂದೊಡಗೂಡಿ ಹಂಸೋಪಾಸನೆಯ ಮಾಳ್ಪ | ಉದಕವನ್ನಾದಿಗಳಿಗವಕಾ ಶದನು ತಾನಾಗಿದ್ದು ದಾನಾ ಭಿಧನು ಶಬ್ದವ ನುಡಿದು ನುಡಿಸುವ ಸರ್ವಜೀವರೊಳು || ೭ ||

ನಾಸಿಕದಿ ನಾಸತ್ಯ ದಸ್ರರು ಶ್ವಾಸಮಾನಿ ಪ್ರಾಣ ಭಾರತಿ ಹಂಸ ಧನ್ವಂತ್ರಿಗಳು ಅಲ್ಲಲ್ಲಿಪ್ಪರವರೊಳಗೆ | ಭೇಶ ಭಾಸ್ಕರ ರಕ್ಷಯುಗಳಕ ಧೀಶರೆನಿಪರು ಅವರೊಳಗೆ ಲ ಕ್ಷ್ಮೀಶ ದಧಿ ವಾಮನರು ನೀಯಾಮಿಸುತಲಿರುತಿಹರು || ೮ ||

ಸ್ತಂಭ ರೂಪದಲ್ಲಿಪ್ಪ ದಕ್ಷಿಣ ಅಂಬಕದಿ ಪ್ರದ್ಯುಮ್ಮ ಗುಣ ರೂ ಪಾಂಭ್ರಣಿಯು ತಾನಾನಿ ಇಪ್ಪಳು ವತ್ಸರೂಪದಲಿ | ಪೊಂಬಸಿರ ಪದಯೋಗ್ಯ ಪವನ ತ್ರಿ ಯಂಬಕಾದಿ ಸಮಸ್ತ ದಿವಿಜಕ ದಂಬ ಸೇವಿತನಾಗಿ ಸರ್ವ ಪದಾರ್ಥಗಳ ತೋರ್ಪ || ೯ ||

ನೇತ್ರಗಳಲಿ ವಸಿಷ್ಠ ವಿಶ್ವಾ ಮಿತ್ರ ಭಾರದ್ವಾಜ ಗೌತಮ ನತ್ರಿಯಾ ಜಮದಗ್ನಿ ನಾಮಗಳಿಂದ ಕರೆಸುತಲಿ | ಪತ್ರತಾಪಕ ಶಕ್ರ ಸೂರ್ಯಧ ರಿತ್ರಿ ಪರ್ಜನ್ಯಾದಿ ಸುರರು ಜ ಗತ್ರಯೇಶನ ಭಜಿಪರನುದಿನ ಪರಮ ಭಕುತಿಯಲಿ || ೧೦ ||

ಜ್ಯೋತಿಯೊಳಗಿಪ್ಪನು ಕಪಿಲ ಪುರು ಹೂತ ಮುಖ ದಿಕ್ಪತಿಗಳಿಂದ ಸ ಮೇತನಾಗಿಹ ದಕ್ಷಿಣಾಕ್ಷಿಯ ಮುಖದೊಳಿಹ ವಿಶ್ವ | ಶ್ವೇತವರ್ಣ ಚತುರ್ಭುಜನು ಸಂ ಪ್ರೀತಿಯಿಂದಲಿ ಸ್ಥೂಲವಿಷಯವ ಚೇತನರಿಗುಂಡುಣಿಪ ಜಾಗ್ರತೆಯಿತ್ತು ನೃಗಜ್ಯಾಸ್ಯ || ೧೧ ||

ನೆಲೆಸಿಹರು ದಿಗ್ದೇವತೆಗಳಿ ಕ್ಕೆಲದಿ ಕರ್ಣಂಗಳಲಿ ತೀರ್ಥಂ ಗಳಿಗೆ ಮಾನಿಗಳಾದ ಸುರನದಿಮುಖ್ಯ ವಿರ್ಜರರು | ಬಲದ ಕಿವಿಯಲಿ ಇರುತಿಹರು ಬಾಂ ಬೊಳೆಯ ಜನಕ ತ್ರಿವಿಕ್ರಮನು ನಿ ರ್ಮಲಿನರನು ಮಾಡುವನು ಈ ಪರಿ ಛಿಂತಿಸುವ ಜನರ || ೧೨ ||

