ಹರಿಕಥಾಮೃತಸಾರ/ವರ್ಣ ಪ್ರಕ್ರಿಯ ಸಂಧಿ (ಉದಾತಾನುದಾತ, ಜೀವ ಪ್ರಕರಣ)

ವಿಕಿಸೋರ್ಸ್ ಇಂದ
Jump to navigation Jump to search

ಹರಿಯು ಪಂಚಾಶದ್ವರಣ ಸು ಸ್ವರ ಉದಾತ್ತಾನುದಾತ್ತ ಪ್ರಚಯ ಸ್ವರಿತ ಸಂಧಿವಿಸರ್ಗ ಬಿಂದುಗಳೊಳಗೆ ತದ್ವಾಚ್ಯ | ಇರುವ ತತ್ತನ್ನಾಮರೂಪಗ ಳರಿತುಪಾಸನೆಗೈವರಿಳೆಯೊಳು ಸುರರೆ ಸರಿ ನರರಲ್ಲ ಅವರಾಡುವುದೆ ವೇದಾರ್ಥ ||೧||

ಈಶನಲಿ ವಿಜ್ಞಾನ ಭಗವ ದ್ದಾಸರಲಿ ಸದ್ಭಕ್ತಿ ವಿಷಯ ನಿ ರಾಸೆ ಮಿಥ್ಯಾವಾದದಲಿ ಪ್ರದ್ವೇಷ ನಿತ್ಯದಲಿ | ಈ ಸಮಸ್ತ ಪ್ರಾಣಿಗಳಲಿ ರ ಮೇಶನಿಹನೆಂದರಿದವರ ಅಭಿ ಲಾಷೆಗಳ ಪೂರೈಸುವುದೆ ಮಹಯಜ್ಞ ಹರಿಪೂಜೆ ||೨||

ತ್ರಿದಶ ಏಕಾತ್ಮನೆನಿಸಿ ಭೂ ಉದಕ ಶಿಖಿಯೊಳು ಹತ್ತು ಕರಣದಿ ಅಧಿಪರೆನಿಸುವ ಪ್ರಾಣಮುಖ್ಯಾದಿತ್ಯರೊಳು ನೆಲೆಸಿ | ವಿದಿತನಾಗಿದ್ದನವರತ ನಿರ ವಧಿಕಮಹಿಮನು ಸಕಲ ವಿಷಯವ ನಿಧನನಾಮಕ ಸಂಕರುಷಣಾಹ್ವಯನು ಸ್ವೀಕರಿಪ ||೩||

ದಹಿಕ ದೈಶಿಕ ಕಾಲಿಕತ್ರಯ ಗಹನ ಕರ್ಮಗಳುಂಟು ಇದರೊಳು ವಿಹಿತಕರ್ಮಗಳರಿತು ನಿಷ್ಕಾಮಕನು ನೀನಾಗಿ | ಬೃಹತಿ ನಾಮಕ ಭಾರತೀಶನ ಮಹಿತರೂಪವ ನೆನೆದು ಮನದಲಿ ಅಹರಹರ್ಭಗವಂತಗರ್ಪಿಸು ಪರಮ ಭಕುತಿಯಲಿ ||೪||

ಮೂರು ವಿಧ ಕರ್ಮಗಳೊಳಗೆ ಕಂ ಸಾರಿ ಭಾರ್ಗವ ಹಯವದನ ಸಂ ಪ್ರೇರಕನು ತಾನಾಗಿ ನವರೂಪಂಗಳನು ಧರಿಸಿ | ಸೂರಿ ಮಾನವ ದಾನವರೊಳು ವಿ ಕಾರ ಶೂನ್ಯನು ಮಾಡಿ ಮಾಡಿಸಿ ಸಾರಭೋಕ್ತನು ಸ್ವೀಕರಿಸಿ ಕೊಡುತಿಪ್ಪ ಜೀವರಿಗೆ ||೫||

ಅನಲ ಪಕ್ವವ ಗೈಸಿದನ್ನವ ನನಲನೊಳು ಹೋಮಿಸುವ ತೆರದಂ ತನಿಮಿಷೇಶನು ಮಾಡಿ ಮಾಡಿಸಿದಖಿಲ ಕರ್ಮಗಳ | ಮನವಚನ ಕಾಯದಲಿ ತಿಳಿದನು ದಿನದಿ ಕೊಡು ಶಂಕಿಸದೆ ವೃಜಿನಾ ರ್ದನ ಸದಾ ಕೈಗೊಂಡು ಸಂತಯಿಸುವನು ತನ್ನವರ ||೬||

