ಹರಿಕಥಾಮೃತಸಾರ/ವ್ಯಾಪ್ತಿ ಸಂಧಿ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಪುರುಷರೂಪತ್ರಯ ಪುರಾತನ

ಪುರುಷ ಪುರುಷೋತ್ತಮ ಕ್ಷರಾಕ್ಷರ

ಪುರುಷ ಪೂಜಿತಪಾದ ಪೂರ್ಣಾನಂದ ಜ್ಞಾನಮಯ |

ಪುರುಷಸೂಕ್ತ ಸುಮೇಯ ತತ್ತ

ತ್ಪುರುಷ ಹೃತ್ಪುಷ್ಕರನಿಲಯ ಮಹ

ಪುರುಷಜಾಂಡಾಂತರದಿ ಬಹಿರದಿ ವ್ಯಾಪ್ತ ನಿರ್ಲಿಪ್ತ || ೧ ||


ಸ್ತ್ರೀನಪುಂಸಕ ಪುರುಷ ಭೂಸಲಿ

ಲಾನಲಾನಿಲ ಗಗನ ಮನ ಶಶಿ

ಭಾನು ಕಾಲಗುಣ ಪ್ರಕೃತಿಯೊಳಗೊಂದು ತಾನಲ್ಲ |

ಏನು ಇವನ ಮಹಾಮಹಿಮೆ ಕಡೆ

ಗಾಣರಜಭವ ಶಕ್ರಮುಖರು ನಿ

ಧಾನಿಸಲು ಮಾನವರಿಗಳವಡುವುದೆ ವಿಚಾರಿಸಲು || ೨ ||


ಗಂಧ ರಸ ರೂಪ ಸ್ಪರುಶ ಶ

ಬ್ದೊಂದು ತಾನಲ್ಲದರದರ ಪೆಸ

ರಿಂದ ಕರೆಸುತ ಜೀವರಿಗೆ ತರ್ಪಕನು ತಾನಾಗಿ |

ಪೊಂದಿಕೊಂಡಿಹ ಪರಮ ಕರುಣಾ

ಸಿಂಧು ಶಾಶ್ವತ ಮನವೆ ಮೊದಲಾ

ದಿಂದ್ರಿಯಗಳೊಳಗಿದ್ದು ಭೋಗಿಸುತಿಹನು ವಿಷಯಗಳ || ೩ ||


ಶ್ರವಣನಯನಘ್ರಾಣತ್ವಗ್ರಸ

ನಿವುಗಳೊಳು ವಾಕ್ಪಾಣಿ ಪಾದಾ

ದ್ಯವಯವಗಳೊಳು ತದ್ಗುಣಗಳೊಳು ತತ್ಪತಿಗಳೊಳಗೆ |

ಪ್ರವಿತತನು ತಾನಾಗಿ ಕೃತಿಪತಿ

ವಿವಿಧಕರ್ಮವ ಮಾಡಿ ಮಾಡಿಸಿ

ಭವಕೆ ಕಾರಣನಾಗಿ ತಿರುಗಿಸುತಿಹನು ತಿಳಿಸದಲೆ || ೪ ||


ಗುಣಿಗುಣಗಳೊಳಗಿದ್ದು ಗುಣಿಗುಣ

ನೆನಿಸುವನು ಗುಣಬದ್ಧನಾಗದೆ

ಗುಣಜ ಪುಣ್ಯಾಪುಣ್ಯಫಲ ಬ್ರಹ್ಮಾದಿ ಚೇತನಕೆ |

ಉಣಿಸುತವರೊಳಗಿದ್ದು ವೃಜಿನಾ

ರ್ದನ ಚಿದಾನಂದೈಕ ದೇಹನು