ಚಿತ್ತಜೇಂದ್ರರು ಮನದೊಳಿಪ್ಪರು ಕೃತ್ತಿವಾಸನು ಅಹಂಕಾರದಿ ಚಿತ್ತಚೇತನಮಾನಿಗಳು ವಿಹಗೇಂದ್ರ ಫಣಿಪರೊಳು | ನಿತ್ಯದಲಿ ನೆಲೆಗೊಂಡು ಹತ್ತೊಂ ಭತ್ತು ಮೊಗ ತೈಜಸನು ಸ್ವಪ್ನಾ ವಸ್ಥೆಯೈದಿಸಿ ಜೀವರನು ಪ್ರವಿವಿಕ್ತಭುಕುವೆನಿಪ || ೧೩ ||

ಜ್ಞಾನಮಯ ತೈಜಸನು ಹೃದಯ ಸ್ಥಾನವೈದಿಸಿ ಪ್ರಾಜ್ಞನೆಂಬಭಿ ಧಾನದಿಂ ಕರೆಸುತ್ತ ಚಿತ್ಸುಖ ವ್ಯಕ್ತಿಯನ್ನು ಕೊಡುತ | ಆನತೇಷ್ಟಪ್ರದನು ಅನುಸಂ ಧಾನವೀಯದೆ ಸುಪ್ತಿಯೈದಿಸಿ ತಾನೆ ಪುನರಪಿ ಸ್ವಪ್ನಜಾಗ್ರತೆಯೀವ ಚೇತನಕೆ || ೧೪ ||

ನಾಲಿಗೆಯೊಳಿಹ ವರುಣ ಮತ್ಸ್ಯಣು ನಾಲಿಗೆಯೊಳುಪೇಂದ್ರರಿಂದ್ರರು ತಾಲುಪರ್ಜನ್ಯಾಖ್ಯಸೂರ್ಯನು ಅರ್ಧಗರ್ಭನಿಹ | ಅಲಿಯೊಳು ವಾಮನ ಸುಭಾಮನ ಫಾಲದೊಳು ಶಿವ ಕೇಶವನು ಸುಕ- ಪೋಲದೊಳಗೆ ರತೀಶ ಕಾಮನು ಅಲ್ಲೆ ಪ್ರದ್ಯುಮ್ನ || ೧೫ ||

ರೋಮಗಳಲಿ ವಸಂತ ತ್ರಿಕಕು ದ್ಧಾಮ ಮುಖದೊಳಗಗ್ನಿ ಭಾರ್ಗವ ತಾಮರಸಭವ ವಾಸುದೇವರು ಮಸ್ತಕದೊಳಿಹರು | ಈ ಮನದೊಳಿಹ ವಿಷ್ಣು ಶಿಖದೊಳು ಮಾಮಹೇಶ್ವರ ನಾರಸಿಂಹ ಸ್ವಾಮಿ ತನ್ನನುದಿನದಿ ನೆನೆವರಪಮೃತ್ಯು ಪರಿಹರಿಪ || ೧೬ ||

ಮೌಳಿಯಲ್ಲಿಹ ವಾಸುದೇವನು ಏಳಧಿಕನವ ಜಾತಿರೂಪವ ತಾಳಿ ಮುಖದೊಳು ನಯನ ಶ್ರವಣಾದ್ಯವಯವಗಳೊಳಗೆ | ಆಳರಸು ತಾನಾಗಿ ಸತತ ಸು ಲೀಲೆಗೈಯುತಲಿಪ್ಪ ಸುಖಮಯ ಕೇಳಿ ಕೇಳಿಸಿ ನೋಡಿ ನೋಡಿಸಿ ನುಡಿದು ನುಡಿಸುವನು || ೧೭ ||

ಎರಡಧಿಕ ಎಪ್ಪತ್ತೆನಿಪ ಸಾ ವಿರದ ನಾಡಿಗೆ ಮುಖ್ಯವೇಕೋ ತ್ತರಶತಗಳಲ್ಲಿಹವು ನೂರಾವೊಂದು ಮೂರ್ತಿಗಳು | ಅರಿತು ದೇಹದ ಕಲಶನಾಮಕ ಹರಿಗೆ ಕಳೆಗಳಿವೆಂದು ನೈರಂ ತರದಿ ಪೂಜಿಸುತಿಹರು ಪರಮಾದರದಿ ಭೂಸುರರು || ೧೮ ||

ಇದಕೆ ಕಾರಣವೆನಿಸುವುವು ಎರ ಡಧಿಕದಶ ನಾಡಿಗಳೊಳಗೆ ಸುರ ನದಿಯೆ ಮೊದಲಾದಮಲತೀರ್ಥಗಳಿಹವು ಕರಣದಲಿ | ಪದುಮನಾಭನು ಕೇಶವಾದಿ ದ್ವಿದಶರೂಪದಲಿಪ್ಪನಲ್ಲತಿ ಮೃದುಳವಾದ ಸುಷುಮ್ನದೊಳಗೇಕಾತ್ಮನೆನಿಸುವನು || ೧೯ ||