ಕುದುರೆ ಬಾಲದ ಕೊನೆಯ ಕೂದಲ ತುದಿ ವಿಭಾಗವ ಮಾಡಿ ಶತವಿಧ ವದರೊಳೊಂದನು ನೂರು ಭಾಗವ ಮಾಡಲೆಂತಿಹುದೊ | ವಿಧಿ ಭವಾದಿ ಸಮಸ್ತ ದಿವಿಜರ ಮೊದಲು ಮಾಡಿ ತೃಣಾಂತ ಜೀವರೊ ಳಧಿಕ ನ್ಯೂನತೆಯಿಲ್ಲವೆಂದಿಗು ಜೀವ ಪರಮಾಣು ||೭||

ಜೀವನಂಗುಷ್ಟಾಗ್ರ ಮೂರುತಿ ಜೀವನಂಗುಟ ಮಾತ್ರ ಮೂರುತಿ ಜೀವನ ಪ್ರಾದೇಶ ಜೀವಾಕಾರ ಮೂರ್ತಿಗಳು | ಏವಮಾದಿ ಅನಂತ ರೂಪದಿ ಯಾವದವಯವಗಳೊಳು ವ್ಯಾಪಿಸಿ ಕಾವ ಕರುಣಾಳುಗಳ ದೇವನು ಈ ಜಗತ್ರಯವ ||೮||

ಬಿಂಬ ಜೀವಾಂಗುಷ್ಟ ಮಾತ್ರದಿ ಇಂಬುಗೊಂಡಿಹ ಸರ್ವರೊಳು ಸೂ ಕ್ಷ್ಮಾಂಬರದಿ ಹೃತ್ಕಮಲ ಮಧ್ಯ ನಿವಾಸಿಯೆಂದೆನಿಸಿ | ಎಂಬರೀತಗೆ ಕೋವಿದರು ವಿ ಶ್ವಂಭರಾತ್ಮಕ ಪ್ರಾಜ್ಞ ಭಕ್ತ ಕು ಟುಂಬಿ ಸಂತೈಸುವನು ಈ ಪರಿ ಬಲ್ಲ ಭಜಕರನು ||೯||

ಪುರುಷ ನಾಮಕ ಸರ್ವ ಜೀವರೊ ಳಿರುವ ದೇಹಾಕಾರ ರೂಪದಿ ಕರಣ ನಿಯಾಮಕ ಹೃಷೀಕಪನಿಂದ್ರಿಯಂಗಳಲಿ | ತುರಿಯ ನಾಮಕ ವಿಶ್ವ ತಾ ಹ ನ್ನೆರಡು ಬೆರಳುಳಿದುತ್ತಮಾಂಗದಿ ಎರಡಧಿಕ ಎಪ್ಪತ್ತು ಸಾವಿರ ನಾಡಿಯೊಳಗಿಪ್ಪ ||1೦||

ವ್ಯಾಪಕನು ತಾನಾಗಿ ಜೀವಸ್ವ ರೂಪದೇಹದ ಒಳ ಹೊರಗೆ ನಿ ರ್ಲೇಪನಾಗಿಹ ಜೀವಕೃತ ಕರ್ಮಗಳನಾಚರಿಸಿ | ಶ್ರೀಪಯೋಜಭವೇರರಿಂದ ಪ್ರ ದೀಪ ವರ್ಣ ಸುಮೂರ್ತಿ ಮಧ್ಯಗ ತಾ ಪೊಳೆವ ವಿಶ್ವಾದಿ ರೂಪದಿ ಸೇವೆ ಕೈಗೊಳುತ ||೧೧||

ಗರುಡ ಶೇಷ ಭವಾದಿ ನಾಮವ ಧರಿಸಿ ಪವನ ಸ್ವರೂಪ ದೇಹದಿ ಕರಣ ನಿಯಾಮಕನು ತಾನಾಗಿಪ್ಪ ಹರಿಯಂತೆ | ಸರಸಿಜಾಸನ ವಾಣಿ ಭಾರತಿ ಭರತನಿಂದೊಡಗೂಡಿ ಲಿಂಗದಿ ಇರುತಿಹರು ಮಿಕ್ಕಾದಿತೇಯರಿಗಿಲ್ಲವಾಸ್ಥಾನ ||೧೨||