ಕೊನೆಗೆ ಸಚರಾಚರ ಜಗದ್ಭುಕವೆನಿಪನವ್ಯಯನು || ೫ ||


ವಿದ್ಯೆ ತಾನೆಂದೆನಿಸಿಕೊಂಬ ನಿ

ರುದ್ಧ ದೇವನು ಸರ್ವಜೀವರ

ಬುದ್ಧಿಯಲಿ ನೆಲೆಸಿದ್ದು ಕೃತಿಪತಿ ಬುದ್ಧಿಯೆನಿಸುವನು |

ಸಿದ್ಧಿಯೆನಿಸುವ ಸಂಕರುಷಣ ಪ್ರ

ಸಿದ್ಧನಾಮಕ ವಾಸುದೇವನ

ವದ್ಯರೂಪ ಚತುಷ್ಟಯಗಳರಿತವನೆ ಪಂಡಿತನು || ೬ ||


ತನುಚತುಷ್ಟಯಗಳಲಿ ನಾರಾ

ಯಣನು ಹೃತ್ಕಮಲಾಖ್ಯ ಸಿಂಹಾ

ಸನದೊಳನಿರುದ್ದಾದಿರೂಪಗಳಿಂದ ಶೋಭಿಸುತ |

ತನಗೆ ತಾನೇ ಸೇವ್ಯಸೇವಕ

ನೆನಿಸಿ ಸೇವಾಸಕ್ತ ಸುರರೊಳ

ಗನವರತ ನೆಲೆಸಿದ್ದು ಸೇವೆಯ ಕೈಕೊಂಬನವರಂತೆ || ೭ ||


ಜಾಗರಸ್ವಪ್ನಂಗಳೊಳು ವರ

ಭೋಗಿಶಯನ ಬಹುಪ್ರಕಾರ ವಿ

ಭಾಗಗೈಸಿ ನಿರಂಶ ಜೀವರ ಚಿಚ್ಛ್ಹರೀರವನು |

ಭೋಗವಿತ್ತು ಸುಷುಪ್ತಿಕಾಲದಿ

ಸಾಗರವ ನದಿ ಕೂಡುವಂತೆ ವಿ

ಯೋಗರಹಿತನು ಅಂಶಗಳನೇಕತ್ರವೈದಿಸುವ || ೮ ||


ಭಾರ್ಯರಿಂದೊಡಗೂಡಿ ಕಾರಣ

ಕಾರ್ಯವಸ್ತುಗಳಲ್ಲಿ ಪ್ರೇರಕ

ಪ್ರೇರ್ಯರೂಪಗಳಿಂದೆ ಪಟತಂತುಗಳವೋಲಿದ್ದು |

ಸೂರ್ಯಕಿರಣಗಳಂತೆ ತನ್ನಯ

ವೀರ್ಯದಿಂದಲಿ ಕೊಡುತ ಕೊಳುತಿಹ

ನಾರ್ಯರಿಗೆ ಈತನ ವಿಹಾರವು ಗೋಛರಿಪುದೇನೋ || ೯ ||


ಜನಕ ತನ್ನಾತ್ಮಜಗೆ ವರಭೂ

ಷಣ ದುಕೂಲವ ತೊಡಿಸಿ ತಾ ವಂ

ದನೆಯ ಕೈಕೊಳುತವನ ಹರಸುತ ಹರುಷ ಪಡುವಂತೆ |

ವನರುಹೇಕ್ಷಣ ಪೂಜ್ಯಪೂಜಕ

ನೆನಿಸಿ ಪೂಜಾಸಾಧನ ಪದಾ

ರ್ಥನು ತನಗೆ ತಾನಾಗಿ ಫಲಗಳನೀವ ಭಜಕರಿಗೆ || ೧೦ ||


ತಂದೆ ಬಹುಸಂಭ್ರಮದಿ ತನ್ನಯ

ಬಂಧುಬಳಗವ ನೆರಹಿ ಮದುವೆಯ