ಆಮ್ನಯ ಪ್ರತಿಪಾದ್ಯ ಶ್ರೀಪ್ರ ದ್ಯುಮ್ಮದೇವನು ದೇಹದೊಳಗೆ ಸು ಷುಕ್ನದೀಡಾ ಪಿಂಗಳದಿ ವಿಶ್ವಾದಿ ರೂಪದಲಿ | ನಿರ್ಮಲಾತ್ಮನು ವಾಣಿ ವಾಯು ಛ ತುರ್ಮುಖರೊಳಿದ್ದಖಿಳ ಜೀವರ ಕರ್ಮಗುಣವನುಸರಿಸಿ ನಡೆವನು ವಿಶ್ವ ವ್ಯಾಪಕನು || ೨೦ ||

ಅಬ್ದಯನ ಋತು ಮಾಸ ಪಕ್ಷ ಸ ಶಬ್ದದಿಂದಲಿ ಕರೆಸುತಲಿ ನೀ ಲಾಬ್ದ ವರ್ಣನಿರುದ್ಧ ಮೊದಲಾದೈದು ರೂಪದಲಿ | ಹಬ್ಬಿಹನು ಸರ್ವತ್ರದಲಿ ಕರು ಣಾಬ್ಧಿ ನಾಲ್ವತ್ತೈದು ರೂಪದಿ ಲಭ್ಯನಾಗುವನೀ ಪರಿ ಧೇನಿಸುವ ಭಕುತರಿಗೆ || ೨೧ ||

ಐದು ರೂಪಾತ್ಮಕನು ಇಪ್ಪ ತ್ತೈದು ರೂಪದಲಿಪ್ಪ ಮತ್ತ್ ಹದಿ ನೈದು ತಿಥಿ ಇಪ್ಪತ್ತನಾಲಕರಿಂದ ಪೆಚ್ಚಿಸಲು | ಐದುವುದು ಅರವತ್ತಧಿಕ ಅರ ಯಿದು ದಿವಸಾಹ್ವಯನೊಳಗೆ ಮನ ತೋಯ್ಧವಗೆ ತಾಪತ್ರಯದಿ ಮಹದೋಷವೆಲ್ಲಿಹವು || ೨೨ ||

ದಿವಸ ಯಾಮ ಮುಹೂರ್ತ ಘಟಿಕಾ ದ್ಯವಯವಗಳೊಳಗಿದ್ದು ಗಂಗಾ ಪ್ರವಹದಂದದಿ ಕಾಲನಾಮಕ ಪ್ರವಹಿಸುತ್ತಲಿಪ್ಪ | ಇವನ ಗುಣರೂಪ ಕ್ರಿಯಂಗಳ ನಿವಹದೊಳು ಮುಳುಗಾಡುತಲಿ ಭಾ ರ್ಗವಿ ಸದಾನಂದಾತ್ಮಳಾಗಿಹಳೆಲ್ಲ ಕಾಲದಲಿ || ೨೩ ||

ವೇದತತಿಗಳ ಮಾನಿ ಲಕುಮಿ ಧ ರಾಧರನ ಗುಣರೂಪಕ್ರಿಯೆಗಳ ಆದಿ ಮಧ್ಯಾಂತವನು ಕಾಣದೆ ಮನದಿ ಯೋಚಿಸುತ | ಆದಪೆನೆ ಈತನಿಗೆ ಪತ್ನಿ ಕೃ ಪೋದಧಿಯು ಸ್ವೀಕರಿಸಿದನು ಲೋ ಕಾಧಿಪನು ಭಿಕ್ಷುಕನ ಮನೆಯೌತಣವ ಕೊಂಬಂತೆ || ೨೪ ||

ಕೋವಿದರು ಚಿತ್ತೈಸುವುದು ಶ್ರೀ ದೇವಿಯೊಳಗಿಹ ನಿಖಿಳ ಗುಣ ತೃಣ ಜೀವರಲಿ ಕಲ್ಪಿಸಿಯುಕುತಿಯಲಿ ಮತ್ತು ಕ್ರಮದಿಂದ | ದೇವದೇವಕಿಯಿಪ್ಪಳೆಂದರಿ ದಾ ವಿರಿಂಛನ ಜನನಿಯೀತನ ನಾವ ಕಾಲದಲರಿಯಳೆಂತೆನೆ ನರರ ಪಾಡೇನು || ೨೫ ||