ಜೀವನಕೆ ತುಷದಂತೆ ಲಿಂಗವು ಸಾವಕಾಶದಿ ಪೊಂದಿ ಸುತ್ತಲು ಪ್ರಾವರಣ ರೂಪದಲಿಪ್ಪುದು ಭಗವದಿಚ್ಛ್ಹೆಯಲಿ | ಕೇವಲ ಜಡಪ್ರಕೃತಿ ಇದಕಧಿ- ದೇವತೆಯು ಮಹಲಕುಮಿಯೆನಿಪಳು ಆ ವಿರಜೆಯ ಸ್ನಾನಪರಿಯಂತರದಿ ಹತ್ತಿಹುದು ||೧೩||

ಆರಧಿಕ ದಶಕರೆಗಳುಳ್ಳ ಶ ರೀರವನಿರುದ್ಧಗಳ ಮಧ್ಯದಿ ಸೇರಿಪ್ಪವು ಜೀವ ಪರಮಾಚ್ಛ್ಹಾದಿಕದ್ವಯವು | ಬಾರದಂದದಿ ದಾನವರನತಿ ದೂರಗೈಸುತ ಶ್ರೀಜನಾರ್ದನ ಮೂರು ಗುಣದೊಳಗಿಪ್ಪನೆಂದಿಗು ತ್ರಿವೃತುವೆಂದೆನಿಸಿ ||೧೪||

ರುದ್ರ ಮೊದಲಾದಮರರಿಗೆ ಅನಿ ರುದ್ಧ ದೇಹವೆ ಮನೆಯೆನಿಸುವುದು ಇದ್ದು ಕೆಲಸವ ಮಾಡರಲ್ಲಿಂದಿತ್ತ ಸ್ಥೂಲದಲಿ | ಕೃದ್ಧ ಖಳದಿವಿಜರು ಪರಸ್ಪರ ಸ್ಪರ್ಥೆಯಿಂದಲಿ ದ್ವಂದ್ವಕರ್ಮ ಸ ಮೃದ್ಧಿಗಳನಾಚರಿಸುವರು ಪ್ರಾಣೇಶನಾಜ್ಞೆಯಲಿ ||೧೫||

ಮಹಿಯೊಳಗೆ ಸುಕ್ಷೇತ್ರ ತೀರ್ಥದಿ ತುಹಿನ ವರುಷ ವಸಂತಕಾಲದಿ ದಹಿಕ ದೈಶಿಕ ಕಾಲಿಕತ್ರಯ ಧರ್ಮ ಕರ್ಮಗಳ | ದೃಹಿಣ ಮೊದಲಾದಮರರೆಲ್ಲರು ವಹಿಸಿ ಗುಣಗಳನನುಸರಿಸಿ ಸ ನ್ನಿಹಿತರಾಗಿದ್ದೆಲ್ಲರೊಳು ಮಾಡುವರು ವ್ಯಾಪಾರ ||೧೬||

ಕೇಶ ಸಾಸಿರವಿಧ ವಿಭಾಗವ ರೈಸಲೆನಿತನಿತಿಹ ಸುಷುಮ್ನವು ಆ ಶಿರಾಂತದಿ ವ್ಯಾಪಿಸಿಹುದೀ ದೇಹ ಮಧ್ಯದಲಿ | ಆ ಸುಷುಮ್ನಕೆ ವಜ್ರಕಾರ್ಯ ಪ್ರ ಕಾಶಿನೀ ವೈದ್ಯುತಿಗಳಿಹವು ಪ್ರ ದೇಶದಲಿ ಪಶ್ಚಿಮಕೆ ಉತ್ತರ ಪೂರ್ವ ದಕ್ಷಿಣಕೆ ||೧೭||

ಆ ನಳಿನಭವ ನಾಡಿಯೊಳಗೆ ತ್ರಿ ಕೋಣ ಚಕ್ರವು ಇಪ್ಪುದಲ್ಲಿ ಕೃ ಶಾನುಮಂಡಲ ಮಧ್ಯಗನು ಸಂಕರುಷಣಾಹ್ವಯನು | ಹೀನ ಪಾಪಾತ್ಮಕ ಪುರುಷನ ಹಾನಿಗೈಸುತ ದಿನದಿನದಿ ವಿ ಜ್ಞಾನಮಯ ಶ್ರೀ ವಾಸುದೇವನು ಐದಿಸುವ ಕರುಣಿ ||೧೮||

ಮಧ್ಯನಾಡಿಯ ಮಧ್ಯದಲಿ ಹೃ ತ್ಪದ್ಮ ಮೂಲದಿ ಮೂಲಪತಿ ಪದ ಪದ್ಮಮೂಲದಲಿಪ್ಪ ಪವನನ ಪಾದಮೂಲದಲಿ | ಪೊದ್ದಿಕೊಂಡಿಹ ಜೀವಲಿಂಗನಿ ರುದ್ಧ ದೇಹವಿಶಿಷ್ಟನಾಗಿ ಕ ಪರ್ದಿ ಮೊದಲಾದಮರರೆಲ್ಲರು ಕಾದುಕೊಂಡಿಹರು ||೧೯||