ನಂದನಗೆ ತಾ ಮಾಡಿ ಮನೆಯೊಳಗಿಡುವ ತೆರನಂತೆ |

ಇಂದಿರಾಧವ ತನ್ನ ಇಚ್ಛ್ಹೆಗ

ಳಿಂದೆ ಗುಣಗಳ ಚೇತನಕೆ ಸಂ

ಬಂಧಗೈಸಿ ಸುಖಾಸುಖಾತ್ಮಕ ಸಂಸ್ಕೃತಿಯೊಳಿಡುವ || ೧೧ ||


ತೃಣಕೃತಾಲಯದೊಳಗೆ ಪೊಗೆ ಸಂ

ದಣಿಸಿ ಪ್ರತಿಛಿದ್ರದಲಿ ಪೊರಮ

ಟ್ಟನಲವಿರವನು ತೋರಿ ತೋರದಲಿಪ್ಪ ತೆರನಂತೆ |

ವನಜಜಾಂಡದೊಳಖಿಳಜೀವರ

ತನುವಿನೊಳ ಹೊರಗಿದ್ದು ಕಾಣಿಸ

ದನಿಮಿಷೇಶನು ಸಕಲ ಕರ್ಮವ ಮಾಳ್ಪನವರಂತೆ || ೧೨ ||


ಪಾದಪಗಳಡಿಗೆರೆಯೆ ಸಲಿಲವು

ತೋದು ಕೊಂಬೆಗಳುಬ್ಬಿ ಪುಷ್ಪ

ಸ್ವಾದುಫಲವೀವಂದದಲಿ ಸರ್ವೇಶ್ವರನು ಜನರಾ |

ರಾಧನೆಯ ಕೈಕೊಂಡು ಬ್ರಹ್ಮ ಭ

ವಾದಿಗಳ ನಾಮದಲಿ ಫಲವಿ

ತ್ತಾದರಿಸುವನು ತನ್ನ ಮಹಿಮೆಯ ತೋರಗೊಂಡ ಜಗಕೆ || ೧೩ ||


ಶ್ರುತಿತತಿಗಳಿಗೆ ಗೋಚರಿಸದ

ಪ್ರತಿಮಜಾನಂದಾತ್ಮನಚ್ಯುತ

ವಿತತ ವಿಶ್ವಾಧಾರ ವಿದ್ಯಾಧೀಶ ವಿಧಿಜನಕ |

ಪ್ರತಿದಿವಸ ಚೇತನರೊಳಗೆ ಪ್ರಾಕೃತ

ಪುರುಷನಂದದಲಿ ಸಂಚರಿ

ಸುತ ನಿಯಮ್ಯ ನಿಯಾಮಕನು ತಾನಾಗಿ ಸಂತೈಪ || ೧೪ ||


ಮನವಿಷಯದೊಳಗಿರಿಸಿ ವಿಷಯವ

ಮನದೊಳಗೆ ನೆಲೆಗೊಳಿಸಿ ಬಲು ನೂ

ತನವು ಸುಸಮೀಚೀನವಿದುಪಾದೇಯವೆಂದರುಪಿ |

ಕನಸಿಲಾದರು ತನ್ನ ಪಾದದ

ನೆನಹನೀಯದೆ ಸರ್ವರೊಳಗಿ

ದ್ದನುಭವಿಸುವನು ಸ್ಠೂಲವಿಷಯವ ವಿಶ್ವನೆಂದೆನಿಸಿ || ೧೫ ||


ತೋದಕನು ತಾನಾಗಿ ಮನಮೊದ

ಲಾದ ಕರಣದೊಳಿದ್ದು ವಿಷಯವ

ನೈದುವನು ನಿಜಪೂರ್ಣಸುಖಮಯ ಗ್ರಾಹ್ಯಗ್ರಾಹಕನು |

ವೇದವೇದ್ಯನು ತಿಳಿಯದವನೋ