ಕ್ಷೀರ ದಧಿ ನವನೀತ ಘೃತದೊಳು ಸೌರಭರ ಸಾಹ್ವಯನೆನಿಸಿ ಶಾಂ ತೀರಮಣ ಜ್ಞಾನಕ್ರಿಯೇಚ್ಛಾ ಶಕ್ತಿಯೆಂದೆಂಬ | ಈರೆರಡು ನಾಮದಲಿ ಕರೆಸುವ ಭಾರತೀ ವಾಗ್ದೇವಿ ವಾಯು ಸ ರೋರುಹಾಸನರಲ್ಲಿ ನೆಲೆಸಿಹರೆಲ್ಲ ಕಾಲದಲಿ || ೨೬ ||

ವಸುಗಳೆಂಟು ನವಪ್ರಜೇಶರು ಶ್ವಸನಗಣವೈವತ್ತು ಏಕಾ ದಶ ದಿವಾಕರರನಿತು ರುದ್ರರು ಅಶ್ವಿನಿಗಳೆರಡು | ದಶವಿಹೀನ ಶತಾಖ್ಯ ಈ ಸುಮ ನಸರೊಳಗೆ ಚತುರಾತ್ಮ ನೀಯಾ ಮಿಸುವ ಬ್ರಹ್ಮ ಸಮೀರ ಖಗಪ ಫಣೀಂದ್ರರೊಳಗಿದ್ದು || ೨೭ ||

ತೋರುತಿಪ್ಪನು ಚಕ್ರದಲಿ ಹಿಂ ಕಾರನಾಮಕ ಶಂಖದಲಿ ಪ್ರತಿ ಹಾರ ಗದೆಯಲಿ ನಿಧನ ಪದ್ಮದಲಿಪ್ಪ ಪ್ರಸ್ತಾವ | ಕಾರಣಿಕನುದ್ಗೀಥನಾಮದಿ ಮಾರಮಣನೈರೂಪಗಳ ಶಂ ಖಾರಿ ಮೊದಲಾದಾಯುಧಗಳೊಳು ಸ್ಮರಿಸಿ ಧರಿಸುತಿರು || ೨೮ ||

ತನುವೆ ರಥ ವಾಗಾಭಿಮಾನಿಯೆ ಗುಣವೆನಿಸುವಳು ಶ್ರೋತ್ರದೊಳು ರೋ ಹಿಣಿಶಶಾಂಕರು ಪಾಶಪಾಣಿಗಳಶ್ವವೆಂದೆನಿಸಿ | ಇನನು ಸಂಜ್ಞಾದೇವಿಯರು ಇಹ ರನಳಲೋಚನ ಸೂತನೆನಿಸುವ ಪ್ರಣವ ಪಾದ್ಯ ಪ್ರಾಣನಾಮಕ ರಥಿಕನೆನಿಸುವನು || ೨೯ ||

ಅಮಿತಮಹಿಮನಪಾರಗುಣಗಳ ಸಮಿತ ವರ್ಣಾತ್ಮಕ ಶೃತಿ ಸ್ಮೃತಿ ಗಮಿಸಲಾಪವೇ ತದಭಿಮಾನಿಗಳೆಂದೆನಿಸಿಕೊಂಬ | ಕಮಲ ಸಂಭವ ಭವ ಸುರೇಂದ್ರಾ ದ್ಯಮರರನುದಿನ ತಿಳಿಯಲರಿಯರು ಸ್ವಮಹಿಮೆಗಳಾದ್ಯಂತಮಧ್ಯಗಳರಿವ ಸರ್ವಜ್ಞ || ೩೦ ||

ವಿತ್ತದೇಹಾಗಾರದಾರಾ ಪತ್ಯಮಿತ್ರಾದಿಗೊಳಗೆ ಹರಿ ಪ್ರತ್ಯಗಾತ್ಮನು ಎಂದೆನಿಸಿ ನೆಲೆಸಿಪ್ಪನೆಂದರಿದು | ನಿತ್ಯದಲಿ ಸಂತೃಪ್ತಿ ಪಡಿಸುತ ಉತ್ತಮಾಧಮ ಮಧ್ಯಮರ ಕೃತ ಕೃತ್ಯನಾಗುನ್ಮತ್ತನಾಗದೆ ಭೃತಯ ನಾನೆಂದು || ೩೨ ||

ದೇವ ದೇವೇಶನ ಸುಮೂರ್ತಿ ಕ ಳೇವರಗಳೊಳಗನವರತ ಸಂ ಭಾವಿಸುತ ಪೂಜಿಸುತ ನೋಡುತ ಸುಖಿಸುತಿರು ಬಿಡದೆ | ಶ್ರೀವರ ಜಗನ್ನಾಥ ವಿಠಲನು ತಾ ಒಲಿದು ಕಾರುಣ್ಯದಲಿ ಭವ ನೋವ ಪರಿಹರಿಸುವನು ಪ್ರವಿತತ ಪತಿತಪಾವನನು || ೩೩ ||