ನಾಳ ಮಧ್ಯದಲಿಪ್ಪ ಹೃತ್ಕೀ ಲಾಲಜದೊಳಿಪ್ಪಷ್ಟದಳದಿ ಕು ಲಾಲ ಚಕ್ರದ ತೆರದಿ ಚರಿಸುತ ಹಂಸನಾಮಕನು | ಕಾಲಕಾಲಗಳಲ್ಲಿ ಎಣ್ದೆಸೆ ಪಾಲಕರ ಕೈಸೇವೆಗೊಳುತ ಕೃ ಪಾಳು ಅವರಭಿಲಾಷೆಗಳ ಪೂರೈಸಿಕೊಡುತಿಪ್ಪ ||೨೦||

ವಾಸವಾನುಜ ರೇಣುಕಾತ್ಮಜ ದಾಶರಥಿ ವೃಜಿನಾರ್ದನಮಲ ಜ ಲಾಶಯಾಲಯ ಹಯವದನ ಶ್ರೀಕಪಿಲ ನರಸಿಂಹ | ಈಸು ರೂಪದೊಳವರವರು ಸಂ ತೋಷಪಡಿಸುವ ನಿತ್ಯ ಸುಖಮಯ ವಾಸವಾಗಿಹ ಹೃತ್ಕಮಲದೊಳು ಬಿಂಬನೆಂದೆನಿಸಿ ||೨೧||

ಸುರಪನಾಲಯಕೈದಿದೊಡೆ ಮನ ವೆರಗುವುದು ಸತ್ಪುಣ್ಯ ಮಾರ್ಗದಿ ಬರಲು ವಹ್ನಿಯ ಮನೆಗೆ ನಿದ್ರಾಲಸ್ಯ ಹಸಿ ತೃಷೆಯು | ತರಣಿ ತನಯ ನಿಕೇತನದಿ ಸಂ ಭರಿತ ಕೋಪಟೋಪ ತೋರುವು ದರವಿದೂರನು ನಿಋ ಋತಿಯೊಳಿಗೆ ಪಾಪಗಳ ಮಾಳ್ಪ ||೨೨||

ವರುಣನಲ್ಲಿ ವಿನೋದ ಹಾಸ್ಯವು ಮರುತನೊಳು ಗಮನಾಗಮನ ಹಿಮ ಕರಧನಾಧಿಪರಲ್ಲಿ ಧರ್ಮದ ಬುದ್ಧಿ ಜನಿಸುವುದು | ಹರನ ಮಂದಿರದಲ್ಲಿ ಗೋಧನ ಧರಣಿ ಕನ್ಯಾ ದಾನಗಳು ಒಂ ದರೆಗಳಿಗೆ ತಡೆಯದಲೆ ಕೊಡುತಿಹ ಚಿತ್ತ ಪುಟ್ಟುವುದು ||೨೩||

ಹೃದಯದೊಳಗೆ ವಿರಕ್ತಿ ಕೇಸರ ಕೊದಗೆ ಸ್ವಪ್ನ ಸುಷುಪ್ತಿಲಿಂಗದಿ ಮಧುಹ ಕರ್ಣಿಕೆಯಲ್ಲಿ ಬರೆ ಜಾಗ್ರತಿಯು ಪುಟ್ಟುವುದು | ಸುದರುಶನ ಮೊದಲಾದ ಅಷ್ಟಾ ಯುಧವ ಪಿಡಿದು ದಿಶಾಧಿಪತಿಗಳ ಸದನದಲಿ ಸಂಚರಿಸುತೀ ಪರಿ ಬುದ್ಧಿಗಳ ಕೊಡುವ ||೨೪||

ಸೂತ್ರನಾಮಕ ಪ್ರಾಣಪತಿ ಗಾ ಯತ್ರಿ ಸಂಪ್ರತಿಪಾದ್ಯನಾಗೀ ಗಾತ್ರದೊಳು ನೆಲೆಸಿರಲು ತಿಳಿಯದೆ ಕಂಡ ಕಂಡಲ್ಲಿ | ಧಾತ್ರಿಯೊಳು ಸಂಚರಿಸಿ ಪುತ್ರಕ ಳತ್ರ ಸಹಿತನುದಿನದಿ ತೀರ್ಥ ಕ್ಷೇತ್ರ ಯಾತ್ರೆಯ ಮಾಡಿದೆವು ಎಂದೆನುತ ಹಿಗ್ಗುವರು ||೨೫||