ಪಾದಿ ಭುಂಜಿಸುತೆಲ್ಲರೊಳಗಾ

ಹ್ಲಾದ ಬಡುವನು ಭಕ್ತವತ್ಸಲ ಭಾಗ್ಯಸಂಪನ್ನ || ೧೬ ||


ನಿತ್ಯನಿಗಮಾತೀತ ನಿರ್ಗುಣ

ಭೃತ್ಯವತ್ಸಲ ಭಯವಿನಾಶನ

ಸತ್ಯಕಾಮ ಶರಣ್ಯಶಾಮಲ ಕೋಮಲಾಂಗ ಸುಖಿ |

ಮತ್ತನಂದದಿ ಮರ್ತ್ಯರೊಳ ಹೊರ

ಗೆತ್ತ ನೋಡಲು ಸುತ್ತುತಿಪ್ಪನು

ಅತ್ಯಧಿಕ ಸಂತೃಪ್ತ ತ್ರಿಜಗದ್ವ್ಯಾಪ್ತ ಪರಮಾಪ್ತ || ೧೭ ||


ಪವಿಹರಿನ್ಮಣಿ ವಿದ್ರುಮದ ಸ

ಚ್ಛವಿಗಳಂದದಿ ರಾಜಿಸುತ ಮಾ

ಧವ ನಿರಂತರ ದೇವಮಾನವ ದಾನವರೊಳಿದ್ದು |

ತ್ರಿವಿಧ ಗುಣಕರ್ಮ ಸ್ವಭಾವವ

ಪವನ ಮುಖ ದೇವಾಂತರಾತ್ಮಕ

ದಿವಸದಿವಸದಿ ವ್ಯಕ್ತಮಾಡುತಲವರೊಳಿದ್ದುಣಿಪ || ೧೮ ||


ಅಣುಮಹತ್ತಿನೊಳಿಪ್ಪ ಘನ ಪರ

ಮಾಣುವಿನೊಳಡಗಿಸುವ ಸೂಕ್ಷ್ಮವ

ಮುಣುಗಿಸುವ ತೇಲಿಸುವ ಸ್ಥೂಲಗಳವನ ಮಾಯವಿದು |

ದನುಜರಕ್ಕಸರೆಲ್ಲರಿವನೊಳು

ಮುನಿದು ಮಾಡುವುದೇನುಲೂಖಲ

ಒನಕೆಗಳು ಧಾನ್ಯಗಳ ಹಣಿವಂದದಲಿ ಸಂಹರಿಪ || ೧೯ ||


ದೇವ ಮಾನವ ದಾನವರು ಎಂ

ದೀ ವಿಧದಲಾವಾಗಲಿಪ್ಪರು

ಮೂವರೊಳಗಿವಗಿಲ್ಲ ಸ್ನೇಹೋದಾಸೀನ ದ್ವೇಷ |

ಜೀವರಧಿಕಾರಾನುಸಾರದ

ಲೀವ ಸುಖ ಸಂಸರ ದುಃಖವ

ತಾವುಣದಲವರವರಿಗುಣಿಸುವ ನಿರ್ಗತಾಶನನು || ೨೦ ||


ಎಲ್ಲಿ ಕೇಲಿದರೆಲ್ಲಿ ನೋಡಿದ

ರೆಲ್ಲಿ ಬೇಡಿದರೆಲ್ಲಿ ನೀಡಿದ

ರೆಲ್ಲಿ ಓಡಿದರೆಲ್ಲಿ ಆಡಿದರಲ್ಲೆ ಇರುತಿಹನು |

ಬಲ್ಲಿದರಿಗತಿ ಬಲ್ಲಿದನು ಸರಿ

ಯಿಲ್ಲ ಇವಗಾವಲ್ಲಿ ನೋಡಲು

ಖುಲ್ಲ ಮಾನವನೊಲ್ಲನಪ್ರತಿಮಲ್ಲ ಜಗಕೆಲ್ಲ || ೨೧ ||


ತಪ್ತಲೋಹವು ನೋಳ್ಪ ಜನರಿಗೆ

ಸಪ್ತಜಿಹ್ವನ ತೆರದಿ ತೋರ್ಪುದು

ಲುಪ್ತಪಾವಕ ಲೋಹಕಾಂಬುದು ಪೂರ್ವದೋಪಾದಿ |

ಸಪ್ತವಾಹನ ನಿಖಿಳಜನರೊಳು

ವ್ಯಾಪ್ತನಾದುದರಿಂದ ಸರ್ವರು

ಆಪ್ತರಾಗಿಹರೆಲ್ಲಕಾಲದಿ ಹಿತವ ಕೈಕೊಂಡು || ೨೨ ||


ವಾರಿದನು ಮಳೆಗರೆಯೆ ಬೆಳೆದಿಹ

ಭೂರುಹಂಗಳ ಚಿತ್ರ ಫಲ ರಸ

ಬೇರೆ ಬೇರಿಪ್ಪಂತೆ ಬಹುವಿಧ ಜೀವರೊಳಗಿದ್ದು |

ಮಾರಮಣನವರವರ ಯೋಗ್ಯತೆ

ಮೀರದೆ ಗುಣಕರ್ಮಗಳ ಅನು

ಸಾರ ನಡೆಸುವ ದೇವನಿಗೆ ವೈಷಮ್ಯವೆಲ್ಲಿಹುದು || ೨೩ ||


ವಾರಿಜಾಪ್ತನ ಕಿರಣ ಮಣಿಗಳ

ಸೇರಿ ತತ್ತದ್ವರ್ಣಗಳನು ವಿ

ಕಾರಗೈಸದೆ ನೋಳ್ಪರಿಗೆ ಕಂಗೊಳಿಸುವಂದದಲಿ |

ಮಾರಮಣ ಲೋಕತ್ರಯದೊಳಿಹ

ಮೂರುವಿಧ ಜೀವರೊಳಗಿದ್ದು ವಿ

ಹಾರ ಮಾಡುವನವರವ ಯೋಗ್ಯತೆ ಕರ್ಮವನುಸರಿಸಿ || ೨೪ ||


ಜಲವನಪಹರಿಸುವ ಘಳಿಗೆ ಬ

ಟ್ಟಲನುಳಿದು ಜಯಘಂಟೆ ಕೈಪಿಡಿ

ದೆಳೆದು ಹೊಡೆವಂದದಲಿ ಸಂತತ ಕರ್ತೃ ತಾನಾಗಿ |

ಹಲಧರಾನುಜ ಪುಣ್ಯಪಾಪದ

ಫಲಗಳನು ದೇವಾಸುರರ ಗಣ

ದೊಳು ವಿಭಾಗವ ಮಾಡಿಯುಣಿಸುವ ಸಾಕ್ಷಿಯಾಗಿಪ್ಪ || ೨೫ ||


ಪೊಂದಿಕೊಂಡಿಹ ಸರ್ವರೊಳು ಸರಿ

ಬಂಧವಾಗದೆ ಸಕಲ ಕರ್ಮವ

ರಂದದಲಿ ತಾ ಮಾಡಿ ಮಾಡಿಸಿ ತತ್ಫಲಗಳುಣದೆ |

ಕುಂದದಣು ಮಹತ್ತೆನಿಪ ಘಟ

ಮಂದಿರದಿ ಸರ್ವತ್ರ ತುಂಬಿಹ

ಬಾಂದಳದ ತೆರನಂತೆ ಇರುತಿಪ್ಪನು ರಮಾರಮಣ || ೨೬ ||


ಕಾದ ಕಬ್ಬಿಣ ಹಿಡಿದು ಬಡಿಯಲು

ವೇದನೆಯು ಲೋಹಗಳಿಗಲ್ಲದೆ

ಆದುದೇನೈ ಅನಲಗಾ ವ್ಯಥೆಯೇನು ಮಾಡಿದರು |