ನಾರಸಿಂಹಸ್ವರೂಪದೊಳಗೆ ಶ ರೀರನಾಮದಿ ಕರೆಸುವನು ಹದಿ ನಾರು ಕಳೆಗಳುಳ್ಳ ಲಿಂಗದಿ ಪುರುಷನಾಮಕನು | ತೋರುವನು ಅನಿರುದ್ಧದೊಳು ಶಾಂ ತೀರಮಣನನಿರುದ್ಧ ರೂಪದಿ ಪ್ರೇರಿಸುವ ಪ್ರದ್ಯುಮ್ನ ಸ್ಠೂಲಕಳೇವರದೊಳಿದ್ದು ||೨೬||

ಮೊದಲು ತ್ವಕ್ಚರ್ಮಗಳು ಮಾಂಸವು ರುಧಿರ ಮೇದೋ ಮಜ್ಜವಸ್ಥಿಗ ದರೊಳಗೆ ಏಕೋನ ಪಂಚಾಶನ್ಮರುದ್ಗಣವು | ನಿಧನಹಿಂಕಾರಾದಿ ಸಾಮಗ ಅದರ ನಾಮದಿ ಕರೆಸುತೊಂಬ ತ್ತಧಿಕ ನಾಲ್ವತ್ತೆನಿಪ ರೂಪದಿ ಧಾತುಗಳೊಳಿಪ್ಪ ||೨೭||

ಸಪ್ತ ಧಾತುಗಳೊಳ ಹೊರಗೆ ಸಂ ತಪ್ತ ಲೋಹಗತಾಗ್ನಿಯಂದದಿ ಸಪ್ತ ಸಾಮಗನಿಪ್ಪ ಅನ್ನ ಮಯಾದಿ ಕೋಶದೊಳು | ಲಿಪ್ತನಾಗದೆ ತತ್ತದಾಹ್ವಯ ಕ್ಲುಪ್ತಭೋಗವ ಕೊಡುತ ಸ್ವಪ್ನಸು ಷುಪ್ತಿ ಜಾಗ್ರತೆಯೀವ ತೈಜಸ ಪ್ರಾಜ್ಞ ವಿಶ್ವಾಖ್ಯ ||೨೮||

ತೀವಿಕೊಂಡಿಹವಲ್ಲಿ ಮಜ್ಜ ಕ ಳೇವರದಿ ಯಂಗುಳಿಯ ಪರ್ವದ ಠಾವಿನಲಿ ಮುನ್ನೂರರವತ್ತೆನಿಪ ತ್ರಿಸ್ಥಳದಿ | ಸಾವಿರದ ಎಂಭತ್ತು ರೂಪವ ಕೋವಿದರು ಪೇಳುವರು ದೇಹದಿ ದೇವತೆಗಳೊಡಗೂಡಿ ಕ್ರೀಡಿಸುವನು ರಮಾರಮಣ ||೨೯||

ಕೀಟಪೇಶಸ್ಕಾರಿ ನೆನವಿಲಿ ಕೀಟಭಾವವ ತೊರೆದು ತದ್ವತ್ ಖೇಟರೂಪವನೈದಿ ಆಡುವ ತೆರದಿ ಭಕುತಿಯಲಿ | ಕೈಟಭಾರಿಯ ಧ್ಯಾನದಿಂದ ಭ ವಾಟವಿಯನತಿ ಶೀಘ್ರದಲಿಂದಲಿ ದಾಟಿ ಸಾರೂಪ್ಯವನ್ನು ಐದುವರಲ್ಪ ಜೀವಿಗಳು ||೩೦||

ಈ ಪರಿಯ ದೇಹದೊಳು ಭಗವ ದ್ರೂಪಗಳ ಮರೆಯದಲೆ ಮನದಿ ಪ ದೇಪದೇ ಭಕುತಿಯಲಿ ಸ್ಮರಿಸುತಲಿಪ್ಪ ಭಕುತರಿಗೆ | ಗೋಪತಿ ಜಗನ್ನಾಥವಿಠಲ ಸ ಮೀಪಗನು ತಾನಾಗಿ ಸಂತತ ಸಾಪರೋಕ್ಷಿಯ ಮಾಡಿ ಪೊರೆವನು ಎಲ್ಲ ಕಾಲದಲಿ ||೩೧||