ಆದಿದೇವನು ಸರ್ವಜೀವರ

ಕಾದುಕೊಂಡಿಹನೊಳ ಹೊರಗೆ ದುಃ

ಖಾದಿಗಳು ಸಂಬಂಧವಾಗುವವೇನೊ ಚಿನ್ಮಯಗೆ || ೨೭ ||


ಮಳಲ ಮನೆಗಳ ಮಾಡಿ ಮಕ್ಕಳು

ಕೆಲವು ಕಾಲದಲಾಡಿ ಮೋದದಿ

ತುಳಿದು ಕೆಡಿಸುವ ತೆರದಿ ಲಕುಮೀರಮಣ ಲೋಕಗಳ |

ಹಲವು ಬಗೆಯಲಿ ನಿರ್ಮಿಸುವ ನಿ

ಶ್ಚಲನು ತಾನಾಗಿದ್ದು ಸಲಹುವ

ನೆಲರುಣಿಯವೋಲ್ ನುಂಗುವಗೆ ಎಲ್ಲಿಹುದೋ ಸುಖದುಃಖ || ೨೮ ||


ವೇಷಭಾಷೆಗಳಿಂದ ಜನರ ಸಂ

ತೋಷಗೈಸುವ ನಟಪುರುಷನೋಲ್

ದೋಷದೂರನು ಲೋಕದೊಳು ಬಹುರೂಪಮಾನಿನಲಿ |

ತೋಷಿಸುವನವರವರ ಮನದಭಿ

ಲಾಷೆಗಳ ಪೂರೈಸುತನುದಿನ

ಪೋಷಿಸುವ ಪೂತಾತ್ಮಪೂರ್ಣಾನಂದ ಜ್ಞಾನಮಯ || ೨೯ ||


ಅಧಮ ಮಾನವನೋರ್ವ ಮಂತ್ರೌ

ಷಧಗಳು ತಾನರಿತು ಪಾವಕ

ಉದಕಗಳ ಸಂಬಂಧವಿಲ್ಲದೆ ಇಪ್ಪನದರೊಳಗೆ |

ಪದುಮಜಾಂಡೋದರನು ಸರ್ವರ

ಹೃದಯದೊಳಗಿರೆ ಕಾಲಗುಣ ಕ

ರ್ಮದ ಕಲುಷ ಸಂಬಂಧವಾಗುವುದೇ ನಿರಂಜನಗೆ || ೩೦ ||


ಒಂದು ಗುಣದೊಳನಂತ ಗುಣಗಳು

ಒಂದು ರೂಪದೊಳಿಹವು ಲೋಕದ

ಳೊಂದೆ ರೂಪದಿ ಧರಿಸಿ ತದ್ಗತ ಪದಾರ್ಥದೊಳ ಹೊರಗೆ |

ಬಾಂದಳದವೋಲಿದ್ದು ಬಹು ಪೆಸ

ರಿಂದ ಕರೆಸುತ ಪೂರ್ಣ ಜ್ಞಾನಾ

ನಂದಮಯ ಪರಿಪರಿ ವಿಹಾರವ ಮಾಡಿ ಮಾಡಿಸುವ || ೩೧ ||


ಎಲ್ಲರೊಳು ತಾನಿಪ್ಪ ತನ್ನೊಳ

ಗೆಲ್ಲರನು ಧರಿಸಿಹನು ಅಪ್ರತಿ

ಮಲ್ಲ ಮನ್ಮಥ ಜನಕ ಜಗದಾದ್ಯಂತ ಮಧ್ಯಗಳ |

ಬಲ್ಲ ಬಹುಗುಣಭರಿತ ದಾನವ

ದಲ್ಲಣ ಜಗನ್ನಾಥವಿಠಲನು

ಸೊಲ್ಲಲಾಲಿಸಿ ಸ್ತಂಭದಿಂದಲಿ ಬಂದ ಭಕುತನಿಗೆ || ೩೨ ||